ಜನಮನ ರಂಜಿಸಿದ ಸೋಮು-ಸೌಮ್ಯ ನೃತ್ಯ ಸಂಭ್ರಮ

Upayuktha
0

 


ಶಾಸ್ತ್ರೀಯ ನೃತ್ಯ ಕ್ಷೇತ್ರದಲ್ಲಿ ಅನೇಕ ಯುವ ನೃತ್ಯ ಕಲಾವಿದರು, ತಮಗೇ ಪ್ರದರ್ಶನಕ್ಕೆ ಬೇಡಿಕೆ ಇದ್ದಾಗಲೂ, ನೃತ್ಯ ಶಾಲೆಗಳನ್ನು ತೆರೆದು, ಗುರುಗಳಾಗಿಯೂ ತಮ್ಮ ಸೇವಾ ವಲಯವನ್ನು ವಿಸ್ತರಿಸಿಕೊಳ್ಳುತ್ತಾ, ತಾವು ಕಲಿಸಿದ ಕಲಾವಿದರ ಪ್ರದರ್ಶನಗಳನ್ನೂ ಏರ್ಪಡಿಸುತ್ತಾ, ಬಹಳ ಗಂಭೀರವಾಗಿ ಕ್ಷೇತ್ರದಲ್ಲಿ ತೊಡಗಿಕೊಂಡಿದ್ದಾರೆ. ಅಂತಹ ಕಲಾವಿದರಲ್ಲಿ ಶ್ರೀ ಸೋಮಶೇಖರ್ ಚೂಡಾನಾಥ್ – ಸೌಮ್ಯ ಸೋಮಶೇಖರ್ ದಂಪತಿ ಬಹಳ ವಿಶೇಷ ಅನ್ನಿಸುತ್ತಾರೆ. ಸೋಮು-ಸೌಮ್ಯ ಭರತನಾಟ್ಯ ಮತ್ತು ಕಥಕ್ ಎರಡೂ ಶೈಲಿಗಳಲ್ಲಿ ಪ್ರಭುತ್ವ ಹೊಂದಿರುವ ಯುವ ಕಲಾವಿದರು. ನಿರಂತರ ದೇಶ ವಿದೇಶಗಳ ಪ್ರವಾಸ ಮಾಡುತ್ತಾ ಪ್ರದರ್ಶನಗಳನ್ನು ನೀಡುತ್ತಿರುತ್ತಾರೆ. ಹಾಗೆಯೇ ನಿರಂತರ ಕಲ್ಚರಲ್ ಅಂಡ್ ಚಾರಿಟಬಲ್ ಟ್ರಸ್ಟ್ ಸ್ಥಾಪಿಸಿ, ಗುರುಗಳಾಗಿಯೂ ಎರಡೂ ಶೈಲಿಗಳನ್ನು ಕಲಿಸುತ್ತಾ ಬಹಳ ಬದ್ಧತೆಯಿಂದ ಕೆಲಸ ಮಾಡುತ್ತಿದ್ದಾರೆ. ಸಂದರ್ಭಾನುಸಾರ ನೃತ್ಯೋತ್ಸವಗಳನ್ನೂ ಆಯೋಜನೆ ಮಾಡುತ್ತಿರುತ್ತಾರೆ. ಈ ದಂಪತಿಗಳ ಆಯೋಜನೆಯಲ್ಲಿ ಈ ಸಾಲಿನಲ್ಲಿ ಆಯೋಜನೆಗೊಂಡಿದ್ದ ‘ನೃತ್ಯ ಸಂಭ್ರಮ’ ಉತ್ಸವ ಬಹಳ ಯಶಸ್ವಿಯಾಗಿ ನಡೆದು, ರಸಿಕರ ಮನಸ್ಸನ್ನು ಸೆಳೆಯಿತು. ಈ ಉತ್ಸವದಲ್ಲಿ ತಮ್ಮ ನಿರಂತರ ನೃತ್ಯ ಶಾಲೆಯ ಕಲಾವಿದರ ಪ್ರದರ್ಶನವಲ್ಲದೆ, ಎರಡು ಬೇರೆ ಕಲಾತಂಡಗಳಿಗೂ ಆಹ್ವಾನ ನೀಡಲಾಗಿತ್ತು. 


