ಯೋಗಿರಾಜ ಶ್ರೀ ವಾದಿರಾಜರು

Upayuktha
0

ಮಾರ್ಚ್ 28, ಗುರುಗಳ ಆರಾಧನೆಯ ಪ್ರಯುಕ್ತ ಲೇಖನ



|| ತಪೋವಿದ್ಯಾ ವಿರಕ್ತ್ಯಾದಿ ಸದ್ಗುಣೌ ಘಾಕರಾನಹಮ್ |

 ವಾದಿರಾಜ ಗುರೂನ್ ವಂದೇ ಹಯಗ್ರೀವ ದಯಾಶ್ರಯಾನ್ ||


ಶ್ರೀ ಮಧ್ವಾಚಾರ್ಯರ ಬಳಿಕ ದ್ವೈತಮತದ ಪ್ರವರ್ತಕರಾಗಿ ಮೆರೆದು ಭಾರತದ ಭಕ್ತಿಪಂಥದ ಪರಂಪರೆಯಲ್ಲಿ ಅತಿ ಎತ್ತರದ ಸ್ಥಾನ ಪಡೆದವರು ಶ್ರೀ ವಾದಿರಾಜರು.


ಇವರ ಪೂರ್ವಾಶ್ರಮದ ತಂದೆ ತಾಯಿಗಳು ರಾಮಾಚಾರ್ಯ ಹಾಗೂ ಗೌರಿದೇವಿ ಇದ್ದದ್ದು ಕುಂದಾಪುರ ಸಮೀಪದ ಆನೆಗುಡ್ಡೆ. ಮದುವೆ ಆಗಿ ತುಂಬಾ ವರ್ಷಗಳು ಕಳೆದರೂ ಮಕ್ಕಳು ಆಗದೆ ಪರಿತಪಿಸುತ್ತಿದ್ದ ಜೀವಗಳಿಗೆ ಭಗವಂತನ ಅನುಗ್ರಹವಾದ ಸಮಯ. ಆಗ ಅಲ್ಲಿಗೆ  ಶ್ರೀ ವಾಗೀಶತೀರ್ಥರ ಆಗಮನ.  ಈ ದಂಪತಿಗಳ ಮನದಿಂಗಿತ ತಿಳಿದಿದ್ದ ಭಗವಂತನ ಇಚ್ಛೆಯಂತೆಯೇ ಅನುಗ್ರಹಿಸಿದರು. ಶ್ರೀ ವಾಗೀಶತೀರ್ಥರು ಹೇಳಿದರು : ನಿಮಗೆ ಭಗವತ್ಸಂಕಲ್ಪದಂತೆ ಮಗು ಆಗುತ್ತದೆ. ಆದರೆ ಆ ಮಗುವನ್ನು ಭೂಸ್ಪರ್ಶ ಮಾಡದೆಯೇ ನೀವು ನಮಗೆ ಕೊಡಬೇಕು ಅಂತ ಹೇಳಿದಾಗ ಸಹಜವಾಗಿ ಒಂದು ಚಿಂತೆಯ ರೇಖೆ ಮೂಡಿತ್ತು. ಭಗವತ್ಸಂಕಲ್ಪವನ್ನರಿತಿದ್ದರ ಜೊತೆಗೆ ಹೆತ್ತವರ ಮನದಿಂಗಿತವನ್ನರಿತ ಶ್ರೀ ವಾಗೀಶ ತೀರ್ಥರು ಹೀಗೆ ಹೇಳಿದರು : ಒಂದು ವೇಳೆ ಮಗು ಮನೆಯ ಹೊರಗೆ ಹುಟ್ಟಿದರೆ ಅದು ನಮಗೆ ಸೇರಿದ್ದು. ಮನೆಯ ಒಳಗೆ ಹುಟ್ಟಿದರೆ ನಿಮಗೆ ಸೇರಿದ್ದು. ಈ ಮಾತಿನಿಂದ ದಂಪತಿಗಳಿಬ್ಬರೂ ತುಂಬಾ ಬಹಳ ಎಚ್ಚರಿಕೆ ವಹಿಸಿದರು. ಗರ್ಭಿಣಿ ಹೆಂಡತಿ ದಿನ ತುಂಬಿದಂತೆಲ್ಲ ಮನೆಯ ಹೊರಗೆ ಹೋಗದಂತೆ ನೋಡಿಕೊಂಡರು. ಹೊಸ್ತಿಲು ಕೂಡಾ ದಾಟಲು ಬಿಟ್ಟಿರಲಿಲ್ಲ. ಆದರೆ ಅವನ ಸಂಕಲ್ಪ ಹೀಗೇ ಇದ್ದಾಗ ಅದನ್ನು ಬದಲಾಯಿಸಲು ಯಾರಿಂದ ಸಾಧ್ಯ ? ಆ ಅಮೃತ ಘಳಿಗೆ ಬಂದೇ ಬಿಟ್ಟಿತು.


