ಚಿತ್ರ ಕೃಪೆ: ಅಯೋಧ್ಯಾ ಫೌಂಡೇಶನ್ ಪ್ರಕಟಿತ ಸಚಿತ್ರ ರಾಮಾಯಣ
-ಶ್ರೀಮತಿ ಜ್ಯೋತ್ಸ್ನಾ ರಾಜೇಂದ್ರ ಹೇರೂರ
ಆದಿಕವಿ ಮಹರ್ಷಿ ವಾಲ್ಮೀಕಿ ಪ್ರಣೀತ ಶ್ರೀಮದ್ರಾಮಾಯಣ ಮತ್ತು ಶ್ರೀ ವ್ಯಾಸಮುನಿ ರಚಿತ ಮಹಾಭಾರತ ಇವೆರಡೂ ಮನುಕುಲದ ತವನಿಧಿ. ಸನಾತನ ಧರ್ಮದ ಅಕ್ಷಯ ಸುನಿಧಿ. ಯುಗಗಳುರುಳಿದರೂ ತತ್ತರದ ಬದುಕಿಗೆ ಮೌಲ್ಶಗಳನ್ನು ಬಿತ್ತರಿಸುವ, ಸಂದೇಯಾದಿಗಳನ್ನು ಕತ್ತರಿಸುವ ಮತ್ತು ಅನಂತ ಪ್ರಶ್ನೆಗಳಿಗೆ ಉತ್ತರಿಸುವ ಪ್ರಜ್ಞಾನದ ಶರಧಿ. ಮಿಂದಷ್ಟೂ ಮೈಮನಗಳಿಗೆ ನವಚೇತನ. ದಿವ್ಯ ದಿಗ್ದರ್ಶನ.
ಸರಸದಲ್ಲಿದ್ದ ಕ್ರೌಂಚ ಬಾನಾಡಿಗಳಲ್ಲೊಂದು ಬೇಡನೊಬ್ಬನ ಬಾಣದ ಮೊನೆಯಿಂದ ಮರಣಿಸಿದ್ದನ್ನು ಕಂಡ ಮುನಿಯ ಶೋಕವೇ ಶ್ಲೋಕವಾಯಿತು. ರಾಮಾಯಣ ಮಹಾಕಾವ್ಯಕ್ಕದುವೇ ನಾಂದಿಯಾಯಿತು. ಶ್ರೀ ರಾಮಚಂದ್ರನ ಸಮ್ಮುಖದಲ್ಲಿ ಅವನ ಚರಿತೆಯನ್ನೇ ಅವನ ಮಕ್ಕಳಾದ ಲವಕುಶರು ಹಾಡಿದರು. ಸೀತಾರಾಮರ ಬದುಕಿನ ಭಾವ ಪೀಯೂಷವನ್ನು ನೀಡಿದರು.
ಯಜ್ಞಪುರುಷನಿತ್ತ ಪಾಯಸದ ಸೇವನೆಯಿಂದ ದಶರಥ ಮಹಾರಾಜನ ರಾಣಿಯರಾದ ಕೌಸಲ್ಯೆಗೆ ಶ್ರೀರಾಮ, ಸುಮಿತ್ರೆಗೆ ಲಕ್ಷ್ಮಣ, ಶತ್ರುಘ್ನ ಮತ್ತು ಕೈಕೇಯಿಗೆ ಭರತ ನಾಮಕ ಪುತ್ರರ ಜನನ. ವಿಶ್ವಾಮಿತ್ರರಿಂದ ರಾಮಲಕ್ಷ್ಮಣರಿಗೆ ಬಿಲ್ವಿದ್ಯೆ ಇತ್ಯಾದಿ ಜ್ಞಾನಪ್ರದಾನ. ರಾಮನಿಂದ ತಾಟಕಿ ಸಂಹರಣ, ಶಿವ ಧನುಸ್ಸನ್ನು ಮುರಿದು ಸೀತೆಯ ಪಾಣಿಗ್ರಹಣ. ಇನ್ನೇನು ಪಟ್ಟಾಭಿಷೇಕ ಎಂಬಾಗಲೇ ತಂದೆ ಮಲತಾಯಿಗಿತ್ತ ಮಾತನ್ನುಳಿಸಲು ಲಕ್ಷ್ಮಣ ಸೀತೆಯರೊಂದಿಗೆ ವನವಾಸಗಮನ. ತತ್ಸಂದರ್ಭದಲ್ಲಿ ಸಾತ್ವಿಕತೆಯ ವಿರೋಧಿಗಳಾದ ದಾನವರ ದಮನ. ಮಾರುವೇಷದಲ್ಲಿ ಬಂದು ಸೀತೆಯನ್ನಪಹರಿಸಿದ ದಶಶಿರನ ಸಂಹರಣ. ಸೀತೆಯನ್ನರಸುವ ಹಾದಿಯಲ್ಲಿ ಭಕ್ತಾಗ್ರಗಣ್ಯ ಹನುಮಂತನ ಸೇವಾಗ್ರಹಣ. ಅಗ್ನಿದಿವ್ಯದಲ್ಲಿ ಅದ್ದಿ ಗೆದ್ದ ವೈದೇಹಿಯ ಪುನರ್ಮಿಲನ. ನಂತರ ಅಯೋಧ್ಯೆಗೆ ಮರಳಿ ರಾಜದಂಡಪಾಣಿಯಾದಾಗ ಅಗಸನ ಮಾತಿಗಾಗಿ ಮತ್ತೆ ಸೀತೆಗೆ ತಪೋವನ ಪ್ರೇಷಣ. ವಾಲ್ಮೀಕಿ ಮುನಿಗಳಾಶ್ರಯದಲ್ಲಿ ಲವಕುಶರ ಜನನ. ಮುಂದೆ ಜಾನಕಿಯ ಪಾತಿವ್ರತ್ಯದ ಪರೀಕ್ಷೆಯಲ್ಲಿ ಅವಳ ಭೂಗರ್ಭ ನಿರ್ಗಮನ. ಹೀಗೆ ರಾಮಾಯಣ ಚರಿತೆಯ ಅನಾವರಣ. ಇದೆಲ್ಲವೂ ಶ್ರದ್ಧೇಯ ಮನಸ್ಸುಗಳಿಗೆ ಗೊತ್ತು. ಆದರೆ ಪ್ರತಿ ನಡೆಯಲ್ಲಿಯೂ ಜೀವನ ಕೌಶಲ್ಯಗಳು ಮತ್ತು ಕಾಯಕಪ್ರಜ್ಞೆಯನ್ನು ಅರಿತುಕೊಳ್ಳುವುದರಲ್ಲಿಯೇ ಇದೆ ರಾಮಾಯಣದ ಗತ್ತು ಮತ್ತು ಅಭ್ಯಾಸಿಗಳ ತಾಕತ್ತು. ಈ ನಿಟ್ಟಿನಲ್ಲಿ ನನ್ನ ಯಥಾಮತಿಗೆ ಗೋಚರವಾದುದೇ ಪ್ರಸ್ತುತ ಬರಹದ ಕಥಾವಸ್ತು.
