ಶಂಕರಮಠದಲ್ಲಿ ಸಹಸ್ರ ಮೋದಕ ಗಣಪತಿ ಹೋಮ

Upayuktha
0


* ಅಭಿನವ ಶಂಕರಾಲಯದ ಶತಮಾನೋತ್ಸವಕ್ಕೆ ಚಾಲನೆ

* ನೂರಾರು ಭಕ್ತರ ಉಪಸ್ಥಿತಿ

 *ಶೃಂಗೇರಿಯ ವೇದ ವಿದ್ವಾಂಸರಿಂದ ಪೂರ್ಣಾಹುತಿ ಸಮರ್ಪಣೆ


ಮೈಸೂರು: ನಗರದ ಅಗ್ರಹಾರದಲ್ಲಿರುವ ‘ಅಭಿನವ ಶಂಕರಾಲಯ’ದ ಶತಮಾನೋತ್ಸವ ಸಂಭ್ರಮ ಕಾರ್ಯಕ್ರಮ ಸರಣಿಯು ಶನಿವಾರ ಬೆಳಗ್ಗೆ ಸಹಸ್ರ ಮೋದಕ ಗಣಪತಿ ಹೋಮದೊಂದಿಗೆ ವಿಧ್ಯುಕ್ತ ಚಾಲನೆ ಪಡೆಯಿತು.


 ಶ್ರೀ ಶೃಂಗೇರಿ ಶಂಕರ ಮಠ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಬೆಳಗ್ಗೆಯೇ ಶಾರದಾ ಮಾತೆಗೆ ವಿಶೇಷ ಅಭಿಷೇಕ, ಪೂಜೆ, ಕುಂಕುಮಾರ್ಚನೆ ಅಲಂಕಾರ ನೆರವೇರಿತು.


ಶ್ರೀ ಮಹಾಗಣಪತಿ, ಶ್ರೀ ಸತ್ಯನಾರಾಯಣ, ನವಗ್ರಹ ಮತ್ತು ಶ್ರೀ ಶಂಕರಾಚಾರ್ಯರ ಸನ್ನಿಧಿಗಳಲ್ಲಿ ಅಭಿಷೇಕ, ಪೂಜಾದಿಗಳು, ವೇದ ಪಾರಾಯಣಗಳು ವಿಧಿವತ್ತಾಗಿ ನೆರವೇರಿದವು. ಮಠದ 33ನೇ ಯತಿಗಳಾಗಿದ್ದ ಜಗದ್ಗುರು ಶ್ರೀ ಸಚ್ಚಿದಾನಂದ ಶಿವಾಭಿನವ ನೃಸಿಂಹ ಭಾರತೀ ಸ್ವಾಮೀಜಿಯವರು ಜನಿಸಿದ್ದ ಮನೆಯೇ ಮಂದಿರವಾದ ಹಿನ್ನೆಲೆಯಲ್ಲಿ ಅವರ ಸ್ಮರಣೆಯೊಂದಿಗೆ ವಿಧಿ, ವಿಧಾನಗಳು ಶಾಸ್ತ್ರೋಕ್ತವಾಗಿ ನೆರವೇರಿದವು.


ಶತಮಾನೋತ್ಸವದ ಸವಿ ನೆನಪಿಗಾಗಿ ನೂತನವಾಗಿ ನಿರ್ಮಿಸಿರುವ ‘ಶ್ರೀ ಸಚ್ಚಿದಾನಂದ ವಿಲಾಸ’ ಗುರುಭವನದಲ್ಲಿ ಶೃಂಗೇರಿಯಿಂದ ಆಗಮಿಸಿದ್ದ ವೇದ ವಿದ್ವಾಂಸರು ಬೆಳಗಿನ ಶುಭ ಮುಹೂರ್ತದಲ್ಲಿ ಶ್ರೀ ಸಹಸ್ರ ಮೋದಕ ಗಣಪತಿ ಹೋಮದೊಂದಿಗೆ ಒಂದು ವಾರಗಳ ಸಮಾರಂಭಕ್ಕೆ ವಿಧ್ಯುಕ್ತ ಚಾಲನೆ ನೀಡಿದರು. 3 ತಾಸುಗಳ ಹೋಮದ ಅಂತ್ಯದಲ್ಲಿ ನೂರಾರು ಋತ್ವಿಜರು, ಪಂಡಿತರು, ಅದ್ವೈತ ವಿದ್ವಾಂಸರು, ವನಿತೆಯರು ಮತ್ತು ಭಕ್ತರ ಸಮ್ಮುಖ ಪೂರ್ಣಾಹುತಿ ಸಮರ್ಪಣೆ ನೆರವೇರಿತು. ಮುಖ್ಯ ಋತ್ವಿಜರಾದ ಶೃಂಗೇರಿ ವಿದ್ವಾನ್ ಶ್ರೀರಾಮ ಭಟ್, ಕೌಸ್ತುಭ, ಮಹೇಶ ಹೆಗಡೆ ಮತ್ತು ಮಂಜುನಾಥ ಭಟ್ ಹೋಮ ಕುಂಡಕ್ಕೆ ಮಹಾ ಮಂಗಳಾರತಿ ಸಮರ್ಪಿಸಿದರು.


