ಶ್ರೀ ರಾಮನ ನೆಲದಲ್ಲಿ ಅರವತ್ತರ ಹೊಸ ಸಂವತ್ಸರ ಚಕ್ರಕ್ಕೆ ಕಾಲಿಡುತ್ತಿರುವ ಗುರುಗಳ ಪಾದಗಳಿಗೆ ಪದ ನಮನ

Upayuktha
0



ಪೇಜಾವರ ಶ್ರೀವಿಶ್ವಪ್ರಸನ್ನ ತೀರ್ಥ ಶ್ರೀಪಾದರು 48 ದಿನಗಳ ಕಾಲ ಸನಾತನ ಧರ್ಮದ ಕೇಂದ್ರ ಬಿಂದುವಾದ ಶ್ರೀರಾಮನ ಸನ್ನಿಧಾನದಲ್ಲಿ ಮಂಡಲೋತ್ಸವವನ್ನು ಅಭೂತ ಪೂರ್ವವಾಗಿ ನಡೆಸುತ್ತಿದ್ದಾರೆ. ಇದೇ ಸುಸಂದರ್ಭದಲ್ಲಿಯೇ ಗುರುಗಳ 60ನೆ ಜನ್ಮೋತ್ಸವ ಕೂಡ ನಡೆಯುತ್ತಿರುವುದು ಶಿಷ್ಯರ ಸೌಭಾಗ್ಯ. ಸುಧಾಮಂಗಳದ ಉತ್ಸವವೂ ಸೇರಿ ಸರಯೂ ತಟದಲ್ಲಿ ಜ್ಞಾನದೊಂದಿಗೆ ಯೋಗ ಹಾಗೂ ಕರ್ಮದ ತ್ರಿವೇಣಿ ಸಂಗಮ ನಡೆದಿದೆ. ಗುರುಗಳ ತಪಸ್ಸು, ತ್ಯಾಗ, ನೀತಿ, ನಿಯಮ, ನಿಷ್ಠೆಗೆ ಭಗವಂತ ಕೊಟ್ಟ ಫಲ. ಇದನ್ನು ಕಂಡಾಗಲೇ ಭಕ್ತನ ಯೋಗ್ಯತೆ, ಹಾಗೂ ದೇವರ ಕಾರುಣ್ಯ ಎದ್ದು ಕಾಣುತ್ತದೆ.


ರಾಮಾವತಾರದ ಕೊನೆಯ ಕ್ಷಣ. ಭಗವಾನ್ ಶ್ರೀ ರಾಮ ತನ್ನ ಅವತಾರ ಸಮಾಪ್ತಿಯ ಕಾಲದಲ್ಲಿ ಬರುವವರೆಲ್ಲ ಬರಲಿ ಎನ್ನುವ ಮೂಲಕ ಸಾರ್ವತ್ರಿಕವಾಗಿ ಮೋಕ್ಷಕ್ಕೆ ಅವಕಾಶ ಕೊಟ್ಟ. ತನ್ನ ಕೊನೆಯ ಕಾಲದಲ್ಲೂ ಕೂಡ ಅಯೋಧ್ಯೆಯಲ್ಲಿಯೇ ತನ್ನ ಅವತಾರ ಸಮಾಪ್ತಿಯನ್ನು ಮಾಡುವ ಮೂಲಕವಾಗಿ ತನ್ನ ನೆಲದ ಅಭಿಮಾನವನ್ನು ಹಾಗೂ ತನಗಿರುವ ಜನನುರಾಗಿತ್ವವನ್ನು ತೋರಿಸಿಕೊಟ್ಟ ಭಗವಂತನ ಏಕೈಕ ರೂಪ ಶ್ರೀರಾಮ. ಆದರೆ ಇದೇ ಘಟನೆ ಇವತ್ತು ಪೇಜಾವರ ವಿಶ್ವ ಪ್ರಸನ್ನ ತೀರ್ಥರಿಂದಲೂ ಪುನರಾವರ್ತನೆಯಾಗುತ್ತಿದೆ. ಅಯೋಧ್ಯೆಗೆ ಬರುವವರು ಬರಲಿ, ರಾಮ ಸೇವೆಗೆ ಮುಕ್ತವಾದ ಅವಕಾಶವನ್ನು ಕೊಡುವ ಮೂಲಕ ಅಯೋಧ್ಯೆಯ ಶ್ರೀರಾಮನ ಮಣ್ಣಿನಲ್ಲಿ ಪ್ರತಿ ರಾಮನಂತೆ ಕಂಗೊಳಿಸುತ್ತಿದ್ದಾರೆ.  


