ವಿಶ್ವಮಾತೆಯ ಮಡಿಲೆಂಬ ಉದ್ಯಾನವನದಲ್ಲಿ ಅರಳಿದ ಪರಮ ಕುಸುಮವೇ ನಮ್ಮ ದೇಶ ಭಾರತ. ಅತೀ ಹೆಚ್ಚು ಜನಸಂಖ್ಯೆಯುಳ್ಳ ಬೃಹತ್ಭವ್ಯ ಪ್ರಜಾಪ್ರಭುತ್ವವುಳ್ಳ ರಾಷ್ಟ್ರ ನಮ್ಮ ಭಾರತದ ದೇಶವಾಗಿದೆ. ವಿಭಿನ್ನ ಸಂಸ್ಕೃತಿ, ವಿವಿಧ ಧರ್ಮಗಳ ಆಚರಣೆ, ವಿವಿಧ ಭಾಷೆಗಳನ್ನಾಡುವ, ವಿವಿಧ ವಿನ್ಯಾಸಗಳ ವಸ್ತೃಗಳನ್ನು ತೊಡುವ, ವಿವಿಧ ಜಾತಿ- ಜನಾಂಗಗಳಿಂದ ಒಡಗೂಡಿದ ಭಾರತ ದೇಶ ವಿಭಿನ್ನ ಆಚಾರ-ವಿಚಾರ, ನೀತಿ-ನಿಯಮಗಳು, ರೀತಿ-ರಿವಾಜುಗಳು, ರೂಢಿ ಸಂಪ್ರದಾಯಗಳನ್ನು ಒಳಗೊಂಡಿದ್ದರೂ ನಾವೆಲ್ಲರೂ ಒಂದೇ: ನಾವು ಭಾರತೀಯರು ಎಂಬ ಐಕ್ಯತಾ ಮಂತ್ರವನ್ನು ಹೊಂದಿರುವ ನಮ್ಮ ದೇಶ ಕಲೆ ಮತ್ತು ವಾಸ್ತು ಶಿಲ್ಪಗಳ ಸಾಂಸ್ಕೃತಿಕ ತವರು ನೆಲವಾಗಿದೆ. ನಮ್ಮ ದೇಶಕ್ಕೆ ತನ್ನದೇ ಆದ ಸ್ವತಂತ್ರ ಸಂವಿಧಾನವಿದೆ. ಈ
ನಮ್ಮ ಭಾರತದ ಸಂವಿಧಾನ, ನಮ್ಮ ಹೆಮ್ಮೆಯ ಗೌರವದ ಪ್ರತೀಕವಾಗಿದೆ. ಇಡೀ ಜಗತ್ತಿನ ಅತ್ಯಂತ ಬೃಹತ್ ಲಿಖಿತ ಸಂವಿಧಾನ, ವಿಶ್ವದಲ್ಲಿಯೇ ಅತೀ ಉತ್ತಮವಾದ ಸಂವಿಧಾನ ಹೊಂದಿರುವವರು ನಾವು, ನಮ್ಮ ಸಂವಿಧಾನದ ಮೂಲ ತತ್ವಗಳನ್ನು ಸಂಪೂರ್ಣವಾಗಿ ತಿಳಿದು, ಅವುಗಳನ್ನು ಪ್ರತಿಯೊಬ್ಬರ ಮನೆ ಮನಗಳಲ್ಲಿ ಅಳವಡಿಸಿಕೊಳ್ಳುವುದು ಅತ್ಯಂತ ಅಗತ್ಯವಾಗಿದೆ.
