ಇಂದು ಇಡೀ ಉತ್ತರ ಕರ್ನಾಟಕವು ಶೈಕ್ಷಣಿಕವಾಗಿ ಮುಂದುವರೆಯಲು ಕಾರಣವಾಗಿರುವ ಎರಡು ಶಕ್ತಿ ಕೇಂದ್ರಗಳಲ್ಲಿ ಲಿಂಗಾಯತ ಮಠಗಳು ಮುಂಚೂಣಿಯಲ್ಲಿದ್ದರೆ ಎರಡನೇ ಶಕ್ತಿ ಕೇಂದ್ರವಾಗಿ ಶಿರಸಂಗಿಯ ಲಿಂಗರಾಜ ಅರಸರು ನಿಲ್ಲುತ್ತಾರೆ ಎಂದರೆ ಅತಿಶಯೋಕ್ತಿ ಏನಲ್ಲ. ಉತ್ತರ ಕರ್ನಾಟಕದ ಕೆಎಲ್ಇ ಸೊಸೈಟಿ ಎಂದು ಕರೆಯಲ್ಪಡುವ ಕರ್ನಾಟಕ ಲಿಂಗಾಯತ ಎಜುಕೇಶನ್ ಸೊಸೈಟಿ ಮತ್ತು ಬಿ ಎಲ್ ಡಿ ಇ ಸಂಸ್ಥೆಗಳ ಹುಟ್ಟು ಮತ್ತು ಬೆಳವಣಿಗೆಗೆ ಲಿಂಗರಾಜ ಅರಸರ ಕೊಡುಗೆಯೇ ಕಾರಣ. ಆದ್ದರಿಂದಲೇ ಅವರನ್ನು ತ್ಯಾಗವೀರ ಎಂದು ಕೊಂಡಾಡುವುದು.
ತಮ್ಮ ಮಾವಿನ ತೋಪಿನಲ್ಲಿನ ಮಾವಿನ ಗಿಡಕ್ಕೆ ಕಲ್ಲೆಸೆದು ಮಾವಿನಕಾಯಿ ಪಡೆಯಲು ಯತ್ನಿಸಿದ ರಾಜೇಸಾಬ್ ಒಂಟಿ ಎಂಬ ತಮ್ಮ ತೋಟದ ಕಾವಲುಗಾರನ ಮಗನಿಗೆ ಎರಡು ಎಕರೆ ಜಮೀನು ಕೊಟ್ಟು ಆ ದುಡ್ಡಿನಲ್ಲಿ ಆತನನ್ನು ಓದಿಸಲು ಹೇಳಿದ ಮಹಾದಾನಿ ಲಿಂಗರಾಜ ಅರಸರು. ಕಲ್ಲೆಸದ ಬಾಲಕನಿಗೆ ಹಣ್ಣನ್ನು ಕೊಡುವ ಮರಕ್ಕಿಂತ, ಬುದ್ಧಿಶಕ್ತಿ ಇರುವ ಮಾನವನಾದ ತಾನು ಆತನ ಬದುಕಿಗೆ ದಾರಿ ಮಾಡಿಕೊಡಬೇಕು ಎಂಬ ನಿಲುವನ್ನು ಹೊಂದಿದ್ದರು ಲಿಂಗರಾಜ ಅರಸರು.
ಇಂದಿನ ಗದಗ್ ಜಿಲ್ಲೆಯ ಶಿಗ್ಲಿ ಗ್ರಾಮದ ಮಡ್ಲಿ ಮನೆತನದ ಗೂಳಪ್ಪ ಮತ್ತು ಎಲ್ಲಮ್ಮ ದಂಪತಿಗಳ ಮಗ ರಾಮಪ್ಪ ಗೂಳಪ್ಪ ಮಡ್ಲಿ. ಹುಟ್ಟಿದ್ದು 1861 ರ ಜನವರಿ 10ರಂದು. ಶಿರಸಂಗಿ ದೇಶಗತಿ ಮನೆತನದ ಜಯಪ್ಪ ದೇಸಾಯಿ ಮತ್ತು ಗಂಗಮ್ಮ ದಂಪತಿಗಳು 1872ರ ಜೂನ್ ಎರಡರಂದು ರಾಮಪ್ಪನನ್ನು ದತ್ತಕ ಪುತ್ರನಾಗಿ ಸ್ವೀಕರಿಸಿದ ನಂತರ ಲಿಂಗರಾಜ ಅರಸ ಎಂಬ ಹೆಸರಿನಿಂದ ಕರೆಯಲ್ಪಟ್ಟ. ದತ್ತಕ ತಾಯಿ ಗಂಗಾಬಾಯಿಯ ಅಕ್ಕರಾಸ್ಥೆಯಲ್ಲಿ ಬೆಳೆದ ಲಿಂಗರಾಜ ಮುಂದಿನ ವಿದ್ಯಾಭ್ಯಾಸಕ್ಕಾಗಿ ಕೇವಲ ದೇಶಗತಿ ಮನೆತನದವರು ಮಾತ್ರ ಕಲಿಯುತ್ತಿದ್ದ ಸಾಂಗ್ಲಿ ಸಂಸ್ಥಾನದ ಕೊಲ್ಹಾಪುರದ ಬಳಿಯ ಸರ್ದಾರ್ ಹೈಸ್ಕೂಲಿಗೆ ದಾಖಲಾದರು. ಅಲ್ಲಿ ಕೆ ಪಿ ಪುಟ್ಟಣ್ಣಶೆಟ್ಟಿ, ವಾರದ ಮಲ್ಲಪ್ಪ, ಶಾಹು ಮಹಾರಾಜರು ಮುಂತಾದ ಅಗ್ರಗಣ್ಯರು ಅವರ ಸಹಪಾಠಿಗಳಾಗಿದ್ದರು.
