ವ್ಯಾಪಾರಿಗಳು, ಅಸಂಘಟಿತ ಕಾರ್ಮಿಕರ ಪ್ರಕೋಷ್ಠದ ಸಮಾವೇಶ
ಮಂಗಳೂರು: ದೇಶದ ಅಭಿವೃದ್ಧಿ, ಭಾರತವನ್ನು ಜಗತ್ತಿನಲ್ಲೇ ನಂಬರ್ ಒನ್ ರಾಷ್ಟ್ರವಾಗಿ ಕಟ್ಟಿ ಬೆಳೆಸುವ ದೂರದೃಷ್ಟಿ ಹೊಂದಿರುವ ಮತ್ತು ಈಗಾಗಲೇ ಜಾಗತಿಕ ಅರ್ಥವ್ಯವಸ್ಥೆಯಲ್ಲಿ ಭಾರತವನ್ನು 5ನೇ ಸ್ಥಾನಕ್ಕೇರಿಸಿದ ಸಮರ್ಥ ಹಾಗೂ ಬಲಿಷ್ಠ ಪ್ರಧಾನಿ ನರೇಂದ್ರ ಮೋದಿ ಅವರನ್ನು ಪುನರಾಯ್ಕೆ ಮಾಡುವುದು ನಿಜವಾದ ದೇಶಪ್ರೇಮಿಗಳೆಲ್ಲರ ಹೊಣೆ ಎಂದು ಬಿಜೆಪಿ ವಿಧಾನ ಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕ್ ಹೇಳಿದರು.
ಅವರು ಇಂದು ದ.ಕ. ಜಿಲ್ಲಾ ಬಿಜೆಪಿ ಪ್ರಧಾನ ಕಚೇರಿಯಲ್ಲಿ ಆಯೋಜಿಸಲಾದ ವಾಣಿಜ್ಯೋದ್ಯಮಿಗಳು, ವ್ಯಾಪಾರಸ್ಥರು ಮತ್ತು ಅಸಂಘಟಿತ ಕಾರ್ಮಿಕರ ಪ್ರಕೋಷ್ಠದ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದರು.
ಕಳದ 10 ವರ್ಷಗಳಲ್ಲಿ ಪ್ರಧಾನಿ ನರೇಂದ್ರ ನೇತೃತ್ವದ ಬಿಜೆಪಿ ಸರಕಾರ ಎಲ್ಲರನ್ನೂ ಒಳಗೊಂಡ ಅಭಿವೃದ್ಧಿಯ ಮಾದರಿಯಲ್ಲಿ ಮತ್ತು ಜಾಗತಿಕ ಮಟ್ಟದಲ್ಲಿ ಭಾರತದ ಪ್ರತಿಷ್ಠೆಯನ್ನು ಹೆಚ್ಚಿಸುವಂತೆ ಮಾದರಿ ಆಡಳಿತ ನಡೆಸಿದ್ದಾರೆ. ಸ್ವತಂತ್ರ ಭಾರತ ಶತಮಾನೋತ್ಸವ ಆಚರಿಸಿಕೊಳ್ಳುವ ಹೊತ್ತಿಗೆ ಅಂದರೆ 2047ರ ವೇಳೆಗೆ ಸುಭದ್ರ, ಸಶಕ್ತ ಹಾಗೂ ವಿಕಸಿತ ಭಾರತವನ್ನು ರೂಪಿಸುವುದು ಅವರ ಗುರಿಯಾಗಿದೆ. ಇಂತಹ ದೂರದೃಷ್ಟಿಯ ಜಾಗತಿಕ ನಾಯಕ ನರೇಂದ್ರ ಮೋದಿಯವರು ಮೂರನೇ ಬಾರಿಗೆ ಪ್ರಧಾನಿಯಾಗುವುದು ಅನಿವಾರ್ಯ ಎಂದು ಪ್ರತಾಪ್ ಸಿಂಹ ನಾಯಕ್ ನುಡಿದರು.
