ಶ್ರೀರಾಮ ಕಥಾ ಲೇಖನ ಅಭಿಯಾನ-103: ನಾಗಚಂದ್ರನ ಪಂಪ ರಾಮಾಯಣ

Upayuktha
0


- ರಾಜೇಶ್ವರಿ, ಸು.ರ.



“ರಾಮ ಮಂತ್ರವ ಜಪಿಸೋ ಹೇ ಮನುಜಾ 

ಆ ಮಂತ್ರ ಈ ಮಂತ್ರ ನೆಚ್ಚಿ ನೀ ಕೆಡಬೇಡ

ಸೋಮಶೇಖರ ತನ್ನ ಭಾಮೆಗೆ ಹೇಳಿದ ಮಂತ್ರ"


ನದಲ್ಲೇ ಆ ಶ್ರೀ ರಾಮನ ಅಡಿದಾವರೆಗಳಿಗೆರಗುತ್ತಾ ಆ ಪುಣ್ಯ ಮೂರ್ತಿಯನು ಜಪಿಸುತ್ತಾ ಪಂಪ ರಾಮಾಯಣದ ಬಗ್ಗೆ ಸ್ವಲ್ಪ ಮಟ್ಟಿಗೆ ತಿಳಿಯಲು ಪ್ರಯತ್ನಿಸೋಣ ಮಿತ್ರರೇ… ಸಂಪೂರ್ಣವಾಗಿ ತಿಳಿಯಲು ಸುದೀರ್ಘವಾಗಿ ಅದನ್ನು ಓದಿ ಚರ್ಚಿಸಬೇಕಾಗುತ್ತದೆ. 


ಹಳೆಗನ್ನಡ ಸಾಹಿತ್ಯವು ಹತ್ತನೆಯ ಶತಮಾನದಲ್ಲಿ ಕವಿ ಪಂಪನಿಂದ ಮೇರು ಪರ್ವತದಂತೆ ಉತ್ತುಂಗಕ್ಕೇರಿ ಅದೇ ಮಾರ್ಗದಲ್ಲಿಯೇ ಮುಂದುವರೆಯಿತು. ಅವನನ್ನು ತಮ್ಮ ಆದರ್ಶವೆಂದು ಪರಿಗಣಿಸಿ ಅವನು ಹಾಕಿಕೊಟ್ಟ ಹಾದಿಯಲ್ಲಿಯೇ ನಡೆದು ಅನುಸರಿಸಿದ ಅನೇಕ ಕವಿಗಳಿದ್ದರು. ಅಂಥ ಕವಿಗಳಲ್ಲಿ  ಹನ್ನೊಂದು ಹನ್ನೆರಡನೆಯ ಶತಮಾನದಲ್ಲಿದ್ದ ನಾಗಚಂದ್ರ ಪ್ರುಮುಖನು. ಅವನು ವಿಜಯಪುರದವನು. ಚಾಲುಕ್ಯ ಚಕ್ರವರ್ತಿಯಾದ ನಾಲ್ಮಡಿ ಸೋಮೇಶ್ವರನ ಆಶ್ರಯದಲ್ಲಿದ್ದ ಕವಿ ಬಲಚಂದ್ರ ಮೇಘಚಂದ್ರನ ಶಿಷ್ಯನಾಗಿದ್ದ ನಾಗಚಂದ್ರನಿಗೆ ಅನೇಕ ಬಿರುದುಗಳಿದ್ದವು. ಪಂಪನ ಅಭಿಮಾನಿಯಾಗಿದ್ದ ಕವಿ ತನ್ನನ್ನು ತಾನು ‘ಅಭಿನವ ಪಂಪ' ನೆಂದು ಕರೆದು ಕೊಂಡಿದ್ದಾನೆ. ಅವನಂತೇ ಇವನೂ ಎರಡು ಮಹಾಕಾವ್ಯಗಳನ್ನು ಬೆದಿದ್ದಾನೆ. ‘ಮಲ್ಲಿನಾಥ ಪುರಾಣ' ಹಾಗೂ ‘ರಾಮಚಂದ್ರ ಚರಿತ ಪುರಾಣ‘. ಅವನ ರಾಮಾಯಣವು ರಾಮಚಂದ್ರ ಚರಿತ ಪುರಾಣವಾದರೂ ‘ಪಂಪ ರಾಮಾಯಣ' ಎಂಬ ಹೆಸರಿನಲ್ಲೇ ಪ್ರಸಿದ್ಧವಾಗಿದೆ.  