ಎರಡೇ ವರ್ಷಗಳಲ್ಲಿ ಅನಾರೋಗ್ಯಕ್ಕೆ ತುತ್ತಾಗಿ 1874ರಲ್ಲಿ ಗಂಗಮ್ಮನವರು ನಿಧನರಾದರು. ಇನ್ನೋರ್ವ ದತ್ತಕ ತಾಯಿ ಉಮಾಬಾಯಿಯವರಿಗೆ ತನ್ನ ಸೋದರ ಯಲ್ಲಪ್ಪ ನಾಗರಳ್ಳಿಯನ್ನು ದತ್ತಕ ಪಡೆಯಬೇಕೆಂಬ ಪ್ರಬಲ ಇಚ್ಛೆ ಹೊಂದಿದ್ದು ಲಿಂಗರಾಜರ ದತ್ತಕದ ವಿರುದ್ಧ ಕೋರ್ಟಿನ ಮೊರೆ ಹೋದಳು. ಆದರೆ ಲಿಂಗರಾಜರ ಪರವಾಗಿ ಹಲವಾರು ಜನರು ನಿಂತ ಪರಿಣಾಮವಾಗಿ ಅರಮನೆಯ ಹೊರಗಿನಿಂದಲೇ ಅಪಾರ ಬೆಂಬಲ ಪಡೆದ ಲಿಂಗರಾಜರ ದತ್ತಕವನ್ನು ಮುಂಬೈ ಹೈಕೋರ್ಟ್ 1880 ರಲ್ಲಿ ಎತ್ತಿ ಹಿಡಿಯಿತು. ಪರಿಣಾಮವಾಗಿ ಸಗೌರವ ಸಮೇತ ಶಿರಸಂಗಿಯ ದೇಶಗತಿ ಮನೆತನದ ಚುಕ್ಕಾಣಿಯನ್ನು ಲಿಂಗರಾಜರು ಹಿಡಿದರು. ಲಿಂಗರಾಜರು ಮನೆತನದ ವಾಡಿಕೆಯಂತೆ ಇಬ್ಬರು ಕನ್ಯೆಯರನ್ನು ವಿವಾಹವಾದರು, ಅವರೇ ಲಿಂಗಮ್ಮ ಮತ್ತು ಚೆನ್ನಮ್ಮ ಈ ಇಬ್ಬರಿಗೂ ಮಕ್ಕಳಾಗದ ಕಾರಣ ಮತ್ತೆ ಇಬ್ಬರನ್ನು ವಿವಾಹವಾದರೂ ಅವರಿಗೂ ಕೂಡ ಮಕ್ಕಳಾಗಲಿಲ್ಲ. ಹಾಗಾಗಿ ಮೂರನೇ ಬಾರಿ ಮತ್ತೆ ಇಬ್ಬರು ಕನ್ಯೆ ಯರನ್ನು ಮದುವೆಯಾದ ಲಿಂಗರಾಜರಿಗೆ ತಮ್ಮ ಕೊನೆಯ ಪತ್ನಿ ಸುಂದರಬಾಯಿಯವರು ಕೊನೆಯವರೆಗೂ ಜೊತೆಯಾದರು. ಇವರು ಮೊದಲ ಬಾರಿಗೆ ವಿವಾಹವಾದಾಗ ಬೇವೂರಿನ ಕಿಲ್ಲೆಯಲ್ಲಿ ವಾಸವಾಗಿದ್ದ ಉಮಾಬಾಯಿಯು ದತ್ತಕ ಪುತ್ರನನ್ನು ಸೊಸೆಯೊಂದಿಗೆ ಔತಣಕ್ಕೆ ಆಹ್ವಾನಿಸಿದ್ದಳು. ಊಟದಲ್ಲಿ ನಿಧಾನವಿಷವಾದ ಪಾದರಸವನ್ನು ಮಿಶ್ರಣ ಮಾಡಿ ಉಣಬಡಿಸಿದ ಪರಿಣಾಮವಾಗಿ ಲಿಂಗರಾಜರ ಆರೋಗ್ಯ ಹದಗೆಟ್ಟು ಅವರು ಅಲ್ಲಿಯೇ ವಿಷಮ ಶೀತ ಜ್ವರಕ್ಕೆ ತುತ್ತಾದರು. ಪಾರಾದ ಲಿಂಗರಾಜರ ದೇಹದಲ್ಲಿನ ಪಾದರಸವನ್ನು ನಾಟಿ ವೈದ್ಯರು ತೆಗೆದು ಹಾಕಿ ಅವರನ್ನು ಕುತ್ತಿನಿಂದ ಪಾರು ಮಾಡಿದರು.
