ಶ್ರೀರಾಮ ಕಥಾ ಲೇಖನ ಅಭಿಯಾನ-81: ಶ್ರೀರಾಮಾಯಣದಲ್ಲಿ ಶ್ರೀ ಸೀತಾರಾಮರ ಸಂವಾದ

Upayuktha
0


-ಇಂದ್ರಾಣಿ ರವಿಕುಮಾರ್, ಬೆಂಗಳೂರು


ಶ್ರೀರಾಮ ರಾಮ ರಾಮೇತಿರಮೇ ರಾಮೇ ಮನೋರಮೇ| ಸಹಸ್ರ ನಾಮ ತತ್ತುಲ್ಯಂ ರಾಮ ನಾಮ ವರಾನನೇ || 


ಆದರ್ಶ ದಂಪತಿಯಾದಂತಹ ಶ್ರೀರಾಮ ಮತ್ತು ಸೀತಾದೇವಿಯ ಸಂವಾದ ನಮಗೆ ಅಂದರೆ ಇಂದಿನ ಪೀಳಿಗೆಗೆ ಪ್ರೇರಣಾದಾಯಕವೂ ಹೌದು. ದಾಂಪತ್ಯ ಮೌಲ್ಯ ಕಳೆದುಕೊಳ್ಳುತ್ತಿರುವವರಿಗೆ ಎಚ್ಚರಿಕೆಯ ಸಂದೇಶವೂ ಹೌದು! ಸಂಸ್ಕೃತಿಯ ಅರಿವು ಮರೆಯಾಗಿ ವ್ಯವಹಾರವೆ ಜೀವನದ ಜೀವನಾಡಿಯಾಗಿ ನಿಂತಾಗ ಬಾಳು ಬರಡಾಗುತ್ತದೆ. ಅಂತಹದರಲ್ಲಿ ಮಾನವೀಯ ಹೃದಯವನ್ನು ತೆರೆದು ನೋಡುವ, ತೋರುವ, ಸಂಸ್ಕೃತಿಯ ಅಮೃತಬಿಂದುಗಳನ್ನು ಚಿಮ್ಮಿ ಚೇತರಿಸುವ ನಮ್ಮ ಪುರಾತನ ಗ್ರಂಥಗಳು ನಮಗೆ ಮಾರ್ಗದರ್ಶನ ನೀಡುವಂತಹ ಕಾರ್ಯನಿರ್ವಹಿಸಿದೆ. ಇಂತಹ ಕೃತಿಗಳನ್ನು ಕಡೆಗಣಿಸದಿರುವ ಸೌಜನ್ಯ, ಓದಿ ಮನವರಿಕೆ ಮಾಡಿಕೊಳ್ಳುವ ಸಾಮರಸ್ಯ ನಮ್ಮದಾಗಬೇಕು.


ವಿಜ್ಞಾನದೊಂದಿಗೆ ನಮ್ಮ ಶಾಸ್ತ್ರಗಳು ಎಷ್ಟು ಅವಿನಾಭಾವ ಸಂಬಂಧ ಹೊಂದಿದೆ ಎಂಬುದನ್ನು ತಿಳಿಯುತ್ತ ಸೀತಾರಾಮರ ಸಂವಾದ ತಿಳಿಯೋಣ.

ಪಿತೃವಾಕ್ಯ ಪರಿಪಾಲಕ, ಪ್ರಜೆಗಳಿಗೆ ಸರ್ವೋತ್ತಮ, ಮರ್ಯಾದೆ ಪುರುಷ ಶ್ರೀರಾಮ, ನಮ್ಮ ಜೀವನಕ್ಕೆ ಆದರ್ಶ ಪುರುಷ, ಮಹರ್ಷಿ ವಾಲ್ಮೀಕಿ ನೀಡಿದ ಈ ಶ್ರೀರಾಮಾಯಣ ಕೃತಿಯನ್ನು ಓದಿದಾಗ ಮನಸ್ಸಿಗೆ ನೆಮ್ಮದಿ ದೊರೆಯುತ್ತದೆ.


