ಶ್ರೀರಾಮ ಕಥಾ ಲೇಖನ ಅಭಿಯಾನ- 105: ಏಕ ಮೇವ ಸಕಲ ಸದ್ಗುಣಿ ಶ್ರೀರಾಮ

Upayuktha
0


-ಅನ್ನಪೂರ್ಣ ಹೇಮಚಂದ್ರ


ಒಂದು ವಸ್ತುವನ್ನು ಪಡೆಯಲು ಅರ್ಹತೆ ಇಲ್ಲದಿದ್ದರೂ ಕೂಡ ಹೇಗಾದರೂ ಮಾಡಿ ದಕ್ಕಿಸಿಕೊಳ್ಳಬೇಕೆಂಬ ಆಸೆ ಮನುಷ್ಯನಲ್ಲಿ ಸಹಜವಾಗಿ ಇರುತ್ತದೆ. ಆದರೆ, ತನಗೆ ಅರ್ಹತೆ ಇದ್ದೂ, ಸಹಜವಾಗಿ ತನಗೆ ಬರಬೇಕಾಗಿದ್ದದ್ದು ಕೂಡ ಯಾರಾದರೂ ನೇರವಾಗಿ ಹೇಳದೆ ಬೇರೆಯವರಿಂದ ಹೇಳಿಸಿ ಕಿತ್ತುಕೊಳ್ಳ ಬಯಸಿದರೆ ಯಾವ ಮನುಷ್ಯನು ತಾನೇ ಸುಲಭವಾಗಿ ಬಿಟ್ಟುಬಿಡುತ್ತಾನೆ? ಅದು ಎಷ್ಟೇ ಸಣ್ಣ ವಸ್ತುವಾಗಿರಲಿ, ಅದು ಯಾರಿಂದಲೂ ಬಿಡಲು ಸಾಧ್ಯವೇ ಇಲ್ಲ. ಒಂದು ವೇಳೆ ಬಿಟ್ಟರೂ ಅದನ್ನು ತನಗೆ ದಕ್ಕದಂತೆ ಮಾಡಿದವರ ಮೇಲೆ ಸಿಟ್ಟು ಕೋಪ ಸೇಡಿನ ಭಾವ ಎಲ್ಲಾ ಇರುವುದು ಕೂಡ ಸಹಜವೇ. (ಈಗಂತೂ ಕೇವಲ ಮೊಬೈಲ್ ಮುಟ್ಟ ಬೇಡವೆಂದು, ಮೊಬೈಲ್ ಹೆಚ್ಚಿಗೆ ನೋಡಬೇಡ ಎಂದು ಹೇಳಿದ ತಂದೆ ತಾಯಿಯನ್ನೇ ಕೊಲ್ಲುವವರು ಇದ್ದಾರೆ. ಇಲ್ಲ ತಾವೇ ಆತ್ಮಹತ್ಯೆ ಮಾಡಿಕೊಳ್ಳುವವರೂ ಇದ್ದಾರೆ ಇದು ಎಲ್ಲರಿಗೂ ತಿಳಿದ ವಿಷಯವೇ ಆಗಿದೆ.) ಅಂತಹುದರಲ್ಲಿ, ಪರಾಕ್ರಮಿಯೂ ಧೀರನೂ ಧನುರ್ವೇದ ಪಂಡಿತನೂ ಪ್ರಜಾನುರಾಗಿಯೂ ಆಗಿದ್ದವನು ತನಗೆ ದಕ್ಕಬೇಕಾದ ಸಿಂಹಾಸನವನ್ನು ತ್ಯಜಿಸಿ ತಂದೆಯು ಕಾಡಿಗೆ ಹೋಗಲು ಹೇಳಿದನೆಂದು, ತಾಯಿ ಹೇಳಿದರೂ ಕೂಡ ನಿರ್ವಿಕಾರವಾಗಿ ಏನೊಂದೂ ಯೋಚಿಸದೆ ತಾಯಿಯ ಮೇಲೆ ತಂದೆಯ ಮೇಲೆ ಮುನಿಸಿಕೊಳ್ಳದೇ ಇದ್ದ ಮಹನೀಯನೆಂದರೆ ಅದು ಶ್ರೀರಾಮಚಂದ್ರ ಮಾತ್ರ. ಅದು ಅವನ ನಿರ್ವಿಕಾರತೆ ಹಾಗೂ ತ್ಯಾಗ ಬುದ್ಧಿಗೆ ಸಾಕ್ಷಿ.