ಆರೋಗ್ಯ ವಿಮೆ, ಕುಡಿಯುವ ನೀರು ಒದಗಿಸುವ ಹರ್ ಘರ್ ಜಲ್, ಸ್ವಚ್ಛ ಭಾರತ ಹಾಗೂ ಇಜ್ಜತ್ ಕಾ ಘರ್ ಯೋಜನೆಯಡಿ ದೇಶದ ಎಲ್ಲ ಮನೆಗಳಿಗೆ ಶೌಚಾಲಯ ನಿರ್ಮಾಣ, ಕೋವಿಡ್ ಕಾಲದಲ್ಲಿ ಇಡೀ ಜಗತ್ತು ಆರ್ಥಿಕ ಬಿಕ್ಕಟ್ಟಿನಿಂದ ನರಳಿದರೆ, ಭಾರತದ ಅರ್ಥ ವ್ಯವಸ್ಥೆಯನ್ನು ಅತ್ಯಂತ ನಾಜೂಕಾಗಿ ನಿರ್ವಹಿಸಿ ಅಭಿವೃದ್ಧಿಯ ರಥ ಮುನ್ನಡೆಯುವಂತೆ ಮಾಡಿರುವುದು- ಇಂತಹ ನೂರಾರು ಕಾರಣಗಳಿಗೆ ಮೋದಿಯವರನ್ನು ಮತ್ತೊಮ್ಮೆ ಪ್ರಧಾನಿ ಹುದ್ದೆಗೆ ಏರಿಸುವುದು ನಮ್ಮ ಹೊಣೆಯಾಗಿದೆ ಎಂದು ಪ್ರತಾಪ್ ಸಿಂಹ ನಾಯಕ್ ಹೇಳಿದರು
ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ತಲುಪುವಂತೆ ಸುಮಾರು 837 ಯೋಜನೆಗಳನ್ನು ಪ್ರಧಾನಿ ಮೋದಿ ನೇತೃತ್ವದ ಸರಕಾರ ಇದುವರೆಗೆ ಜಾರಿಗೆ ತಂದಿದೆ. ಈ ಮೂಲಕ ದೇಶದ ಸಂಪೂರ್ಣ ಚಹರೆಯನ್ನೇ ಬದಲಿಸಿ, ಭವಿಷ್ಯದ ಬಲಿಷ್ಠ ಭಾರತಕ್ಕೆ ಭದ್ರ ಬುನಾದಿಯನ್ನು ಹಾಕಿಕೊಟ್ಟಿದ್ದಾರೆ ಎಂದು ಅವರು ತಿಳಿಸಿದರು
ಮೋದಿಯವರ ವಿರೋಧಿಗಳೂ ಸಹ ತಮ್ಮ ಲಾಭಕ್ಕಾಗಿ ಬಿಜೆಪಿಯನ್ನು ಟೀಕಿಸುವ ಭರದಲ್ಲಿ ಮೋದಿ ಮೋದಿ ಎಂದೇ ಜಪಿಸುತ್ತಿದ್ದಾರೆ. ಡಿಜಿಟಲ್ ಇಂಡಿಯಾ, ಕೋವಿಡ್ ಲಸಿಕೆ, ಚಂದ್ರಯಾನದಂತಹ ವೈಜ್ಞಾನಿಕ ಪ್ರಗತಿಗಳು ಭಾರತದ ಸ್ಥಾನಮಾನವನ್ನು ಎತ್ತರಕ್ಕೇರಿಸಿವೆ. ಕೋವಿಡ್ ಕಾಲದಲ್ಲಿ 140 ಕೋಟಿ ಭಾರತೀಯರಿಗೆ ಉಚಿತ ಕೋವಿಡ್ ಲಸಿಕೆ ವಿತರಿಸಿದ್ದು ಮಾತ್ರವಲ್ಲದೆ, 162 ದೇಶಗಳಿಗೆ ಉಚಿತವಾಗಿ ಲಸಿಕೆ ಪೂರೈಕೆ ಮಾಡಿರುವುದು ಸಣ್ಣ ಸಾಧನೆಯಲ್ಲ. ವಿದೇಶಗಳಲ್ಲಿರುವ ಭಾರತೀಯರು ಇಂದು ತಾವಿರುವ ದೇಶದಲ್ಲಿ ತಮ್ಮ ಗೌರವ ಹೆಚ್ಚಿರುವುದು ಪ್ರಧಾನಿ ಮೋದಿ ಅವರ ಸಮರ್ಥ ನಾಯಕತ್ವದಿಂದ ಎಂಬುದನ್ನು ಮನಗಂಡಿದ್ದಾರೆ ಎಂದು ನಾಯಕ್ ವಿವರಿಸಿದರು.