ನಮ್ಮ ಭಾರತ ದೇಶದ ಸಂವಿಧಾನ ಜಾರಿಗೆ ಬಂದು ಎಪ್ಪತ್ತೈದು ವರ್ಷಗಳು ಪೂರ್ಣಗೊಂಡಿವೆ. ವಿಶ್ವದ ಎಲ್ಲಾ ರಾಷ್ಟ್ರಗಳ ಸಂವಿಧಾನಗಳನ್ನು ಅಧ್ಯಯನ ಮಾಡಿ, ನಮ್ಮ ದೇಶದ ಇತಿಹಾಸ, ಪರಂಪರೆ, ಧಾರ್ಮಿಕತೆ ಸೇರಿದಂತೆ ಪ್ರತಿಯೊಂದನ್ನೂ ರಕ್ಷಿಸುವ, ರಾಷ್ಟ್ರದ ಪ್ರತಿಯೊಬ್ಬ ವ್ಯಕ್ತಿಗೂ ಗೌರವ, ಸ್ಥಾನಮಾನ, ಸಮಾನತೆ ದೊರಕಿಸುವ ಮತ್ತು ದೇಶದ ಐಕ್ಯತೆ ಹಾಗೂ ಸಮಗ್ರತೆಯನ್ನು ಕಾಪಾಡುವ ಉದ್ದೇಶದಿಂದ ಹಲವು ವರ್ಷಗಳ ಕಾಲ ಅಧ್ಯಯನ ಮಾಡಿ, ಸಂವಿಧಾನ ಶಿಲ್ಪಿ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರ ನೇತೃತ್ವದಲ್ಲಿ ನಮ್ಮ ಸಂವಿಧಾನವನ್ನು ಜಾರಿಗೆ ತರಲಾಯಿತು. ನಮ್ಮ ಸಂವಿಧಾನದ ಪೂರ್ವ ಪೀಠಿಕೆಯಲ್ಲಿ ತಿಳಿಸಿರುವಂತೆ ನಮಗೆ ನಾವೇ ಅಂಗೀಕರಿಸಿ ಕೊಂಡು, ಶಾಸನವಾಗಿ ವಿಧಿಸಿ ಕೊಂಡಿದ್ದೇವೆ.
ಸಂವಿಧಾನ ಅಂದರೆ ಒಂದು ದೇಶದ ಮೂಲಭೂತ ಕಾನೂನು. ಇದು ದೇಶದ ಆಡಳಿತ ವ್ಯವಸ್ಥೆಗೆ ಚೌಕಟ್ಟನ್ನು ಒದಗಿಸುತ್ತದೆ. ಸಂವಿಧಾನವು ದೇಶದ ಜನರನ್ನು ಆಳುವ ಸರಕಾರದ ಮೂಲ ರಚನೆಯನ್ನು ನಿರ್ದಿಷ್ಟಪಡಿಸುತ್ತದೆ. ನಮ್ಮ ಸಂವಿಧಾನವು ವೈವಿಧ್ಯಗಳ ಸಂಗಮ ವಾಗಿದ್ದು, ಅದು ಕಾರ್ಯಾಂಗ, ಶಾಸಕಾಂಗ ಮತ್ತು ನ್ಯಾಯಾಂಗಗಳನ್ನು ಸರಕಾರದ ಮೂರು ಮುಖ್ಯ ಅಂಗಗಳಾಗಿ ಸೃಷ್ಠಿಸುತ್ತದೆ.
ನಮ್ಮ ಸಂವಿಧಾನ ನಮಗೆ ನೀಡಿರುವ ಹಕ್ಕು ಮತ್ತು ಕರ್ತವ್ಯಗಳನ್ನು ಪ್ರತಿಯೊಬ್ಬ ನಾಗರೀಕರು ಅರಿತು ಈ ಬಗ್ಗೆ ಸದಾ ಜಾಗೃತಿ ಹೊಂದಿರಬೇಕು. ಪ್ರಸ್ತುತ ನಮ್ಮ ರಾಜ್ಯದಲ್ಲಿಯೂ ಸಂವಿಧಾನ ಜಾಗೃತಿ ಕುರಿತ ಜಾಥಾವನ್ನು ರಾಜ್ಯಾದ್ಯಂತ ಆಯೋಜಿಸಿದ್ದು, ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿಯೂ ಈಗಾಗಲೇ ಕಾರ್ಯಕ್ರಮವು ಪ್ರಾರಂಭವಾಗಿದ್ದು ಜಿಲ್ಲೆಯಲ್ಲಿ ಗ್ರಾಮ - ಗ್ರಾಮಗಳಿಗೂ ಸಂಚರಿಸುವ ಈ ಜಾಥಾದ ಮೂಲಕ ಜಿಲ್ಲೆಯ ಪ್ರತಿಯೊಂದು ಮನೆ ಮತ್ತು ಪ್ರತಿ ಸಾರ್ವಜನಿಕರ ಮನಗಳಲ್ಲಿ ಸಂವಿಧಾನದ ಮಹತ್ವದ ಕುರಿತು ವ್ಯಾಪಕ ಅರಿವು ಮೂಡಿಸಲಾಗುತ್ತಿದೆ.
