ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಪ್ರಯುಕ್ತ ಲೇಖನ
ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ. ಹೆಣ್ಣು ಏನೆಲ್ಲಾ ಸಾಧನೆ ಮಾಡಿದರೂ ಕೌಟುಂಬಿಕ ನಿರ್ವಹಣೆ ಹೊರೆ ಹೊರಲೇಬೇಕು. ಹೆಣ್ಣಿಗೆ ಮನೆಯೊಂದೆ ಅಲ್ಲ ಸಮಾಜವನ್ನು ತಿದ್ದಬಲ್ಲ ಶಕ್ತಿಯಿದೆ. ಇಂತಹ ಶಕ್ತಿ ಇರುವ ಹೆಣ್ಣು ಇಂದು ಶಿಕ್ಷಣದಿಂದ ವಂಚಿತಳಾಗುತ್ತಿದ್ದಾಳೆ. ಶಿಕ್ಷಣವೆಂದರೆ ಶಾಲಾ ಪಠ್ಯಕ್ರಮದಲ್ಲಿ ಓದುವ ಶಿಕ್ಷಣವೊಂದೆ ಅಲ್ಲ. ಇದನ್ನು ಹೊರತುಪಡಿಸಿ ಅವಳಿಗೆ ಬೇರೆಯದೇ ಆದ ಶಿಕ್ಷಣವಿದೆ. ಹೆಣ್ಣು ಅಂತಹ ಶಿಕ್ಷಣದಿಂದ ವಂಚಿತಳಾಗುತ್ತಿದ್ದಾಳೆ.
ಹೆಣ್ಣು ಕರುಣೆಯ ಕಡಲು, ಕ್ಷಮಯಾ ಧರಿತ್ರಿ, ತಾಳ್ಮೆಯ ರೂಪವಾದ ಜಗಜನನಿ. ಆದರೆ ಇಂದು ಈ ಜನನಿ ಈ ಎಲ್ಲಾ ರೂಪಗಳಿಂದ ಹೊರಗುಳಿಯುತ್ತಿದ್ದಾಳೆ. ಕಾರಣ ಅವಳಿಗೆ ಸಂಸಾರೀಕ ಜೀವನ ನಡೆಸಲು ಬೇಕಾದ ಶಿಕ್ಷಣ ಸಿಗುತ್ತಿಲ್ಲದಿರುವುದು. ಅವಳಿಗೆ ಸಂಸಾರ ಜೀವನ ನಡೆಸಲು ಬೇಕಾದ ಶಿಕ್ಷಣವೆಂದರೆ ಒಂದು ಪ್ರಬುದ್ಧತೆ ಇನ್ನೊಂದು ತಾಳ್ಮೆ. ಹಾಗಾದರೆ ಸಂಸಾರ ನಡೆಸಲು ಹೆಣ್ಣಿಗಷ್ಟೇ ಈ ಶಿಕ್ಷಣ ಬೇಕೇ? ಇದು ಇನ್ನೊಂದು ಪ್ರಶ್ನೆ. ಆದರೆ ಹೆಣ್ಣು ಸಂಸಾರದಲ್ಲಿ ಅತಿ ಹೆಚ್ಚು ಪಾತ್ರವಹಿಸುವ ಮಮತೆಯ ಮೂರ್ತಿ. ಇಂತಹ ಮಮತೆಯ ಮೂರ್ತಿ ಇಂದು ಮಮತೆ, ಕರುಣೆ ಮತ್ತು ತಾಳ್ಮೆಗೆಡುವುದರಲ್ಲಿ ಮುಂದಾಗಿದ್ದಾಳೆ. ಕಾರಣವಿಷ್ಟೇ ಅವಳಿಗೆ ಸಿಗಬೇಕಾದ ಮೂಲಭೂತ ಶಿಕ್ಷಣದಿಂದ ದೂರ ಉಳಿದಿರುವುದರಿಂದ ಮತ್ತು ಪೋಷಕರ ನಿರ್ಲಕ್ಷ್ಯದಿಂದ . ಹದಿನೆಂಟು ವರ್ಷ ತುಂಬುವುದರೊಳಗೆಯೇ ಹೆಣ್ಣು ಮಕ್ಕಳನ್ನು ಮದುವೆಯೆಂಬ ಜಂಜಾಟಕ್ಕೆ ನೂಕಿ ತಮ್ಮ ಕರ್ತವ್ಯವನ್ನು ಕಳೆದುಕೊಳ್ಳುತ್ತಿರುವ ಪೋಷಕರು. ತಮ್ಮ ಮಗಳು ಸಂಸಾರೀಕ ಜೀವನ ನಡೆಸುವಷ್ಟು ವಿದ್ಯಾವಂತಳ? ಮತ್ತು ಅವಳಿಗೆ ಈ ಜೀವನ ನಡೆಸುವಷ್ಟು ಪ್ರಬುದ್ಧತೆ, ತಾಳ್ಮೆ ಇದೆಯೋ ಇಲ್ಲವೋ ಎಂದು ಪೋಷಕರು ಯೋಚಿಸುತ್ತಿಲ್ಲದಿರುವುದು. ಅರೆ ಆಗಿನ ಕಾಲದಂತೆ ಈಗಿನ ಕಾಲವಿಲ್ಲ ಎಲ್ಲಾ ಹೆಣ್ಣು ಮಕ್ಕಳು ಶಿಕ್ಷಣ ಪಡೆಯುತ್ತಿದ್ದಾರೆ ಮತ್ತು ಯಾವುದೇ ಬಾಲ್ಯ ವಿವಾಹಗಳಿಗೆ ಒಳಗಾಗುತ್ತಿಲ್ಲವೆಂದು ನೀವೆಲ್ಲಾ ಅಂದುಕೊಂಡಿದ್ದರೇ ಅದು ತಪ್ಪು.
