ನಂಜನಗೂಡಿನ ಇತಿಹಾಸ ಹಾಗೂ ಪುರಾಣ ಪ್ರಸಿದ್ಧ ಶ್ರೀಕಂಠೇಶ್ವರ ಸ್ವಾಮಿ ಜಾತ್ರಾ ಮಹೋತ್ಸವ ಇದೇ ಮಾರ್ಚ್ 22 ರ ಶುಕ್ರವಾರದಂದು ನಡೆಯಿತು. ನಂಜನಗೂಡು ದೊಡ್ಡ ಜಾತ್ರೆ ಎಂದೇ ಕರೆಯಲ್ಪಡುವ ಈ ಜಾತ್ರೆಯಂದು ಪಂಚರಥಗಳನ್ನು ಎಳೆಯುವುದು ವಿಶೇಷವಾಗಿದೆ. ಇದನ್ನು ಗೌತಮ ಪಂಚ ರಥ ಎಂದೂ ಕರೆಯಲಾಗುತ್ತದೆ.
ನಂಜನಗೂಡು ಎಂದ ತಕ್ಷಣ ನಮ್ಮ ಕಣ್ಣಮಂದೆ ಬರುವ ಚಿತ್ರ ಇತಿಹಾಸ ಪ್ರಸಿದ್ದ ಶ್ರೀಕಂಠೇಶ್ವರ ದೇವಸ್ಥಾನ.ಮೈಸೂರಿನಿಂದ ಕೇವಲ 20 ಕಿ.ಮೀ ದೂರದಲ್ಲಿರುವ ದಕ್ಷಿಣ ಕಾಶಿ ಎಂದೇ ಹೆಸರಾಗಿರುವ ನಂಜನಗೂಡಿನ ಈ ದೇವಸ್ಥಾನ ರಾಜ್ಯದ ಅತ್ಯಂತ ದೊಡ್ಡ ದೇವಾಲಯ ಎಂಬ ಖ್ಯಾತಿ ಪಡೆದಿದೆ.ಇದರ ಸುತ್ತ ಮುತ್ತ ಗಣಪತಿ ದೇವಸ್ಥಾನ,ಚಾಮುಂಡಿ ದೇವಸ್ಥಾನ,ದತ್ತ ದೇಗುಲ ಮೊದಲಾದ ಅನೇಕ ದೇಗುಲಗಳು ಭಕ್ತರನ್ನು ಸೆಳೆಯುತ್ತವೆ.ನಂಜನಗೂಡು ಪ್ರಮುಖ ಕೈಗಾರಿಕಾ ನಗರವೂ ಆಗಿದ್ದು ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಂತಿದೆ.ಕಪಿಲಾ ನದಿ ತೀರದಲ್ಲಿರುವ ಈ ಪುಣ್ಯ ಕ್ಷೇತ್ರಕ್ಕೆ ,'ಗರಳಪುರಿ' 'ದಕ್ಷಿಣದ ಮಣಿಕರ್ಣಿಕಾ ಘಾಟ್' ಎಂಬ ಹೆಸರುಗಳೂ ಇವೆ.ಪೌರಾಣಿಕವಾಗಿ ಶಿವನು ಗರಳ ಅಂದರೆ ವಿಷವನ್ನು ಕುಡಿದು ಲೋಕವನ್ನು ರಕ್ಷಿಸಿದನಾದ್ದರಿಂದ ಇವನು ನೆಲೆನಿಂತ ಈ ಸ್ಥಳಕ್ಕೆ ಗರಳಪುರಿ ಎಂಬ ಹೆಸರು ಬಂದಿತೆಂದು ಪ್ರತೀತಿ.