|ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಶ್ರೀರಾಮ ಕಥಾ ಲೇಖನ ಅಭಿಯಾನ-59 : ಶ್ರೀರಾಮರ ಆದರ್ಶ ಗುಣಗಳು

ಶ್ರೀರಾಮ ಕಥಾ ಲೇಖನ ಅಭಿಯಾನ-59 : ಶ್ರೀರಾಮರ ಆದರ್ಶ ಗುಣಗಳು

 


-ಡಾ.ಅನಸೂಯ ಎಸ್.ರಾಜೀವ್ ಆಸ್ಥಾನ ವಿದ್ವಾಂಸರು,ತಲಕಾಡು ಮಠ


ಮ್ಮ ಭಾರತೀಯರ ಜೀವನದಲ್ಲಿ ರಾಮಾಯಣ ಹಾಗೂ ಶ್ರೀರಾಮರ ವ್ಯಕ್ತಿತ್ವವು ಅತ್ಯಂತ ಪ್ರಭಾವವನ್ನು ಬೀರಿದೆ.  ಶ್ರೀರಾಮರ ಗುಣಗಳನ್ನು ನಾವು ಆದರ್ಶವಾಗಿ ಮಾಡಿಕೊಂಡು ಅದನ್ನು ಸಾಧಿಸಿಕೊಳ್ಳುವ ಪ್ರಯತ್ನ ಮಾಡಿದರೆ ನಾವು ಶ್ರೀರಾಮರಿಗೆ ತೋರುವ ಭಕ್ತಿ ಹೆಚ್ಚು ಪರಿಣಾಮಕಾರಿಯಾಗುತ್ತದೆ. ಎಲ್ಲರ ಅಂತರಂಗದಲ್ಲಿಯೂ ಶ್ರೀರಾಮರ ವ್ಯಕ್ತಿತ್ವವು ಪ್ರಕಟವಾದರೆ ಮಾತ್ರ ದುಷ್ಟಪ್ರವೃತ್ತಿಯು ನಿವಾರಣೆಯಾಗಬಹುದು. ಆತ್ಮಪರಿಪಾಕಸಾಧನೆಗೆ ದಾರಿಮಾಡಿಕೊಡುವುದು.  ಈ ದೃಷ್ಟಿಯಿಂದ ರಾಮನ ಆದರ್ಶಗುಣಗಳನ್ನು ಒಂದೊಂದಾಗಿ ಅರಿಯೋಣ.


ಆದರ್ಶ ಪುತ್ರನಾಗಿ ಶ್ರೀರಾಮ

ದಶರಥಮಹಾರಾಜನ ನಾಲ್ವರು ಪುತ್ರರೂ ಗುಣಶೀಲರು.  ತಂದೆತಾಯಿಯರ ಸೇವೆಯನ್ನು ಅತ್ಯಂತ ಶ್ರದ್ಧಾಭಕ್ತಿಯಿಂದ ಮಾಡುತ್ತಿದ್ದರು.  ಅವರಲ್ಲಿ ಶ್ರೀರಾಮನೇ ಶ್ರೇಷ್ಠನಾಗಿದ್ದು ಎಲ್ಲರನ್ನೂ ರಂಜಿಸುತ್ತಿದ್ದನು. ಆದ್ದರಿಂದಲೇ ಅವನನ್ನು ವಾಲ್ಮೀಕಿಗಳು 'ರಾಮೋ ರಮಯತಾಂ ವರಃ' ಎಂದಿದ್ದಾರೆ.  ಇದರಿಂದ ಅರಮನೆಯವರೆಲ್ಲರೂ ರಾಮನ ಬಗ್ಗೆ ವಿಶೇಷವಾದ ಅಭಿಮಾನವನ್ನು ಬೆಳೆಸಿಕೊಂಡಿದ್ದರು. ದಶರಥನಿಗಂತೂ ಶ್ರೀರಾಮನೆಂದರೆ ಪ್ರಾಣ.  ಶ್ರೀರಾಮನಿಗೂ ಅಷ್ಟೆ, ತಂದೆಯೆಂದರೆ ಅಪಾರವಾದ ಭಕ್ತಿ ಗೌರವ.  ಪಿತೃವಾಕ್ಯಪರಿಪಾಲಕ.  ಅವರ ಮಾತನ್ನು ನಡೆಸುವುದೇ ತನ್ನ ಪರಮೋಚ್ಛ ಧರ್ಮವೆಂದುಕೊಂಡಿದ್ದನು.  ತಂದೆಯ ಮಾತನ್ನು ನಡೆಸಿಕೊಡುವುದು ಅವನ ವ್ರತ.  ವಿಶ್ವಾಮಿತ್ರರು ತಾಟಕಿಯನ್ನು ಕೊಲ್ಲಲು ಹೇಳಿದಾಗ ರಾಮನು ತನ್ನ ಪ್ರಥಮಸಮರದಲ್ಲೇ ಸ್ತ್ರೀಯನ್ನು ಕೊಲ್ಲಬೇಕಲ್ಲಾ ಎಂದು ಯೋಚಿಸುತ್ತಿದ್ದಾಗ ತಂದೆಯ ಮಾತು ನೆನಪಿಗೆ ಬಂತು. ಕೂಡಲೇ ಗುರುಗಳು ಏನೇ ಹೇಳಿದರೂ ಪಾಲಿಸಬೇಕು ಎಂಬ ತಂದೆಯ ಮಾತಿನಂತೆ  ತಾಟಕಿಯನ್ನು ಸಂಹರಿಸಿದನು.  ಮತ್ತೊಂದು ಸಂದರ್ಭ.  ಮಿಥಿಲೆಯಲ್ಲಿ ಶಿವಧನುಸ್ಸನ್ನು ಮುರಿದಾಗ ಜನಕನು ಸೀತೆಯನ್ನು ಧಾರೆಯೆರೆದುಕೊಡಲು ಸಿದ್ಧನಾದನು.  ಆಗ ಶ್ರೀರಾಮನು 'ನನ್ನ ತಂದೆಯ ಅನುಮತಿಯಿಲ್ಲದೆ ನಾನು ಸೀತೆಯನ್ನು ಸ್ವೀಕರಿಸಲಾಗುವುದಿಲ್ಲ' ಎಂದು ಹೇಳುತ್ತಾನೆ.  ಬಾಳಿನಲ್ಲಿ ಯಾವುದೇ ಮಹತ್ತ್ವದ ಹೆಜ್ಜೆ ಇಡುವಾಗ ಶ್ರೀರಾಮನು ತಂದೆಯ ಸಮ್ಮತಿಯನ್ನು ಪಡೆದ ಮೇಲೆಯೇ ಮುಂದುವರಿಯುತ್ತಿದ್ದುದು ಶ್ರೀರಾಮರ ವಿಶೇಷ ಗುಣ.


