|ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಶ್ರೀರಾಮ ಕಥಾ ಲೇಖನ ಅಭಿಯಾನ-58: ಕನ್ನಡ ಭಾಷೆಯ ರಾಮಾಯಣಗಳು

ಶ್ರೀರಾಮ ಕಥಾ ಲೇಖನ ಅಭಿಯಾನ-58: ಕನ್ನಡ ಭಾಷೆಯ ರಾಮಾಯಣಗಳು



ಸಂತೇಬಾಚಹಳ್ಳಿ ಡಾ. ಎಸ್. ನಂಜುಂಡಸ್ವಾಮಿ


ಆದಿಕವಿ ವಾಲ್ಮೀಕಿ ಮಹರ್ಷಿಯಿಂದ ಸಂಸ್ಕøತ ಭಾಷೆಯಲ್ಲಿ ವಿರಚಿತವಾಗಿರುವ ರಾಮಾಯಣವು ನಮ್ಮ ದೇಶದ ಆದಿಕಾವ್ಯವೆಂದು ಪ್ರಸಿದ್ಧವಾಗಿದೆ. ಪ್ರೇಮ ಸಲ್ಲಾಪದಲ್ಲಿ ತೊಡಗಿದ್ದ ಕ್ರೌಂಚ ಪಕ್ಷಿಗಳನ್ನು ಹೊಡೆದುರುಳಿಸಿದ ಬೇಡನಿಗೆ ಶಾಪ ನೀಡಿದ ನಂತರ ವಾಲ್ಮೀಕಿ ಮಹರ್ಷಿಗಳಿಗೆ ಬ್ರಹ್ಮನು ಪ್ರತ್ಯಕ್ಷನಾಗಿ ಶ್ಲೋಕ ಛಂದಸ್ಸಿನಲ್ಲಿಯೇ  ರಾಮಾಯಣ ಕಾವ್ಯವನ್ನು ರಚಿಸು, ಈ ಭೂಮಿಯ ಮೇಲೆ ಎಲ್ಲಿಯವರೆಗೆ ಪರ್ವತಗಳು ಇರುತ್ತವೆಯೋ, ಎಲ್ಲಿಯವರೆಗೆ ಗಂಗಾದಿ ಪುಣ್ಯ ನದಿಗಳು ಹರಿಯುತ್ತಿರುವುವೋ ಅಲ್ಲಿಯವರೆಗೆ ರಾಮಾಯಣ ಕಾವ್ಯವು ಪ್ರಚಲಿತವಾಗಿರುತ್ತದೆಂದು ಹೇಳುತ್ತಾನೆ. ಆ ಪ್ರಕಾರ ವಾಲ್ಮೀಕಿ ಮಹಾಕವಿಯು 24,000 ಶ್ಲೋಕಗಳಿಂದ ಕೂಡಿದ ರಾಮಾಯಣ ಮಹಾಕಾವ್ಯವನ್ನು ರಚಿಸುತ್ತಾನೆ. ರಾಮಾಯಣದ ಕಥೆಯನ್ನು ಮೂಲವನ್ನಾಗಿರಿಸಿಕೊಂಡು, ತಾತ್ತ್ವಿಕ ಹಿನ್ನೆಲೆಯಲ್ಲಿ ಕೆಲವು ರೂಪಾಂತರಗಳೊಡನೆ ಆನಂದ ರಾಮಾಯಣ, ಅದ್ಭುತ ರಾಮಾಯಣ, ಅಧ್ಯಾತ್ಮ ರಾಮಾಯಣ ಈ ರೀತಿ ಅನೇಕ ರಾಮಾಯಣಗಳು ರಚಿತವಾಗಿವೆ. ರಾಮಾಯಣವು ಬಹುತೇಕ ನಮ್ಮ ದೇಶದ ಎಲ್ಲ ಭಾಷೆಗಳಲ್ಲಿಯೂ ರಚಿತವಾಗಿವೆ. ಅದೇ ರೀತಿ ಕನ್ನಡ ಭಾಷೆಯಲ್ಲಿಯೂ ರಾಮಾಯಣಗಳು ರಚಿತವಾಗಿವೆ.