ಸೀತಾರಾಮ ಸಂವಾದ:

ಶ್ರೀ ಸೀತಾರಾಮರ ಅನುರೂಪ ದಾಂಪತ್ಯ: ಜನಕ ಮಹಾರಾಜರು ಶ್ರೀರಾಮಚಂದ್ರರಿಗೆ ಸೀತಾದೇವಿಯೊಂದಿಗೆ ವಿವಾಹ ಮಾಡಿದರು. ಉಡುಗೊರೆಯಾಗಿ ವಸ್ತ್ರಗಳನ್ನು, ನವರತ್ನ ರಾಶಿಗಳನ್ನು, ಕಂಬಳಿಗಳನ್ನು, ಇತರ ವಸ್ತ್ರಗಳು, ಲಕ್ಷಗೋವುಗಳು, ಚದುರಂಗ ಸೇನೆ, ಇಪ್ಪತ್ತು ಸಹಸ್ರ ಚಿನ್ನವನ್ನೂ,  ದಾಸ- ದಾಸಿಯನ್ನು ಅಪಾರ ಶ್ರೀಮಂತನಾದ ಜನಕನು ಪ್ರೀತಿ ಕಾಣಿಕೆ ಮಗಳಿಗೆ ನೀಡಿದರು.


ದಕ್ಷಿಣೇವ ಪ್ರಭುಂ ಯಜ್ಞಂ ದಾಮೋದರಮಿವೇಂದಿರಾ|ಜಯಂತೀ ಋಷಭಂ ದೇವಂ ಸೀತಾರಾಮ ಮುಪಾಗತಮ್||

ದಕ್ಷಿಣಾದೇವಿಯ ಪ್ರಭುವಾದ ಯಜ್ಞ ರನ್ನು, ಮಹಾಲಕ್ಷ್ಮಿಯು ದಾಮೋದರನಾದ ನಾರಾಯಣನನ್ನು, ಜಯಂತಿದೇವಿಯು ಋಷಭ ದೇವರನ್ನು ಹೇಗೆ ವರಿಸಿದರೋ ಹಾಗೆ ಸೀತಾರಾಮರ ವಿವಾಹವಾಯಿತು. ಅಂದಿನ ಕಾಲಕ್ಕೆ ಸಕಲ ವಿದ್ಯಾಪಾರಂಗತರಾದ ರಾಜಕುವರರಿಗೆ, ಮತ್ತೊಂದು ರಾಜ್ಯದ ರಾಜಕುವರಿಯರನ್ನು ವಿವಾಹ ಮಾಡುತ್ತಿದ್ದರು.


ಕಮಲಾನೇತ್ರನಾದ ಅತ್ಯಂತ ಸುರದ್ರೂಪಿಯಾದ ರಘುಕುಲ ತಿಲಕ ಶ್ರೀರಾಮ ಚಂದ್ರು, ಜನಕ ಮಹಾರಾಜರ ಪುತ್ರಿಯು, ಅತ್ಯಂತ ಹಸನ್ಮುಖಿ,  ಧೈರ್ಯಶಾಲಿ, ಸುಂದರಿ, ಪ್ರಾವಿಣ್ಯೆ, ಸಕಲ ಸದ್ಗುಣ ಸಂಪನ್ನೆಯನ್ನು ಮನದನ್ನೆಯಾಗಿ ಸ್ವೀಕರಿಸಿದ್ದರು.


ನಿರ್ಮಲ ಸ್ವರೂಪರಾದ ಎಣಿಕೆಯಿರದ ಗುಣಗಳಿಂದ ಕೂಡಿದ ದಂಪತಿಯಾದಂತಹ ಸೀತಾರಾಮರಿಗೆ ಮುಪ್ಪಿಲ್ಲ, ಕಾಮನಿಮಿತ್ತವಾದ ನಿದ್ರಾದಿ ವಿಕಾರಗಳಿಲ್ಲ, ಯಾವುದೇ ದೋಷವನ್ನು ಹೊಂದಿರದ ಮಹಾಪುರುಷರು.