ದೊರೆಯ ಹಿರಿಯಮಗನಾದರೂ ಅವನಿಗೆ ಅಹಂಕಾರವಿಲ್ಲ.  ರಾಮನಿಗೆ ಆಗಬೇಕಾಗಿದ್ದ ಯೌವರಾಜ್ಯಾಭಿಷೇಕ ಕೈಕೇಯಿಯ ಹಟದಿಂದ ನಿಂತುಹೋಗಿ ರಾಮನು ಹದಿನಾಲ್ಕು ವರ್ಷಗಳ ಕಾಲ ವನವಾಸಕ್ಕೆ ಹೋಗಬೇಕಾಗಿಬರುತ್ತದೆ. ಆದರೂ ಅವನು ದುಃಖಿಸಲಿಲ್ಲ.  ಕೈಕೇಯಿಯು ಅಲ್ಲಿಂದ ಶೀಘ್ರವಾಗಿ ತೆರಳುವಂತೆ ಹೇಳಿದಾಗ ' ತಂದೆ ಒಂದೇ ಒಂದು ಸಲ ರಾಮ ನೀನು ರಾಜ್ಯವನ್ನಾಗಲೀ, ಅಥವಾ ಇನ್ನಾವುದೇ ಅಪೂರ್ವವಸ್ತುವನ್ನಾಗಲೀ ಕೊನೆಗೆ ಸೀತೆಯನ್ನೇ ಆಗಲಿ ಭರತನಿಗೆ ಕೊಡು ಎಂದು ಹೇಳಲಿ ನಾನು ಅದನ್ನು ಪ್ರೀತಿಯಿಂದ ಕೊಡುತ್ತೇನೆ' ಎನ್ನುತ್ತಾನೆ. ತಂದೆಯ ಮಾತನ್ನು ನಡೆಸುವುದು ಅವನ ಕರ್ತವ್ಯ.  "ಚಂದ್ರನಿಂದ ಬೆಳದಿಂಗಳು ದೂರ ಸರಿಯಬಹುದು, ಸಾಗರವೂ ತನ್ನ ದಡವನ್ನು ಮೀರಬಹುದು, ನಾನಂತೂ ತಂದೆಯ ಮಾತನ್ನು ಮೀರಲಾರೆ" ಎಂದು ಸ್ಪಷ್ಟಪಡಿಸುತ್ತಾನೆ.  ಎಲ್ಲರೂ ರಾಮನು ಕಾಡಿಗೆ ಹೋಗುವುದನ್ನು ಪ್ರತಿಭಟಿಸುತ್ತಾರೆ.  ಆದರೆ ರಾಮನು ಧರ್ಮ ಅರಿತವನಾಗಿದ್ದನು.  ತಂದೆಯ ಮಾತನ್ನು ನಡೆಸಿಕೊಡುವುದೇ ಪರಮಧರ್ಮ.  ಇಲ್ಲದಿದ್ದರೆ ತಂದೆ ವಚನಭ್ರಷ್ಟರಾಗಿ ನರಕ ಪಡೆಯಬಹುದೆಂಬುದು ಅವನ ಅನಿಸಿಕೆ.  ರಾಜಪುತ್ರನಾದ ರಾಮನು ರಾಜನಾದ ತಂದೆಯ ಮಾತನ್ನು ನಡೆಸಬೇಕು.  ಪ್ರಜೆಗಳಿಗೆ ಆದರ್ಶನಾಗಿರಬೇಕು.  ಆದ್ದರಿಂದಲೇ "ಮಹಾರಾಜನು ಆಜ್ಞೆ ಮಾಡಿದರೆ ಪ್ರಜ್ವಲಿಸುವ ಅಗ್ನಿಯನ್ನು ಬೇಕಾದರೂ ಪ್ರವೇಶಿಸುತ್ತೇನೆ.  ತೀಕ್ಷ್ಣವಾದ ವಿಷವನ್ನು ಬೇಕಾದರೂ ಕುಡಿಯುತ್ತೇನೆ, ಆಳಕಾಣದ ಸಾಗರದಲ್ಲಾದರೂ ಮುಳುಗುತ್ತೇನೆ ಇದು ನನ್ನ ವ್ರತ, ಇದರ ಬಗ್ಗೆ ಎರಡು ಮಾತಿಲ್ಲ.  ರಾಮನೆಂದಿಗೂ ನುಡಿಯಿಂದ ಬೇರೆಯೆನಿಸಿದ ನಡೆ ತೋರುವವನಲ್ಲ"ಎಂದು ಘೋಷಿಸುತ್ತಾನೆ.  ಆದ್ದರಿಂದಲೇ ವಾಲ್ಮೀಕಿಗಳು ರಾಮನನ್ನು ಸತ್ಯಪರಾಕ್ರಮ, ಸತ್ಯಸಂಗತ, ಸತ್ಯಪ್ರತಿಜ್ಞನೆಂದು ವರ್ಣಿಸಿದ್ದಾರೆ. ಒಟ್ಟಿನಲ್ಲಿ ತಂದೆಯ ಮಾತು ತಪ್ಪಬಾರದೆಂದು ಅವನು ಎಲ್ಲರೊಂದಿಗೂ ಧರ್ಮದ ಬಗ್ಗೆ ಚರ್ಚಿಸಬೇಕಾಯಿತು.  ತಂದೆಯ ಮಾತನ್ನು ನಡೆಸಿಕೊಡಲು ಬಹಳಷ್ಟು ತ್ಯಾಗ ಮಾಡಿದನು ಶ್ರೀರಾಮ.


ಆದರ್ಶ ಭ್ರಾತೃವಾಗಿ ಶ್ರೀರಾಮ

ದಶರಥನ ನಾಲ್ವರು ಮಕ್ಕಳೂ  ಒಂದೇ ವಯಸ್ಸಿನವರಾದರೂ ರಾಮನಿಗಿಂತ ಉಳಿದವರು ಅರ್ಧದಿನ, ಒಂದುದಿನ ಚಿಕ್ಕವರು ಅಷ್ಟೆ.  ಆದರೆ ಪ್ರಾರಂಭದಿಂದಲೇ ಶ್ರೀರಾಮನು ಹಿರಿಯವನು ಎಂಬುದು ನಿಶ್ಚಯವಾಗಿತ್ತು.  ರಾಮನಿಗಂತೂ ತಾನು ದೊಡ್ಡವನೆಂಬ ರೀತಿಯಲ್ಲಿ ನಡೆದುಕೊಳ್ಳುವುದು ಸಹಜವಾಗಿಹೋಗಿತ್ತು.  ರಾಮನು ತನ್ನ ತಮ್ಮಂದಿರು ವರ್ಷಾಂತರ ಚಿಕ್ಕವರೆಂಬಂತೆ ಕಾಣುತ್ತಿದ್ದನು.  ಅವರೂ ಅವನ ಬಗ್ಗೆ ಹಾಗೆಯೇ ನಡೆದುಕೊಳ್ಳುತ್ತಿದ್ದರು.  ಈ ನಾಲ್ವರೂ ಒಟ್ಟಾಗಿ ಹುಟ್ಟಿದರೂ ಅವರಲ್ಲಿ ಒಬ್ಬರ ಮೇಲೊಬ್ಬರಿಗೆ ಅಸೂಯೆ, ಸ್ಪರ್ಧೆ, ಸಣ್ಣಭಾವನೆಗಳು ಎಂದೂ ತಲೆದೋರಲಿಲ್ಲ.  ಇವರಲ್ಲಿದ್ದ ಭ್ರಾತೃಭಾವ , ಐಕಮತ್ಯ, ಸರ್ವಕಾಲಕ್ಕೂ ಮೆಚ್ಚಿಗೆಯ ವಿಷಯವಾಗಿತ್ತು.  ರಾಮನಿಗೆ ತಮ್ಮಂದಿರ ಮೇಲೆ ಪ್ರೀತಿ, ತಮ್ಮಂದಿರಿಗೆ ರಾಮನ ಮೇಲೆ ಭಕ್ತಿ.