ಅತ್ಯಂತ ಪ್ರಮುಖ ಶೈವ ಕೇಂದ್ರವಾಗಿರುವ ಈ ಕ್ಷೇತ್ರದಲ್ಲಿ ಕಾರ್ತೀಕ ಮಾಸ ಶಿವರಾತ್ರಿ ಮತ್ತಿತರ ವಿಶೇಷ ದಿನಗಳಂದು ದೀಪೋತ್ಸವ, ತೆಪ್ಪೋತ್ಸವ, ಗಿರಿಜಾ ಕಲ್ಯಾಣೋತ್ಸವ ಮುಂತಾದವುಗಳು ವೈಭವೋಪೇತವಾಗಿ ನೆರವೇರುತ್ತವೆ.ಶ್ರೀಕಂಠೇಶ್ವರ ಸ್ವಾಮಿಯವರಿಗೆ ಅಕ್ಟೋಬರ್ ತಿಂಗಳಲ್ಲಿ ಚಿಕ್ಕರಥೋತ್ಸವ ಜರುಗಿದರೆ ಈಗ ದೊಡ್ಡ ರಥೋತ್ಸವ ನೆರವೇರುತ್ತದೆ.ರಾಜ್ಯದ ಮೂಲೆಮೂಲೆಗಳಿಂದ ಮಾತ್ರವಲ್ಲದೆ ಹೊರಗಿನ ಕೇರಳ, ತಮಿಳುನಾಡು, ಆಂಧ್ರಪ್ರದೇಶ ಮೊದಲಾದ ರಾಜ್ಯಗಳಿಂದಲೂ ಸಹ ಜನ ಇಲ್ಲಿಗೆ ಬಂದು ಭಕ್ತಿ ಪರವಶರಾಗಿ ತೇರನೆಳೆದು ಪುನೀತರಾಗುತ್ತಾರೆ.ಒಂದು ಅಂದಾಜಿನಂತೆ ಐದು ಲಕ್ಷಕ್ಕೂ ಮೀರಿ ಜನರು ಈ ಸಮಯದಲ್ಲಿ ಜಾತ್ರೆಗೆ ಬರುತ್ತಾರೆಂದು ಹೇಳಲಾಗುತ್ತದೆ.ಸರಕಾರ ಮತ್ತು ಸ್ಥಳೀಯ ಆಡಳಿತ,ಜಿಲ್ಲಾಡಳಿತ ಈ ಮಹಾರಥೋತ್ಸವಕ್ಕೆ ಬೇಕಾದ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲು ಪೂರ್ವಭಾವಿ ಸಭೆಗಳನ್ನು ನಡೆಸಿ ಸಿದ್ಧತಾ ಕಾರ್ಯ ಮಾಡಿಕೊಳ್ಳುತ್ತದೆ.
ರಥೋತ್ಸವದ ವಿಶೇಷತೆ:
ದಕ್ಷಿಣ ಭಾರತದಲ್ಲಿ ನೆರವೇರುವ ಅತ್ಯಂತ ದೊಡ್ಡ ಜಾತ್ರೆಗಳಲ್ಲಿ ಒಂದೆಂದು ಖ್ಯಾತಿ ಪಡೆದಿರುವ ಶ್ರೀಕಂಠೇಶ್ವರ ದೊಡ್ಡ ಜಾತ್ರೆಯಲ್ಲಿ ಏಕ ಕಾಲಕ್ಕೆ 5 ರಥಗಳನ್ನು ಎಳೆಯುವುದು ಅತ್ಯಂತ ವಿಶೇಷ. ಮೊದಲು ಗಣಪತಿ ನಂತರ ಪಾರ್ವತಿ ಸಹಿತರಾದ ಶ್ರೀಕಂಠೇಶ್ವರ ಸ್ವಾಮಿ,ಪಾರ್ವತಿ,ಸುಬ್ರಹ್ಮಣ್ಯ ಸ್ವಾಮಿ,ಚಂಡಿಕೇಶ್ವರ ಸ್ವಾಮಿಯ ರಥಗಳು ದೇಗುಲದ ಸಮೀಪದ ರಥ ಬೀದಿಯಲ್ಲಿ ಚಲಿಸುತ್ತವೆ.ಈ ರಥಗಳಲ್ಲಿ ಶ್ರೀಕಂಠೇಶ್ವರ ರಥವೇ ದೊಡ್ಡದಾದ ರಥವಾಗಿದೆ.
