- ಎಂ. ಮೋಹನ್
ಶ್ರೀರಾಮ ರಾಮೇತಿ ರಮೇ ರಾಮೇ ಮನೋರಮೇ | ಸಹಸ್ರ ನಾಮ ತತ್ತುಲ್ಯಂ ಶ್ರೀ ರಾಮ ನಾಮ ವರಾನನೇ ||
ಇದು ಶ್ರೀ ವಿಷ್ಣುಸಹಸ್ರನಾಮದ ಫಲ ಶ್ರುತಿಯಲ್ಲಿ ಬರುವ ಶ್ಲೋಕ. "ಪಂಡಿತರು ವಿಷ್ಣುವಿನ ಸಹಸ್ರನಾಮಗಳನ್ನು ಪಠಿಸುವುದು ಕಷ್ಟವಾದಾಗ ಲಘುವಾಗಿ (ಚಿಕ್ಕದಾಗಿ) ಪಠಿಸಿ ಸಹಸ್ರನಾಮವನ್ನು ಪಠಿಸಿದಷ್ಟೆ ಫಲವನ್ನು ಪಡೆಯುವ ಯಾವುದಾದರೂ ಒಂದು ಉಪಾಯವನ್ನು ತಿಳಿಸಿ' ಎಂದು ಪಾರ್ವತಿಯು ಶಿವನನ್ನು ಕೇಳಿದಾಗ ಶಿವ ಪಾರ್ವತಿಗೆ ಹೇಳಿದ್ದೆ ಶ್ರೀರಾಮ ಮಂತ್ರದ ಮಹತ್ವವನ್ನು ಸಾರುವ ಈ ಶ್ಲೋಕ. ಇದನ್ನೆ ಶ್ರೀ ಪುರಂದರದಾಸರು "ರಾಮ ಮಂತ್ರವ ಜಪಿಸೋ ಹೇ ಮನುಜ, ಆ ಮಂತ್ರ ಈ ಮಂತ್ರ ನೆಚ್ಛಿ ನೀ ಕೆಡಬೇಡ, ಸೋಮಶೇಖರ ತನ್ನ ಸತಿಗೆ ಪೇಳಿದ ಮಂತ್ರ, ರಾಮ ಮಂತ್ರ ಜಪಿಸೋ ಹೇ ಮನುಜ' ಯಾರು ಬೇಕಾದರೂ, ಎಲ್ಲಿ ಬೇಕಾದರೂ, ಹೇಗೆ ಬೇಕಾದರೂ ಶ್ರೀರಾಮನಾಮವನ್ನು ಜಪಿಸಿ ಸುಲಭವಾಗಿ ಮೋಕ್ಷವನ್ನು ಪಡೆಯಬಹುದೆಂದು ಹೇಳಿದ್ದಾರೆ. ಹೀಗೆ ಭಾರತೀಯರಲ್ಲಿ ಮಾತ್ರವೇ ಅಲ್ಲದೆ ವಿಶ್ವದ ನಾನಾ ದೇಶಗಳಲ್ಲೂ ಈ ನಂಬಿಕೆಯಿದೆ. ಸಾಕ್ಷಾತ್ ಶಿವನೇ ಶ್ರೀರಾಮ ನಾಮವನ್ನು ಜಪಿಸುತ್ತಾನೆ, ಶ್ರೀರಾಮ ಸಹ ಶಿವನನ್ನು ಪೂಜಿಸುತ್ತಾನೆ. ಯುಗ ಯುಗಗಳಿಂದಲೂ ಶತ ಶತಮಾನಗಳಿಂದಲೂ ಭಾರತೀಯ ಮಹಾಕಾವ್ಯ, ಶ್ರೀ ವಾಲ್ಮೀಕಿ ವಿರಚಿತ ಶ್ರೀರಾಮಾಯಣ ಕಾವ್ಯ. ಅನೇಕ ಭಾಷೆಗಳಲ್ಲಿ, ಅನೇಕ ರಾಜ್ಯಗಳಲ್ಲಿ ಅನೇಕ ದೇಶಗಳಲ್ಲಿ ಕಾವ್ಯವಾಗಿ ರಚಿಸಲ್ಪಟ್ಟಿದೆ, ಭಜನೆಯಾಗಿ ಹಾಡಲ್ಪಟ್ಟಿದೆ, ನೃತ್ಯಗಳಾಗಿ, ನಾಟಕಗಳಾಗಿ, ಚಲನಚಿತ್ರಗಳಾಗಿ ಪ್ರದರ್ಶಿಸಲ್ಪಟ್ಟಿದೆ. ಜಗತ್ತಿನ ಬೇರೆ ಬೇರೆ ಧರ್ಮದವರು ಸಹ ಶ್ರೀರಾಮನ ದೇವಾಲಯವನ್ನು ನಿರ್ಮಿಸಿ ಪೂಜಿಸುವ, ಸೀತಾರಾಮಲಕ್ಷ್ಮಣ ಸಹಿತ ಹನುಮಂತನನ್ನು ಆರಾಧಿಸುವ ಪರಂಪರೆಯನ್ನು ಇಂದಿಗೂ ಮುಂದುವರೆಸಿಕೊಂಡು ಬಂದಿದ್ದಾರೆ. ಇಡೀ ಜಗತ್ತಿನಲ್ಲೆ ಹೆಚ್ಚು ಪೂಜಿಸುವ ಆರಾಧಿಸುವ, ಭಜಿಸುವ ವ್ಯಕ್ತಿ ಯಾರಾದರೂ ಇದ್ದರೇ ಅದು ಶ್ರೀರಾಮನೊಬ್ಬನೇ ಆಗಿರುವುದು ನಮ್ಮ ಹೆಮ್ಮೆಯ ವಿಚಾರ ಹಾಗೂ ಶ್ರೀರಾಮನ ಶ್ರೇಷ್ಠತೆ ಆಗಿದೆ.
