ನನ್ನ ಮುದ್ದು ಗೊಂಬೆ....

Upayuktha
0


ಒಂದು ಮಾತು ಹೇಳ್ಳಾ...

ಹೇಳ್ತಿನಿ ಸರಿಯಾಗಿ ಕೇಳಿಸ್ಕೊ...


ನಂಗೊತ್ತಾಗಿದೆ ಕಣೆ ನಿನ್ ಲೈಫ್ ಅಲ್ಲಿ ನಾನು ಈಗ ಏನು ಅಲ್ಲ ಅಂತ, ನನ್ ಹತ್ರ ನೀನು ಮನಸು ಬಿಚ್ಚಿ ಏನು ಮಾತಾಡಲ್ಲ ಅಂತ, ನಂಗೊತ್ತಾಗಿದೆ ಕಣೆ ಈಗ ನಿಂಗೆ ನಿನ್ನ ಯಾವುದೇ ಕಷ್ಟ ಸುಖ ನನ್ ಜೊತೆ ಹಂಚ್ಕೋಳೋಕೆ ಇಷ್ಟ ಆಗ್ತಿಲ್ಲ ಅಂತ, ಮೊದಲಿನಷ್ಟು ಆತ್ಮೀಯತೆ ಇಲ್ಲ ಅಂತ, ನಂಗೊತ್ತಾಗಿದೆ ನಿಂಗೆ ನಾನು ಈಗ ಜಸ್ಟ್ ಒಂದು ನಾರ್ಮಲ್ ಫ್ರೆಂಡ್ ಅಂತ, ನಂಗೊತ್ತಾಗಿದೆ ನಿಂಗೆ ನಾನು ವಾರಗಟ್ಟಲೆ ನಿನ್ ಜೊತೆ ಮಾತಾಡದಿದ್ರೂ ಏನೂ ವ್ಯತ್ಯಾಸ ಇಲ್ಲ ಅಂತ, ನಿಂಗೊತ್ತಾ ನಂಗೆ ನೀನು ಎಷ್ಟು ಇಷ್ಟ ಅಂತ, ಮಾತಾಡದಿದ್ರೂ ನಿಂಗೆ ಏನು ವ್ಯತ್ಯಾಸ ಆಗಲ್ಲ ಅಂತ, ನಂಗೊತ್ತಾಗಿದೆ ನಿಂಗೆ ಮೊದ್ಲಿನ್ ಹಾಗೆ ದಿನ ಪೂರ್ತಿ ನನ್ ಜೊತೆ ಕಳಿಯೋಕೆ ಇಷ್ಟ ಇಲ್ಲ ಅಂತ.


ನಂಗೊತ್ತಾಗಿದೆ ನಿಂಗೆ ನಾನು ನಿಂಗೆ ಮೊದ್ಲಿನಷ್ಟು ಇಷ್ಟ ಇಲ್ಲ ಅಂತ.. ಎಲ್ಲಾ ಅರ್ಥ ಆಗುತ್ತೆ ನಂಗು. ಎಲ್ಲಾ ಗೊತ್ತಿದ್ದೂ ಯಾಕೆ ಬೆನ್ ಬಿದ್ದೀಯ ಬೇತಾಳ ಹಾಗೆ ಅನ್ಕೋತಿದಿಯ. ನಿಜ ಕಣೆ ಎಲ್ಲಾ ಅರ್ಥ ಆಗ್ತಿದೆ, ನಿನ್ನ ಒಂದೊಂದು ಮಾತಲ್ಲಿ ಎಲ್ಲಾ ಅರ್ಥ ಆಗ್ತಿದೆ ಆದ್ರೇನು ಮಾಡ್ಲಿ, ಈ ಹೃದಯಕ್ಕೆ ಪ್ರೀತಿ ಅಂತ ಆಗಿದ್ದು ಮೊದಲು ನಿನ್ ಮೇಲೇನೆ, ಕೊನೆಯದು ಕೂಡ ನೀನೀನೇ, ಮೊದಲ ಪ್ರೀತಿ ಮರಿಯೋಕೆ ಸಾಧ್ಯನಾ ಹೇಳು. ನಿಂಗೆ ನಾನು ಇಷ್ಟ ಇಲ್ಲ ಅಂದ ಮಾತ್ರಕ್ಕೆ ನಾನು ನಿನ್ನ ಇಷ್ಟ ಪಡ್ಬಾರ್ದು ಅಂತೇನು ಇಲ್ವಲ್ಲ. ಅಷ್ಟಕ್ಕೂ ಪ್ರೀತಿ ಮಾಡೋಕೆ, ಬಿಡೋಕೆ ನಾವ್ ಯಾರು ಹೇಳು. ಆ ದೇವರು ಮೇಲೆ ಗಂಟು ಹಾಕಿ ಕಳಿಸಿರ್ತಾನೆ ಯಾರಿಗೆ ಯಾರು ಅಂತ. ಬೇಡ ಅನ್ನೋಕೆ, ದೂರ ಹೋಗೋಕೆ ನಾನು ನೀನು ಯಾರು.