ರಾಮಾಯಣದಲ್ಲಿ ತಂದೆಯಾಗಿ ದಶರಥ, ತಾಯಿಯಾಗಿ ಕೌಸಲ್ಯೆ ಸುಮಿತ್ರೆ, ಗುರುವಾಗಿ ವಸಿಷ್ಠ ವಿಶ್ವಾಮಿತ್ರರು ಮಗನಾಗಿ ಶ್ರೀರಾಮ, ಸೋದರರಾಗಿ,ಲಕ್ಷ್ಮಣ ಭರತ ಶತ್ರುಘ್ನಾದಿಗಳು, ಪತ್ನಿಯಾಗಿ ಸೀತೆ, ಗೆಳೆಯನಾಗಿ ಸುಗ್ರೀವ, ಸೇವಕನಾಗಿ ಹನುಮಂತ ಹೀಗೆ ಎಲ್ಲರೂ ಎಲ್ಲವೂ ಅನನ್ಯ. ಶ್ರೀರಾಮನಂತೂ ಮರ್ಯಾದಾ ಪುರುಷೋತ್ತಮ, ಧರ್ಮದ ಪ್ರತಿಮೂರ್ತಿ. ಈ ತೆರನಾಗಿ ಬದುಕಿನ ಮೌಲ್ಯಗಳ ಬಿಚ್ಚಿಡುವ ರಾಮಾಯಣದ ಪ್ರತಿಯೊಬ್ಬರೂ ಆದರ್ಶವೇ ಆಗುತ್ತಾರೆ. ರಾಮನನ್ನು ಕೇಂದ್ರೀಕರಿಸಿ ಕೌಶಲ್ಯಗಳನ್ನು ಅವಲೋಕಿಸಿದರೆ ರಾಘವನು ಪ್ರತಿ ನಡೆಯಲ್ಲಿಯೂ ಅಮೋಘ. ಪುಟ್ಟ ರಾಮ ಎಲ್ಲರಿಗೂ ಬಹುಪ್ರಿಯ. ಹಾಗೆಯೇ ವನವಾಸಕ್ಕಟ್ಟಿದ ಕೈಕೇಯಿಗೂ ಕೂಡ. ಪಟ್ಟಾಭಿಷೇಕದ ಸುದ್ದಿ ಅರಿತಂತೆಯೇ ಸಂಭ್ರಮ ಪಟ್ಟವಳವಳು. ಆದರೆ ಮಂಥರೆಯ ದುರುದ್ದೇಶಕ್ಕೆ ವಿಭ್ರಮಗೊಂಡಳು.
ವರ್ಣಾಶ್ರಮದ ಮೂರನೇಯ ಧರ್ಮವಾದ ವಾನಪ್ರಸ್ಥಕ್ಕೆ ಹೊರಡುವ ನಿರ್ಧಾರದಲ್ಲಿ ದಶರಥ ಶ್ರೀ ರಾಮನಿಗೆ ಅರಸೊತ್ತಿಗೆಯನ್ನು ಒಪ್ಪಿಸ ಬಯಸುತ್ತಾನೆ. ರಘುಕುಲದ ರಾಜ್ಯಶ್ರೀಯನ್ನು ಸಮರ್ಥ ಕೈಗಳಲ್ಲಿಡುವ ಮಹದಾಶಯದ ದಶರಥನು ಪ್ರಬುದ್ಧ ಆಡಳಿತಗಾರನೆನಿಸುತ್ತಾನೆ. ವಿಶ್ವಾಮಿತ್ರರು ಓಲಗಕ್ಕೆ ಆಗಮಿಸಿ ರಾಮಲಕ್ಷ್ಮಣರನ್ನು ದುಷ್ಟ ಸಂಹಾರಕ್ಕಾಗಿ ಕಳಿಸೆನಲು, ದಶರಥನನ್ನು ಪಿತೃವಾತ್ಸಲ್ಯವು ಕಟ್ಟಿಹಾಕಿದರೂ,ಗಟ್ಟಿ ಮನಸ್ಸಿನೊಡನೆ ಕಳುಹುತ್ತಾನೆ. ಗುರುವಾಗಿ ವಿಶ್ವಾಮಿತ್ರರು ತಮ್ಮೆಲ್ಲ ವಿದ್ಯೆಯನ್ನು ಶಿಷ್ಯರಿಗೆ ಧಾರೆಯೆರೆಯುತ್ತಾರೆ. ಪ್ರಾಮಾಣಿಕ ಶಿಷ್ಯರಾಗಿ ರಾಮ ಲಕ್ಷ್ಮಣರು ಗುರುವನ್ನನುಸರಿಸುತ್ತಾರೆ. ತಾಟಕಿಯ ಸಂಹಾರದ ವಿಷಯಕ ಸ್ತ್ರೀಪೀಡನವದೆಂತು ಸರಿಯೆಂಬ ಶ್ರೀರಾಮನ ತುಮುಲಕ್ಕೆ ದೌರ್ಷ್ಟ್ಯಕ್ಕೆ ದಮನವೇ ಸರಿಯೆಂದು ಗುರುಗಳು ಹೊಲಬುದೋರುತ್ತಾರೆ.