ಕನ್ನಡ ಸಾಹಿತ್ಯದಲ್ಲೂ ಶ್ರೀರಾಮನ ಕುರಿತ ಅನೇಕ ಕಾವ್ಯಗಳು ಕಾಲದಿಂದ ಕಾಲಕ್ಕೆ ರಚನೆಯಾಗಿದೆ. 'ತಿಣಿಕಿದನು ಫಣಿರಾಯ ರಾಮಾಯಣದ ಭಾರದಲಿ' ಎಂದು ಕುಮಾರವ್ಯಾಸ ಹೇಳಿದ್ದಾನೆ. ಕಾವ್ಯಗಳು ಜನ ಸಾಮಾನ್ಯರಿಗೆ ಸುಲಭವಾಗಿ ಅರ್ಥವಾಗದ ಕಾರಣ ವೈಷ್ಣವ ಪಂತದ ಅನೇಕ ದಾಸರು ಶ್ರೀರಾಮನ ಕುರಿತ ಅನೇಕ ಕೀರ್ತನೆಗಳನ್ನು, ಪದಗಳನ್ನು ತಾವೇ ರಚಿಸಿ ತಾವೇ ಬೀದಿ ಬೀದಿಯಲ್ಲಿ, ಹಾಡಿ, ನರ್ತಿಸಿ ಶ್ರೀರಾಮ ನಾಮದ ಮಹಿಮೆಯನ್ನು ಸಾರಿದ್ದಾರೆ. ದಕ್ಷಿಣಭಾರತದಲ್ಲಿ ಹೆಚ್ಚು ದಾಸರ ಪದಗಳು ಕನ್ನಡದಲ್ಲಿ ರಚಿತವಾಗಿ ಜನಪ್ರಿಯವಾಗಿದೆ. ಹಾಗೆಯೇ ತೆಲುಗು, ಮರಾಠಿ ಭಾಷೆಯಲ್ಲಿ ಕೀರ್ತನೆಗಳನ್ನು ಅನೇಕ ದಾಸರು, ಸಂತರು, ಕವಿಗಳು ಆಯಾಯಾ ಪ್ರದೇಶಗಳಲ್ಲಿ ಭಗವಂತನ ನಾಮ ಸಂಕೀರ್ತನೆಯ ಮಹಿಮೆಯನ್ನು ಪ್ರಸಿದ್ಧಗೊಳಿಸಿದ್ದಾರೆ. ಗಡಿ ಭಾಗದ ಕೆಲವು ಪ್ರದೇಶಗಳಲ್ಲಿ ಎರಡು - ಮೂರು ಭಾಷೆಯ ಪ್ರಭಾವ ಸಾಮಾನ್ಯವಾಗಿರುತ್ತದೆ. ಅಂತಹುದರಲ್ಲಿ ಕರ್ನಾಟಕ ಹಾಗೂ ಆಂಧ್ರ ಪ್ರದೇಶದ ಗಡಿಭಾಗದಲ್ಲಿ ಬರುವ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲ್ಲೂಕಿನ 'ಕೈವಾರ' ಕ್ಷೇತ್ರವು ಒಂದು ಪುಣ್ಯಕ್ಷೇತ್ರವಾಗಿದ್ದು, ತೆಲುಗು-ಕನ್ನಡ ಎರಡು ಭಾಷೆಯೂ ಇಲ್ಲಿ ಜನ ಸಾಮಾನ್ಯರ ಆಡುಭಾಷೆಯಾಗಿದೆ. ಈ ಕ್ಷೇತ್ರದಲ್ಲಿ 18 ಹಾಗೂ 19ನೇ ಶತಮಾನದಲ್ಲಿ ಜೀವಿಸಿದ್ದ ಮಹಾಯೋಗಿ, ಮಹಾಕಾಲಜ್ಞಾನಿ, ಮಹಾ ಪವಾಡಪುರುಷ, ಸಂನ್ಯಾಸಿ ಹಾಗೂ ಶ್ರೀರಾಮ ಭಕ್ತ ಶ್ರೀಕೈವಾರ ನಾರೇಯಣ, ಕೈವಾರ ತಾತಯ್ಯ, ಯೋಗಿನಾರೇಯಣ ಯತೀಂದ್ರ ಎಂದೆಲ್ಲ ಹೆಸರಾದ ಜನಸಾಮಾನ್ಯರ, ಪ್ರೀತಿಯ ವ್ಯಕ್ತಿ ಶ್ರೀ ನಾರಾಯಣಪ್ಪನವರು. ಇವರು ತೆಲುಗು ಭಾಷೆಯಲ್ಲಿ ಅತಿ ಹೆಚ್ಚಾಗಿಯೂ, ಕನ್ನಡ ಭಾಷೆಯಲ್ಲಿ ಸ್ವಲ್ಪವಾಗಿಯೂ, ಕನ್ನಡ-ತೆಲುಗು ಎರಡೂ ಭಾಷೆಯ ಮಿಶ್ರಣದಲ್ಲೂ ಕೆಲವು ಕೀರ್ತನೆಗಳನ್ನು ರಚಿಸಿದ್ದಾರೆ.
ಕೈವಾರವು ನಾಲ್ಕು ಯುಗಗಳಿಂದಲೂ ಅಸ್ತಿತ್ವದಲ್ಲಿದೆ. ಕೃತಯುಗದಲ್ಲಿ ಇಂದ್ರನು ವೃತಾಸುರನೆಂಬ ರಾಕ್ಷಸನನ್ನು ಸಂಹರಿಸಿ ಪ್ರಾಯಶ್ಚಿತ್ತವಾಗಿ ಇಲ್ಲಿನ ಮೂಲದೇವರು ಶ್ರೀ ಅಮರನಾರಾಯಣಸ್ವಾಮಿಯನ್ನು ಸ್ಥಾಪಿಸಿದನೆಂದು ಪುರಾಣಗಳು ಹೇಳುತ್ತವೆ. ತ್ರೇತಾಯುಗದಲ್ಲಿ ಶ್ರೀರಾಮನು ಸೀತಾಲಕ್ಷ್ಮಣ ಸಮೇತ ವನವಾಸದಲ್ಲಿದ್ದಾಗ ಸೀತೆಯ ಬಾಯಾರಿಕೆಯನ್ನು ನಿವಾರಿಸಲು, ಲಕ್ಷ್ಮಣ ಕಲ್ಲಿನ ಬಂಡೆಗೆ ಬಾಣ ಹೂಡಿ ನೀರು ಬರಿಸಿದನೆಂದು, ಈಗಲೂ ಇದು ಲಕ್ಷ್ಮಣ ತೀರ್ಥವೆಂದು ಪ್ರಸಿದ್ಧಿಯಾಗಿದೆ. ದ್ವಾಪರಯುಗದಲ್ಲಿ ಪಾಂಡವರು ಇಲ್ಲಿ ನೆಲೆಸಿದ್ದರೆಂದು, (ಆಗ ಇದನ್ನು ಏಕಚಕ್ರ ನಗರವೆಂದು ಕರೆಯಲಾಗುತ್ತಿತ್ತು). ಬಕಾಸುರನೆಂಬ ರಾಕ್ಷಸನನ್ನು ವಧಿಸಿ ಪ್ರಜೆಗಳನ್ನು ರಕ್ಷಿಸಿದನೆಂದು, ಇದರ ಪ್ರಾಯಶ್ಚಿತ್ತವಾಗಿ ಪಾಂಡವರು ತಮ್ಮ ತಮ್ಮ ಹೆಸರಿನಲ್ಲಿ ಒಂದೊಂದು ಲಿಂಗವನ್ನು ಪ್ರತಿಷ್ಠಾಪಿಸಿ ಪೂಜಿಸಿದರೆಂದು ನಂಬಲಾಗಿದೆ. ಕಲಿಯುಗದಲ್ಲಿ ಶ್ರೀನಾರಾಯಣಪ್ಪನವರು, ಶ್ರೀ ಅಮರನಾರಾಯಣ ಸ್ವಾಮಿಯ ಕೃಪೆಯಿಂದ 1726ರಲ್ಲಿ ಶ್ರೀ ಕೊಂಡಪ್ಪ ಮತ್ತು ಶ್ರೀಮತಿ ಮುದ್ದಮ್ಮ ದಂಪತಿಗಳ ಮಗನಾಗಿ ಜನಿಸಿದರು. ಬಾಲ್ಯದಿಂದಲೂ ಇವರು ತಮ್ಮ ಕುಲದೇವರಾದ ಶ್ರೀ ಅಮರನಾರಾಯಣ ಸ್ವಾಮಿಯ ಪರಮ ಭಕ್ತರಾಗಿದ್ದರು. ಸೂಕ್ತ ಸಮಯದಲ್ಲಿ ಮದುವೆಯಾದರು. ಜೀವನೋಪಾಯಕ್ಕಾಗಿ ಬಳೆ ಮಾರುವ ವೃತ್ತಿಯನ್ನು ಮಾಡುತ್ತಿದ್ದರು. ಹೆಂಡತಿ ಸಲಹೆ ಮೇರೆಗೆ ಹೆಚ್ಚು ಹಣ ಸಂಪಾದಿಸಲು ಪರಸ್ಥಳಗಳಿಗೆ ಹೋದಾಗ ಚಿತ್ತೂರು ಜಿಲ್ಲೆಯ ಮಗಳಿ ಎಂಬ ಊರಿನಲ್ಲಿ ಗುರುಗಳೊಬ್ಬರ ದರ್ಶನವಾಗಿ ಇವರಿಗೆ ಮಂತ್ರೋಪದೇಶವಾಯಿತು.
ನಂತರ ಶ್ರೀ ನಾರಾಯಣಪ್ಪನವರು ತಮ್ಮ ಊರಿಗೆ ಬಂದು ಸಂಸಾರವನ್ನು ತ್ಯಜಿಸಿ ಸಮೀಪದಲ್ಲೇ ಇದ್ದ ಉದ್ಭವ ಶ್ರೀ ನರಸಿಂಹ ಗುಹೆಯಲ್ಲಿ ಗುರುಗಳು ಉಪದೇಶಿಸಿದ ಮಂತ್ರ 'ಓಂ ನಮೋ ನಾರೇಯಣ' ವನ್ನು ನಿರಂತರವಾಗಿ ಮೂರುವರ್ಷ ಜಪಿಸಿ ಮಂತ್ರ ಸಿದ್ಧಿ ಮಾಡಿಕೊಳ್ಳುವರು. ಮುಂದೆ ಅನೇಕ ಪವಾಡಗಳನ್ನು ಮೆರೆಯುತ್ತಾರೆ, ಮಕ್ಕಳಿಗೆ ಬೆಣಚಿಕಲ್ಲು ತರಲು ಹೇಳಿ ಅದನ್ನು ಕಲ್ಲು ಸಕ್ಕರೆ ಮಾಡಿಕೊಡುತ್ತಿದ್ದರೆಂದ. ಕಣ್ಣಿನ ದೃಷ್ಟಿ ಕಳೆದುಕೊಂಡ ಶ್ಯಾನುಭೋಗರಿಗೆ ದೃಷ್ಟಿ ಬರೆಸುತ್ತಾರೆ. ಒಡಿಗೇನಹಳ್ಳಿ (ಈಗಿನ ವಿಜಯಪುರ) ಗ್ರಾಮದಲ್ಲಿ ಬರಗಾಲ ಬಂದಾಗ ಮಳೆ ಬರೆಸಿ ನೀರು ತರಿಸಿದರಂತೆ. ಅಷ್ಟಾಂಗ ಸಿದ್ಧಿಯನ್ನು ಪಡೆದಿದ್ದ ಶ್ರೀ ನಾರಾಯಣಪ್ಪನವರು ಮಹಾಕಾಲಜ್ಞಾನಿಯಾಗಿದ್ದು ತಮ್ಮ 86ನೇ ವಯಸ್ಸಿನಲ್ಲಿ 'ಕಾಲಜ್ಞಾನ' ವನ್ನು ತೆಲುಗು ಭಾಷೆಯಲ್ಲಿ ರಚಿಸಿದರು. ಕಲಿಯುಗದಲ್ಲಿ ಭಗವಂತನ ನಾಮ ಸಂಕೀರ್ತನೆಯು ಎಲ್ಲಾ ಜನರ ಪಾಲಿಗೂ ಕಷ್ಟಗಳನ್ನು ಪರಿಹರಿಸುವ, ಪಾಪಗಳನ್ನು ಕಳೆಯುವ, ಸಂಕಲ್ಪಗಳನ್ನು ಈಡೇರಿಸುವ, ಮುಕ್ತಿ ಅಥವಾ ಮೋಕ್ಷವನ್ನು ಕರುಣಿಸುವಂತಾಗಿದೆ ಎಂಬುದನ್ನು ಅರಿತ ಶ್ರೀ ನಾರಾಯಣಪ್ಪನವರು ಕನ್ನಡ-ತೆಲುಗು ಭಾಷೆಯಲ್ಲಿ ಜನ ಸಾಮಾನ್ಯರಿಗೂ ಅರ್ಥವಾಗುವಂತೆ ಸರಳವಾಗಿ ಭಗವಂತನ ನಾಮಸ್ಮರಣೆ ಮಾಡುವ ಭಕ್ತಿಪ್ರಧಾನವಾದ ಅನೇಕ ಕೀರ್ತನೆಗಳನ್ನು ರಚಿಸಿದ್ದಾರೆ, ಅದರಲ್ಲೂ ಶ್ರೀರಾಮನ ಕುರಿತ ಅನೇಕ ಕೀರ್ತನೆಗಳನ್ನು ತಾವೇ ರಚಿಸಿ ಊರೂರು, ಬೀದಿ ಬೀದಿ ತಿರುಗಿ ತಾವೇ ಹಾಡುತ್ತಾ ಭಕ್ತರಿಗೆ ಸನ್ಮಾರ್ಗವನ್ನು ತೋರಿದ್ದಾರೆ.