ಯಾಕೋ ಇವಳು ಪೆದ್ದು ಥರ ಓವರ್‌ ಆ್ಯಕ್ಟ್ ಮಾಡ್ತಿದ್ದಾಳೆ ಅಂದ್ಕೋಬೇಡ ಕಣೆ. ನಾನ್‌ ಸ್ವಲ್ಪ ಹಿಂಗೆ, ಅದು ನಿನ್‌ ವಿಷ್ಯಯದಲ್ಲಿ ಮಾತ್ರ. 


ನಿನ್ನನ್ನ ತುಂಬಾ ಅಂದ್ರೆ ಹೇಳ್ಳೋಕ್ಕಾಗದೇ ಇರೋವಷ್ಟು ಇಷ್ಟಪಡ್ತೀನಿ. ನಿನ್‌ ನಗು, ನಿನ್‌ ಕಾಳಜಿ, ನೀನ್‌ ಮಾತಾಡೋವಾಗ ಹೇಳೋ ಪ್ರತಿ ಮಾತೂ ನಂಗಿಷ್ಟ. ಸಿಟ್ಟಲ್ಲಿ ಬೈಯೋ ಮಾತುಗಳೂ ಕೂಡ ಇಷ್ಟ. ನೀನು ಹೇಗಿದ್ರೂ ನನ್‌ ಹುಡ್ಗಿನೇ ಕಣೆ. ನಿನ್ನ ಪ್ರತಿ ಉಸಿರು, ಪ್ರತಿ ಎದೆ ಬಡಿತ, ನಿನ್ನ ಹಿಂಬಾಲಿಸೋ ನೆರಳು ಕೂಡ ನಾನೇ ಆಗಿರ್ಬೇಕು ಅನ್ನೋ ಆಸೆ. ನಿಂಗೊತ್ತಾ ನಿನ್‌ ವಿಷ್ಯದಲ್ಲಿ ನಾನು ಎಷ್ಟು ಸ್ವಾರ್ಥಿ ಅಂತ. ಎಷ್ಟು ಅಂದ್ರೆ, ನಿನ್ ಜೊತೆಯಲ್ಲಿ ದೂರ ಉಳಿತು, ನಿನ್ ಯೋಚನೆಯಲ್ಲೂ ನನ್ ಬಿಟ್ಟು ಯಾರು ಇರ್ಬಾರ್ದು. ಅಷ್ಟು ಸ್ವಾರ್ಥಿ ಆಗ್ಬಿಡ್ತೀನಿ ಗೊತ್ತ ನಿನ್ ವಿಷಯಕ್ಕೆ.


