ಪಣಜಿ: ಕಳೆದ ಅನೇಕ ವರ್ಷಗಳಿಂದ ಗೋವಾದಲ್ಲಿ ಲಕ್ಷಾಂತರ ಕನ್ನಡಿಗರು ನೆಲೆಸಿದ್ದಾರೆ. ಗೋವಾದಲ್ಲಿ ನೆಲೆಸಿ ಇಲ್ಲಿನ ದಾಖಲಾತಿ ಹೊಂದಿರುವ ಕನ್ನಡಿಗರಿಗೆ ಮಾತ್ರ ಅನಾರೋಗ್ಯ ಅಥವಾ ಅಪಘಾತ ಸಂದರ್ಭದಲ್ಲಿ ಗೋವಾದ ಸರ್ಕಾರಿ ದೊಡ್ಡ ಆಸ್ಪತ್ರೆ ಗೋವಾ ಮೆಡಿಕಲ್ ಕಾಲೇಜಿನಲ್ಲಿ ಉಚಿತ ಚಿಕಿತ್ಸೆ ನೀಡಲಾಗುತ್ತದೆ.
ಗೋವಾದ ಖಾಯಂ ನಿವಾಸಿ ದಾಖಲಾತಿಯಿಲ್ಲದ ಕನ್ನಡಿಗರಿಗೆ ಶೇ 30 ರಷ್ಟು ಹಣವನ್ನು ಸರ್ಕಾರ ವಸೂಲಿ ಮಾಡುತ್ತಿದೆ. ಇದರಿಂದಾಗಿ ಗೋವಾಕ್ಕೆ ಬಂದು ಕೆಲಸ ನಿರ್ವಹಿಸುವ ಹೆಚ್ಚಿನ ಸಂಖ್ಯೆಯ ವಲಸೆ ಕಾರ್ಮಿಕರಿಗೆ ಹೆಚ್ಚಿನ ತೊಂದರೆಯುಂಟಾಗುತ್ತಿದೆ. ಈ ಹಿಂದೆ ಈ ಸೌಲಭ್ಯ ಉಚಿತವಾಗಿತ್ತು. ಆದರೆ ಕಳೆದ ಮೂರು ವರ್ಷಗಳಿಂದ ಹೊರ ರಾಜ್ಯಗಳ ರೋಗಿಗಳಿಗೆ ಶೇ 30 ರಷ್ಟು ಬಿಲ್ ವಸೂಲಿ ಮಾಡುತ್ತಿದೆ, ಇದರಿಂದಾಗಿ ಗೋವಾಕ್ಕೆ ಬರುವ ಕೂಲಿ ಕಾರ್ಮಿಕರಿಗೆ ಹೆಚ್ಚಿನ ತೊಂದರೆಯಾಗುತ್ತಿದೆ. ಕೂಡಲೆ ಕರ್ನಾಟಕ ಸರ್ಕಾರ ಮಧ್ಯ ಪ್ರವೇಶಿಸಿ ಮೆಡಿಕಲ್ ಸ್ಕೀಂ ಮೂಲಕ ಅನುಕೂಲ ಕಲ್ಪಿಸಿಕೊಡಬೇಕು ಎಂದು ಗೋವಾದ ಜುವಾರಿನಗರ ಕನ್ನಡ ಸಂಘದ ಅಧ್ಯಕ್ಷ ಶಿವಾನಂದ ಬಿಂಗಿ ಆಗ್ರಹಿಸಿದ್ದಾರೆ.
ಪಣಜಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು- ಗೋವಾದಲ್ಲಿರುವ ಮಹಾರಾಷ್ಟ್ರ ರಾಜ್ಯದ ವಲಸೆ ಕಾರ್ಮಿಕರಿಗೂ ಕೂಡ ಇದೇ ಸಮಸ್ಯೆ ಎದುರಾಗುತ್ತಿತ್ತು. ಈ ಕುರಿತು ಕೂಡಲೆ ಎಚ್ಚೆತ್ತ ಮಹಾರಾಷ್ಟ್ರ ಸರ್ಕಾರ ಮಹಾರಾಷ್ಟ್ರ ಮುಖ್ಯಮಂತ್ರಿಗಳ ಮೆಡಿಕಲ್ ಸ್ಕೀಂ ಮೂಲಕ ಗೋವಾ ಮೆಡಿಕಲ್ ಕಾಲೇಜಿನಲ್ಲಿ ಮಹಾರಾಷ್ಟ್ರ ರೋಗಿಗಳಿಗೆ ಉಚಿತ ವೈದ್ಯಕೀಯ ಸೌಲಭ್ಯ ಕಲ್ಪಿಸುವಂತೆ ಮಾಡಿದೆ. ಕರ್ನಾಟಕ ಸರ್ಕಾರವು ಕೂಡ ಗೋವಾ ಮೆಡಿಕಲ್ ಕಾಲೇಜಿನಲ್ಲಿ ಕರ್ನಾಟಕ ರಾಜ್ಯದ ಕೂಲಿ ಕಾರ್ಮಿಕರಿಗೆ ಮತ್ತು ರೋಗಿಗಳಿಗೆ ಗೋವಾ ಮೆಡಿಕಲ್ ಕಾಲೇಜಿನಲ್ಲಿ ಉಚಿತ ವೈದ್ಯಕೀಯ ಸೌಲಭ್ಯ ಕಲ್ಪಿಸುವಂತೆ ಮಾಡಬೇಕು ಎಂದು ಶಿವಾನಂದ ಬಿಂಗಿ ಕರ್ನಾಟಕ ಸರ್ಕಾರವನ್ನು ಮನವಿ ಮಾಡಿದರು.