ತಾವು ಸಹ ಹೇಗೆ ಶ್ರೀರಾಮ ಸೇವೆಯಿಂದ ಮಹಾಸಂನ್ಯಾಸಿಯಾದೆ ಎಂದು ಒಂದು ಕೀರ್ತನೆಯಲ್ಲಿ "ರಂಗುಮೀರಿನ ರತ್ನ ಬಂಗಾರ ಮ್ಯಾಡಲೊ, ಶೃಂಗಾರ ಮೂರ್ತಿ ರಾಮುನಿ ಸೇವಿಂಚಿ ಸಂನ್ಯಾಸಿಯಾದೆನು, ಮಹಾಸಂನ್ಯಾಸಿಯಾದೆನು ಎಂದು ಶ್ರೀರಾಮನ ಮಹಿಮೆಯನ್ನು ಸಾರಿದ್ದಾರೆ. ತಮ್ಮ ಕುಲದೇವರಾದ ಶ್ರೀ ಅಮರ ನಾರಾಯಣ ಸ್ವಾಮಿಯ ನಾಮವನ್ನೇ ಅಂಕಿತವಾಗಿ ಮಾಡಿಕೊಂಡಿದ್ದಾರೆ. ಕ್ರಿ.ಶ. 1836ರಲ್ಲಿ ಅಂದರೆ ತಮ್ಮ 110ನೇ ವಯಸ್ಸಿನಲ್ಲಿ ದೇಹವನ್ನು ತ್ಯಜಿಸಿ ಸಮಾಧಿ ಹೊಂದುವರು. ಹರಿ-ಹರ-ಗುರುಗಳು ನೆಲೆಸಿರುವ ಏಕೈಕ ಕ್ಷೇತ್ರ ಕೈವಾರ. ಈಗಲೂ ಇವರು ಸಮಾಧಿಯಿಂದಲೇ ಭಕ್ತರ ಕೋರಿಕೆಗಳನ್ನು ಈಡೇರಿಸುತ್ತಿದ್ದಾರೆ ಎಂದು ನಂಬುವರು. ಈಗಿನ ಆಡಳಿತ ಮಂಡಳಿಯು ಶ್ರೀ ಎಂ. ಆರ್. ಜಯರಾಂರವರ ಧರ್ಮದರ್ಶಿತ್ವದಲ್ಲಿ ನಿರಂತರವಾಗಿ ಭಜನಾ ಸೇವೆಯನ್ನು ಹಾಗೂ ಇತರ ಸಾಮಾಜಿಕ ಸೇವೆಯನ್ನು ನಡೆಸಿಕೊಂಡು ಬರುತ್ತಿದ್ದಾರೆ. ಪ್ರತಿ ದಿನವೂ ನಾನಾ ಕಡೆಗಳಿಂದ ಬರುವ ಭಕ್ತರ ನಾಮ ಸಂಕೀರ್ತನೆಯನ್ನು ಭಜನೆಯನ್ನು ಮಾಡಿ ಮಹಾಯೋಗಿ ನಾರೇಯಣರ ಕೃಪೆಗೆ ಪಾತ್ರರಾಗುತ್ತಿದ್ದಾರೆ. ಗುರುಪೂರ್ಣಿಮೆಯ ಸಮಯದಲ್ಲಿ ನಾಡಿನ ನಾನಾ ಭಾಗಗಳಿಂದ ಬರುವ ಪ್ರಸಿದ್ದಧ ಸಂಗೀತ ವಿದ್ವಾಂಸರು ದಾಸರು ಇವರ ಭಜನೆಗಳನ್ನು ಹಾಡಿ ಭಕ್ತಿಭಾವವನ್ನು ಹರಡುತ್ತಿದ್ದಾರೆ.
ಈಗ ಕೈವಾರ ತಾತಯ್ಯನೆಂದೂ ಪ್ರಸಿದ್ಧವಾಗಿರುವ ಇವರ ಕೀರ್ತನೆಗಳಲ್ಲಿ ಭಜನೆಗಳಲ್ಲಿ ಶ್ರೀರಾಮನ ಕುರಿತ ವಿಚಾರಗಳನ್ನು ಸಂಕ್ಷಿಪ್ತವಾಗಿ ತಿಳಿಯಲು ಪ್ರಯತ್ನಿಸಲಾಗಿದೆ. ಭಜನೆಗಳಲ್ಲಿ, ಕೀರ್ತನೆಗಳಲ್ಲಿ ಭಾಷೆಯ ನಿರ್ಬಂಧವಿಲ್ಲ. ಕನ್ನಡ, ತೆಲುಗು, ಮರಾಠಿ, ಹಿಂದಿ, ಸಂಸ್ಕೃತ ಹೀಗೆ ಯಾವುದೇ ಭಾಷೆಯಲ್ಲೂ ಶ್ರೀರಾಮ ಎಂದೇ ಕರೆಯಲಾಗುವುದು. ಕೀರ್ತನೆಗಳಲ್ಲಿ ನಾಮ ಉಚ್ಚಾರಣೆಯೇ ಭಕ್ತಿಭಾವವನ್ನು ಉಂಟುಮಾಡುತ್ತದೆ. ಒಂದೊಂದು ನಾಮ ಜಪ ಅಥವಾ ಪಠಣಕ್ಕೂ ತನ್ನದೇ ಆದ ಬೇರೆಬೇರೆ ವಿಶೇಷತೆಗಳಿವೆ. 'ವಿಠಲ' ನಾಮ ಉಚ್ಚಾರಣೆಯಿಂದ ಹೃದಯ ಸಂಬಂಧಿ ಕಾಯಿಲೆಗಳು ಗುಣವಾಗುವುದೆಂದು ಸಂಶೋಧನೆಗಳು ಸಾಬೀತುಪಡಿಸುವೆ. ಹಾಗೆಯೇ 'ಶ್ರೀರಾಮ' ನಾಮ ಪಠಣೆ ಅಥವಾ ಜಪ ಮನಸ್ಸಿಗೆ ಸ್ಥಿರತೆಯನ್ನು ಕೊಡುವುದು, ಶಾಂತಿಯನ್ನು ಕೊಡುವುದು ಸಕಲ ದುರಿತಗಳನ್ನು ಪರಿಹರಿಸಿ ಮೋಕ್ಷವನ್ನು ಕರುಣಿಸುವುದು.