ಭಕ್ತವಲಯದ ಸಹಕಾರ ದೊಡ್ಡದು:

ಮಠದ ಧರ್ಮಾಧಿಕಾರಿ ರಾಮಚಂದ್ರನ್ ಅವರು ಈ ಸಂದರ್ಭ ಮಾತನಾಡಿ, ಅಭಿನವ ಶಂಕರಾಲಯದ ಶತಮಾನೋತ್ಸವವು ಶ್ರೀ ಶಕ್ತಿ ಶಾರದೆಯ ಅನುಗ್ರಹ ಮತ್ತು ಜಗದ್ಗುರುಗಳ ಆಶೀರ್ವಾದಿಂದ ನಡೆಯುತ್ತಿದೆ. ಹತ್ತಾರು ಧಾರ್ಮಿಕ ವಿಧಿಗಳು ಸಂಪನ್ನಗೊಳ್ಳುತ್ತಿವೆ. ಇದಕ್ಕೆ ಭಕ್ತವಲಯದ ಸಹಕಾರವೂ ಇದೆ ಎಂದರು. ಈ ಧಾರ್ಮಿಕ ಕ್ಷೇತ್ರ ಶತಮಾನೋತ್ಸವ ಪೂರ್ಣಗೊಳಿಸಿರುವುದು ನಾಡಿಗೆ ದೊಡ್ಡ ಹೆಮ್ಮೆ. ಮುಂಬರುವ ಶತಮಾನಗಳಲ್ಲೂ ಈ ಸನ್ನಿಧಿ ಇನ್ನಷ್ಟು ಸೇವೆ ಸಲ್ಲಿಸಲಿದೆ ಎಂದರು.


ಒಂದು ವಾರಗಳ ಕಾರ್ಯಕ್ರಮಕ್ಕೆ ನಾಡಿನ ಭಕ್ತರು ಸಾವಿರಾರು ಸಂಖ್ಯೆಯಲ್ಲಿ ಆಗಮಿಸಲಿದ್ದಾರೆ. ಶೃಂಗೇರಿ ಜಗದ್ಗುರು ಶ್ರೀ ವಿಧುಶೇಖರ ಭಾರತೀ ತೀರ್ಥ ಸ್ವಾಮೀಜಿ ಸಂಸ್ಥಾನ ಪೂಜಾದಿಗಳನ್ನು ನೆರವೇರಿಸಿ, ಭಕ್ತರನ್ನು ಅನುಗ್ರಹಿಸಲಿರುವುದು ವಿಶೇಷ ಎಂದರು.  


ಸಪ್ತ ಮಾತೃಕೆ ದೇವಾಲಯದ ಪ್ರಧಾನ ಅರ್ಚಕ ಮತ್ತು ವಿದ್ವಾಂಸ ಭಾಸ್ಕರ ಭಟ್, ಮಠದ ವ್ಯವಸ್ಥಾಪಕ ಶೇಷಾದ್ರಿ ಭಟ್ ಸೇರಿದಂತೆ ನೂರಾರು ಸ್ವಯಂಸೇವಕರು, ಭಕ್ತರು ಮತ್ತು ಮಾತೆಯರು ಹಾಜರಿದ್ದರು.


ಸಂಜೆ ವಿದ್ವಾನ್ ಆರ್.ಕೆ. ಪದ್ಮನಾಭ ಅವರ ವೀಣಾ ವಾದನ ಕಛೇರಿ ರಂಜಿಸಿತು. ವಿದ್ವಾನ್ ಶ್ರೀಧರ ಮೃದಂಗ ಮತ್ತು ವಿದ್ವಾನ್ ರಮೇಶ್ (ಘಟ) ಪಕ್ಕವಾದ್ಯ ಸಹಕಾರ ನೀಡಿ ಶ್ರೋತೃಗಳ ಮನಗೆದ್ದರು.


* ಶತಚಂಡಿ ಪಾರಾಯಣ ಇಂದು:  

ಭಾನುವಾರ (ಮಾ. 31) ಮಠದ ಆವರಣದಲ್ಲಿ ಬೆಳಗ್ಗೆ 9 ರಿಂದ ಮಧ್ಯಾಹ್ನ 1ರ ವರೆಗೆ ಶ್ರೀ ಮಹಾರುದ್ರ ಜಪ ಮತ್ತು ಶತಚಂಡಿ ಪಾರಾಯಣ ನೆರವೇರಲಿ. ಈ ಸಂದರ್ಭ ಶೃಂಗೇರಿ ಜಗದ್ಗುರು ಶ್ರೀ ವಿಧುಶೇಖರ ಭಾರತೀ ತೀರ್ಥ ಸ್ವಾಮೀಜಿ ಶ್ರೀ ಸಾರ್ವಜನಿಕ ದರ್ಶನ ನೀಡಲಿದ್ದಾರೆ. ಪಾದಪೂಜೆ ಮತ್ತು ಭಿಕ್ಷಾವಂದನೆ ನಡೆಯಲಿದೆ. ಸಂಜೆ 4.30 ರಿಂದ 7ರವರೆಗೆ ನಗರದ ವಿವಿಧ ದೇವಾಲಯ ಹಾಗೂ ಸಂಘ-ಸಂಸ್ಥೆಗಳಿಗೆ ಶ್ರೀಗಳು ಭೇಟಿ ನೀಡಲಿದ್ದಾರೆ. ಸಂಜೆ ಖ್ಯಾತ ಕಲಾವಿದ ವಿದ್ವಾನ್ ಶಿವಶಂಕರ ಸ್ವಾಮಿ ತಂಡದಿಂದ (ಲಯ ಶಂಕರ- ವಾದ್ಯ ವೈಭವ) ನೆರವೇರಲಿದೆ. ರಾತ್ರಿ 8.30ಕ್ಕೆ ಶ್ರೀಗಳಿಂದ ಶ್ರೀ  ಚಂದ್ರಮೌಳೇಶ್ವರ ಪೂಜೆ ನೆರವೇರಲಿದೆ.


* ಶಂಕರಾಲಯದಲ್ಲಿ ಶನಿವಾರ ಶ್ರೀ ಮಾತೆ ಶಾರದಾಂಬೆಗೆ ವಿಶೇಷ ಅಲಂಕಾರ ಮಾಡಲಾಗಿತ್ತು.


 ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top