ಸಾಧನೆಯ ಹಾದಿಗೆ ಸ್ಪೂರ್ತಿಯೂ ಬೇಕು

Upayuktha
0


ವ್ಯಕ್ತಿಯ ಸಾಧನೆಗೆ ಸ್ಪೂರ್ತಿ ಬಹಳ ಅಗತ್ಯವೆನಿಸುತ್ತದೆ. ಹಾಗಾದರೆ ಸ್ಪೂರ್ತಿ ಎಂದರೇನು ಎಂಬುದು ತಿಳಿಯೋಣ.


ಸ್ಪೂರ್ತಿ ಅನ್ನೋ ಪದ ಎಷ್ಟು ಮುದ್ದಾದ ಪದ ಅನ್ಸುತ್ತೆ ನೋಡಿ. ಬದುಕಿನಲ್ಲಿ ಸ್ಪೂರ್ತಿ ತುಂಬುವ ಮಾತುಗಳು ಮತ್ತು ಸ್ಪೂರ್ತಿ ತುಂಬುವ ವ್ಯಕ್ತಿಗಳು ಎರಡೂ ಮುಖ್ಯವೆನಿಸುತ್ತವೆ. ಸ್ಪೂರ್ತಿದಾಯಕ ವ್ಯಕ್ತಿಗಳೇ ಇಲ್ಲವೆಂದಾಗ ಸ್ಪೂರ್ತಿದಾಯಕ ಮಾತುಗಳಿರಲು ಸಾಧ್ಯವೇ ? ಒಬ್ಬರು ಮತ್ತೊಬ್ಬರಿಗೆ ಸ್ಪೂರ್ತಿ ಎಂಬ ಟಾನಿಕ್ ನ್ನು ನೀಡುತ್ತಿದ್ದರೇನೆ ಜೀವನ ಬಲು ಚೆಂದ. ನೋಡುವ ನೋಟಗಳು ಆಡುವ ಮಾತುಗಳು ಮಾಡುವ ಕೆಲಸಗಳು ನಕಾರಾತ್ಮಕವಾಗಿಯೇ ಇದ್ದರೆ ಬಾಳು ಗೋಳಾಗುವುದಲ್ಲಿ ಸಂಶಯವಿಲ್ಲ. ಬದುಕು ನಂದನವನವಾಗಲು ನಮ್ಮೊಂದಿಗಿರುವವರು ನಮ್ಮ ಏಳಿಗೆಯನ್ನು ಬಯಸುವವರಾಗಿರಬೇಕು. ನಿತ್ಯ ಸ್ಪೂರ್ತಿಯ  ಹೊಂಗಿರಣಗಳನ್ನು ನಮ್ಮ ಮೇಲೆ ಬೀರಬೇಕು. ಆದರೆ ಪ್ರಸಕ್ತ ಕಾಲಘಟ್ಟದಲ್ಲಿ ಸ್ವ ಏಳ್ಗೆ , ಸ್ವ-ಹಿತಾಸಕ್ತಿಯ ಜನರೇ ಹೆಚ್ಚಾಗಿದ್ದಾರೆಂದು ಭಾವಿಸಿದರೆ ಸ್ಪೂರ್ತಿ ನೀಡುವವರ್ಯಾರು ಎಂಬುದು ಮತ್ತೂ ಪ್ರಶ್ನೆಯಾಗಿಯೇ ಉಳಿಯುತ್ತದೆ. ನಕಾರಾತ್ಮಕ ಭಾವನೆಗಳ ಮನುಷ್ಯರ ನಡುವೆ ಸಕಾರಾತ್ಮಕತೆಯನ್ನು ಮಣ್ಣಿನಲ್ಲಿ ಚಿನ್ನವನ್ನು ಹುಡುಕುವಂತೆ ಹುಡುಕಬೇಕಾಗಿದೆ. ನಕಾರಾತ್ಮಕ ಶಕ್ತಿಯನ್ನು ಸಕಾರಾತ್ಮಕ ಶಕ್ತಿಯನ್ನಾಗಿ ಬದಲಾಯಿಸುವ ಶಕ್ತಿ, ಅದುವೇ ಸ್ಪೂರ್ತಿಯ ಮಾತುಗಳು .