ಕನ್ನಡದಲ್ಲಿ ರಚಿಸಿದ ಈ ಭಜನೆಯಲ್ಲಿ ಶ್ರೀರಾಮ ನಾಮವು ಅವಸಾನ ಕಾಲಕ್ಕೆ ಹಾದಿ ತೋರುವ ನಾಮ, ನಂಬಿರೋ ನಂಬಿರೋ ನಂಬಿರೋ ಅಮರ ನಾರೇಯಣ ಸ್ವಾಮಿಯ ನಾಮ ಹಂತಕನ ದೂತರನು ಹೊಡೆದು ಓಡಿಸಿದ ನಾಮ ಆಂಜನೇಯನಿಗೆ ಆಧಾರವಾದ ನಾಮ ಶ್ರೀರಾಮ ನಾಮ ಎಂದಿದ್ದಾರೆ. ತಮ್ಮ ಅಂತ್ಯಕಾಲದಲ್ಲಾದರೂ ಶ್ರೀರಾಮ ಜಪವನ್ನು ಮಾಡಿ ಸದ್ಗತಿಯನ್ನು ಪಡೆಯಿರಿ. ಶ್ರೀರಾಮನಾಮ ಜಪದಿಂದ ಹಂತಕರು ಓಡಿ ಹೋಗುವರು. ಮಹಾರಾಮಭಕ್ತ ಆಂಜನೇಯನ ಅನುಗ್ರಹವಾಗುವುದು. ಇದರಿಂದ ಸುಲಭವಾಗಿ ಮೋಕ್ಷ ಪಡೆಯಬಹುದು ಎಂದು ಹೇಳಿದ್ದಾರೆ.
ರಾಮುನಿ ಭಜನ ಸೇಯವೇ ಮನುಜ
ಪಾರೆ ಮುಲೇನಿ ಅಪಾರ ಪಾಪಮು ಪರಿಹರಿಂಚು ಶ್ರೀರಾಮ
ನಾಮವು ಎಂದಿದ್ದಾರೆ.
ರಾಘವ ನಾಮ ಜಪಮು
ಸದ್ಗುರು ರಾಘವ ನಾಮ ಜಪಮು
ಘಂಟಾನಾದಂ ಮಿಂಟ ವಿನೋದಂ
ಆತ್ಮಾನಂದಂ ಭರಿಂಪುಮು
ಶ್ರೀರಾಮ ನಾಮ ಜಪದಿಂದ ಆತ್ಮಾನಂದ ದೊರೆಯುವುದೆಂದಿದ್ದಾರೆ.
ತನಗೆ ತಂದೆ ತಾಯಿ ಧಾತ, ಗುರು ಎಲ್ಲವೂ ನೀನೇ ಶ್ರೀರಾಮ. ಬಡವರ ಸಂಪತ್ತು ಶ್ರೀರಾಮ. 'ಕೇರಳದ ಪ್ರಿನ್ಸ್ ರಾಮ' ಎಂದೇ ಖ್ಯಾತರಾದ ಅಂತರರಾಷ್ಟ್ರೀಯ ಗಾಯಕರಾದ ಶ್ರೀರಾಮ ವರ್ಮರವರು ನಾರಾಯಣ ತಾತಯ್ಯನವರ ಕೀರ್ತನೆಗಳನ್ನು ಪ್ರಚಾರ ಮಾಡಿದ್ದಾರೆ. ಅವರ ಒಂದು ಪ್ರಸಿದ್ಧ ಗೀತೆ ಶ್ರೀರಾಮ ಶ್ರೀರಾಮ ನೀ ನಾಮಮು ಜಿಹ್ವಾಕು ರುಚಿಗಾ ಪುನ್ನಡಿ, ಎಪ್ಪುಡೂ ಎಕ್ಕಡೂ ಮನಸು ಮರೆವುಕಾವುನ್ನದಿ' ಯನ್ನು ಕನ್ನಡರಾಗಂ, ಆದಿತಾಳಂನಲ್ಲಿ ಸುಶ್ರಾವ್ಯವಾಗಿ ಹಾಡಿ ಕೇಳುಗರನ್ನು ಸಂಮ್ಮೋಹನಗೊಳಿಸಿದ್ದಾರೆ. ಇಲ್ಲಿ ಶ್ರೀರಾಮ ನಾಮವು ನಾಲಿಗೆಗೆ ಎಷ್ಟು ರುಚಿಯಾಗಿದೆ, ಯಾವಾಗಲೂ ಎಲ್ಲೇ ಇರಲಿ ಮನಸ್ಸು ರಾಮನಾಮವನ್ನು ಮರೆಯುವುದಿಲ್ಲ ಎಂದು ಶ್ರೀರಾಮ ನಾಮದ ಮಹತ್ವವನ್ನು ಸಾರಿದ್ದಾರೆ.
"ಲಂಕಾದನುಜಾನಕು ಅಭಯಮುನು ಯಿಚ್ಚಿ ಲಂಕಕು ಪಟ್ಟಮುಗಟ್ಟಿ, ಯಿಚ್ಕಿನಾಡವು ಅಧಿಕ ವರಮುಲು ಅಮರ ನಾರೇಯಣ' ಎಂಬ ಕೀರ್ತನೆಯಲ್ಲಿ ರಾವಣವ ಸಹೋದರ ವಿಭೀಷಣನಿಗೆ ಅಭಯವ ನೀಡಿ, ಲಂಕೆಗೆ ಪಟ್ಟಕಟ್ಟಿ ಅಧಿಕವಾದ ವರಗಳನ್ನು ನೀಡಿ ಅನುಗ್ರಹಿಸಿದನು ಶ್ರೀರಾಮನ ಉದಾರಗುಣವನ್ನು ಹಾಡಿ ಹೊಗಳಿದ್ದಾರೆ.
