ಕಲ್ಲಡ್ಕ: ರಾಮ ನಾಮ ತಾರಕ ಮಂತ್ರ ಮಂದಿರದಲ್ಲಿ ಮಾತ್ರವಲ್ಲ, ಮನೆಮನೆಗಳಲ್ಲಿ ನಿರಂತರವಾಗಿ ನಡೆಯಬೇಕು. ರಾಮನಾಮದ ಬಲದಿಂದ ಬೇಡನಾಗಿದ್ದ ರತ್ನಾಕರ ವಾಲ್ಮೀಕಿಯಾದಂತೆ ಭವ ಸಾಗರವನ್ನು ದಾಟಲು ರಾಮಮಂತ್ರ ಪ್ರೇರಕವಾಗಿದೆ ಎಂದು ಶ್ರೀ ರಾಮಚಂದ್ರಾಪುರ ಮಠ ಹೊಸನಗರದ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು ಹೇಳಿದರು.
ಅವರು ಕಲ್ಲಡ್ಕ ಶ್ರೀ ರಾಮ ಮಂದಿರದ ಶತಾಬ್ದಿ ಸಂಭ್ರಮದ ಧಾರ್ಮಿಕ ಸಭಾ ಕಾರ್ಯಕ್ರಮ ಹಾಗೂ ಗ್ರಾಮ ಸಮ್ಮಾನ್ ಕಾರ್ಯಕ್ರಮದಲ್ಲಿ ಶನಿವಾರ ರಾಮಾಂಗಣದಲ್ಲಿ ಆಶೀರ್ಚನ ನೀಡಿದರು.
ಭಕ್ತರು ಇರುವಲ್ಲಿ ಭಗವಂತನಿರುತ್ತಾನೆ. ಕಲ್ಲಾಗಿ ಶಾಪಗ್ರಸ್ತಳಾಗಿದ್ದ ಅಹಲ್ಯೆಯಂತಿದ್ದ ಕಲ್ಲಡ್ಕ, ರಾಮಮಂದಿರ ನಿರ್ಮಾಣವಾದ ಬಳಿಕ ಶಾಪ ವಿಮೋಚನೆಯಾಗಿ ಪಾವನಗೊಂಡಿದೆ. ಡಾ.ಪ್ರಭಾಕರ ಭಟ್ಟರು ಸ್ವಂತಕ್ಕೆ ಒತ್ತು ನೀಡದೆ ಪ್ರಭಾಕರ ರಾಮನಂತೆ ದೊಡ್ಡ ವ್ಯಕ್ತಿಯಾಗಿದ್ದಾರೆ. ಅವರು ಓರ್ವ ವ್ಯಕ್ತಿಯಲ್ಲ. ಸಂಸ್ಥೆಯಾಗಿ ಬೆಳೆದಿದ್ದಾರೆ. ಕಲ್ಕಡ್ಕದಲ್ಲಿ ರಾಮಪೂಜನ ಮಾತ್ರವಲ್ಲ. ಗ್ರಾಮ ಪೂಜೆ ನಡೆದಿದೆ. ಅಯೋಧ್ಯೆಯ ರಾಮ ಮಂದಿರದಂತೆ ಕಲ್ಲಡ್ಕದ ರಾಮ ಮಂದಿರವು ಬೆಳಗುತ್ತಿರಲಿ ಎಂದು ಸಂತಸ ವ್ಯಕ್ತಪಡಿಸಿದರು.
ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ 30 ಮಂದಿಯನ್ನು ಗ್ರಾಮ ಸಮ್ಮಾನ್ ಮಾಡಿ ಆಶೀರ್ವದಿಸಿ ಹರಸಿದರು. ಶ್ರೀ ನಿತ್ಯಾನಂದ ಯೋಗಾಶ್ರಮ ಕೊಂಡೆವೂರಿನ ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿ ಮಾತನಾಡಿ, ಹನುಮನ ಶಕ್ತಿ ಕಲ್ಲಡ್ಕ ಶ್ರೀರಾಮ ಮಂದಿರದಲ್ಲಿ ನೆಲೆಯಾಗಿ ನಿಂತು ದುಷ್ಟಶಕ್ತಿಗಳ ಉಪಟಳ ಕಡಿಮೆಯಾಗಿದೆ. ಜಗತ್ತಿನ ಶಾಂತಿಗಾಗಿ ಧರ್ಮ ಮತ್ತು ಸಂಸ್ಕೃತಿಯ ರಕ್ಷಣೆಯ ಕಾರ್ಯ ನಿರಂತರ ನಡೆಯಬೇಕು. ರಾಷ್ಟ್ರ ನಿರ್ಮಾಣ ಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕು ಎಂದರು.
ಡಾ.ಪ್ರಭಾಕರ ಭಟ್ ಕಲ್ಲಡ್ಕ ಅಧ್ಯಕ್ಷತೆ ವಹಿಸಿದ್ದರು. ಮಂದಿರದ ಕಾರ್ಯಚಟುವಟಿಕೆಗಳ ಶತಮಾನದ ಇತಿಹಾಸವನ್ನು ತಿಳಿಸಿದರು.
ಬೆಳಿಗ್ಗೆ ಶ್ರೀ ರಾಮ ವಿದ್ಯಾಕೇಂದ್ರದ ವಿದ್ಯಾರ್ಥಿಗಳಿಂದ ಭಜನೆ, ಕಶೆಕೋಡಿ ಸೂರ್ಯನಾರಾಯಣ ಭಟ್ ಪೌರೋಹಿತ್ಯದಲ್ಲಿ ರಾಮನಾಮ ತಾರಕ ಜಪಯಜ್ಞ ನಡೆಯಿತು. ಮಹಾಮಂಗಳಾರತಿ ಬಳಿಕ ಅನ್ನಸಂತರ್ಪಣೆ, ಶ್ರೀ ಕೋದಂಡರಾಮ ಯಕ್ಷಗಾನ ಮಂಡಳಿ ಹನುಮಗಿರಿ ಮೇಳದಿಂದ ಶ್ರೀ ರಾಮ ಪಟ್ಟಾಭಿಷೇಕ ಯಕ್ಷಗಾನ ಬಯಲಾಟ ಪ್ರದರ್ಶನಗೊಂಡಿತು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