ಪಂಪ ರಾಮಾಯಣದಲ್ಲಿ ಪ್ರಭು ಶ್ರೀ ರಾಮಚಂದ್ರನ ಚರಿತೆಯನು ಕಾಣುತ್ತೇವೆ. ಜೈನ ಪರಂಪರೆಯ ರಾಮಕತೆಯನ್ನು ನಿರೂಪಿಸುವ ಕಾವ್ಯ ಇದಾಗಿದೆ. ಇಲ್ಲಿ ರಾಮನನ್ನು ಉದಾತ್ತ ರಾಘವನೆಂದೇ ಕವಿ ಸಂಭೋದಿಸಿದ್ದಾನೆ. ಇದು ಉದಾತ್ತ ರಾಘವನ ಕಥೆ. ಇಲ್ಲಿನ ರಾಮನು ತ್ರಿಷಷ್ಠಿ ಶಲಾಕಾ ಪುರುಷರಲ್ಲಿ ಒಬ್ಬನಾದ ಬಲದೇವ, ಲಕ್ಷ್ಮಣನು ವಾಸುದೇವ, ರಾವಣನಾದರೋ ಪ್ರತಿ ವಾಸುದೇವ. ಸುಗ್ರೀವ, ಹನುಮಂತ ಮುಂತಾದವರೆಲ್ಲಾ ಕಪಿಗಳಲ್ಲ ಕಪಿಧ್ವಜರು; ಇವರು ಸಮುದ್ರವನ್ನು ದಾಟುವುದು ಹಾರುವುದು ಆಕಾಶ ವಿದ್ಯೆಯ ಬಲದಿಂದ. ಕಪಿಧ್ವಜರು ರಾಕ್ಷಸರ ಬಂಧುಗಳು; ಹನುಮಂತನು ರಾವಣನ ತಂಗಿಯ ಅಳಿಯ. ರಾವಣ ಖೇಚರ ರಾಜನೇ ಹೊರತು ರಾಕ್ಷಸನಲ್ಲ, ಹನುಮಂತನೂ ಬ್ರಹ್ಮಚಾರಿಯಲ್ಲ ಒಬ್ಬ ಸಂಸಾರಿ. ರಾವಣ ಒಬ್ಬ ಜೈನ ಧರ್ಮದ ಅನುಯಾಯಿ, ನಿಷ್ಠಾವಂತ ಧರ್ಮ ಪ್ರತಿಪಾದಕ ಧರ್ಮದ ಸಂಸ್ಥಾಪನೆಗಾಗಿ ಯುದ್ಧ ಮಾಡುತ್ತಾ, ತನ್ನ ದೇಶ ತನ್ನ ಜನರನ್ನು ರಕ್ಷಿಸುತ್ತಾ ಹಗಲಿರುಳೆನ್ನದೆ ಎಲ್ಲರ ಸಂರಕ್ಷಣೆಗಾಗಿ ದುಡಿಯುತ್ತಾ ಮಾನವೀಯ ಗುಣಗಳೊಂದಿಗೆ ಸಂಪನ್ನನಾದ, ಧೀರೋದಾತ್ತನಾಗಿ ಯುದ್ಧ ಮಾಡುವವನು ಸಕಲ ಗುಣ ಸಂಪನ್ನ ಎಂಬ ವಿಹಂಗಮ ಚಿತ್ರಣವನ್ನು ಕವಿ ಸುಂದರವಾಗಿ ಕಟ್ಟಿ ಕೊಟ್ಟಿದ್ದಾನೆ.


