ಸಾಮಾಜಿಕ ಕಾರ್ಯಕರ್ತ ಈಶ್ವರ್ ಮಲ್ಪೆ, ರವಿ ಕಟಪಾಡಿಗೆ ಅಯೋಧ್ಯಾ ಮಂಡಲೋತ್ಸವ ಪುರಸ್ಕಾರ

Upayuktha
0


  • ಲೋಕ ಮೆಚ್ಚುವ ಕಾಯಕಕ್ಕೆ ಲೋಕಾಭಿರಾಮನ ಅನುಗ್ರಹದ ಬಲ 
  • ಮನಃಪೂರ್ವಕ ಆಶೀರ್ವದಿಸಿದ ಪೇಜಾವರ ಶ್ರೀಗಳು 
  • ತಲಾ ಒಂದು ಕೆ ಜಿ ತೂಕದ ರಜತ ಕಲಶ ಪ್ರಸಾದವಿತ್ತು ಸಂಮಾನ 


ಅಯೋಧ್ಯೆ: ರಾಮರಾಜ್ಯದ ಪರಿಕಲ್ಪನೆಯಲ್ಲಿ ನಿಸ್ಪೃಹವಾಗಿ ದೇಶದ ಒಳಿತಿನ ಕಾಯಕಕ್ಕೆ ತಮ್ಮನ್ನು ಅರ್ಪಿಸಿಕೊಂಡ ಉಡುಪಿಯ ಮತ್ತಿಬ್ಬರು ಸಾಮಾಜಿಕ ಧುರೀಣರಿಗೆ ಮಂಗಳವಾರ ಅಯೋಧ್ಯೆಯಲ್ಲಿ ಮಂಡಲೋತ್ಸವ ಪುರಸ್ಕಾರದೊಂದಿಗೆ ರಾಮನ ಪ್ರಸಾದವಿತ್ತು ಅಭಿನಂದಿಸಲಾಗಿದೆ.


ನದಿ ಸಮುದ್ರಗಳಲ್ಲಿ ನೀರಿನ‌ಸೆಳೆತಕ್ಕೆ ಸಿಲುಕಿ ಪ್ರಾಣೋತ್ಕ್ರಮಣ ಸ್ಥಿತಿಯಲ್ಲಿದ್ದ ಸುಮಾರು ಒಂದು ಸಾವಿರಕ್ಕೂ ಹೆಚ್ಚು ಜನರನ್ನು ಪ್ರಾಣಾಪಾಯದಿಂದ ಪಾರುಮಾಡಿದ ಜೀವರಕ್ಷಕ ಉಡುಪಿ ಮಲ್ಪೆಯ ಈಶ್ವರ್ ಹಾಗೂ ಶ್ರೀ ಕೃಷ್ಣಾಷ್ಟಮೀ ಗಣೇಶಚತುರ್ಥೀ ಮೊದಲಾದ ಪರ್ವಸಂದರ್ಭಗಳಲ್ಲಿ ಆಕರ್ಷಕ ವೇಷ ತೊಟ್ಟು ಉತ್ಸವದ ವೈಭವಕ್ಕೆ ಮೆರುಗು ತುಂಬಿ ಅದರಲ್ಲಿ ಸಂಗ್ರಹವಾದ ಸುಮಾರು ಒಂದೂವರೆ ಕೋಟಿಗೂ ಮಿಗಿಲಾದ ಮೊತ್ತವನ್ನು ಬಡಬಗ್ಗರ ಚಿಕಿತ್ಸೆಗೆ ವೆಚ್ಚಮಾಡಿ ದೀನಬಂಧು ರವಿ ಕಟಪಾಡಿಯವರಿಗೆ ಶ್ರೀರಾಮದೇವರಿಗೆ ನಡೆಸಲಾದ ಕಲಶಾಭಿಷೇಕದಲ್ಲಿ ತಲಾ ಒಂದು ಕೆ.ಜಿ ತೂಕದ ಹಾಗೂ ತಲಾ ಒಂದು ಲಕ್ಷ ರೂ ಮೌಲ್ಯದ ರಜತಕಲಶವನ್ನು ಶ್ರೀರಾಮನ ಅನುಗ್ರಹ ಪ್ರಸಾದ ರೂಪದಲ್ಲಿ ನೀಡಿ ಅಭಿನಂದಿಸಲಾಯಿತು.

 


ಶ್ರೀ ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ತಮ್ಮ ನೇತೃತ್ವದಲ್ಲಿ ಅಯೋಧ್ಯೆ ರಾಮಮಂದಿರ ದಲ್ಲಿ ಸ್ವತಃ ಮುತುವರ್ಜಿ ವಹಿಸಿ ಈ ಇಬ್ಬರನ್ನು ವಿಮಾನದ ಮೂಲಕ ಶ್ರೀ ಮಠದ ವೆಚ್ಚದಲ್ಲೇ ಅಯೋಧ್ಯೆಗೆ ಕರೆಸಿ ಈ ವಿಶೇಷ ಪುರಸ್ಕಾರ ನೀಡಿದ್ದಾರೆ.


ಅಲ್ಲದೇ ಸಂಜೆ ನಡೆದ ಪಲ್ಲಕ್ಕಿ ಉತ್ಸವದಲ್ಲೂ ಇಬ್ಬರಿಗೂ ಶ್ರೀರಾಮದೇವರ ಪ್ರಸಾದ ನೀಡಿ ಇಬ್ಬರೂ ನಡೆಸಿದ ಲೋಕೋತ್ತರ ಕಾರ್ಯವನ್ನು ಮನಸಾ ಕೊಂಡಾಡಿದರು.



ಈ ಸಂದರ್ಭ ಮಾಜಿ ಶಾಸಕ ಕೆ ರಘುಪತಿ ಭಟ್, ಶ್ರೀಗಳ ಆಪ್ತರಾದ ವಿಷ್ಣು ಆಚಾರ್ಯ, ಕೃಷ್ಣ ಭಟ್ ಶ್ರೀನಿವಾಸ ಪ್ರಸಾದ್ ಮೈಸೂರು, ವಾಸುದೇವ ಭಟ್ ಪೆರಂಪಳ್ಳಿ, ಮಾಜಿ ನಗರಸಭಾ ಸದಸ್ಯ ಮಹೇಶ್ ಠಾಕೂರ್, ಸುವರ್ಧನ್ ನಾಯಕ್, ಉಪಸ್ಥಿತರಿದ್ದರು.


ಸಂಜೆ ಉತ್ಸವದಲ್ಲಿ ಭಾಗವಹಿಸಿದ ಶ್ರೀ ಸುಬ್ರಹ್ಮಣ್ಯ ಮಠದ ಶ್ರೀ ವಿದ್ಯಾಪ್ರಸನ್ನತೀರ್ಥರು, ಸಂಸದ ನಳಿನ್ ಕುಮಾರ್ ಕಟೀಲ್, ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿಯವರೂ ಈ ಇಬ್ಬರನ್ನೂ ಅಭಿನಂದಿಸಿದ ವಿಷಯ ತಿಳಿದು ಶುಭಕೋರಿದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top