ಮಂಗಳೂರು: ಬ್ಯಾರಿ ಸಮುದಾಯ ಸಾಕಷ್ಟು ಶೋಷಣೆಗೆ ಗುರಿಯಾಗಿದ್ದ ವರ್ಗವಾಗಿದ್ದು, ಭವಿಷ್ಯದಲ್ಲಿ ಸಮಾನತೆ ಮೂಲಕ ಸಮಾಜದಲ್ಲಿ ಮುಖ್ಯವಾಹಿನಿಗೆ ಬರುವ ನಿಟ್ಟಿನಲ್ಲಿ ತೊಡಗಿಸಿಕೊಳ್ಳಬೇಕಿದೆ ಎಂದು ಬದ್ರಿಯಾ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಡಾ. ಇಸ್ಮಾಯಿಲ್ ಎನ್. ಹೇಳಿದರು.
ನಗರದ ವಿಶ್ವವಿದ್ಯಾನಿಲಯ ಕಾಲೇಜಿನಲ್ಲಿ ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬೆಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ಮಂಗಳೂರು ವಿಶ್ವವಿದ್ಯಾನಿಲಯದ ಬ್ಯಾರಿ ಅಧ್ಯಯನ ಪೀಠ ವಿದ್ಯಾರ್ಥಿ ವಿಚಾರಗೋಷ್ಠಿ ಮತ್ತು ಪುಸ್ತಕ ಬಿಡುಗಡೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಸಮಾಜದಲ್ಲಿ ಇತರ ಸಮುದಾಯಗಳು ಬ್ಯಾರಿ ಸಮುದಾಯದ ಜನರನ್ನು ನಡೆಸಿಕೊಂಡ ರೀತಿ ಹಾಗೂ ಅವರು ಅನುಭವಿಸಿದ ನೋವಿನ ಸಂದರ್ಭಗಳೆಲ್ಲವನ್ನು ಕೃತಿ ರೂಪಕ್ಕೆ ಇಳಿಸಿರುವುದು. ಸಮುದಾಯದಲ್ಲಿ ಸಮಾನತೆಯ ಅಗತ್ಯತೆಯನ್ನು ಎತ್ತಿ ಹಿಡಿಯುತ್ತದೆ. ಆ ನಿಟ್ಟಿನಲ್ಲಿ ಬ್ಯಾರಿ ಸಮುದಾಯಕ್ಕೆ ಈ ಕೃತಿ ಸಾಕಷ್ಟು ಪ್ರೋತ್ಸಾಹದಾಯಕವಾಗಿದೆ. ದಕ್ಷಿಣ ಕನ್ನಡ ಜಿಲ್ಲೆ ಎಂದಿಗೂ ಶೈಕ್ಷಣಿಕವಾಗಿ ಮುಂದಿನ ಸಾಲಿನಲ್ಲಿ ನಿಲ್ಲುತ್ತದೆ. ಶಿಕ್ಷಣದ ಪ್ರಯೋಜನವನ್ನು ಬ್ಯಾರಿ ಸಮುದಾಯದ ಹೆಣ್ಣು ಮಕ್ಕಳೂ ಪಡೆದುಕೊಳ್ಳುತ್ತಿರುವುದು ನಿಜಕ್ಕೂ ಸ್ವಾಗತಾರ್ಹ. ಆ ಮೂಲಕ ಸಮಾನದಲ್ಲಿ ಸಮಾನತೆಯ ಹಾದಿ ತೆರೆದುಕೊಳ್ಳುತ್ತಿರುವುದಕ್ಕೆ ಸಾಕ್ಷಿಯಾಗಿದೆ. ಶೈಕ್ಷಣಿಕವಾಗಿ ಮುಂದುವರೆಯುವ ಮೂಲಕ ಸಾಂಸ್ಕೃತಿಕವಾಗಿ, ಸಾಮಾಜಿಕವಾಗಿ ಗೌರವಯುತ ಸ್ಥಾನದಲ್ಲಿ ನೆಲೆಕಂಡು ಕೊಳ್ಳುತ್ತಿರುವುದು ಸ್ವಾಗತಾರ್ಹ ಎಂದು ಹರ್ಷ ವ್ಯಕ್ತಪಡಿಸಿದರು.
ಮಂಗಳೂರು ವಿಶ್ವವಿದ್ಯಾನಿಲಯದ ಬ್ಯಾರಿ ಅಧ್ಯಯನ ಪೀಠದ ಸಂಯೋಜಕ ಡಾ. ಅಬೋಬಕ್ಕರ್ ಸಿದ್ಧಿಕ್ ಹಾಜಿ ಟಿಎ ಅಲಿಯಬ್ಬ ಜೋಕಟ್ಟೆ ರಚಿಸಿದ ʼಬ್ಯಾರಿ: ನಾನು ಕಂಡAತೆʼ ಅನುಭವ ಕಥನ ಬಿಡುಗಡೆ ಮಾಡಿ, ಬ್ಯಾರಿ ಜನಾಂಗದವರು ವ್ಯಾಪಾರ ಮಾಡುವವರು ಎಂಬ ಮನೋಭಾವ ಎಲ್ಲೆಡೆ ವ್ಯಾಪಕವಾಗಿ ಹರಡಿಕೊಂಡಿದೆ. ಇಂತಹ ನಕಾರಾತ್ಮಕ ಅಭಿಪ್ರಾಯಗಳ ನಡುವೆ ಒಂದು ಜನಾಂಗದ ಭಾಷೆ, ಸಂಸ್ಕೃತಿ ಕುರಿತು ಅಧ್ಯಯನ ನಡೆಸಿ ಪುಸ್ತಕದ ಮೂಲಕ ಇಡೀ ಸಮಾಜದ ಮುಂದೆ ಮಂಡನೆ ಮಾಡಿರುವುದು ಶ್ಲಾಘನೀಯ ಎಂದು ತಿಳಿಸಿದರು.
ಅಧ್ಯಯನವೆಂದರೆ ಅಭಿಪ್ರಾಯದ ಸಂಗ್ರಹ ಮಾತ್ರವಾಗಿರದೇ, ಅನುಭವ ಹಾಗೂ ಸಂಶೋಧನೆಯ ಫಲವಾಗಿದೆ. ಸಾಹಿತ್ಯದ ದೃಷ್ಟಿಯಿಂದ ಓದುವ ಹವ್ಯಾಸ ಮುಖ್ಯ ಅಧ್ಯಯನ ಕ್ಷೇತ್ರಕ್ಕೆ ತೊಡಗಿಸಿಕೊಳ್ಳಲು ಬ್ಯಾರಿ ಸಾಹಿತ್ಯ ದಾರಿಯಾಗಲಿ ಎಂದು ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ಬ್ಯಾರಿ ವಾರ್ತೆ ಸಂಪಾದಕ ಬಶೀರ್ ಬೈಕಂಪಾಡಿ, ಅಖಿಲ ಭಾರತ ಬ್ಯಾರಿ ಪರಿಷತ್ ಅಧ್ಯಕ್ಷ ಬಾಲಿದ್ ಉಜಿರೆ, ಮೇಲ್ತೆನೆಯ ಅಧ್ಯಕ್ಷ ಅಶೀರುದ್ದೀನ್ ಸಾರ್ಥಬೈಲ್ ಸೇರಿದಂತೆ ಕಾಲೇಜಿನ ವಿವಿಧ ವಿಭಾಗಗಳ ಉಪನ್ಯಾಸಕರು ಉಪಸ್ಥಿತರಿದ್ದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