- ಡಾ. ಲಕ್ಷ್ಮೀಕಾಂತ ವಿ. ಮೊಹರೀರ
ಪ್ರಸ್ತಾವನೆ:
'ರಾಮಾಯಣ'ವು ಹಿಂದೂಗಳ ಪವಿತ್ರ ಗ್ರಂಥಗಳಲ್ಲಿ ಅತ್ಯಂತ ಪ್ರಾಮುಖ್ಯತೆಯನ್ನು ಪಡೆದ ಗ್ರಂಥವಾಗಿದೆ. ಇದೊಂದು ಮಹತ್ತರ ಮಹಾಕಾವ್ಯವೆಂಬ ಹೆಗ್ಗಳಿಕೆಗೆ ಪಾತ್ರವಾದ ಮಹದ್ಗ್ರಂಥವಾಗಿದೆ. ಈ ಮಹತ್ಯಾವ್ಯವನ್ನು 'ವಾಲ್ಮೀಕಿ' ಮುನಿಯಿಂದ ರಚಿಸಲ್ಪಟ್ಟಿದೆ. ಭಾರತದ ಸಾಹಿತ್ಯ ಪರಂಪರೆಗೆ ಒಂದು ಮುನ್ನುಡಿಯನ್ನು ಬರೆದ ಸರ್ವಶ್ರೇಯಸ್ಸು ವಾಲ್ಮೀಕಿಮುನಿಗೆ ಸಲ್ಲುತ್ತದೆ. ರಾಮಾಯಣವು 24,000 ಶ್ಲೋಕಗಳಿಂದ ಪರಿಶೋಭಿತವಾಗಿದ್ದು 7 ಕಾಂಡಗಳಿಂದ ಕೂಡಿದೆ. ರಾಮಾಯಣದ ಕಥೆಯಲ್ಲಿ ಸೂರ್ಯವಂಶದ ಸವಿಸ್ತಾರ ವರ್ಣನೆ ಬಂದಿದೆ ಎಂತಲೂ ವಿದ್ವಾಂಸರು ಅಭಿಪ್ರಾಯಪಡುತ್ತಾರೆ.
ಇನ್ನಿತರ ಸಾಹಿತ್ಯ ಪ್ರಕಾರಗಳಲ್ಲೂ ಈ ವಿಷಯ ಕಾಣಸಿಗುತ್ತದೆ. ರಾಮಾಯಣದ ಕಥೆಯು ಮುಖ್ಯವಾಗಿ ಅಯೋಧ್ಯೆಯ ಸೂರ್ಯವಂಶದ ರಾಜಪುತ್ರ ರಾಮ, ಆತನ ಮಡದಿ ಸೀತೆ ಹಾಗೂ ಸೀತೆಯ ಅಪಹರಣ ಮಾಡಿದ 'ರಾವಣನ' ಸಂಹಾರ ಕುರಿತಾಗಿದೆ. ವಾಲ್ಮೀಕಿ ಮಹರ್ಷಿಗಳಿಂದ ರಚಿತವಾದ ಈ ಕಾವ್ಯ ರಾಮನ ಮಕ್ಕಳಾದ ಲವ-ಕುಶರಿಂದ ಪ್ರಚಲಿತವಾಯಿತು. ಪ್ರಾಚೀನ ಭಾರತದ ಪ್ರಮುಖ ಸಾಹಿತ್ಯಕ ಕೃತಿಗಳಲ್ಲೊಂದಾದ ರಾಮಾಯಣವು 'ಭಾರತ ಉಪಖಂಡ'ದ ಕಲೆ ಮತ್ತು ಸಂಸ್ಕೃತಿಯ ಮೇಲೆ ಆಳವಾದ ಪ್ರಭಾವ ಬೀರಿದೆ. ರಾಮನ ಕಥೆಯು ಅನೇಕ ಭಾಷೆಗಳಲ್ಲಿ ಬರೆಯಲ್ಪಟ್ಟು ಬಹಳಷ್ಟು ಸಾಹಿತ್ಯಕ್ಕೆ ಸ್ಫೂರ್ತಿಯಾಯಿತು.
ಈ ನಿಟ್ಟಿನಲ್ಲಿ ನೋಡುವುದಾದರೆ, ಭಾರತೀಯರ ಮೂಲಸ್ತೋತ್ರ ಸಾಹಿತ್ಯವಾದ ಸಂಸ್ಕೃತ ಭಾಷೆಯಲ್ಲಿ ಶ್ರೀರಾಮಾಯಣದ ನಾನಾ ಪ್ರಕಾರಗಳು ಪ್ರಜ್ವಲಿತ ಸಾಹಿತ್ಯದಲ್ಲಿ ಅರಳಿ, ತನ್ನ ಹೊಂಬೆಳಕನ್ನು ಜಗತ್ತಿಗೆ ಪಸರಿಸಿದೆ.