ವಿಶ್ವಾಮಿತ್ರರು ಯಜ್ಞರಕ್ಷಣೆಗಾಗಿ ರಾಮನನ್ನು ಮಾತ್ರ ಕರೆದಿದ್ದು.  ಆದರೆ ಲಕ್ಷ್ಮಣ ರಾಮನೊಟ್ಟಿಗೆ ಹೊರಟೇಬಿಟ್ಟ.  ರಾಮ ಇದ್ದಲ್ಲಿ ಲಕ್ಷ್ಮಣ ಇದ್ದೇ ಇರುತ್ತಾನೆ. ಆದ್ದರಿಂದಲೇ ದಶರಥನು ಅವರಿಬ್ಬರನ್ನೂ ಬರಹೇಳುವುದು.  

'ರಾಮಮಾಜಹಾವ ಸಲಕ್ಷ್ಮಣಮ್' ಎಂಬುದಕ್ಕೆಲ್ಲ ಅವರ ಸೌಭ್ರಾತೃತ್ವ ವ್ಯಕ್ತವಾಗುತ್ತದೆ.  


ಲಕ್ಷ್ಮಣನಿಲ್ಲದಿದ್ದರೆ ರಾಮನಿಗೆ ನಿದ್ರೆ ಹತ್ತುತ್ತಲೇ ಇರಲಿಲ್ಲ.  ರಾಮನು ಬೇಟೆಗೆ ಹೊರಟನೆಂದರೆ ಲಕ್ಷ್ಮಣನೂ ಧನುರ್ಧಾರಿಯಾಗಿ ಹಿಂಬಾಲಿಸುತ್ತಿದ್ದನು.  ಶೂರ್ಪಣಖಿಯು ರಾಮಲಕ್ಷ್ಮಣರನ್ನು ವರ್ಣಿಸುತ್ತಾ ಲಕ್ಷ್ಮಣನನ್ನು ರಾಮನ ಹೊರಗೆ ಓಡಾಡುವ ಪ್ರಾಣವೆಂದೂ , ರಾಮನ ಬಲಗೈನಂತಿರುವವನೆಂದೂ ನಿರೂಪಿಸುತ್ತಾಳೆ.  


ಯೌವರಾಜ್ಯಾಭಿಷೇಕವಾಗಬೇಕಾಗಿದ್ದ ದಿನ ಶ್ರೀರಾಮನು ಈ ರಾಜ್ಯಲಕ್ಷ್ಮಿ ನನಗೆ ಮಾತ್ರವಲ್ಲಪ್ಪ, ನನ್ನ ಎರಡನೆಯ ಅಂತರಾತ್ಮವೇ ಆಗಿರುವ ನಿನಗೂ ಸೇರಿದ್ದು ಎಂದು ಹೇಳಿ ನೀನೂ ಈ ರಾಜ್ಯಶ್ರೀಯನ್ನು ನನ್ನೊಡನೆ ಸೇರಿ ಸಂತೋಷದಿಂದ ಅನುಭವಿಸಬೇಕೆನ್ನುತ್ತಾನೆ.  ಎಂಥ ಸೊಗಸಾದ ಭ್ರಾತೃಪ್ರೇಮ! 


ಭರತನ ಬಗ್ಗೆಯೂ ರಾಮನಿಗೆ ಅದೆಂಥ ಪ್ರೀತಿ, ವಿಶ್ವಾಸ! ವನವಾಸಕ್ಕೆ ತೆರಳಿದಾಗ ರಾಮನಿಗೆ ಅರಮನೆಯ ಚಿಂತೆ ಇದ್ದೇ ಇತ್ತು.  ಭರತನ ನಡತೆಯ ಬಗ್ಗೆ ಅವನಿಗೆ ವಿಶ್ವಾಸ.  ಸೀತೆ ಮತ್ತು ಲಕ್ಷ್ಮಣರಿಗೆ ಭರತನ ಬಗ್ಗೆ ಹೇಳುತ್ತಾ ' ಭರತ ಧರ್ಮಾತ್ಮ.  ಅವನು ಅರಮನೆಯನ್ನು, ತಂದೆತಾಯಿಗಳನ್ನು, ರಾಜ್ಯವನ್ನೂ ಚೆನ್ನಾಗಿಯೇ ನೋಡಿಕೊಳ್ಳುವನು.  ಅವನ ಋಜುತ್ವವನ್ನು ಚಿಂತಿಸಿದಾಗ ನನಗೆ ಅಪ್ಪ ಅಮ್ಮಂದಿರ ಬಗ್ಗೆ ಚಿಂತೆಯೇ ಇರುವುದಿಲ್ಲ' ಎಂದು ಸಮಾಧಾನದ ಮಾತುಗಳನ್ನಾಡುತ್ತಾನೆ. ಭರತನು ವನವಾಸದಲ್ಲಿದ್ದ ರಾಮನನ್ನು ಸಂಧಿಸಿದ ವೃತ್ತಾಂತ ಸಹೋದರರ ಅನ್ಯೋನ್ಯ ಪ್ರೀತಿ, ಹಿರಿಯರಲ್ಲಿ ಅವರು ತೋರಿದ ಗೌರವ ದಶರಥನ ಸಂಸಾರದ ಬಾಂಧವ್ಯದ ಸೌಂದರ್ಯವಾಗಿದೆ.  ಭರತನು ತನ್ನ ಎಲ್ಲ ವಾದ ಕುಶಲತೆಯಿಂದಲೂ ರಾಮನನ್ನು ಅಯೋಧ್ಯೆಗೆ ಹಿಂತಿರುಗಿ ರಾಜ್ಯಾಭಿಷಿಕ್ತನಾಗಲು ಕೇಳಿಕೊಳ್ಳುತ್ತಾನೆ.  ಆದರೆ ರಾಮನು ತನ್ನ ಪಿತೃವಾಕ್ಯಪರಿಪಾಲನೆಯ ವ್ರತದಿಂದ ಹಿಂದಿರುಗುವುದಿಲ್ಲ ಎಂದು ಹೇಳುತ್ತಾನೆ.  ಕೊನೆಗೆ ಭರತನು ತಂದಿದ್ದ ಸುವರ್ಣ ಪಾದುಕೆಗಳನ್ನು ಮೆಟ್ಟಿ ಭರತನ ಅಪೇಕ್ಷೆಯಂತೆ ಅದನ್ನು ಅವನಿಗೆ ಕೊಡಲು ಭರತ ಅದನ್ನು ತಲೆಯ ಮೇಲಿಟ್ಟುಕೊಂಡು ಹಿಂದಿರುಗುತ್ತಾನೆ.  ನಂದಿಗ್ರಾಮದಲ್ಲಿ ನಾರುಮಡಿಯುಟ್ಟು ರಾಮನ ಪಾದುಕೆಗಳನ್ನಿಟ್ಟು ರಾಜ್ಯಭಾರ ಮಾಡುತ್ತಾನೆ.  ಇದು ಬ್ರಾತೃಪ್ರೇಮದ ತುತ್ತತುದಿ. 