ಲಿಂಗರಾಜರು ಅತ್ತುತ್ತಮವಾದ ಆಡಳಿತಗಾರರಾಗಿದ್ದರು. ತಮ್ಮ ಸುಪರ್ದಿಯಲ್ಲಿ ಬರುತ್ತಿದ್ದ ಎಲ್ಲ ಹಳ್ಳಿಗಳಲ್ಲಿಯೂ ಗ್ರಾಮ ಸಭೆಯನ್ನು ನಡೆಸುತ್ತಿದ್ದ ಅವರು ಜನರ ಕಷ್ಟ ಸುಖಗಳಿಗೆ ಕಿವಿಯಾಗುತ್ತಿದ್ದರು. ಜೊತೆಗೆ ಜನರ ಅಹವಾಲುಗಳನ್ನು ನ್ಯಾಯ ತೀರ್ಮಾನಗಳನ್ನು ಕೈಗೊಳ್ಳುವುದರಲ್ಲಿ ಎತ್ತಿದ ಕೈಯಾಗಿದ್ದರು. ಆದ್ದರಿಂದಲೇ ಬ್ರಿಟಿಷರು ಅವರನ್ನು ಸೆಕೆಂಡರಿ ಡಿವಿಷನ್ ಮ್ಯಾಜಿಸ್ಟ್ರೇಟ್ (ನ್ಯಾಯಾಧೀಶ) ಎಂದು ಗೌರವ ಪೂರ್ವಕ ನೇಮಕ ಮಾಡಿದ್ದರು.
ಇದರ ಜೊತೆಗೆ ಲಿಂಗರಾಜರು ಮಾದರಿ ಒಕ್ಕಲುತನಕ್ಕೆ ಹೆಸರಾಗಿದ್ದರು. ಅವರ ಒಕ್ಕಲುತನದಲ್ಲಿ ಸುಧಾರಿತ ಕೃಷಿ ಪದ್ಧತಿಗಳು, ತೋಟಗಾರಿಕಾ ಬೆಳೆಗಳನ್ನು ಬೆಳೆಯುತ್ತಿದ್ದರು.
40ಎತ್ತು ,20ಒಂಟೆ ,100 ಆಕಳು ಗಳು ಅವರ ಒಕ್ಕಲುತನದ ಮುಖ್ಯ ಶಕ್ತಿಗಳಾಗಿದ್ದವು.
ಒಂದು ಬಾರಿ ಭೀಕರ ಬರಗಾಲ ಉತ್ತರ ಕರ್ನಾಟಕವನ್ನು ನಲುಗಿಸಿದಾಗ ನೀರಾವರಿಯ ಮಹತ್ವವನ್ನು ಅರಿತ ಲಿಂಗರಾಜರು ಶಿರಸಂಗಿ ಯ ಗ್ರಾಮ ದೇವತೆಯಾದ ಭವಾನಿ ಕೆರೆಯನ್ನು ನಿರ್ಮಿಸಿದರು. ಸುಮಾರು 85 ಎಕರೆ ವಿಸ್ತೀರ್ಣವುಳ್ಳ ಈ ಭವಾನಿಕೆರೆ ನಿರ್ಮಿಸಲು ಸುಮಾರು 2 ಲಕ್ಷ ರೂಗಳಷ್ಟು ಹಣವನ್ನು ಅಂಬಿನ ಕಾಲದಲ್ಲಿಯೇ ಅವರು ಖರ್ಚು ಮಾಡಿದ್ದರು. ಇಲ್ಲಿಯೂ ಒಂದು ಸ್ವಾರಸ್ಯಕರ ಘಟನೆಯನ್ನು ನೆನಪು ಮಾಡಿಕೊಳ್ಳಬಹುದು. ಈ ಭವಾನಿ ಕೆರೆಯನ್ನು ಕಟ್ಟುವಾಗ ನೆಟ್ಟು ಕಡಿಯುವ ಸ್ಪರ್ಧೆಯನ್ನು ಏರ್ಪಡಿಸಿದ್ದು ಸುಮಾರು 2000 ಜನ ಇದರಲ್ಲಿ ಭಾಗವಹಿಸಿದ್ದರು.ಸುಮಾರು ಮೂವತ್ತು ರೊಟ್ಟಿ ಒಂದು ದೊಡ್ಡ ಡಬ್ಬರಿ ಅನ್ನ/ಸಂಗಟಿ ಉಣ್ಣುವ ಮಾಯಪ್ಪ ಎಂಬ ಓರ್ವ ವ್ಯಕ್ತಿ ತಲೆ ಎತ್ತದೆ ತನ್ನ ಬೆನ್ನ ಮೇಲೆ ದೊಡ್ಡ ಮಣ್ಣಿನ ಹೆಂಟೆಯೊಂದನ್ನು ಹೇರಿಸಿಕೊಂಡು ಒಂದೇ ಸಮನೆ ನಟ್ಟು ಕಡಿಯುತ್ತಾ ಹೋದಾಗ ಆತನ ಬೆವರಿನ ನೀರಿನಿಂದ ಬೆನ್ನ ಮೇಲಿನ ಮಣ್ಣಿನ ಹೆಂಟೆ ಕರಗಿ ನೆಲ ಸೇರಿದ್ದನ್ನು ಇಂದಿಗೂ ಆ ಭಾಗದ ಜನರ ಬಾಯಲ್ಲಿ ದಂತಕತೆಯಾಗಿ ನಿರೂಪಣೆಗೊಳ್ಳುತ್ತದೆ. ಹಾಗೆ ನೆಟ್ಟು ಕಡೆದ ಮಾಯಪ್ಪನಿಗೆ ಎರಡು ಎಕರೆ ಜಮೀನನ್ನು ಬಹುಮಾನ ರೂಪವಾಗಿ ಲಿಂಗರಾಜ ಅರಸರು ನೀಡಿದರು.
ತದನಂತರ ಇಂದು ಜೋಗುಳ ಬಾವಿ ಎಂದು ಕರೆಯಲ್ಪಡುವ ಸವದತ್ತಿ ಭಾಗದಲ್ಲಿರುವ ಹೊಸಬಾಳು ಕೆರೆಯನ್ನು ಲಿಂಗರಾಜರು ನಿರ್ಮಿಸಿದರು. ಸವದತ್ತಿ ಎಲ್ಲಮ್ಮನ ಗುಡ್ಡದ ಸುತ್ತಲಿರುವ ಏಳುಕೊಳ್ಳಗಳ ಮಳೆ ನೀರು ಸಂಗ್ರಹವಾಗಿ ಬೀಳುವಂತೆ ತಾವರೆಕೆರೆ ಬಾಂದಾರ ವನ್ನು ಕೂಡ ಅವರು ನಿರ್ಮಿಸಿದರು.
ಲಿಂಗರಾಜರ ಕೃಷಿ ಕಾರ್ಯ ಮತ್ತು ನ್ಯಾಯ ನಿರ್ಣಯ ಶಕ್ತಿಯನ್ನು ಕಂಡ ಅಂದಿನ ಬ್ರಿಟಿಷ್ ಸರ್ಕಾರವು ಅವರನ್ನು ಎಡ್ವರ್ಡ್ ದೊರೆಯ ಪಟ್ಟಾಭಿಷೇಕ ಮಹೋತ್ಸವದ ದೆಹಲಿ ಸಿಂಹಾಸನಾರೋಹಣ ಕಾರ್ಯಕ್ರಮಕ್ಕೆ ಆಹ್ವಾನಿಸಿತು ಹಾಗೆ ಭಾರತ ದೇಶದಿಂದ ಬ್ರಿಟಿಷ್ ಸಾಮ್ರಾಜ್ಯದ ಆಹ್ವಾನ ಪಡೆದ ಏಕೈಕ ವ್ಯಕ್ತಿ ಲಿಂಗರಾಜ ಅರಸರು ಮಾತ್ರ.
ಮುಂದೆ ಅಥಣಿಯ ಶಿವಯೋಗಿಗಳಿಂದ ಲಿಂಗ ದೀಕ್ಷೆ ಪಡೆದ ಲಿಂಗರಾಜ ಅರಸರು 1883 ರಲ್ಲಿ ತಮ್ಮ ಆತ್ಮಸಖ ಅರಟಾಳ್ ರುದ್ರಗೌಡರ ಜೊತೆಗೂಡಿ ಲಿಂಗಾಯತ ಎಜುಕೇಶನ್ ಸೊಸೈಟಿಯನ್ನು ಸ್ಥಾಪಿಸಿದರು. ಇವರ ಜೊತೆಗೆ ಕಿತ್ತೂರು ರೇವಣಸಿದ್ದಪ್ಪ, ರಾಜ ಲಖಮಗೌಡರು ಮುಂತಾದವರು ಜೊತೆಗೂಡಿದರು. ಅಮ್ಮಣಗಿ ಗ್ರಾಮದಲ್ಲಿ ಸುಮಾರು 1400 ಎಕರೆ ಜಮೀನನ್ನು ಲಿಂಗಾಯತ ಎಜುಕೇಶನ್ ಸೊಸೈಟಿಯ ಅಭಿವೃದ್ಧಿಗೆ ಲಿಂಗರಾಜ ಅರಸರು ಮೀಸಲಿಟ್ಟರು. 1894 ರಲ್ಲಿ ಏಳೂರು ಗೌಡರ ಸಹಕಾರ ಅಡತಿ ಅಂಗಡಿ ಯನ್ನು ಸ್ಥಾಪಿಸಿದ ಲಿಂಗರಾಜ ಅರಸರು ಬೈಲಹೊಂಗಲದ ಜಿನ್ನಿಂಗ್ ಫ್ಯಾಕ್ಟರಿಯಲ್ಲಿ 30 ಶೇಕಡ ಶೇರುಗಳನ್ನು ಖರೀದಿಸಿದರು.