ಒಂದು ಮಾಘ ಶುದ್ಧ ದ್ವಾದಶಿ ಸಾಧನ ದ್ವಾದಶಿ ಊಟಕ್ಕೆ ಕುಳಿತ ಸಮಯ. ಗೋವುಗಳನ್ನು ಕಾಯುವ ಗೋಪಾಲನ ಸಂಕಲ್ಪದಂತೆ ಹಸುವೊಂದು ಬಂದು ಬೆಳೆದ ಬೆಳೆಯನ್ನೆಲ್ಲಾ ತಿನ್ನುತ್ತಿರುವಾಗ, ಆ ಗೋವನ್ನು ಓಡಿಸಲು ಹೋದಾಗ ಆ ಗೌರೀಗೆ ಗದ್ದೆಯಲ್ಲೇ ಹೆರಿಗೆ ಆಯಿತು. ಈಗಲೂ ಗೌರೀಗದ್ದೆ ಎಂದೇ ಹೆಸರು. ವೇದಾಂತ ಸಾಮ್ರಾಜ್ಯವನ್ನಾಳುವ ತೇಜೋಪುಂಜವಾದ ಸನ್ಯಾಸಪುಷ್ಪ ಗೌರೀಗದ್ದೆಯಲ್ಲಿ ಅರಳಿತು.


ಬಂಗಾರದ ಹರಿವಾಣದಲ್ಲಿ ಮಗುವನ್ನು ಮಠಕ್ಕೆ ತಂದ ಶ್ರೀ ವಾಗೀಶತೀರ್ಥರು ಸ್ವತಃ ತಾವೇ ಮಗುವಿನ ಮೈ ತೊಳೆದರು.


ಭೂವರಾಹ ಅಂತ ನಾಮಕರಣ ಮಾಡಿ, ದಂಪತಿಗಳ ಮನಸ್ಸಿಗೆ ದುಃಖವಾಗಬಾರದು ಎಂದು ಅವರಲ್ಲಿಯೇ ಕೆಲಕಾಲ ಪಾಲನೆ ಮಾಡಲು ಅವಕಾಶ ಕೊಟ್ಟರು. ನಿತ್ಯ ಆಚಾರ್ಯರು ವಿಷ್ಣುತೀರ್ಥರಿಗೆ ಕೊಟ್ಟ ಭೂವರಾಹ ದೇವರ ಪ್ರತಿಮೆಗೆ ಅಭಿಷೇಕ ಮಾಡಿದ ಹಾಲನ್ನೇ ಕಳಿಸುತ್ತಿದ್ದರು. ಆ ಮಗು ಆ ಹಾಲನ್ನು ಕುಡಿದು ಭೂಮಂಡಲಕ್ಕೆ ತಂಪೆರೆವ ಚಂದ್ರಮನಂತೆ ಬೆಳೆಯತೊಡಗಿತು. ಮುಂದೆ 5 ವರ್ಷಕ್ಕೆ ಉಪನಯನ. 8 ವರ್ಷಕ್ಕೆ ಸನ್ಯಾಸ ದೀಕ್ಷೆ ಕೊಟ್ಟು 'ಶ್ರೀ ವಾದಿರಾಜತೀರ್ಥರು' ಎಂದು ನಾಮಕರಣ ಮಾಡಿದರು.


ಸೋದೆ ಶ್ರೀ ವಾದಿರಾಜರು ಎಂದಾಕ್ಷಣ ತಕ್ಷಣಕ್ಕೆ ಕಣ್ಮುಂದೆ ಸುಳಿಯುವುದು ಧವಳಗಂಗೆ, ದಟ್ಟವಾದ ಕಾಡಿನಲ್ಲಿ ಬಾನೆತ್ತರ ಬೆಳೆದುನಿಂತ ಸುಂದರವಾದ ಮರಗಳ ಮಧ್ಯ ಇರುವ ತಪೋವನ, ರಾಜರ ಮೂಲ ವೃಂದಾವನದ ಹತ್ತಿರ ನೆಲೆಸಿರುವ ರಮಾತ್ರಿವಿಕ್ರಮ ದೇವರ ಗುಡಿ, ಭೂತರಾಜರ ಸನ್ನಿಧಿ, ಧವಳ ಗಂಗಾ, ಮುಖ್ಯಪ್ರಾಣ ದೇವರು, ಗೋಪಾಲಕೃಷ್ಣ, ಸಂತಾನ ಗೋಪಾಲಕೃಷ್ಣ, ಅರಳಿಕಟ್ಟೆ, ನಾಗಬನ, ವೇದ ಮಂದಿರ, ಪಾಪ ವಿಮೋಚನಾ ತೀರ್ಥ, ಚಂದ್ರಮೌಳೇಶ್ವರ, ಹಾಗೂ ವೀಣೆಸಹಿತ ಹನುಮಂತ ದೇವರು, ಶಾಲ್ಮಲಾನದಿ ಎಲ್ಲವೂ ಸುಳಿದಾಡುತ್ತದೆ.