"ರಾಮುನಿ ಭಜನ ಶಾಯವೆ ಮನಸಾ| ಸೀತಾ ರಾಮುನಿ ಭಜನಾ ಶಾಯವೇ - ಸತ್ವ ಚರಿತ್ರುನಿ-ಸದ್ಗುಣವಂತುನಿ, ಭವರೋಗವೈದ್ಯುನಿ ಭಕ್ತ ಸಹಾಯುನಿ ಯೀ ಮಹಿಲೋ ನೇರ ನಮ್ಮಿನ ವಾರಿಕಿ ಕೋರಿನ ಕೋರಿಕ ಕೊಮ್ಮನಿ ಮಿಚ್ಚುನು, ಲಕ್ಷ್ಮೀನಾಥುನಿ, ಲಕ್ಷಣವಂತುನಿ ಅಮರ ನಾರೇಯಣ, ಆದಿಕೇಶವುನಿ' ಇದರಲ್ಲಿ ಸಹ ಶ್ರೀರಾಮನ ಭಜನೆಯಿಂದ ಏನೆಲ್ಲ ಫಲಗಳು ದೊರೆಯುತ್ತವೆ ಎಂದು ವರ್ಣಿಸಿದ್ದಾರೆ. ಭಕ್ತರ ರೋಗಗಳನ್ನು ಗುಣಪಡಿಸುವ ವೈದ್ಯಶ್ರೀರಾಮ, ಭಕ್ತರಿಗೆ ಸಹಾಯ ಮಾಡುವನು, ನಂಬಿದವರಿಗೆ ಕೋರಿದ ವರಗಳನ್ನು ನೀಡುವವನು ಶ್ರೀರಾಮ ಸಚ್ಚರಿತ್ರನೂ, ಲಕ್ಷಣವಂತನೂ ಆಗಿರುವನೆಂದು ಹೇಳಿದ್ದಾರೆ.
"ಜಯ ಸೀತಾರಾಮ ಜಗನ್ನಾಥ ಜಯ ಸೀತಾರಾಮಾ ಜಯ ನವಗುಣಹಾರ, ಜಯ ಸುಂದರಾಕಾರ, ಜಯ ಭಕ್ತಮಂದಾರ - ಜಯ ವಿಠಲೇಶ್ವರ, ದಶರಥ ವರಪುತ್ರ ಶಂಕರ ಪ್ರಿಯ ಮಿತ್ರ ವಾಸವಸಭಸ್ತೋತ್ರ ಪರಮ ಪವಿತ್ರ, ಯಾಲರ ರಾಮಯ್ಯ, ಕೃಪಚೂಡವೇಮಯ್ಯ ನಮ್ಮಿತಿ ಪೋವೆಯ್ಯ - ನಾ ನೇರಮು ಏಮಯ್ಯ ಕೈವಾರ ಪುರವಾಸಿ ವರ ವೈಭವೋಲ್ಲಾಸ, ಅಖಿಲ ಲೋಕಾದೀಶ ನಾರೇಯಣೀಶಾ' ಎಂಬ ಸುದೀರ್ಘವಾದ ಕೀರ್ತನೆಯನ್ನು ಕನ್ನಡ, ತೆಲುಗು, ಎರಡೂ ಭಾಷೆಯನ್ನು ಮಿಶ್ರ ಮಾಡಿ ಹಾಡಿದ್ದಾರೆ.
ಇದರಲ್ಲಿ ತಾತಯ್ಯನವರು ಶ್ರೀರಾಮನ ಗುಣಗಾನ ಮಾಡುತ್ತ ಯಾಕಯ್ಯ ರಾಮಯ್ಯ ನನ್ನ ಮೇಲೆ ಕೃಪೆ ತೋರುತ್ತಿಲ್ಲವೇಕೆ ನಿನ್ನನ್ನೆ ನಂಬಿದೆ ಹೋಗಯ್ಯ - ನನ್ನ ತಪ್ಪಾದರೂ ಏನಯ್ಯ' ಎಂದು ಸಲಿಗೆಯಿಂದ ಸಂಭಾಷಿಸಿದ್ದಾರೆ. ದೇವರು - ಭಕ್ತರ ನಡುವೆ ಅಂತರಬಿಟ್ಟು, ಮಿತ್ರಭಾವದಿಂದ ಮಾತನಾಡಿದರೆ ಭಗವಂತ ಸುಲಭವಾಗಿ ಒಲಿಯುವರು ಎಂದು ಹೇಳಿದ್ದಾರೆ.
ರಾಮ ಪ್ರಭೋ - ಪಾಹಿ ರಾಮ ಪ್ರಭೋ
ಪಾಹಿ ಗಗನಾದ್ರಿ ಪರಮಾತ್ಮ ರಾಮ ಪ್ರಭೋ
ಉನ್ನವು ಹೃದಯಮುನ - ಹೃತ್ಕಮಲವಾಸುಡೈ
ಪಕ್ಷಿವಾಹನ ಪರಬ್ರಹ್ಮ ರಾಮ ಪ್ರಭೋ
ಯೆಂತ ವೇಡುದು ಕೃಷ್ಣಾ - ಯದುವಂಶಪಾವನ
ಪಂತ ಮೇಲರ ಪರಬ್ರಹ್ಮ ರಾಮಪ್ರಭೋ'
ಇಲ್ಲಿ ಶ್ರೀರಾಮ ತನ್ನನ್ನು ರಕ್ಷಿಸು, ತನ್ನ ಹೃದಯದಲ್ಲಿ ನೆಲಸು, ಯದುವಂಶದ ಕೃಷ್ಣ ನಿನ್ನನ್ನು ಎಷ್ಟು ಬೇಡಲಿ ರಾಮನೊಂದಿಗೆ ಪಂತವೇಕಯ್ಯ, ಅಂದರೆ ತಾನು ಕೃಷ್ಣನನ್ನು ಬೇಡಿಕೊಂಡರೆ ನಿನಗೇನು, ನನ್ನ ಕೋರಿಕೆಯನ್ನು ಈಡೇರಿಸಲು ನೀವು ಪಂದ್ಯ ಕಟ್ಟಬೇಕಾ ರಾಮಪ್ರಭೋ ಎಂದು ಶ್ರೀರಾಮನನ್ನು ಧೈರ್ಯವಾಗಿ ಪ್ರಶ್ನಿಸಿದ್ದಾರೆ. ಈ ಕೃತಿಯನ್ನು ಪ್ರಸಿದ್ಧ ಗಾಯಕರಾದ ಶ್ರೀ ಎಂ. ಬಾಲಮುರುಳಿಕೃಷ್ಣರವರು ಭಕ್ತಿಪೂರ್ವಕವಾಗಿ ಹಾಡಿದ್ದಾರೆ.