ಇಡೀ ಅಯೋಧ್ಯೆಯ ಮನೆ-ಮನೆಯಲ್ಲೂ ಸೀತಾರಾಮರ ಸ್ವಯಂವರ, ಅವರಿಬ್ಬರ ದಾಂಪತ್ಯ ಜೀವನದ ಬಗ್ಗೆ ಹಾಡಿಹೊಗಳಿದರು. ವಧೂವರರ ನೋಡಲೆಂದು ಪಟ್ಟಣದ ಜನಸ್ತೋಮವೆ ಧಾವಿಸಿಬಂದಿತ್ತು. ಜಗನ್ಮಂಗಳಕರವಾದ, ಮಂಗಳಾಂಗಿಯಾದ, ಜಗನ್ಮೋಹನೆ, ಸೀತೆಯನ್ನು ಪತ್ನಿಯಾಗಿ ಹೊಂದಿದ ಶ್ರೀರಾಮ ತನ್ನ ಗುಣಸಂಪತ್ತಿನೊಂದಿಗೆ ರಾರಾಜಿಸುತ್ತಿದ್ದರು.


ಹೊಳೆಯುವ ವಿಮಾನದಲ್ಲಿ ಶ್ವೇತದ್ವೀಪದಲ್ಲಿ ರಮಾದೇವಿಯೊಂದಿಗೆ, ನಾಗರಾಜನು- ಶೇಷನ ಮೇಲೆ ಹೇಗೆ ರಮಿಸುವನೋ ಹಾಗೆ ಗುಣನಿಧಿಯಾದ ಶ್ರೀರಾಮನು ಸೀತೆಯೊಂದಿಗೆ ಜಂಬೂದ್ವೀಪದಲ್ಲಿನ ಅಯೋದ್ಯಪುರದಲ್ಲಿ ರಮಿಸಿದನು. ಇಡೀ ಜಗತ್ತಿನಾದ್ಯಂತ ಸೀತೆಯೊಂದಿಗೆ ವಿಹರಿಸಿದರು.   ಚಂದ್ರನು- ಚಂದ್ರಿಕಯೊಂದಿಗೆ ಹೇಗೋ ಹಾಗೆ ಪೂರ್ಣರೂಪನಾದ ಶ್ರೀರಾಮನು ರಮಣೀಯಳಾದ ಸೀತೆಯೊಂದಿಗೆ ಅಭ್ಯುದಯ ಹೊಂದಿರುವನಾಗಿ, ಮಹಾಪೂರಗಳಿಂದ, ಪರಿಪೂರ್ಣ ಪ್ರಮಾಣದ ಸಮುದ್ರ ರಾಜನಂತೆ ಕಂಗೊಳಿಸಿದನು.


ವಿವಾಹದ ನಂತರ:-

ಸ್ವಲ್ಪ ದಿನಗಳ ನಂತರ ಶ್ರೀರಾಮ ಚಂದ್ರರಿಗೆ ಪಟ್ಟಾಭಿಷೇಕ ಮಾಡಬೇಕೆಂದು ತಂದೆ ದಶರತ ನಿಶ್ಚಯಿಸಿದಾಗ, ಕೈಕೇಯಿ ತನ್ನ ಸ್ವಾರ್ಥತನದಿಂದ ಮಗನಾದ ಭರತನಿಗೆ ಪಟ್ಟಾಭಿಷೇಕವಾಗಬೇಕೆಂದು ಭಾಷೆ ತೆಗೆದುಕೊಂಡಿದ್ದಳು, ಆದರ್ಶ ಪುರುಷನಾದ, ಶ್ರೀರಾಮ 14 ವರ್ಷ ವನವಾಸ ಮಾಡಬೇಕಾಗಿ ಹೇಳಿದಳು. ಪಿತೃವಾಕ್ಯ ಪರಿಪಾಲಕರಾದ ಶ್ರೀರಾಮ ತಪ್ಪದೆ ತಾನು ದಂಡಕಾರಣ್ಯ ಪ್ರವೇಶಿಸುವುದಾಗಿ, ಹೊರಡಲು ಸಿದ್ದರಾಗಿ, ತನ್ನ ಪಟ್ಟಾಭಿಷೇಕ ದಿನದಂದೆ ಹೊರಡುವ ಪರಿಸ್ಥಿತಿಯಿಂದ ದಶರಥ ಮಹಾರಾಜ ಮರುಕಪಟ್ಟನು. ಇತ್ತ ಶ್ರೀರಾಮ ತನ್ನ ಮನದನ್ನೆ ಇದ್ದ ಅರಮನೆಗೆ ಬಂದ ಶ್ರೀರಾಮರನ್ನ ಗಮನಿಸಿದ ಸೀತೆ, ಮಂದಹಾಸ ಇಲ್ಲದಿರುವುದನ್ನು ಗಮನಿಸಿದಳು, ಹಣೆ ಬೆವರಿತ್ತು, ಚಿಂತೆಯಿಂದ ಬಳಲಿದಂತೆ ಇತ್ತು. "ಏನಾಯಿತು ನನ್ನ ಹೃದಯದರಸನಿಗೆ? ಏಕೆ ಹೀಗಿರುವಿರಿ? ಪಟ್ಟಾಭಿಷೇಕದ ದಿನ ಇದೆಂತಹ ಚಿಂತೆ? ಏಕೆ ಮುಖಬಾಡಿದೆ ಏನಾಯಿತು ಹೇಳಿ ನನಗೆ ತುಂಬಾ  ಭಯವಾಗುತ್ತಿದೆ" ಹೇಳಿ ಎಂದಳು.

