ಕಥೆ: ಮೈ ಮನಗಳ ಕೊಳೆ ಕಳೆಯಿತು

Upayuktha
0

ಗಾಯತ್ರಿಯವರು ಆ ದಿನ ತುಸು ತಡವಾಗಿಯೇ ಎದ್ದರು. ಕಳೆದ ಎರಡು ದಿನಗಳಿಂದ ಮೊಳಕಾಲಿನ ಹಿಂಭಾಗದ ಮಡಿಕೆಯಲ್ಲಿ ಉಂಟಾದ ಪುಟ್ಟದೊಂದು ಗುಳ್ಳೆ ಇದೀಗ ತನ್ನ ವಿಶ್ವರೂಪವನ್ನು ತೋರಿಸುತ್ತಿತ್ತು. ಸಣ್ಣ ಗುಳ್ಳೆಯ ಸುತ್ತಲ ಚರ್ಮ ಬಿಗಿದು ಕೆಂಪಾಗಿದ್ದರೂ ಗಟ್ಟಿಯಾಗಿದ್ದು ಕುರುವಿನ ಎಲ್ಲ ಲಕ್ಷಣಗಳನ್ನು ತೋರಿಸುತ್ತ ಒಂದೇ ಸಮನೆ ಸೆಳೆತವನ್ನು ಉಂಟುಮಾಡುತ್ತಿತ್ತು. ವೈದ್ಯರು ನೀಡಿದ ಮಾತ್ರೆಗಳು ತಾತ್ಕಾಲಿಕ ಉಪಶಮನವನ್ನು ನೀಡಿದ್ದವೇನೋ ಸರಿ... ಆದರೆ ಪ್ರತಿ ಬಾರಿ ಕುಳಿತು ಏಳುವಾಗ, ನಡೆಯುವಾಗ ಗುಳ್ಳೆಯ ಸುತ್ತಲಿನ ಚರ್ಮ ಬಿಗಿಯುತ್ತಿದ್ದ ಕಾರಣ ಹೆಜ್ಜೆ ಕಿತ್ತಿಡುವಾಗೊಮ್ಮೆ ಅಸಾಧ್ಯ ನೋವಾಗುತ್ತಿತ್ತು. ಆದ್ದರಿಂದಲೇ 'ಕುರುವಿನ ಮಹಿಮೆಯ ಗುರುವೇ ಬಲ್ಲ' ಎಂದು ಹೇಳುತ್ತಾರೆನೋ ಎಂದುಕೊಳ್ಳುತ್ತಾ ಗಾಯಿತ್ರಿ ಎರಡು ದಿನ ಕಳೆದರು. ಎರಡು ಕೈಗಳನ್ನುಜ್ಜಿ ಕಣ್ಣಿಗೆ ಒತ್ತಿಕೊಂಡು ನಮಸ್ಕರಿಸಿ ಎರಡು ಕೈಗಳನ್ನು ಅಗಲಿಸಿ ಅಂಗೈಯನ್ನು ನೋಡುತ್ತಾ 'ಕರಾಗ್ರೇ ವಸತೇ ಲಕ್ಷ್ಮಿ' ಎಂದು ಮಂತ್ರವನ್ನು ಹೇಳಿಕೊಂಡರು. ನಂತರ ಬಚ್ಚಲಿಗೆ ತೆರಳಿ ಹಲ್ಲುಜ್ಜಿ, ಮುಖ ತೊಳೆದು ನಿಧಾನವಾಗಿ ಹೆಜ್ಜೆ ಇಡುತ್ತಾ, ಅಡುಗೆ ಮನೆಯತ್ತ ಬಂದರು.




