‘ಶಾಸ್ತ್ರೀಯ ಸಂಗೀತಕ್ಕೆ ದೇಗುಲಾಶ್ರಯ ಅಗತ್ಯ’

Upayuktha
0

‘ದೇವಾಲಯಲ್ಲಿ ಸ್ವರಾಲಯ’ ಕಾರ್ಯಕ್ರಮ ಉದ್ಘಾಟನಾ ಸಮಾರಂಭ




ಮಂಗಳೂರು: ‘ಹಿಂದಿನ ಕಾಲದಲ್ಲಿ ಶಾಸ್ತ್ರೀಯ ಸಂಗೀತಕ್ಕೆ ರಾಜಾಶ್ರಯಗಳಿದ್ದವು. ಆದರೆ ಕಾಲ ಬದಲಾಗಿದೆ. ಇಂದು ನಮ್ಮ ದೇವಾಲಯಗಳು ಶಾಸ್ತ್ರೀಯ ಸಂಗೀತಕ್ಕೆ ಆಶ್ರಯ ನೀಡಿ ಪೋಷಿಸುವ ಅಗತ್ಯವಿದೆ’ ಎಂದು ಖ್ಯಾತ ವೈದ್ಯ ಡಾ. ಎಂ. ಚಕ್ರಪಾಣಿ ಅವರು ಹೇಳಿದರು.

 

ನಗರದ ಕಲಾಶಾಲೆ ಸಂಸ್ಥೆ ಮತ್ತು ಸ್ವರಾಲಯ ಸಾಧನಾ ಫೌಂಡೇಶನ್ ಜಂಟಿಯಾಗಿ ಭಾನುವಾರ ಮರೋಳಿ ಶ್ರೀ ಸೂರ್ಯ ನಾರಾಯಣ ದೇವಾಲಯದಲ್ಲಿ ಆಯೋಜಿಸಿದ್ದ ‘ದೇವಾಲಯದಲ್ಲಿ ಸ್ವರಾಲಯ’ ಕಾರ್ಯಕ್ರಮ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.

 

‘ದೇವಾಲಯದಲ್ಲಿ ಸ್ವರಾಲಯ ಎಂಬುದು ಬಹಳ ಸುಂದರವಾದ ಕಲ್ಪನೆ’ ಎಂದು ಶ್ಲಾಘಿಸಿದ ಅವರು, ‘ಕರ್ನಾಟಕ ಸಂಗೀತ ಭಕ್ತಿ ಪ್ರಧಾನವಾಗಿದೆ. ದೇವರಿಗೂ ಸಂಗೀತವೆಂದರೆ ಪ್ರಿಯ. ಇಲ್ಲಿ ಕೀರ್ತನೆ ಎಂದರೆ ದೇವರನ್ನು ಪೂಜಿಸುವ ಒಂದು ದಾರಿಯೇ ಆಗಿದೆ. ಸಂಗೀತದ ಮೂಲಕ ದೇವರನ್ನು ಪೂಜಿಸಿ ಅನುಗ್ರಹ ಪಡೆಯಬಹುದು. ಈ ನಿಟ್ಟಿನಲ್ಲಿ ದೇವಾಲಯದಲ್ಲಿ ಸ್ವರಾಲಯ ಕಾರ್ಯಕ್ರಮ ಬಹಳ ಪ್ರಸ್ತುತವಾಗಿದೆ’ ಎಂದರು.

 

‘ಸಂಗೀತ ಎಂದರೆ ಎಲ್ಲರೂ ಆನಂದ ಪಡೆಯುವ ಒಂದು ಸುಲಭದ ದಾರಿ. ಆದರೆ ಶಾಸ್ತ್ರೀಯ ಸಂಗೀತ ಎಂದರೆ ಬಹಳ ಕ್ಲಿಷ್ಟವಾದದ್ದು ಎಂಬ ಸಾಮಾನ್ಯ ನಂಬಿಕೆ ಇದೆ. ಈ ಚೌಕಟ್ಟಿನಿಂದ ಹೊರ ಬಂದು ಸಂಗೀತ ಎಲ್ಲರನ್ನೂ ತಲುಪಲು ಇಂತಹ ಹೊಸ ಹೊಸ ಪ್ರಯೋಗಗಳು ನಡೆಯಬೇಕಾಗಿದೆ’ ಎಂದು ಡಾ. ಚಕ್ರಪಾಣಿ ಸಲಹೆ ನೀಡಿದರು.

 

ದೇವಾಲಯದ ಮ್ಯಾನೇಜಿಂಗ್ ಟ್ರಸ್ಟಿ ಗಣೇಶ್ ಶೆಟ್ಟಿ ಜಪ್ಪುಗುಡ್ಡೆಗುತ್ತು ಅವರು, ಕ್ಷೇತ್ರ ಮಹಾತ್ಮೆ, ದೇಗುಲ ಕಟ್ಟಡದ ವಿನ್ಯಾಸ ವಿಶೇಷಗಳನ್ನು ವಿವರಿಸಿದರು.

 

ದೇವಸ್ಥಾನ ಅಭಿವೃದ್ಧಿ ಸಮಿತಿ ಅಧ್ಯಕ್ಷ ಗಿರಿಧರ ಶೆಟ್ಟಿ, ಮೊಕ್ತೇಸರ ಉಮೇಶ್, ಉದ್ಯಮಿ ಮದುಸೂಧನ ನಾಯರ್, ಕಲಾಶಾಲೆಯ ರೂವಾರಿ ವಿಶ್ವಾಸ್ ಕೃಷ್ಣ, ವಿದ್ವಾನ್ ಯತಿರಾಜ್ ಆಚಾರ್ಯ, ಶಿಕ್ಷಕ ಶ್ರೀಕೃಷ್ಣ ಭಟ್ ಉಪಸ್ಥಿತರಿದ್ದರು.

 

ದೇವಾಲಯದ ಅಂಗಣದಲ್ಲಿ ವಿದುಷಿ ಶ್ರೇಷ್ಠ ಲಕ್ಷ್ಮೀ, ವಿದುಷಿ ರಶ್ಮಿ ಶ್ರೀನಿವಾಸ್ ಅವರ ಮಾರ್ಗದರ್ಶನದಲ್ಲಿ ಕಲಾಶಾಲೆಯ 20ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗಳಿಂದ ಏಕ ಕಾಲದಲ್ಲಿ ವಯಲಿನ್ ಸಂಗೀತ ಕಛೇರಿ ನಡೆಯಿತು.


ಬಳಿಕ ಸನ್ನಿಧಿ ಅಳಪೆ ಅವರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ ಕಛೇರಿ ನಡೆಯಿತು. ವಯಲಿನ್ ನಲ್ಲಿ ವಿಶ್ವಾಸ್ ಕೃಷ್ಣ, ಮೃದಂಗದಲ್ಲಿ ಪನ್ನಗ ಶರ್ಮನ್ ಸಹಕರಿಸಿದರು.

 

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top