ಕನ್ನಡ ರಾಮಾಯಣಗಳು:

ಕನ್ನಡ ಭಾಷೆಯಲ್ಲಿ ರಾಮಾಯಣದ ಎರಡು ಪರಂಪರೆಗಳಿವೆ. ಒಂದು ವಾಲ್ಮೀಕಿ ರಾಮಾಯಣದ ಕಥೆಯನ್ನು ಯಥಾವತ್ತಾಗಿ ಅನುಸರಿಸಿ ಬರೆದ ವೈದಿಕ ರಾಮಾಯಣಗಳು, ಇನ್ನೊಂದು ಜೈನ ಸಂಪ್ರದಾಯದ ರಾಮಾಯಣಗಳು. ಆದರೆ ಕ್ರಿ.ಶ.16ನೇ ಶತಮಾನದಲ್ಲಿ ಕನ್ನಡ ಭಾಷೆಯಲ್ಲಿ ವಾಲ್ಮೀಕಿ ಕುಮಾರ ವಾಲ್ಮೀಕಿಯು ರಚಿಸಿದ ತೊರವೆಯ ರಾಮಾಯಣವೇ ನಮಗೆ ದೊರಕಿರುವ ಕನ್ನಡ ಭಾಷೆಯ ಮೊದಲ ರಾಮಾಯಣ ಕಾವ್ಯ.  ವಾಲ್ಮೀಕಿ ರಾಮಾಯಣವನ್ನು ಅನುಸರಿಸಿ ವೈದಿಕ ಪರಂಪರೆಯಲ್ಲಿ ಕನ್ನಡ ಭಾಷೆಯಲ್ಲಿ ರಚಿತವಾಗಿರುವ ಕೆಲವು ಪ್ರಮುಖ ರಾಮಾಯಣ ಕೃತಿಗಳನ್ನು ಈ ಕೆಳಗೆ ವಿವೇಚಿಸಲಾಗಿದೆ. 


ಪೊನ್ನನ ಭುವನೈಕ ರಾಮಾಭ್ಯುದಯ: 

ಕ್ರಿ.ಶ. ಸು.950ರಲ್ಲಿದ್ದ  ಪೊನ್ನ ಕವಿಯ 14 ಆಶ್ವಾಸಗಳ ಭುವನೈಕ ರಾಮಾಭ್ಯುದಯ ಎಂಬ ಚಂಪೂ ಕಾವ್ಯವನ್ನು ರಚಿಸಿದ್ದಾನೆಂದು ತಿಳಿದು ಬರುತ್ತದೆ. ತನಗೆ ಆಶ್ರಯ ನೀಡಿದ್ದ ಭುವನೈಕ ರಾಮ ಎಂಬ ಬಿರುದನ್ನು ಹೊಂದಿದ್ದ ರಾಷ್ಟ್ರಕೂಟರ ಮೂರನೆಯ ಕೃಷ್ಣನೊಡನೆ ಸಮೀಕರಿಸಿ ಈ ಕಾವ್ಯವನ್ನು ರಚಿಸಿರಬಹುದೆಂದು ವಿದ್ವಾಂಸರು ಊಹಿಸಿದ್ದಾರೆ.


ತೊರವೆಯ ನರಹರಿ ಅಥವಾ ಕುಮಾರ ವಾಲ್ಮೀಕಿಯ ತೊರವೆ ರಾಮಾಯಣ (ಕ್ರಿ.ಶ. ಸುಮಾರು 1500):