ಇಂದ್ರಜಿತುವು ಲಕ್ಷ್ಮಣನನ್ನು ಮೂರ್ಛೆಗೊಳಿಸಿದಾಗ ರಾಮನ ದುಃಖ ಅಳತೆ ಮೀರುತ್ತದೆ.  'ಇನ್ನು ಯುದ್ಧವೂ ಬೇಡ, ರಾಜ್ಯವೂ ಬೇಡ, ಪತ್ನಿಯೂ ಬೇಡ, ಇಂಥ ತಮ್ಮನೇ ಇಲ್ಲವಾದರೆ ಪ್ರಾಣದಿಂದಿರುವುದೂ ಬೇಡ ಎಂದು ಮಮ್ಮಲ ಮರುಗುತ್ತಾನೆ. ಲಕ್ಷ್ಮಣ ಇಂದ್ರಜಿತುವನ್ನು ಕೊಂದಾಗ ರಾಮ ಅವನ ಮೈದಡವುತ್ತಾ, ಮುತ್ತಿಕ್ಕುತ್ತಾನೆ.


ಲಕ್ಷ್ಮಣನ ವಿಷಯದಲ್ಲಾಗಲೀ, ಭರತ ಶತೃಘ್ನರ ವಿಷಯದಲ್ಲಾಗಲೀ ರಾಮನ ಭ್ರಾತೃಪ್ರೇಮ ಅಮರವಾದುದು.


ಆದರ್ಶ ಪತಿಯಾಗಿ ಶ್ರೀರಾಮ 

ವಾಲ್ಮೀಕಿಗಳು ಸೀತಾರಾಮರು ಒಬ್ಬರ ಮೇಲೊಬ್ಬರು ಹೊಂದಿದ್ದ ಪ್ರೀತಿಯನ್ನು ಕುರಿತು ತುಂಬಾ ಸುಂದರವಾಗಿ ವರ್ಣಿಸಿದ್ದಾರೆ.   ಇಬ್ಬರೂ ಎಳೆಯ ವಯಸ್ಸಿನವರು.  ಒಬ್ಬರ ಮನಸ್ಸನ್ನು ಇನ್ನೊಬ್ಬರು ಬಹು ಸುಲಭವಾಗಿ ಅರ್ಥಮಾಡಿಕೊಳ್ಳುತ್ತಿದ್ದರಂತೆ.  ಬಾಯಿಯಾಗಲೀ, ಕಣ್ಣುಗಳಾಗಲೀ ತಮಗೆ ಬೇಕಾದುದ್ದನ್ನು ಸ್ಪಷ್ಟಪಡಿಸದೆ ಹೋದರೂ, ಹೃದಯ ಹೃದಯದೊಡನೆ ಬೆರೆತು ಮಾತಾಡುತ್ತಿತ್ತಂತೆ.  ಒಬ್ಬರ ಅಭೀಪ್ಸೆ ಇನ್ನೊಬ್ಬರಿಗೆ ಹೇಳದೆಯೇ  ತಿಳಿಯುತ್ತಿತ್ತಂತೆ. ರಾಮನಿಗಂತೂ ತಾನು ಪರಾಕ್ರಮದಿಂದ ಸೀತೆಯನ್ನು ಪಡೆದುಕೊಂಡಿದ್ದರೂ ತಂದೆಯೂ ಈ ಮದುವೆಗೆ ಸಮ್ಮತಿ ಇತ್ತರು ಎಂಬ ಕಾರಣದಿಂದ ಸೀತೆ ಅತಿಶಯವಾದ ಪ್ರೀತಿಗೆ ಅರ್ಹಳು ಎಂದು ಪರಮಾನಂದವಾಗಿದ್ದಿತ್ತಂತೆ.  ಒಟ್ಟಿನಲ್ಲಿ ಸೀತೆ ಮತ್ತು ರಾಮ ಇವರ  ನಡುವಿನ ವಿಶುದ್ಧ ಪ್ರೇಮ, ಆದರ್ಶದಾಂಪತ್ಯಕ್ಕೆ ಎಡೆಮಾಡಿಕೊಟ್ಟಿತ್ತು ಎನ್ನುವುದೇ ಒಂದು ದೃಷ್ಟಿಯಲ್ಲಿ ಇಡೀ ವಾಲ್ಮೀಕಿರಾಮಾಯಣದ ಅವಿಸ್ಮರಣೀಯ ಕಥಾವಸ್ತು.