ನಮ್ಮ ಸಂವಿಧಾನವು ನಮಗೆ ನೀಡಿರುವ ಮೂಲಭೂತ ಹಕ್ಕುಗಳ ಬಗ್ಗೆ ದೇಶದ ಎಲ್ಲಾ ನಾಗರೀಕರು ತಿಳಿದುಕೊಳ್ಳುವ ಮೂಲಕ ಸಂವಿಧಾನದ ಅತೀ ಮುಖ್ಯವಾದ ಮಹತ್ವವನ್ನು ಅರಿಯಬೇಕಿದೆ. ಸಂವಿಧಾನ ನೀಡಿರುವ ಈ ಹಕ್ಕುಗಳಿಗೆ ಯಾವುದೇ ಚ್ಯುತಿ ಬಂದಲ್ಲಿ ಯಾವುದೇ ವ್ಯಕ್ತಿ ಅವುಗಳಿಗೆ ಕಾನೂನಿನ ರಕ್ಷಣೆ ಕೂಡ ಪಡೆಯ ಬಹುದಾ ಗಿದ್ದು, ದಿನ ನಿತ್ಯದ ಜೀವನದಲ್ಲಿ ಪ್ರತಿಯೊಬ್ಬ ರಿಗೂ ಈ ಹಕ್ಕುಗಳು ನೆರವು ನೀಡಲಿವೆ.
ಸಮಾನತೆಯ ಹಕ್ಕು, ಸ್ವಾತಂತ್ರ್ಯದ ಹಕ್ಕು, ಶೋಷಣೆಯ ವಿರುದ್ದದ ಹಕ್ಕು, ಧಾರ್ಮಿಕ ಸ್ವಾತಂತ್ರ್ಯದ ಹಕ್ಕು, ಸಾಂಸ್ಕೃತಿಕ ಮತ್ತು ಶೈಕ್ಷಣಿಕ ಹಕ್ಕು, ಸಂವಿಧಾನಾತ್ಮಕ ಪರಿಹಾರದ ಹಕ್ಕುಗಳನ್ನು ಸಂವಿಧಾನ ನಮಗೆ ನೀಡಿದ್ರು, ಈ ಹಕ್ಕುಗಳು ಪ್ರಜಾಪ್ರಭುತ್ವ ವ್ಯವಸ್ಥೆಯ ಆಧಾರ ಸ್ಥಂಭಗಳಾಗಿದ್ದು, ವೈಯಕ್ತಿಕ ಸ್ವಾತಂತ್ರ್ಯದ ರಕ್ಷಣೆ, ಜಾತ್ಯಾತೀತ ತಳಹದಿಯನ್ನು ಬಲಪಡಿಸುವ, ದುರ್ಬಲ ವರ್ಗದವರ ಮತ್ತು ಅಲ್ಪ ಸಂಖ್ಯಾತರ ಹಿತಾಸಕ್ತಿಗಳನ್ನು ರಕ್ಷಿಸುವ ಹಾಗೂ ಸಾಮಾಜಿಕ ಸಮಾನತೆ ಮತ್ತು ಸಾಮಾಜಿಕ ನ್ಯಾಯಕ್ಕೆ ಆಧಾರವಾಗಿದ್ದು, ಪ್ರತಿಯೊಬ್ಬ ವ್ಯಕ್ತಿಯ ವ್ಯಕ್ತಿ ಗೌರವ ಮತ್ತು ಘನತೆಯನ್ನು ಹೆಚ್ಚಿಸುತ್ತವೆ. ನಮ್ಮ ಸಂವಿಧಾನವು ಪ್ರಜೆಗಳಿಗೆ ಹಕ್ಕು ಮತ್ತು ಸ್ವಾತಂತ್ರ್ಯಗಳ ಜೊತೆಗೆ ಮತದಾನದ ಹಕ್ಕನ್ನೂ ಕೂಡಾ ನೀಡಿದ್ದು, ತಮ್ಮ ಇಚ್ಛೆಯ ಜನ ಪ್ರತಿನಿಧಿಯನ್ನು ಆಯ್ಕೆ ಮಾಡುವ ಸಂಪೂರ್ಣ ಸ್ವಾತಂತ್ರ್ಯವನ್ನು ನೀಡಿದೆ.