ಇದನ್ನು ಮೊದಲು ಗೌತಮ ಮಹರ್ಷಿಗಳು ಎಳೆದರೆಂಬ ಐತಿಹ್ಯವಿರುವುದರಿಂದ ಗೌತಮ ಪಂಚ ಮಹಾ ರಥೋತ್ಸವ ಎಂದೇ ಕರೆಯಲಾಗುತ್ತದೆ.ಶ್ರೀ ಗೌತಮ ಮಹಾರಥವು 92 ಅಡಿ ಎತ್ತರವಿದ್ದು,250 ಟನ್ ಗಳಷ್ಟು ತೂಕವಿದ್ದು ಜಾತ್ರೆಯ ಪ್ರಮುಖ ಆಕರ್ಷಣೆಯಾಗಿರುತ್ತದೆ. ರಥೋತ್ಸವಕ್ಕೆ ಭರದಿಂದ ಸಿದ್ಧತೆಗಳು ಸಾಗಿದ್ದು ರಥದ ಚಕ್ರಗಳನ್ನು ಸರಿಪಡಿಸುವ, ಹೊಸ ಹಗ್ಗ ಕಟ್ಟುವ ಕಾರ್ಯ ನಡೆಯಿತು. ರಥವನ್ನು ಬಣ್ಣದ ಬಾವುಟ,ಹೂ,ತಳಿರು ತೋರಣಗಳಿಂದ ಸಿಂಗರಿಸುವ ಕಾರ್ಯ ಸಾಗಿತು. ದೊಡ್ಡ ರಥದೊಂದಿಗೆ ಸಾಗುವ ಉಳಿದ ರಥಗಳನ್ನು ಸರಿಪಡಿಸಿ ಶೃಂಗರಿಸಲಾಗಿದೆ. ದೇವಾಲಯದ ಆವರಣ ಹಾಗೂ ಸಮೀಪದ ಸ್ಥಳಗಳನ್ನು ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿದೆ. ಇಡೀ ನಂಜನಗೂಡು ಪಟ್ಟಣವೇ ಈ ಸಮಯದಲ್ಲಿ ನವ ವಧುವಿನಂತೆ ಕಂಗೊಳಿಸುತ್ತಿದೆ ಎಂದರೆ ತಪ್ಪಾಗಲಾರದು.
ಪಂಚ ಮಹಾರಥೋತ್ಸವದ ಶುಭ ಘಳಿಗೆ:
ಮಾರ್ಚ್ 22ರ ಶುಭ ಶುಕ್ರವಾರದ ಮುಂಜಾನೆ 6:30 ರಿಂದ 6:50 ಗಂಟೆಯೊಳಗೆ ಸಲ್ಲುವ ಶುಭ ಮೀನ ಲಗ್ನದಲ್ಲಿ ಶ್ರೀ ಮನ್ಮಹಾಗೌತಮ ರಥಾರೋಹಣ ನಡೆಯಿತು. ಈ ರಥದಲ್ಲಿ ವಜ್ರವೈಡೂರ್ಯಗಳಿಂದ ಅಲಂಕೃತಗೊಂಡ ಶ್ರೀ ಶ್ರೀಕಂಠೇಶ್ವರ ಸ್ವಾಮಿಯವರ ಮೂರ್ತಿಯನ್ನು ಇಟ್ಟು,ಬಣ್ಣ ಬಣ್ಣದ ಹೂ ಹಾಗೂ ಹಾರಗಳಿಂದ ಅಲಂಕರಿಸಿದರು. ಪೂರ್ವ ನಿಗದಿತ ಸಮಯದಲ್ಲಿ ದೇಗುಲದ ಪ್ರಧಾನ ಅರ್ಚಕ ವೃಂದ ನೆರವೇರಿಸುವ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಹಾಗೂ ವೇದ ಘೋಷಗಳೊಂದಿಗೆ ಮಹಾಮಂಗಳಾರತಿ ಮಾಡಿ,ಇಡುಗಾಯಿ ಒಡೆದು ರಥೋತ್ಸವಕ್ಕೆ ಚಾಲನೆ ನೀಡಲಾಯಿತು.