ಮುಂದೆ ರಾಮನಿಗೆ ಆಗಬೇಕಾಗಿದ್ದ ಯೌವರಾಜ್ಯಾಭಿಷೇಕ ಕೈಕೇಯಿಯ ಹಠದಿಂದ ನಿಂತುಹೋಗಿ ರಾಮನು ಹದಿನಾಲ್ಕು ವರ್ಷಗಳ ಕಾಲ ವನವಾಸಕ್ಕೆ ತೆರಳಬೇಕಾಗಿ ಬಂದುದು.  ವನವಾಸಕ್ಕೆ ಹೋಗುವ ಮುನ್ನ ಸೀತೆಗೆ ವಿಷಯ ತಿಳಿಸಿ, ಅವಳಿಗೆ ತಾನು ವನವಾಸದಲ್ಲಿದ್ದಾಗ ಅತ್ತೆ ಮಾವಂದಿರ ಶುಶ್ರೂಷೆಯನ್ನು ನಿರ್ವಹಿಸುತ್ತಾ, ಭರತ ಶತೃಘ್ನರ ಬಗ್ಗೆ ಹೇಗೆ ವರ್ತಿಸಬೇಕೆಂಬುದರ ಬಗ್ಗೆ ವಿವರಿಸುತ್ತಾನೆ.  ಆದರೆ ಸೀತೆ ಸಾಮಾನ್ಯಳೇ? ಅವಳು ರಾಮನಲ್ಲಿ ಬೆಳೆಸಿಕೊಂಡಿದ್ದ ಗಾಢವೂ, ವಿಶುದ್ಧವೂ ಆದ ಪ್ರೇಮದಿಂದ ಪತಿಯೇ ಪತ್ನಿಯ ಸರ್ವಭಾಗ್ಯವೆಂದೂ, ತನ್ನ ಪತಿಗೆ ವನವಾಸವನ್ನು ವಿಧಿಸಿದವರು ತನಗೂ ಅದನ್ನೇ ವಿಧಿಸಿದಂತಾಗಿದೆಯೆಂದೂ ಸ್ಪಷ್ಟಪಡಿಸಿ ತನ್ನನ್ನೂ ಜೊತೆಯಲ್ಲಿ ಕಾಡಿಗೆ ಕರೆದುಕೊಂಡು ಹೋಗಲೇಬೇಕೆಂದು ಹಟಹಿಡಿಯುತ್ತಾಳೆ.  ರಾಮನು ವನವಾಸದ ಕ್ಲೇಶಗಳನ್ನು ಎಷ್ಟು ವಿಧವಾಗಿ ವಿವರಿಸಿದರೂ ಅವಳ ನಿಶ್ಚಯ ಇನ್ನೂ ಹೆಚ್ಚು ಹೆಚ್ಚು ದೃಢವಾಗುತ್ತದೆ.  ಸೀತೆಯ ಅಬಿಪ್ರಾಯವನ್ನು ತಿಳಿಯದೆ ಅವಳನ್ನು ವನವಾಸಕ್ಕೆ ಕರೆದುಕೊಂಡು ಹೋಗುವುದು ಅವನ ಸ್ವಭಾವಕ್ಕೆ ಸಲ್ಲದ ಮಾತು.  ಹಾಗೆ ಮಾಡಿದ್ದರೆ ಜನನಿಂದನೆಯೂ ಸಾಧ್ಯ.  ಹೀಗಾಗಿ ಅವಳ ಇಂಗಿತವನ್ನೂ, ದೃಢಮನಸ್ಸನ್ನೂ ಒಪ್ಪಕ್ಕಿಟ್ಟಮೇಲೆಯೇ 'ದೇವಿ ನಿನ್ನ ಇಷ್ಟಕ್ಕೆ ವಿರೋಧವಾದರೆ ನನಗೆ ಸ್ವರ್ಗಸುಖವೂ ಬೇಡ.  ನಿನ್ನ ರಕ್ಷಣೆಯೇನೂ ನನಗೇ ಕ್ಲೇಶದ ವಿಷಯವಲ್ಲ' ಎಂದು ಅವಳನ್ನು ಅಪ್ಪಿಕೊಂಡು ಅವಳಿಗೆ ವನವಾಸಕ್ಕೆ ತೆರಳಲು ಸಿದ್ಧವಾಗುವಂತೆ ಹೇಳುತ್ತಾನೆ.  ಅವಳು ಸಂತೋಷಗೊಂಡು  ತನ್ನ ಆಭರಣಗಳನ್ನು ಬಡವರಿಗೆ ದಾನಕೊಟ್ಟು ನಾರುಮಡಿ ಉಟ್ಟುಕೊಂಡು ಸಿದ್ಧಳಾಗುತ್ತಾಳೆ ಹೃದಯಸ್ಪರ್ಶಿಯಾದ ಈ ಪ್ರಸಂಗವನ್ನು ಮನೋಜ್ಞವಾಗಿ ವರ್ಣಿಸಿ ವಾಲ್ಮೀಕಿಗಳು ಶ್ರೀರಾಮನು ಆದರ್ಶಪತಿ ಎಂಬ ಬಗ್ಗೆ ಸುಂದರವಾಗಿ ನಿರೂಪಿಸಿದ್ದಾರೆ.  


ಅರಣ್ಯ ಕಾಂಡದ ಒಂದು ಪ್ರಸಂಗ.  ಋಷಿಗಳು ರಾಮನನ್ನು ಕಂಡು ತಮಗೆ ರಾಕ್ಷಸರಿಂದುಂಟಾಗುತ್ತಿರುವ ಕಷ್ಟವನ್ನು ವರ್ಣಿಸಿ ರಾಕ್ಷಸರ ಹಾವಳಿಯಿಂದ ತಮ್ಮನ್ನು ರಕ್ಷಿಸಬೇಕೆಂದು ಸೂಚಿಸುತ್ತಾರೆ.  ರಾಮನು ರಾಕ್ಷಸರನ್ನು ಕೊಂದು ಅವರಿಗೆ ರಕ್ಷಣೆ ಕೊಡುವುದಾಗಿ ಭರವಸೆ ನೀಡುತ್ತಾನೆ.  ಇದನ್ನು ಗಮನಿಸಿದ ಸೀತೆ ರಾಮನು ಕೊಟ್ಟ ಆಶ್ವಾಸನೆಯ ಬಗ್ಗೆ ಆಕ್ಷೇಪಣೆ ಎತ್ತುತ್ತಾಳೆ. ರಾಮನು ಸೀತೆಯ ಬುದ್ಧಿವಾದವನ್ನು  ತಪ್ಪಾಗಿ ತಿಳಿಯುವುದಿಲ್ಲ.  "ನನ್ನ ಬಾಳಿನಲ್ಲಿ ನಿನಗೆ ಇಲ್ಲದ ಹಕ್ಕು ಬೇರೆ ಯಾರಿಗೆ ಇದೆ?  ನಿನ್ನ ಅಭಿಪ್ರಾಯವನ್ನು ಸ್ಪಷ್ಟಗೊಳಿಸಿ ನನ್ನನ್ನು ಎಚ್ಚರಗೊಳಿಸುವ ಅಧಿಕಾರ ನಿನಗಿದೆ.  ಆ ಬಗ್ಗೆ ನನ್ನ ಪೂರ್ಣ ಮನ್ನಣೆ ಇದೆ.  ಆದರೆ ಪ್ರತಿಜ್ಞೆ ಮಾಡಿಬಿಟ್ಟಿದ್ದೇನೆ.  ಅದನ್ನು ಪಾಲಿಸುವುದೇ ಮುಖ್ಯವಾದದ್ದು ಅಲ್ಲವೆ?" ಎನ್ನುತ್ತಾನೆ.   ಈ ಭಾವನೆ ಸತಿಪತಿಗಳ ಸಹಕಾರ ಪ್ರಪಂಚಕ್ಕೆ ಮಾರ್ಗದರ್ಶಕ ಜ್ಯೋತಿಯಾಗುತ್ತದೆ.

ಸೀತಾಪಹರಣದಿಂದ ರಾಮನ ವಿರಹ ವೇದನೆ ವರ್ಣಿಸಲಾಗದು. 


ಇನ್ನು ಸೀತೆಯ ಅಗ್ನಿಪ್ರವೇಶದ ಸಂದರ್ಭದಲ್ಲಿ ಸೀತೆಯ ಪಾತಿವ್ರತ್ಯವನ್ನು ಜಗತ್ತಿಗೆ ಸಾರುವುದು ರಾಮನ ಕರ್ತವ್ಯವಾಗಿತ್ತು.ಪತಿಯು ಪತ್ನಿಯ  ಮೈಯನ್ನಷ್ಟೇ ಅಲ್ಲ, ಅವಳ ಹೆಸರನ್ನೂ ರಕ್ಷಿಸಬೇಕಲ್ಲವೇ? ಹೀಗೆ ರಾಮನು ಆದರ್ಶ ಪತಿಯಾಗಿ ಮೆರೆದಿದ್ದಾನೆ.