ಮೊಟ್ಟಮೊದಲ ಬಾರಿಗೆ ವಾಲ್ಮೀಕಿ ರಾಮಾಯಣವನ್ನು ಷಟ್ಪದಿಯ ರೂಪದಲ್ಲಿ ಕನ್ನಡ ಭಾಷೆಯಲ್ಲಿ ರಚಿಸಿದ ಕೀರ್ತಿ ತೊರವೆಯ ನರಹರಿಗೆ ಸಲ್ಲುತ್ತದೆ. ಕುಮಾರವ್ಯಾಸನಂತೆ ತನ್ನನ್ನು ಇವನು ಕುಮಾರ ವಾಲ್ಮೀಕಿ ಎಂದು ಕರೆದುಕೊಂಡಿದ್ದಾನೆ. ಇಂದಿನ ವಿಜಯಪುರದ ಸಮೀಪ ಇರುವ ತೊರವಿ ಇವನ ಊರು. ಇವನು ಈ ಊರಿನಲ್ಲಿರುವ ನರಸಿಂಹ ಸ್ವಾಮಿಯ ಪರಮ ಭಕ್ತ. ಕಾವ್ಯದ ಆರಂಭದಲ್ಲಿ ತೊರವೆಯ ನರಹರಿಯನ್ನು, ವಾಲ್ಮೀಕಿಯನ್ನು, ಶ್ರೀಮನ್ ಮಧ್ವಾಚಾರ್ಯರರನ್ನು ಸ್ತುತಿಸಿದ್ದು ಈತ ಮಾಧ್ವ ಪಂಥದವನೆಂದು ಹೇಳಬಹುದು.  ಈ ಬೃಹತ್ ಕೃತಿಯಲ್ಲಿ 112 ಸಂಧಿಗಳು, 5079 ಪದ್ಯಗಳಿದ್ದು, 54 ಸಂಧಿಗಳು ಯುದ್ಧಕಾಂಡಕ್ಕೆ ಮೀಸಲಾಗಿವೆ. ತೊರವೆ ರಾಮಾಯಣಕ್ಕೆ ವಾಲ್ಮೀಕಿ ರಾಮಾಯಣವೇ ಮೂಲವಾದರೂ, ಅಲ್ಲಲ್ಲಿ ಅಧ್ಯಾತ್ಮ ರಾಮಾಯಣ, ಆನಂದ ರಾಮಾಯಣದ ಪ್ರಭಾವವೂ ಇದೆ. ಮಂಥರೆಯನ್ನು “ಪೂರ್ವ ಮಾಯಾ ತರುಣಿ ಮಂಥರೆ” ಎಂದು ಕರೆದಿದ್ದಾನೆ. ರಾವಣನ ಪಾತ್ರ ಸ್ವಲ್ಪ ಮಟ್ಟಿಗೆ ಉದಾತ್ತವಾಗಿ ಚಿತ್ರಿತವಾಗಿದೆ. ವಿಭೀಷಣ, ಮಾರೀಚರ ಮಾತನ್ನು ಕೇಳದಿದ್ದ ಬಗ್ಗೆ ರಾವಣನು ಪಶ್ಚಾತ್ತಾಪ ಪಡುತ್ತಾನೆ.