1902 ರಲ್ಲಿ ಹಾನಗಲ್ಲ ಗುರು ಕುಮಾರಸ್ವಾಮೀಜಿಯವರ ಆಶಯದಂತೆ ಸ್ನೇಹಿತ ಅರಟಾಳ್ ರುದ್ರಗೌಡ, ಮರೇವಾಡ ಗದಿಗೆಯ್ಯ, ಕಿತ್ತೂರು ರೇವಣಸಿದ್ದಪ್ಪ, ಕೂಗನೂರು ಇವರ ಜೊತೆಯಲ್ಲಿ ಕುದುರೆ ಸಾರೋಟಿನಲ್ಲಿ ಪ್ರವಾಸ ಮಾಡಿ ವೀರಶೈವ ಲಿಂಗಾಯತರನ್ನು ಒಗ್ಗೂಡಿಸುವ ಕೆಲಸವನ್ನು ಮಾಡಿದರು.
1904ರ ಮೇ 13 14 ಮತ್ತು 15 ರಂದು ಪ್ರಥಮ ವೀರಶೈವ ಅಖಿಲ ಭಾರತ ಮಹಾಸಭಾ ಸಮ್ಮೇಳನವು ಹಾನಗಲ್ಲಿನ ಕುಮಾರಸ್ವಾಮಿಗಳ ಮಾರ್ಗದರ್ಶನದಲ್ಲಿ ಲಿಂಗರಾಜ ಅರಸರ ಸಂಸ್ಥಾಪಕ ಅಧ್ಯಕ್ಷತೆಯಲ್ಲಿ ನಡೆಯಿತು ಸುಮಾರು 3000ಕ್ಕೂ ಹೆಚ್ಚು ಜನ ಸೇರಿದ ಈ ಸಮ್ಮೇಳನದಲ್ಲಿಯೂ ಕೂಡ ಲಿಂಗರಾಜ ಅರಸರು 5,000 ರೂಗಳನ್ನು ಲಿಂಗಾಯತ ಸಮಾಜದ ಅಭಿವೃದ್ಧಿಗೆ ನೀಡಿದರು.
ಈ ಸಮ್ಮೇಳನದಲ್ಲಿ ಮುಖ್ಯವಾಗಿ ವಿಧವಾ ವಿವಾಹ, ಸರಳ ವಿವಾಹ, ಸ್ತ್ರೀ ಶಿಕ್ಷಣ, ಸಾಗರದಾಚೆಯ ಶಿಕ್ಷಣಕ್ಕೆ ಆದ್ಯತೆ, ವೀರಶೈವ ವೇದಿಕ ಪಾಠಶಾಲೆಗಳು ಕುರಿತಾಗಿ ಅತ್ಯಂತ ಪ್ರಬುದ್ಧವಾಗಿ ವಿಷಯಗಳನ್ನು ಪ್ರಸ್ತಾಪಿಸಿದ ಲಿಂಗರಾಜರು ಅವುಗಳ ಅನುಷ್ಠಾನಕ್ಕೆ ಒತ್ತಾಯಿಸಲು ಕ್ರಮ ಕೈಗೊಂಡರು. ಇದರ ಜೊತೆಗೆ ಕೋರ್ಟನ ಹೊರಗಡೆ ಸಮಾಜದ ಹಿರಿಯರ ಸಮ್ಮುಖದಲ್ಲಿ ನ್ಯಾಯ ಸಭೆ ನಡೆಸಿ ತಮ್ಮ ವ್ಯಾಜ್ಯಗಳನ್ನು ಬಗೆಹರಿಸಿಕೊಳ್ಳಲು ಒತ್ತಾಯಿಸಿದರು.