ನಮ್ಮ ಸಂವಿಧಾನವು ನಮಗೆ ಹಕ್ಕುಗಳನ್ನು ನೀಡಿರುವಂತೆಯೇ ನಮಗೆ ಕರ್ತವ್ಯಗಳನ್ನು ತಿಳಿಸಿದೆ. ಭಾರತದ ಪ್ರಜೆಗಳಾದ ನಾವು ಮೂಲಭೂತವಾಗಿ ಪಾಲಿಸಬೇಕಾದ ಕರ್ತವ್ಯಗಳೆಂದರೆ; ಸಂವಿಧಾನಕ್ಕೆ ಬದ್ಧ ವಾಗಿರುವುದು ಹಾಗೂ ಅದರ ಆದರ್ಶಗಳನ್ನು ಮತ್ತು ಸಂಸ್ಥೆಗಳನ್ನು, ರಾಷ್ಟ್ರಧ್ವಜವನ್ನು ಹಾಗೂ ರಾಷ್ಟ್ರಗೀತೆಯನ್ನು ಗೌರವಿಸುವುದು. ನಮ್ಮ ರಾಷ್ಟ್ರೀಯ ಸಂಗ್ರಾಮಕ್ಕೆ ಸ್ಫೂರ್ತಿದಾಯಕವಾಗಿದ್ದ ಉದಾತ್ತ ಆದರ್ಶಗಳನ್ನು ಗೌರವಿಸುವುದು ಮತ್ತು ಅನುಸರಿಸುವುದು. ಭಾರತದ ಸಾರ್ವಭೌಮತ್ವವನ್ನು, ಐಕ್ಯತೆಯನ್ನು ಮತ್ತು ಅಖಂಡತೆಯನ್ನು ಎತ್ತಿ ಹಿಡಿಯುವುದು ಹಾಗೂ ಸಂರಕ್ಷಿಸುವುದು, ದೇಶವನ್ನು ರಕ್ಷಿಸುವುದು ಮತ್ತು ಕರೆ ಬಂದಾಗ ರಾಷ್ಟ್ರಕ್ಕೆ ಸೇವೆ ಸಲ್ಲಿಸುವುದು. ಧಾರ್ಮಿಕ, ಭಾಷಾ ಮತ್ತು ಪ್ರಾದೇಶಿಕ ಅಥವಾ ಜಾತಿ ಪಂಗಡಗಳ ಬೇಧ ಭಾವಗಳಿಂದ ಅತೀತವಾಗಿ, ಭಾರತದ ಎಲ್ಲಾ ಜನತೆಯಲ್ಲಿ ಸಾಮರಸ್ಯವನ್ನು ಮತ್ತು ಸಮಾನ ಭ್ರಾತೃತ್ವದ ಭಾವನೆಯನ್ನು ಬೆಳೆಸುವುದು ಮತ್ತು ಸ್ತ್ರೀಯರ ಗೌರವಕ್ಕೆ ಕುಂದುಂಟು ಮಾಡುವ ಆಚರಣೆಗಳನ್ನು ಬಿಟ್ಟುಬಿಡುವುದು. ನಮ್ಮ ಸಮ್ಮಿಶ್ರ ಸಂಸ್ಕೃತಿಯ ಭವ್ಯ ಪರಂಪರೆಯನ್ನು ಗೌರವಿಸುವುದು ಹಾಗೂ ಕಾಪಾಡುವುದು. ಅರಣ್ಯಗಳು, ಸರೋವರಗಳು, ನದಿಗಳು ಮತ್ತು ವನ್ಯಜೀವಿಗಳು ಸೇರಿದಂತೆ ನೈಸರ್ಗಿಕ ಪರಿಸರವನ್ನು