ಅದು ಹೇಗಾದರೂ ಇರಲಿ ಈ ಮಾತನ್ನು ಕೇಳಿದ ಲಕ್ಷ್ಮಣ ರೋಷಾವೇಶದಿಂದ ತಂದೆಯ ವಿರುದ್ಧವೇ ನಿಂತು, "ತಂದೆಯು ಈ ಮಾತನ್ನು ಹೇಳಲಿಲ್ಲ, ನಿನಗೆ ಕೈಕೇಯಿ ತಾನೇ ಹೇಳಿರುವುದು ಅದು ಪಿತೃವಾಕ್ಯವೆಂದು ಆಗುವುದಿಲ್ಲ. ನೀನು ಆ ಮಾತನ್ನು ಧಿಕ್ಕರಿಸು." ಎಂದು ರಾಮನಿಗೆ ಹೇಳುತ್ತಾನೆ. ತಂದೆಯನ್ನೇ ಕೊಲ್ಲಲು ಮುಂದುವರಿಯುತ್ತಾನೆ. ಅಂತಹ ಲಕ್ಷ್ಮಣನನ್ನೂ ಹಾಗೆ ಮಾತನಾಡಬಾರದೆಂದು ಸುಮ್ಮನಿರಿಸುತ್ತಾನೆ ಸಂಯಮಿ ರಾಮ!.ಪಟ್ಟಾಭಿಷೇಕ ನಿಂತು ತಾನು ವನವಾಸಕ್ಕೆ ಹೋಗಬೇಕಾದ ವಿಷಯವನ್ನು ತಾಯಿ ಕೌಸಲ್ಯಗೆ ಹೇಳಿದರೆ ಎಷ್ಟು ನೊಂದುಕೊಳ್ಳುತ್ತಾಳೋ ಎಂದು ತಾನು ನೊಂದು ಕೊಳ್ಳುತ್ತಾನೆ. ಪರರ ದುಃಖವನ್ನು ಅರಿತವ ಶ್ರೀರಾಮ. ರಾಮನು ವನವಾಸಕ್ಕೆ ಹೋಗುವುದಕ್ಕೆ ಕೌಸಲ್ಯೆ ದುಃಖಿಸಿದಾಗ ತಾಯಿಗೆ ಹೇಳಿದ ಮಾತನ್ನು ನೋಡಿ.


ತ್ವಯಾ ಮಯಾಚ ವೈದೇಹ್ಯಾ ಲಕ್ಷ್ಮಣೇನ ಸುಮಿತ್ರಯಾ ಪಿತುರ್ನಿಯೋಗೇ ಸ್ಥಾತವ್ಯಮ್ ಏಷ ಧರ್ಮ ಸನಾತನಃ (ಅಯೋಧ್ಯಾ 21- 49)