ಕನ್ಯಾಪಿತೃವಾಗಿ ಜನಕ ಮಹಾರಾಜನು ವರಶ್ರೇಷ್ಠನಿಗೇ ಹೆಣ್ಮಕ್ಕಳ ವಿವಾಹವಾಗಿಸುವುದಕ್ಕಾಗಿ ಬಯಸುತ್ತಾನೆ. ಶಿವಧನುವನ್ನು ಹೆದೆಯೇರಿಸಿದ ರಾಮನಿಗೆ ಜಾನಕಿಯು ವಧುವಾಗುತ್ತಾಳೆ. ಅಲ್ಲಿಯೂ ಹಿರಿಯರ ಸಮ್ಮುಖದಲ್ಲಿ ಅವರ ಶುಭಾಶೀಷಗಳಿಂದ ಮದುವೆಯ ಮಂಗಲ ಕಾರ್ಯಕ್ರಮಗಳು ಜರುಗುತ್ತವೆ.
ಅಯೋಧ್ಯೆಯಲ್ಲಿ ಶ್ರೀ ರಾಮನ ಪಟ್ಟಾಭಿಷೇಕಕ್ಕೆ ಬಾಂಧವರಿಂದಾರಭ್ಯ ಸಮಸ್ತ ಪ್ರಜೆಗಳಿಗೆ ಹರ್ಷದಾಯಕ ವಿಚಾರ. ಆದರೂ ಕೈಕೇಯಿಯಿಂದಾಗಿ ಪಿತೃವಚನ ಪಾಲನೆಗಾಗಿ ರಾಮನ ಅರಣ್ಯಗಮನ ಅನಿವಾರ್ಯವಾಗಿತ್ತು. ಸಮತ್ವದ ಮನಸ್ಸಿನ ರಾಘವ ಅರಸೊತ್ತಿಗೆಯಿಂದ ಮನದೆಗೆದು ಅರಣ್ಯಮುಖಿಯಾಗುತ್ತಾನೆ. ರಾಜಪೋಷಾಕನ್ನು ವರ್ಜಿಸಿ ವಲ್ಕಲಧಾರಿಯಾಗುತ್ತಾನೆ. ಮನದನ್ನೆ ಸುಮಕೋಮಲೆ ಸೀತೆಗೆ ವಲ್ಕಲವನ್ನು ಧರಿಸುವುದರಲ್ಲಿ ಸಹಕರಿಸುತ್ತ ಪತ್ನೀ ಮನೋರಮನಾಗುತ್ತಾನೆ. ಸೋದರ ಲಕ್ಷ್ಮಣನೊಡನೆ ವನಗಾಮಿಯಾದಾಗ ಇಡೀ ಅಯೋಧ್ಯೆಯೇ ಉಸಿರುಗರೆಯುತ್ತದೆ. ತಾಯಿ ಕೌಸಲ್ಯೆ, ತಂದೆ ದಶರಥ ಯಾರ ವ್ಯಾಮೋಹಕ್ಕೂ ಒಳಗಾಗದೆ ವಚನ ಪರಿಪಾಲನೋನ್ಮುಖನಾಗುತ್ತಾನೆ. ಊರ ಹೊರವಲಯದವರೆಗೆ ಕರೆತಂದ ರಥವನ್ನು ಹಿಂದೆಗಳಹುತ್ತಾನೆ. ಗುಹನ ನಾವೆಯಲ್ಲಿ ಸರಯೂ ನದಿಯನ್ನು ದಾಟಿ ಮುಂದುವರೆಯುತ್ತಾನೆ. ಹಂಸತೂಲಿಕಾತಲ್ಪದಲ್ಲಿಯೂ ನೋವನನುಭವಿಸಿದರಿಗೆ ಶಿಲಾತಲ್ಪದಲ್ಲಿ ಶಯನಿಸುವ ಸೌಭಾಗ್ಯ?.