 ಈಗಾಗಲೇ ಎದ್ದು ಅಡುಗೆ ಮನೆಯ ಕೆಲಸಗಳಲ್ಲಿ ವ್ಯಸ್ತಳಾಗಿದ್ದ ಸೊಸೆ ತನ್ಮಯಿ ಬಿಸಿಯಾದ ಚಹಾವನ್ನು ಸೋಸಿ, ಕಪ್ಪನ್ನು ಅತ್ತೆಯ ಕೈಗಿಡುತ್ತಾ ಈಗ ನೋವು ಹೇಗಿದೆ ಎಂದು ವಿಚಾರಿಸಿದಳು. ಇದ್ದುದರಲ್ಲಿಯೇ ಕೊಂಚ ವಾಸಿ, ಕುರುವಿನ ಗಾಯ ಹಣ್ಣಾಗಿದ್ದು ಇನ್ನೇನು ಒಡೆದು ಅದರಲ್ಲಿ ತುಂಬಿಕೊಂಡಿರುವ ಹೊಲಸು ಹೊರಹೋದರೆ ಕಾಲಿನ ಸೆಳೆತ ಕಡಿಮೆಯಾಗಿ ಸಮಾಧಾನವಾಗಬಹುದೇನೋ ಎಂದು ಉತ್ತರಿಸಿದರು ಗಾಯತ್ರಿ.




ಅವರಿಬ್ಬರದು ಅನ್ಯೋನ್ಯ ಅತ್ತೆ ಸೊಸೆ ಜೋಡಿ.  ಒಬ್ಬರು ತರಕಾರಿ ಹೆಚ್ಚಿದರೆ ಇನ್ನೊಬ್ಬರು ಒಗ್ಗರಣೆ ಹಾಕಿ ಒಬ್ಬರು ಚಪಾತಿ, ರೊಟ್ಟಿ ಮಾಡಿದರೆ ಮತ್ತೊಬ್ಬರು ಬೇಯಿಸಿಕೊಂಡು ಹೀಗೆ ಒಟ್ಟೊಟ್ಟಿಗೆ ತಿಂಡಿ ಅಡುಗೆಗಳನ್ನು ತಯಾರಿಸುತ್ತಾ ಮನೆಯ ಕೆಲಸಗಳನ್ನು ಮಾಡುತ್ತಿದ್ದರು.ಇಂಥದ್ದೇ ಕೆಲಸವನ್ನು ಇವರಿವರೆ ಮಾಡಬೇಕೆಂದು ಯಾವ ನಿಯಮಗಳನ್ನು ಹಾಕಿಕೊಳ್ಳದೆ ಪ್ರತಿದಿನ ಮುಂಜಾನೆ, ಮಧ್ಯಾಹ್ನ ಮತ್ತು ರಾತ್ರಿಯ ಅಡುಗೆಯನ್ನು ಅವರಿಬ್ಬರೂ ಜೊತೆಯಾಗಿ ತಯಾರಿಸುತ್ತಿದ್ದರು.ಮನೆಯ ಎಲ್ಲ ಸದಸ್ಯರು ಒಟ್ಟಾಗಿ ಊಟ ಮಾಡುತ್ತಿದ್ದರು.ಎಲ್ಲಾ ಕೆಲಸ ಮುಗಿದ ಮೇಲೆ ಅತ್ತೆ ಅಡುಗೆ ಕೋಣೆಯಿಂದ ಹೊರಗೆ ಬಂದರೆ ಸೊಸೆ ಅಡುಗೆ ಮನೆಯನ್ನು ಸ್ವಚ್ಛಗೊಳಿಸಿ ಹೊರ ಬರುತ್ತಿದ್ದಳು. 




ಚಹಾ ಕುಡಿದ ಗಾಯತ್ರಿಯವರು ಸ್ನಾನ ಮಾಡಿ ಬರುವೆ ಎಂದು ಹೇಳಿ ಸ್ನಾನದ ಕೋಣೆಗೆ ತೆರಳಿ ಸ್ನಾನವನ್ನು ಪೂರೈಸಿ ಪೂಜೆ ಮಾಡಿ ಮತ್ತೆ ಅಡುಗೆ ಕೋಣೆಯತ್ತ ಬಂದಾಗ ಅದಾಗಲೇ ಸೊಸೆ ತನ್ಮಯಿ ತಿಂಡಿಯನ್ನು ತಯಾರಿಸಿ ಬೇರೊಂದು ಕೆಲಸದ ನಿಮಿತ್ತ ಹೊರಗೆ ಹೋಗಿದ್ದಳು. ಯಾವಾಗಲೂ ತನ್ನನ್ನು ಕೇಳಿಯೇ ತಿಂಡಿ ತಯಾರಿಸುತ್ತಿದ್ದ ಸೊಸೆ ಇಂದು ತಾನಾಗಿಯೇ ತಿಂಡಿ ಮಾಡಿದ್ದನ್ನು ಕಂಡು ಗಾಯಿತ್ರಿ ಅವರ ಮನ ಮುದುಡಿತು. ಸ್ವಲ್ಪ ಇರಿಸುಮುರಿಸು ಉಂಟಾಗಿ ಅಡುಗೆ ಕೋಣೆಯಿಂದ ಹೊರ ಬಂದು ಹಾಲಿನಲ್ಲಿ ಪೇಪರ್ ಓದುತ್ತಿದ್ದ ಪತಿಯ ಮುಂದೆ ಹೋಗಿ ಏನೂ ಮಾತನಾಡದೆ ಸುಮ್ಮನೆ ಕುಳಿತರು.




ಮುಂದೆ ಕೆಲ ಹೊತ್ತಿನಲ್ಲಿ ಎಲ್ಲರೂ ತಿಂಡಿ ತಿಂದು ತಂತಮ್ಮ ಕೆಲಸಗಳಿಗೆ ನಡೆದಾಗ ಗಾಯತ್ರಿ ನಿಧಾನವಾಗಿ ವರಾಂಡದೆಡೆ ನಡೆದರು. ಒಂದೆಡೆ ಕಾಲು ಸೆಳೆಯುತ್ತಿದ್ದರೆ ಮತ್ತೊಂದೆಡೆ ತಮಗೆ ಕೇಳದೆ ಸೊಸೆ ತಿಂಡಿ ಮಾಡಿದ್ದು ಇನ್ನೂ ಮನಸ್ಸಿನಲ್ಲಿ ಕೊರೆಯುತ್ತಿತ್ತು. 




ಮನೆಯಲ್ಲಿ ಇಡ್ಲಿ, ದೋಸೆ, ಪೂರಿ, ಆಲೂ ಪರೋಟದಂತಹ ದೊಡ್ಡ ದೊಡ್ಡ ತಿಂಡಿಗಳನ್ನು ಮುಂಜಾನೆ ಸಮಯದಲ್ಲಿ ಮಾಡುವಾಗ ಅದಕ್ಕೆ ಮೊದಲೇ ತಯಾರಿ ಮಾಡಿಕೊಂಡಿರುತ್ತಿದ್ದರು. ಆ ರೀತಿ ಏನು ತಯಾರಿ ಮಾಡಿಕೊಂಡಿಲ್ಲದ ದಿನ ಕೇವಲ ಉಪ್ಪಿಟ್ಟು ಇಲ್ಲವೇ ಅವಲಕ್ಕಿಯನ್ನು ಮಾಡುತ್ತಿದ್ದರು. ಅಂತೆಯೇ ಏನು ಪೂರ್ವ ತಯಾರಿ ಇಲ್ಲದ ಇಂದು ಸೊಸೆ ಉಪ್ಪಿಟ್ಟನ್ನು ತಯಾರಿಸಿದ್ದಳು.