  

ಶ್ರೀರಾಮಚಂದ್ರರು ಸ್ವಲ್ಪ ಸಮಯ ಮೌನವಹಿಸಿ "ಸೀತೆ, ತಂದೆ ದಶರಥರು ಇಂದು ನನ್ನನ್ನು ವನವಾಸಕ್ಕೆ ಹೋಗಲು ಆಜ್ಞೆ ಮಾಡಿದ್ದಾರೆ. ಸತ್ಯವೇ ಮೂರ್ತೀರ್ಭವಿಸಿದಂತಿರುವ ಆತನು ಹಿಂದೆ ಯುದ್ದವೊಂದರಲ್ಲಿ ತನ್ನ ಜೀವ ಉಳಿಸಿದ್ದ ಚಿಕ್ಕಮ್ಮರಾದ ಕೈಕೇಯಿಗೆ ಎರಡು ವರಗಳನ್ನ ಕೊಟ್ಟಿದ್ದರಂತೆ,  ಈಗ ಆ ವರಗಳನ್ನ ಕೇಳಿರುವರು, ಅದೇ ಅದು ಇಂದಿನಿಂದ ಹದಿನಾಲ್ಕು ವರ್ಷಗಳು ನಾನು ವನವಾಸ ಮಾಡಬೇಕು ಹಾಗೂ ಭರತನಿಗೆ ಪಟ್ಟಾಭಿಷೇಕವಾಗಬೇಕು; ಇದೇ ಆ ವರ ಅದರಂತೆ ನಾನು ದಂಡಕಾರಣ್ಯಕ್ಕೆ ಹೊರಡುವ ಮುನ್ನ ನಿನಗೆ ಹೇಳಿ ಹೋಗೋಣವೆಂದು ಬಂದೆ. "ಸೀತೆ, ನಿನಗೆ ಒಂದೆರಡು ಬುದ್ಧಿಮಾತು ಹೇಳುವೆ, ಅದು ಭರತನ ಮುಂದೆ ನನ್ನ ಹೊಗಳದಿರು, ಧೈರ್ಯದಿಂದಿರು, ವ್ರತೋಪಾಸಗಳಲ್ಲಿ, ಪ್ರಾರ್ಥನೆಯಲ್ಲಿ ತೊಡಗಿ ಅತ್ತೆ ಮಾವಂದಿರ ಸೇವೆ ಮಾಡು, ನನ್ನ ಪ್ರಾಣ ಪ್ರಿಯರಾದ ಭರತ-ಶತ್ರುಘ್ನರನ್ನು ಸಹೋದರರಂತೆ ಕಾಣು, ತಾನು ಬೇಗ ಬಂದು ಬಿಡುವುದಾಗಿ ಹೇಳಿದರು. (ಆದರೆ ಮನದಲ್ಲಿ ಸೀತೆಯ ವಿರಹವೇದನೆ ಇತ್ತು)".