ಆದರ್ಶ ಮಿತ್ರನಾಗಿ ಶ್ರೀರಾಮ 

ಗುಹ ಶೃಂಗಬೇರಪುರದ ರಾಜ.  ಸೀತಾ ರಾಮ ಲಕ್ಷ್ಮಣರು ವನವಾಸಕ್ಕಾಗಿ ಹೊರಟು ಗಂಗಾನದಿಯ ತೀರಕ್ಕೆ ಬಂದಾಗ ಮೊದಲು ಸಿಕ್ಕವನೇ ಗುಹ.  ರಾಮನಿಂದ ಅಯೋಧ್ಯೆಯಲ್ಲಾದ  ವಿಷಯಗಳನ್ನು ಕೇಳಿಕೊಂಡು ಮರುಗಿ, ತನ್ನ ರಾಜ್ಯದಲ್ಲಿಯೇ ಸುಖವಾಗಿ ಆಳಿಕೊಂಡಿರಲು ರಾಮನಿಗೆ ಹೇಳುತ್ತಾನೆ.  ಆದರೆ ರಾಮನು ವನವಾಸ ಕೈಗೊಂಡಿರುವುದರಿಂದ ಅಲ್ಲಿರಲು ಸಾಧ್ಯವಿಲ್ಲ ಎನ್ನುತ್ತಾ ಗುಹನನ್ನು ಬಾಚಿ ತಬ್ಬಿಕೊಂಡು " ಇಕ್ಷ್ವಾಕು ವಂಶದ ನಾವು ನಿನ್ನಂಥ ಇನ್ನೊಬ್ಬ ಸ್ನೇಹಿತನನ್ನು ಕಾಣೆವು" ಎಂದು ಗುಹನನ್ನು ಸ್ತುತಿಸುತ್ತಾನೆ.  ಗುಹ ನಿಶಾದ, ಅಂಬಿಗ.  ರಾಮ ಕ್ಷತ್ರಿಯಕುಲೋತ್ತಮ.  ಆದರೂ ಅವರ ಪರಸ್ಪರ ಸ್ನೇಹಶೀಲತೆ ಅವಿಸ್ಮರಣೀಯ.  


ಸೀತಾಪಹರಣದ ಸಂದರ್ಭ.  ಆಶ್ರಮದ ಹತ್ತಿರ ಇದ್ದ ದೊಡ್ಡ ಮರದ ತುದಿಯಲ್ಲಿ ಕುಳಿತಿದ್ದ ಜಟಾಯುಪಕ್ಷಿಗೆ ಸೀತೆಯ ಆರ್ತನಾದ ಕೇಳಿಸಿದೊಡನೆಯೇ ರಾವಣನನ್ನು ಮುಂದಕ್ಕೆ ಹೋಗಲು ಬಿಡದೆ ಅಡ್ಡಗಟ್ಟಿ ರೆಕ್ಕೆಯಿಂದ ಬಡಿದು, ಕೊಕ್ಕಿನಿಂದ ಕುಕ್ಕಿ ರಾವಣನನ್ನು ಗಾಯಗೊಳಿಸುತ್ತದೆ.  ರಾವಣನೊಂದಿಗೆ ಸೆಣಸಾಡಿ ರೆಕ್ಕೆ ಕತ್ತರಿಸಲ್ಪಟ್ಟವನಾಗಿ  ಕೆಳಗೆ ಬಿದ್ದಿರುತ್ತದೆ.  ರಾಮ ಬರುವವರೆಗೂ ಬದುಕಿದ್ದು ಅವನಿಗೆ ನಡೆದ ವೃತ್ತಾಂತವನ್ನೆಲ್ಲಾ ವಿಶದವಾಗಿ ತಿಳಿಸಿ ಮರಣ ಹೊಂದುತ್ತದೆ.  ರಾಮನು ಜಟಾಯುವಿನ ಸಹಾಯವನ್ನು ಪ್ರಶಂಸಿಸಿ ಅದಕ್ಕೆ ವಿಧ್ಯುಕ್ತವಾಗಿ ಅಂತ್ಯಸಂಸ್ಕಾರ ಮಾಡುತ್ತಾನೆ.  ಲಕ್ಷ್ಮಣನೊಂದಿಗೆ ಹೇಳುತ್ತಾನೆ " ತಮ್ಮಾ ನನಗೆ ಸೀತಾಪಹರಣದ ದುಃಖವೇನೋ ಇದೆ.  ಆದರೆ ಅದಕ್ಕೂ ಮಿಗಿಲಾಗಿ ನಮ್ಮಿಂದ ಈ ಜಟಾಯುವಿಗೆ ಒದಗಿದ ಮರಣ ನನ್ನ ಹೃದಯವನ್ನೇಸೀಳುತ್ತಿದೆ ಎಂದು ರೋದಿಸಿದನು.


ಇನ್ನು ರಾಮ ಸುಗ್ರೀವರ ಮೈತ್ರಿ ಪ್ರಮುಖವಾದುದು.  ರಾಮ ಹಾಗೂ ಸುಗ್ರೀವ ಇಬ್ಬರೂ ಹೆಂಡತಿಯನ್ನೂ ರಾಜ್ಯವನ್ನೂ ಕಳೆದುಕೊಂಡು ದುಃಖದಲ್ಲಿ ಮುಳುಗಿದ್ದುದರಿಂದ ಒಬ್ಬರು ಇನ್ನೊಬ್ಬರ ದುಃಖದುಮ್ಮಾನಗಳನ್ನು ಸುಲಭವಾಗಿ ಅರ್ಥಮಾಡಿಕೊಂಡರು.  ರಾಮನ ಪರಾಕ್ರಮ ಸುಗ್ರೀವನಿಗೆ ಪರಿಚಯವಾಯಿತು.  ವಾಲಿ ಮಾಡಿದ ಅನ್ಯಾಯದಿಂದ ಮುಕ್ತಗೊಳಿಸುವೆನೆಂಬ ರಾಮನ ಮಾತು ಅವನಿಗೆ ಮುದನೀಡಿತು.  ಸುಗ್ರೀವನು ಸೀತೆಯನ್ನು ಅರಸುವ ಭಾರವನ್ನು ತಾನು ನಿಭಾಯಿಸುವುದಾಗಿ ಮಾತುಕೊಟ್ಟನು.  ಇಬ್ಬರೂ ಅಗ್ನಿಸಾಕ್ಷಿಯಾಗಿ ಸ್ನೇಹವನ್ನು ದೃಢಪಡಿಸಿಕೊಂಡರು.  ರಾಮನು ಕೊಟ್ಟ ಮಾತಿನಂತೆ ವಾಲಿವಧೆಯನ್ನು ಮಾಡಿದನು.  ಸುಗ್ರೀವನಿಗೆ ರಾಜ್ಯಾಭಿಷೇಕ ಮಾಡಿ  ನಾಲ್ಕು ತಿಂಗಳು ಮಳೆಗಾಲವಾದ್ದರಿಂದ ಋಷ್ಯಮೂಕ ಪರ್ವತದ ಗುಹೆಯೊಂದರಲ್ಲಿ ಕಳೆದರು.  ಸುಗ್ರೀವನಿಗೆ ಎಚ್ಚರಿಸಿ ಸೀತಾನ್ವೇಷಣೆಗಾಗಿ ಸಿದ್ಧರಾದರು.  ಸುಗ್ರೀವನ ಸಹಾಯವನ್ನೂ ಸ್ನೇಹವನ್ನೂ ತನ್ನ ಹೃದಯದಲ್ಲಿ ಸ್ಥಿರವಾಗಿಟ್ಟುಕೊಂಡಿದ್ದ ರಾಮನು ಮುಂದೆ ಒಂದು ಸಂದರ್ಭದಲ್ಲಿ "ಭರತನಂತಹ ತಮ್ಮನೂ, ತನ್ನಂತಹ ಮಗನೂ, ಸುಗ್ರೀವನಂತಹ ಮಿತ್ರನೂ ದೊರೆಯುವುದು ಅಪರೂಪ " ಎಂದು ಸುಗ್ರೀವನ ಸಖ್ಯವನ್ನು ಮನಸಾರ ಪ್ರಶಂಸಿಸುತ್ತಾನೆ.