ಧರ್ಮ ದೊರೆಯಾದ ತಂದೆ ಹೇಳಿದಂತೆ ಕೇಳುವುದು ಸನಾತನ ಧರ್ಮ ಎಂದು ಕೌಸಲ್ಯೆಗೆ ತಿಳಿಸುತ್ತಾನೆ. ಮುಂದೆ ವನವಾಸಕ್ಕೆ ಹೋದ ಮೇಲೆ ಭರತನು ಬಂದು ಮಂತ್ರಿಗಳೊಂದಿಗೆ ಪುನಃ ಅಯೋಧ್ಯೆಗೆ ಬರಬೇಕೆಂದು ಪರಿಪರಿಯಾಗಿ ಕೇಳಿಕೊಳ್ಳುತ್ತಾನೆ. ಅವನಿಗೇ ಬುದ್ಧಿ ಮಾತು ಹೇಳುತ್ತಾ ಅಯೋಧ್ಯೆಯನ್ನು ಚೆನ್ನಾಗಿ ಆಳುವಂತೆ ಹೇಳಿ ಒಪ್ಪಿಸಿ ಕಳಿಸುತ್ತಾನೆ. ಇಲ್ಲಿ ನಮಗೆ ರಾಮನು ನೀತಿವಂತನೂ ಧರ್ಮವಂತನೂ ಬುದ್ಧಿವಂತನೂ ಆಗಿ ಕಾಣುತ್ತಾನೆ. ಅಲ್ಲವೇ? ಹೀಗೆಲ್ಲಾ ಮಾಡಲು ಅವನು ಜಿತೇಂದ್ರಿಯನಾಗಿದ್ದಿರಲೇಬೇಕು. ಇಷ್ಟೆಲ್ಲಾ ಆದರೂ ಆತ ಕೈಕೇಯಿಯ ವಿರುದ್ಧ ಒಂದು ಮಾತೂ ಆಡುವುದಿಲ್ಲ. ಇಲ್ಲಿ ಆತ ಸಂಯಮಿ ಎಂದು ತೋರುವುದಿಲ್ಲವೇ?


ವಿಶ್ವಾಮಿತ್ರರು ತಾಟಕಿಯ ಸಂಹಾರ ಸಮಯದಲ್ಲಿ, "ಈಕೆಯು ದುರ್ಮಾರ್ಗಿ, ಯಾವ ಕೆಲಸಕ್ಕೂ ಹೇಸುವವಳಲ್ಲ. ಇವಳ ವಧೆಯಿಂದ ಗೋ ಬ್ರಾಹ್ಮಣರಿಗೆ ಹಿತ ಎಂದು ಹೇಳುವರು. (ಗೋಬ್ರಾಹ್ಮಣರೆಂದರೆ ಸಾತ್ವಿಕತೆಯುಳ್ಳವರು. ಅಂದರೆ ತಾವು ಅಧ್ಯಯನ ಶೀಲರಾಗಿ ಇತರರಿಗೆ ಅದನ್ನು ನಿಸ್ವಾರ್ಥವಾಗಿ ಬೋಧಿಸುವವರು ಎಂದು ಪ್ರಸಿದ್ಧಿ. ಇದಕ್ಕೆ ಉದಾಹರಣೆ, ವೇದವ್ಯಾಸ ವಸಿಷ್ಠ ವಿಶ್ವಾಮಿತ್ರಾದಿ ಋಷಿಗಳು. ಚರಕ ಸುಶ್ರುತ ಮಿಹಿರ ಆರ್ಯಭಟ ಚಾಣಕ್ಯ ಶಂಕರ ರಾಮಾನುಜ ಮಧ್ವರೇ ಮೊದಲಾದವರು.) ಹಾಗಾಗಿ ನೀನು ಆಕೆ ಸ್ತ್ರೀ ಎಂದು ಕರುಣೆ ತೋರುವ ಪ್ರಮೇಯವಿಲ್ಲ" ಎನ್ನುತ್ತಾರೆ. ಆದರೂ ಶ್ರೀರಾಮಚಂದ್ರನ ಬಾಯಿಂದ ಬಂದ ಮಾತನ್ನು ಕೇಳಿ.


ಏನಾಂ ಪಶ್ಯ ದುರಾದರ್ಷಾಮ್ ಮಾಯಾಬಲ ಸಮನ್ವಿತಾಂ

ವಿನಿವೃತ್ತಾಮ್ ಕರೋಮ್ಯಜ್ಯ ಹೃತ ಕರ್ಣಾಗ್ರ ನಾಸಿಕಾಂ

ನ ಹ್ಯೇನಾಮುತ್ಸಹೇ ಹಂತುಂ ಸ್ತ್ರೀ ಸ್ವಭಾವೇನ ರಕ್ಷಿತಾಂ

ವೀರ್ಯಂ ಚಾಸ್ಯಾ ಗತಿಮ್ ಚಾಪಿ ಹನಿಷ್ಯಾಮೀತಿ ಮೇಮತಿಃ (ಬಾಲ, 26-11,12)