ಭಕ್ತಿರಸದಲ್ಲಿ ಮಿಂದೇಳುವ ಭಕ್ತಸಾಗರ:
ರಥೋತ್ಸವದ ಪುಣ್ಯ ಕಾಲಕೆ ಕಾಯುವ ಭಕ್ತರು ಈ ಮಹಾ ರಥೋತ್ಸವಕ್ಕೆ ಚಾಲನೆ ದೊರೆಯುತ್ತಿದ್ದಂತೆ ರಥದ ಬೃಹತ್ ಗಾತ್ರದ ಹಗ್ಗವನಿಡಿದು ಜೈ ಶ್ರೀಕಂಠ,ಜೈ ನಂಜುಂಡೇಶ್ವರ,ಜೈ ಪಾರ್ವತಿ ದೇವಿ ಎಂದು ಭಕ್ತಿ ಪರವಶರಾಗಿ ಮುಗಿಲುಮುಟ್ಟುವಂತೆ ಕೂಗುತ್ತಾ,ಶ್ರೀ ಸ್ವಾಮಿಯವರಿಗೆ ಬಹುಪರಾಕು ಹಾಕುತ್ತಾ ರಥ ಬೀದಿಯಲ್ಲಿ ರಥ ಎಳೆದರು.ಈ ಪಂಚ ರಥಗಳು ಅಲಂಕೃತಗೊಂಡ ಹೂ ಹಾರ, ತಳಿರುತೋರಣಗಳನ್ನು ತೂಗಿಸುತ್ತಾ ಬಾಗುತ್ತಾ ಗಾಂಭಿರ್ಯದಿಂದ ಚಲಿಸುತ್ತಿದ್ದಂತೆ ಅದರ ಮೇಲೆ ಭಕ್ತರು ಬಿಲ್ವಪತ್ರೆ,ಹೂಗಳನ್ನು ಎಸೆದು ಸಂಭ್ರಮಿಸುತ್ತಾ ಭಕ್ತಿ ಸಾಗರದಲ್ಲಿ ಮೀಂದರು. ಈ ಅಪೂರ್ವ ಘಳಿಗೆಗೆ ಲಕ್ಷಾಂತರ ಭಕ್ತರು ಸಾಕ್ಷಿಯಾದರು. ಇದನ್ನು ನೋಡುವುದೇ ಒಂದು ಸೊಗಸು. ಈ ಮಹಾ ರಥಕ್ಕೆ ನವದಂಪತಿಗಳು ಹಣ್ಣುಗಳನ್ನು ಎಸೆದರೆ ಸಂತಾನ ಪ್ರಾಪ್ತಿಯಾಗುತ್ತದೆಂಬ ನಂಬಿಕೆಯಿದೆ.
ಮಾರ್ಚ್ 24 ಅವಭೃತ ತೀರ್ಥ ಸ್ನಾನದ ಮಹತ್ವ:
ಭಾನುವಾರದಂದು ಉತ್ತರ ನಕ್ಷತ್ರದ ದಿನ ಅವಭೃತ ತೀರ್ಥ ಸ್ನಾನ ಮಾಡಿದರೆ ಸಂಚಿತ ಪಾಪ ನಶಿಸಿ ಪುಣ್ಯಪ್ರಾಪ್ತಿಯಾಗುತ್ತದೆಂಬ ನಂಬಿಕೆ ಇದ್ದು,ಸಾವಿರಾರು ಭಕ್ತರು ಈ ಪುಣ್ಯ ಸ್ನಾನದಲ್ಲಿ ಪಾಲ್ಗೊಂಡರು. ಇದೇ ದಿನ ಸಂಜೆ ಏಳು ಗಂಟೆಗೆ ಕಪಿಲಾ ನದಿಯಲ್ಲಿ ಶ್ರೀ ಸ್ವಾಮಿಯವರ ತೆಪ್ಪೋತ್ಸವ ವಿಜೃಂಭಣೆಯಿಂದ ನೆರವೇರಿತು.