ಅವನು ‘ಪರಂಗನಾ ವಿರತಿ‘ ವ್ರತವನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಾ ಸಂಯಮಿಯಾಗಿ ಜೀವನ ನಡೆಸುತ್ತಾ, ದುರ್ಲಂಘ್ಯದರಸು ನಳಕೂಬರನ ಮಡದಿ ಉಪರಂಭೆ ರಾವಣನ ಗುಣಗಳಿಗೆ ಮನಸೋತು ಪ್ರಣಯಾಕಾಂಕ್ಷಿತಳಾಗಿ ಅವನನ್ನೊಲಿಸಿಕೊಳ್ಳಲು ಬಂದಾಗ ಕಿಂಚಿತ್ತೂ ಮನಸೋಲದೆ ಅವಳಿಗೆ ಬೈದು ಬುದ್ಧಿ ಹೇಳಿ ಗಂಡ ಹೆಂಡತಿಯರನ್ನು ಒಂದು ಮಾಡಿರುತ್ತಾನೆ ರಾವಣ. ಆದರೆ ಅಂಥ ಗುಣೋತ್ತಮನಾಗಿದ್ದೂ ಆಕಾಶಯಾನ ಮಾಡುತ್ತಿರುವಾಗ, ಗಂಡ ಮೈದುನರಾದ ರಾಮ ಲಕ್ಷ್ಮಣರೊಡನೆ ರಾತ್ರೆಯ ಹೊತ್ತು ವಿಹರಿಸುತ್ತಿದ್ದ ಸೀತೆಯನ್ನು ಕಂಡು ಮನಸೋತು ವಿಚಲಿತವಾಗಿ, ಅವನ ವ್ರತಕ್ಕೆ ಚ್ಯುತಿಯುಂಟಾಯಿತು. ಅದು ಅವನ ದುರ್ವಿಧಿ. ವಿಧಿ, ಕಾಲ, ದೈವ, ಏನಾದರೂ ಕರೆಯಬಹುದು, ಅದು ಮನುಷ್ಯನ ಬದುಕಿನಲ್ಲಿ ತಂದೊಡ್ಡುವ ತಿರುವುಗಳು ಹೇಗೆ ಜೀವನದ ಹಾದಿಯನ್ನೇ ಬದಲಿಸಿ ಬಿಡುತ್ತದೆಎಂಬುದನ್ನು ಕವಿ ಬಹಳ ಸೊಗಸಾಗಿ ಬಿಡಿಸಿದ್ದಾನೆ, ಕವಿಯ ಕಲ್ಪನೆ ಹಿದಾಡಿರುವ ರೀತಿ ಅನನ್ಯವಾಗಿದೆ. ಅಗೋಚರ ಶಕ್ತಿಗಳ ಕೈವಾಡ ಮನುಜನನ್ನು ಕಾಡುವಾಗ ಎಲ್ಲ ಗ್ರಹಚಾರಗಳೂ ಹಲವು ರೂಪದಲ್ಲಿ ಕಾಡಿಸಿ ದಣಿಸಿ ಬಿಡುತ್ತದೆ ಅನ್ನುವ ಚಿಂತನೆ ಕವಿಯ ಕಾವ್ಯದಲ್ಲಿ ಕಾಣುತ್ತೇವೆ, ಅವನ ಕಾವ್ಯವನ್ನು ವಿಶ್ಲೇಷಿಸುವಂತೆ ಮಾಡುತ್ತದೆ. 