"ಅಯ್ಯಾ ಲಕ್ಷ್ಮಣ ತಾಟಕಿಯ ಬಲವನ್ನು ಅಡಗಿಸಿ, ಕಿವಿ ಮೂಗುಗಳನ್ನು ಭಂಗಿಸಿ ಹಿಂದಿರುಗಿಸಿ ಕಳಿಸುತ್ತೇನೆ" ಎನ್ನುತ್ತಾನೆ. ಮುಂದೆ ಶೂರ್ಪಣಕಿಯನ್ನು, ಕೊಲ್ಲದೆ ಕಿವಿ ಮೂಗುಗಳನ್ನು ಮಾತ್ರ ಕತ್ತರಿಸಿ ಕಳಿಸುತ್ತಾನೆ. ರಾಕ್ಷಸಿ ಆದರೂ ಹೆಣ್ಣೆಂಬ ಭಾವನೆ ರಾಮನ ಮನಸ್ಸಿನಲ್ಲಿದೆ. ಇಲ್ಲಿ ರಾಮನ ವಿಚಾರಪರತೆ ಸ್ಪಷ್ಟವಾಗಿದೆ. ಮೃದು ಹೃದಯ ಕಾಣುತ್ತದೆ.


ಮುಂದೆ ಸೀತಾನ್ವೇಷಣೆ ಸಮಯದಲ್ಲಿ ಕಬಂಧನಿಂದ ರಾಮನಿಗೆ ವಾಲಿ ಸುಗ್ರೀವರ ಚರಿತ್ರೆ ತಿಳಿಯುತ್ತದೆ. ವಾಲಿಯು ದುಷ್ಟನೆಂದೂ ಆದರೆ ಮಹಾಬಲಶಾಲಿ ಎಂದೂ, ಸುಗ್ರೀವನು ಧರ್ಮಿಷ್ಠನೆಂದೂ ಆದರೆ ವಾಲಿಗಿಂತ ಬಲ ಕಡಿಮೆ ಎಂದು ತಿಳಿಯುತ್ತದೆ. ಸುಗ್ರೀವನೊಂದಿಗೆ ಅಗ್ನಿಸಾಕ್ಷಿಯಾಗಿ ಸ್ನೇಹ ಮಾಡಿಕೊಂಡು, ದುಷ್ಟ ವಾಲಿಯ ಸಂಹಾರವನ್ನು ಮಾಡುತ್ತಾನೆ. ಇಲ್ಲಿ ಮಿತ್ರನಿಗೆ ಮಾಡಿದ ಸಹಾಯ ಕಾಣುತ್ತದೆ.


ರಾಮ ಶಕ್ತಿಯ ಪರೀಕ್ಷೆಗೆ ಸುಗ್ರೀವನು ಎಳೆಸಿ, ದುಂಧುಬಿಯ ಪರ್ವತಾಕಾರದ ಅಸ್ತಿಪಂಜರವನ್ನು ತನ್ನ ಕಾಲಿನ ತುದಿಯಿಂದ ಎಷ್ಟೋ ಯೋಜನೆ ದೂರ ಎಸೆದದ್ದನ್ನೂ, ಏಳು ತಾಲವೃಕ್ಷಗಳನ್ನು ಒಂದೇ ಬಾಣದಿಂದ ರಂಧ್ರ ಮಾಡಿದ್ದನ್ನು ಕಂಡಾಗ ಸುಗ್ರೀವನು ರಾಮನ ಪರಾಕ್ರಮವನ್ನು ನಂಬುತ್ತಾನೆ. ಅಲ್ಲದೆ ರಾಮನು ದಂಡಕಾರಣ್ಯದಲ್ಲಿ ಹದಿನಾಲ್ಕು ಸಾವಿರ ರಾಕ್ಷಸರನ್ನು ಒಬ್ಬನೇ ಕೊಂದಿರುತ್ತಾನೆ.