ಉತ್ಸವದ ಆರಂಭದಲ್ಲಿ ಉದ್ಘಾಟನಾ ನೃತ್ಯವಾಗಿ ‘ಸಮ್ಮಿಲನ’ ಶೀರ್ಷಿಕೆಯಲ್ಲಿ ನಿರಂತರ ನೃತ್ಯ ಶಾಲೆಯ ಕಲಾವಿದರು, ಭರತನಾಟ್ಯ ಮತ್ತು ಕಥಕ್ ಎರಡೂ ಶೈಲಿಗಳನ್ನು ಸಮೀಕರಿಸಿ ಒಂದು ಸುಂದರ ಪ್ರಸ್ತುತಿಯನ್ನು ಸಾದರಪಡಿಸಿದರು. ರಾಗಮಾಲಿಕೆ ಮತ್ತು ಆದಿತಾಳದಲ್ಲಿದ್ದ ಈ ಬಂಧದಲ್ಲಿ ಭರತನಾಟ್ಯದ ಸೂಕ್ಷ್ಮ ವಿನ್ಯಾಸಗಳು ಮತ್ತು ಕಥಕ್ ಶೈಲಿಯ ಅದ್ಭುತ ಲಯಪ್ರಯೋಗವನ್ನು ಬಹಳ ಚಮತ್ಕಾರವಾಗಿ ವಿನ್ಯಾಸಗೊಳಿಸಲಾಗಿತ್ತು. ಎರಡೂ ಶೈಲಿಗಳನ್ನು ಪ್ರತಿನಿಧಿಸಿದ ಕಲಾವಿದರು ಬಹಳ ಸುಂದರವಾಗಿ ನರ್ತಿಸಿ, ಮೆಚ್ಚುಗೆ ಗಳಿಸಿದರು. 


ನಂತರ ನೃತ್ಯಕ್ಷೇತ್ರದಲ್ಲಿ ಬಹಳ ಹೆಸರು ಮಾಡಿರುವ ಯುವ ನೃತ್ಯ ಕಲಾವಿದ ಮತ್ತು ಗುರು ಶ್ರೀ ಶ್ರೀನಿವಾಸನ್ ರಾಜೇಂದ್ರನ್ ಅವರು, ಯಕ್ಷಗಾನದ ಸ್ತ್ರೀವೇಶಂ ಮೂಲಕ ಪುರಾಣದ ಎರಡು ಪ್ರಮುಖ ಸ್ತ್ರೀ ಪಾತ್ರಗಳನ್ನು ಬಹಳ ಉನ್ನತ ಮಟ್ಟದಲ್ಲಿ ಸಾದರಗೊಳಿಸಿದರು. ಅದರಲ್ಲೂ ಪೂತನಿಯ ಪಾತ್ರದಲ್ಲಿ ಅವರು ಪರಕಾಯ ಪ್ರವೇಶ ಮಾಡಿಬಿಟ್ಟಿದ್ದರು. ಬಾಲಕ ಕೃಷ್ಣನನ್ನು ಕೊಲ್ಲಲು ಕಂಸನಿಂದ ಆದೇಶಿತಳಾದ ಪೂತನಿ ಗೋಕುಲಕ್ಕೆ ಪ್ರವೇಶಿಸುವ ಸಂದರ್ಭದೊಂದಿಗೆ ಅವರ ಪ್ರಸಂಗ ಆರಂಭವಾಯಿತು. ಗೋಕುಲದ ಬೀದಿಬೀದಿಗಳಲ್ಲಿ ಪುಟ್ಟಕಂದ ಕೃಷ್ಣನಿಗಾಗಿ ಹುಡುಕುತ್ತಾ, ಕೃಷ್ಣನೇ ಎಂದುಕೊಂಡು ಬೇರೆ ಕೆಲವು ಮಕ್ಕಳನ್ನು ಕೊಂದ ವಿಷಯವನ್ನು ಪೂತನಿಯೇ ಪ್ರಸ್ತಾಪಿಸುವಾಗ, ಆ ಪಾತ್ರದ ಕ್ರೌರ್ಯ ಶ್ರೀನಿವಾಸನ್ ಅವರ ಅಭಿನಯದಲ್ಲಿ ಪ್ರೌಢವಾಗಿ ಮೂಡಿಬಂತು. ರಕ್ಕಸಿ ಪೂತನಿ ಸುಂದರ ಸ್ತ್ರೀಯಾಗಿ ಬದಲಾಗಿ ಯಶೋದೆಯ ಗೃಹವನ್ನು ಪ್ರವೇಶಿಸುವುದು, ಅಲ್ಲಿ ಯಶೋದೆ ಮತ್ತು ಇತರ ಸ್ತ್ರೀಯರ ನಂಬಿಕೆ ಗಳಿಸಿ, ಅವರಿಂದ ಪುಟ್ಟಕೃಷ್ಣನನ್ನು ಪಡೆದು, ಅವನಿಗೆ ತನ್ನ ವಿಷಪೂರಿತ ಮೊಲೆಗಳನ್ನು ಉಣ್ಣಿಸುವುದು, ಕೃಷ್ಣ ಹಾಲುಣ್ಣುವಾಗ, ರಕ್ಕಸಿಯಾದರೂ ತಾಯ್ತನದ ಸವಿಯನ್ನು ಅನುಭವಿಸುವುದು, ಕೃಷ್ಣನ ಸುಂದರ ಚೆಲುವನ್ನು ಕಂಡು, ತಾನು ಅವನನ್ನು ಕೊಲ್ಲಬೇಕೇ ಎಂದು ಪಶ್ಚಾತ್ತಾಪ ಪಡುವುದು, ಕೊನೆಗೆ ಕೃಷ್ಣ ಅವಳ ಮೊಲೆಯನ್ನು ಕಚ್ಚಿ ಅವಳಿಗೆ ಮೋಕ್ಷ ಕರುಣಿಸುವುದು, ಈ ಎಲ್ಲಾ ಭಾಗಗಳನ್ನು ಶ್ರೀನಿವಾಸನ್ ಬಹಳ ಸುಂದರವಾಗಿ ಕಟ್ಟಿಕೊಟ್ಟರು. ಧ್ವನಿಮುದ್ರಿತ ಸಂಗೀತದೊಟ್ಟಿಗೇ ಸಂಭಾಷಣೆಗಳೂ ಇದ್ದದ್ದರಿಂದ, ವಾಚಿಕಾಭಿನಯ ಬಹಳ ಮೆಚ್ಚೆನಿಸಿತು. 