ಈಗಲೂ ಅಯೋಧ್ಯೆಗೆ ಬರಲು ಸರಿಯಾದ ವ್ಯವಸ್ಥೆ ಇಲ್ಲ. ಅಷ್ಟೇ ಅಲ್ಲದೆ ದೇವಸ್ಥಾನದ ಹತ್ತಿರ ಬರಲು ಕಿ.ಮೀಗಟ್ಟಲೆ ನಡೆಯಬೇಕಾಗುತ್ತದೆ. ಒಂದು ವೇಳೆ ರಿಕ್ಷಾ ಸಿಕ್ಕಿತು ಎಂದು ಹತ್ತಿ ಕೂತರೆ ಎಲ್ಲಿಂದರಲ್ಲಿ ನಮ್ಮನ್ನು ಬಿಟ್ಟು ತೆರಳುತ್ತವೆ. ಮತ್ತೆ ಪುನಹ ನಡೆಯಲೇಬೇಕು. ಉಳಿದುಕೊಳ್ಳಲು ಸರಿಯಾದ ವ್ಯವಸ್ಥೆ ಇನ್ನು ಕೂಡ ಏನೇನು ಆಗಲಿಲ್ಲ. ಸರಿಯಾಗಿ ತಿನ್ನಲು ಒಳ್ಳೆಯ ಯಾವುದೇ ಹೋಟೆಲ್ ಗಳಿಲ್ಲ. ಅದೆಷ್ಟೋ ಸಾವಿರಾರು ಮಂದಿ ಒಂದು ದಿವಸ ಊಟ ಮಾಡಿ ಮೂರು ದಿವಸ ಮಲಗಿದವರಿದ್ದಾರೆ. ಆದರೂ ಕಷ್ಟಪಟ್ಟು ಉಳಿದುಕೊಂಡು, ದೇವಸ್ಥಾನದ ಹತ್ತಿರ ಬಂದರೆ ಸುಮಾರು ಮೂರು ಗಂಟೆಗಳ ಕಾಲ ಕಾದು ನಿಂತು ದರ್ಶನ ಮಾಡಬೇಕು. ಅದು ಕೂಡ ಕೇವಲ ಒಂದು ಬಾರಿ. ಮತ್ತೊಮ್ಮೆ ರಾಮಲಲ್ಲಾನನ್ನು ನೋಡಬೇಕಾದರೆ ಮತ್ತೆ ಮೂರು ಗಂಟೆಗಳ ಕಾಲ ಪುನಃ ನಿಲ್ಲಬೇಕು. ಪರಿಚಯದವರೊಬ್ಬರ ಈ ಪ್ರಯಾಸದ ಮಾತುಗಳನ್ನು ಕೇಳಿದಾಗ ಪೇಜಾವರ ವಿಶ್ವ ಪ್ರಸನ್ನ ತೀರ್ಥರನ್ನು ಪಡೆದುಕೊಂಡ ನಾವು ಎಷ್ಟು ಭಾಗ್ಯವಂತರು ಎಂದು ಎಣಿಸಿಕೊಳ್ಳದೆ ಇರಲಾರದು.


ರಾಮನಿಗೆ ರಾಜನಾದ ವಿಭೀಷಣನು, ಬೇಡನಾದ ಗುಹನೂ ಒಂದೇ ರೀತಿ. ರಾಣಿಯಾದ ತಾರೆಯಾಗಲಿ ಹಾಗೂ ವೃದ್ಧೆಯಾದ ಶಬರಿಯಾಗಲಿ ಇಬ್ಬರಿಗೂ ಸಮಾನವಾಗಿಯೇ ತನ್ನ ಕಾರುಣ್ಯವನ್ನು ಹರಿಸಿದ್ದಾನೆ. ಪಂಡಿತ-ಪಾಮರ, ಬಡವ- ಬಲ್ಲಿದ, ಎನ್ನುವ ಭೇದ ರಾಮನಲ್ಲಿ ಇರಲಿಲ್ಲ. ಹಾಗೆಯೇ ಗುರುಗಳು ಕೂಡ ಅಯೋಧ್ಯೆಗೆ ಬರುವವರಲ್ಲಿ ಇದೇ ರೀತಿಯಾಗಿ ಸಮಾನತೆಯ ಸಂದೇಶವನ್ನು ಸಾರುತ್ತಿದ್ದಾರೆ. ಆತ ರಾಜಕಾರಣಿಯಾಗಿರಲಿ ಅಥವಾ ಸಾಮಾನ್ಯರಲ್ಲಿ ಸಾಮಾನ್ಯನಾದವನಾಗಿರಲಿ ಇಬ್ಬರಲ್ಲೂ ಒಂದೇ ರೀತಿಯಾದ ವ್ಯವಹಾರ. ಈ ಅವಕಾಶವನ್ನು ಗೌಡ ಸಾರಸ್ವತ ಸಮಾಜವಂತೂ ಇನ್ನಿಲ್ಲದಂತೆ ನಿರೀಕ್ಷೆಗೂ ಮೀರಿದ ರಾಮ ಸೇವೆಯಲ್ಲಿ ತಮ್ಮನ್ನು ಸಮರ್ಪಿಸಿಕೊಂಡಿದೆ. ಹಾಗೆಯೇ ನಮ್ಮ ಕರಾವಳಿ ಭಾಗದ ಬ್ರಾಹ್ಮಣ, ಬಂಟ, ಬಿಲ್ಲವ, ಈಡಿಗ, ಹೀಗೆ ಎಲ್ಲಾ ಸಮಾಜದವರು ಕೂಡ ರಾಮಮಂದಿರಕ್ಕೆ ತೆರಳಿ ಸೇವೆ ಸಲ್ಲಿಸುತ್ತಿದ್ದಾರೆ.