ವಿಭೀಷಣನ ಪಟ್ಟಾಭಿಷೇಕ ಸಮಯದಲ್ಲಿ ರಾಮನ ಮನಸ್ಸು, ನಾನು ವಿಧಿ ಇಲ್ಲದೆ ರಾವಣನನ್ನು ಕೊಲ್ಲಬೇಕಾಯಿತು, ಅವನ ಜೊತೆ ಪುತ್ರ ಮಿತ್ರ ಬಾಂಧವರನ್ನೆಲ್ಲ ಕೊಲ್ಲದೆ ವಿಧಿ ಇರಲಿಲ್ಲ. ಅವನ ವಂಶವನ್ನೆಲ್ಲ ನಿರ್ವಂಶವಾಗಿಸಿದೆ ಎಂದು ಬೇಸರವಾಗಿತ್ತು. ಕೊನೆಯ ಪಕ್ಷ ವಿಭೀಷಣನಾದರೂ ಉಳಿದು ಪಟ್ಟಾಭಿಷೇಕ ವಿಷಯಕ್ಕೆ ಒಪ್ಪಿಕೊಂಡನಲ್ಲ ನಾನು ಕೃತಾರ್ಥನಾದೆ ಎಂದು ಭಾವಿಸಿದನಂತೆ! ವಿಭೀಷಣನ ಶರಣಾಗತಿಯನ್ನು ರಾಮನು ಮನಃಪೂರ್ವಕ ಒಪ್ಪಿದ್ದನಷ್ಟೇ.ಅವನು ಶರಣಾಗತರಕ್ಷಕ ಎನ್ನುವುದು ಇಲ್ಲಿ ಸುಸ್ಪಷ್ಟವಾಗುತ್ತದೆ. ಸುಗ್ರೀವನಿಗೆ ಪಟ್ಟ ಕಟ್ಟಿದಾಗಲೂ ರಾಮ ಸಂತೋಷಪಟ್ಟಿದ್ದ. ಆದರೆ ಜಟಾಯು ಪ್ರಾಣ ಬಿಟ್ಟಿದ್ದರೂ ಕೂಡ ಅವನಿಗಾಗಿ ಏನು ಕೊಡಲಾಗಲಿಲ್ಲ ಎಂದು ವ್ಯಥೆ ಪಟ್ಟನಂತೆ.


ಯಾರಲ್ಲೂ ಜಾತಿ ಭೇದವೆಣಿಸದೆ ಮೇಲು-ಕೀಳು ಎಂದು ಯೋಚಿಸದೆ ಶಬರಿ ಸುಗ್ರೀವ ಗುಹ ಜಾಂಬವ ವಿಭೀಷಣ ತಾರೆ ಮಂಡೋದರಿ ಜಟಾಯು ಇವರನ್ನೆಲ್ಲ ರಾಮ ಒಂದೇ ರೀತಿಯಲ್ಲಿ ಕಾಣುತ್ತಾನೆ. ಶಬರಿ ಕೊಟ್ಟ ಎಂಜಲು ಹಣ್ಣು ತಿಂದದ್ದು ಎಲ್ಲರಿಗೂ ತಿಳಿದೇ ಇದೆ. ಉತ್ತಮ ಜಾತಿಯವನಾದರೂ ರಾವಣನನ್ನು ಕೊಲ್ಲುತ್ತಾನೆ. ಇವರೆಲ್ಲರಲ್ಲಿ ಆತ ಕೇವಲ ಶೀಲ ಸಂಪನ್ನತೆಯನ್ನು ಮಾತ್ರ ಕಾಣುತ್ತಾನೆ.


ಇಂತಹ ಧೀರ ರಾಮ ಸೀತೆಯನ್ನು ಕಳೆದುಕೊಂಡಾಗ ಮಾತ್ರ ಕೋಪ ವಿಹ್ವಲನಾಗುತ್ತಾನೆ. ಸೇನೆಯನ್ನು ಲಂಕೆಗೆ ಕರೆದೊಯ್ಯಲು ಸಮುದ್ರ ಅಡ್ಡವಾಗಿದ್ದರಿಂದ ಕೋಪಾವಿಷ್ಟನಾಗಿ ಶರಗಳಿಂದ ಸಮುದ್ರವನ್ನು ಕಂಗೆಡಿಸುತ್ತಾನೆ.


ಇನ್ನು ಶ್ರೀರಾಮನ ರೂಪ ಲಾವಣ್ಯಗಳ ಬಗ್ಗೆ ಹೇಳುವುದೇ ಬೇಡ.ಆತನು ಸಾಮುದ್ರಿಕ ಶಾಸ್ತ್ರದ 32 ಲಕ್ಷಣಗಳನ್ನೂ ಹೊಂದಿದವನು. ಹನುಮಂತನು ಸೀತೆಯನ್ನು ಭೇಟಿಯಾದಾಗ  ರಾಮನನ್ನು ಕಂಡಿದ್ದೇನೆ ಎಂದು ಆಕೆಗೆ ನಂಬಿಸಲು ರಾಮನ ಅಂಗಸೌಷ್ಠವದ ಗುಣಗಾನವನ್ನು ಮಾಡುತ್ತಾನೆ.


ಇನ್ನು ಶ್ರೀರಾಮನು ತಾನು ವನವಾಸಕ್ಕೆ ಹೋಗುವಾಗ ತನ್ನಲ್ಲಿದ್ದ ಎಲ್ಲ ವಸ್ತುಗಳನ್ನು ಒಡವೆ ವಸ್ತ್ರ ಹಾಸಿಗೆ ಮುಂತಾದವುಗಳನ್ನು ಕೂಡ ಎಲ್ಲರಿಗೂ ವಿದ್ವಾಂಸರಿಗೆ ವೈದಿಕರಿಗೆ ದಾನ ಮಾಡುತ್ತಾನೆ. ಆಗ ಒಬ್ಬ ವೃದ್ಧ ಬ್ರಾಹ್ಮಣನು ಬಂದಾಗ ಅವನನ್ನು ನಿನ್ನ ದಂಡವನ್ನು ಎಷ್ಟು ದೂರ ಎಸೆಯುವೆಯೋ ಅಷ್ಟು ಗೋವುಗಳನ್ನು ಕೊಡುತ್ತೇನೆ ಎಂದು ಹೇಳುತ್ತಾನೆ. ಆತ ಕಟಿ ವಸ್ತ್ರವನ್ನು ಬಿಗಿದು ತನ್ನ ಶಕ್ತಿಯನ್ನೆಲ್ಲ ಮೀರಿ ಸರಯೂ ನದಿ ಆಚೆಗೆ ತನ್ನ ದಂಡವನ್ನು ಎಸೆಯುತ್ತಾನೆ. ಆ ಸಮಯದಲ್ಲೂ ರಾಮನು ನಿನ್ನ ದಂಡ ಎಸೆಯುವ ಶಕ್ತಿ ಎಷ್ಟಿದೆ ಎಂದು ತಿಳಿಯಲು ಹೀಗೆ ಮಾಡಿದೆ ಎಂದು ನಗುತ್ತಾನೆ. ಎಂತಹ ಸಮಯದಲ್ಲಿ ಹಾಸ್ಯಪ್ರಜ್ಞೆ! ಅಷ್ಟು ಹಸುಗಳನ್ನು ಅವನಿಗೆ ಕೊಟ್ಟು ಕಳುಹಿಸುತ್ತಾನೆ


ಇಂತಹ ರಾಮನಿಗೆ ತನ್ನ ಸಹೋದರರಲ್ಲೂ ಸೀತೆಯಲ್ಲೂ ಅತೀವ ಪ್ರೀತಿ. ಆದರೆ ತಾನು ರಾಜ್ಯಕ್ಕಾಗಿ ಇವರೆಲ್ಲರನ್ನು ತೊರೆದೇನು ಎನ್ನುವುದನ್ನು ಸ್ಪಷ್ಟವಾಗಿ ತೋರಿಸಿಕೊಂಡಿದ್ದಾನೆ. ಪುರ ಜನರಿಗಾಗಿ ಮರ್ಯಾದೆಗೆ ಅಂಜಿದ, ಮರ್ಯಾದಾಪುರುಷೋತ್ತಮ ಅಪವಾದವನ್ನು ತೊಡೆಯಲು ಸೀತೆಯನ್ನೇ ಕಾಡಿಗಟ್ಟಿದವನು.


ಆದರೆ ತಾನು ಒಬ್ಬ ಪತಿಯಾಗಿ ಸತಿಯನ್ನು ಅತಿಯಾಗಿ ಪ್ರೀತಿಸುತ್ತಿದ್ದು, ಆಕೆ ಇಲ್ಲದ ಸಮಯದಲ್ಲಿ ತಾನು ದರ್ಭಾಸನದಲ್ಲಿಯೇ ಮಲಗುತ್ತಿದ್ದ!


ಈತ ಪ್ರಜಾ ಪೋಷಕ.ರಾಜ್ಯದಲ್ಲಿ ಜನರಿಗೆ ತಮ್ಮ ವೃತ್ತಿಗೆ ತೃಪ್ತಿ ಇತ್ತು. ವನವಾಸಕ್ಕೆ ಹೊರಟಾಗ ಎಲ್ಲ ಪ್ರಜೆಗಳು ಈತನ ಹಿಂದೆ ತಾವು ರಾಮನೊಡನೆ ಇರಬೇಕೆಂದು ಬಂದಿದ್ದರು. ಈತನಿಗೆ ಸ್ವದೋಷ ಪರದೋಷವಿತ್ ಎಂಬ ಹೆಸರಿತ್ತಂತೆ. ತನ್ನ ತಪ್ಪುಗಳನ್ನೂ ಇತರರ ತಪ್ಪುಗಳನ್ನೂ ಬಲ್ಲವನಾಗಿದ್ದನಂತೆ.


ಒಮ್ಮೆ ವಾಲ್ಮೀಕಿಗಳು ನಾರದರನ್ನು ಭೇಟಿಯಾದಾಗ ಈ ಭೂಮಿಯ ಮೇಲೆ ಎಲ್ಲಾ ಉತ್ತಮ ಗುಣಗಳಿರುವ ಪುರುಷ ಯಾರಾದರೂ ಇದ್ದಾನೆಯೇ ಎಂದು ಕೇಳಿದರಂತೆ. ಆಗ ನಾರದರು ರಾಮನ ಗುಣಶೀಲಗಳನ್ನು ಅವರಿಗೆ ತಿಳಿಸಿದರಂತೆ. ಇಷ್ಟು ಗುಣಗಳನ್ನು ಹೊಂದಿದ ಮಹನೀಯ ಬೇರೆ ಯಾರೂ ಇಲ್ಲವಷ್ಟೇ.


ಸತಿ ಇರಲೊಮ್ಮೆ ಪರಿವಾರದರಮನೆ ಇಲ್ಲ

ಸುತರಿರುತಲಿರೆ ಜೊತೆಗೆ ಸತಿ ಇಲ್ಲ

ಪಿತ ಮಾತ ಸತಿಸುತರೊಡಗೂಡಿ ಇರೆ

ಅತಿಯಾದ ಹರುಷವು ಮನುಜಂಗೆ

ಅತಿ ದುಃಖದಲು ಪುರ ಜನರ ಪೊರೆದ ರಾಮ

ಹತ ಭಾಗ್ಯ ತಪ್ಪಿಲ್ಲದೆಯೆ ಶಿಕ್ಷೆಯುಂಡ!



ಇಂತಹ ರಾಮನ ಮಂತ್ರವು ರಾಮ ತಾರಕ ಮಂತ್ರವೆಂದು ಪ್ರಸಿದ್ಧಿಯಾಗಿದೆ. ಸ್ವತಃ ಈಶ್ವರನೇ ಪಾರ್ವತಿಗೆ "ರಾಮನ ಒಂದು ನಾಮ ಹೇಳಿದರೆ ಅದು ಸಾವಿರ ನಾಮಗಳಿಗೆ ಸಮ. ಅದನ್ನು ಜಪಿಸಿದವರನ್ನು ಕಷ್ಟಗಳಿಂದ ಪಾರು ಮಾಡುತ್ತದೆ" ಎಂದು ಉಪದೇಶಿಸಿದ್ದಾನೆ.