ಮುಂದೆ ಹೊಸೂರಿನ ಗುರುದಂಪತಿ ಶ್ರೀ ಎಸ್.ಕೃಷ್ಣನ್ ಮತ್ತು ಶ್ರೀಮತಿ ಅಂಜನಾ ಕೃಷ್ಣನ್ ಅವರ ಶಿಷ್ಯರು ಭರತನಾಟ್ಯದಲ್ಲಿ ಒಂದು ಸುದೀರ್ಘ ವರ್ಣವನ್ನು ಸಾದರಪಡಿಸಿದರು. ಹನುಮಂತನ ಕಥಾನಕದ ಸುಂದರ ಚಿತ್ರಣ ಇಲ್ಲಿತ್ತು. ಶ್ರೀ ಮಧುರೈ ಆರ್. ಮುರುಳೀಧರನ್ ಅವರ ಈ ವರ್ಣವನ್ನು ಹೆಸರಾಂತ ಕಲಾವಿದ ಶ್ರೀ ಶಂಕರ್ ಕಂದಸ್ವಾಮಿ ನೃತ್ಯಕ್ಕೆ ಅಳವಡಿಸಿ, ಹಲವು ಸಂದರ್ಭಗಳಲ್ಲಿ ಸ್ವತಃ ನರ್ತಿಸಿದ್ದಾರೆ. ಅದೇ ಸಂಯೋಜನೆಯನ್ನು ಸ್ವಲ್ಪ ಬದಲಾವಣೆಗಳೊಂದಿಗೆ ಕೃಷ್ಣನ್ ದಂಪತಿ ತಮ್ಮ ಶಿಷ್ಯರಿಗೆ ಹೇಳಿಕೊಟ್ಟಿದ್ದಾರೆ. ಕಥಾನಕಗಳ ವಿಸ್ತರಣೆ, ಪಾತ್ರಗಳ ಹಂಚಿಕೆ, ಜತಿ-ಸ್ವರಗಳ ನಿರ್ವಹಣೆ ಇವುಗಳಿಂದ ಈ ವರ್ಣ ಒಂದು ಸುಂದ ದೃಶ್ಯಕಾವ್ಯವಾಗಿ ಮೂಡಿಬಂತು. 