ಕರ್ನಾಟಕದ ನೆರೆಯ ರಾಜ್ಯವಾಗಿರುವ ಗೋವಾಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರತಿದಿನ ಕೂಲಿ ಕಾರ್ಮಿಕರು ಆಗಮಿಸುತ್ತಾರೆ. ಗೋವಾದಲ್ಲಿ ಕಟ್ಟಡ ನಿರ್ಮಾಣದ ಸಂದರ್ಭದಲ್ಲಿ ಅಥವಾ ಇತರ ಯಾವುದೇ ಕೆಲಸ ನಿರ್ವಹಿಸುವ ಸಂರ್ದದಲ್ಲಿ ಅಪಘಾತಕ್ಕೀಡಾದರೆ ಅವರಿಗೆ ಗೋವಾದ ವೈದ್ಯಕೀಯ ಕಾಲೇಜಿನಲ್ಲಿ ಉಚಿತ ಚಿಕಿತ್ಸಾ ಸೌಲಭ್ಯವಿಲ್ಲ. ಇಷ್ಟೇ ಅಲ್ಲದೆಯೇ ಈ ಹಿಂದಿನಿಂದಲೂ ಕರ್ನಾಟಕದ ಗಡಿ ಭಾಗದ ಜನರು ತಮ್ಮ ಅನಾರೋಗ್ಯ ಅಥವಾ ಶಸ್ತ್ರಚಿತ್ಸೆಯ ಸಂದರ್ಭದಲ್ಲಿ ಗೋವಾ ವೈದ್ಯಕೀಯ ಕಾಲೇಜಿಗೆ ಆಗಮಿಸಿ ಉಚಿತ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದರು. ಇದೀಗ ಗೋವಾ ಸರ್ಕಾರ ಹೊರ ರಾಜ್ಯದ ದಾಖಲೆ ಹೊಂದಿರುವ ರೋಗಿಗಳಿಗೆ ಶೇ 30 ರಷ್ಟು ಶುಲ್ಕ ವಿಧಿಸುತ್ತಿರುವುದು ಕರ್ನಾಟಕದ ರೋಗಿಗಳು ತೊಂದರೆ ಅನುಭವಿಸುವಂತಾಗಿದೆ. ಕರ್ನಾಟಕದ ರೋಗಿಗಳಿಗೆ ಕರ್ನಾಟಕ ಸರ್ಕಾರ ಅಥವಾ ಕೇಂದ್ರ ಸರ್ಕಾರದ ಆಯುಷ್ಮಾನ್ ಸ್ಕೀಂ ಮೂಲಕ ಉಚಿತ ಚಿಕಿತ್ಸೆ ಸೌಲಭ್ಯ ಲಭಿಸುವಂತೆ ಮಾಡಬೇಕು. ಈ ಕುರಿತಂತೆ ಕರ್ನಾಟಕ ಗಡಿ ಅಭಿವೃದ್ಧಿ ಪ್ರಾಧಿಕಾರ ಮಧ್ಯಸ್ಥಿಕೆ ವಹಿಸಿ ಕರ್ನಾಟಕ ಸರ್ಕಾರದ ಮೂಲಕ ಸಮಸ್ಯೆ ಬಗೆಹರಿಸುವಂತೆ ಮಾಡಬೇಕು ಎಂದು ಜುವಾರಿನಗರ ಕನ್ನಡ ಸಂಘದ ಅಧ್ಯಕ್ಷ ಶಿವಾನಂದ ಬಿಂಗಿ ಮನವಿ ಮಾಡಿದರು.
ಗೋವಾ ಮೆಡಿಕಲ್ ಕಾಲೇಜಿನಲ್ಲಿ ಕರ್ನಾಟಕದ ರೋಗಿಗಳಿಗೆ ಉಚಿತ ಚಿಕಿತ್ಸೆ ಸೌಲಭ್ಯ ಲಭಿಸುವಂತಾದರೆ ಕರ್ನಾಟಕದ ಗಡಿ ಭಾಗದ ಜನತೆಗೆ ಹಾಗೂ ಗೋವಾಕ್ಕೆ ಬರುವ ಕರ್ನಾಟಕ ಮೂಲಕ ಬಡ ಕೂಲಿ ಕಾರ್ಮಿಕರಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದು ಶಿವಾನಂದ ಬಿಂಗಿ ಮನವಿ ಮಾಡಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