ನಮಗಂತೂ ಶ್ರೀ ಗುರುಗಳ ಈ ಸಮಾನತೆಯ ಹಾಗೂ ಮಾನವ ಪ್ರೀತಿಯ ಭಾವದಲ್ಲಿ ಶ್ರೀರಾಮನೇ ಎದ್ದು ಕಾಣುವುದು.ದೇವರ ಮಟ್ಟಕ್ಕೆ ಶ್ರೀ ಗುರುಗಳನ್ನು ಕಲ್ಪಿಸಿಕೊಳ್ಳುವುದು ಗುರುಗಳಿಗೆ ಖಂಡಿತ ಇಷ್ಟವಾಗಲಾರದು. ಆದರೆ ನಮಗಂತೂ ರಾಮನ ಅಪರಾವತಾರದಂತೆ ಗುರುಗಳು ಅಯೋಧ್ಯೆಯ ರಾಮ ಜನ್ಮ ಭೂಮಿಯಲ್ಲಿ ಕಂಗೊಳಿಸುತ್ತಿರುವುದು ಸುಳ್ಳಲ್ಲ. ನನಗಂತೂ  ಕೇವಲ ರಾಮ ಮಾತ್ರವಲ್ಲ ಗುರುಗಳ ಸನ್ನಿಧಾನದಲ್ಲಿ ಶ್ರೀ ರಾಮನ ಪರಿವಾರವೇ ಎದ್ದು ಕಾಣುತ್ತಿದೆ.


ರಾಮಾಯಣದ ಹಲವಾರು ಕಡೆ ತನ್ನ ದೈಹಿಕವಾದ ಸಾಮರ್ಥ್ಯವನ್ನು ಹಾಗೂ ಯೋಗದ ಬಲವನ್ನು ತೋರಿಸಿಕೊಟ್ಟವ ಹನುಮಂತ. ದಿನವಿಡಿ ಸತತ 48 ದಿವಸ ಕಡು ಚಳಿಯಲ್ಲಿಯೂ ನಡುಗದೆ ಬೆಚ್ಚನೆಯ ಅಂಗಿಗಳು ಕೂಡ ಇಲ್ಲದೆ ಜಪಪೂಜೆಯನ್ನು ನಡೆಸುವುದು ಒಂದೆರಡು ದಿವಸಕ್ಕೆ ಆದೀತಷ್ಟೆ. ಯಾವ ಚಳಿ ಕೂಡ ಗುರುಗಳನ್ನು ಅಲುಗಾಡಿಸಲಿಲ್ಲ. ಗುರುಗಳ ಶಾರೀರಿಕ ಬಲವನ್ನು ಕಂಡಾಗ ಇಷ್ಟು ವರ್ಷ ಯೋಗಭ್ಯಾಸದ ಮೂಲಕ ಹಾಗೂ ಪಾದಯಾತ್ರೆಯ ಮೂಲಕ ದೇವ ಕೊಟ್ಟ ಈ ದೇಹವನ್ನು ದಂಡಿಸಿಕೊಂಡ ಫಲಕ್ಕೆ ಈಗ ಇವರೊಳಗೆ ಬಲ ಮುಖ್ಯಪ್ರಾಣನೇ ಬಂದು ನಿಂತು ರಾಮಸೇವೆ ಮಾಡುತ್ತಿದ್ದಾನೋ ಎನ್ನುವಂತಿದೆ. 


ತನ್ನ ಜೀವನವನ್ನು ರಾಮನ ಬರುವಿಕೆಗಾಗಿ ಹಿಡಿದು ನಿಂತು ಕಾಯುತ್ತಿದ್ದವಳು ಶಬರಿ. ಹಾಗೆಯೇ ತನ್ನ ಜೀವನವನ್ನು ಕೃಷ್ಣನ ಪೂಜೆಗಾಗಿ ಗುರುಗಳು ಮೀಸಲಿಟ್ಟು 40 ವರ್ಷಗಳು ಸಂದಿವೆ.ಇವರು ಸರ್ವಜ್ಞ ಪೀಠದಲ್ಲಿ ಕೂತು ಕೃಷ್ಣನ ಪೂಜೆಯನ್ನು ಮಾಡುವ ಸಲುವಾಗಿಯೇ ನೇಮಿಸಿಕೊಂಡವರು. ರಾಮನಿಗಾಗಿ ಕಾಯುತ್ತಿದ್ದ ಶಬರಿ ಗುರುಗಳ ಒಳಗೆ ಕೂತಿದ್ದಾಳೋ ಏನೋ, ಅದಕ್ಕಾಗಿಯೆ ಅಂದು ಶಬರಿಯನ್ನು ಕಾಯಿಸಿದ್ದಕ್ಕಾಗಿ ಕೃಷ್ಣನಿಗಿಂತ ಮುಂಚೆ ರಾಮನೆ ಓಡೋಡಿ ಬಂದಿದ್ದಾನೆ. ಆದ್ದರಿಂದಲೇ ಗುರುಗಳು ರಾಮನಲ್ಲಿ ಹೋಗುವುದಕ್ಕಿಂತ ಮುಂಚೆ ರಾಮನೆ ಗುರುಗಳಲ್ಲಿಗೆ ಬಂದದ್ದು.