ಮುಂದೆ ಋಷ್ಯಾಶ್ರಮಗಳ ಸಂದರ್ಶನ, ದುರುಳ ಮರ್ದನಗಳ ನಡುವೆ ಪಂಚವಟಿಯ ಕುಟೀರವೇ ಸದನ. ಶೂರ್ಪನಖಿಯು ಮಾಯೆಯಾಗಿ ಕಾಡಿದರೂ ಏಕಪತ್ನೀವ್ರತದ ಪರಿಪಾಲನ. ಆದರೂ ಅದೇಕೋ ಬಂಗಾರದ ಜಿಂಕೆಯ ಪ್ರಲೋಭನೆಯಲ್ಲಿ ಸತಿಯ ಮೆಚ್ಚಿನ ಕಾರ್ಯಕ್ಕೆ ಉಪಕ್ರಮಿಸಿ ಮೆಚ್ಚಿನ ಸತಿಯನ್ನೇ ಕಳೆದುಕೊಳ್ಳುವಂತಾದ ವಿಧಿಯ ವಿಡಂಬನ.
ಸತಿಯಿಲ್ಲದ ಮನೆಯಲ್ಲಿ ವಿಲಪನ. ನಂತರ ರಾಮನು ಅಲೆದಲೆದು, ವನವನ ಸಂಚರಿಸಿ ದಂಡಕಾರಣ್ಯದಲ್ಲಿ ಸುಗ್ರೀವನೊಂದಿಗೆ ಗೆಳೆತನ.
ಇಲ್ಲಿ ಸಖ್ಯತ್ವಕ್ಕೆ ಮೇಲುಕೀಳಿಲ್ಲ ಎಂಬುದರ ಉದಾಹರಣ. ಮೊದಲ ಸಂಭಾಷಣೆಯಲ್ಲಿ ಶ್ರೀರಾಮನ ಹೖದಯ ಗೆದ್ದ ಹನುಮಂತನ ವಾಕ್ಪಟುತೆ. ಸ್ನೇಹಕಿಂಬಾಗಿ ವಾಲಿ ಸಂಹರಣಾನಂತರ ಕರ್ತವ್ಯ ಮರೆತ ವಾನರ ವೀರ ಸುಗ್ರೀವನಿಗೆ ಕರ್ತವ್ಯದ ಸಂಸ್ಮರಣ. ವರ್ಷಾಕಾಲಾನಂತರ ಜಾಂಬುವಂತ, ಅಂಗದರೊಂದಿಗೆ ಹನುಮನ ಸೇವಾಭಿನಂದನ. ಋಷ್ಯಮೂಕವನ್ನೇರಿ ತ್ರಿವಿಕ್ರಮನಾಗಿ ಬೆಳೆದು ವಾಯುತನಯನ ಸಮುದ್ರೋಲ್ಲಂಘನ.
ಅಲ್ಲಿ ಮಾತೆ ಸೀತೆಗೆ ರಾಮನ ಮುದ್ರೆಯುಂಗುರವಿತ್ತು, ಅವಳ ಚೂಡಾಮಣಿಯನ್ನು ತಂದು ಶ್ರೀರಾಮನ ಕೈಯಲ್ಲಿತ್ತ ಹನುಮಂತನು ಕೃತಕೃತ್ಯ. ದೂತನಾಗಿ ಅವನದ್ದು ಯಶಸ್ವೀ ಕಾರ್ಯಪರಿಪಾಲನ.. ರಾವಣನ ನಡತೆ ವಿಪರೀತವಾಗಲು ಲಂಕಾಪುರಿ ದಹನ. ನಂತರ ವಾನರಸೇನೆಯೊಂದಿಗೆ ಸಮುದ್ರಕ್ಕೆ ಸೇತುವೆ ಕಟ್ಟಿ ಲಂಕೆಯಲ್ಲಿ ರಾಮ ರಾವಣರ ಘನಘೋರ ಕದನ. ಅಗ್ನಿ ಪರೀಕ್ಷೆಯಲ್ಲಿ ಗೆದ್ದು ಬಂದ ಸೀತಾ ಪರಿಗ್ರಹಣ. ಸುವರ್ಣಮಯಿ ಲಂಕೆಗೆ ವಿಭೀಣನನ್ನು ಪಟ್ಟಗಟ್ಟಿ, ಮರಳಿ ಅಯೋಧ್ಯೆಗೆ ಆಗಮನ. ಅದುವರೆಗೆ ರಾಮಪಾದುಕೆಗಳ ಸಮಕ್ಷದಲ್ಲಿ ನಂದಿಗ್ರಾಮದಲ್ಲಿದ್ದ ಭರತನ ಆಳ್ತನವು ಸೋದರಪ್ರೀತಿಗೆ ನಿದರ್ಶನ.