ರಾಮನಿಗೆ ಶರಣಾಗಿ, ರಾಜ್ಯವನ್ನು ಬಿಸುಟು, ಸೀತೆಯನ್ನು ಅವನಿಗೆ ಒಪ್ಪಿಸುವುದಕ್ಕಿಂತ, “ಕೋಟಿಹೋಮದಲಿ ವನಜಪೀಠನ ನಿಗಮ ಜೂಟನ ಮೆಚ್ಚಿಸುವುದು” ಎಂದು ಯಾಗ ಮಾಡಲು ತೊಡಗುತ್ತಾನೆ. ಆಗ ರಾಮ ಲಕ್ಷ್ಮಣರು ಕಪಿಸೇನೆಯೊಡನೆ ಬಂದು ಯಜ್ಞವನ್ನು ಹಾಳುಮಾಡುತ್ತಾರೆ. ಮಂಡೋದರಿಯು ರಾಮನನ್ನು ಸಾಕ್ಷಾತ್ ವಿಷ್ಣುವಿನ ಅವತಾರವೆಂದು ಭಾವಿಸಿದ್ದಳು. ರಾಮನ ಮೊರೆಹೋಗಿ ಸೀತೆಯನ್ನು ಒಪ್ಪಿಸುವುದೇ ಸರಿಯಾದ ಮಾರ್ಗವೆಂದು ಮಂಡೋದರಿಯು ಹೇಳಿದಾಗ, “ರಣಮುಖದಲಿ ರಾಮನ ಕೂಡುವ ಸಂಕಲ್ಪ ತನಗೆ” ಎಂದು ಹೇಳುತ್ತಾನೆ. ರಾಮನ ಭಂಟನಾದ ಹನುಮಂತನು “ಸೇವೆಯಂತಹ ಕಷ್ಟ ಇನ್ನೊಂದಿಲ್ಲ ರಘುನಾಥ” ಎಂದು ಮೂರು ನಾಲ್ಕು ಪದ್ಯಗಳಲ್ಲಿ ರಾಮನಿಗೆ ಹೇಳುವುದು ಆಶ್ಚರ್ಯಕರವಾಗಿದೆ. ಅಂದಿನ ಕಾಲದ ಸಂದರ್ಭೋಚಿತ ಗಾದೆಗಳು, ನಾಣ್ನುಡಿಗಳನ್ನು ಯಥೇಚ್ಛವಾಗಿ ಬಳಸಿದ್ದಾನೆ. ಕಾವ್ಯಭಾಷೆ ಬಹಳ ಸರಳವಾಗಿದ್ದು ಸಾಮಾನ್ಯ ಜನರಿಗೂ ಅರ್ಥವಾಗುವಂತಿದೆ. ಕುಮಾರ ವಾಲ್ಮೀಕಿಯು ಪಾತಾಳ ಲಂಕೆಯಲ್ಲಿದ್ದ  ರಾವಣನ ಸೋದರ ಮಹಿರಾವಣನು ರಾಮಲಕ್ಷ್ಮಣರನ್ನು ಸೆರೆ ಹಿಡಿದು ಪಾತಾಳದಲ್ಲಿ ಬಂಧಿಸಿ ಬಲಿ ಕೊಡಲು ಸಿದ್ಧಮಾಡಿದ್ದು, ಹನುಮಂತನು ಪಾತಾಳಕ್ಕೆ ಹೋಗಿ ಅವರನ್ನು ಬಿಡಿಸಿಕೊಂಡು ಬಂದ ಕಥೆಯುಳ್ಳ   “ಮೈರಾವಣ ಕಾಳಗ” ಎಂಬ ಕೃತಿಯನ್ನು ರಚಿಸಿದ್ದು ಇದರಲ್ಲಿ 4 ಸಂಧಿಗಳು, 296 ಭಾಮಿನಿ ಷಟ್ಪದಿಗಳಿವೆ. ಈ ಕೃತಿಯ ಪ್ರಭಾವದಿಂದ ಅನೇಕ ಯಕ್ಷಗಾನಗಳು ರಚಿತವಾಗಿವೆ.

                                                                                                                                                                                                                                                                                                                                          

ಲಕ್ಷ್ಮೀಶನ ಜೈಮಿನಿ ಭಾರತ ಅಂತರ್ಗತ ರಾಮಾಯಣ:

ಸುಮಾರು ಕ್ರಿ.ಶ.1500ರ ಕಾಲಮಾನದಲ್ಲಿ, ಚಿಕ್ಕಮಗಳೂರು ಜಿಲ್ಲೆಯ, ಕಡೂರು ತಾಲ್ಲೂಕಿನ,  ದೇವನೂರಿನಲ್ಲಿದ್ದ, ಲಕ್ಷ್ಮೀಶ ಕವಿಯ ಕನ್ನಡ ಜೈಮಿನಿ ಭಾರತದ ಹದಿನೆಂಟು, ಹತ್ತೊಂಬತ್ತು, ಇಪ್ಪತ್ತು ಮತ್ತು ಇಪ್ಪತ್ತೊಂದನೆಯ ಸಂಧಿಗಳಲ್ಲಿ ರಾಮಾಯಣ ಹಾಗೂ ಉತ್ತರ ರಾಮಾಯಣದ ಕಥೆಯನ್ನು ಒಟ್ಟು 248 ವಾರ್ಧಕ ಷಟ್ಪದಿಗಳಲ್ಲಿ ಸಂಗ್ರಹಿಸಿ ಬಹಳ ಸುಂದರವಾಗಿ ನಿರೂಪಿಸಿದ್ದಾನೆ. ತಂದೆ ಮಕ್ಕಳಾದ ಅರ್ಜುನ ಮತ್ತು ಅವನ ಮಗ ಬಬ್ರುವಾಹನರಿಗೆ ಕಾಳಗವು ಏರ್ಪಟ್ಟಾಗ, ವೈಶಂಪಾಯನ ಮಹರ್ಷಿಗಳು ರಾಮಾಯಣದ ಕಥೆಯನ್ನು ಹೇಳುತ್ತಾರೆ. ಅದನ್ನೇ ಲಕ್ಷ್ಮೀಶಕವಿ ಸಂಗ್ರಹಿಸಿ ಹೇಳಿದ್ದಾನೆ. ಮೂಲ ರಾಮಾಯಣದಲ್ಲಿ ರಾಮನು ಆದಿತ್ಯ ಹೃದಯವನ್ನು ಪಠಿಸಿದರೆ, ಉತ್ತರ ರಾಮಾಯಣದಲ್ಲಿ ಲವನು ಸೂರ್ಯ ಮಂತ್ರವನ್ನು ಜಪಿಸಿರುವುದು ಷಟ್ಪದಿಯಲ್ಲಿ ಬಹಳ ಸೊಗಸಾಗಿ ಮೂಡಿ ಬಂದಿದೆ.


ನಾರಾಯಣ ಕವಿಯ ಉತ್ತರರಾಮ ಕಥೆ (ಸುಮಾರು ಕ್ರಿ.ಶ.1600):  

ನಾರಾಯಣ ಕವಿಯು ಉತ್ತರರಾಮ ಕಥೆ ಎಂಬ ಷಟ್ಪದಿ ಕಾವ್ಯವನ್ನು ರಚಿಸಿದ್ದಾನೆ. ಈತನು ಮಾಧ್ವ ಬ್ರಾಹ್ಮಣ ಕವಿ. ಇವನ ತಂದೆಯ ಹೆಸರು ತಾತಧೀಮಣಿ. ಇವನ ಇಷ್ಟದೈವ ಅಹೋಬಳ ನರಸಿಂಹ. ಇವನ ಗುರು ತಿಮ್ಮಣ್ಣಾರ್ಯ. ಕೃಷ್ಣರಾಯ ಭಾರತವನ್ನು ಬರೆದ ತಿಮ್ಮಣ್ಣ ಕವಿಯೇ ಈ ತಿಮ್ಮಣ್ಣಾರ್ಯ ಇರಬಹುದೆಂದು  ವಿದ್ವಾಂಸರು ಊಹಿಸಿದ್ದಾರೆ. ಈತನು ಕುಮಾರ ವ್ಯಾಸ ಮಹಾಕವಿಯನ್ನು ಸ್ತುತಿಸಿದ್ದಾನೆ. 44 ಸಂಧಿ ಮತ್ತು 2036 ಷಟ್ಪದಿಗಳಿಂದ ಕೂಡಿದ ಇವನ ಕೃತಿಯಲ್ಲಿ ರಾಮಾಯಣದ ಉತ್ತರ ಕಾಂಡದ ಕಥೆ ನಿರೂಪಿತವಾಗಿದೆ. 


ಬತ್ತಲೇಶ್ವರ ಕವಿಯ ಕೌಶಿಕ ರಾಮಾಯಣ (ಸು. 1625)