ವಾಲ್ಮೀಕಿ ರಾಮಾಯಣ:
ಕೂಜಂತಂ ರಾಮ ರಾಮೇತಿ ಮಧುರಂ ಮಧುರಾಕ್ಷರಂ |
ಆರುಹ್ಯ ಕವಿತಾಶಾಖಂ ವಂದೇ ವಾಲ್ಮಿಕೀಕೋಕಿಲಮ್ ||
ವಾಲ್ಮೀಕಿ ರಾಮಾಯಣವು ಶ್ರೀ ಮದ್ರಾಮಾಯಣವೆಂಬುದಾಗಿಯೂ, ಆದಿಕಾವ್ಯವೆಂಬುವುದಾಗಿಯೂ ಪ್ರಸಿದ್ಧವಾಗಿದೆ. ಆದಿಕಾವ್ಯವೆಂಬ ಹೆಸರಿಗೆ ಅನುಗುಣವಾಗಿ ಶ್ರೀ ಮದ್ರಾಮಾಯಣದ ಆರಂಭದಲ್ಲಿಯೇ ಒಂದು ಪ್ರಸಂಗ ಚಿತ್ರಿತವಾಗಿದೆ ಮಹರ್ಷಿ ವಾಲ್ಮೀಕಿಗಳು ಸ್ನಾನಾರ್ಥವಾಗಿ ಶಿಷ್ಯರೊಡನೆ ತಮಸಾ ನದಿಗೆ ಹೋಗಿದ್ದಾರೆ. ಸಮೀಪದಲ್ಲಿ ಎರಡು ಕ್ರೌಂಚ ಪಕ್ಷಿಗಳು ನಲಿಯುತ್ತಿರುವಾಗ, ಅವುಗಳಲ್ಲೊಂದಾದ ಗಂಡು ಹಕ್ಕಿಯನ್ನು ಒಬ್ಬ ವ್ಯಾಧನು ಹೊಡೆದು ಕೊಲ್ಲುತ್ತಾನೆ. ಹೆಣ್ಣು ಹಕ್ಕಿ ಗೋಳಾಡುತ್ತದೆ. ಅದನ್ನು ಕಂಡು ಮನಕರಗಿದ ವಾಲ್ಮೀಕಿ ಮುನಿಗಳ ಬಾಯಿಯಿಂದ ಈ ಮಾತು ಥಟ್ಟನೇ ಹೊಮ್ಮುತ್ತದೆ.
'ಮಾ ನಿಷಾದ ಪ್ರತಿಷ್ಠಾಂ ತ್ವಮಗಮಃ ಶಾಶ್ವತೀಃ ಸಮಾಃ |
ಯತ್ಕ್ರೌಂಚ ಮಿಥುನಾದೇಕ ಮವಧೀಃ ಕಾಮಮೋಹಿತಂ || (1-2-15)
ಶೋಕರೂಪದಿಂದ ಕೂಡಿದ ಶ್ಲೋಕವನ್ನು ನುಡಿದ ವಾಲ್ಮೀಕಿಯು ಮುಂದೆ ಬ್ರಹ್ಮನ ಆದೇಶದಂತೆ ಸಂಪೂರ್ಣ ರಾಮಾಯಣವನ್ನು ರಚಿಸಿದರು. ಮಹರ್ಷಿಗಳ ಶೈಲಿ ಅನುಪಮವಾದದ್ದು, ಅತ್ಯಂತ ಲಲಿತವಾದ ಶೈಲಿಗೆ ರಾಮಾಯಣವು ಪ್ರಥಮೋದಾಹರಣೆ. ಸಂಸ್ಕೃತವನ್ನು ಅತ್ಯಂತ ಸುಲಭವಾಗಿ ಬಳಸಲು ಶಕ್ಯವಾಗದು ಇದರಲ್ಲಿ ಅನುಷ್ಟುಪ ವೃತ್ತಗಳೇ ಅಧಿಕ. ಎಲ್ಲ ರಸಭಾವವಸ್ತುಸನ್ನಿವೇಶಗಳಿಗೂ ಹೊಂದಿಕೊಳ್ಳುವ ಛಂದಸ್ಸು ಇದು.
ರಾಮಾಯಣವು ಶ್ರೇಷ್ಠವಾದ ಧ್ವನಿಕಾವ್ಯ. ಗ್ರಂಥದ ಯಾವ ಪುಟವನ್ನು ತೆಗೆದರೂ ಓದುಗರ ಹೃದಯವನ್ನು ಸೆರೆಹಿಡಿದು. ತನ್ಮಯಗೊಳಿಸುವ ಶಕ್ತಿ ಈ ಕಾವ್ಯಕುಂಟು ವಿಸ್ತೃತವಾದ ಈ ಮಹಾಕಾವ್ಯವನ್ನು ಎಲ್ಲೆಡೆಯೂ ರಸಭಾವ ನಿರಂತರವಾಗಿ ರಚಿಸಿದ ವಾಲ್ಮೀಕಿಗಳ ಪ್ರತಿಭೆ ಅಸಾಧಾರಣವಾದದು.