ವೀರಶೈವ ಧರ್ಮದ ಉಳಿವಿಗೆ ಜಂಗಮ ಪಾಠಶಾಲೆಗಳ ಅವಶ್ಯಕತೆಯನ್ನು ಮನಗಂಡು ಜಂಗಮ ಪಾಠಶಾಲೆಗಳನ್ನು ಪ್ರಾರಂಭಿಸಲು ಒತ್ತಾಯಿಸಿ ಮುಂದೆ 1908ರಲ್ಲಿ ಬಾದಾಮಿಯಲ್ಲಿ ಶಿವಯೋಗ ಮಂದಿರವನ್ನು ಸ್ಥಾಪಿಸಲು ಕಾರಣಿಭೂತರಾದರು
1905ರ ಜುಲೈ 13, 14 ಮತ್ತು 15 ರಂದು ಬೆಂಗಳೂರಿನಲ್ಲಿ ನಡೆದ ಅಖಿಲ ಭಾರತ ವೀರಶೈವ ಮಹಾಸಭಾ ಎರಡನೇ ಸಮ್ಮೇಳನವನ್ನು ಪುಟ್ಟಣ್ಣ ಶೆಟ್ಟಿಯವರ ನೇತೃತ್ವದಲ್ಲಿ ಲಿಂಗರಾಜ ಅರಸರ ಅಧ್ಯಕ್ಷತೆಯಲ್ಲಿ ನಡೆಸಲಾಯಿತು. ಅಲ್ಲಿಯೂ ಕೂಡ ಲಿಂಗರಾಜ ಅರಸರು 2, 000ರೂಗಳನ್ನು ದೇಣಿಗೆಯಾಗಿ ನೀಡಿದರು. ಇವರ ದಾನ ಗುಣವನ್ನು ಕಂಡ ಅಂದಿನ ಮೈಸೂರಿನ ಅರಸರಾದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಮೈಸೂರಿನ ತಮ್ಮ ಸಂಸ್ಥಾನಕ್ಕೆ ಲಿಂಗರಾಜ ಅರಸರನ್ನು ಆಮಂತ್ರಿಸಿ ಗೌರವ ಸನ್ಮಾನ ಮಾಡಿದರು.
ತಮ್ಮ ಸಂಸ್ಥಾನಕ್ಕೆ ಸೇರಿದ ಸರಿ ಸುಮಾರು 5,72,156 ಎಕರೆ ಜಮೀನನ್ನು ದಾನ ಮಾಡಿದ ಲಿಂಗರಾಜ ಅರಸರು ತಮ್ಮ ಸುಪರ್ದಿಯಲ್ಲಿದ್ದ 9ಕ್ಕೂ ಹೆಚ್ಚು ಸಂಧೂಕಗಳಲ್ಲಿನ ಚಿನ್ನ ಬೆಳ್ಳಿ ರತ್ನಗಳನ್ನು ಮತ್ತು ಸಾವಿರಾರು ರೂಗಳಷ್ಟು ಹಣವನ್ನು ಸಮಾಜದ ಒಳಿತಿಗೆ ದಾನವಾಗಿ ನೀಡಿದರು.
ಇಂದಿನ ಪ್ರತಿಷ್ಠಿತ ಕೆ ಎಲ್ ಇ ಸೊಸೈಟಿ, ಬಿ ಎಲ್ ಡಿ ಈ ಸಂಸ್ಥೆ ಗಳಿಗೆ ದೇವಿ ಹೊಸೂರಿನಲ್ಲಿ ಕೃಷಿ ತರಬೇತಿಗಾಗಿ ಭೂದಾನ ಮಾಡಿದ ಲಿಂಗರಾಜ ಅರಸರು ಕಾಶಿಯ ಜಂಗಮವಾಡಿ ಮಠ, ರಾಮೇಶ್ವರದ ದೇವಸ್ಥಾನಗಳಿಗೆ ಕೂಡ ಭೂದಾನ ಮಾಡಿದರು. ನವಲಗುಂದದ ಸೂಫಿ ಸಂತ ಸೈಯದ್ ಅಮೀನ್ ಶಾ ಹುಸೇನ್ ಅವರಿಗೆ ಭೂದಾನ ಮಾಡಿದ್ದಲ್ಲದೆ,ಅಜ್ಮೀರದ ಸಂತ ಮೈನುದ್ದಿನ್ ಚಿಸ್ತಿ ಅವರಿಗೆ ಪಾರಿವಾಳ ಸಾಕಲು ಕೂಡ ಭೂದಾನ ಮಾಡಿದ ಲಿಂಗರಾಜ ಅರಸರು ಸಿರಸಂಗಿ ವಾಡೆಯಲ್ಲಿ ದೀವಟಿಗೆ ಹಿಡಿಯುವ ಕೆಲಸ ಮಾಡುತ್ತಿದ್ದ ವ್ಯಕ್ತಿಗೂ ಮಾವಿನ ತೋಪಿಗೆ ಕಲ್ಲೆಸದ ಮುಸಲ್ಮಾನ ಬಾಲಕನಿಗೂ ಕೂಡ ಭೂದಾನ ಮಾಡಿದ ಮಹಾದಾನಿ. ಪತ್ರಿವನ ಮಠ, ಶಿರಸಂಗಿಯ ಕಾಳಿಕಾದೇವಿಯ ಪೂಜಾರಿಕೆಗೆ ಕೂಡ ಭೂದಾನ ಮಾಡಿದರು ಲಿಂಗರಾಜ ಅರಸರು.