ವಿಭೀಷಣ ಶತೃರಾವಣನ ತಮ್ಮನೆಂದು ತಿಳಿದಿದ್ದರೂ ಶರಣಾಗತನಾಗಿ ಬಂದುದ್ದರಿಂದ ಅವನನ್ನು ತನ್ನ ಪಕ್ಷಕ್ಕೆ ಸೇರಿಸಿಕೊಂಡನು.  ತನ್ನ ಪಾದದಲ್ಲಿ ಅಡ್ಡಬಿದ್ದ ಅವನನ್ನು ಹಿಡಿದೆತ್ತಿ ಆಲಂಗಿಸಿಕೊಂಡನು.  ಸಮುದ್ರದ ತೀರದಲ್ಲಿಯೇ ವಿಭೀಷಣನಿಗೆ ಪಟ್ಟ ಕಟ್ಟಿದನು.  ಅಲ್ಲಿಂದ ಮುಂದೆ ವಿಭೀಷಣನು ರಾವಣನ ರಹಸ್ಯಗಳನ್ನೆಲ್ಲ ರಾಮನಿಗೆ ತಿಳಿಸಿ ರಾಮನ ವಿಜಯದಲ್ಲಿ ಸಹಾಯ ಮಾಡುತ್ತಾ ನಡೆದದ್ದು ವಿಭೀಷಣನ ಆದರ್ಶ ಮೈತ್ರಿಯ ಒಂದು ಪ್ರಮುಖ ಅಂಶ. ರಾವಣನ ವಧೆಯಾದ ಮೇಲೆ ರಾಮನು ವಿಭೀಷಣನಿಗೆ ಲಂಕಾಧಿಪತಿಯಾಗಿ ಮಾಡಿದನು.  ಇದಲ್ಲವೆ ಆದರ್ಶ ಮೈತ್ರಿ!


ಆದರ್ಶ ರಾಜನಾಗಿ ಶ್ರೀರಾಮ

ಶ್ರೀರಾಮ ರೂಪವಂತ, ಧರ್ಮಾತ್ಮ, ಧರ್ಮಜ್ಞ, ಸತ್ಯಸಂಧ, ಅಹಂಕಾರರಹಿತ, ಸ್ಮಿತಪೂರ್ವಬಾಷಿ, ಮಧುರಭಾಷಿ, ತಾನೇ ಜನರನ್ನು ಮೊದಲು ಮಾತಾಡಿಸುವವನು.  ಸುಂದರ ಮುಗುಳ್ನಗೆಯೊಡನೆ ಮಾತನಾಡುವನು.  ಹೇಗೋ ಒಬ್ಬರಿಂದ ಒಂದು ಸಣ್ಣ ಉಪಕಾರವಾದರೂ ಅದನ್ನು ಸದಾ ಸ್ಮರಿಸುವನು.  ಅಪಾರ ವೀರ್ಯವಂತನಾದರೂ ತಾನು ವೀರನೆಂಬ ಗರ್ವವಿಲ್ಲದವನು.   'ರಾಮೋ ದ್ವಿರ್ನಾಭಿ ಭಾಷತೇ' ಅಂದರೆ ಸುಳ್ಳಾಡಿ ಕಂಡವನಲ್ಲ   ಅವನಿಗೆ ಪ್ರಜೆಗಳೆಂದರೆ ಪ್ರಾಣ.  ಪ್ರಜೆಗಳಿಗೂ ಅವನನ್ನು ಕಂಡರೆ ಹಾಗೆಯೇ.  ದಶರಥನು ಶ್ರೀರಾಮನಿಗೆ ಯೌವರಾಜ್ಯಾಭಿಷೇಕ ಮಾಡಲು ನಿರ್ಧರಿಸಿದಾಗ ಪ್ರಜೆಗಳು ಆನಂದದಿಂದ ಸ್ವಾಗತಿಸುತ್ತಾರೆ.  ಆದರೆ ದಶರಥನ ಅನುಚಿತ ಆತುರದಿಂದ ರಾಜ್ಯಾಭಿಷೇಕ ರದ್ದಾಗುತ್ತದೆ.  ಧರ್ಮ ಹಚ್ಚೋ ಕಾಮ ಹೆಚ್ಚೋ ಎಂಬುದು ಪ್ರಶ್ನೆಯಾಗುತ್ತದೆ.  ರಾಮ ಧರ್ಮದ ಪಕ್ಷವನ್ನೇ ಆಯ್ದುಕೊಳ್ಳುತ್ತಾನೆ.  ರಾಮೋ ವಿಗ್ರಹವಾನ್ ಧರ್ಮಃ.  ಧರ್ಮವೇ ಶ್ರೀರಾಮನ ರೂಪ ತಾಳಿದೆ ಎಂದು ಮಾರೀಚ ರಾವಣನ ಮುಂದೆ ಹೊಗಳುತ್ತಾನೆ.  


ಕಡೆಯಲ್ಲಿ ರಾವಣನೂ ಸಹ ಅಂದು ತನ್ನನ್ನು ಬಾಣದಿಂದ ಮೃತ್ಯುವಶಕ್ಕೆ ದೂಡದೆ ತನ್ನನ್ನು ಯುದ್ಧ ಭೂಮಿಯಲ್ಲಿ ರಕ್ಷಿಸಿದ ರಾಮನ ಹಿರಿಮೆಯನ್ನೂ, ಧರ್ಮಶೀಲತೆಯನ್ನೃ ಕೊಂಡಾಡುತ್ತಾನೆ. ಸೀತೆಯೂ ಸಹ ರಾಮನ ಏಕಪತ್ನೀವ್ರತವನ್ನು ಸುಳ್ಳಾಡಿ ಕಂಡರಿಯದ ಆತ್ಮಸಂಯಮವನ್ನು ಮೆಚ್ಚಿ ಮಾತನಾಡುತ್ತಾಳೆ.  


