ದೀಕ್ಷಾನ್ವಯ : ಎಸ್.ಡಿ.ಎಂ. ಬಿ.ಎಡ್ ಕಾಲೇಜಿನ ಪ್ರಾರಂಭೋತ್ಸವ

Upayuktha
0

 


ಉಜಿರೆ: ಶಿಕ್ಷಕನಾದವನು ತರಗತಿಗೆ ಪಾಠ ಮಾಡುವುದರ ಮೊದಲು ವಿದ್ಯಾರ್ಥಿಗಳ ಮನಸ್ಸು ಹೃದಯವನ್ನು ಅರ್ಥೈಸಿಕೊಳ್ಳಬೇಕು.  ಜೊತೆಜೊತೆಗೆ ಪೂರ್ವ ಸಿದ್ಧತೆಯು ಕೂಡಾ ಅತೀ ಮುಖ್ಯವಾದವು.  ಅಧ್ಯಾಪಕನಾದವನ ಜ್ಞಾನಕ್ಕಿಂತ ವರ್ತನೆಯು ಸಮಾಜದಲ್ಲಿ ಎದ್ದು ಕಾಣುತ್ತದೆ.  ಹಾಗಾಗಿ ತನ್ನಲ್ಲಿ ಚಾರಿತ್ಯ್ರವನ್ನು ನಿರ್ಮಾಣ ಮಾಡಿಕೊಳ್ಳುವುದರ ಮೂಲಕ ತನ್ನ ವಿದ್ಯಾರ್ಥಿಗಳಿಗೆ ಮಾದರಿಯಾಗಬೇಕು.  ವಿದ್ಯಾರ್ಥಿಯು ಶಿಕ್ಷಣದ ಕಾಲುಭಾಗವನ್ನು ಮಾತ್ರ ಶಿಕ್ಷಕರಿಂದ ಕಲಿತು, ಕಾಲು ಭಾಗವನ್ನು ತನ್ನ ಸಹಪಾಠಿಗಳಿಂದ ಕಲಿತು ಉಳಿದರ್ಧ ಭಾಗವನ್ನು ತನ್ನ ಅನುಭವಗಳಿಂದ ಅರಿಯುತ್ತಾನೆ ಎಂದು ಶ್ರೀ ಧ. ಮಂ. ಕಾಲೇಜಿನ ಸಂಸ್ಕೃತ ವಿಭಾಗದ ಮುಖ್ಯಸ್ಥರಾದ ವಿದ್ವಾನ್    ಡಾ. ಶ್ರೀಧರ್ ಎನ್ ಭಟ್ ಹೇಳಿದರು.


ಇಲ್ಲಿನ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಮಹಾವಿದ್ಯಾಲಯ (ಬಿ.ಎಡ್.) ದಲ್ಲಿ ಮಾರ್ಚ್ 20 ರಂದು 2023-24 ನೇ ಸಾಲಿನ ಬಿ.ಎಡ್. ತರಗತಿಯ ಪ್ರಾರಂಭೋತ್ಸವ “ದೀಕ್ಷಾನ್ವಯ” ಕಾರ್ಯಕ್ರಮ ಉದ್ಘಾಟಿಸಿ ಪ್ರಶಿಕ್ಷಣಾರ್ಥಿಗಳನ್ನುದ್ದೇಶಿಸಿ ಮಾತನಾಡಿದರು.


ಮುಖ್ಯ ಅತಿಥಿಗಳಾಗಿ ಮಾತನಾಡಿದ ಅವರು ರಾಮಕೃಷ್ಣ ಪರಮಹಂಸರು ಶಾಲಾ ಶಿಕ್ಷಣವನ್ನು ಪಡೆಯದಿದ್ದರೂ ಸಹ ನರೇಂದ್ರನನ್ನು ವಿವೇಕಾನಂದರನ್ನಾಗಿ ಪರಿವರ್ತಿಸಿ ಜಗತ್ತಿಗೆ ನೀಡಿದರು.  ಶಿಕ್ಷಕನು ರೈತನಿದ್ದಂತೆ. ಹೇಗೆ ತನ್ನ ಕೃಷಿಯಲ್ಲಿ ಬೆಳೆಗಳ ನಡುವಿರುವ ಕಳೆಗಳನ್ನು ನಿರ್ಮೂಲನೆ ಮಾಡುವಂತೆ ತನ್ನ ವಿದ್ಯಾರ್ಥಿಗಳಲ್ಲಿನ ಲೋಪದೋಷಗಳನ್ನು ಬಗೆಹರಿಸುವ ಕಾರ್ಯ ಎಸಗುತ್ತಾನೆ ಎಂಬುದಾಗಿ ಹೊಸದಾಗಿ ದಾಖಲಾದ ಪ್ರಥಮ ವರ್ಷದ ಪ್ರಶಿಕ್ಷಣಾರ್ಥಿಗಳಿಗೆ ಕಿವಿ ಮಾತು ಹೇಳಿದರು.


ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಮತ್ತೋರ್ವ ಅತಿಥಿಗಳಾದ ಉಜಿರೆ ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಬಿ. ಸೋಮಶೇಖರ ಶೆಟ್ಟಿ ಮಾತನಾಡಿ ಸಾಧನೆಗೆ ಅಸಾಧ್ಯವಾದುದು ಯಾವುದೂ ಇಲ್ಲ. ಸಾಧನೆ ಇಲ್ಲದೆ ಸತ್ತರೆ ಸಾವಿಗೆ ಅವಮಾನ. ಅದೇ ರೀತಿಯಾಗಿ ಆದರ್ಶ ಇಲ್ಲದೆ ಸತ್ತರೆೆ ಬದುಕಿಗೆ ಅವಮಾನ.  ಜಗತ್ತಿನ ಶ್ರೇಷ್ಠ ಸಂಪತ್ತು ಮಾನವನ ವ್ಯಕ್ತಿತ್ವದಲ್ಲಿ ಅಡಗಿದೆ. ಉತ್ತಮ ಶಿಕ್ಷಕನಾದವನು ನಿರಂತರ ಅಧ್ಯಯನಶೀಲ, ವೃತ್ತಿ ಗೌರವ ಹಾಗೂ ಹೊಸತನಕ್ಕೆ ತೆರೆದುಕೊಳ್ಳುವುದು ಮುಂತಾದ ಗುಣಲಕ್ಷಣವನ್ನು ಮೈಗೂಡಿಸಿಕೊಂಡಿರಬೇಕು.  ಈ ಮೂಲಕ ಶಿಕ್ಷಕರು ಇತರರಿಗೆ ಮಾದರಿ ಆಗಿರಬೇಕು ಎಂದರು.


ಅಧ್ಯಕ್ಷೀಯ ನುಡಿಗಳನ್ನಾಡಿದ ಕಾಲೇಜಿನ ಪ್ರಾಂಶುಪಾಲರಾದ ಶ್ರೀ ಸಂತೋಷ್ ಆಲ್ಬರ್ಟ್ ಸಲ್ಡಾನ ಪ್ರತಿಯೊಬ್ಬ ಶಿಕ್ಷಕನೂ ದೀಪವಿದ್ದಂತೆ.  ತನ್ನನ್ನು ತಾನು ಸುಟ್ಟುಕೊಂಡಾಗ ಮಾತ್ರ ಮತ್ತೊಬ್ಬರಿಗೆ ಬೆಳಕು ಕೊಡಲು ಸಾಧ್ಯ.  ಇದರಲ್ಲಿ ತಾನು ಕಳೆದುಕೊಳ್ಳುವುದಕ್ಕಿಂತ ಗಳಿಸಿಕೊಳ್ಳುವುದೇ ಹೆಚ್ಚು ಎಂಬುದಾಗಿ ಹೇಳಿದರು.


ಕಾರ್ಯಕ್ರಮವನ್ನು ಭಾರತದ ನಕ್ಷೆಯ ಮೇಲೆ ಹಣತೆಗಳನ್ನು ಜೋಡಿಸುವುದರ ಮೂಲಕ ನೂತನ ಶೈಕ್ಷಣಿಕ ವರ್ಷಕ್ಕೆ ಪ್ರಶಿಕ್ಷಣಾರ್ಥಿಗಳನ್ನು ಬರಮಾಡಿಕೊಳ್ಳಲಾಯಿತು.  ಕಾಲೇಜಿನ ಉಪನ್ಯಾಸಕರಾದ ವಿದ್ಯಾಶ್ರೀ ಪಿ, ತಿರುಮಲೇಶ್ ರಾವ್ ಎನ್ ಕೆ, ಹರೀಶ್ ಕುಮಾರ್, ಅನುಷಾ ಡಿ ಜೆ,  ಚೈತ್ರ ಹಾಗೂ ಪೋಷಕರು ಮತ್ತು ದ್ವಿತೀಯ ವರ್ಷದ ಪ್ರಶಿಕ್ಷಣಾರ್ಥಿಗಳು ಉಪಸ್ಥಿತರಿದ್ದರು.


ಪ್ರಶಿಕ್ಷಣಾರ್ಥಿಗಳಾದ ಶ್ರೀರಕ್ಷಾ ಸ್ವಾಗತಿಸಿ, ಪೂಜಾಶ್ರೀ ವಂದಿಸಿ, ಆಧ್ಯ ಅತಿಥಿ ಪರಿಚಯ ಮಾಡಿದರು. ಕೀರ್ತನ್ ಕುಮಾರ್ ಕಾರ್ಯಕ್ರಮ ನಿರೂಪಿಸಿದರು. 



 ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter   

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top