ವಾಲ್ಮೀಕಿ ಮಹರ್ಷಿಗಳ ಆಧಾರದ ಮೇಲೆ ಅನೇಕ 'ರಾಮಾಯಣ' ಕೃತಿಗಳ ಪ್ರಕಾರಗಳು ಸನಾತನ ಭಾರತದ ಸಂಸ್ಕೃತಿಯಲ್ಲಿ ಹಾಸುಹೊಕ್ಕಾಗಿದ್ದು ಅನೇಕ ಸಾಹಿತಿಗಳ ಕೈಕುಂಚದಿಂದ ಪಲ್ಲವಿಸಿವೆ. ಅಧ್ಯಾತ್ಮರಾಮಾಯಣ, ಆನಂದ ರಾಮಾಯಣ, ವಾಸಿಷ್ಠ ರಾಮಾಯಣ, ಅದ್ಭುತ ರಾಮಾಯಣಗಳು ಮುಖ್ಯವಾಗಿ ಪ್ರಸಿದ್ಧವಾಗಿವೆ. ಮಹಾಭಾರತದಲ್ಲಿ ಒಂದು 'ರಾಮೋಪಾಖ್ಯಾನ'ವನ್ನು ನೋಡಬಹುದು. ಸ್ಕಂದ, ಪದ್ಮಾ, ಭಾಗವತ, ಕೂರ್ಮ ಮುಂತಾದ ಪುರಾಣಗಳಲ್ಲೂ ರಾಮಚರಿತ್ರೆಯು ವ್ಯಾಪಕವಾಗಿ ವರ್ಣಿತವಾಗಿದೆ. ಬೌದ್ಧಜಾತಕಗಳಲ್ಲಿಯೂ, ಜೈನಪುರಾಣಗಳಲ್ಲಿಯೂ ರಾಮಚರಿತೆ ಇದೆ.
ಶ್ರೀ ಮದ್ರಾಮಾಯಣವು 'ಪರಂ ಕವೀನಾಮಾಧಾರಂ' ಎಂಬುವುದಾಗಿ ಹೇಳಿರುವುದು ಅಕ್ಷರಶಃ ಸತ್ಯವಾಗಿದೆ. ರಾಮಾಯಣವನ್ನವಲಂಬಿಸಿ, ಸಂಸ್ಕೃತ ಸಾಹಿತ್ಯದಲ್ಲಿ ದೊರೆಯುವ ಕಾವ್ಯ, ಚಂಪೂ, ನಾಟಕಗಳಿಗೆ ಲೆಕ್ಕವಿಲ್ಲ. ರಾಮಾಯಣ ಮಂಜರೀ, ಭಟ್ಟಿಕಾವ್ಯ, ಜಾನಕೀಹರಣ, ಚಂಪೂ ರಾಮಾಯಣ, ಅನರ್ಘರಾಘವ, ಉತ್ತರರಾಮಚರಿತೆ, ಅಭಿಷೇಕ ನಾಟಕ, ಪ್ರತಿಮಾನಾಟಕ ಮುಂತಾದವು ಪ್ರಖ್ಯಾತವಾದವು.
ಮೊದಲಿಗೆ, ಭಾಸಮಹಾಕವಿಯು ರಚಿಸಿದ ನಾಟಕಗಳತ್ತ ಮುಖಮಾಡೋಣ. ನಾಟಕಗಳು ಭಾಸನ ಕೈಕುಂಚದಲ್ಲಿ ನವಿರಾಗಿ ಅರಳಿ ನಿಂತಿವೆ.
ಯಜ್ಞಫಲ:
ಏಳು ಅಂಕಗಳುಳ್ಳ ಈ ನಾಟಕದಲ್ಲಿ ರಾಮಾಯಣದ ಬಾಲಕಾಂಡದ ಕಥೆ ಇದೆ. ಪುತ್ರಕಾಮೇಷ್ಠಿಯಾಗದ ಫಲವಾಗಿ ದಶರಥನಿಗೆ ರಾಮ, ಲಕ್ಷಣ, ಭರತ, ಶತೃಘ್ನರೆಂಬ ಮಕ್ಕಳಾದರು. ವಿಶ್ವಾಮಿತ್ರರ ಯಾಗ ಸಂರಕ್ಷಣೆಯ ಫಲವಾಗಿ ಅವರಿಗೆ ವಿದ್ಯೆ ಮತ್ತು ಅಸ್ತ್ರಗಳು ಲಭಿಸಿದವು. ಜನಕನು ನಡೆಸಿದ ಯಜ್ಞದ ಕೊನೆಯಲ್ಲಿ ರಾಮನು ಧನುರ್ಭಂಗ ಮಾಡಿದುದರಿಂದ ವಿವಾಹ ನಡೆಯಿತು. ಇವು ಮೂರು ಯಜ್ಞ ಫಲಗಳು.