ರಾಮ ವನವಾಸಕ್ಕೆ ಹೊರಟು ನಿಂತಾಗ ಅಯೋಧ್ಯೆಯ ದನ ಕರುಗಳು ಕೂಡ ಅಳುತ್ತಿದ್ದವಂತೆ. ಯಾರನ್ನು ಅಳಿಸದ ರಾಮನಿಗೆ ತನಗೋಸ್ಕರ ಪ್ರಾಣಿಗಳು ಕೂಡ ಅಳುವುದನ್ನು ಕಂಡಾಗ ಎಷ್ಟು ಬೇಸರವಾಗಬೇಡ. ಈ ಕಾಲದಲ್ಲಿ ಯಾವುದೇ ಲಾಭವಿಲ್ಲದೆ ನಷ್ಟವೇ ತುಂಬಿರುವ ಗೋಶಾಲೆಯನ್ನು ತೆರೆಯುವಾಗ ಗುರುಗಳಿಗೆ ಇದ್ದದ್ದು ಕೇವಲ ಗೋ ಸೇವೆಯ ಭಾವನೆಯೊಂದೆ. ಉದ್ಯಮವನ್ನು ಪ್ರಧಾನವಾಗಿರಿಸದೆ ಗೋ ಸೇವೆಯನ್ನೇ ಪ್ರಧಾನ ಧ್ಯೇಯವನ್ನಾಗಿಸಿದವರು.ಆದ್ದರಿಂದಲೇ ಇವತ್ತಿಗೂ ಗೋ ಶಾಲೆಯಲ್ಲಿ ಕೈಕಾಲಿಲ್ಲದ ಹಾಲು ಕೊಡದ ದನಗಳೆ ತುಂಬಿರುವುದು. ಶ್ರೀರಾಮನಿಗೆ ಖಂಡಿತಾ ಕಂಡಿರಬೇಕು, ಆ ಕಾಲದಲ್ಲಿ ವಿನಾಕಾರಣವಾದರೂ ತನ್ನಿಂದ ಬೇಸರವಾದ ದನಗಳಿಗೆ ಖುಷಿಯಾಗಬೇಕಾದರೆ ಇಲ್ಲಿ ವಿನಾಲಾಭ ಗೋ ಸೇವೆ ಮಾಡುತ್ತಿರುವ ಶ್ರೀ ಗುರುಗಳನ್ನು ತನ್ನ ಸೇವೆಗೆ ನೇಮಿಸಿಕೊಳ್ಳಬೇಕು ಎಂದು.


ರಾಮನನ್ನು ಎದುರಿಗಿಟ್ಟುಕೊಂಡು ರಾಮನಿಗಾಗಿ ತನ್ನ ಸರ್ವಸ್ವವನ್ನು ತ್ಯಾಗ ಮಾಡಿದವ ಭರತ. ಇಂಥಹಾ ಲೋಕನಾಯಕನಾದ ಅಣ್ಣ ಸಿಕ್ಕಿದ್ದು ತನ್ನ ಭಾಗ್ಯ ಎಂದುಕೊಂಡವ. ಅದಕ್ಕಾಗಿಯೇ ರಾಮನಿರುವ ತನಕವೂ ಆ ಪೀಠದಲ್ಲಿ ನಾನು ಕೂರಲಾರೆ ಎಂದು ಬದುಕಿದವ ಭರತ. ಲಕ್ಷ್ಮಣನಂತು ತನ್ನನ್ನೇ ರಾಮ ಪಾದಕ್ಕೆ ಸಮರ್ಪಿಸಿಕೊಂಡಿದ್ದಾನೆ. ರಾಮನ ಸೇವೆಯೆ ತನ್ನ ಜೀವನದ ಪರಮ ಗುರಿ ಎಂದು ಬದುಕಿದವ. ರಾಷ್ಟ್ರ ಸಂತನಾದ ಪೇಜಾವರ ಹಿರಿಯ ಶ್ರೀಗಳಾದ ವಿಶ್ವೇಶ ತೀರ್ಥರನ್ನು ಗುರುಗಳಾಗಿ ಪಡೆದುಕೊಂಡದ್ದು ತನ್ನ ಭಾಗ್ಯ. ಅವರಿರುವ ತನಕವೂ ಆ ಪೀಠದಲ್ಲಿ ಅವರೇ ಕೂರಬೇಕು. ರಾಮ ಭಕ್ತರಿಗೆ ಎಲ್ಲೆಲ್ಲೂ ರಾಮನೆ ಕಾಣುತ್ತಾನೆ. ಆದ್ದರಿಂದಲೆ ವಿಶ್ವೇಶ ತೀರ್ಥರಲ್ಲಿ ರಾಮನನ್ನು ಕಂಡ ಭರತ ಲಕ್ಷ್ಮಣರು ಈಗ ವಿಶ್ವಪ್ರಸನ್ನರಲ್ಲಿ ಕೂತು ರಾಮ ಸೇವೆ ಮಾಡುತ್ತಿದ್ದಾರೆ ಎಂದರೆ ಅಲ್ಲಗಳೆಯಲು ಸಾಧ್ಯವೇ...


ಎದುರಾಳಿ ರಾವಣನೇ ಆಗಿರಲಿ ಧರ್ಮದ ವಿರುದ್ಧ ನಡೆದಿದ್ದಾನೆ. ನನಗಿದು ಹೋರಾಟ ಅನಿವಾರ್ಯವಾಗಿದೆ ಎಂದು ಹೋರಾಟಕ್ಕಿಳಿದ ಜಟಾಯು.ರಾಮ ಸೇವೆಗೆ ತನ್ನನ್ನು ಸಮರ್ಪಿಸಿಕೊಂಡ ಕಾರಣ ದಶರಥನಿಗಿಲ್ಲದ ದೇಹದ ಸಂಸ್ಕಾರದ ಭಾಗ್ಯ ಜಟಾಯುವಿಗೆ ಸಿಕ್ಕಿತ್ತು. ಹಿಂದುಗಳು ಬೇಕಾದಷ್ಟು  ತಗ್ಗಿ ಬಗ್ಗಿ ನಡೆದಾಗಿದೆ. ಇನ್ನೇನಿದ್ದರೂ ನೀವುಗಳು ಬದಲಾಗಲೇಬೇಕು ಎಂದು ಉಡುಪಿಯಲ್ಲಿ ಅಧರ್ಮದ ವಿರುದ್ಧ ಏಕಾಂಗಿ ವೀರನಾಗಿ ತೊಡೆತಟ್ಟಿ ನಿಂತವರು ಪೇಜಾವರ ವಿಶ್ವಪ್ರಸನ್ನ ತೀರ್ಥರು. ಒಂದು ದೊಡ್ಡ ಮಟ್ಟದ ವಿರೋಧಕ್ಕೆ ಯಾವುದೇ ಯೋಚನೆ ಇಲ್ಲದೆ ತಯಾರಾಗಿ ನಿಂತ ಜಟಾಯು ಗುರುಗಳೊಳಗೆ ಕುಳಿತಿದ್ದಾನೋ ಏನೋ.ಅದಕ್ಕಾಗಿಯೇ ಶ್ರೀ ರಾಮ ಜನ ಬೆಂಬಲವಿಲ್ಲದೆಯೂ ಜನರ ಬೆಂಬಲಕ್ಕಾಗಿ ದಿಟ್ಟತನದ ಮಾತನಾಡಿದ ಈ ವ್ಯಕ್ತಿಯೇ ನನ್ನ ಸೇವೆಗೆ ಸೂಕ್ತ ಎಂದು ನೇಮಿಸಿಕೊಂಡಿರಬೇಕು.


"ಓ ಕೌಸಲ್ಯೆಯ ಮುದ್ದು ಮಗನೇ ಎದ್ದೇಳು ಬೇಗ" ಎಂದು ತಾಯಿಯಂತೆ ಗುರು ವಿಶ್ವಾಮಿತ್ರರು ಮಗು ರಾಮನ ಸೇವೆ ಮಾಡಿದ್ದಾರೆ. ತಮ್ಮೆಲ್ಲ ಮಂತ್ರಗಳನ್ನು ಮಗುವಾದರೂ ಕೂಡ ರಾಮನ ಮೇಲಿನ ಅಭಿಮಾನಕ್ಕೆ ರಾಮಪಾದಕ್ಕೆ ಸಮರ್ಪಿಸಿದ್ದಾರೆ. ಬಾಲ ರಾಮನ ಕೈ ಹಿಡಿದುಕೊಂಡು ಮೆಲ್ಲ ಮೆಲ್ಲನೆ ಜಾಗ್ರತೆಯಿಂದ ಕರೆದುಕೊಂಡು ಹೋಗುತ್ತಿದ್ದದ್ದನ್ನು ವಾಲ್ಮೀಕಿಗಳು ಬಹಳ ಬಾರಿ ಹೇಳಿದ್ದಾರೆ. ನಮ್ಮ ಗುರುಗಳು ಹೆತ್ತ ತಂದೆ ತಾಯಿಗಳಿಗಿಂತಲೂ ಹೆಚ್ಚಾಗಿ ಮಕ್ಕಳ ಸೇವೆಯನ್ನು ಪ್ರಹ್ಲಾದ ಗುರುಕುಲದ ಮೂಲಕ ಮಾಡಿದ್ದಾರೆ. ವಿಶ್ವಾಮಿತ್ರನ ಭಾವ ರಾಮನಿಗೆ ಇವರಲ್ಲಿ ಕಂಡಿರಬೇಕು. ತಾನು ವಿಶ್ವಾಮಿತ್ರನಿಂದ ಮಾಡಿಸಿಕೊಂಡ ಸೇವೆಗೆ ಪ್ರತಿರೂಪವಾಗಿ ಅಯೋಧ್ಯೆಯಲ್ಲಿ ಅವರಿಗೆ ಒಂದು ಸ್ಥಾನವನ್ನು ಕಲ್ಪಿಸಿ ಅವರಿಂದ ನಾನು ಪೂಜೆ ಕೊಳ್ಳಬೇಕು ಎಂದುಕೊಂಡಿದ್ದಾನೋ ಏನೋ..