ಅತ್ಯಂತ ಕಷ್ಟದ ಬದುಕನ್ನು ಅನುಭವಿಸಿ ಬೆಳೆದು ಬಂದಿರುವ ಪ್ರಧಾನಿ ಮೋದಿ ಅವರಿಗೆ ಬಡವರ ಕಷ್ಟ ಚೆನ್ನಾಗಿ ಗೊತ್ತಿದೆ. ಅದಕ್ಕಾಗಿಯೇ ದೇಶದ ಜನತೆಯೆ ವಿಶ್ವಾಸ ಮತ್ತು ಮನೋಬಲವನ್ನು ವೃದ್ಧಿಸಿ, ಅಭಿವೃದ್ಧಿಯ ಪಥದಲ್ಲಿ ನಡೆಯುವಂತೆ ವಿವಿಧ ಯೋಜನೆಗಳ ಮೂಲಕ ನೆರವು ನೀಡಿದ್ದಾರೆ ಎಂದು ನಾಯಕ್ ನೆನಪಿಸಿದರು.
ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕ್ಯಾಪ್ಟನ್ ಬೃಜೇಶ್ ಚೌಟರನ್ನು ಅತಿ ಹೆಚ್ಚು ಅಂತರದಿಂದ ಆಯ್ಕೆ ಮಾಡುವ ಮೂಲಕ ಪ್ರಧಾನಿ ಮೋದಿ ಅವರಿಗೆ ಶಕ್ತಿ ತುಂಬುವ ಕಾರ್ಯವನ್ನು ಮಾಡಬೇಕಿದೆ ಎಂದು ಅವರು ನುಡಿದರು.
ಇದೇ ಸಂದರ್ಭದಲ್ಲಿ ಹಿರಿಯ ಸಂಪನ್ಮೂಲ ವ್ಯಕ್ತಿ ಶಿಕಾರಿಪುರ ಕೃಷ್ಣಮೂರ್ತಿ ಅವರು ಮಾತನಾಡಿ, ವಿವಿಧ ಪ್ರಕೋಷ್ಠಗಳಿಗೆ ಮಾರ್ಗದರ್ಶನ ಮಾಡಿದರು.
ಇದೇ ಸಂದರ್ಭದಲ್ಲಿ, ವ್ಯಾಪಾರಿಗಳ ಪ್ರಕೋಷ್ಠದ ಹಿರಿಯರಾದ ವಿಠಲದಾಸ್ ಪ್ರಭು, ಮೀನು ವ್ಯಾಪಾರಸ್ಥರಾದ ಸಂಧ್ಯಾ, ಅಸಂಘಟಿತ ಕಾರ್ಮಿಕರ ವಿಭಾಗದ ಸಚಿನ್ ಡಿ. ಪೂಜಾರಿ ಅವರನ್ನು ಸನ್ಮಾನಿಸಲಾಯಿತು.
ಪ್ರಕೋಷ್ಠದ ರಾಜ್ಯ ಸಂಚಾಲಕರಾದ ಸಚಿನ್ ಗೌಡ, ಜಿಲ್ಲಾ ಸಂಚಾಲಕರಾದ ಪ್ರಸನ್ನ ದರ್ಭೆ, ಪ್ರಮುಖರಾದ ಜಯಂತ ಸಾಲಿಯಾನ್, ಮುಂತಾದವರು ಭಾಗವಹಿಸಿದ್ದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