ಶ್ರೀರಾಮನು ಹನ್ನೊಂದು ಸಹಸ್ರ ವರ್ಷಗಳ ಕಾಲ ಸತ್ಯ ಧರ್ಮಗಳನ್ನು ಆಧರಿಸಿ ರಾಜ್ಯಭಾರ ಮಾಡಿದನು.  ಅವನ ಆಳ್ವಿಕೆ ಇಂದಿಗೂ ಆದರ್ಶವಾಗಿದ್ದು ರಾಮರಾಜ್ಯ ನೀತಿವಂತ ಪ್ರಜೆಗಳನ್ನೊಳಗೊಂಡ  ದುರ್ಭಿಕ್ಷವಿಲ್ಲದ ಧರ್ಮಸಮೃದ್ಧಿಯ ರಾಜ್ಯಾಡಳಿತಕ್ಕೆ ಪರ್ಯಾಯ ಪದವಾಗಿದೆ.  ಅಯೋಧ್ಯೆಯಲ್ಲಿ ರಾಮನ ದರ್ಶನ ಮಾಡದೇ ಇದ್ದ ಪ್ರಜೆಯೇ ಇರಲಿಲ್ಲ.  ಹಾಗೆಯೇ ರಾಮನೇ ಮಾತನಾಡಿಸದಿದ್ದ ಪ್ರಜೆಯೇ ಇರಲಿಲ್ಲ.  ಎಲ್ಲರೂ ರಾಮನಿಗೆ ಆಯು,ಆರೋಗ್ಯ ಕರುಣಿಸಬೇಕೆಂದು ಪ್ರಾರ್ಥಿಸುತ್ತಿಧ್ಧರು.  ಪ್ರಜೆಗಳ ಇಷ್ಟಾರ್ಥವನ್ನು ಸಾಧಿಸುವಲ್ಲಿ ರಾಮನಂತಹ ರಾಜ ಇನ್ನೊಬ್ಬನಿಲ್ಲ.  

ಹೀಗೆ ಶ್ರೀರಾಮನು ಆದರ್ಶ ವ್ಯಕ್ತಿಯಾಗಿ ವಿವಿಧ ರೂಪಗಳಲ್ಲಿಪ್ರಕಾಶಿಸುತ್ತಾನೆ.





- ಡಾ.ಅನಸೂಯ ಎಸ್. ರಾಜೀವ್

ಆಸ್ಥಾನ ವಿದ್ವಾಂಸರು, ತಲಕಾಡು ಮಠ

TF301, ಅಪ್ರಮೇಯ,

ನಂ.16&17,  ಲಕ್ಷ್ಮಿ ಎನ್ಕ್ಲೇವ್ಸ್,

ಆಂಜನೇಯ ನಗರ,

ಇಟ್ಟಮಡು, 

ಬನಶಂಕರಿ ಮೂರನೇ ಹಂತ,

ಬೆಂಗಳೂರು 560085

ಮೊ.ಸಂ. 9481800691


ಲೇಖಕರ ಕಿರು ಪರಿಚಯ

ಡಾ.ಅನಸೂಯ ಎಸ್.ರಾಜೀವ್ ರವರು ಹರಿವಂಶರಾಯ್ ಬಚ್ಚನ್ ರವರ ಕಾವ್ಯಗಳ ಮೇಲೆ ಮಹಾಪ್ರಬಂಧವನ್ನು ಮಂಡಿಸಿ ಬೆಂಗಳೂರು ವಿಶ್ವವಿದ್ಯಾಲಯದಿಂದ ಪಿಎಚ್.ಡಿ.ಪದವಿಯನ್ನು ಪಡೆದಿರುತ್ತಾರೆ.  ಇವರು ಲೇಖಕಿಯಾಗಿದ್ದು ಸಾಕಷ್ಟು ಲೇಖನಗಳನ್ನು ಕನ್ನಡಪ್ರಭ, ವಿಜಯ ಕರ್ನಾಟಕ, ಬೋಧಿವೃಕ್ಷ, ತರಂಗ, ಸಪ್ತಗಿರಿ ಮಾಸ ಪತ್ರಿಕೆ, ಶಂಕರಕೃಪಾ, ಮುಂತಾದ ಪತ್ರಿಕೆಗಳಲ್ಲಿ ಕೊಡುತ್ತಿದ್ದಾರೆ.  ಇವರು ಐವತ್ತಕ್ಕೂ ಹೆಚ್ಚು ಗ್ರಂಥಗಳನ್ನು ಬಿಡುಗಡೆ ಮಾಡಿರುತ್ತಾರೆ.  ಕವಿಯತ್ರಿಯಾಗಿ ಸಾಕಷ್ಟು ಕನ್ನಡ ಹಾಗೂ ಹಿಂದಿಯಲ್ಲಿ ಕವನಗಳನ್ನು ಬರೆದಿದ್ದು ಕೆಲವು ಪ್ರಕಟವಾಗಿವೆ.  ಹಲವಾರು ದೇವರನಾಮಗಳು ಹೊರಬಂದಿವೆ.  ಜ್ಯೋತಿಷಿಯಾಗಿ ಇಪ್ಪತ್ಮೂರು ವರ್ಷಗಳಿಂದ ಲಕ್ಷಾಂತರ ಜಾತಕಗಳನ್ನು ಪರಿಶೀಲಿಸಿರುತ್ತಾರೆ.  ಅನುಗ್ರಹ ಜ್ಯೋತಿಷ್ಯ ವಿದ್ಯಾಪೀಠ ಎಂಬ ಸಂಸ್ಥೆ ಸ್ಥಾಪಿಸಿ ಸಾಕಷ್ಟು ವಿದ್ಯಾರ್ಥಿಗಳಿಗೆ ಜ್ಯೋತಿಷ್ಯ ಹಾಗೂ ವೇದ ಪಾಠಗಳನ್ನು ಹೇಳಿಕೊಡುತ್ತಿದ್ದಾರೆ.  ಪ್ರವಚನಕಾರರಾಗಿ ಹಲವೆಡೆ ಧಾರ್ಮಿಕ ಹಾಗೂ ಆಧ್ಯಾತ್ಮಿಕ ಪ್ರವಚನಗಳನ್ನು ಕೊಡುತ್ತಿದ್ದಾರೆ.  ಇವರ ಸೇವೆಯನ್ನು ಗುರುತಿಸಿ ಸಾಕಷ್ಟು ಸಂಘಸಂಸ್ಥೆಗಳಿಂದ ಬಿರುದು ಸನ್ಮಾನಗಳು ಲಭಿಸಿವೆ. ನಾಡಪ್ರಭು ಕೆಂಪೇಗೌಡ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಸುವರ್ಣ ಕನ್ನಡಿಗ, ಆಧ್ಯಾತ್ಮ ಸೇವಾ ಚೇತನ, ಜೀವಮಾನ ಸಾಧನೆ ಪ್ರಶಸ್ತಿ ಮುಂತಾದ ಪ್ರಶಸ್ತಿಗಳು ಲಭಿಸಿವೆ. ತಲಕಾಡು ಮಠದಿಂದ ಆಸ್ಥಾನ ವಿದ್ವಾಂಸರೆಂದು ನೀಡಲಾಗಿದೆ.


 ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter    

1 Comments

  1. ತುಂಬಾ ಚೆನ್ನಾಗಿದೆ 👏👏👏

    ReplyDelete

Post a Comment

Post a Comment

Previous Post Next Post