ಸಂರಕ್ಷಿಸುವುದು ಹಾಗೂ ಅಭಿವೃದ್ಧಿ ಗೊಳಿಸುವುದು ಮತ್ತು ಪ್ರಾಣಿಗಳಿಗೆ ಅನುಕಂಪ ತೋರಿಸುವುದು. ವೈಜ್ಞಾನಿಕ ಮನೋಭಾವನೆ, ಮಾನವೀಯತೆ, ಜಿಜ್ಞಾಸೆಯ ಮತ್ತು ಸುಧಾರಣೆಯ ಪ್ರವೃತ್ತಿಗಳನ್ನು ಬೆಳೆಸುವುದು. ಸಾರ್ವಜನಿಕ ಸ್ವತ್ತನ್ನು ರಕ್ಷಿಸುವುದು ಮತ್ತು ಹಿಂಸೆಯನ್ನು ತ್ಯಜಿಸುವುದು. ರಾಷ್ಟ್ರವು ನಿರಂತರವಾಗಿ ಸಾಧನೆಯ ಮತ್ತು ಸಿದ್ಧಿಯ ಉನ್ನತ ಮಟ್ಟಗಳನ್ನು ತಲುಪಲು ವೈಯಕ್ತಿಕ ಹಾಗೂ ಸಾಮೂಹಿಕ ಚಟುವಟಿಕೆಯ ಎಲ್ಲಾ ಕಾರ್ಯಕ್ಷೇತ್ರಗಳಲ್ಲಿ ಉನ್ನತಿಗಾಗಿ ಶ್ರಮಿಸುವುದು. ತಂದೆ- ತಾಯಿ ಅಥವಾ ಪೋಷಕರು, ಆರರಿಂದ- ಹದಿನಾಲ್ಕು ವಯಸ್ಸಿನ ತಮ್ಮ ಮಗುವಿಗೆ ಅಥವಾ ತಮ್ಮ ಪರಿ ಪಾಲಿತ ಮಗುವಿಗೆ ಶಿಕ್ಷಣ ಪಡೆಯಲು ಅವಕಾಶಗಳನ್ನು ಒದಗಿಸುವುದು ನಮ್ಮ ಮೂಲಭೂತ ಕರ್ತವ್ಯವಾಗಿದೆ.
ಸಾರ್ವಜನಿಕರು ನಮ್ಮ ದಿನನಿತ್ಯದ ಜೀವನದಲ್ಲಿ ನೆಮ್ಮದಿಯ ಜೀವನ ನಡೆಸಲು ಅನುಕೂಲವಾದ ವಾತಾವರಣವನ್ನು ಸಂವಿಧಾನವು ಒದಗಿಸಿದ್ದು, ಸಂವಿಧಾನದ ತತ್ವಗಳು ಮತ್ತು ಮಹತ್ವದ ಬಗ್ಗೆ ದೇಶದ ಪ್ರತಿಯೊಬ್ಬ ವ್ಯಕ್ತಿಯೂ ಅರಿಯುವುದು ಮತ್ತು ಜಾಗೃತರಾಗಿರುವುದು ಅತ್ಯಂತ ಅಗತ್ಯವಾಗಿದೆ. ಈ ಹಿನ್ನೆಲೆಯಲ್ಲಿ ಎಲ್ಲೆಡೆಯೂ ಸಂಚರಿಸುತ್ತಿರುವ ಸಂವಿಧಾನ ಜಾಗೃತಿ ಜಾಥಾಗಳ ಕಾರ್ಯಕ್ರಮದಲ್ಲಿ ಸಾರ್ವಜನಿಕರು ಭಾಗವಹಿಸಿ ಇನ್ನು ಹೆಚ್ಚಿನ ಅರಿವು ಪಡೆಯಬಹುದಾಗಿದೆ.