ನಿಧಾನವಾಗಿ ಯೋಚಿಸಲಾರಂಭಿಸಿದ ಗಾಯತ್ರಿಗೆ ಅಕಸ್ಮಾತ್ ಸೊಸೆ ತನ್ನನ್ನು ಕೇಳಿದ್ದರೆ ಏನೂ  ತಯಾರಿ ಮಾಡಿಕೊಂಡಿರದ ಕಾರಣ ತಾನು ಮಾಡಲು ಹೇಳುತ್ತಿದ್ದುದಾದರೂ ಅವಲಕ್ಕಿ ಇಲ್ಲವೇ ಉಪ್ಪಿಟ್ಟು ತಾನೇ, ಅಂದಾಗ ಕೇಳದೆ ಮಾಡಿದ್ದು ಅಂತಹ ದೊಡ್ಡ ಪ್ರಮಾದವೇನಲ್ಲ. ಅಷ್ಟಕ್ಕೂ ತಾನು ತಡವಾಗಿಯೇ ಎದ್ದಿರುವುದರಿಂದ ದೈನಂದಿನ ಸಮಯಕ್ಕೆ ಸರಿಯಾಗಿ ಸೊಸೆ ತಿಂಡಿ ಮಾಡಿ ಇಟ್ಟಿರಬಹುದು  ಎಂದು ಅಂದಾಜಿಸಿದಾಗ ಮನಸ್ಸು ಸಂಪೂರ್ಣವಾಗಿ ಸಮಾಧಾನಗೊಂಡಿತು. ಅಷ್ಟಕ್ಕೂ ಪ್ರತಿದಿನ ತಮ್ಮನ್ನು ಕೇಳಿ ಮಾಡಲೇಬೇಕೆಂಬ ಆಸೆಯನ್ನು ಇನ್ನು ಮೇಲೆ ತೊರೆಯಬೇಕು  ಹೊಸ ಬಗೆಯ ಅಡುಗೆ ತಿಂಡಿಗಳನ್ನು ತಯಾರಿಸಿ ಎಲ್ಲರ ಮನ ಮೆಚ್ಚಿಸಬೇಕೆಂಬ ಆಶಯ,ಆಸೆ ಆಕೆಗೂ ಇರಬಹುದು ಎಂದು ಯೋಚಿಸಿದಾಗ ನಿಧಾನವಾಗಿ ಮನಸ್ಸಿನಲ್ಲಿ ಅವಿತಿದ್ದ ಕಸಿವಿಸಿ ಮಾಯವಾಗಲಾರಂಭಿಸಿತು.




ಅದೇ ಭರದಲ್ಲಿ ಕಾಲನ್ನು ಸರಿಸಲು ಹೋದ ಗಾಯತ್ರಿಯವರ ಕಾಲಿನ ಕುರು ಒಡೆದು ಅದರಲ್ಲಿರುವ ಕಸವೆಲ್ಲ ನಿಧಾನವಾಗಿ ಹೊರಗೆ ಒಸರಲಾರಂಭಿಸಿತು. ಕೂಡಲೇ ಸೊಸೆಯನ್ನು ಕೂಗಿ ಕರೆದ ಗಾಯತ್ರಿ ಅವರು ಕುರು ಒಡೆದುದನ್ನು ಹೇಳಿದಾಗ ತನ್ಮಯಿ ಫಸ್ಟ್ ಏಡ್ ಬಾಕ್ಸನ್ನು ತಂದು ಹತ್ತಿಯ ಅರಳೆಯಿಂದ ಕುರುವಿನಿಂದ ಹೊರ ಬರುತ್ತಿದ್ದ ಎಲ್ಲಾ ಹೊಲಸನ್ನು ತೆಗೆಯಲು ಅತ್ತೆಗೆ ಸಹಾಯ ಮಾಡಿದಳು. ಇದುವರೆಗೆ ಇದ್ದ ಕಾಲು ಸೆಳೆತ ಕುರು ಒಡೆದ ಪರಿಣಾಮವಾಗಿ ಕಡಿಮೆಯಾಗಿ ಕೆಲವೇ ನಿಮಿಷಗಳಲ್ಲಿ ಕಾಲು ನೋವಿನಿಂದ ಮುಕ್ತವಾಯಿತು.... ಅಂತೆಯೇ ತಮ್ಮದೇ ಮನಸ್ಸಿನ ಚಿಂತನ ಮಂಥನದ ಪರಿಣಾಮವಾಗಿ ಮನಸ್ಸಿನೊಳಗಿನ ಕಸಿವಿಸಿ ಎಲ್ಲಾ ಸೋರಿ ಹೋಗಿ ಮನಸ್ಸು ಕೂಡ ನಿರಾಳವಾಗಿ ತಲೆಯನ್ನು ಸೋಫಾಗೆ ಒರಗಿಸಿ ಕಣ್ಣು ಮುಚ್ಚಿದ ಗಾಯಿತ್ರಿ ಅವರ ತಿಳಿಯಾದ ಮನಸ್ಸು ಅಪಾರ ನೆಮ್ಮದಿಯನ್ನು ಕಂಡುಕೊಂಡಿತು.



-ವೀಣಾ ಹೇಮಂತ್ ಗೌಡ ಪಾಟೀಲ್, ಮುಂಡರಗಿ ಗದಗ್



ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  

إرسال تعليق

0 تعليقات
إرسال تعليق (0)
To Top