'ಎಸ್.ಡಿ.ಎಂ. ನೆನಪಿನಂಗಳ'ದ ಹತ್ತನೇ ಕಂತಿನ ಕಾರ್ಯಕ್ರಮ, ಸಹಾಯಧನ ಹಸ್ತಾಂತರ

Upayuktha
0



ಉಜಿರೆ: ಉಜಿರೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನಲ್ಲಿ ಫೆ. 24 ರಂದು ಕಾಲೇಜಿನ ಹಿರಿಯ ವಿದ್ಯಾರ್ಥಿ ಸಂಘದ ಮಾಸಿಕ ಸಂವಾದ ಸರಣಿ (ಕಾಲೇಜಿನ ಹಿರಿಯ ವಿದ್ಯಾರ್ಥಿಯೊಂದಿಗೆ ಸಂವಾದ) 'ಎಸ್.ಡಿ.ಎಂ. ನೆನಪಿನಂಗಳ'ದ ಹತ್ತನೇ ಕಂತಿನ ಕಾರ್ಯಕ್ರಮ ನಡೆಯಿತು.




ಕಾರ್ಯಕ್ರಮದ ಅಂಗವಾಗಿ, ಪ್ರತಿಭಾನ್ವಿತ ವಿದ್ಯಾರ್ಥಿನಿಯರಾದ ಅಂತಿಮ ಬಿ.ಕಾಂ.ನ ಪ್ರಣಮ್ಯ ಹಾಗೂ ನಿರ್ಮಲ ಅವರಿಗೆ ಮುಖ್ಯ ಅತಿಥಿಗಳಾದ ಬೆಂಗಳೂರಿನ ವ್ಯಾಸ್ಕ್ಯುಲಾರ್‌ ಕಾನ್ಸೆಪ್ಟ್‌ ಲಿ. ಸಂಸ್ಥೆಯ ಹಣಕಾಸು ಮುಖ್ಯಸ್ಥ ಸಿಎ ಮನೋಹರ್‌ ಶೆಟ್ಟಿ ಮತ್ತು ಲೋವ್ಸ್‌ ಸರ್ವಿಸಸ್ ಇಂಡಿಯಾ ಪ್ರೈ. ಲಿ. ಸಂಸ್ಥೆಯ ಹಣಕಾಸು ನಿರ್ದೇಶಕ ಸಿಎ ಸುಬ್ಬರಾಮು ಟಿ.ವಿ. ಅವರು ತಲಾ 5,000 ರೂ. ಸಹಾಯಧನ ಹಸ್ತಾಂತರಿಸಿದರು.




ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಸಿಎ ಸುಬ್ಬರಾಮು ಟಿ.ವಿ., ಉಜಿರೆಯ ಸಿದ್ಧವನ ಗುರುಕುಲ ತಮ್ಮ ಜೀವನವನ್ನು ಬದಲಾಯಿಸಿದ ಬಗೆ ಮತ್ತು ಎಸ್.ಡಿ.ಎಂ. ಕಾಲೇಜು ತಮಗೆ ಜೀವನ ಪಾಠ ಕಲಿಸಿದ ಬಗ್ಗೆ ಸ್ಮರಿಸಿಕೊಂಡರು.


 


“ವಿದ್ಯಾರ್ಥಿ ಜೀವನದಲ್ಲಿ ನಮ್ಮ ಸುತ್ತಮುತ್ತ ಇರುವ ಪ್ರತಿಯೊಬ್ಬರಿಂದಲೂ ನಮಗೆ ಒಳ್ಳೆಯ ಅಂಶಗಳು ಸಿಗುತ್ತವೆ. ಆದರೆ ಅದನ್ನು ನಾವು ಯಾವ ರೀತಿ ಜೀವನದಲ್ಲಿ ಅಳವಡಿಸಿಕೊಳ್ಳುತ್ತೇವೆ ಎಂಬುದು ಮುಖ್ಯ. ಜೀವನದಲ್ಲಿ ಸೋಲುವುದು ಸಹಜ. ಆದರೆ ವಿದ್ಯಾರ್ಥಿ ದೆಸೆಯಲ್ಲಿ ಸೋಲಬೇಕು, ನಂತರ ಸೋತರೆ ಮೇಲೆತ್ತುವವರು ಯಾರೂ ಇರುವುದಿಲ್ಲ” ಎಂದು ಅವರು ಕಿವಿಮಾತು ಹೇಳಿದರು.



ಸಿಎ ಮನೋಹರ್‌ ಶೆಟ್ಟಿ, “ಇಂದು ನಾವು ಇಲ್ಲಿ ನಮ್ಮ ಅನುಭವವನ್ನು ಹಂಚಿಕೊಳ್ಳುವಂತೆ ಮುಂದೆ ನೀವೂ ನಿಮ್ಮ ವಿದ್ಯಾಭ್ಯಾಸ ಮುಗಿದ ನಂತರ ಸಾಧಕರಾಗಿ ಮತ್ತೆ ಕಾಲೇಜಿಗೆ ಬಂದು ನಿಮ್ಮ ಜೂನಿಯರ್’ಗಳೊಂದಿಗೆ ನಿಮ್ಮ ಅನುಭವ ಹಂಚಿಕೊಳ್ಳಿ” ಎಂದರು. ಪರೀಕ್ಷೆಗಳ ತಯಾರಿ ಬಗ್ಗೆ ಸಲಹೆ ನೀಡಿದರು.



ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಡಾ. ಬಿ.ಎ. ಕುಮಾರ ಹೆಗ್ಡೆ ಅವರು ಮಾತನಾಡಿ, ಹಿರಿಯ ವಿದ್ಯಾರ್ಥಿಗಳು ಅವರ ವಿದ್ಯಾಭ್ಯಾಸವನ್ನು ಮುಗಿಸಿ ತಮ್ಮ ಕಾಲೇಜಿನ ಅನುಭವವನ್ನು ಈಗಿನ ವಿದ್ಯಾರ್ಥಿಗಳೊಂದಿಗೆ ಹಂಚಿಕೊಂಡು ಅವರನ್ನು ಪ್ರೇರಿಸುವುದು ಈ ಕಾರ್ಯಕ್ರಮದ ಮುಖ್ಯ ಉದ್ದೇಶ. ಆದ್ದರಿಂದ ಇಂದಿನ ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.



ಅತಿಥಿಗಳನ್ನು ಕಾಲೇಜಿನ ವತಿಯಿಂದ ಸನ್ಮಾನಿಸಲಾಯಿತು. ಹಿರಿಯ ವಿದ್ಯಾರ್ಥಿಗಳಾದ ನಾಗ್‌ ಕಿರಣ್‌, ದಿವ್ಯಾ, ಶಾಂತಲಾ ಪ್ರಭು, ಅನ್ವಿತ ಉಪಸ್ಥಿತರಿದ್ದರು. ಹಿರಿಯ ವಿದ್ಯಾರ್ಥಿ ಸಂಘದ ಪ್ರಧಾನ ಕಾರ್ಯದರ್ಶಿ ಧನಂಜಯ್‌ ರಾವ್‌ ಸ್ವಾಗತಿಸಿದರು. ಕಾರ್ಯಕ್ರಮ ಸಂಯೋಜಕ ಡಾ. ಎಂ.ಪಿ. ಶ್ರೀನಾಥ್‌ ವಂದಿಸಿದರು. ಕನ್ನಡ ಪ್ರಾಧ್ಯಾಪಕ ಡಾ. ದಿವಾಕರ ಕೊಕ್ಕಡ ನಿರೂಪಿಸಿದರು.



ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top