ಇಂತುಲ ಸಂಗಂ - ಇದಿ ಬಹುಭಂಗಂ
ವಿಡಚಿನ ಯೋಗಂ - ಬಾಟಾಮಾರ್ಗಂ
ಯೆಂತೋ ರಹಸ್ಯಂ - ಯೋಗಾಭ್ಯಾಸಂ
ಯೆರುಗನಿ ಮೋಸಂ - ಸತಿ ವಿಶ್ವಾಸಂ
ರಾಮ ಪ್ರತಾಪಂ ದಾನ ಕಲಾಪಂ
ದಶವಿಧರೂಪಂ ಧರಣಿಕಿ ದೀಪಂ
ಕೈವಾರನಿಲಯಂ ನಾರೇಯಣ ತನಯಂ
ಕವುಲ ಸಹಾಯಂ - ಸತ್ಕೃಪ ಹೃದಯಂ
ಇದರಲ್ಲಿ ದುರ್ಜನರ ಸಂಗ ಅಭಿಮಾನ ಭಂಗ ಎನ್ನುತ್ತ ಸತ್ಸಂಗದ ಮಹತ್ವದ ಜೊತೆಗೆ ಯೋಗಾಭ್ಯಾಸದ ರಹಸ್ಯವನ್ನು ಮಹತ್ವವನ್ನು, ರಾಮನ ಪ್ರತಾಪವನ್ನು, ದಾನದ ಗುಣವನ್ನು, ರಾಮನ ದಶವಿಧರೂಪವನ್ನು ಕೊಂಡಾಡಿದ್ದಾರೆ. ಶ್ರೀರಾಮ ಧರಣಿಗೆ ದೀಪ ಸತ್ಕೃಪಾ ಹೃದಯ, ನಾರಾಯಣ ತನಯ ಕೈವಾರವಾಸಿ ಎಂದು ಶ್ರೀರಾಮನನ್ನು ಸ್ತುತಿಸಿದ್ದಾರೆ.
ಮತ್ತೊಂದು ಕನ್ನಡ ತೆಲುಗು ರಚನೆ
ರಾಮಂ ಭಜೆ - ಕೃಷ್ಣ ರಾಮಂ ಭಜೇ |
ರಘುರಾಮಂ ಭಜೆ ಹರಿರಾಮಂ ಭಜೇ || ಪ ||
ಅಂಡಜವಾಹನ - ಕುಂಡಲಿ ಶಯನ ಶ್ರೀ ಚೆನ್ನಕೇಶವ - ರಾಮಂ ಭಜೆ
ಇನವಂಶ ವಿಠಲ, ವಿಕ್ರಮಾಂಕಿತ ವೀರ || ಶ್ರೀ ಚೆನ್ನ||
ದಶರಥ ನಂದನ ಧರ್ಮಪರಿಪಾಲನ || ಶ್ರೀ ಚೆನ್ನ ||
ಶ್ರೀ ವೇಣುಗೋಪಾಲ ಆಶ್ರಿತಜನ ಪಾಲ || ಶ್ರೀ ಚೆನ್ನ ||
ದಾಸ ವತ್ಸಲ ದೇವಾ ದಯತೋರಿ ಬಾ ರಾಮ || ಶ್ರೀ ಚೆನ್ನ ||
ಅಖಿಲಾಂಡ ನಾಯಕ - ಅಂಬರೀಶಸ್ತುತ || ಶ್ರೀ ಚೆನ್ನ ||
ಸಾರಮುಲೇನಿ ನಿಸ್ಸಾರ ಚದುವುಲು ಮಾನಿ || ಶ್ರೀ ಚೆನ್ನ ||
ಸ್ವಾತಂತ್ರ ಐಕ್ಯಮು ಸ್ವಾಧೀನ ಪರಬಿನ ಅಮರನಾರೇಯಣ
ರಾಮಂ ಭಜೆ, ವರ ವೈಭವೋಲ್ಲಾಸ ಶ್ರೀ ಚೆನ್ನಕೇಶವ
ರಾಮಂ ಭಜೆ ..... ಇಲ್ಲಿ ಪ್ರತಿ ಪದ್ಯದ ಕೊನೆಯಲ್ಲಿ ಶ್ರೀ ಚೆನ್ನಕೇಶವ ರಾಮಂ ಭಜೆ ಎಂದು ಶ್ರೀರಾಮ, ಕೃಷ್ಣ ಹಾಗೂ ಕೇಶವನನ್ನು ಸ್ತುತಿಸಿದ್ದಾರೆ.
ಕೈವಾರ ತಾತಯ್ಯನವರ ಕೀರ್ತನೆಗಳು ಅಪಾರ ಸಂಖ್ಯೆಯಲಿದೆ. ಅದರಲ್ಲಿ ಕೆಲವನ್ನು ಮಾತ್ರ ಸಂಕ್ಷಿಪ್ತವಾಗಿ ವಿವರಿಸಲಾಗಿದೆ. ತಾತಯ್ಯನವರು ಶ್ರೀರಾಮನಿಗೆ ವಂದಿಸುವ, ಜಯಕಾರ ಹೇಳುವ ಕೀರ್ತನೆಯೊಂದಿಗೆ ಈ ಲೇಖನವನ್ನು ಶ್ರೀರಾಮನ ಚರಣಗಳಿಗೆ ಅರ್ಪಿಸುವೆ.
ರಾಮ ರಾಮ ಮುಕುಂದ ಮಾಧವ
ರಾಮ ಸದ್ಗುರು ಕೇಶವ || ಪ ||
ರಾಮ ದಶರಥ ತನಯ ದೇವಾ ಶ್ರೀ ನಾರೇಯಣ
ವಂದನಮು ಶ್ರೀವೆಂಕಟೇಶ್ವರ, ವಂದನಮು ಜಗದೀಶ್ವರ
ವಂದನಮು ಶ್ರೀ ವಿಠಲೇಶ್ವರ | ವಂದನಮು ಶ್ರೀನಾರೇಯಣ
ಪರಮ ಪಾವನ ಪಕ್ಷಿವಾಹನ ಪದ್ಮನಾಭ ಜನಾರ್ಧನ
ಹರಿಯೇ ಹರಿ ಕ್ಷೀರಾಭ್ದಿಶಯನ ಅಮರ ನಾರೇಯಣ
ಇಲ್ಲಿ ನಾರಾಯಣನ ವಿವಿಧ ಅವತಾರಗಳನ್ನು ಶ್ರೀರಾಮ ನಾಮದೊಂದಿಗೆ ಸ್ತುತಿಸುತ್ತಾ ಶ್ರೀರಾಮನ ಅಪಾರವಾದ ಮಹಿಮೆಯನ್ನು ಹೊಗಳಿ ಹಾಡಿದ್ದಾರೆ.