ದೇಶದಲ್ಲಿ ಪ್ರತಿ ಐದು ವರ್ಷಕ್ಕೊಮ್ಮೆ ಕೇಂದ್ರ ಆರೋಗ್ಯ ಸಚಿವಾಲಯ ಆರೋಗ್ಯ ಸಮೀಕ್ಷೆಯನ್ನು ಮಾಡುತ್ತದೆ. 2020-21 ರಲ್ಲಿ ಮಾಡಿದ ಸಮೀಕ್ಷೆಯನ್ನು 2022 ರಲ್ಲಿ ವರದಿಯೊಂದನ್ನು ಬಿಡುಗಡೆ ಮಾಡಿದೆ. ಈ ಸಮೀಕ್ಷೆಯಲ್ಲಿ ಭಾರತದಲ್ಲಿ ಹೆಚ್ಚು ಬಾಲ್ಯ ವಿವಾಹ ನಡೆದಿರುವ ರಾಜ್ಯಗಳ ಪೈಕಿ ಕರ್ನಾಟಕ ರಾಜ್ಯ ಕೂಡ ಒಂದು.
ಇಂತಹ ಬಾಲ್ಯ ವಿವಾಹಗಳಿಂದ ಹೆಣ್ಣು ಮಕ್ಕಳ ಸಾಮಾಜಿಕ, ಆರ್ಥಿಕ, ಆರೋಗ್ಯ ಸೇರಿದಂತೆ ಹಲವು ಅಂಶಗಳ ಮೇಲೆ ದುಷ್ಪರಿಣಾಮಗಳನ್ನು ಬೀರುತ್ತದೆ. ಅಪ್ರಾಪ್ತ ವಯಸ್ಸಿನಲ್ಲಿ ವಿವಾಹ ಮತ್ತು ಹದಿಹರೆಯದ ಗರ್ಭಧಾರಣೆ ಹೆಣ್ಣು ಮಕ್ಕಳಲ್ಲಿ ಹಲವು ಸಮಸ್ಯೆಗಳನ್ನು ಉಂಟು ಮಾಡುತ್ತದೆ. ಅಪ್ರಾಪ್ತ ವಯಸ್ಕ ತಾಯಂದಿರಿಗೆ ಜನಿಸಿದ ಮಕ್ಕಳು ತಮ್ಮ ದೈಹಿಕ, ಭಾವನಾತ್ಮಕ ಮತ್ತು ಅರಿವಿನ ಬೆಳವಣಿಗೆಯಲ್ಲಿ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಇಂತಹ ಮದುವೆಗಳು ವೈವಾಹಿಕ ಸಂಬಂಧಗಳಲ್ಲಿ ವೈಫಲ್ಯತೆ, ಪ್ರತ್ಯೇಕತೆಯನ್ನು ಹೆಚ್ಚಾಗಿ ಅನುಭವಿಸುತ್ತಿದ್ದಾರೆ. ಇದಕ್ಕೆಲ್ಲಾ ಪರಿಹಾರವೆಂದರೆ ಅವಳಿಗೆ ಸಂಸಾರ ನಡೆಸಲಾದರು ಬೇಕಾದ ತಿಳುವಳಿಕೆಯ ಶಿಕ್ಷಣ, ಸ್ವಾತಂತ್ರ್ಯ , ಆರೋಗ್ಯ ರಕ್ಷಣೆಯಂತಹ ಯೋಜನೆಗಳು. ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆಯುವುದರ ಜೊತೆಗೆ ಸಂಸಾರ ಮತ್ತು ಸಮಾಜದ ಕಣ್ಣು ತೆರೆದಂತಾಗುತ್ತದೆ.
-ಅನುಷ. ಎಂ,
ಸಹಾಯಕ ಪ್ರಾಧ್ಯಾಪಕರು,
ರಸಾಯನಶಾಸ್ತ್ರ ವಿಭಾಗ,
ಕಟೀಲ್ ಅಶೋಕ್ ಪೈ ಸ್ಮಾರಕ ಕಾಲೇಜು, ಶಿವಮೊಗ್ಗ
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