ಸ್ಪೂರ್ತಿ ಎಂಬ ಪದಕ್ಕೆ ಸಮಾನವಾಗಿ ಪ್ರೇರಣೆ, ಪ್ರೋತ್ಸಾಹ, ಬೆಂಬಲ, ಸಹಾಯ, ಉತ್ಸಾಹ ಮುಂತಾದ ಪದಗಳನ್ನು ಕಂಡುಕೊಳ್ಳಬಹುದು. ಸ್ವಾಮಿ ವಿವೇಕಾನಂದರ ಸ್ಪೂರ್ತಿಯ ಮಾತುಗಳು ಅದೆಷ್ಟೋ ಯುವಶಕ್ತಿಯನ್ನು ಭಾರತದ ನಿರ್ಮಾಣ ಕಾರ್ಯದಲ್ಲಿ ತೊಡಗಿಕೊಳ್ಳುವಂತೆ ಪ್ರೇರೇಪಿಸಿದೆ. ಭಾರತದ  ಮಹಾಕಾವ್ಯ ರಾಮಾಯಣದಲ್ಲಿ ವಿಶ್ವಾಮಿತ್ರರು ರಾಮಲಕ್ಷ್ಣಣರಿಗೆ ನೀಡಿದ ಸ್ಪೂರ್ತಿ , ಮಹಾಕಾವ್ಯ ಮಹಾಭಾರತದಲ್ಲಿ ದ್ರೋಣಾಚಾರ್ಯರು ಅರ್ಜುನನಿಗೆ ನೀಡಿದ ಸ್ಪೂರ್ತಿ, ಮಹರ್ಷಿ ವಾಲ್ಮೀಕಿಯವರು ಲವಕುಶರಿಗೆ ನೀಡಿದ ಸ್ಪೂರ್ತಿ ಅವರೆಲ್ಲರನ್ನು ಯುಗಯುಗಗಳಿಗೆ ಅಜರಾಮರವಾಗಿದ್ದಾರೆ. 


ಸ್ಪೂರ್ತಿ ಸಾಧನೆಗೆ ಪ್ರೇರಣೆಯಾಗಿರುವಂತೆ  ಸಾಧನೆ ಮಾಡಲು ಸ್ಪೂರ್ತಿ ಅತ್ಯಗತ್ಯವಾಗಿರುತ್ತದೆ. ಹಾಗಾದರೆ ಸಾಧನೆ ಎಂದರೇನು ಎಂಬುದನ್ನು ತಿಳಿಯೋಣ. "ಯಾವುದಾದರೂ ಒಂದು ಕ್ಷೇತ್ರದಲ್ಲಿ ತನ್ನದೇ ಆದ ಪರಿಶ್ರಮದಲ್ಲಿ ಬುದ್ಧಿಶಕ್ತಿಯಲ್ಲಿ ಪ್ರತಿಭೆಯಲ್ಲಿ ಹಠ ಛಲದಿಂದ ಸಾಧಿಸಿ ತೋರಿಸುವುದೇ ಸಾಧನೆ " ಎಂಬ ವ್ಯಾಖ್ಯಾನವನ್ನು ನೀಡುತ್ತಾರೆ ಜ್ಞಾನಿಗಳು. ಒಂದು ಮಗುವಿನ ಹಂತಕ್ಕೆ ಸಾಧನೆ ಎಂದರೆ ಮಗು ನಗುವುದು ಅಳುವುದು ನಿಲ್ಲುವುದು. ಪುಟ್ಟ ಪುಟ್ಟ ಹೆಜ್ಜೆಗಳನ್ನು ಇಟ್ಟು ನಡೆಯುವುದು. ಓಡುವುದು ಮಾತನಾಡುವುದು ಇತ್ಯಾದಿ ಎಲ್ಲಾ ಚಟುವಟಿಕೆಗಳನ್ನು ಮಗುವಿನ ಸಾಧನೆ ಎಂದೇ ಪರಿಗಣಿಸಬೇಕು. ವ್ಯಕ್ತಿಗಳು ವಿಭಿನ್ನವಾಗಿರುವಂತೆ ಸಾಧನ ಕ್ಷೇತ್ರಗಳು ವಿಭಿನ್ನವಾಗಿರುತ್ತವೆ. ಅವರವರ ಇಚ್ಛೆಯಂತೆ ಕ್ರೀಡಾ ಸಾಧಕರು, ಸಂಗೀತ ಸಾಧಕರು,  ಸಾಹಿತ್ಯ ಸಾಧಕರು, ಸಂಶೋಧನಾ ಸಾಧಕರು, ರಾಜಕೀಯ ಸಾಧಕರು, ಆರ್ಥಿಕ ಸಾಧಕರು, ಸಾಮಾಜಿಕ ಸಾಧಕರು, ಧಾರ್ಮಿಕ ಸಾಧಕರು, ಆಡಳಿತ ಸಾಧಕರು, ಕಲಾ ಸಾಧಕರು, ಸತ್ಯಸಾಧಕರು,  ಅಹಿಂಸಾ ಸಾಧಕರು, ದಾರ್ಶನಿಕ ಸಾಧಕರು, ದಿಗ್ವಿಜಯ ಸಾಧಕರು, ವಿದ್ಯಾರ್ಥಿ ಸಾಧಕರು, ಮಾಧ್ಯಮ ಸಾಧಕರು, ಮುಂತಾದ ಸಾಧಕರು ಇಂದಿಗೂ ಅಮೂರ್ತ ರೂಪದಲ್ಲಿ ಜೀವಂತವಾಗಿದ್ದಾರೆ. ಒಟ್ಟಾರೆಯಾಗಿ ಸಾಧನೆ ಯಾವುದಾದರು ಒಂದು ಕ್ಷೇತ್ರದಲ್ಲಿ ಇದ್ದೇ ಇರುತ್ತದೆ. 


ಕಪಿಲ್ ದೇವ್, ಸಚಿನ್ ತೆಂಡುಲ್ಕರ್ , ವಿಶ್ವನಾಧನ್ ಆನಂದ್', ಗಂಗೂಬಾಯಿ ಹಾನಗಲ್, ಭೀಮಸೇನ್ ಜೋಶಿ, ಕುವೆಂಪು, ಮಾಸ್ತಿ ವೆಂಕಟೇಶ ಅಯ್ಯಂಗಾರ್, ಶಿವರಾಮ ಕಾರಂತರು, ಡಾII ಎಂ .ಚಿದಾನಂದ ಮೂರ್ತಿ , ಜವಾಹರ್ ಲಾಲ್ ನೆಹರು, ಇಂದಿರಾ ಗಾಂಧಿ, ಅಟಲ್ ಬಿಹಾರಿ ವಾಜಪೇಯಿ, ಡಾII ಅಮರ್ತ್ಯ ಸೇನ್ , ಡಾII ಮಹಲೋ ನೋಬಿಸ್ , ಸತ್ಯ ಹರಿಶ್ಚಂದ್ರ, ಬಸವೇಶ್ವರರು, ಮಹಾತ್ಮ ಗಾಂಧೀಜಿ, ಡಾII ಬಿ.ಆರ್. ಅಂಬೇಡ್ಕರ್, ಅಮರಶಿಲ್ಪಿ ಜಕಣಾಚಾರಿ' ಚಿತ್ರಕಲಾವಿದ ರವಿವರ್ಮ, ರಾಜಾರಾಮ್ ಮೋಹನ ರಾಯ್, ಸ್ವಾಮಿ ವಿವೇಕಾನಂದ , ಶ್ರೀ ನಾರಾಯಣ ಗುರು, ಇತಿಹಾಸದಲ್ಲಿ ಅಜೇಯರಾಗಿ ಮೆರೆದ ಸಾಮ್ರಾಟ್ ಅಶೋಕ, ಸಮುದ್ರ ಗುಪ್ತ, ಇಮ್ಮಡಿ ಪುಲಕೇಶಿ, ಪೃಥ್ವಿರಾಜ ಚೌಹಾನ್, ಛತ್ರಪತಿ ಶಿವಾಜಿ, ಕಿತ್ತೂರು ರಾಣಿ ಚೆನ್ನಮ್ಮ, ಸಂಗೊಳ್ಳಿ ರಾಯಣ್ಣ, ಝಾನ್ಸಿ ರಾಣಿ ಲಕ್ಷ್ಮೀಬಾಯಿ, ನಾಲ್ವಡಿ ಕೃಷ್ಣರಾಜ ಒಡೆಯರ್, ಸರ್. ಎಂ. ವಿಶ್ವೇಶ್ವರಯ್ಯ, ರಾಮಾನುಜನ್, ವಿಕ್ರಂ ಸಾರಾಭಾಯಿ, ಸಿ. ಎನ್.ಆರ್. ರಾವ್ ಹೀಗೆ ನೆನಪಿಸಿಕೊಳ್ಳುತ್ತಾ ಹೋದರೆ ಸಾಧಕರ ಪಟ್ಟಿ ಮುಗಿಯುವುದೇ ಇಲ್ಲ. ಒಟ್ಟಾರೆಯಾಗಿ ಎಲ್ಲ ಸಾಧಕರೂ ಒಂದಲ್ಲಾ ಒಂದು  ರೀತಿಯಲ್ಲಿ ನಮಗೆ ಸ್ಪೂರ್ತಿ ನೀಡುವವರೇ ಆಗಿದ್ದಾರೆ.


ಹಾಗಾದರೆ ಸಾಧನೆ ಮಾಡಲು ಏನೇನು ಬೇಕು ಎಂದು ಯೋಚಿಸಿದಾಗ ಸತತ ಪರಿಶ್ರಮ, ಸತತ ಅಭ್ಯಾಸ, ದೃಡ ಸಂಕಲ್ಪ, ನಂಬಿಕೆ ಮತ್ತು ವಿಶ್ವಾಸ, ಧೈರ್ಯ, ಉನ್ನತ ವಿಚಾರ, ಉನ್ನತವಾದ ಉದ್ದೇಶ. ಗುರಿ, ಧೇಯ, ಸತತ ಪ್ರಯತ್ನ, ನಿರಂತರ ಅಧ್ಯಯನ' ಸಾಧಿಸುವ ಛಲ, ಏಕಾಗ್ರತೆ, ಆತ್ಮವಿಶ್ವಾಸ, ಸಮಯಪ್ರಜ್ಞೆ, ಜ್ಞಾನ ಸಂಗ್ರಹ ಇವೆಲ್ಲವೂ ಅಗತ್ಯವಾಗುತ್ತದೆ. 


ಸಾಧನೆ ಮಾಡಿದ ನಂತರ ವ್ಯಕ್ತಿಗೆ ಸಿಗುವುದೇನು ಎಂದು ಯೋಚಿಸಿದಾಗ ಪರಿಶ್ರಮಕ್ಕೆ ತಕ್ಕ ಪ್ರತಿಫಲ ಸಿಗುತ್ತದೆ. ಸಾಧಿಸಿದವರಿಗೆ ಪರ್ವತದ ಉತ್ತುಂಗವನ್ನು ಏರಿದ ಸಂತೋಷ ಸಿಗುತ್ತದೆ. ಒಳ್ಳೆಯ ಗೌರವ ಸನ್ಮಾನಗಳು ದೊರೆಯುತ್ತವೆ. ಒಳ್ಳೆಯವರ ಸಹವಾಸ ದೊರೆಯುತ್ತದೆ. ಸಾಧಕರ ಹೆಸರು ಚಿರಸ್ಥಾಯಿಯಾಗಿ ಉಳಿಯುತ್ತದೆ. ಭವಿಷ್ಯದ ಸಾಧಕರಿಗೆ ಮಾದರಿಯಾಗುತ್ತದೆ. ಇತಿಹಾಸ ಸೃಷ್ಟಿಯಾಗುತ್ತದೆ. ವಿಭಿನ್ನ ದೃಷ್ಟಿಕೋನ ರೂಪಗೊಳ್ಳುತ್ತದೆ. ಸಾಧಕರು ಜ್ಞಾನಿ ವಿಜ್ಞಾನಿ ತತ್ವಜ್ಞಾನಿಗಳಾಗಿ ಅಜರಾಮರಾಗುತ್ತಾರೆ. ಗೊತ್ತಿರುವುದನ್ನು ಗೊತ್ತಿಲ್ಲದವರಿಗೆ ತಿಳಿಸುವುದರ ಮೂಲಕ ಜ್ಞಾನ ಹಂಚಿಕೆ ಸಾಧ್ಯವಾಗುತ್ತದೆ. 


ಸಾಧನೆಯ ಹಾದಿಯಲ್ಲಿ ಎಲ್ಲವೂ ಮುಖ್ಯವಾಗುತ್ತವೆ. ಯಾವುದನ್ನು ನಿರ್ಲಕ್ಷಿಸುವಂತಿಲ್ಲ. ಚಿಕ್ಕ ಕೆಲಸಗಳನ್ನು ಅಚ್ಚುಕಟ್ಟಾಗಿ ವಿಭಿನ್ನವಾಗಿ, ಕೌಶಲ್ಯಯುಕ್ತವಾಗಿ ಮಾಡಿದಾಗ ಸಿದ್ದಿ ಲಭಿಸುತ್ತದೆ. ಆ ಸಿದ್ದಿಯೇ ಸಾಧನೆ. ನಮ್ಮ ಬದುಕಿನಲ್ಲಿಯೂ ಸರಳ ಜೀವನ ಉದಾತ್ತ ಚಿಂತನೆಗಳನ್ನು ಮಾಡುತ್ತಾ ಕೈಲಾದಷ್ಟು ಸಾಧನೆ ಮಾಡುತ್ತಾ ನಾವೆಲ್ಲರೂ ಅಂದುಕೊಂಡ ಗುರಿಗಳನ್ನು ಸಾಧಿಸೋಣ ನಿಸ್ವಾರ್ಥ ಬದುಕಿನಿಂದ ಅಮರರಾಗಲು ಪ್ರಯತ್ನಿಸೋಣ. 


-ಕೆ. ಎನ್. ಚಿದಾನಂದ . ಹಾಸನ.



   ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter   .

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top