ನಾಗಚಂದ್ರ ಈ ಕಾವ್ಯವನ್ನು ಲಲಿತ ಶೈಲಿಯಲ್ಲಿ ರಚಿಸಿದ್ದಾನೆ. ಶ್ರೀ ರಾಮಚಂದ್ರ ಚರಿತ ಪುರಾಣ ಶ್ರೀ ರಾಮಚಂದ್ರನ ಕಥೆಯನ್ನು ವರ್ಣಿಸುವ ಕಾವ್ಯ. 16 ಆಶ್ವಾಸಗಳಿಂದ ಕೂಡಿದ ಚಂಪೂ ಗ್ರಂಥ. ಜೈನ ರಾಮಾಯಣದಲ್ಲಿ ದೊರೆತ ಮೊದಲ ಕನ್ನಡ ಕಾವ್ಯ. ರಾಮನ ಹಿರಿಮೆಯನ್ನು ಸಾರುವ ಹಿರಿದಾದ ಕತೆಯನ್ನು ಕಿರಿದಾಗಿ ಹೇಳಿರುವ ಕನ್ನಡ ರಾಮಾಯಣ ಗ್ರಂಥ. 63 ಜನ ತ್ರಿಷಷ್ಠಿ ಶಲಾಕ ಪುರುಷನ ವರ್ಗಕ್ಕೆ ಸೇರುವ ಬಲದೇವ, ವಾಸುದೇವ, ಪ್ರತಿವಾಸುದೇವರಲ್ಲಿ, ರಾಮ ಲಕ್ಷ್ಮಣ ಮತ್ತು ರಾವಣರು ಎಂಟನೆಯವರು, ೩೦ನೇ ತೀರ್ಥಂಕರರಾದ ಮುನಿ ಸುವ್ರುತರ ಕಾಲದಲ್ಲಿ ಇದ್ದವರು. ಕವಿ ಜೈನ ಸಂಪ್ರದಾಯದಲ್ಲಿ ಜೈನ ಲಕ್ಷಣಗಳಿಗನುಗುಣವಾಗಿ ಬರೆದಿದ್ದಾನೆ. ರಾಮನ ಕಥೆ, ರಾಮಾಯಣದ ಕಥೆ ಅನೂಚಾನವಾಗಿ ಪುರಾತನ ಕಾಲದಿಂದಲೂ ಆಖ್ಯಾನ ರೂಪದಲ್ಲಿ ಪ್ರಚಲಿತವಿರುವುದು ಎಲ್ಲರಿಗೂ ತಿಳಿದಿರುವ ವಿಷಯವೇ ಆಗಿದೆ. ಅದೊಂದು ಸಾರ್ವತ್ರಿಕ ಸತ್ಯ, ಪ್ರಾಕೃತ ಭಾಷೆಯ ಗೀತೆಗಳನ್ನು ಜನಪದರು ಹಾಡುತ್ತಾ ಹಾಡುತ್ತಾ ಅದರ ಸಾಹಿತ್ಯದ ಸವಿಯನ್ನು ಮನಗಂಡ ಶಿಷ್ಟ ಕವಿಗಳು ಲಿಪಿಬದ್ಧಗೊಳಿಸಿ ಶ್ರೇಷ್ಠ ಕಾವ್ಯಗಳನ್ನಾಗಿಸಿದರು. ಪಂಪ ರಾಮಾಯಣದಲ್ಲಿ ಎಲ್ಲರೂ ಜೈನ ಧರ್ಮದ ಅನುಯಾಯಿಗಳು . ಜೈನ ಸಂಪ್ರದಾಯಕ್ಕನುಗುಣವಾಗಿ ಅನೇಕ ಭವಾವಳಿಗಳು ವಿವರವಾಗಿ ನಿರೂಪಣೆಗೊಂಡಿವೆ ಪಂಪ ರಾಮಾಯಣದಲ್ಲಿ. ವಾಲಿ ರಾವಣರ ಪಾತ್ರ ಉದಾತ್ತವಾಗಿದ್ದು, ರಾವಣನ ವಂಶಜರ ವೃತ್ತಾಂತ ಅತೀ ಸುದೀರ್ಘವೂ ಸಾಲಂಕರಣವಾಗಿಯೂ ಇದೆ. ವಾಲ್ಮೀಕೀ ರಾಮಾಯಣದಲ್ಲಿ ಬರುವ ಹಲವು ಹತ್ತು ಮಹತ್ವಪೂರ್ಣ ಪಾತ್ರಗಳು ಪಂಪ ರಾಮಾಯಣದಲ್ಲಿಲ್ಲ. ಪಾತ್ರಗಳ ರೂಪವೂ ವಿಭಿನ್ನವಾಗಿದೆ. ರಾಮ ಇಲ್ಲಿ ಏಕಪತ್ನೀತ್ವ ವ್ರತಸ್ಥನಲ್ಲ, ಅಷ್ಚೇ ಅಲ್ಲ ಅವನು ಸುಗ್ರೀವನ ಅನೇಕ ಹೆಣ್ಣುಮಕ್ಕಳನ್ನೂ, ಗಂಧರ್ವ ಖೇಚರನ ಪುತ್ರಿಯರನ್ನೂ ಒಟ್ಟು ಎಂಟು ಸಾವಿರ ಪತ್ನಿಯರು ಉಪ ಪತ್ನಿಯರಿರುತ್ತಾರೆ. ಆದರೆ ಸೀತೆಯ ಮೇಲೆ ಹೆಚ್ಚು ವ್ಯಾಮೋಹವಿರುತ್ತದೆ. ಅವನು ಎಂಟನೆಯ ಬಲದೇವ ಪದ್ಮನೆಂಬ ಹೆಸರೂ ಇದ್ದುದರಿಂದ ಪದ್ಮ ಚರಿತ್ರೆ ಪದ್ಮ ಪುರಾಣ ಎಂಬ ಹೆಸರಿನಿಂದಲೂ ಪ್ರಸಿದ್ಧವಾಗಿದೆ. ಸೀತೆ ಇಲ್ಲಿ ಅಯೋನಿಜೆಯಲ್ಲ, ಪ್ರಭಾಮಂಡಲನ ತಂಗಿ, ಜನಕನ ಔರಸ ಪುತ್ರಿ. 