ಶಿವಾಜಿಯ ಗುರುಗಳಾದ ಸಮರ್ಥ ರಾಮದಾಸರು "ಶ್ರೀ ರಾಮ ಜಯರಾಮ ಜಯ ಜಯ ರಾಮ" ಎಂಬ ತ್ರಯೋದಶಾಕ್ಷರ ರಾಮ ತಾರಕ ಮಂತ್ರವನ್ನು ಉಪದೇಶಿಸಿದ್ದಾರೆ. ಈ ಮಂತ್ರವನ್ನು ಯಾರಾದರೂ ಯಾವಾಗಲಾದರೂ ಎಲ್ಲಿಯಾದರೂ ಜಪಿಸಿ, ರಾಮನಿಗೆ ಸಮೀಪವಾಗಬಹುದು.


ರಾಮನ ಜನ್ಮಭೂಮಿಯಲ್ಲಿ ಈಗ ಮಂದಿರ ಆಗುತ್ತಿರುವುದು ಕೇವಲ ಭಾರತೀಯರಿಗಷ್ಟೇ ಅಲ್ಲ ದೇಶ ವಿದೇಶದವರಿಗೂ ಕೂಡ ಸಂತೋಷ ಜನಕವಾಗಿದೆ. ರಾಮನ ಕಥೆಗಳು ಆಗಿನಿಂದ ಈಗಲೂ ಅಲ್ಲೆಲ್ಲಾ ಪ್ರಚಲಿತವಾಗಿಯೇ ಇದೆ. ನೇಪಾಳ ಶ್ರೀಲಂಕಾ ಜಪಾನ್ ದಕ್ಷಿಣ ಕೊರಿಯಾ ಇಂಡೋನೇಷ್ಯಾ ಥಾಯ್ಲ್ಯಾಂಡ್ ಮುಂತಾದ ದೇಶಗಳಿಂದ ಶಿಲೆಗಳು ಹಾಗೂ ಪವಿತ್ರ ನದಿಗಳ, ಸಮುದ್ರಗಳ ನೀರನ್ನು ಶ್ರೀ ರಾಮನ ವಿಗ್ರಹದ ಪ್ರತಿಷ್ಠಾಪನೆಗಾಗಿ ಕಳುಹಿಸುತ್ತಿದ್ದಾರೆ. ರಾಮನ ಪಟ್ಟಾಭಿಷೇಕ ಸಮಯದಲ್ಲೂ ಎಲ್ಲಾ ಸಮುದ್ರಗಳ ನೀರನ್ನು ತಂದಿದ್ದರಂತೆ. ವಿಶಿಷ್ಟವಾದ ಉಡುಗೊರೆಗಳು ಬರುತ್ತಿರುವುದು ಎಲ್ಲರಿಗೂ ತಿಳಿದೇ ಇದೆ.


 


- ಅನ್ನಪೂರ್ಣ ಹೇಮಚಂದ್ರ

 9741515665


ಲೇಖಕರ ಸಂಕ್ಷಿಪ್ತ ಪರಿಚಯ:


ಗೃಹಿಣಿ. ಕವನಗಳನ್ನು ಬರೆಯುವುದು, ಲೇಖನಗಳನ್ನು ಬರೆಯುವುದು ಹಾಗೂ ಕಥೆಗಳನ್ನು ಬರೆಯುವುದು ಹವ್ಯಾಸ. ಕೆಲವು ಲೇಖನಗಳು ಪತ್ರಿಕೆಗಳಲ್ಲಿ ಪ್ರಸಾರವಾಗಿವೆ. 'ಹೃದಯ ರಂಗೋಲಿ' ಎನ್ನುವ ಕವನ ಸಂಕಲನ ಬಿಡುಗಡೆ ಆಗಿದೆ. ಅಲ್ಲದೆ ಯೂಟ್ಯೂಬ್ ನಲ್ಲಿ ಕೂಡ ಸಕ್ರಿಯರಾಗಿ. ಸುಮಾರು 250 ಕ್ಕಿಂತ ಹೆಚ್ಚು ವಿಡಿಯೋಗಳನ್ನು ಅಪ್ಲೋಡ್ ಮಾಡಿದ್ದಾರೆ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  


إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top