ಸೀತಾದೇವಿ ಸುಮ್ಮನೆ ಕೇಳುತ್ತಿದ್ದಳು, ರಾಮನ ಮಾತು ಮುಗಿಯುತ್ತಿದ್ದಂತೆ. ರಾಮನ ಮುಖವನ್ನು ನೋಡುತ್ತಾ ತನ್ನ ಕಣ್ಣುಗಳಲ್ಲಿದ್ದ ಮೃದುತ್ವ ಮಾಸಿ ಕೋಲ್ಮಿಂಚೊಂದು ಪ್ರತ್ಯಕ್ಷವಾಯಿತು.


"ಸ್ವಾಮಿ, ಏನು ಹೇಳುತ್ತಿರುವಿರಿ? ನನಗೆ ಅರಿವಾಗದಂತೆ ದೂರವಾಗಿ ಅಣತಿಯನ್ನ ನನ್ನ ಮೇಲೆ ಹೊರಿಸುವಿರಾ? ನನಗೆ ನನ್ನ ಹಿರಿಯರು ಧರ್ಮವೆಂದರೇನು? ಎಂಬುದು ತಿಳಿಸಿಕೊಟ್ಟಿದ್ದಾರೆ. ಯಾರೇ ಆಗಲಿ ಪೂರ್ವ ಜನ್ಮದ ಕರ್ಮಫಲ ತಪ್ಪಿಸಿಕೊಳ್ಳುವಂತಿಲ್ಲ ಎಂಬುದು ನನಗೂ ಗೊತ್ತು ಆದರೆ ಪತ್ನಿಯಾದವಳಿಗೆ ಪತಿಯ ಅದೃಷ್ಟ-ದುರಾದೃಷ್ಟಗಳಲ್ಲಿ ಪಾಲಿದೆ. ನೀವು ವನವಾಸಕ್ಕೆ ಹೊರಟರೆ ನಾನು ಬರುವೆನೆಂಬುದೇ ಇದರ ಅರ್ಥ.  ಇಲ್ಲಿ ತನ್ನ ಮನದ ಆಶಯವನ್ನು ಪತಿಯೊಂದಿಗೆ ಆದೇಶದಿಂದ ತಿಳಿಸುವಳು. ಸ್ತ್ರೀಗೆ ತನ್ನ ಪತಿಯೇ ಎಲ್ಲಾ ಕಾಲಕ್ಕೂ ಆಸರೆ, ಇದು ತಿಳಿದರೂ ಅರಿಯದಂತಿದ್ದೀರಿ! "ನೀವು ಹೋಗಲಿರುವ ಘೋರವಾದ ಅರಣ್ಯದಲ್ಲಿ ನಿಮಗಿಂತಲೂ ಮುಂದೆ ನಡೆಯುತ್ತಾ ಹಾದಿಯಲ್ಲಿರಬಹುದಾದ ಮುಳ್ಳುಗಳಿಂದ ನಿಮ್ಮ ಪಾದಗಳಿಗೆ ನೋವಾಗದಂತೆ ರಕ್ಷಿಸುವೆ, ನಿಮ್ಮ ಹಾದಿಗೆ ನಾನು ಕಂಟಕವಾಗುವುದಿಲ್ಲ, ನನಗೆ ನಿಮ್ಮೊಂದಿಗೆ ಇರುವುದೇ ಸ್ವರ್ಗ ಸುಖ, ಯಾವ ಅಭಿಮಾನಿ ಅಷ್ಟಸಿದ್ದಿಗಳ ಯೋಗಗಳು ನಿಮಗಿಂತ ಹೆಚ್ಚೆಲ್ಲ, ಪತ್ನಿ- ಪತಿಯೊಂದಿಗೆ ಹೇಗಿರಬೇಕೆಂದು ಹಿರಿಯರಿಂದ ತಿಳಿದ್ದಿದ್ದೀನಿ. ವನಸುಮ ಪರಿಮಳಗಳ ನಡುವೆ, ಸಿಂಹವ್ಯಾಘ್ರಾದಿ ಹಿಂಸ್ರಪಶುಗಳ ನಡುವೆ ಪುರುಷೋತ್ತಮ ನಿಮ್ಮ ರಕ್ಷಣೆಯಿರಲು ನನಗೆ ಯಾವ ಭಯವಿಲ್ಲ, ಇದರಲ್ಲಿ ನನ್ನ ತೀರ್ಮಾನವೆ ಕೊನೆಯದು, ನಿಮ್ಮೆಲ್ಲರ ವ್ರತ, ಜಪ- ತಪಗಳಲ್ಲಿ ನಾನು ಪಾಲ್ಗೊಳ್ಳುವೆ. ನೀವಿದ್ದರೆ ಈ ಸ್ವರ್ಗ, ಭೂಮಿಗಿಳಿದು ಬಂದಂತೆ, ಒಂದು ಕ್ಷಣದ ವಿರಹವನು ನಾನು ತಾಳೆನು ಕರೆದ್ಯೊಯಿರಿ ಎಂದು ಪರಿಪರಿಯಾಗಿ ಬೇಡಿದಳು, ಆಜ್ಞೆಯ ಪಡಿಸಿದಳು.