ನಾಗಚಂದ್ರನು ತನ್ನ ಈ ಕಾವ್ಯದಲ್ಲಿ ಮಾನವನ ಮಾನಸಿಕ ತುಮುಲಗಳು, ಮೋಹಗಳು ವಿಲಕ್ಷಣ ಮನೋ ವ್ಯಾಪಾರಗಳು, ವಿಹ್ವಲತೆಗೆ ಒಳಗಾದಾಗ ಮನುಜನು ನಡೆದು ಕೊಳ್ಳುವ ರೀತಿ ಬಹಳ ಸುಂದರವಾಗಿ ಬಿಡಿಸಿದ್ದಾನೆ. ವನವಾಸದಲ್ಲಿ ವಿಹರಿಸುತ್ತಿದ್ದ ರಾಮ ಸೀತೆಯರನ್ನು ಕಂಡಾಗ ಸೀತೆ ಚೆಲುವಿಗೆ ಮಾರುಹೋದ ರಾವಣನ ಮನಸ್ಸು ವಿಚಲಿತವಾಗಿ ಸ್ಥಿಮಿತವಿಲ್ಲದೆ ತೊಳಲಾಡುವ ಪರಿ ಅಸದೃಶವಾಗಿದೆ. ವಿದ್ಯಾಧಿದೇವತೆ ಬುದ್ಧಿ ಹೇಳಿದರೂ ಕೇಳದೆ ಸೀತೆಯನ್ನು ಅವನು ಸೆಳೆದೊಯ್ಯುವ ರೀತಿ ಸೀತೆ ದುಃಖವಿಹ್ವಳಾಗಿ ಪ್ರಲಾಪಿಸುವ ಸನ್ನಿವೇಶ, ಸೀತಾ ವಿಯೋಗದಿಂದ ಪರಿತಪಿಸುವ ರಾಮನ ಶೋಕ, ಇವುಗಳ ವರ್ಣನೆ ಅದ್ಭುತವಾಗಿದೆ. ನಾಗಚಂದ್ರನು ಪಾತ್ರಗಳನ್ನು ಪರಿಚಯಿಸುವ ರೀತಿ, ಅರ್ಥಾಂತರನ್ಯಾಸ, ಅಲಂಕಾರದ ಬಳಕೆ ಬಹು ಉತ್ತಮವಾಗಿದೆ. ಹಳೆಗನ್ನಡದ ಸೊಗಡು ಮನ ಮುಟ್ಟುತ್ತದೆ. 