ಅಮ್ಮನ ಮಡಿಲಲ್ಲಿ ಕೂತು ಮುದ್ದು ಮಾಡಿಸಿಕೊಳ್ಳೋ ಹಾಗೇ, ನಿನ್‌ ಮಡಿಲಲ್ಲಿ ಮಗುವಾಗ್ಬೇಕು, ನಿನ್‌ ಕೈಯಾರೇ ನಂಗೆ ನೀನು ತುತ್ತು ತಿನ್ನಿಸಬೇಕು, ಒಂದು ವೇಳೆ ತಿನ್ಬೇಕಾದ್ರೆ ಮಿಸ್ಸಾಗಿ ಬೆರಳು ಕಚ್ಚಿದ್ರೆ ಬೈಬಾರ್ದು, ಕೆಲವೊಂದು ಸಲ ನಂಗೆ ಸಿಟ್‌ ಬಂದಾಗ ನೀನೇ ಸಮಾಧಾನ ಮಾಡ್ಬೇಕು ಅಂತ ಏನೇನೊ ಆಸೆ ಕಣೆ. ಅದು ಬೇಕು ಇದು ಬೇಕು ಅಂತ ಏನೂ ಕೇಳಲ್ಲ. ಆದ್ರೆ ನಿನ್‌ ಪ್ರೀತಿ ಮಾತ್ರ ಬೇಕೇ ಬೇಕು. ಅದು ಈ ಜನ್ಮಕ್ಕಷ್ಟೇ ಅಲ್ಲ ಎಷ್ಟೇ ಜನ್ಮ ಬಂದ್ರೂ ನೀನೇ ನಂಗೆ ಫ್ರೆಂಡ್ ಆಗಿ ಸಿಗ್ಬೇಕು. ಯಾವ ಜನ್ಮದಲ್ಲೂ ನನ್‌ ಬಿಟ್ಟು ಹೋಗ್ಬಾರದು ಆಯ್ತಾ? ಜನ್ಮ ಜನ್ಮದಲ್ಲೂ ನನ್ ಜೊತೆಗೆ ಇರ್ಬೇಕು ನೀನು.


ನಿನ್ನ ಮುನಿಸು ಸಾಕು ಕಣೇ  ಈ ದೂರ ಸಾಕು. ನಿನ್ನ ಪ್ರತಿ ಮಾತಿಗೆ ಕಾಯಿತಾ ಇದೀನಿ ನಾನು. ಇಂಥಾ ಕತ್ತಲು ತುಂಬಿದ ಮಧ್ಯೆಯೂ ರಾತ್ರಿಯ ಮೌನದಲ್ಲಿ ಯಾವುದೇ ಇಂಪಾದ ಸಂಗೀತ ಕೇಳಿದ್ರೆ ಅದು ನಿನ್ನ ದನಿ ಹಾಗೆ ಕೇಳಿ ಬರುತ್ತೆ. ಆ ಹಾಡಿನ ಸಾಲುಗಳನ್ನ ಕೇಳ್ತಿದ್ರೆ ನಿನಗಾಗಿ ನಾನೆ ಬರೆದ ಸಾಲುಗಳು ಅನಿಸುತ್ತೆ, ಹಾಗೆ ಹಾಡು ಕೇಳ್ತಾ ಕೇಳ್ತಾ ಕಣ್ಣು ತುಂಬಿ ಬರುತ್ತೆ, ಮತ್ತೆ ಆ ದಿನ ಯಾವಾಗ ಬರುತ್ತೋ ಅಂತ. ಯಾವದೇ ಫಿಲಂ ನೋಡಿದ್ರು ಅದ್ರಲ್ಲಿರೋ ನಾಯಕ ನಾಯಕಿ ನಾವೇ ಇರೋ ಹಾಗೆ ಕಾಣುತ್ತೆ. ನಾನೇನೇ ಚಿಕ್ಕ ಕೆಲಸ ಮಾಡ್ಲಿ ದೊಡ್ಡ ಕೆಲಸ ಮಾಡ್ಲಿ ನಿಂಗೆ ಹೇಳಲೇ ಬೇಕು ಅನಿಸುತ್ತೆ. ನೀನು ಅದಕ್ಕೆ ಉತ್ತರ ಕೊಡದಿದ್ರೂ ಪರವಾಗಿಲ್ಲ ಪ್ರತಿಯೊಂದು ನಿನ್ ಜೊತೆ ಹಂಚಿಕೊಂಡ್ರೆ ಈ ಜೀವಕ್ಕೆ ಸಮಾಧಾನ ಕಣೆ. ಕೇಳಿ ಕೇಳಿ ನಿಂಗೆ ಬೋರ್ ಆಗಿರ್ಬಹುದು ಆದ್ರೆ type ಮಾಡಿ ಮಾಡಿ ನಂಗಂತೂ ಬೋರ್ ಆಗಲ್ಲ. ಯಾಕಾದ್ರೆ ಅಷ್ಟು ಇಷ್ಟ ನೀನು. ಅಷ್ಟು ಇಷ್ಟ ನಿನ್ ಜೊತೆ ಮಾತಾಡೋಕೆ ನಂಗೆ. ದೇವರು ಬಂದು ಏನು ಬೇಕು ಅಂತ ಕೇಳಿದ್ರೆ ಬೆಟ್ಟದಷ್ಟು ನಿನ್ ಪ್ರೀತಿ ಕೊಡ್ಸು ಅಂತ ಕೇಳ್ಕೊತಿನಿ ಗೊತ್ತ... 


