ಜಗತ್ತಿನಲ್ಲಿ ಸಮಸ್ಯೆ ಇಲ್ಲದ ವ್ಯಕ್ತಿಯೇ ಇಲ್ಲ. ಕೆಲವರಿಗೆ ಸಮಸ್ಯೆ ದೊಡ್ಡದಾಗಿರಬಹುದು, ಮತ್ತೆ ಕೆಲವರಿಗೆ ಸಣ್ಣದಾಗಿರಬಹುದು. ಒಟ್ಟಾರೆ ಸಮಸ್ಯೆಯಂತೂ ಇದ್ದೆ ಇರುತ್ತದೆ. ಕೆಲವರು ಸಮಸ್ಯೆಗೆ ಸ್ವತಃ ತಾವೇ ಪರಿಹಾರ ಕಂಡುಕೊಳ್ಳುತ್ತಾರೆ, ಮತ್ತೆ ಕೆಲವರು ಸಮಸ್ಯೆಯಲ್ಲೆ ಸಿಲುಕಿ ಒದ್ದಾಡುತ್ತಿರುತ್ತಾರೆ. ಅಷ್ಟಲ್ಲದೆ ಮತ್ತಷ್ಟು ಸಮಸ್ಯೆಗಳನ್ನು ಹೆಚ್ಚಿಸಿಕೊಂಡು ಚಿಂತೆಗೊಳಗಾಗಿ ಚಿಂತಾಜನಕ ಸ್ಥಿತಿಯನ್ನು ಉಂಟು ಮಾಡುತ್ತಾರೆ. ಇಲ್ಲಿ ನಾವು ಯೋಚಿಸಬೇಕಾದ ಒಂದು ಅಂಶವೆಂದರೆ ಜನರು ಏಕೆ ಸಮಸ್ಯೆಗಳಿಗೆ ಸಿಲುಕಿಕೊಳ್ಳುತ್ತಾರೆ? ತಾವೇ ಸೃಷ್ಟಿಸಿಕೊಂಡ ಸಮಸ್ಯೆಯಿಂದ ಹೊರಬರಲಾಗದೇ ಏಕೆ ಒದ್ದಾಡುತ್ತಾರೆ? ತಮ್ಮ ಸಮಸ್ಯೆಗಳಿಗೆ ಪರಿಹಾರವಿಲ್ಲವೇ? ಹಾಗೇನಾದರೂ ಪರಿಹಾರ ಮಾರ್ಗಗಳಿದ್ದರೆ ಅವುಗಳನ್ನು ಪಡೆಯುವುದು ಹೇಗೆ? ಇಂತಹ ಸಂದರ್ಭದಲ್ಲಿ ಯಾರು ಸಹಾಯ ಮಾಡುತ್ತಾರೆ? ಸಹಾಯ ಯಾವ ರೂಪದಲ್ಲಿ ಇರಬೇಕು? ಎಂಬೆಲ್ಲಾ ಪ್ರಶ್ನೆಗಳು ಮನಸ್ಸಿನ ಅಂತರಾಳದಲ್ಲಿ ಪುಟಿದೇಳುತ್ತವೆ.
ನಮ್ಮೆಲ್ಲರಿಗೂ ಗೊತ್ತಿರಬೇಕಾದ ಒಂದು ನಿಜಾಂಶವೆಂದರೆ ಅದು ಸಮಸ್ಯೆ ಸಾರ್ವತ್ರಿಕವಾದುದು ಎಂದು. ಸಮಸ್ಯೆಯಲ್ಲಿ ಸಿಲುಕಿಕೊಂಡವರಿಗೆ ಪರಿಹಾರಗಳನ್ನು ಹುಡುಕಿಕೊಡುವುದು ಬಹಳ ಅಗತ್ಯವಿದೆ. ಅದಕ್ಕಾಗಿಯೇ ಇತ್ತೀಚಿನ ದಿನಗಳಲ್ಲಿ ಮಾರ್ಗದರ್ಶನ ಎಂಬ ಪದವನ್ನು ಹೆಚ್ಚೆಚ್ಚು ಬಳಸಲಾಗುತ್ತದೆ. ಇದೇ ಸಂದರ್ಭದಲ್ಲಿ ನಮಗೆ ಉಂಟಾಗುವ ಮತ್ತೊಂದಷ್ಟು ಪ್ರಶ್ನೆಗಳೆಂದರೆ ಮಾರ್ಗದರ್ಶನ ಎಂದರೇನು? ಮಾರ್ಗದರ್ಶನ ಮಾಡುವ ಅಗತ್ಯತೆ ಇದೆಯೇ? ಮಾರ್ಗದರ್ಶನ ಯಾರಿಗೆ ನೀಡಬೇಕು? ಮತ್ತು ಯಾರು ಮಾರ್ಗದರ್ಶಕರಾಗಬೇಕು? ನೀಡುವ ಮಾರ್ಗದರ್ಶನ ಹೇಗಿರಬೇಕು? ಮಾರ್ಗದರ್ಶನವು ಯಾವೆಲ್ಲಾ ತತ್ವಗಳನ್ನು ಆಧರಿಸಿರಬೇಕು? ಹೀಗೆ ಒಂದರ ನಂತರ ಮತ್ತೊಂದು. ಇಂದು ನೈತಿಕ ಮೌಲ್ಯಗಳ ಕೊರತೆಯಿಂದಾಗಿ ಮಾರ್ಗದರ್ಶನವೆ ಇಲ್ಲದಂತಾಗಿದೆ ಎಂಬುದನ್ನು ಗಮನಿಸಬೇಕಿದೆ.