ಪಂಪ ರಾಮಾಯಣದಲ್ಲಿ ರಾಮ ಅತಿ ಪರಾಕ್ರಮಿ, ಆದರೂ ರಾಮ ರಾವಣನನ್ನು ವಧಿಸುವುದಿಲ್ಲ. ಲಕ್ಷ್ಮಣನು ಶ್ರೀರಾಮನ ಜೊತೆಗಿದ್ದು ಅಣ್ಣನಿಗೆ ಎಲ್ಲ ರೀತಿಯಲ್ಲೂ ಸಹಕಾರ ನೀಡುತ್ತಾ, ವನವಾಸದಲ್ಲಿನ ಪ್ರತಿ ಹಂತದಲ್ಲೂ ಬೆನ್ನಾಗಿರುತ್ತಾನೆ. ರಾವಣನ ಮೇಲೆ ಯುದ್ಧಕ್ಕೆ  ಹೋದಾಗ ರಾವಣ ಲಕ್ಷ್ಮಣನ ಮೇಲೆ ಚಕ್ರರತಿಯನ್ನು ಪ್ರಯೋಗಿಸಿದಾಗ ಅದು ಲಕ್ಷ್ಮಣನ ಬಲ ಭುಜದ ಬಳಿ ಬಂದು ನಿಂತು ಬಿಡುತ್ತದೆ, ಆಗ ಅವನು ಅದೇ ಚಕ್ರರತಿಯನ್ನು ರಾವಣನ ಮೇಲೆ ಎಸೆದು ಅವನನ್ನು ವಧಿಸುತ್ತಾನೆ. ಅಂದರೆ ಇಲ್ಲಿ ರಾವಣನನ್ನು ಸಂಹರಿಸಿದವನು ಲಕ್ಷ್ಮಣನೇ ಹೊರತು ರಾಮನಲ್ಲ. ನಂತರ ಅಣ್ಣನ ಮೇಲಿನ ಗಾಢ ಪ್ರೇಮ ಎಷ್ಟೆಂದರೆ ದೈವಮಾಯೆಯಿಂದ ರಾಮನ ಉಸಿರಾಡದ ಆಕೃತಿಯನ್ನು ಕಂಡು ರಾಮನಿಲ್ಲವೆಂದುಕೊಂಡು ಎದೆಯೊಡೆದು ಪ್ರಾಣ ಬಿಡುತ್ತಾನೆ. ತಮ್ಮ ಲಕ್ಷ್ಮಣನ ಮೇಲಿನ ಅತಿಯಾದ ವ್ಯಾಮೋಹ ರಾಮನನ್ನು ದುಃಖದ ಮಡುವಿನಲ್ಲಿ ಮುಳುಗಿಸಿದಾಗ, ಜಟಾಯು ಹಾಗೂ ಕೃತಾಂತವಕ್ತ್ರ ದೇವರುಗಳ ಉಪದೇಶದಿಂದ ಮೋಹವನ್ನು ಕಳೆದುಕೊಂಡು ನಿರ್ಮೋಹಿಯಾಗಿ, ನಿರ್ವಾಣ ಹೊಂದಿ ಸಾಯುಜ್ಯವನ್ನು ಪಡೆಯುತ್ತಾನೆ. ಕವಿ ರಾಮನನ್ನು ಉದಾತ್ತ ರಾಘವ ಎಂದೇ ಪ್ರತೀ ಹಂತದಲ್ಲೂ ಉದ್ಘರಿಸಿದ್ದಾನೆ. ತನ್ನ ಇರುವಿಕೆ ಮಾತ್ರದಿಂದಲೇ ಎಲ್ಲರಿಗೂ ಸಂತೋಷವನ್ನೀಯುತ್ತಾ ದುಷ್ಟ ಶಿಕ್ಷೆ ಶಿಷ್ಟ ರಕ್ಷೆ ಮಾಡುತ್ತಾ ತನ್ನ ಸುತ್ತಲಿನ ಸಮಾಜಕ್ಕೆ ಒಂದು ಮಾದರಿಯಾಗಿ ಸುವ್ಯವಸ್ಥೆಯಿಂದ ಪ್ರತಿಯೊಂದನ್ನೂ ಸಂಭಾಳಿಸುತ್ತಾ ಯುಗಪುರುಷನಾಗಿ ಜನಮನದಲ್ಲಿ ನೆಲೆಸಿದ ವಿಶಿಷ್ಠ ವ್ಯಕ್ತಿತ್ವ ಶ್ರೀರಾಮನದು. 


ವಾಲ್ಮೀಕೀ ರಾಮಾಯಣ ಹಾಗೂ ಪಂಪ ರಾಮಾಯಣದ ಕಥಾ ಚೌಕಟ್ಟು ಸಮಾನವಾಗಿದ್ದರೂ , ಕಥಾ ನಿರೂಪಣೆಯಲ್ಲಿ ಪಾತ್ರಗಳಲ್ಲಿ ಪಾತ್ರ ನಿರ್ವಹಣೆಯಲ್ಲಿ ವೈವಿಧ್ಯತೆಯನ್ನು ಕಾಣುತ್ತೇವೆ . ಆದರೆ ನಾಗಚಂದ್ರನ ಈ  ಕಾವ್ಯ ಭಾಷಾ ಪ್ರೌಢಿಮೆಯಿಂದ ಕೂಡಿದ್ದು ಒಂದು ಪ್ರೌಢ ಕಾವ್ಯವನ್ನು ನಾವು ಮನಸಾರೆ ಆಸ್ವಾದಿಸಿದರೆ ಕವಿಯ ವಿದ್ವತ್ತಿಗೆ ನಾವು ಬೆಲೆ ಕೊಟ್ಟಂತೆ . ಕನ್ನಡದ ಮೊದಲ ಜೈನ ರಾಮಾಯಣ ಕಾವ್ಯವಾಗ ಇದು ಎಲ್ಲರೀತಿಯಲ್ಲೂ ನಮ್ಮ ಮನ ಗೆಲ್ಲುವುದರಲ್ಲಿ ಸಂಶಯವಿಲ್ಲ . ನಾಗಚಂದ್ರ ಮೇರು ಕವಿಗಳಲ್ಲಿ ಒಬ್ಬನಾಗಿ ನಿಲ್ಲುತ್ತಾನೆ .