ಶ್ರೀರಾಮ, ಸೀತಾದೇವಿಯ ಕಣ್ಣೀರನ್ನು ವರೆಸುತ್ತಾ, "ಜನಕರಾಜಕುಮಾರಿ, ನೀನು ಧರ್ಮವನ್ನು ಅರಿತವಳು, ನೀನು ಇಲ್ಲಿಯೇ ಇರು, ಅರಣ್ಯವಾಸ ಅಷ್ಟು ಸುಲಭವಲ್ಲ ಕಲ್ಪಿಕೊಳ್ಳಲಸಾಧ್ಯ ಅದರ ಆಸೆಯನ್ನು ಬಿಡು" ಎಂದು ಹೇಳಿದ. ಸೀತಾದೇವಿಯು, ಸ್ತ್ರೀಯರ ಧರ್ಮದ ಬಗ್ಗೆ ತಿಳಿಸುತ್ತಾ, ಸ್ತ್ರೀಯು ಬಾಲ್ಯದಲ್ಲಿ ತಂದೆಯಿಂದ, ಯೌವ್ವನದಲ್ಲಿ ಪತಿಯಿಂದ, ವೃದ್ಧಾಪ್ಯದಲ್ಲಿ ಮಗನಿಂದ ರಕ್ಷಿತಳು.  ಅವಳಿಗೆ ಸ್ವಾತಂತ್ರ್ಯವಿಲ್ಲ, ನನಗೆ ನೀವೆ ಜನ್ಮಜನ್ಮಾಂತರಕ್ಕೂ, ನನ್ನ ಹೃದಯದಲ್ಲಿ ಚಿರಸ್ಥಾಯಿ, ಅದು ತಮಗೂ ತಿಳಿದಿದೆ, ಎಂದಳು.