ಮೊದಲಿಗೆ ಹೇಳುವುದಾದರೆ ಮಾರ್ಗದರ್ಶನವು ಸಮಸ್ಯೆಯನ್ನು ಪರಿಹರಿಸಲು ಅಥವಾ ಏನನ್ನಾದರೂ ಸುಧಾರಿಸಲು ಅನುಭವದ ವ್ಯಕ್ತಿಯಿಂದ ಒದಗಿಸಲಾದ ಸಲಹೆ ಅಥವಾ ಮಾಹಿತಿಯನ್ನು ಸೂಚಿಸುತ್ತದೆ ಎಂದು ಹೇಳಬಹುದು. ಇದರಂತೆಯೇ ಮಾರ್ಗದರ್ಶನವು ವ್ಯಕ್ತಿಗಳು ತಮ್ಮ ಸಾಮರ್ಥ್ಯವನ್ನು ಕಂಡುಕೊಳ್ಳಲು ಮತ್ತು ಅಭಿವೃದ್ಧಿಪಡಿಸಲು ಸಹಾಯ ಮಾಡುವ ಪ್ರಕ್ರಿಯೆಯನ್ನು ಸೂಚಿಸುತ್ತದೆ ಎಂದು ಹೇಳಬಹುದಾಗಿದೆ.
ಮಾರ್ಗದರ್ಶನದ ಅಗತ್ಯ:
ಮಾರ್ಗದರ್ಶನದ ಅಗತ್ಯವು ಯಾರಿಂದಲೂ ನಿರ್ಲಕ್ಷಿಸಲಾಗದ ವಿಷಯವಾಗಿದೆ. ಅದಲ್ಲದೆ, ಮಾರ್ಗದರ್ಶನವು ವ್ಯಕ್ತಿಯಲ್ಲಿ ಶೈಕ್ಷಣಿಕ, ವೃತ್ತಿಪರ ಮತ್ತು ಮಾನಸಿಕ ಕೌಶಲ್ಯಗಳ ಬೆಳವಣಿಗೆಯಲ್ಲಿ ಸಹಾಯ ಮಾಡುತ್ತದೆ. ಅತ್ಯಂತ ಗಮನಾರ್ಹವಾದ, ಮಾರ್ಗದರ್ಶನವು ಜೀವನದಲ್ಲಿ ಅತ್ಯುತ್ತಮವಾದ ಸಂತೋಷ ಮತ್ತು ಶಾಂತಿಯ ಮಟ್ಟವನ್ನು ಸಾಧಿಸಲು ಸಹಾಯ ಮಾಡುತ್ತದೆ. ಅಷ್ಟೇ ಅಲ್ಲದೆ, ಸರಿಯಾದ ಮಾರ್ಗದರ್ಶನವನ್ನು ಪಡೆಯುವ ವ್ಯಕ್ತಿಯು ಖಂಡಿತವಾಗಿಯೂ ಸಮಾಜಕ್ಕೆ ಮಹತ್ವದ ಮತ್ತು ಉಪಯುಕ್ತವಾದ ಕೊಡುಗೆ ನೀಡುತ್ತಾನೆ. ವ್ಯಕ್ತಿಯ ವ್ಯಕ್ತಿತ್ವವನ್ನು ರೂಪಿಸಿಕೊಳ್ಳುವಲ್ಲಿ ಮಾರ್ಗದರ್ಶನದ ಅಗತ್ಯವಿದೆ. ಅನನುಭವಿ ವ್ಯಕ್ತಿಗೆ ಯಾವುದು ಸರಿ ಮತ್ತು ಯಾವುದು ತಪ್ಪು ಎಂದು ವೈಚಾರಿಕವಾಗಿ ವಿಚಾರಮಾಡುವ ಮತ್ತು ವಿಮರ್ಶಿಸುವ ನೈಪುಣ್ಯತೆ ಪಡೆದಿರುವುದಿಲ್ಲ. ಅಂತಹ ವ್ಯಕ್ತಿಗೆ ಸರಿಯಾದ ಮಾರ್ಗ ತೋರಿಸಲು ಮಾರ್ಗದರ್ಶನದ ಅಗತ್ಯವಿದೆ. ಸರಿಯಾಗಿ ಮಾರ್ಗದರ್ಶಿಸಲ್ಪಟ್ಟ ವ್ಯಕ್ತಿಯು ತನ್ನ ಭವಿಷ್ಯವನ್ನು ರೂಪಿಸಿಕೊಳ್ಳಲು ಸಾಧ್ಯವಾಗುತ್ತದೆ. ಪ್ರತಿಯೊಬ್ಬ ವ್ಯಕ್ತಿಯ ಆಯ್ಕೆಗಳು ಸಮಾಜದ ಹಿತಾಸಕ್ತಿಗಳಿಗೆ ಮತ್ತು ವ್ಯಕ್ತಿಯ ಹಿತಾಸಕ್ತಿಗೆ ಸೇವೆ ಸಲ್ಲಿಸಬೇಕು ಎಂದು ಮಾರ್ಗದರ್ಶನವು ನಿರ್ದಿಷ್ಟಪಡಿಸುತ್ತದೆ.
ಮಾರ್ಗದರ್ಶಕರು ಯಾರಿಗೆ ಯಾರಾಗಬೇಕು?:
ಪುರಾತನ ಕಾಲದಲ್ಲಿ ಗುರುಹಿರಿಯರು ಕಿರಿಯರಿಗೆ ಬುದ್ಧಿವಾದ ಹೇಳುವುದು, ಸ್ವಾಮೀಜಿಯವರಿಂದ ಪ್ರವಚನ ಮಾಡಿಸುವುದು ಒಂದು ರೀತಿಯ ಮಾರ್ಗದರ್ಶನವೇ ಆಗಿತ್ತು. ಆದರೆ ಈಗ ಕಾಲ ಹಾಗಿಲ್ಲ. ಮಾರ್ಗದರ್ಶನ ಮಾಡುವವರನ್ನು ಮಾರ್ಗದರ್ಶಕ ಎನ್ನಲಾಗುತ್ತದೆ. ಸಮಸ್ಯೆಯಿಂದ ಬಳಲುತ್ತಿರುವವರಿಗೆ ಸರಿಯಾದ ಸಮಯದಲ್ಲಿ ಸರಿಯಾದ ರೀತಿಯಲ್ಲಿ ಮಾರ್ಗದರ್ಶನ ಸಿಕ್ಕರೆ ಸಮಸ್ಯೆಗೆ ಪರಿಹಾರವನ್ನು ಸೂಚಿಸುವ ಪ್ರಯತ್ನ ಮಾಡಿದರೆ ಎಷ್ಟೋ ಜೀವ ಮತ್ತು ಜೀವನಗಳನ್ನು ಉಳಿಸಿದಂತಾಗುತ್ತದೆ. ಹಿರಿಯ ಅನುಭವಿಗಳು , ಶಿಕ್ಷಕರು, ಸಾಮಾಜಿಕ ಮತ್ತು ಧಾರ್ಮಿಕ ಸುಧಾರಕರು, ಆರ್ಥಿಕ ಮತ್ತು ಸಾಂಸ್ಕೃತಿಕ ಚಿಂತಕರು , ದಾರ್ಶನಿಕರು, ಪ್ರಾಜ್ಞಮಹನೀಯರು, ಹಿರಿಯ ಉಪನ್ಯಾಸಕರು, ಹಿರಿಯ ವಿಜ್ಞಾನಿಗಳು, ನ್ಯಾಯಾಧೀಶರು, ವಿಚಾರವಂತರು ಮುಂತಾದವರು ಮಾರ್ಗದರ್ಶನ ನೀಡಿದರೆ ಧನಾತ್ಮಕ ಸಮಾಜೋನ್ನತಿಗೆ ಒಳಿತಾಗುತ್ತದೆ.