-ರಾಜೇಶ್ವರಿ, ಸು.ರ. 

ರಾಜರಾಜೇಶ್ವರಿ ನಗರ . 

ಬೆಂಗಳೂರು- 9742366600



ಲೇಖಕಿಯ ಸಂಕ್ಷಿಪ್ತ ಪರಿಚಯ  

ಶೈಕ್ಷಣಿಕ ವಿದ್ಯಾಭ್ಯಾಸ- ಎಂ.ಎ. ಬಿ ಎಡ್., ಅತೀ ಸಣ್ಣ ವಯಸಿನಿಂದಲೂ ಸಾಹಿತ್ಯ ಹಾಗೂ ಕಲಾರಾಧಕಿಯಾಗಿ, ಅಧ್ಯಾಪಕಿಯಾಗಿ 1985ರಲ್ಲಿ  ವೃತ್ತಿ ಜೀವನ ಪ್ರಾರಂಭಿಸಿದರು. ಎರಡು ಕವನ ಸಂಕಲನ ಪ್ರಕಟಿಸಿದ್ದಾರೆ. ಅದರಲ್ಲಿ ಒಂದು ಅಮೇರಿಕಾದಲ್ಲಿ ಶ್ರೀಗಂಧ ಕನ್ನಡ ಕೂಟದ ಅಧ್ಯಕ್ಷರಿಂದ ನೂರಾರು ಕನ್ನಡ ಮನಗಳ ಸಮ್ಮುಖದಲ್ಲಿ, ಮತ್ತೊಂದು ರವೀಂದ್ರ ಕಲಾಕ್ಷೇತ್ರದಲ್ಲಿ, ಒಂದು ಕಥಾ ಸಂಕಲನ ಶ್ರೀಯುತ ರೋಹಿತ್ ಚಕ್ರತೀರ್ಥರವರ ನೇತೃತ್ವದಲ್ಲಿ ಖ್ಯಾತ ಕವಿ ಬಿ.ಆರ್. ಲಕ್ಷ್ಮಣರಾವ್ ರವರ ಅಥಿತೇಯತ್ವದಲ್ಲಿ ಬಿಡುಗಡೆ ಮಾಡಿದ್ದಾರೆ. ಈಗ ಮೂರು ಪತ್ತೇದಾರಿ ಕಾದಂಬರಿಗಳು ಬಿಡುಗಡೆಗೆ ಸಿದ್ಧವಾಗಿವೆ. World Book Of Records ನಲ್ಲಿ World Achievers ನಲ್ಲಿ ಒಬ್ಬರಾಗಿ ಸೇರಿ 501 ಕವಿಗಳು ಏಕಕಾಲಕ್ಕೆ ಇಪ್ಪತ್ತು ನಿಮಿಷಗಳಲ್ಲಿ ಶ್ರೀ ಸಿದ್ಧೇಶ್ವರ ಸ್ವಾಮಿಗಳ ಬಗ್ಗೆ ಕವನ  ರಚಿಸಿ ಸನ್ಮಾನಕ್ಕೆ ಪ್ರಶಸ್ತಿಗೆ ಪಾತ್ರರಾಗಿದ್ದಾರೆ. ಇತ್ತೀಚೆಗಷ್ಟೇ ಮತ್ತೊಮ್ಮೆ ಕರುನಾಡ ಕವಿಗಳ ಸಂಭ್ರಮದಲ್ಲಿ ಜನಸಿರಿ ಫೌಂಡೇಶನ್ ರವರು ಆಯೋಜಿಸಿದ್ದ 501 ಕವಿಗಳು ಏಕಕಾಲಕ್ಕೆ ಇಪ್ಪತ್ತೊಂದು ನಿಮಿಷದಲ್ಲಿ ಕರುನಾಡಿನ ಬಗ್ಗೆ ಕವನ ರಚಿಸಿ ಸನ್ಮಾನಿತರು. 


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  


Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top