ಬಂಗಾರ ಇನ್ನು ಕೆಲವೇ ದಿನ ಕಣೇ. ನಿನ್ನೆಲ್ಲ ಕನಸು ನನಸಾಗುತ್ತೆ, ಪರಿಸ್ಥಿತಿ ಚೇತರಿಸಿಕೊಳ್ಳುತ್ತೆ. ಆದ್ರೆ ಅಲ್ಲಿವರ್ಗು ಈ ಕೋಪ, ತಾಪ, ಅಳು ಬಿಟ್ಟುಬಿಡು. ಇದರಿಂದ ನಿನ್ನ ಚೆಂದದ ವ್ಯಕ್ತಿತ್ವ, ಮುಖ ಮಂಕಾಗುತ್ತೆ. ನೀ ನಗ್ತಿದ್ರೇನೇ ನೋಡೋಕೆ ಚೆಂದ. ನಂಗಷ್ಟೇ ಅಲ್ಲ ಎಲ್ರಿಗೂ ಅದೇ ಇಷ್ಟ. ನೀ ನನ್ನ ಕನಸು, ನನ್ನ ಶಕ್ತಿ, ಅಂತರಾತ್ಮದ ಕನ್ನಡಿ, ಅಂತರಂಗದ ಪಿಸುನುಡಿ, ಆಂತರ್ಯದ ತುಣುಕು. ನೀ ನನ್ನ ಅಂಧಕಾರದಲ್ಲಿ ಬೆಳಕು ಕಣೆ…


ಪ್ರೀತಿ ಅದಾಗದೆ ಆಗ್ಬೇಕು, ಭಿಕ್ಷೆ ಬೇಡಬಾರ್ದು ಮಣ್ಣು ಮಸಿ ಅಂತಾರೆ ನಾನು ಬರೀತಾನೆ ಇರ್ತೀನಿ ಉದ್ದುದ್ದ ಲೇಖನದಲ್ಲಿ ಆದ್ರೆ ನಮ್ ಪ್ರೀತಿನಾ ನಾವು ಉಳಿಸಿಕೊಳ್ಳೋಕೆ ಸ್ವಾಭಿಮಾನ ಪಕ್ಕಕ್ಕೆ ಇಟ್ಟು ಕಳೆದು ಹೋದ ಪ್ರೀತಿ ಮತ್ತೆ ಪಡಿಯೋದ್ರಲ್ಲಿ ಯಾವುದೆ ತಪ್ಪಿಲ್ಲ. ನಮ್ ನಮ್ಮವರ ನಡುವೆ ಅದೆಂತ ಸ್ವಾಭಿಮಾನ ಕಣೆ... ಹಿಂದೆ ಒಮ್ಮೆ ಪ್ರೀತಿ ಹುಟ್ಟಿತ್ತು ಅಂದ್ರೆ ಮತ್ತೆ ಆ ಪ್ರೀತಿ ಪಡಿಯೋಕೆ ಪ್ರಯತ್ನ ಮಾಡೋದ್ರಲ್ಲಿ ತಪ್ಪೇನು ಇಲ್ವಲ್ಲ.?