ರಾಮನ ರಾಜ್ಯ ಪಾಲನೆಯು ಇಂದಿಗೂ ರಾಮಸುರಾಜ್ಯವೆಂದು ಸುಪ್ರಸಿದ್ಧ. ಕಲಹಗಳಿಲ್ಲದ, ತರತಮವಿಲ್ಲದ, ಸುವ್ಯವಸ್ಥಿತ ರಾಜ್ಯಭಾರ. ಪ್ರಜಾಪರಿಪಾಲನೆಯಲ್ಲಿ ಸ್ವಂತದ್ದೂ ಗೌಣ. ಭವಭೂತಿ ಮಹಾಕವಿಯ ಉತ್ತರ ರಾಮ ಚರಿತೆಯ ಧ್ವನಿಯಲ್ಲಿ ಹೇಳುವುದಾದರೆ, “ಸ್ನೇಹಂ ದಯಾಂಚ ಸೌಖ್ಯಂಯದಿ ವಾ ಜಾನಕೀಮಪಿ. ಆರಾಧನಾಯ ಲೋಕಸ್ಯ ಮುಂಚತೇ ನಾಸ್ತಿ ಮೇ ವ್ಯಥಾ” ಪ್ರಜಾಪಾಲನೆಯ ಕೈಂಕರ್ಯದಲ್ಲಿ ಸ್ನೇಹ, ದಯೆ, ಸೌಖ್ಯ ಮತ್ತು ಜಾನಕಿಯನ್ನು ಬಿಟ್ಟುಕೊಟ್ಟರೂ ನನಗೆ ವ್ಯಥೆಯಿಲ್ಲ ಎಂಬಲ್ಲಿ ರಾಜಾರಾಮದ ಕರ್ಮಪ್ರಜ್ಞೆಯ ಅರಿವಾಗುತ್ತದೆ.ಅಂತೆಯೇ ರಜಕನ ಮಾತಿನಿಂದಾಗಿ ತುಂಬು ಗರ್ಭಿಣಿ ಸೀತೆಗೆ ಮತ್ತೆ ವನವಾಸ!! ವಾಲ್ಮೀಕಿಗಳಾಶ್ರಯದಲ್ಲಿ ಕುಶಲವರ ಜನನ. ಇವರ ಕಂಠದಲ್ಲಿಯೇ ರಾಮಚರಿತೆಯ ಗಾಯನ.
ಹೀಗೆ ರಾಮಾಯಣದಲ್ಲಿ ಪ್ರತಿಯೊಂದೊ ಸದ್ವ್ಯವಹಾರದ ಸುಪ್ರತೀಕವೇ ಆಗಿವೆ. ರಘುಕುಲಲಾಮನ ಪಾದಸ್ಪರ್ಶದ ಶಿಲೆಯು ಅಹಲ್ಯೆಯಾಯಿತು. ರಾಮ ಬರುವನೆಂದು ಕಾದ ಶಬರಿಯ ತಪಸ್ಸು ಸಾರ್ಥಕವಾಯಿತು. ಊರ್ಮಿಳೆಯನ್ನು ಊರಲ್ಲಿಯೇ ತೊರೆದು ಅಗ್ರಜನಿಗಾಗಿ ಹಾತೊರೆದು ಬಂದ ಲಕ್ಷ್ಮಣನ ಸೋದರಪ್ರೀತಿಗೆ ಹಿಮಾಲಯದ ಗರಿಮೆ. ಪತಿಯನ್ನು ಕಳುಹಿ ಹಿರಿಯರ ಸೇವೆಯಲ್ಲಿ ಬಾಳಿದ ಊರ್ಮಿಳೆಯ ಸಹಧರ್ಮಕ್ಕೆ ಪ್ರತಿಯಿಲ್ಲ.ಜೀವನ ಕುಶಲತೆ ಮತ್ತು ಕಾಯಕ ಪ್ರಜ್ಞೆಯಲ್ಲಿ ರಾಮಾಯಣದ ಔನ್ನತ್ಯಕ್ಕೆ ಸರಿಗಟ್ಟುವುದಾವುದೂ ಇಲ್ಲ.
