ಬಂಟ್ವಾಳ: ರಾಷ್ಟ್ರೀಯ ಸೇವಾ ಯೋಜನಾ ಶಿಬಿರವು ವಿದ್ಯಾರ್ಥಿಗಳ ಜೀವನದಲ್ಲಿ ಪ್ರಭಾವ ಬೀರುವ ಮೂಲಕ ಜೀವನದುದ್ದಕ್ಕೂ ಪ್ರೇರಣೆಯಾಗಲಿ ಎಂದು ಮಂಗಳೂರು ವಿಶ್ವವಿದ್ಯಾನಿಲಯದ ರಾಜ್ಯಶಾಸ್ತ್ರ ವಿಭಾಗದ ಸಹ ಪ್ರಾಧ್ಯಾಪಕ ಡಾ. ದಯಾನಂದ ನಾಯ್ಕ್ ಆಶಯ ವ್ಯಕ್ತಪಡಿಸಿದರು.
ಬೆಂಜನಪದವು ಗ್ರಾಮದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ವಿಶ್ವವಿದ್ಯಾನಿಲಯ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು. ಆತ್ಮವನ್ನು ಧ್ಯಾನದ ಮೂಲಕ ಹಿಡಿತಕ್ಕೆ ತೆಗೆದುಕೊಂಡು ಸರಿ, ತಪ್ಪುಗಳ ತುಲನೆ ಮಾಡಬೇಕು. ಆ ಮೂಲಕ ಬದುಕಿನ ಸಾರವನ್ನು ಅರಿತು ಮುನ್ನಡೆಯಬೇಕು. ಹಾಗೆಯೇ ಎನ್ಎಸ್ಎಸ್ ಗೀತೆಯ ಸಾರವನ್ನು ಅರಿತುಕೊಳ್ಳಬೇಕು ಎಂದು ಸಲಹೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವಿಶ್ವವಿದ್ಯಾನಿಲಯ ಕಾಲೇಜಿನ ಪ್ರಾಂಶುಪಾಲೆ ಡಾ. ಅನುಸೂಯ ರೈ, ವಿದ್ಯಾರ್ಥಿಗಳ ಶಿಸ್ತು ಹಾಗೂ ಶಿಬಿರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ, ರಾಷ್ಟೀಯ ಸೇವಾ ಯೋಜನೆಯ ಮಹತ್ವ ಹಾಗೂ ಮೌಲ್ಯಗಳ ಕುರಿತು ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿಕೊಟ್ಟರು.
ಸಹ ಶಿಬಿರಾಧಿಕಾರಿ ನಿಧಿಶ್ರೀ ಶಿಬಿರದ ವರದಿ ಮಂಡಿಸಿದರು. ಸಂಯೋಜನಾ ಅಧಿಕಾರಿ ಡಾ. ಸುರೇಶ್ ಸ್ವಾಗತಿಸಿ, ಡಾ. ಗಾಯತ್ರಿ ವಂದಿಸಿದರು. ಶಿಬಿರಾರ್ಥಿ ಸಂದೀಪ್ ಕಾರ್ಯಕ್ರಮ ನಿರೂಪಿಸಿದರು. ಬೆಂಜನಪದವು ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ರಾಧಾಕೃಷ್ಣ ತಂತ್ರಿ, ಕಾರ್ಯಾಧ್ಯಕ್ಷ ವಾಮನ್ ಆಚಾರ್ಯ, ಕಾಲೇಜಿನ ಉಪ ಪ್ರಾಂಶುಪಾಲ ಅನಂತ ಪದ್ಮನಾಭ ಶಿಬರೂರು ಉಪಸ್ಥಿತರಿದ್ದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