ಮೇ 26 ರಂದು ಅಡ್ಯಾರ್ ಗಾರ್ಡನ್ ನಲ್ಲಿ ಪಟ್ಲ ಸಂಭ್ರಮ 2024

Upayuktha
0

ಯಕ್ಷಧ್ರುವ ಯಕ್ಷ ಶಿಕ್ಷಣದ ಮೂಲಕ ವಿದ್ಯಾರ್ಥಿಗಳಲ್ಲಿ ಆತ್ಮ ವಿಶ್ವಾಸ ಮೂಡಿದೆ: ಪಟ್ಲ ಸತೀಶ್ ಶೆಟ್ಟಿ




ಮಂಗಳೂರು: ಯಕ್ಷಧ್ರುವ ಯಕ್ಷ ಶಿಕ್ಷಣದ ಮೂಲಕ ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ ಮೂಡಿದೆ. ಮೂಡಬಿದ್ರೆಯ ಆಳ್ವಾಸ್ ಆವರಣದಲ್ಲಿ ನಡೆದ ಯಕ್ಷ ಶಿಕ್ಷಣದಲ್ಲಿ ಸುಮಾರು ನಾಲ್ಕು ಸಾವಿರ ವಿದ್ಯಾರ್ಥಿಗಳು ಯಕ್ಷಗಾನ ಕಲೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು ಎಂದು ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ನ ಸ್ಥಾಪಕಾಧ್ಯಕ್ಷ ಪಟ್ಲ ಸತೀಶ್ ಶೆಟ್ಟಿ ತಿಳಿಸಿದರು.



ಬಲ್ಲಾಲ್ ಬಾಗ್ ನಲ್ಲಿರುವ ಪತ್ತ್ ಮುಡಿ ಸೌಧದಲ್ಲಿ ನಡೆದ ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ನ ಯಕ್ಷಧ್ರುವ ಪಟ್ಲ ಸಂಭ್ರಮ 2024 ಮೇ 26 ರಂದು ಜರಗಿಸುವುದೆಂದು ತೀರ್ಮಾನಿಸಲಾಗಿ ಆ ದಿನದ ಕಾರ್ಯಕ್ರಮಗಳ ಬಗ್ಗೆ ಕರೆದಿರುವ ಸಭೆಯಲ್ಲಿ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿದರು. 

ಪಟ್ಲ ಫೌಂಡೇಶನ್ ಟ್ರಸ್ಟ್ ಈ ವರೆಗೆ 24 ಮನೆಗಳನ್ನು ನಿರ್ಮಿಸಿ ಕಲಾವಿದರಿಗೆ ಹಸ್ತಾಂತರ ಮಾಡಿದೆ. ಯಕ್ಷಾಶ್ರಯ ವಸತಿ ಯೋಜನೆಯಡಿ 25 ನೇ ಮನೆಯ ಹಸ್ತಾಂತರ ಮಾಚ್೯ 22 ರಂದು ಕುಂಬಳೆಯ ಸಮೀಪ ನಡೆಯಲಿರುವುದು.


ಈಗಾಗಲೇ ಸುಮಾರು 200 ಮನೆಗಳ ರಿಪೇರಿ ದುರಸ್ತಿ ಕಾಮಗಾರಿಗೆ ಆರ್ಥಿಕ ಸಹಾಯ ಮಾಡಲಾಗಿದೆ. ಅದೇ ರೀತಿ ಆರೋಗ್ಯ, ವಿದ್ಯಾರ್ಥಿವೇತನ, ಶಿಕ್ಷಣ, ವೈದ್ಯಕೀಯ ನೆರವು ಇನ್ನಿತರ ವಿಚಾರಗಳಿಗೆ ಸಂಬಂಧಿಸಿದಂತೆ ಕಲಾವಿದರಿಗೆ ಕೋಟ್ಯಾಂತರ ನೆರವು ನೀಡಲಾಗಿದೆ. ಈ ವರ್ಷವೂ ಯಕ್ಷಗಾನ ಕಲಾವಿದರಿಗಲ್ಲದೆ ನಾಟಕ ರಂಗಭೂಮಿ ಕಲಾವಿದರು ಹಾಗೂ ದೈವಾರಾದನೆಯ ನರ್ತನ ಪರಿಚಾರಕರಿಗೂ ವಿಮಾ ಸೌಲಭ್ಯವನ್ನು ವಿಸ್ತರಿಸುವ ಯೋಜನೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.



2024 ನೇ ಸಾಲಿನ ಪಟ್ಲ ಪ್ರಶಸ್ತಿಯನ್ನು ಬಡಗುತಿಟ್ಟಿನ ಸುಪ್ರಸಿದ್ದ ಹಿರಿಯ ಕಲಾವಿದ ಕೊಂಡದಗುಳಿ ರಾಮಚಂದ್ರ ಹೆಗ್ಗಡೆ ಅವರಿಗೆ ನೀಡಲಾಗುವುದು. ಪಟ್ಲ ಸಂಭ್ರಮದಲ್ಲಿ ಪಟ್ಲ ಫೌಂಡೇಶನ್ ನ ಮಹಾಪೋಷಕರು, ಮಹಾದಾನಿಗಳು ಉದ್ಯಮಿ ಬರೋಡಾ ಶಶಿಧರ ಶೆಟ್ಟಿ ದಂಪತಿಗಳನ್ನು ವಿಶೇಷವಾಗಿ  ಸನ್ಮಾನಿಸಲಾಗುವುದು. ಯಕ್ಷಧ್ರುವ ಕಲಾ ಗೌರವವನ್ನು ಯಕ್ಷಗಾನ ಮಾತ್ರವಲ್ಲದೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ 15 ಮಂದಿ ಸಾಧಕರನ್ನು ಗುರುತಿಸಿ ನೀಡಲಾಗುವುದು ಎಂದು ಪಟ್ಲ ಸತೀಶ್ ಶೆಟ್ಟಿ ತಿಳಿಸಿದರು.



