ಬೆಂಗಳೂರು: ‘ಸೆಮಿಕಂಡಕ್ಟರ್ ತಂತ್ರಜ್ಞಾನ ಹಾಗೂ ನವೀನ ವಿನ್ಯಾಸಗಳ ಅನುಷ್ಠಾನಗಳಿಂದ ನಮ್ಮ ದೇಶದ ವಿದ್ಯುನ್ಮಾನ ಕ್ಷೇತ್ರದ ಉದ್ಯಮಗಳು ಅಪಾರ ಪ್ರಗತಿ ಕಂಡಿವೆ. ಇದರಿಂದ ಜನಸಾಮಾನ್ಯರ ನಿತ್ಯದ ಅಗತ್ಯಗಳಿಗೆ ಪರಿಣಾಮಕಾರಿಯಾಗಿ ತಂತ್ರಜ್ಞಾನ ಸಕಾರಾತ್ಮಕವಾಗಿ ಸ್ಪಂದಿಸಲು ಸಾಧ್ಯವಾಗಿದೆ’, ಎಂದು ಇಂಟೆಲ್ ಕಾರ್ಪೊರೇಷನ್ ನ ಮಾಜಿ ತಂತ್ರಜ್ಞಾನ ನಿರ್ದೇಶಕ ದಿನೇಶ್ ಅಣ್ಣಯ್ಯ ನುಡಿದರು.
ಅವರು ನಿಟ್ಟೆ ಮೀನಾಕ್ಷಿ ತಾಂತ್ರಿಕ ಮಹಾವಿದ್ಯಾಲಯದ ವಿದ್ಯುನ್ಮಾನ ಮತ್ತು ಸಂವಹನ ತಂತ್ರಜ್ಞಾನ ವಿಭಾಗ ಆಯೋಜಿಸಿದ್ದ ಅಟಲ್-ಎ.ಐ.ಸಿ.ಟಿ.ಇ ಪ್ರಾಯೋಜಿತ ‘ಅಧ್ಯಾಪಕ ಸಾಮಥ್ರ್ಯ ಅಭಿವೃದ್ಧಿ’ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಇಂದಿನಿಂದ ಆರು ದಿನಗಳ ಕಾಲ ನಡೆಯುವ ಈ ಕಾರ್ಯಾಗಾರದಲ್ಲಿ ರಾಷ್ಟ್ರದ ವಿವಿಧ ಇಂಜಿನಿಯರಿಂಗ್ ಕಾಲೇಜುಗಳ ಪ್ರಾಧ್ಯಾಪಕರು, ಸಂಶೋಧಕರು ಹಾಗೂ ಕೈಗಾರಿಕಾ ಪ್ರತಿನಿಧಿಗಳು ಪಾಲ್ಗೊಂಡಿದ್ದಾರೆ. ತಂತ್ರಜ್ಞಾನ ಕ್ಷೇತ್ರದಲ್ಲಿ ಕ್ಷಿಪ್ರ ಪ್ರಗತಿ ಕಾಣುತ್ತಿರುವ ಭಾರತಕ್ಕೆ ಅಗತ್ಯವಿರುವ ಸೆಮಿಕಂಡಕ್ಟರ್ ಹಾಗೂ ಚಿಪ್‍ಗಳ ಸಮರ್ಪಕ ಪೂರೈಕೆಗಾಗಿ ಉದ್ಯಮಗಳನ್ನು ಸಜ್ಜುಗೊಳಿಸುವ ಹಾಗೂ ಈ ನಿಟ್ಟಿನಲ್ಲಿ ನಮ್ಮ ಯುವ ಸಂಶೋಧಕರು ವಹಿಸಬೇಕಾದ ಮಹತ್ವದ ಪಾತ್ರ ಕುರಿತಂತೆ ಈ ಕಾರ್ಯಾಗಾರ ಬೆಳಕು ಚೆಲ್ಲಲಿದೆ.