ಭೋಗದ ಸಾಮ್ರಾಜ್ಯದಲ್ಲಿ ಹುಟ್ಟಿ ಬದುಕುತ್ತಿರುವ ವಿಭೀಷಣ ಇದ್ಯಾವುದನ್ನು ಹಚ್ಚಿಕೊಳ್ಳದೆ ಸನ್ಯಾಸಿಯಂತೆ ವಿರಕ್ತನಾಗಿ ರಾಮಧ್ಯಾನದಲ್ಲಿ ಲಂಕೆಯಲ್ಲಿಯೇ ಇದ್ದು ಬದುಕಿದವ. ಇವನ ದೈವ ಭಕ್ತಿ ಹನುಮಂತನನ್ನೇ ಆಶ್ಚರ್ಯವಾಗಿಸಿತ್ತು. ಈ ಕಾಲದಲ್ಲಿ ಸನ್ಯಾಸಕ್ಕೆ ಚ್ಯುತಿ ಬರುವಂತೆ ಕಾಯಾ ವಾಚಾ ಮಾನಸಾ ಬೇಕಾದಷ್ಟು ಅವಕಾಶಗಳಿವೆ. ಆದರೆ ಅವೆಲ್ಲ ಭೋಗದ ಜೀವನವನ್ನು ಬಿಟ್ಟು ಸನ್ಯಾಸ ಸ್ವೀಕರಿಸಿ, ಅದಕ್ಕೆ ಸ್ವಲ್ಪವೂ ಅಪಚಾರವಾಗದಂತೆ ಸುಮಾರು 40 ವರ್ಷಗಳಷ್ಟು ಕಾಲದ ಸನ್ಯಾಸದ ತಪಸ್ಸು ಗುರುಗಳಿಂದ ನಡೆದಿದೆ. ಸನ್ಯಾಸಿಯಂತೆ ಬದುಕಿದ ವಿಭೀಷಣನಿಗೆ ಪಟ್ಟಾಭಿಷೇಕ ಮಾಡಿಸಿ ರಾಜನನ್ನು ಮಾಡಿದ್ದೇನೆ. ಅದಕ್ಕಾಗಿ ಇಲ್ಲಿ ಆ ಜೀವದ ಯೋಗ್ಯತೆಗೆ ಅನುಗುಣವಾದ ಸನ್ಯಾಸವನ್ನು ಕೊಟ್ಟು ನನ್ನ ಸೇವೆಯನ್ನು ಮಾಡಿಸುತ್ತೇನೆ ಎಂದು ಶ್ರೀರಾಮ ಎಣಿಸಿಕೊಂಡಿರಬೇಕು ಅಲ್ಲವೇ..


ಸೂರ್ಯವಂಶದ ಪರಂಪರೆಯೆ ಹಾಗೆ ,ಅದ್ಭುತವಾದ ತ್ಯಾಗಮಯ ಹಾಗೂ ತಪೋಮಯವಾದದ್ದು. ಅಂತಹ ಪರಂಪರೆಯಲ್ಲಿ ಬಂದದ್ದು ಕೂಡ ರಾಮನ ಹೆಗ್ಗಳಿಕೆಗೆ ಒಂದು ಕಾರಣ ಎನ್ನುವುದರಲ್ಲಿ ಸಂಶಯವಿಲ್ಲ. ಗುರುಗಳ ಪೂರ್ವಾಶ್ರಮದ ಪರಂಪರೆ ಕೂಡ ಅಂತಹದ್ದೇ ತ್ಯಾಗಮಯ ಹಾಗೂ ತಪೋಮಯವಾದದ್ದು. ಇದು ಹತ್ತಿರದಿಂದ ಬಲ್ಲವರಿಗೆ ಮಾತ್ರ ತಿಳಿದಿರುವ ಸಂಗತಿ. ಇವರ ತಂದೆಯವರು ಮಹಾ ಪಂಡಿತ ಹಾಗೂ ತಪಸ್ವಿ. ಬಹಳ ಪ್ರಸಿದ್ಧರೂ ಕೂಡ. ಆದರೂ ಯಾವುದೇ ಹಮ್ಮು ಬಿಮ್ಮುಗಳಿಲ್ಲದೆ ಅದೆಷ್ಟೋ ವರ್ಷಗಳಷ್ಟು ಕಾಲ ಕಟೀಲಿನ ಜಗನ್ಮಾತೆಯ ಪಲ್ಲಕ್ಕಿಯ ಮುಂದೆ ತನ್ನ ನೀಳವಾದ ಬಾಹುಗಳಿಂದ ಬಾನೆತ್ತರಕ್ಕೆ ಚಾಮರವನ್ನು ಚುಮ್ಮಿಸಿ ಬೀಸುತ್ತಿದ್ದರು. ಅಂತಹವರ ಪರಂಪರೆಯ ಫಲವಾಗಿ ಬಂದ ಕಾರಣ ಚಾಮರ ಬೀಸಲು ಇವರೇ ಸೂಕ್ತ ಎಂದು ಶ್ರೀರಾಮ ತೀರ್ಮಾನಿಸಿಕೊಂಡಂತಿದೆ.