ಶ್ರೀರಾಮ ಮರ್ಯಾದ ಪುರುಷೋತ್ತಮ, ಆಜಾನುಬಾಹು ಅಪ್ರತಿಮ ವೀರ, ಅರವಿಂದ ದಳಾಯತಾಕ್ಷ, ಕರುಣಾನಿಧಿ, ಮೋಕ್ಷದಾಯಕ, ನೀತಿವಂತ, ಪಿತೃವಾಕ್ಯ ಪರಿಪಾಲಕ, ಏಕಪತ್ನಿ ವ್ರತಸ್ಥ, ಪ್ರಜಾಪಾಲಕ, ರಾಮರಾಜ್ಯ ಸ್ಥಾಪಕ ಎಂದೆಲ್ಲಾ ನಾವು ಕೊಂಡಾಡುತ್ತೇವೆ. ಶ್ರೀರಾಮ ಮಂದಿರವಿಲ್ಲದ ಊರಿಲ್ಲಾ ಸೀತಾರಾಮಲಕ್ಷ್ಮಣ ಸಹಿತ ಹನುಮಂತನ ಭಜಿಸುವ ಭಜನಾ ಮಂದಿರ ಎಲ್ಲಾ ಊರುಗಳಲ್ಲೂ ಇರುವುದು. ಶ್ರೀರಾಮ ಭಜಿಸಿದರೆ ಶನಿದೋಷ ನಿವಾರಣೆಯಾಗುವುದೆಂದು ಹೇಳುವರು. ಶ್ರೀರಾಮ ಎಲ್ಲೆಲ್ಲೂ ಇರುವನು. ಅಲ್ಲಿ ನೋಡಲು ರಾಮ, ಇಲ್ಲಿ ನೋಡಲು ರಾಮ ಎಲ್ಲಿ ನೋಡಿದರಲ್ಲಿ ಶ್ರೀರಾಮ. ಅವನಿಗೆ ಇವನು ರಾಮ - ಇವನಿಗೆ ಅವನು ರಾಮ ನನ್ನಲ್ಲೂ ರಾಮ ನಿನ್ನಲ್ಲೂ ರಾಮ ನಮ್ಮ ಶ್ರೀರಾಮ ಜಯ ರಾಮ ಜಯ ಜಯ ರಾಮ. ಜೈ ಶ್ರೀರಾಮ. ಶ್ರೀರಾಮನ ಅನುಗ್ರಹ, ಗುರುಗಳಾದ ಶ್ರೀ ಕೈವಾರ ನಾರಾಯಣ ತಾತಯ್ಯರವರ ಕೃಪೆ ಎಲ್ಲರಿಗೂ ಲಭಿಸಲಿ. ಜೈ ಶ್ರೀರಾಮ.
- ಎಂ. ಮೋಹನ್ ಎಂ.ಎ., ಕನ್ನಡ
ಲೇಖಕರ ಸಂಕ್ಷಿಪ್ತ ಪರಿಚಯ
ಕನ್ನಡ ಉಪನ್ಯಾಸಕರು ಹಾಗೂ ಪ್ರಾಚಾರ್ಯರಾಗಿ 33 ವರ್ಷ ಪದವಿ ಪೂರ್ವ ಶಿಕ್ಷಣ ಇಲಾಖೆಯಲ್ಲಿ ಸೇವೆ ಸಲ್ಲಿಸಿ ಈಗ ನಿವೃತ್ತರಾಗಿರುವರು. 1980-82ರವರೆಗೆ ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಡಾ|| ಚಂದ್ರಶೇಖರ ಕಂಬಾರರು ಸಂಪಾದಿಸಿದ 'ಜನಪದ ವಿಶ್ವಕೋಶ' ದಲ್ಲಿ ಸಹಾಯಕರಾಗಿ, (ಲೇಖಕರಾಗಿ) ಹಾಗೂ ಅನುವಾದಕರಾಗಿ ಸೇವೆ ಮಾಡಿರುವರು. ನಂತರ ಕೆಲವು ಕಾಲ 'ಜಾನಪದ ವೈದ್ಯ' ಕೃತಿಗೆ ಕ್ಷೇತ್ರಕಾರ್ಯಕರ್ತನಾಗಿ ಬೆಂಗಳೂರು ಜಿಲ್ಲೆಯ ಕೆಲವು ತಾಲ್ಲೂಕುಗಳಲ್ಲಿ ಪ್ರವಾಸ ಮಾಡಿರುವರು. ಮೈಸೂರು ವಿಶ್ವವಿದ್ಯಾಲಯದ ವಿಶ್ವಕೋಶಕ್ಕೆ ಕೆಲವು ಲೇಖನಗಳನ್ನು ಬರೆದಿರುವರು. ಮೈಸೂರಿನ ವಿಠಲ ಸೇವಾ ಭಜನಾ ಟ್ರಸ್ಟಿನ ಪರವಾಗಿ ಭಜನಾ ಸಮಾವೇಶಗಳ ಕುರಿತಾದ "ಭಜನಾ ಸಮಾಚಾರ್' ತಿಂಗಳ ಪತ್ರಿಕೆಯ ಸಂಪಾದಕರಾಗಿ ಸೇವೆ ಸಲ್ಲಿಸಿರುವರು. ಸಾಹಿತ್ಯ ಓದುವುದು, ಪ್ರವಾಸ ಮಾಡುವುದು, ಭಜನಾ ಸಮಾವೇಶಗಳನ್ನು ಪ್ರಸಿದ್ಧ ಕ್ಷೇತ್ರಗಳಲ್ಲಿ ವ್ಯವಸ್ಥಿತಗೊಳಿಸುವುದು. ಆಧ್ಯಾತ್ಮಿಕ ಕ್ಷೇತ್ರದಲ್ಲಿ ಸಂಪರ್ಕ ಹೊಂದುವುದು, ಸೇವೆ ಮಾಡುವುದು ಜೀವನದ ಗುರಿಯಾಗಿದೆ. ಕೆಲವು ಸಮಯ ಮೈಸೂರಿನ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ ಆಶ್ರಮದಲ್ಲಿ ದತ್ತ ಕ್ರಿಯಾಯೋಗ ಸಾಧಕ ಬೋಧಕರಾಗಿ ಸೇವೆ ಸಲ್ಲಿಸಿರುವರು. ಈಗ ಮುದ್ರಾ - ಮಂತ್ರ ತಂತ್ರಗಳಿಗೆ ಪ್ರಖ್ಯಾತರಾದ ಶ್ರೀ ಲಕ್ಷ್ಮೀಶ್ರೀನಿವಾಸ ಗುರೂಜಿಯವರಿಂದ ಮುದ್ರೆ-ಮಂತ್ರ-ತಂತ್ರಗಳನ್ನು ಅಭ್ಯಾಸ ಮಾಡುತ್ತಾ ಅಸಕ್ತರಿಗೂ ಹೇಳಿಕೊಡುತ್ತಾ ಸಾಧನೆ ಮಾಡುತ್ತಿರುವರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