ನಾನು ಸ್ವಾಭಿಮಾನದಲ್ಲಿ ಎತ್ತಿದ ಕೈ, ಸ್ವಂತ ಮನೆವರನ್ನೇ care ಮಾಡಲ್ಲ ಸ್ವಾಭಿಮಾನ ಅಂತ ಬಂದ್ರೆ, ಆದ್ರೆ ನಿನ್ ವಿಷಯಕ್ಕೆ ಎಲ್ಲಾ ಮರೆತು ಮನಸು ಮಗು ಆಗಿಬಿಡುತ್ತೆ ಕಣೆ. ತಾಯಿ ಎಷ್ಟು ಬೈದ್ರು, ಮಗು ಏನಾದ್ರು ಬೇಕಾದ್ರೆ, ಕಷ್ಟ ಆದ್ರೆ ತಾಯಿ ಹತ್ರನೇ ಬರ್ಬೇಕಲ್ವಾ ಹಾಗೆ ನೀನು ನಂಗೆ...


ಒಂದೇ ಮಾತಲ್ಲಿ ಹೇಳಿ ಬಿಡ್ತೀನಿ ಕೇಳು. ನೀ ನಗ್ತಿದ್ರೆ ನಿನ್ನ ತೆಕ್ಕೆಗೆ ಹಾರಿ ಬರಬೇಕು ಅನ್ಸುತ್ತೆ. ನೀ ಬೇಜಾರು, ಅಳ್ತಿದ್ರೆ ಯಾಕೆ ಬೇಕು ಬದುಕು ಅಂತ ಮನಸು ಮಂಕಾಗಿಬಿಡುತ್ತೆ. ನಾವು ನಗ್ತಿರಬೇಕು. ನಮ್ಮ ಪ್ರೀತಿ ಕ್ಷಣ ಕೂಡ ಬೋರ್‌ ಅನ್ನಿಸ್ಬಾರ್ದು. ನೀನಿಲ್ಲದೇ ನಾನು ಬರಿ ಶೂನ್ಯ ಕಣೇ. ನಿನ್ನ ಕೋಪ ತಡ್ಕೊಳ್ಳೋ ಶಕ್ತಿ ನಂಗಿಲ್ಲ. ಮಾತಾಡಿಸೋ ಯುಕ್ತಿ ಗೊತ್ತಿಲ್ಲ. ಪೆದ್ದಿ ನಾನು. ನನ್ನನ್ನ ಹೀಗೆಲ್ಲ ಸತಾಯಿಸೋದು ಸರೀನಾ ಹೇಳು?


ನಿಜಕ್ಕೂ ಟೈಪ್ ಮಾಡೋವಾಗ್ಲೂ ಕಣ್ಣ ಹನಿಗಳು ಅಕ್ಷರಗಳನ್ನ ಮಬ್ಬಾಗಿಸ್ತಿದೆ Badly missing you ಬಂಗಾರ...


ಹಾಗಂತ ನೀನು ತುಂಬಾ ಪ್ರೀತಿ ಕೊಡ್ಲೆ ಬೇಕು ಅಂತೇನು ಇಲ್ಲ ಕಣೆ. ಈಗ ಸಿಕ್ಕಿರೋದೇ ಸಾಕು ಅದೇ ಪ್ರಸಾದ ಅಂತ ಕಣ್ಣಿಗೆ ಒತ್ಕೊಂಡು ತಗೋತೀನಿ, ಪ್ರಸಾದ ಹೊಟ್ಟೆ ತುಂಬಾ ಸಿಗುತ್ತಾ ಹೇಳು, ಸಿಕ್ಕಷ್ಟೇ ಭಕ್ತಿ, ಪ್ರೀತಿಯಿಂದ ಇಟ್ಕೋಬೇಕು ಅಲ್ವಾ...



- ಸರಸ್ವತಿ ವಿಶ್ವನಾಥ್ ಪಾಟೀಲ್, ಕಾರಟಗಿ


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top