ಭವಭೂತಿ ಮಹಾಕವಿಯ ಉತ್ತರರಾಮಚರಿತೆಯ ಮಾತುಗಳಲ್ಲಿ ಹೇಳುವುದಾದರೆ,
“ವಜ್ರಾದಪಿ ಕಠೋರಾಣಿ ಮೃದೂನಿ ಕುಸುಮಾದಪಿ
ಲೋಕೋತ್ತರಾಣಾಂಚೇತಾಂಸಿ ಕೋನುವಿಜ್ಞಾತುಮರ್ಹತಿ”
ಇದನ್ನೇ ಶತಮಾನದ ಮಹಾನ್ ವಿದ್ವಾಂಸರಾದ ಶ್ರೀ ಬನ್ನಂಜೆ ಗೋವಿಂದಾಚಾರ್ಯರ “ಮತ್ತೆ ರಾಮನ ಕತೆಯ ಕನ್ನಡದ ಕನ್ನಡಿಯ ಪ್ರಕಾರ
“ವಜ್ರಕಿಂತಲು ಗಡಸು ಹೂವಿಗಿಂತಲು ಮಿದು
ಲೋಕಮಾನ್ಯರ ಲಹರಿ ತಿಳಿದೀತು ಯಾರಿಗೆ.”
ಇದುವೇ ಈ ಬರಹದ ಹೆಗ್ಗಳಿಕೆ.
- ಶ್ರೀಮತಿ ಜ್ಯೋತ್ಸ್ನಾ ರಾಜೇಂದ್ರ ಹೇರೂರ
ಸಹಾಯಕ ಆಡಳಿತಾಧಿಕಾರಿಗಳು
ಭಾರತೀಯ ಜೀವವಿಮಾ ನಿಗಮ
ವಿಭಾಗೀಯ ಕಾರ್ಯಾಲಯ
ರಾಯಚೂರು
ಲೇಖಕರ ಸಂಕ್ಷಿಪ್ತ ಪರಿಚಯ:
ಜ್ಯೋತ್ಸ್ನಾ ರಾಜೇಂದ್ರ ಹೇರೂರ
"ಆರ್ಜವ", ವಿವೇಕ ಮಾರ್ಗ, ಶ್ರೀಶೈಲ ನಗರ, ಜೇವರ್ಗಿ ಕಾಲನಿ, ಕಲಬುರ್ಗಿ.
ಕನ್ನಡ ಮತ್ತು ಸಂಸ್ಕೃತ ಸಾಹಿತ್ಯದಲ್ಲಿ ಒಲವು ಹೊಂದಿದ್ದು, ಗುಲಬರ್ಗಾ ವಿಶ್ವವಿದ್ಯಾಲಯದಲ್ಲಿ ಸಂಸ್ಕೃತ ವಿಷಯದಲ್ಲಿ ಸ್ನಾತಕೋತ್ತರ ಪದವಿಯಲ್ಲಿ ಬಂಗಾರದ ಪದಕ ವಿಜೇತರು. ವೃತ್ತಿಯಲ್ಲಿ ಭಾರತೀಯ ಜೀವವಿಮಾ ನಿಗಮದ ವಿಭಾಗೀಯ ಕಾರ್ಯಾಲಯ ರಾಯಚೂರಿನಲ್ಲಿ ಸೇವೆಯಲ್ಲಿದ್ದಾರೆ. ಪ್ರವೃತ್ತಿಯಲ್ಲಿ ಸಾಹಿತ್ಯದ ಅಭ್ಯಾಸ ಮತ್ತು ಬರವಣಿಗೆ. ಅನೇಕ ಲೇಖನ ಮತ್ತು ಕವನಗಳನ್ನು ರಚಿಸಿದ್ದು,ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಕಾರ್ಯಕ್ರಮ ನಿರೂಪಣೆ ಮೆಚ್ಚಿನ ಹವ್ಯಾಸ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