ಕೇವಲ ಅಷ್ಟೇ ಅಲ್ಲ, ಪರಂಪರೆಯ ಮೂರು ಕುಡಿಗಳು ಸಂಬಂಧದ ಹಾಗೂ ಸಂಪತ್ತಿನ ಯಾವುದೇ ಮೋಹವಿಲ್ಲದೆ ಗುರುಗಳೊಂದಿಗೆ ಅಯೋಧ್ಯೆಯಲ್ಲಿ ಸೇವೆ ಮಾಡುವ ಅವಕಾಶವನ್ನು ಪೂರ್ತಿಯಾಗಿ ಸದುಪಯೋಗಪಡಿಸಿಕೊಳ್ಳುತ್ತಿದ್ದಾರೆ. ಆಶ್ಚರ್ಯವಾದದ್ದು ಇವರು ನಡೆಸುವುದು ಕೇವಲ ರಾಮಸೇವೆ ಮಾತ್ರವಲ್ಲ, ರಾಮ ಸೇವೆಗೆ ಬರುವ ಭಕ್ತರಿಗೆ ಎಳ್ಳಿನಿತೂ ಕೊರತೆಯಾಗದಂತೆ ನೋಡಿಕೊಳ್ಳುವ ಜವಾಬ್ದಾರಿಯ ಹೊಣೆಯನ್ನು ಸಮರ್ಥವಾಗಿ ನಿಭಾಯಿಸುತ್ತಿದ್ದಾರೆ. ರಾಮನ ದಾಸಾನುದಾಸ ಎಂಬ ಭಾವನೆಯನ್ನು ಬಣ್ಣಿಸದೆ ಇರಲು ಸಾಧ್ಯವಿಲ್ಲ. ಪರಂಪರೆ ಹಾಗೂ ರಕ್ತದ ಗುಣದ ಸಲುವಾಗಿ ಇದನ್ನು ಹೇಳಿದೆಯಷ್ಟೇ. ಅಂತಹ ಪರಂಪರೆಯ ಹಿನ್ನೆಲೆ ಶ್ರೀ ಗುರುಗಳ ರಕ್ತದಲ್ಲಿರುವ ಕಾರಣಕ್ಕಾಗಿಯೇ ರಾಮ ಸೇವೆಯ ಭಾಗ್ಯವನ್ನು ಶ್ರೀರಾಮ ಕರುಣಿಸಿದ್ದು.ಅಷ್ಟೇ ಅಲ್ಲದೆ ಗುರುಗಳು ರಾರಾಜಿಸುವ ಪೀಠವೂ ಕೂಡ ರಾಮನ ಆರಾಧನೆಯ ಪರಂಪರೆಯ ಪೀಠ ಎನ್ನುವುದು ಪರಂಪರೆಗಿರುವ ಮತ್ತೊಂದು ದೊಡ್ದ ಹೆಗ್ಗಳಿಕೆ.


ಭರತ ಪಟ್ಟದಲ್ಲಿರಬೇಕೆಂದು ಮನುಷ್ಯ ಪ್ರಯತ್ನ ನಡೆದಿತ್ತು. ಆದರೆ ವಿಧಿ ನಿಯಮ, ರಾಮ ವನವಾಸ ಮುಗಿಸಿ ಬಂದ ಮೇಲೆಯೆ ಪಟ್ಟಾಭಿಷೇಕ ನಡೆದದ್ದು. ಶ್ರೀ ಗುರುಗಳ ಪಟ್ಟದಲ್ಲಿಯೂ ಕೂಡ ಗುರುಗಳ ಬರೆವಿಕೆಗೋಸ್ಕರವೆ ಪೀಠ ಕಾದಂತೆ ನಡೆದಿತ್ತು. ಕೃಷ್ಣನಿಗಿಂತ ಮುಂಚೆ ರಾಮ ಇವರಲ್ಲಿಗೆ ಬರಬೇಕಿತ್ತು. ಅದಕ್ಕೆ ನಿಮಿತ್ತವಾದದ್ದು ಪೇಜಾವರ ಮಠದ ಪೀಠ. ಶ್ರೀರಾಮ ವಿಶ್ವಪ್ರಸನ್ನ ತೀರ್ಥರ ಅವಶ್ಯಕತೆಯನ್ನು ಜಗತ್ತಿಗೆ ತೋರಿಸಿಕೊಟ್ಟಿದ್ದಾನೆ.