ಶ್ರೀ ಮಧ್ವಾಚಾರ್ಯರ ಕಾಲದಿದಲೂ ಉಡುಪಿಯಲ್ಲಿ ಎರಡು ತಿಂಗಳಿಗೊಮ್ಮೆ ಪರ್ಯಾಯವಾಗುತ್ತಿತ್ತು. `ಕಲ್ಪಯಾಮಾಸ ಸಂಚಾರೆ ಸೌಕರ್ಯಂ ಯತಿನಾಮ್ ತತಃ' ಎಂದು ವಾದಿರಾಜ ಗುರು ಚರಿತಾಮೃತ ಇರುವ ವಾಕ್ಯದಂತೆ, ಧರ್ಮ ಪ್ರಚಾರವಾಗಲು, ಸಂಚಾರ ಕಾರ್ಯ ನಡೆಯಲು ಶ್ರೀ ವಾದಿರಾಜರು ಎಲ್ಲಾ ಮಠಾಧೀಶರ ಒಪ್ಪಿಗೆ ಪಡೆದು 2 ವರ್ಷಗಳಿಗೆ ಬದಲಾಯಿಸಿದರು. ಇದರಿಂದ ಉಳಿದ ಮಠಾಧೀಶರಿಗೆ 14 ವರ್ಷಗಳ ಬಿಡುವು ದೊರೆತು ಅವರು ಆ ಸಮಯದಲ್ಲಿ ದೇಶ ಪರ್ಯಟನೆ ಮಾಡಿ ಜ್ಞಾನ ಸಂಪಾದನೆ, ಕ್ಷೇತ್ರದರ್ಶನ, ಶಿಷ್ಯರ ಸಂಪರ್ಕ ಮಾಡಬಹುದಾಯಿತು. ಈ ಪರಿವರ್ತನೆಯಿಂದ ಮಧ್ವಮತ ಪ್ರಚಾರಕ್ಕೆ ಇನ್ನಷ್ಟು ಅನುಕೂಲವಾಯಿತು. ಉಡುಪಿಯ ಶ್ರೀಕೃಷ್ಣನ ಪೂಜಾ ಪರಿಸರದಲ್ಲಿ ಕನ್ನಡದ ಸರಳ ಸುಂದರ ಕೀರ್ತನೆಗಳನ್ನು ಹಾಡುವ ಸತ್ಸಂಪ್ರದಾಯವನ್ನು ಸಮರ್ಥವಾಗಿ ಪ್ರಾರಂಭಿಸಿದ ಪ್ರವರ್ತಕರು.

 

ಹಯಗ್ರೀವ ದೇವರು ಒಲಿದು ಬಂದಿದ್ದು :

ಸುಮಾರು ಹದಿನಾರನೆಯ ಶತಮಾನದಲ್ಲಿ ಗೋವಾ ಪ್ರಾಂತದಲ್ಲಿ ನೆಲೆಸಿದ್ದ ಹಿಂದೂಗಳಿಗೆ ಪೋರ್ಚುಗೀಸರ ದಬ್ಬಾಳಿಕೆ, ಬಲವಂತದ ಮತಾಂತರ ನಡೆಯುತ್ತಿದ್ದ ಕಾಲವದು. ಇದರಿಂದ ನೊಂದ ಬ್ರಾಹ್ಮಣ ಜನ ಮತ್ತು ಅಕ್ಕಸಾಲಿಗರು ಇದ್ದ ಬಿದ್ದ ಮನೆ ಐಶ್ವರ್ಯಗಳನ್ನು ಬಿಟ್ಟು ಆತ್ಮರಕ್ಷಣೆಯಲ್ಲದೆ ಧರ್ಮ ರಕ್ಷಣೆಗಾಗಿ ಗೋವಾ ಪ್ರಾಂತ ಬಿಟ್ಟು ಕರ್ನಾಟಕದ ಕಾರವಾರ, ಶಿರಸಿ ಮತ್ತು ಕರಾವಳಿ ಪ್ರದೇಶಗಳನ್ನು ತಮ್ಮ ನೆಲೆಯಾಗಿ ಇಟ್ಟುಕೊಂಡಿದ್ದ ಗೋವಾ ಜನರ ಸ್ವರೂಪಗತವಾಗಿದ್ದ ಬ್ರಾಹ್ಮಣಸಂಸ್ಕಾರವನ್ನು ಗ್ರಹಣ ಮಾಡಿದ ವಾದಿರಾಜರು ಅವರಿಗೆಲ್ಲಾ ಚಕ್ರಾಂಕನದ ಮೂಲಕ ಭಾಗವತ ಧರ್ಮದ ದೀಕ್ಷೆ ನೀಡಿ ತಮ್ಮ ಮಠದ ಮುಖ್ಯ ಶಿಷ್ಯರನ್ನಾಗಿ ಪರಿಗಣಿಸಿದರು. ಅದೇ ಮೇರೆಗೆ ಮಹಾರಾಷ್ಟ್ರದಲ್ಲಿ ನೆಲೆಸಿದ್ದ ಕೆಲವು ಸಾರಸ್ವತರಿಗೆ ಮಾಧ್ವಮತ ದೀಕ್ಷೆ ಕೊಟ್ಟು ಪುರಸ್ಕರಿಸಿದರು.