ಪ್ರತಿಮಾ ನಾಟಕ:
ಈ ನಾಟಕದಲ್ಲಿ ರಾಮಾಯಣದ ಅಯೋಧ್ಯಾಕಾಂಡ ಮತ್ತು ಅರಣ್ಯಕಾಂಡಗಳ ಕಥೆ ಇದೆ. ಉದಯನಕಥಾ ನಾಟಕಗಳಲ್ಲಿ ಸ್ವಪ್ನ ವಾಸವದತ್ತದಂತೆ ರಾಮಕಥಾ ನಾಟಕಗಳಲ್ಲಿ ಇದು ಶ್ರೇಷ್ಠವಾದುದ್ದು.
ಮೊದಲನೆಯ ಅಂಕದಲ್ಲಿ ರಾಮಪಟ್ಟಾಭೀಷೇಕಕ್ಕೆ ಕೈಕೇಯಿಯಿಂದ ವಿಘ್ನ ಮತ್ತು ದಶರಥನ ಆಶಾಭಂಗಗಳಿವೆ. ಎರಡನೇ ಅಂಕದಲ್ಲಿ ದಶರಥನ ಮರಣ ವೃತ್ತಾಂತವಿದೆ. ಮೂರನೇ ಅಂಕದಲ್ಲಿ ಭರತನು ಪ್ರತಿಮಾದರ್ಶನದಿಂದ ಕಂಗೆಡುತ್ತಾನೆ; ಅಯೋಧ್ಯೆ ಶೋಕ ಸಾಗರದಲ್ಲಿ ಮುಳುಗುತ್ತದೆ. ಕರುಣರಸ ಹೊಳೆಯಾಗಿ ಹರಿಯುತ್ತದೆ. ನಾಲ್ಕನೆಯ ಅಂಕದಲ್ಲಿ ಭರತನು ಅರಣ್ಯದಲ್ಲಿ ರಾಮಲಕ್ಷ್ಮಣರನ್ನು ಸಂಧಿಸಿ ನಗರಕ್ಕೆ ಹಿಂದಿರುಗುವಂತೆ ಬೇಡಿಕೊಳ್ಳುತ್ತಾನೆ. ಅವರು ಒಪ್ಪದಿರಲು ರಾಮಪಾದುಕಗಳನ್ನು ಪಡೆಯುತ್ತಾನೆ. ಐದನೆಯ ಅಂಕದಲ್ಲಿ ಸೀತಾಪಹರಣವಾಗುತ್ತದೆ. ಆರನೇಯದರಲ್ಲಿ ಜಟಾಯು ಮತ್ತು ರಾವಣರ ಯುದ್ಧವೂ, ಏಳನೇಯದರಲ್ಲಿ ರಾವಣವಧೆ ಮತ್ತು ರಾಮ ಪಟ್ಟಾಭಿಷೇಕಗಳೂ ಬಂದಿವೆ.
ಈ ನಾಟಕದಲ್ಲಿ ರಾಮಾಯಣದ ಎರಡು ಕಾಂಡಗಳ ಕಥೆಯಿದ್ದರೂ ಬಾಲಕಾಂಡದ ಕಥೆಗೆ ಪ್ರಾಧಾನ್ಯ ಈ "ಪ್ರತಿಮಾನಾಟಕ"ದಲ್ಲಿ ಭಾಸನ ಪ್ರತಿಭೆ ಮತ್ತು ಕಲಾಕೌಶಲಗಳು ಪೂರ್ಣವಾಗಿ ಪ್ರಕಾಶಗೊಂಡಿವೆ.
ಈ ಭೂಮಿಕೆಯಲ್ಲಿ ಭಾಸಮಹಾಕವಿಯಿಂದ ರಚಿತವಾದ ರಾಮಾಯಣ ಕಥಾವಸ್ತುವನ್ನು ಆಧರಿಸಿದ ಎರಡು ನಾಟಕ ಪ್ರಕಾರಗಳನ್ನು ಅವಲೋಕಿಸಿದ ನಂತರ 'ಭವಭೂತಿ' ಕವಿಯಿಂದ ರಚನೆಗೊಂಡ ಅದ್ಭುತ ರಚನೆಗಳತ್ತ ದೃಷ್ಠಿಹರಿಸೋಣ.