 ರಾಮಾಯಣದ ಎಲ್ಲಾ ಪಾತ್ರಗಳು ಹಾಗೂ ಎಲ್ಲಾ ಘಟನೆಗಳು ಅಯೋಧ್ಯೆಯಲ್ಲಿ ಗುರುಗಳನ್ನು ಕಂಡಾಗ ಎದ್ದು ಕಾಣುತ್ತಿತ್ತು. ಅಯೋಧ್ಯೆಯ ಮಣ್ಣಿನಲ್ಲಿ, ರಾಮಮಂದಿರದ ಸನ್ನಿಧಾನದಲ್ಲಿ ಇಂತಹಾ ಅವಕಾಶ ಗುರುಗಳು ಇಲ್ಲದಿದ್ದರೆ ಖಂಡಿತ ಪಡೆಯಲು ಸಾಧ್ಯವಿಲ್ಲ. ನಾನಂತೂ ಶ್ರೀರಾಮ ಸೇವೆಗೆೊಂದಿಗೆ ನನ್ನ ಪುಸ್ತಕ ಬಿಡುಗಡೆಯ ಅವಕಾಶವನ್ನು ಕೂಡ, ಪೇಜಾವರ ಶ್ರೀಗಳ ಸಮ್ಮುಖದಲ್ಲಿ ನನ್ನ ಪರಮ ಗುರುಗಳಾದ ವಿದ್ಯಾಧೀಶತೀರ್ಥ ಶ್ರೀಪಾದರಿಂದ ಬಿಡುಗಡೆಯನ್ನು ಮಾಡಿಸುವ ಮೂಲಕ ಈ ಅವಕಾಶವನ್ನು ಸದುಪಯೋಗಿಸಿಕೊಂಡಿದ್ದೇನೆ.



ರಾಮನ ಕಾಲದಲ್ಲಿ ಕರಾವಳಿ ಇನ್ನೂ ಹುಟ್ಟಿರಲಿಲ್ಲ ಎನ್ನುವ ವಾದವಿದೆ. ಒಂದು ವೇಳೆ ಇದು ಹೌದಾಗಿದ್ದರೆ,ಇಂದು ಕರಾವಳಿಯ ಜನರಿಗೆ ರಾಮನೊಂದಿಗೆ ಸೇರುವ ಅವಕಾಶವನ್ನು ಈ ಗುರುಗಳ ಮೂಲಕ ರಾಮ ಕೊಟ್ಟದ್ದೋ ಏನೋ.



ಭಾವಾತೀತ ಭಾವನೆಗಳಿಗೆ ಅಕ್ಷರದ ರೂಪವನ್ನು ಕೊಡುವ ವ್ಯರ್ಥ ಪ್ರಯತ್ನ ಮಾಡಿದ್ದೇನೆ. ಇದು ಪೂರ್ಣತೆಯನ್ನು ಖಂಡಿತಾ ಕೊಡುವುದಿಲ್ಲ. ಅಯೋಧ್ಯೆಯ ನೆಲದಲ್ಲಿ 60ರ ಉತ್ಸವವನ್ನು ಆಚರಿಸುತ್ತಿರುವ ಗುರುಗಳ ಇನ್ನೊಂದರವತ್ತರ ಉತ್ಸವವನ್ನು ಅದೇ ನೆಲದಲ್ಲಿ ನೋಡುವ ಭಾಗ್ಯ ರಾಮ ನಮಗೆ ಕೊಡಲಿ ಎಂದಷ್ಟೇ ಬೇಡಿಕೊಳ್ಳಬಹುದು...



ವಿ=ಶ್ವೇಶತೀರ್ಥರ ಕರಕಮಲ ಜಾತರು ವಿ -

ಶ್ವ =ನಾಯಕ ಶ್ರೀರಾಮನ ಹಿರಿ ಸೇವಕರು. 

ಪ್ರ=ಸನ್ನ ಮುಖ ವದನದ ಗುರುಗಳಿಗೆ 

ಸ=0ದಿತಿಂದಿಗೆ ಅರವತ್ತು.ರಾಮ ಇಲ್ಲೆ ಇ- 

ನ್ನ=ರವತ್ತರ ಸಂಭ್ರಮದ ಭಾಗ್ಯ ಸಿಗಲಿ...

ತೀ=ರ ದಾಟಿಸಿ ರಾಮಸೇವಾ ಭಾಗ್ಯದಿ, ಸಾ 

ರ್ಥ=ಕದ ಭಾವ ತಂದು ಪ್ರತಿ ರಾಮನಾದಿರಿ...


- ಸಂತೋಷ್ ಕುಮಾರ್ ಭಟ್ ಭಕ್ರೇಮಠ, ಮುದ್ರಾಡಿ


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  

إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top