ಅಂದಿನ ಉತ್ಸವದ ಕೊನೆಯ ಪ್ರಸ್ತುತಿಯಾಗಿ ಸೋಮು-ಸೌಮ್ಯ ದಂಪತಿ ತಮ್ಮ ಶಿಷ್ಯರುಗಳಿಂದ ಕಥಕ್ ಶೈಲಿಯಲ್ಲಿ ಎರಡು ಬಂಧಗಳನ್ನು ಸಾದರಪಡಿಸಿದರು. ಕರ್ನಾಟಕದಲ್ಲಿ ಕಥಕ್ ನೃತ್ಯಶೈಲಿ ಗಟ್ಟಿಯಾಗಿ ನೆಲೆಯೂರಲು ಕಾರಣರಾದ ಡಾ.ಮಾಯಾರಾವ್ ಅವರ ಸಂಸ್ಥಾಪನೆಯ ನಾಟ್ಯ ಇನ್ಸ್ಟಿಟ್ಯೂಟ್ ಆಫ಼್ ಕಥಕ್ ಅಂಡ್ ಕೊರಿಯಾಗ್ರಫಿ ಸಂಸ್ಥೆ ಆರಂಭವಾಗಿ 60 ವರ್ಷಗಳಾದವು. ಆ ಸವಿನೆನಪಿಗೆ, ತಮ್ಮ  ಕಥಕ್ ಗುರುಗಳಿಗೆ ಗೌರವ ಸಲ್ಲಿಸಲು ದಂಪತಿ, ಮಾಯಾರಾವ್ ಅವರೇ ನೃತ್ಯ ಸಂಯೋಜಿಸಿದ್ದ ಕಮಾಚ್ ರಾಗದ ಪ್ರಬಂದ್ ಮತ್ತು ದರ್ಬಾರಿ ರಾಗದ ತರಾನಾ ಸಾದರಪಡಿಸಿದರು.  ಭರತನಾಟ್ಯದಷ್ಟೇ ಶುದ್ಧವಾಗಿ ಕಥಕ್ ಶೈಲಿಯಲ್ಲೂ ಸೋಮು-ಸೌಮ್ಯ ದಂಪತಿ ಪಾಠಮಾಡಿರುವುದು ಈ ಎರಡು ಬಂಧಗಳ ನಿರೂಪಣೆಯಲ್ಲಿ ವ್ಯಕ್ತವಾಯಿತು. ಕಲಾವಿದರೂ ಬಹಳ ಅಚ್ಚುಕಟ್ಟಾಗಿ ನರ್ತಿಸಿದರು. 


ನಮ್ಮ ನಾಡಿನ ಹಿರಿಯ ನೃತ್ಯವಿದುಷಿ, ನಾಟ್ಯ ಇನ್ಸ್ಟಿಟ್ಯೂಟ್ ನಲ್ಲಿ ಹಲವು ವರ್ಷಗಳ ಕಾಲ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿದ್ದ, ಡಾ.ನಯನಾ ಎಸ್. ಮೋರೆ ಅಂದಿನ ಉತ್ಸವದ ಮುಖ್ಯ ಅತಿಥಿಗಳಾಗಿ ಭಾಗಿಯಾಗಿ, ಆರಂಭದಲ್ಲಿ ದೀಪ ಬೆಳಗಿಸುವುದರೊಂದಿಗೆ ಶುಭಾರಂಭ ಮಾಡಿಕೊಟ್ಟು, ಕೊನೆಯವರೆಗೂ ಉಪಸ್ಥಿತರಿದ್ದು, ಎಲ್ಲ ಕಲಾವಿದರಿಗೆ ಅಭಿನಂದನಾ ಪತ್ರಗಳನ್ನು ಪ್ರದಾನ ಮಾಡಿ, ಬಹಳ ಉತ್ಸಾಹದಿಂದ ತಮ್ಮ ಸುದೀರ್ಘ ನೃತ್ಯ ಜೀವನದ ಅನುಭವಗಳನ್ನು ಹಂಚಿಕೊಂಡರು. ಉತ್ಸವದಲ್ಲಿ ಅವರಿಗೆ ‘ನಿರಂತರ ಕಲಾ ಸಾಧಕಿ’ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. 


-ಸುಗ್ಗನಹಳ್ಳಿ ಷಡಕ್ಷರಿ


  ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top