ಈ ಸೋನಾರರು ದೈವಜ್ಞ ಬ್ರಾಹ್ಮಣರೆಂದು ಕರೆಸಿಕೊಳ್ಳುತ್ತಿದ್ದರು. ಒಂದು ಸಲ ಒಬ್ಬ ಸಿರಿವಂತನು ಕುಶಲಕರ್ಮಿಯಾದ ದೈವಜ್ಞನಿಗೆ ಒಂದು ಗಣಪತಿ ಮೂರ್ತಿ ಮಾಡಿಕೊಡಲು ಕೇಳಿಕೊಂಡನು. ದೈವಜ್ಞ ಸಂತೋಷದಿಂದ ಪಂಚಲೋಹ ಕರಗಿಸಿ ಗಣಪತಿಯ ಅಚ್ಚಿನಲ್ಲಿ ಎರಕ ಹೊಯ್ದು ಇಟ್ಟನು. ಕೆಲವು ದಿನಗಳ ನಂತರ ತೆಗೆದು ನೋಡಿದರೆ ಆಶ್ಚರ್ಯ ಕಾದಿತ್ತು.  ಲೋಹವು ಗಣಪತಿಯ ಬದಲು ಹಯಮುಖವಾಗಿ ಹಯಗ್ರೀವ ರೂಪ ತಾಳಿತ್ತು. ವಿಗ್ರಹ ತಣ್ಣಗಾಗಿರಲಿಲ್ಲ. ಮತ್ತೊಮ್ಮೆ ಕರಗಿಸಿ ಹಾಕಲು ಪ್ರಯತ್ನಿಸಿದನು. ಮತ್ತೆ ಮತ್ತೆ ಕರಗಿಸಿ ಎಷ್ಟು ಬಾರಿ ಎರಕ ಹೊಯ್ದರೂ ಹಯಮುಖಸ್ವಾಮಿಯೇ ಬರುತ್ತಿದ್ದ. ಇದನ್ನು ಕಂಡವನಿಗೆ ಅಯೋಮಯವಾಗಿತ್ತು. ಆ ರಾತ್ರಿ ದೈವಜ್ಞ ಬ್ರಾಹ್ಮಣನಿಗೆ ದೇವರು ಕಾಣಿಸಿಕೊಂಡು ನೀನು ಅಚ್ಚಿಗೆ ಹಾಕಿ ತೆಗೆದ ಹಯಗ್ರೀವ ಮೂರ್ತಿಯನ್ನು ನಾಳೆ ಮುಂಜಾನೆ ಬರುತ್ತಿರುವ ಶ್ರೀ ವಾದಿರಾಜ ಸ್ವಾಮಿಗಳಿಗೆ ಒಪ್ಪಿಸು ಎಂದು ಹೇಳಿದಂತಾಯಿತು. ಕುಶಲಕರ್ಮಿ ಕನಸಿನ ವಿಷಯ ತನ್ನ ಸಮಾಜ ಬಾಂಧವರಿಗೆ ಹೇಳಿದನು. ಇದು ಒಳ್ಳೆದಾಯಿತು. ಈ ಸಂದರ್ಭವನ್ನು ಸದುಪಯೋಗ ಮಾಡಿಕೊಂಡು ದೇಶಬಿಟ್ಟು ದೇಶಕ್ಕೆ ಬಂದ ನಮ್ಮೆಲ್ಲರ ಸಂಕಷ್ಟ ದೂರಾಗಲಿ ಎಂದು ಪ್ರಾರ್ಥಿಸೋಣ ಎಂದು ನಿರ್ಧರಿಸಿ ಗುರುಗಳಿಗೆ ಸಮರ್ಪಿಸಿದರು. ಹೀಗೆ ಶ್ರೀ ವಾದಿರಾಜರಲ್ಲಿಗೆ ತಾನಾಗಿಯೇ ಒಲಿದು ನಲಿನಲಿದು ಕುಣಿಕುಣಿದು ಬಂದವ, ಬೆಲ್ಲ ಕಡಲೆಯ ಮಿಶ್ರಣದ ಹಯಗ್ರೀವ ಪರಮಾನ್ನ ಪಾಯಸದ ಪ್ರಿಯನಾದವ, ಜ್ಞಾನಪ್ರದನಾದ ಹಯವದನ, ಹಯಮುಖ, ಹಯಗ್ರೀವದೇವರು. ಆಚಾರ್ಯ ಮಧ್ವರಿಗೊಲಿದ ಕಡೆಗೋಲ ಕೃಷ್ಣ ನೆಲೆನಿಂತ ಉಡುಪಿಯ ಇತಿಹಾಸಕ್ಕೆ ಚಿನ್ನದ ಮೆರುಗನ್ನಿತ್ತವರು ಶ್ರೀ ವಾದಿರಾಜರು.

ಶ್ರೀ ವಾದಿರಾಜ ಗುರುಗಳು ರಚಿಸಿದ  ಒಂದೊಂದು ರಚನೆಗಳೂ ಅನರ್ಘ್ಯ ಸಂಪತ್ತು.