ಪ್ರಸಾದ ವಿತರಣೆ: ಈ ದೊಡ್ಡ ಜಾತ್ರೆಯನ್ನು ಅರವಟ್ಟಿಗೆಗಳ ಜಾತ್ರೆ ಎಂದೇ ಕರೆಯಬಹುದು. ಏಕೆಂದರೆ ಅನೇಕ ಸ್ವಯಂ ಸೇವಾ ಸಂಸ್ಥೆಗಳು ಬಂದ ಭಕ್ತಾದಿಗಳಿಗೆ ಪಾನಕ,ಕೋಸಂಬರಿ,ಮಜ್ಜಿಗೆ, ಸಿಹಿ ತಿಂಡಿಗಳು ಹಾಗೂ ಪುಳಿಯೋಗರೆ,ಮೊಸರನ್ನ ಮುಂತಾದ ಉಪಾಹಾರಗಳನ್ನು ವಿತರಿಸುವ ಕಾರ್ಯವನ್ನೂ ಮಾಡಿದರು. ಇದು ಈ ಜಾತ್ರೆಯ ಇನ್ನೊಂದು ವಿಶೇಷವೂ ಹೌದು.
ಆದರೆ ಸಾಂಕ್ರಮಿಕ ರೋಗ ಭೀತಿಯಿಂದಾಗಿ ಜಿಲ್ಲಾಡಳಿತ ಮುಂಜಾಗ್ರತಾ ಕ್ರಮವಾಗಿ ಪ್ರಸಾದ ಹಂಚುವ ಸಂಘಸಂಸ್ಥೆಗಳು ಆರೋಗ್ಯ ಇಲಾಖೆಯಿಂದ ಅನುಮತಿ ಪಡೆಯುವುದನ್ನು ಕಡ್ಡಾಯಗೊಳಿಸಿದೆ.
ವಿಶೇಷ ಧಾರ್ಮಿಕ ಕಾರ್ಯಕ್ರಮಗಳು:
ಮಹಾರಥೋತ್ಸವದ ಅಂಗವಾಗಿ ಮಾರ್ಚ್15 ರಿಂದಲೇ ವಿವಿಧ ಧಾರ್ಮಿಕ ಕಾರ್ಯಗಳನ್ನು ಪ್ರಾರಂಭಿಸಲಾಗಿದ್ದು ಜಾತ್ರೆಯಂದು ಬೆಳಗ್ಗೆ ವಿಶೇಷ ಪೂಜಾ ಕೈಂಕರ್ಯಗಳನ್ನು ಮಾಡಲಾಯಿತು. ಅಂದು ಸಂಜೆ ಹಂಸಾರೋಹಣ ನಂತರ ನಟೇಶೋತ್ಸವ, ಮಾರ್ಚ್ 23 ರಂದು ಮಹಾಭೂತಾರೋಹಣೋತ್ಸವ, ದೇವಿ ಪ್ರಣಯ ಕಾಲ ಸಂಧಾನೋತ್ಸವ, ಮಾರ್ಚ್ 24 ರಂದು ಚೂರ್ಣೋತ್ಸವ,ಅವಭೃತ ತೀರ್ಥ ಸ್ನಾನ,ಇದೇ ದಿನ ರಾತ್ರಿ ಏಳಕ್ಕೆ ತೆಪ್ಪೋತ್ಸವ, ನರಾಂಧೂಳಿಕಾರೋಹಣೋತ್ಸವ, ಧ್ವಜಾವರೋಹಣ, ಮಾರ್ಚ್ 25 ರಂದು ಪುಷ್ಪಯಾಗಪೂರ್ವಕ ಪಂಚೋಪಚಾರಪೂರ್ವಕ ಕೈಲಾಸ ಯಾನಾರೋಹಣೋತ್ಸವ, ನಂತರದಲ್ಲಿ ಮಹಾ ಸಂಪ್ರೋಕ್ಷಣೆ ಪೂರ್ವಕ ನಂದಿ ವಾಹನೋತ್ಸವದೊಂದಿಗೆ ಜಾತ್ರಾ ಮಹೋತ್ಸವಕ್ಕೆ ತೆರೆ ಬೀಳಿತು. ಒಟ್ಟಿನಲ್ಲಿ ಪುರಾಣ ಪ್ರಸಿದ್ಧ ಈ ರಥೋತ್ಸವವನ್ನು ಭಕ್ತಗಣ ಕಣ್ತುಂಬಿಕೊಂಡಿತು.
-ಎಸ್.ಎಲ್.ವರಲಕ್ಷ್ಮೀಮಂಜುನಾಥ್.
ನಂಜನಗೂಡು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