1906 ರಲ್ಲಿ ತಮ್ಮ ಹೊಲದಲ್ಲಿ ನಡೆಯುತ್ತಿದ್ದ ವ್ಯವಸಾಯ ಕಾರ್ಯದ ಕ್ಷೇತ್ರ ವೀಕ್ಷಣೆ ಮಾಡುತ್ತಿರುವಾಗ ತೀವ್ರವಾದ ಹೊಟ್ಟೆ ನೋವು ಕಾಣಿಸಿಕೊಂಡು ಅವರ ಆರೋಗ್ಯ ಕ್ಷೀಣಿಸಿತು ಯಾವುದೇ ಔಷದೋಪಚಾರಕ್ಕೆ ಬಗ್ಗದ ಅವರ ದೇಹಾರೋಗ್ಯ 1906ರ ಮಾರ್ಚ್ ತಿಂಗಳಲ್ಲಿ ಮತ್ತಷ್ಟು ಹದಗೆಟ್ಟು ಅವರು ನಿಧನ ಹೊಂದಿದರು. ಅವರ ಸಮಾಧಿಯನ್ನು ಈಗಿನ ಧಾರವಾಡ ಜಿಲ್ಲೆಯ ನವಲಗುಂದದಲ್ಲಿ ಮಾಡಲಾಗಿದ್ದು, ಅಲ್ಲಿ ಇಂದಿಗೂ ಲಿಂಗರಾಜರು ಭಕ್ತರಿಂದ ಪೂಜೆಗೊಳ್ಳುತ್ತಿದ್ದಾರೆ. ಅವರು ಸಮಾಧಿಗೊಂಡ ಸ್ಥಳವನ್ನು ಥಡಿ ಮಠ ಎಂದು ಕರೆಯಲಾಗುತ್ತಾರೆ
ಕರ್ನಾಟಕದ ಎಲ್ಲ ಮಠಮಾನ್ಯಗಳಿಗೆ, ಶಿಕ್ಷಣ ಸಂಸ್ಥೆಗಳಿಗೆ, ಕೃಷಿ ಭೂಮಿಯನ್ನು ಚಿನ್ನ ಒಡವೆ ಹಣದ ಸಹಾಯ ಮಾಡಿದ ಮಹಾದಾನಿ ಶಿರಸಂಗಿ ಲಿಂಗರಾಜರನ್ನು 1907ರಲ್ಲಿ ಸೊಲ್ಲಾಪುರದಲ್ಲಿ ನಡೆದ ಅಖಿಲ ಭಾರತ ವೀರಶೈವ ಮಹಾಸಭಾ ಮೂರನೇ ಸಮ್ಮೇಳನದಲ್ಲಿ 64ನೇ ವೀರಶೈವ ಪುಣ್ಯ ಪುರುಷ ಎಂದು ಮರಣೋತ್ತರವಾಗಿ ಘೋಷಿಸುವ ಮೂಲಕ ಗೌರವಿಸಲಾಯಿತು.
ಅವರ ಮರಣದ ನಂತರ ಅವರ ಉಯಿಲು ಪತ್ರವನ್ನು ಅವರ ಸ್ನೇಹಿತ ಅರಟಾಳ ರುದ್ರಗೌಡರ ನೇತೃತ್ವದಲ್ಲಿ ಬ್ರಿಟಿಷ್ ಅಧಿಕಾರಿಗಳು ಮತ್ತು ಸಮಾಜದ ಮುಖಂಡರ ಸಮ್ಮುಖದಲ್ಲಿ ತೆರೆದು ಓದಲಾಯಿತು. ಅದರ ಮುಖ್ಯ ಅಂಶಗಳಲ್ಲಿ ತಮ್ಮ ಸ್ನೇಹಿತ ಅರಟಾಳ ರುದ್ರಗೌಡರು, ಸತ್ಯಪ್ಪ ಗಾಳಿ, ರೇವಣಪ್ಪ ಕಿತ್ತೂರ್, ಭೀಮನಗೌಡ ಪಾಟೀಲ್, ಉಕ್ಕಲಿಯ ರಾಯನಗೌಡ ಇಂಗಳೇಶ್ವರ, ತಿಕೋಟಾದ ತಿಮ್ಮನಗೌಡ ಪಾಟೀಲ್, ಮಲ್ಲಿಕಾರ್ಜುನ್ ರೈನಾಪುರ್ ಇವರನ್ನು ಕಾರ್ಯಕಾರಿ ಮಂಡಳಿಯ ಸದಸ್ಯರನ್ನಾಗಿಸಿ ನವಲಗುಂದ- ಶಿರಸಂಗಿ ಟ್ರಸ್ಟ್ ಫಂಡ, ಬೆಳಗಾವಿ ಹೆಸರಿನಲ್ಲಿ ತಮ್ಮ ಜಂಗಮ ಮತ್ತು ಸ್ಥಾವರ ಆಸ್ತಿಯಿಂದ ಬರುವ ಎಲ್ಲಾ ಉತ್ಪನ್ನವನ್ನು ಟ್ರಸ್ಟಿಗೆ ಜಮಾ ತೆಗೆದುಕೊಂಡು ಆ ಟ್ರಸ್ಟ್ ಫಂಡಿನ ಹಣವನ್ನು ಯಾವತ್ತೂ ಲಿಂಗವಂತ ಸಮಾಜದ ಮಕ್ಕಳ ವಿದ್ಯಾಭ್ಯಾಸಕ್ಕೆ ವಿನಿಯೋಗಿಸಬೇಕು ತಮ್ಮ ಪತ್ನಿ ಸುಂದರಾಬಾಯಿಗೆ ಪ್ರತಿ ತಿಂಗಳು ಒಂದು ನೂರು ರೂಪಾಯಿಗಳನ್ನು ಟ್ರಸ್ಟ್ ನಿಂದ ಕೊಡತಕ್ಕದ್ದು ಎಂದು ಬರೆದಿದ್ದರು.