ಕನ್ನಡ ಭಾಷೆಗೆ, ಸಂಸ್ಕೃತಿಗೆ, ಸಾಹಿತ್ಯ ಸಂಗೀತಗಳಿಗೆ, ದರ್ಶನಕ್ಕೆ, ಸಮಾಜದ ಸಂಘಟನೆಗೆ, ಸದಾಚಾರದ ಸಾಮೂಹಿಕ ಪುನರುದ್ದೀಪನಕ್ಕೆ ರಾಜರು ಸಲ್ಲಿಸಿರುವ ಸೇವೆ ಚಿರಸ್ಮರಣೀಯ. ಜನಸಾಮಾನ್ಯರ ಕನ್ನಡ ಭಾಷೆಯಲ್ಲಿ ಹಾಡುಗಳನ್ನು ರಚಿಸಿ ಜನತೆಗೆ ತುಂಬಾ ಹತ್ತಿರವಾದರು.  ಸಾಮಾಜಿಕ ಸುಧಾರಣೆಗಳ ಜತೆಗೆ ಆಧ್ಯಾತ್ಮದ ಬದುಕಿಗೊಂದು ಕಲಾತ್ಮಕತೆಯನ್ನಿತ್ತು ಲೌಕಿಕಕ್ಕೆ ಅಲೌಕಿಕದ ಬೆರಗನ್ನಿತ್ತವರು ಶ್ರೀ ವಾದಿರಾಜರು. ಶ್ರೀ


ಪುರಂದರದಾಸರು, ಶ್ರೀ ವ್ಯಾಸರಾಜರು, ಶ್ರೀ ಕನಕದಾಸರು ಮುಂತಾದವರ ಸಮಕಾಲೀನರಾಗಿದ್ದ ರಾಜರು, ಉಪಾಸ್ಯಮೂರ್ತಿ ಹಯಗ್ರೀವ ದೇವರ ಮಹಿಮಾತಿಶಯಗಳನ್ನು ಕಂಡು 'ಹಯವದನ' ಅಂಕಿತದಿಂದ ಸಹಸ್ರ ಸಹಸ್ರ ಕೀರ್ತನೆಗಳನ್ನು ಕೊಟ್ಟರು.

ರಾಜರ ಅನೇಕ ಗ್ರಂಥಗಳಲ್ಲಿ ವಾದಿರಾಜರ ಪ್ರಾಮಾಣಿಕತೆ, ಸತ್ಯಸಂಧತೆ, ಸಮಾಜದ ದೀನ-ದಲಿತರ ಬಗ್ಗೆ ಅವರಿಗಿದ್ದ ಅನುಕಂಪ, ವಿಷ್ಣುಸರ್ವೋತ್ತಮತ್ವ, ಪ್ರೀತಿ, ಕರ್ತವ್ಯ ಮತ್ತು ಭಕ್ತಿಯ ಸಂದೇಶ ಗಳನ್ನು ಸಾರುತ್ತಲೇ ಮಧ್ವಾಚಾರ್ಯರ ತತ್ವಗಳನ್ನು ಸವಿಸ್ತಾರವಾಗಿ ತಿಳಿಸಿಕೊಟ್ಟರು.


ದಾಸ-ವ್ಯಾಸ ಪರಂಪರೆಗಳ ಅದ್ಭುತ ಪ್ರತಿಭೆ ಪಾಂಡಿತ್ಯಗಳ ಮಹಾನ್ ಪ್ರತೀಕವಾಗಿದ್ದ ವಾದಿರಾಜರು ಕನ್ನಡ ಹಾಗೂ ತುಳು ಭಾಷೆಯಲ್ಲಿ ಕೀರ್ತನೆ ಹಾಗೂ ಪಾಡ್ದನಗಳನ್ನು ಜನಸಾಮಾನ್ಯರ ಆತ್ಮೋದ್ಧಾರಕ್ಕಾಗಿ ರಚಿಸಿ, ತಾವೇ ಅವನ್ನು ಹಾಡಿ, ಹಾಡಿಸಿ, ಭಗವಂತನನ್ನು ಮೆರೆಸಿದವರು.