ಐ.ಇ.ಇ.ಇ ರೋಬಾಟಿಕ್ಸ್ ಹಾಗೂ ಆಟೋಮೇಶನ್ ಸೊಸೈಟಿಯ ಹಿರಿಯ ಸದಸ್ಯ ಡಾ. ಪ್ರಭಾಕರ ಮಿಶ್ರಾ ಗೌರವಾನ್ವಿತ ಅತಿಥಿಗಳಾಗಿದ್ದರು. ಅವರು ತಮ್ಮ ಭಾಷಣದಲ್ಲಿ, ‘ನಮ್ಮ ಅಧ್ಯಾಪಕರು ಯುವ ತಂತ್ರಜ್ಞರನ್ನು ಸಂಶೋಧನಾ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಪ್ರೇರೇಪಿಸಬೇಕು. ಆಗ ಮಾತ್ರ ಸದ್ಯದಲ್ಲಿ ಭಾರತ ಎದುರಿಸುತ್ತಿರುವ ಸೆಮಿಕಂಡಕ್ಟರ್‍ಗಳ ಪೂರೈಕೆಯಲ್ಲಿ ಆಗುತ್ತಿರುವ ಕೊರತೆಯನ್ನು ನಿವಾರಿಸಲು ಸಾಧ್ಯ’, ಎಂದರು.
ನಿಟ್ಟೆ ಮೀನಾಕ್ಷಿ ತಾಂತ್ರಿಕ ಮಹಾವಿದ್ಯಾಲಯದ ಶೈಕ್ಷಣಿಕ ಮುಖ್ಯಸ್ಥ ಡಾ. ವಿ. ಶ್ರೀಧರ್ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ತಮ್ಮ ಅಧ್ಯಕ್ಷ ಭಾಷಣದಲ್ಲಿ ‘ನಮ್ಮ ಯುವ ಸಂಶೋಧಕರು ಸಿದ್ಧ ಪರಿಮಿತಿಗಳಲ್ಲಿ ಲಭ್ಯವಾಗುವ ತಂತ್ರಜ್ಞಾನದ ಮಾದರಿಗಳಿಗಷ್ಟೇ ಜೋತುಬೀಳದೆ, ಈ ಪರಿಮಿತಿಗಳನ್ನು ದಾಟಿ ಹೊಸತನ್ನು ಕಂಡುಕೊಳ್ಳಬೇಕು’, ಎಂದು ನುಡಿದರು.
ನಿಟ್ಟೆ ಮೀನಾಕ್ಷಿ ತಾಂತ್ರಿಕ ಮಹಾವಿದ್ಯಾಲಯದ ವಿದ್ಯುನ್ಮಾನ ಮತ್ತು ಸಂವಹನ ತಂತ್ರಜ್ಞಾನ ವಿಭಾಗದ ಮುಖ್ಯಸ್ಥ ಡಾ. ರಾಮಚಂದ್ರ ಎ.ಸಿ. ಹಾಗೂ ಸಹಪ್ರಾಧ್ಯಾಪಕ ಡಾ. ಶಶಿಧರ ಕೆ.ಎಸ್ ಕಾರ್ಯಾಗಾರದ ಸಂಯೋಜನೆಯ ಹೊಣೆ ಹೊತ್ತಿದ್ದರು. ಸಮಾರಂಭದಲ್ಲಿ ನಿಟ್ಟೆ ಮೀನಾಕ್ಷಿ ತಾಂತ್ರಿಕ ಮಹಾವಿದ್ಯಾಲಯದ ಶೈಕ್ಷಣಿಕ ಸಿಬ್ಬಂದಿ ಹಾಗೂ ಇತರೆ ಇಂಜಿನಿಯರಿಂಗ್ ಕಾಲೇಜುಗಳ ಹಿರಿಯ ಶಿಕ್ಷಕರು ಹಾಜರಿದ್ದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