ಬಾರಿಬಾರಿಗು ನಿಟ್ಟುಸಿರು ಬಿಡುತ್ತಿದ್ದ ಅವಳ ಕೆಂದಾವರೆಯಂತಿದ್ದ ಮುಖ ಬಾಡಿದಂತಾಗಿತ್ತು, ಬಂದೆ ಬರುವೆ ಎಂದು ಮಗುವಿನಂತೆ ಹಠಮಾಡಿದಳು. ಸತಿ ಸಾವಿತ್ರಿ ತನ್ನ ಪತಿಯನ್ನುಳಿಸಿಕೊಂಡ ಉದಾಹರಣೆ ಕೊಟ್ಟು ಶ್ರೀರಾಮನ ಮನವೊಲಿಸುವಲ್ಲಿ ಯಶಸ್ವಿಯಾದಳು. ಶ್ರೀರಾಮ, ಸೀತೆಯನ್ನು ಆಲಂಗಿಸಿಕೊಂಡು ಆಕೆಯ ಕಣ್ಣೀರೊರೆಸಿ "ರಮಣಿ ನಿನ್ನ ಮನಸ್ಸು ತಿಳಿಯಲು ಹಾಗೆಂದೆ, ಮೂರು ಲೋಕಗಳನ್ನು ರಕ್ಷಿಸುವವ ನಿನ್ನನ್ನು ರಕ್ಷಿಸಲಾರೆನೆ? ನೀನಿಲ್ಲದ ಯಾವ ಸ್ವರ್ಗವ ಬೇಡ, ನನ್ನ ಅವಿಭಾಜ್ಯ ಅಂಗವೇ ನೀನು, ನಿನ್ನ ತಂದೆ ನನ್ನ ಕೈಯಲ್ಲಿ ನಿನ್ನ ಕೈಯಿಟ್ಟು, "ಇಯಂ ಸೀತಾ ಸಹಧರ್ಮಚರಿ ತವ" ಎಂದಿದ್ದರಲ್ಲವೇ? ನಾನೆಂದೂ ಧರ್ಮವೆಂದು ತಿಳಿದು ನಡೆಯುತ್ತಿರುವ ದಾರಿಯಲ್ಲಿ ನೀನು ನಡೆ, ನೀನೊಂದು ಅಪರೂಪದ ಒಡವೆ, ಸ್ತ್ರೀ ಸಮಸ್ತರಲ್ಲಿ ನೀನು ರತ್ನಪ್ರಾಯಳು ಇನ್ನು ಪ್ರಯಾಣಕ್ಕೆ ಸಿದ್ದಳಾಗು, ಸಿರಿ ಸಂಪತ್ತೆಲ್ಲ ಬಡವರು, ದಾಸಿಯರಿಗೆ ಕೊಟ್ಟು ಹೊರಡು ಎಂದ. ಸಂತೋಷದಿಂದ ಸೀತೆಯ ಮುಖ, ಕಮಲ ಅರಳಿದಂತೆ ಅರಳಿ ಸುಂದರ ನಯನಮನೋಹರವಾಗಿ ಕಂಡಿತು. ಏಕಪತ್ನೀವ್ರತಸ್ಥ,  ಪುರುಷೋತ್ತಮ, ರಘುಕುಲತಿಲಕ, ಪಿತೃವಾಕ್ಯ ಪರಿಪಾಲಕ, ಶ್ರೀರಾಮ ಹೊರಡಲು "ಪುರದಪುಣ್ಯಂ ಪುರುಷರೂಪಿಂದೆ ಪೋಗುತಿದೆ", ಎಂಬಂತೆ ಇತ್ತು.


ಒಂದರೆಕ್ಷಣವೂ ಬಿಟ್ಟಿರದಂತಹ ಸತಿ-ಪತಿ, ಆದರ್ಶ ದಾಂಪತ್ಯ ಮೌಲ್ಯ ಹೊಂದಿದಂತಹವರು ಸೀತಾ ಶ್ರೀರಾಮರು, ಇಂದಿನ ಯುವಪೀಳಿಗೆಗೆ  ಮಾದರಿ ಈ ವಾಲ್ಮೀಕಿ ರಾಮಾಯಣ. ಅರಿತರಿದು ಹೆಜ್ಜೇನು ಸವಿದಂತೆ ನಮ್ಮ ಜೀವನ- ಪಾವನ.




- ಇಂದ್ರಾಣಿ ರವಿಕುಮಾರ್, ಬೆಂಗಳೂರು

 ವಿಳಾಸ: #402, Everjoy Sarovar, B.D.A. Link road, Dwarkanagar, Channasandra, R.R. Nagar, Bangalore – 560098 Contact No.:- 8951096241


ಲೇಖಕರ ಸಂಕ್ಷಿಪ್ತ ಪರಿಚಯ:

ವಿದ್ಯಾರ್ಹತೆ: ಎಂ.ಎ. (ಕನ್ನಡದಲ್ಲಿ) ಬಿ.ಇಡಿ. (ಸಮಾಜ ವಿಜ್ಞಾನ); ಗೃಹಿಣಿ, ಉದಯೋನ್ಮುಖ ಕವಿಯತ್ರಿ, ಲೇಖಕಿ, ಮೂರು ಕವಿಗೋಷ್ಠಿಯಲ್ಲಿ ಭಾಗವಹಿಸಿದ್ದಾರೆ. ಸುಮಾರು 25ಕ್ಕೂ ಹೆಚ್ಚು ಕವನಗಳ ರಚಿಸಿ, ಜನರ ಮನ್ನಣೆ ಮತ್ತು ಪ್ರಶಂಸೆ ದೊರಕಿದೆ. ಸಾಮಾಜಿಕ ಮಾಧ್ಯಮದಲ್ಲಿ ಕವನ, ಲೇಖನಗಳನ್ನು ಪ್ರಕಟಿಸಿದ್ದಾರೆ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  

إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top