ತಮ್ಮ ಕನ್ನಡದ ಹಾಡು 'ಲಕುಮಿನಾರಾಯಣ ಜಯ ಲಕುಮಿನಾರಾಯಣ'ವನ್ನು ಎಲ್ಲರೂ ಯತಿಗಳ ಸಹಿತವಾಗಿ ಪ್ರತಿರಾತ್ರಿಯ ಪೂಜಾಕಾಲದಲ್ಲಿ ಭಜನ ರೀತಿಯಿಂದ ಹಾಡುತ್ತಾ ತಾಳ ಬಾರಿಸುತ್ತಾ, ನರ್ತನಸೇವೆಯ ಹೊಸ ಭಜನ ಸಂಪ್ರದಾಯವೊಂದನ್ನು ಬಳಕೆಗೆ ತಂದರು. 'ಯುಕ್ತಿಮಲ್ಲಿಕಾ' ಶ್ರೀ ವಾದಿರಾಜರ ಶಾಸ್ತ್ರಪ್ರಭುತ್ವ ಹಾಗೂ ಸಾಹಿತ್ಯಪಟುತ್ವಗಳ ಎತ್ತರ - ಬಿತ್ತರಗಳನ್ನು ದಿಟ್ಟವಾಗಿ ಮೂಡಿಸುವ ಕೃತಿ. ಶ್ರೀಮನ್ನ್ಯಾಯಸುಧಾ ಹಾಗೂ ತತ್ವಪ್ರಕಾಶಿಕಾ ಕೃತಿಗಳಿಗೆ ಶ್ರೀ ವಾದಿರಾಜರು ಬರೆದಿರುವ 'ಗುರ್ವರ್ಥದೀಪಿಕೆ' ಎಂಬ ಟೀಕಾಗ್ರಂಥ ವೇದಾಂತಸಾರದ ರಹಸ್ಯಗಳನ್ನೆಲ್ಲಾ, ಸುಧಾ ಪ್ರಮೇಯಗಳನ್ನೆಲ್ಲಾ ಸಂಪೂರ್ಣ ತಿಳಿಸಿಕೊಡುವ ಸುಂದರ ಗ್ರಂಥ. ಅನಂದತೀರ್ಥರ ಜ್ಞಾನ ದಿಗಂತಗಳಿಗೆ ಹಿಡಿದಿಟ್ಟ ಕನ್ನಡಿಯಂತೆ ಕಂಗೊಳಿಸುತ್ತಿರುವ ವಾದಿರಾಜರ 'ಮಹಾಭಾರತ ತಾತ್ಪರ್ಯನಿರ್ಣಯ'ದ ಟಿಪ್ಪಣಿ


ನಾವೆಲ್ಲ ಯಾತ್ರೆಗೆ ಹೋದರೆ ತಿಂಡಿ ತೀರ್ಥದ ಗಂಟನ್ನು ಕಟ್ಟಿಕೊಂಡು ಹೋಗುತ್ತೇವೆ. ಅದರ ಬದಲಾಗಿ ವಾದಿರಾಜರು ಕೊಟ್ಟ ತೀರ್ಥಪ್ರಬಂಧವನ್ನು ಕಟ್ಟಿಕೊಂಡು ಹೋದರೆ ಯಾತ್ರೆ ಸಾರ್ಥಕವಾದೀತು. ಅಂತಹ ಅದ್ಭುತವಾದ ರಚನೆ ತೀರ್ಥಪ್ರಬಂಧ, ಗುಂಡಕ್ರಿಯೆ, ರುಕ್ಮಿಣೀಶ ವಿಜಯ,  ಮೊದಲಾದ ಅಪೂರ್ವ ಗ್ರಂಥ ಕರ್ತೃಗಳಾದ, ಲಾತವ್ಯರು, ಋಜುಗಣಸ್ಥರೂ, ಶ್ರೀಮಚ್ಚಂದ್ರಿಕಾಚಾರ್ಯರ ಪ್ರೀತಿಪಾತ್ರರು, ವ್ಯಾಸ-ದಾಸ ಸಾಹಿತ್ಯದ ಅಧಿನಾಯಕರೂ ಆದ ಪರಮ ಪರಮ ಮಹಿಮಾಶಾಲಿಗಳು, ಶ್ರೀಕೃಷ್ಣದೇವರಾಯನಿಗೆ ಸಂಪತ್ತನ್ನು ಕರುಣಿಸಿದವರು. ಕುಡುಮ ಎಂದು ಕರೆಯುತ್ತಿದ್ದ ತೀರ್ಥಕ್ಷೇತ್ರವನ್ನು ವಾದಿರಾಜರು 'ಧರ್ಮಸ್ಥಳ' ಎಂದು ಹೆಸರಿಟ್ಟು ಅಲ್ಲಿ ಆಗ ಮಂಜುನಾಥನ ಪ್ರತಿಷ್ಠಾಪನೆಯ ಕಾರ್ಯ ನೆರವೇರಿಸಿದರು. ತಪಶ್ಯಕ್ತಿ, ಮಂತ್ರಸಿದ್ಧಿ ಹಾಗೂ ನಿಶ್ಚಿತ ತತ್ವಜ್ಞಾನಗಳ ತ್ರಿವೇಣಿ ಸಂಗಮವಾಗಿದ್ದ ರಾಜರ ಸೇವೆ ಮಾಡುವುದೆಂದರೆ ಎಲ್ಲರಿಗೂ ಪರಮಪ್ರೀತಿ. ಸೋದೆಯ ಅರಸಪ್ಪ ನಾಯಕನಿಗಂತೂ ವಾದಿರಾಜರೇ ಸರ್ವಸ್ವವಾಗಿದ್ದರು. ವಾದಿರಾಜರನ್ನು ಅನೇಕ ಸಾಮ್ರಾಟ ಸಾಮಂತರುಗಳು ಪ್ರಸಂಗಾಭರಣತೀರ್ಥ, ಷಡ್ದರ್ಶನ ಷಣ್ಮುಖ, ಸರ್ವಜ್ಞಕಲ್ಪ, ಕವಿಕುಲತಿಲಕ ಮುಂತಾದ ಮಹತ್ವದ ಪ್ರಶಸ್ತಿ ಗೌರವಗಳನ್ನು ನೀಡಿ ಗೌರವಿಸಿದರು.