ಮಹಾವೀರ ಚರಿತ:
ಇದು ಭವಭೂತಿ ರಚಿಸಿರುವ ಮೊದಲ ನಾಟಕ, ಇದರಲ್ಲಿ ಏಳು ಅಂಕಗಳಿವೆ. ಪ್ರಸ್ತುತ ನಾಟಕದಲ್ಲಿ ವೀರರಸವು ಪ್ರಧಾನವಾಗಿದ್ದು, ಅದಕ್ಕೆ ರೌದ್ರ, ಭೀಭತ್ಸ ಮತ್ತು ಅದ್ಭುತರಸಗಳನ್ನು ಜೋಡಿಸಲಾಗಿದೆ. ಈ ನಾಟಕದ ಪ್ರಸ್ತಾವನೆಯೊಳಗಿನ ಆರಂಭದ ಪದ್ಯದಲ್ಲಿ ಭವಭೂತಿಯು ಪ್ರಸ್ತುತ ನಾಟಕದ ಸ್ವರೂಪವನ್ನು ಪ್ರಸ್ತುತಪಡಿಸಿದ್ದಾನೆ.
ಅದರಲ್ಲಿ ಪರಶುರಾಮ, ವಾಲೀ ಮುಂತಾದವರೊಡನೆ ಗಂಭೀರ ಮತ್ತು ಭಯಾನಕ ಸ್ವರೂಪದ ರಾಮನ ಕಲಹವಿದ್ದು ಅದರ ಅರ್ಥಗೌರವಯುಕ್ತವಾದ ವರ್ಣನೆಯಲ್ಲಿ ಪ್ರಸಾದ ಮತ್ತು ಓಜಗುಣಗಳಿವೆ. ಪ್ರಸ್ತುತ ನಾಟಕದಲ್ಲಿರುವ ರಸವು ವೀರರಸವಾಗಿದ್ದು, ಅದನ್ನು ಶ್ರೇಷ್ಠ ಪಾತ್ರಗಳ ಸಂದರ್ಭಗಳಲ್ಲಿ ವರ್ಣಿಸಲಾಗಿದೆ.
ಭವಭೂತಿಯ ರಚಿಸಿದ 'ಉತ್ತರ ರಾಮಚರಿತ' ನಾಟಕದತ್ತ ನಮ್ಮ ಚಿತ್ತ-
"ಈ ನಾಟಕದಲ್ಲಿ ಏಳು ಅಂಕಗಳಿವೆ. ರಾಮಾಯಣದ ಉತ್ತರ ಕಾಂಡದಿಂದ ಕಥೆಯನ್ನು ಆಯ್ಕೆ ಮಾಡಿಕೊಂಡಿರುವುದರಿಂದಲೋ, ಪಟ್ಟಾಭಿಷೇಕದ ತುರುವಾಯದ ರಾಮಕಥೆ ಇರುವುದರಿಂದಲೋ, ಮಹಾವೀರ ಚರಿತಕ್ಕೆ ಪೂರಕವಾಗಿರುವುದರಿಂದಲೋ ಈ ನಾಟಕಕ್ಕೆ 'ಉತ್ತರರಾಮಚರಿತ' ವೆಂಬ ಹೆಸರು ಬಂದಿರಬಹುದು.
ಕಥಾಸಾರಾಂಶ:
ಪೂರ್ಣಗರ್ಭಿಣಿಯಾಗಿದ್ದ ಸೀತೆಯ ಸಹಾಯಕ್ಕೆ ರಾಮಲಕ್ಷ್ಮಣರನ್ನು ಮನೆಯಲ್ಲಿ ಬಿಟ್ಟು ಉಳಿದವರೆಲ್ಲಾ ಋಷ್ಯಶೃಂಗನ ಆಶ್ರಮಕ್ಕೆ ಯಜ್ಞವನ್ನು ನೋಡಲು ಹೋಗುತ್ತಾರೆ. ರಾಮಾಯಣದ ಚಿತ್ರಣಗಳನ್ನು ನೋಡುತ್ತಿದ್ದ ಸೀತೆ ಆಯಾಸಗೊಂಡು ರಾಮನ ಎದೆಮೇಲೆ ತಲೆಯನ್ನಿಟ್ಟು ನಿದ್ರಿಸುತ್ತಾಳೆ. ಗೂಢಚಾರದ ದುರ್ಮುಖನು ಬಂದು ರಾಮನಿಗೆ ಸೀತೆಯ ವಿಷಯಕವಾದ ಲೋಕಾಪವಾದವನ್ನು ತಿಳಿಸುತ್ತಾನೆ. ಚಿತ್ರವನ್ನು ನೋಡುತ್ತಿದ್ದಾಗ ಹೇಗೂ ಸೀತೆ ತಪೋವನವನ್ನು ನೋಡಬೇಕೆಂಬ ತನ್ನ ಬಯಕೆಯನ್ನು ಪ್ರಕಟಿಸಿದ್ದಳು. ರಾಮನು ಸೀತೆಯನ್ನು