ಯುರೋಪ್‌ನಲ್ಲಿ ಪಟ್ಲ ಫೌಂಡೇಶನ್ ಘಟಕ ರಚನೆ: ಯುರೋಪ್ ರಾಷ್ಟ್ರದಲ್ಲೂ ಈ ವರ್ಷ ಪಟ್ಲ ಫೌಂಡೇಶನ್ ಟ್ರಸ್ಟ್ ನ ಘಟಕ ರಚನೆಯಾಗಲಿದೆ ಎಂದು ಪಟ್ಲ ಸತೀಶ್ ಶೆಟ್ಟಿ ತಿಳಿಸಿದರು.


ಸಭೆಯಲ್ಲಿ ಉಪಸ್ಥಿತರಿದ್ದ ಯಕ್ಷಗಾನ ತಾಳಮದ್ದಲೆಯ ಅರ್ಥಧಾರಿ ಉಜಿರೆ ಅಶೋಕ ಭಟ್ ಮಾತನಾಡಿ, ಪಟ್ಲ ಫೌಂಡೇಶನ್ ಯಕ್ಷ ಶಿಕ್ಷಣದ ಮೂಲಕ ಮಕ್ಕಳನ್ನು ಯಕ್ಷಗಾನದ ವ್ಯಾಪ್ತಿಗೆ ತಂದಾಗ ಕಲೆಯ ವಿಸ್ತರಣೆಯಾಗುತ್ತದೆ. ಪಟ್ಲ ಫೌಂಡೇಶನ್ ಟ್ರಸ್ಟ್ ಯಕ್ಷ ಶಿಕ್ಷಣ ಕ್ರಾಂತಿಯನ್ನೇ ಮಾಡಿದೆ. ಯಕ್ಷ ಶಿಕ್ಷಣದ ಮೂಲಕ ನಾಲ್ಕು ಸಾವಿರ ಮಕ್ಕಳಿಗೆ ಯಕ್ಷ ಕಲೆಯ ಪರಿಚಯವಾಗಿದೆ ಎಂದವರು ತಿಳಿಸಿದರು. 


ಸಭೆಯಲ್ಲಿ ಮಂದಾರ್ತಿ ದುರ್ಗಾಪರಮೇಶ್ವರಿ ದೇವಸ್ಥಾನದ ಮಾಜಿ ಟ್ರಸ್ಟಿ ಶೇಡಿಕೋಡ್ಲು ವಿಠಲ ಶೆಟ್ಟಿಯವರು ಫೌಂಡೇಶನ್ ಕೇವಲ ಕಲಾವಿದರ ಕಾಮಧೇನು ಮಾತ್ರವಲ್ಲ ಯಕ್ಷಗಾನವನ್ನು ಕಲಿಸಿ ಉಳಿಸಿ ಬೆಳೆಸುವಂತಹ ಮಹಾತ್ಕರ್ಯ ಮಾಡುತ್ತಿರುವುದು ಕಾರ್ಯವೆಂದರು.



ಈ ಸಂದರ್ಭದಲ್ಲಿ ಪೂಂಜಾಲಕಟ್ಟೆ ಘಟಕದಿಂದ ಯಶಸ್ವಿಯಾಗಿ ಜರಗಿದ ವಾರ್ಷಿಕೋತ್ಸವ ಕಾರ್ಯಕ್ರಮದ ನಂತರ ಉಳಿಕೆಯಾದ ಮೊತ್ತವನ್ನು ಕೇಂದ್ರೀಯ ಸಮಿತಿಗೆ ಅಧ್ಯಕ್ಷರಾದ ಯಶೋಧರ ಶೆಟ್ಟಿ ತಂಡದವರು ದೇಣಿಗೆ ರೂಪದಲ್ಲಿ ಅರ್ಪಿಸಿದರು. ಹಾಗೂ ಕೇಂದ್ರ ಮಹಿಳಾ ಘಟಕದ ವತಿಯಿಂದ ಮಾರ್ಚ್ 22ರಂದು ಜರಗುವ 7ನೇ ವಾರ್ಷಿಕೋತ್ಸವದ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆಗೊಳಿಸಲಾಯಿತು


ಸಭೆಯಲ್ಲಿ ವಿವಿಧ ಘಟಕಗಳಿಂದ ಆಗಮಿಸಿದ ಟ್ರಸ್ಟಿಗಳು, ಪದಾಧಿಕಾರಿಗಳು ಉಪಸ್ಥಿತರಿದ್ದರು. ವೇದಿಕೆಯಲ್ಲಿ ಭುಜಬಲಿ ಧರ್ಮಸ್ಥಳ, ಕೇಂದ್ರೀಯ ಘಟಕದ ಪ್ರಧಾನ‌ ಕಾರ್ಯದರ್ಶಿ ಪುರುಷೋತ್ತಮ ಭಂಡಾರಿ ಅಡ್ಯಾರ್, ಕೋಶಾಧಿಕಾರಿ ಸಿಎ ಸುದೇಶ್ ಕುಮಾರ್ ರೈ, ಜೊತೆ ಕಾರ್ಯದರ್ಶಿ ರವಿ ಶೆಟ್ಟಿ ಅಶೋಕನಗರ ಸಂಘಟನಾ ಕಾರ್ಯದರ್ಶಿಗಳಾದ ಬಾಳ ಜಗನ್ನಾಥ ಶೆಟ್ಟಿ, ಪ್ರದೀಪ್ ಆಳ್ವ ಕದ್ರಿ ಮೊದಲಾದವರು ಉಪಸ್ಥಿತರಿದ್ದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top