 

ಶ್ರೀ ಭೂತರಾಜರಿಗೆ ಪರಮಾನುಗ್ರಹ  :

ದ್ವಾದಶಿಯ ದಿನದಂದು ಒಮ್ಮೆ ವ್ಯಾಸರಾಜರು ಮಠಕ್ಕೆ ಭೇಟಿ ಕೊಟ್ಟಿದ್ದರು. ಶ್ರೀ ವಾದಿರಾಜರು ಇನ್ನೇನು ಪೂಜೆಗೆ ಕೂಡಬೇಕು. ಅಷ್ಟರಲ್ಲಿ ಭೋಜನಕ್ಕೆ ಕುಳಿತ ವ್ಯಾಸರಾಜರು ವಾದಿರಾಜರನ್ನು ಕುರಿತು "ರಾಜರು ಬರದೆ ನಾವು ಹೇಗೆ ಭೋಜನ ಸ್ವೀಕರಿಸುವುದು ಅವರು ಬಂದು ಇಲ್ಲೇ ಪಕ್ಕದಲ್ಲೇ ಕುಳಿತುಕೊಳ್ಳಲಿ" ಎಂದರು. ಗುರುಗಳ ಮಾತಿನಂತೆ ವಾದಿರಾಜರು ಬಂದು ವ್ಯಾಸರಾಜರ ಪಕ್ಕದಲ್ಲಿ ಕುಳಿತು ಭೋಜನ ಮುಗಿಸಿದರು. ನಂತರ ಶಾಲ್ಮಲಿ ನದಿಯ ಬಳಿಗೆ ಬಂದು ಒಂದು ದೊಡ್ಡ ಎಲೆಯಲ್ಲಿ, ಅದೇ ತಾನೇ ಮಾಡಿದ ಅಷ್ಟು ಊಟವನ್ನು ಯೋಗಶಕ್ತಿಯಿಂದ ಮತ್ತೆ ಎಲೆ ಮೇಲೆ ತಂದರು. ನಂತರ ಮತ್ತೆ ಸ್ನಾನ ಮಾಡಿ ಪೂಜೆ ಮುಗಿಸಿ ನಂತರ ಬಂದು ಭೋಜನ ಮುಗಿಸಿದರು. ನಾರಾಯಣ ಎಂಬುವ ಶಿಷ್ಯ ಇದೆಲ್ಲವನ್ನು ದೂರದಿಂದಲೇ ಕದ್ದು ನೋಡುತ್ತಿದ್ದವನು ರಾಜರಿಗೆ ಇದೆಲ್ಲವನ್ನು ನೋಡಿದ ವಿಷಯ ತಿಳಿದು, ರಾಜರು ಅವನನ್ನು ಶಪಿಸಿದಾಗ ಅವನು ರಾಕ್ಷಸರೂಪಿಯಾಗಿಬಿಟ್ಟ.


ತನ್ನ ತಪ್ಪಿನ ಅರಿವಾದ ನಾರಾಯಣ ಶರ್ಮ ಶಾಪದ ಪರಿಹಾರವೇನೆಂದು ಕೇಳಲು ಶ್ರೀ ವಾದಿರಾಜರು ಹೇಳಿದರು : ನೀನು ಕಾಡುಗಳಲ್ಲಿ ತಿರುಗುತ್ತ ದಾರಿಹೋಕರಲ್ಲಿ "ಆ ಕಾ ಮಾ ವೈ ಕೋ ನಾ ಸ್ನಾತಹ" ಎಂದು ಕೇಳು ಯಾರು ನಿನಗೆ ಉತ್ತರ ನೀಡುತ್ತಾರೋ ಅಂದು ನಿನಗೆ ಶಾಪ ವಿಮೋಚನೆ ಎಂದು ಹೇಳಿದರು. ಅಂದಿನಿಂದ ನಾರಾಯಣ ಶರ್ಮನು ಕಾಡುಗಳಲ್ಲಿ ಅಲೆಯುತ್ತ ದಾರಿಹೋಕರಲ್ಲಿ ತನ್ನ ಪ್ರಶ್ನೆಯನ್ನು ಕೇಳುತ್ತಿದ್ದನು. ಆದರೆ ಯಾರಿಂದಲೂ ಉತ್ತರ ದೊರಕುತ್ತಿರಲಿಲ್ಲ. ಹಾಗೆಯೇ ತನ್ನ ರಾಕ್ಷಸ ಗುಣದಿಂದಾಗಿ ದಾರಿಹೋಕರನ್ನು ಕೊಂದು ತಿನ್ನುತ್ತಿದ್ದನು. ತನ್ನ ಶಿಷ್ಯನ ಈ ಪರಿಸ್ಥಿತಿ ಕೇಳಿ ರಾಜರು ತಾವೇ ಕಾಡಿಗೆ ಬಂದಾಗ ಆಗ ಆ ನಾರಾಯಣಭೂತವು ರಾಜರನ್ನೇ ಆ ಪ್ರಶ್ನೆ ಕೇಳಿತು. ಆಗ ನಿನ್ನಂಥ ಬ್ರಹ್ಮರಾಕ್ಷಸನು ಆಶ್ವಯುಜ, ಕಾರ್ತೀಕ, ಮಾಘ, ವೈಶಾಖ ಮಾಸಗಳಲ್ಲಿ ಸ್ನಾನ ಮಾಡುವುದಿಲ್ಲ ಎಂದ ಕೂಡಲೇ ಆತನಿಗೆ ಶಾಪ ವಿಮೋಚನೆಯಾಯಿತು. ಶಾಪ ವಿಮೋಚನೆ ಯಿಂದ ಆತನ ದೇಹ ಪ್ರಖರವಾಗಿ ಹೊಳೆಯುತ್ತಿತ್ತು. ಕಣ್ಣುಗಳು ಬೆಂಕಿಯ ಜ್ವಾಲೆಯಂತೆ ಜ್ವಲಿಸುತ್ತಿತ್ತು. ಶಾಪ ವಿಮೋಚನೆ ಮಾಡಿದ ವಾದಿರಾಜರಿಗೆ ಸಾಷ್ಟಾಂಗ ನಮಸ್ಕಾರ ಮಾಡಿದ ಪ್ರತಾಪ ರುದ್ರನು ತಮಗೆ ನಾನು ಶಾಶ್ವತವಾಗಿ ಸೇವೆ ಮಾಡಬೇಕೆಂಬ ಮಹದಾಸೆ ಇದೆ ಎಂದಾಗ ವಾದಿರಾಜರು ಅವರನ್ನು ಹರಸುತ್ತ ನೀನು ಭಾವೀರುದ್ರನಾಗಿ ಸೋದೆಯ ಕ್ಷೇತ್ರಪಾಲಕನಾಗಿ ಮುಂದೆ ಭೂತರಾಜರು ಎಂದು ಪ್ರಸಿದ್ಧಿ ಪಡೆಯುತ್ತೀಯ ಎಂದರು. ಅಂದಿನಿಂದ ಭೂತರಾಜರು ಶ್ರೀ ವಾದಿರಾಜರಿಗೆ ಸೇವೆ ಸಲ್ಲಿಸುತ್ತಲೇ ಇದ್ದಾರೆ.

 

ತಾಯಿಯ ಲಕ್ಷಾಭರಣದ ಹರಕೆ ತೀರಿಸಿದ್ದು :

ವಾದಿರಾಜರ ತಾಯಿ ಗೌರೀದೇವಿ ಪುತ್ರಸಂತಾನವಾದರೆ ತಿಮ್ಮಪ್ಪನಿಗೆ ಲಕ್ಷಾಭರಣಗಳನ್ನು ಅರ್ಪಿಸುತ್ತೇನೆ ಎಂದು. ಈ ವಿಷಯವನ್ನು ರಾಜರಿಗೆ ತಾಯಿ ತಿಳಿಸಿದಾಗ, ಮಹಾಭಾರತದ ಲಕ್ಷ ಶ್ಲೋಕಗಳ ಕಠಿಣ ತಾತ್ಪರ್ಯವನ್ನು ವಿವರಿಸಿ ಬರೆದು, ವ್ಯಾಸಭಾರತದ ಹಿನ್ನೆಲೆಯಲ್ಲಿ ಕೋಶಗಳನ್ನು ತಮ್ಮದೇ ಆದ ನಿರೂಪಣ ನೈಪುಣ್ಯದಿಂದ 'ಲಕ್ಷಾಲಂಕಾರ'ವಾಗಿ ರಚಿಸಿ ಸಮರ್ಪಣ ಮಾಡಿ ತಿಮ್ಮಪ್ಪನಿಗೆ ಅರ್ಪಿಸಿ ತಾಯಿಯ ಹರಕೆ ತೀರಿಸಿದರು. ಈ ಭೂಮಿಯಲ್ಲಿ ಅವತರಿಸಿ ಭೂಮಿಯನ್ನೇ ಪುಣ್ಯಪ್ರದವಾಗಿ ಮಾಡಿದವರು. ಅದ್ಭುತವಾದ ಕೃತಿಗಳ ಮೂಲಕ ಮನುಕುಲವನ್ನು ಉದ್ಧರಿಸಲು ಕಾರಣರಾದವರು.


ಶ್ರೀ ವಾದಿರಾಜ ಗುರುಗಳು 120 ವರುಷ ತುಂಬು ಜೀವನ ನಡೆಸಿ, ಹಯವದನನ ಸೇವೆಯಲ್ಲಿ ನಿರತರಾಗಿ ಸ್ವಇಚ್ಛೆಯಿಂದ ಸಶರೀರವಾಗಿ ವೃಂದಾವಸ್ಥರಾಗಿ, ದೇವಲೋಕಕ್ಕೆ ನಡೆದ ಮಹಾನ್ ಯೋಗಿಗಳು, ರಾಜರು ಶ್ರೀ ವಾದಿರಾಜರು.



-ಡಾ.ವಿದ್ಯಾಶ್ರೀ ಕುಲಕರ್ಣಿ. ಮಾನವಿ.

ಕನ್ನಡ ಅಧ್ಯಾಪಕಿ. ಪೂರ್ಣಪ್ರಮತಿ ಶಾಲೆ ಬೆಂಗಳೂರು.



  ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top