ಕಾಡಿನಲ್ಲಿ ಬಿಟ್ಟುಬರುವಂತೆ ಲಕ್ಷ್ಮಣನಿಗೆ ಅಪ್ಪಣೆ ಮಾಡುತ್ತಾನೆ. ಎಚ್ಚರಗೊಂಡ ಸೀತೆ ಪ್ರಿಯನು ತನ್ನ ಆಸೆಯನ್ನು ಈಡೆರಿಸಿದನೆಂದೇ ಭಾವಿಸಿ ಕಾಡಿಗೆ ಹೋಗುತ್ತಾಳೆ. ಮುಂದೆ ಅದೇ ಕಾಡಿನಲ್ಲಿ ಲವ-ಕುಶರ ಜನನ, ರಾಮನು ಅಶ್ವಮೇಧಯಾಗ ಮಾಡುವ ಬಗೆ, ಶಂಭೂಕವಧೆ, ಜನಸ್ಥಾನದಲ್ಲಿ ಹಿಂದೆ ತಾನು ಸೀತೆ ಜೊತೆಗಿದ್ದ ಸ್ಮರಣೆ, ಮಕ್ಕಳ 12ನೇ ಹುಟ್ಟುಹಬ್ಬಕ್ಕಾಗಿ ಪಾತಾಳದಿಂದ ಸೀತೆಯು ಗೋದಾವರಿಯ ಹತ್ತಿರಕ್ಕೆ ಬರುವುದು, ವಾಲ್ಮೀಕಿಯ ಆಶ್ರಮಕ್ಕೆ ಜನಕ, ವಶಿಷ್ಠ, ಕೌಸಲ್ಯಾದಿಗಳ ಆಗಮನ, ಚಂದ್ರಕೇತು ಮತ್ತು ಲವರ ಯುದ್ಧದ ವರ್ಣನೆ, ಮುಂತಾದ ವಿಷಯಗಳ ವರ್ಣನೆ ಚಿತ್ರಿತವಾಗಿದೆ.
ಮುಂದೆ ವಾಲ್ಮೀಕಿಯು ಗಂಗಾತೀರದಲ್ಲಿ ಸೀತಾಪರಿತ್ಯಾಗದಿಂದ ಮುಂದಿನ ಕಥೆಯ ಪ್ರದರ್ಶನಕ್ಕೆ ಏರ್ಪಡಿಸುತ್ತಾನೆ. ಅದನ್ನು ನೋಡಲು ಸರ್ವಲೋಕದವರೂ ಬಂದು ಸೇರುತ್ತಾರೆ. ಅದರಲ್ಲಿ ಸೀತೆ ಗಂಗೆಯಲ್ಲಿ ಬಿದ್ದು ಪ್ರಸವಿಸುತ್ತಾಳೆ. ಗಂಗಾದೇವಿ, ಭೂದೇವಿಯರು ಅವಳನ್ನು ಪಾತಾಳಕ್ಕೆ ಕರೆದುಕೊಂಡು ಹೋಗುತ್ತಾರೆ. ನಂತರ ಅವರು ಅವಳನ್ನು ಕರೆತಂದು ಅರುಂಧತಿಗೆ ಒಪ್ಪಿಸುತ್ತಾರೆ. ಅವಳು ಸೀತೆಯನ್ನು ಮಹಾಜನರೆದುರಿಗೆ ಪವಿತ್ರಳೆಂದು ಸಾರಿ ರಾಮನಿಗೆ ಒಪ್ಪಿಸುತ್ತಾಳೆ. ವಾಲ್ಮೀಕಿಯು ತಂದೆಗೆ ಮಕ್ಕಳನ್ನು ಒಪ್ಪಿಸುತ್ತಾನೆ. ಶಾಂತಾ (ರಾಮನ ಅಕ್ಕ) ಋಷ್ಯ ಶೃಂಗ, ಶತೃಘ್ನ ಮುಂತಾದವರು ಬಂದು ಸೇರುತ್ತಾರೆ. ಎಲ್ಲ ಬಂಧುಗಳೂ ಒಟ್ಟುಗೂಡಿ ಸುಖಶಾಂತಿಗಳನ್ನು ಪಡೆಯುತ್ತಾರೆ.
ಕ್ರೌಂಚ ಪ್ರಸಂಗದಿಂದ ವಾಲ್ಮೀಕಿಯ ಶೋಕ ಶ್ಲೋಕವಾಗಿ ಪರಿಣಮಿಸಿ ರಾಮಾಯಣದ ರಚನೆಯಾದಂತೆ ಸೀತಾ ಪರಿತ್ಯಾಗ ಪ್ರಸಂಗದಿಂದ ಭವಭೂತಿಯ ಹೃದಯದಲ್ಲಿ ಮೂಡಿದ ಮರುಕದ ಫಲವಾಗಿ 'ಉತ್ತರರಾಮಚರಿತ'ದ ರಚನೆಯಾಗಿದೆ. ರಸಗಳಿಗೆಲ್ಲಾ ಕರುಣಿಯೇ ಅವನಿಗೆ ಗುರುವಾಗಿ ಕಂಡಿತು.