ಸಂವಿಧಾನ ಜಾಗೃತಿ ಜಾಥಾದಲ್ಲಿ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಿ, ಸಂವಿಧಾನದ ಮಹತ್ವದ ಕುರಿತು ಅರಿವು ಮತ್ತು ಜನಜಾಗೃತಿ ಮೂಡಿಸಲಾಗುತ್ತಿದೆ. ಜಾಥಾದಲ್ಲಿ ಸ್ಥಬ್ಧ ಚಿತ್ರಗಳು, ಆಕರ್ಷಕ ಮೆರವಣಿಗೆಗಳು, ಬೈಕ್ ಮತ್ತು ಸೈಕಲ್ ರ್ಯಾಲಿಗಳು, ಯಕ್ಷಗಾನ ಪ್ರದರ್ಶನಗಳು, ವಿದ್ಯಾರ್ಥಿಗಳಿಂದ ನೃತ್ಯ ರೂಪಕಗಳು. ಭಾಷಣ ಸ್ಪರ್ಧೆಗಳು, ಸಂವಿಧಾನ ಪೀಠಿಕೆಯ ಬೋಧನೆ, ಪ್ರತಿಜ್ಞಾ ವಚನ ಸ್ವೀಕಾರ ಸೇರಿದಂತೆ ಹಲವು ವೈವಿಧ್ಯಮಯ ಚಟುವಟಿಕೆಗಳನ್ನು ನಿರಂತರವಾಗಿ ನಡೆಸಲಾಗುತ್ತಿದೆ. ನಮ್ಮ ಭಾರತದ ಸಂವಿಧಾನದ ಲಕ್ಷಣಗಳನ್ನು ನೋಡಿದಾಗ ಈ ಕೆಳಗಿನ ಅಂಶಗಳು ತಿಳಿದು ಬರುತ್ತವೆ. ನಮ್ಮದು ಲಿಖಿತ ಮತ್ತು ಬೃಹತ್ ಸಂವಿಧಾನವಾಗಿದೆ. ಇದು ಭಾಗಶ: ನಮ್ಯ ಮತ್ತು ಭಾಗಶ: ಅನಮ್ಯ ಸಂವಿಧಾನವಾಗಿದೆ. ಸಂಸದೀಯ ಸರ್ಕಾರ ಪದ್ಧತಿ, ಗಣತಂತ್ರ ವ್ಯವಸ್ಥೆ, ಸಂಯುಕ್ತ ಪದ್ಧತಿ, ಮೂಲಭೂತ ಹಕ್ಕುಗಳು, ಮೂಲಭೂತ ಕರ್ತವ್ಯಗಳು, ರಾಜ್ಯ ನಿರ್ದೇಶಕ ತತ್ವಗಳು, ಸ್ವತಂತ್ರ ಮತ್ತು ಏಕೀಕೃತ ನ್ಯಾಯಾಂಗ ವ್ಯವಸ್ಥೆ, ಏಕ ಪೌರತ್ವ, ವಯಸ್ಕ ಮತದಾನ ಪದ್ಧತಿ, ದ್ವಿ- ಸದನ ಶಾಸಕಾಂಗ, ಪಕ್ಷ ಪದ್ಧತಿ ಮುಂತಾದ ಲಕ್ಷಣಗಳಿಂದ ಕೂಡಿದೆ. ಇಂತಹ ನಮ್ಮ ಸಂವಿಧಾನವನ್ನು ನಾವೆಲ್ಲರೂ ಗೌರವಿಸೋಣ.
- ಕೆ.ಎನ್. ಚಿದಾನಂದ ಹಾಸನ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ







