ಎಸ್‌ಡಿಎಂ ಮಹಿಳಾ ಐಟಿಐಯಲ್ಲಿ ಜೀವನ ಕೌಶಲ್ಯ ಮಾಹಿತಿ ಕಾರ್ಯಾಗಾರ
ಉಜಿರೆ: ಪಾಠ ಪಠ್ಯಕ್ರಮ ಇದು ಪರೀಕ್ಷೆಗೆ ಮಾತ್ರ ಸೀಮಿತವಾಗಿದ್ದು, ಮನುಷ್ಯ ಉದ್ಯೋಗಕ್ಕೆ ಹೋಗುವಾಗ ಬೇಕಾಗಿರುವುದು ಜೀವನ ಕೌಶಲ. ಅಲ್ಲಿ ವ್ಯಕ್ತಿಯ ನಡವಳಿಕೆ, ವ್ಯಕ್ತಿಯ ವ್ಯಕ್ತಿತ್ವ, ಶಿಸ್ತು ಮತ್ತು ಸಂಸ್ಕಾರ ಅನ್ವಯ ಆಗುತ್ತದೆ. ಮನುಷ್ಯ ಏನಾದರೂ ಸಾಧನೆ ಮಾಡಬೇಕಾಗಿದ್ದಲ್ಲಿ ತಾಳ್ಮೆ ಅತೀ ಅಗತ್ಯ” ಎಂದು ಉಜಿರೆಯ ಎಸ್‌ಡಿಎಂ ಶಿಕ್ಷಣ ಸಂಸ್ಥೆ (ರಿ.) ಯ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಬಿ. ಸೋಮಶೇಖರ್ ಶೆಟ್ಟಿ ಹೇಳಿದರು.
ಉಜಿರೆಯ ಎಸ್ ಡಿ ಎಂ ಮಹಿಳಾ ಐಟಿಐ, ಎಸ್ ಡಿ ಎಂ ಶಿಕ್ಷಕರ ತರಬೇತಿ ಸಂಸ್ಥೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ನೆಹರು ಯುವ ಕೇಂದ್ರ ಮಂಗಳೂರು ಇವುಗಳ ಜಂಟಿ ಸಹಯೋಗದಲ್ಲಿ ಇಂದು (ಮಾ. 14) ಎಸ್‌ಡಿಎಂ ಮಹಿಳಾ ಐಟಿಐ ಸಂಸ್ಥೆಯಲ್ಲಿ ಆಯೋಜಿಸಿದ್ದ ‘ವೃತ್ತಿಪರ ಹಾಗೂ ಜೀವನ ಕೌಶಲ್ಯ’ ಮಾಹಿತಿ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
“ಆಡುವ ಮಾತು ಇನ್ನೊಬ್ಬರಿಗೆ ಬೆಳಕಾಗಿರಬೇಕು ಹೊರತು ಬೆಂಕಿ ಆಗಿರಬಾರದು. ಬದಲಾವಣೆಗೆ ನಾವು ಬದಲಾಗದಿದ್ದರೆ ಬದಲಾವಣೆ ನಮ್ಮನ್ನು ಬದಲಿಸುತ್ತದೆ” ಎಂದು ಅವರು ಕಿವಿಮಾತು ಹೇಳಿದರು.
ಸಂಪನ್ಮೂಲ ವ್ಯಕ್ತಿ, ಪುತ್ತೂರಿನ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಮೇಲ್ವಿಚಾರಕ ಶ್ರೀಕಾಂತ್ ಬಿರಾವು ಮಾತನಾಡಿ, ಜೀವನ ಕೌಶಲವು ವ್ಯಕ್ತಿಯ ವ್ಯಕ್ತಿತ್ವವನ್ನು ವೃದ್ಧಿಸಿ ಅವನ ಮೌಲ್ಯವನ್ನು ಹೆಚ್ಚು ಮಾಡುತ್ತದೆ ಎಂದರು.
ವೇದಿಕೆಯಲ್ಲಿ ಉಪಸ್ಥಿತರಿದ್ದ ಉಜಿರೆ ಎಸ್.ಡಿ.ಎಂ. ಶಿಕ್ಷಕರ ತರಬೇತಿ ಸಂಸ್ಥೆಯ ಪ್ರಾಂಶುಪಾಲ ಸ್ವಾಮಿ ಕೆ.ಎ. ಕಾರ್ಯಕ್ರಮಕ್ಕೆ ಶುಭ ಕೋರಿದರು.
ಅಧ್ಯಕ್ಷತೆ ವಹಿಸಿದ್ದ ಎಸ್.ಡಿ.ಎಂ. ಮಹಿಳಾ ಐಟಿಐ ಸಂಸ್ಥೆಯ ಪ್ರಾಂಶುಪಾಲ ವಿ. ಪ್ರಕಾಶ್ ಕಾಮತ್ ಮಾತನಾಡಿ, ಉತ್ತಮ ದುಡಿಮೆಗಾಗಿ ಉತ್ತಮ ವಿದ್ಯಾಭ್ಯಾಸ ಮತ್ತು ಮಾಡುವ ಉದ್ಯೋಗಕ್ಕೆ ತಕ್ಕಂತೆ ಗೌರವ ಆದರಗಳನ್ನು ಬೆಳೆಸಿಕೊಳ್ಳುವುದು, ಸಮಯಪಾಲನೆ, ಶಿಸ್ತು, ಒಳ್ಳೆಯ ಗುಣ, ಒಳ್ಳೆಯ ಮಾತು ಮತ್ತು ಉತ್ತಮ ನಡವಳಿಕೆಗಳನ್ನು ಬೆಳೆಸಿಕೊಳ್ಳುವುದು ಅಗತ್ಯ ಎಂದು ವಿದ್ಯಾರ್ಥಿಗಳಿಗೆ ತಿಳಿಸಿದರು.
ಕಾರುಣ್ಯ ಪ್ರಾರ್ಥಿಸಿದರು. ಎಸ್.ಡಿ.ಎಂ. ಮಹಿಳಾ ಐಟಿಐ ಸಂಸ್ಥೆಯ ಕಿರಿಯ ತರಬೇತಿ ಅಧಿಕಾರಿ ಸಂಧ್ಯಾ ಸ್ವಾಗತಿಸಿ, ನೆಹರೂ ಯುವ ಕೇಂದ್ರ ಮಂಗಳೂರು ಪ್ರತಿನಿಧಿ ಸಂಘಟಕ ಸಾಂತಪ್ಪ ಧನ್ಯವಾದಗೈದರು. ಶಾಲಿನಿ ಡಿ. ಕಾರ್ಯಕ್ರಮ ನಿರೂಪಿಸಿದರು.
ಶ್ರೀಕಾಂತ್ ಬಿರಾವು, ಸಾಂತಪ್ಪ ಹಾಗೂ ‘ಉನ್ನತಿ’ ಎನ್‌ಜಿಒ ದ ಸಂಪನ್ಮೂಲ ವ್ಯಕ್ತಿ ದಿವ್ಯ ಎ. ಅವರು ಕಾರ್ಯಾಗಾರ ನಡೆಸಿಕೊಟ್ಟರು. ಕಿನ್ನಿಗೋಳಿಯ ಬ್ಯುಟೀಷಿಯನ್ ವಿಜಯಶ್ರೀ ಬ್ಯುಟೀಷಿಯನ್ ತರಬೇತಿ ಕುರಿತು ಮಾಹಿತಿ ನೀಡಿದರು.
ಇದೇ ಸಂದರ್ಭದಲ್ಲಿ ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಆಯುಕ್ತಾಲಯ (ದಕ್ಷಿಣ ಕನ್ನಡ ಜಿಲ್ಲಾ ಉದ್ಯೋಗ ಮತ್ತು ವಿನಿಮಯ ಕಛೇರಿ) ಮಂಗಳೂರು ವತಿಯಿಂದ ಉದ್ಯೋಗ ನೋಂದಣಿ ಪ್ರಕ್ರಿಯೆ ನಡೆಸಲಾಯಿತು. ಕೌನ್ಸಿಲರ್ & ಟ್ರೈನರ್ (ಉದ್ಯೋಗ ವಿನಿಮಯ ಕಛೇರಿ ದ.ಕ., ಮಂಗಳೂರು) ಮಂಜೂಷಾ ಪಿ. ಪ್ರಕ್ರಿಯೆ ನಡೆಸಿಕೊಟ್ಟರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