ಏಕೋ ರಸಃ ಕರುಣ ಏವ ನಿಮಿತ್ತ ಭೇದಾ
ದ್ಭಿನ್ನಃ ಪೃಥಕ್ಪೃಥಗಿವ ಶ್ರಯತೇ ವಿವರ್ತಾನ್ |
ಆವರ್ತಬುದ್ಭುದತರಂಗಮಯಾನ್ವಿಕಾರಾ
ನಭೋ ಯಥಾ ಸಲಿಲಮೇವ ಹಿ ತತ್ಸಮಸ್ತಂ ||
(ಉ.ಚ. 3, 47)
ಒಂದೇ ರಸವಾದ 'ಕರುಣ ರಸ'ವು ಬೇರೆ ಬೇರೆ ಕಾರಣಗಳಿಂದ ಬೇರೆ ಬೇರೆ ರೂಪವನ್ನು ಧರಿಸುತ್ತದೆ. ಸುಳಿಗಳು, ಅಲೆಗಳು, ತರಂಗಗಳು ಹೀಗೆ ಬೇರೆ ಬೇರೆ ರೂಪಗಳು ಕಂಡು ಬಂದರೂ ಅವುಗಳ ಮೂಲದಲ್ಲಿಯ ನೀರು ಒಂದೇ ಆಗಿರುತ್ತದೆ ಎಂಬುವಂತೆ ರಸಗಳಲ್ಲೆಲ್ಲಾ 'ಕರುಣ ರಸ' ಪ್ರಧಾನವೆಂಬ ಅಂಶವನ್ನು ಮನಗಂಡು ಈ ನಾಟಕವನ್ನು ರಚಿಸಿದ್ದಾನೆ ಎಂಬುವುದು ವೇದ್ಯವಾಗುತ್ತದೆ.
ಈ ರೀತಿಯಾಗಿ ವಾಲ್ಮೀಕಿ ರಾಮಾಯಣದಲ್ಲಿ ಮೂಡಿಬಂದಿರುವ ಕಥಾವಸ್ತು ತೆಗೆದುಕೊಂಡು ಸಂಸ್ಕೃತ ಕವಿಗಳು ತಮ್ಮದೇ ಆದ ದೃಷ್ಟಿಕೊನಗಳಿಂದ ಹಲವಾರು ಮಾರ್ಪಾಡುಗಳನ್ನು ಮಾಡಿ ಅನೇಕ ಕೃತಿರತ್ನಗಳನ್ನು ರಚಿಸಿ 'ಶ್ರೀ ರಾಮ'ನ ಅನಂತ ಮುಖಗಳನ್ನು ಅನಾವರಣಗೊಳಿಸಿದ್ದಾರೆ.
ಅಡಿಟಿಪ್ಪಣೆಗಳು:
1. ಭವಭೂತಿ
ಮೂಲ: ಮರಾಠಿ
ಪ್ರೊ.ವಾ.ವಿ. ಮಿರಾಶಿ
ಅನು: ಡಾ.ಜಿ.ಎಸ್. ಗಾಯಿ.
ಪ್ರ:ನಿರ್ದೇಶಕರು, ಪ್ರಸಾರಾಂಗ,
ಮಾನಸಗಂಗೋತ್ರಿ, ಮೈಸೂರು – 570006.
- 1991
2. ಸಂಸ್ಕೃತ ಭಾಷಾಶಾಸ್ತ್ರ ಮತ್ತು ಸಾಹಿತ್ಯ ಚರಿತ್ರೆ
ಲೇಖಕರು: ಡಾ. ಕೆ. ಕೃಷ್ಣಮೂರ್ತಿ
ವಿದ್ವಾನ್ ಎನ್. ರಂಗನಾಥಶರ್ಮ
ಎಚ್. ಕೆ. ಸಿದ್ದಗಂಗಯ್ಯ.
ಪ್ರ: ಕರ್ನಾಟಕ ಸರ್ಕಾರ ಪಠ್ಯ ಪುಸ್ತಕಗಳ ಇಲಾಖೆ.
3. ಅಂತರ್ಜಾಲ ವಿವರಣೆ
- ಡಾ. ಲಕ್ಷ್ಮೀಕಾಂತ ವಿ. ಮೊಹರೀರ
ವಿಳಾಸ:
ಎಂ.ಎ., ಎಂ.ಫಿಲ್, ಪಿಎಚ್.ಡಿ.