ವ್ಯಕ್ತಿಯಿಂದ ವಿಶ್ವದ ಸಮಗ್ರ ಉದ್ಧಾರಕ್ಕೆ ಮಾರ್ಗದರ್ಶನವು ಅಗತ್ಯವಿದ್ದು ಅದು ಕೆಲವು ತತ್ವಗಳನ್ನು ಒಳಗೊಂಡಿದೆ. ಅವೆಂದರೆ, ಸರ್ವತೋಮುಖ ಅಭಿವೃದ್ಧಿಯ ತತ್ವ, ಮಾನವ ಅನನ್ಯತೆಯ ತತ್ವ, ಸಮಗ್ರ ಅಭಿವೃದ್ಧಿಯ ತತ್ವ, ವಿಸ್ತರಣೆಯ ತತ್ವ, ಸಹಕಾರ ತತ್ವ, ನಿರಂತರತೆಯ ತತ್ವ, ಹೊಂದಾಣಿಕೆಯ ತತ್ವಗಳನ್ನು ಆಧರಿಸಿ ವ್ಯಕ್ತಿಯ ಕುಟುಂಬ, ಶಾಲೆ, ಸಮಾಜ, ಸಮುದಾಯ, ಸಂಘಟನೆಗಳ ಮುನ್ನಡೆಗೆ ಮಾರ್ಗದರ್ಶನವು ಅಗತ್ಯವಾಗಿ ಬೇಕಿದೆ.
ಈ ಮಾರ್ಗದರ್ಶನ, ವ್ಯಕ್ತಿಯಲ್ಲಿ ಸಕಾರಾತ್ಮಕ ಮನೋಭಾವವನ್ನು ಬೆಳೆಸುವಂತದ್ದಾಗಿದ್ದು ಸಮಸ್ಯಾತ್ಮಕ ವ್ಯಕ್ತಿಯು ಅಂತಃಪ್ರಜ್ಞೆ ಬೆಳೆಸಿಕೊಳ್ಳಲು ಸಹಾಯಕ ವಾಗಿದೆ. ಮಾರ್ಗದರ್ಶನವು ಬದಲಾಗುತ್ತಿರುವ ಸನ್ನಿವೇಶಕ್ಕೆ ವ್ಯಕ್ತಿಯನ್ನು ಹೊಂದಿಕೊಳ್ಳುವಂತೆ ಮಾಡುತ್ತದೆ. ಜಗತ್ತು ಸ್ಪರ್ಧಾತ್ಮಕ ವಾಗಿದ್ದರೂ, ಆಧುನಿಕತೆ ನಮ್ಮ ಜೀವನದಲ್ಲಿ ಹಾಸುಹೊಕ್ಕಾಗಿದ್ದರೂ, ನೈತಿಕ ಮೌಲ್ಯಗಳನ್ನು ಬೆಳೆಸುವ ಮಹತ್ತರ ಜವಾಬ್ದಾರಿ ಪ್ರಜ್ಞಾವಂತ ನಾಗರೀಕರದಾಗಿದೆ. ಸಮಸ್ಯಾತ್ಮಕ ವ್ಯಕ್ತಿಗೆ ಮತ್ತೊಬ್ಬರ ಮಾರ್ಗದರ್ಶನದ ಮೂಲಕ ಪರಿಹಾರ ಸಿಕ್ಕಿತೆಂದರೆ, ಆ ವ್ಯಕ್ತಿಯ ಮುಖದಲ್ಲಿ ಹೂ ನಗೆ ಅರಳುತ್ತದೆ. ಸುತ್ತಮುತ್ತಲಿನ ವಾತಾವರಣ ನಗುನಗುತ್ತಾ ಇರುತ್ತದೆ. ಹೀಗಾಗಿ ನಾವೂ ನಗುನಗುತ್ತಾ ಇತರರನ್ನು ನಗುನಗಿಸುತ್ತಾ ಬದುಕೋಣ.
-ಕೆ.ಎನ್. ಚಿದಾನಂದ, ಹಾಸನ
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