ಉಯಿಲಿನ ಲಿಖಿತವನ್ನು ಕೇಳಿದ ಅಂದಿನ ಬ್ರಿಟಿಷ್ ಅಧಿಕಾರಿ ಜಾಕ್ಸನ್ ಮೂಕ ವಿಸ್ಮಿತನಾಗಿ ಇಂತಹ ದಾನಿಗಳು ಸಮಾಜದಲ್ಲಿ ಸಾವಿರಾರು ವರ್ಷಕ್ಕೆ ಒಬ್ಬರು ಮಾತ್ರ ಸಿಗುತ್ತಾರೆ ಎಂದು ಗದ್ಗದಿತನಾಗಿ ಉದ್ಘರಿಸಿದನು. ಇಂದಿಗೂ ಕೂಡ ಇಂಗ್ಲೆಂಡಿನ ಬ್ರಿಟಿಷ್ ಮ್ಯೂಸಿಯಂನಲ್ಲಿ ಲಿಂಗರಾಜರ ಭಾವಚಿತ್ರ ಮತ್ತು ಅವರ ದಾನ ಪತ್ರವನ್ನು ಮುಕ್ತ ಪ್ರದರ್ಶನಕ್ಕೆ ಇಡಲಾಗಿದೆ.
ಲಕ್ಷಾಂತರ ವಿದ್ಯಾರ್ಥಿಗಳು ಓದುತ್ತಿರುವ ಸಪ್ತರ್ಷಿಗಳೆಂದೇ ಹೆಸರುವಾಸಿಯಾದ ಏಳು ಜನ ಸೇರಿ ಸ್ಥಾಪಿಸಿದ ಕೆಎಲ್ಇ ಟ್ರಸ್ಟ್ ತನ್ನ ಮೊದಲ ಕಾಲೇಜಿಗೆ ಲಿಂಗರಾಜ ಕಾಲೇಜ ಎಂದು ಹೆಸರಿಸಿ ಲಿಂಗರಾಜ ಅರಸರಿಗೆ ಗೌರವ ಸಲ್ಲಿಸಿದೆ.
ಲಿಂಗರಾಜರು ಪಂಚಭೂತಗಳಲ್ಲಿ ಲೀನವಾಗಿರಬಹುದು ಆದರೆ ಅವರು ಹಚ್ಚಿದ ಜ್ಞಾನ ಜ್ಯೋತಿಯ ಕಿರಣಗಳು ಪ್ರಪಂಚದ ಎಲ್ಲ ದೇಶಗಳಲ್ಲಿ ಹರಡಿ ಭವ್ಯ ಬೆಳಕನ್ನು ಹರಡಿವೆ, ಮುಂದೆಯೂ ಹರಡುತ್ತಲೇ ಸಾಗುತ್ತದೆ.
ತ್ಯಾಗವೀರ ಲಿಂಗರಾಜ ಅರಸರ ಈ ದಾನ ಕೋಟ್ಯಾಂತರ ವಿದ್ಯಾರ್ಥಿಗಳ ಭವ್ಯ ಭವಿಷ್ಯಕ್ಕೆ ದಾರಿ ಮಾಡಿಕೊಟ್ಟಿದೆ. ಇಂತಹ ಪುಣ್ಯ ಪುರುಷನನ್ನು ಪಡೆದ ಆ ತಾಯಿ ಕನ್ನಡಮ್ಮ ಧನ್ಯಳಾಗಿದ್ದಾಳೆ.
ಇಂತಹ ಪುಣ್ಯ ಪುರುಷರು ಮತ್ತೆ ಮತ್ತೆ ಹುಟ್ಟಿ ಈ ಭರತ ಭೂಮಿಯನ್ನು ಪಾವನ ಮಾಡಲಿ ಎಂದು ಆಶಿಸುವ
-ವೀಣಾ ಹೇಮಂತ್ ಗೌಡ ಪಾಟೀಲ್ ಮುಂಡರಗಿ ಗದಗ್
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