ಸಂಸ್ಕೃತಿ ಚಿಂತಕರು,
ಪ್ಲಾಟ ನಂ: 02, 'ಇಂಚರ'
ಗೌಡ ಹೋಟೆಲ್ ಎದರುಗಡೆ,
'ಓಂ ನಗರ; ಸೇಡಂ ರಸ್ತೆ,
ಕಲಬುರಗಿ – 585105
ಇ-ಮೇಲ್: dmohrir@gmail.com
ಮೊ. ನಂ: 9060931359
ಲೇಖಕರ ಸಂಕ್ಷಿಪ್ತ ಪರಿಚಯ:
ಡಾ ಲಕ್ಷ್ಮಿಕಾಂತ ವಿ. ಮೊಹರೀರ ರವರು, ಕಲ್ಯಾಣ ಕರ್ನಾಟಕ ಭಾಗದ ಕಲ್ಬುರ್ಗಿ ಜಿಲ್ಲೆಯ ಅಫಜಲ್ಪುರದವರಾಗಿದ್ದು, ಗುಲ್ಬರ್ಗ ವಿಶ್ವವಿದ್ಯಾಲಯ ಕಲ್ಬುರ್ಗಿಯಿಂದ, ಎಂ. ಎ. ಸಂಸ್ಕೃತ ವಿಷಯದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದು, "ಸ್ವಾಮಿ ಶಿವಾನಂದ ಸ್ಮಾರಕ " ಚಿನ್ನದ ಪದಕವನ್ನು ಪಡೆದು, ಮುಂದೆ" ಸಂಸ್ಕೃತ ಸಾಹಿತ್ಯಕ್ಕೆ ಸುರಪುರ ಸಂಸ್ಥಾನದ ಕೊಡುಗೆ - ಒಂದು ಅಧ್ಯಯನ" ವಿಷಯದ ಕುರಿತು ಗುಲ್ಬರ್ಗ ವಿಶ್ವವಿದ್ಯಾಲಯ ಕಲ್ಬುರ್ಗಿಯಿಂದ, ಪಿ ಎಚ್ ಡಿ ಪಡೆದಿದ್ದಾರೆ. ಅಂತರಾಷ್ಟ್ರೀಯ ವಿದ್ವಾಂಸರಾದ ವಿದ್ಯಾವಾಚಸ್ಪತಿ ಡಾ. ಅರಳುಮಲ್ಲಿಗೆ ಪಾರ್ಥಸಾರಥಿ ಯವರ ಜೀವನ ಹಾಗೂ ಸಾಧನೆಗಳ ಕುರಿತಾಗಿ" ಮಹತ್ತನ್ನು ಚಿಂತಿಸು ಬೃಹತ್ತನ್ನು ಸಾಧಿಸು " ಮಹತ್ ಗ್ರಂಥವನ್ನು ಸಾರಸ್ವತ ಲೋಕಕ್ಕೆಸಮರ್ಪಿಸಿದ್ದಾರೆ. ಅಲ್ಲದೆ ದಾಸ ಸಾಹಿತ್ಯ ಕ್ಷೇತ್ರಕ್ಕೆ ಸಂಬಂಧಿಸಿದ ಗ್ರಂಥಗಳನ್ನು ಹಾಗೂ ನೂರಾರು ಸಂಶೋಧನಾತ್ಮಕ ಉತ್ಕೃಷ್ಟ ಲೇಖನಗಳನ್ನು ಬರೆದಿದ್ದಾರೆ. ಉಡುಪಿಯ ಪಲಿಮಾರು ಮಠದಿಂದ ಪ್ರಕಟಣೆ ಮಾಡಿದ್ದ " ವಿಜಯಾಮೃತ "(ವಿಜಯದಾಸರ ಸುಳಾದಿಗಳು) ಈ ಗ್ರಂಥದ ಪ್ರಧಾನ ಸಂಪಾದಕರಾಗಿ ಕಾರ್ಯ ನಿರ್ವಹಿಸಿದ್ದಾರೆ. ಇತ್ತೀಚೆಗೆ "ಹರಿದಾಸ ಅನುಗ್ರಹ ಪ್ರಶಸ್ತಿ'ಯನ್ನು ಶ್ರೀನಿವಾಸ ಉತ್ಸವ ಬಳಗ ಬೆಂಗಳೂರಿನವರು ಕೊಡಮಾಡಿದ್ದಾರೆ. ಖ್ಯಾತ ಹರಿದಾಸ ಸಾಹಿತ್ಯ ಚಿಂತಕರಾದ ಡಾ. ಗುರುರಾಜ ಪೋಶಟ್ಟಿಹಳ್ಳಿಯವರ ಪ್ರಧಾನ ಸಂಪಾದಕತ್ವದಲ್ಲಿ ಸಾರಸ್ವತ ಲೋಕಕ್ಕೆ ಸಮರ್ಪಿತವಾದ "ಭೀಮರಥಿ ಬಾಗಿನ" ( ಡಾ. ಅರಳುಮಲ್ಲಿಗೆ ಪಾರ್ಥಸಾರಥಿ ಅವರಿಗೆ ಅರ್ಪಿಸಿದ ) ಅಭಿನಂದನಾ ಕೃತಿಗೆ ಸಹಸಂಪಾದಕರಾಗಿ ಕೆಲಸ ನಿರ್ವಹಿಸಿ, ನಾಡಿನ ವಿವಿಧ ಮಠಾಧೀಶರುಗಳ ಕೃಪಾದೃಷ್ಟಿಗೆ ಭಾಜನರಾಗಿದ್ದಾರೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