ಜ್ಞಾನಪೀಠ ಪ್ರಶಸ್ತಿ ವಿಜೇತ ಸಾಹಿತಿ, ಖ್ಯಾತ ಕಾದಂಬರಿಕಾರ ಶಿವರಾಮ ಕಾರಂತರು ಬತ್ತಲೇಶ್ವರನೆಂಬ ಕವಿಯು ಬರೆದಿರುವ ಕೌಶಿಕ ರಾಮಾಯಣ ಎಂಬ ಕೃತಿಯನ್ನು ಹಲವಾರು ಹಸ್ತಪ್ರತಿಗಳ ನೆರವಿನಿಂದ ಸಂಪಾದಿಸಿ ಪ್ರಕಟಿಸಿದ್ದಾರೆ. ಈ ಕವಿಯು ಶಿರ್ಸಿ, ಕುಮಟಾ ತಾಲ್ಲೂಕಿನ ಗಡಿಯಲ್ಲಿರುವ ಪ್ರಸಿದ್ಧ ಯಾಣದ ಭೈರವನನ್ನು ಸ್ತುತಿಸಿದ್ದು, ಇದೇ ಅವನ ಸ್ಥಳ ಇದೇ ಇರಬಹುದು ಎಂದು ವಿದ್ವಾಂಸರು ಊಹಿಸಿದ್ದಾರೆ. ಇದಕ್ಕೆ ಕೌಶಿಕ ರಾಮಾಯಣ ಎಂಬ ಹೆಸರೂ ಇದೆ. 44 ಸಂಧಿಗಳ ಈ ಷಟ್ಪದಿ ಕೃತಿಯಲ್ಲಿ 34 ಸಂಧಿಗಳನ್ನು ಸುಂದರ ಕಾಂಡ, ಯುದ್ಧಕಾಂಡಕ್ಕೆ ಮೀಸಲಿಡಲಾಗಿದೆ.  


ಮೂಲಕ ರಾಮಾಯಣ (ಸು. 1650)

ಮೂಲಕ ರಾಮಾಯಣವು 6 ಸಂಧಿಗಳ 319 ಷಟ್ಟದಿಗಳ ಒಂದು ಕಾವ್ಯ. ಈ ಕಾವ್ಯವನ್ನು ರಚಿಸಿದ ಕವಿ ಯಾರು ಎಂಬುದು ತಿಳಿದು ಬರುತ್ತಿಲ್ಲ. ರಾಮಾಯಣ ಯುದ್ಧದ ನಂತರ, ಕುಂಭಕರ್ಣನ ಮಗನಾದ ಮೂಲಕನು, ಲಂಕೆಗೆ ಹೋಗಿ ವಿಭೀಷಣನನ್ನು ಕೊಂದು, ಅಯೋಧ್ಯೆಗೆ ಹೋಗಿ ರಾಮ, ಲಕ್ಷ್ಮಣ, ಹನುಮಂತರೊಡನೆ ಯುದ್ಧಮಾಡಿ ಅವರನ್ನು ಕೊಲ್ಲುತ್ತಾನೆ. ನಂತರ ರಾಮನ ಮಗ ಕುಶನು ಮೂಲಕನನ್ನು ಸಂಹರಿಸುತ್ತಾನೆ. ಈ ಕಥೆಯು ಆನಂದ ರಾಮಾಯಣದಲ್ಲಿ ಬರುತ್ತದೆ. ಅದನ್ನೇ ವಿಸ್ತಿರಿಸಿ ಕವಿ ಮೂಲಕ ರಾಮಾಯಣವನ್ನು ರಚಿಸಿದ್ದಾನೆ.


ತಿಮ್ಮರಸನ ಮಾರ್ಕಂಡೇಯ ರಾಮಾಯಣ (ಸು.1650)

ಪಾಂಡವರು ವನವಾಸದಲ್ಲಿದ್ದಾಗ ಮಾರ್ಕಂಡೇಯ ಮುನಿಯು ಧರ್ಮರಾಯನಿಗೆ ಹೇಳಿದ ರಾಮಾಯಣದ ಕಥೆ ಈ ಕಾವ್ಯದ ವಸ್ತು. ವಾರ್ಧಕ ಷಟ್ಟಪದಿಯಲ್ಲಿ ರಚಿತವಾಗಿರುವ ಈ ಕೃತಿಯ ಅಸಮಗ್ರ ಪ್ರತಿಯು ದೊರಕಿದ್ದು, ಅದರಲ್ಲಿ 30 ಸಂಧಿಗಳು 1500 ಷಟ್ಪದಿಗಳಿವೆ ಎಂದು ತಿಳಿದು ಬರುತ್ತದೆ. ಪಾಲ್ಕುರಿಯ ಕರಣಿಕ ಬಳ್ಳುರಪ್ಪನ ಮಗ ತಿಮ್ಮರಸನು ಈ ಕೃತಿಯನ್ನು ರಚಿಸಿದ್ದಾನೆ. ಮೇಲುಕೋಟೆಯ ನರಸಿಂಹನಿಗೆ ತನ್ನ ಕೃತಿಯನ್ನು ಅರ್ಪಣೆ ಮಾಡಿದ್ದಾನೆ. ಮೇಲುಕೋಟೆ ನಾರಾಯಣ, ನರಸಿಂಹ, ಬ್ರಹ್ಮ, ಸರಸ್ವತಿ, ಆಂಜನೇಯ, ಈಶ್ವರ, ವಾಲ್ಮೀಕಿ ಇವರುಗಳನ್ನು ಕವಿ ಸ್ತುತಿಸಿದ್ದಾನೆ.


ತಿರುಮಲೆ ವೈದ್ಯನ ಉತ್ತರ ರಾಮಾಯಣ (ಕ್ರಿ.ಶ.1650):  

ತಿರುಮಲೆ ವೈದ್ಯನು ಉತ್ತರ ರಾಮಾಯಣ ಎಂಬ ಭಾಮಿನಿ ಷಟ್ಪದಿ ಕಾವ್ಯವನ್ನು ಬರೆದಿದ್ದಾನೆ. ಈ ಕಾವ್ಯದಲ್ಲಿ  20 ಸಂಧಿ 1021 ಪದ್ಯಗಳಿವೆ. ಕಾವ್ಯದ ಪ್ರಾರಂಭದಲ್ಲಿ ರಾಮ, ಶಿವ, ಗಣಪತಿ, ಸರಸ್ವತಿ ಮತ್ತು ಆದಿಕವಿ ವಾಲ್ಮೀಕಿಯರನ್ನು ಸ್ತುತಿಸಿದ್ದಾನೆ. ಈತನ ತಂದೆಯ ಹೆಸರು ಗವಿಯಣ್ಣ. ಇವನು ಬಹುಶಃ ಮಾಗಡಿಯ ಬಳಿಯ ತಿರುಮಲೆಯವನಿರಬಹುದು. 


ತಿಮ್ಮಮಾತ್ಯನ ರಾಮಾಭ್ಯುದಯ ಕಥಾ ಕುಸುಮ ಮಂಜರಿ (1750)

ಬೆಂಗಳೂರು ಜಿಲ್ಲೆಯ ಅಗರದವನಾದ ತಿಮ್ಮಮಾತ್ಯನು ರಾಮಾಭ್ಯುದಯ ಕಥಾಕುಸುಮ ಮಂಜರಿ ಎಂಬ ರಾಮಾಯಣ ಕೃತಿಯನ್ನು ರಚಿಸಿದ್ದಾನೆ. ಭಾಮಿನಿ ಷಟ್ಟದಿಯಲ್ಲಿ ರಚಿತವಾಗಿರುವ ಈ ಕಾವ್ಯದಲ್ಲಿ 3500 ಪದ್ಯಗಳಿವೆ. ಈ ಕಾವ್ಯಕ್ಕೆ ಆನಂದ ರಾಮಾಯಣ ಎಂಬ ಹೆಸರೂ ಇದೆ. ಉತ್ತರಕಾಂಡವೂ ಸೇರಿದಂತೆ ರಾಮಾಯಣದ ಕಥೆಯ ಜೊತೆಗೆ ವಿಷ್ಣುವಿನ ವರಾಹ ಅವತಾರ ಮತ್ತು ನರಸಿಂಹ ಅವತಾರದ ಕಥೆಯನ್ನೂ ಇದು ಒಳಗೊಂಡಿದೆ. ಕವಿಯು ಅಗರಕ್ಕೆ ಸಮೀಪದ ಸಾದನಹಳ್ಳಿಯ ತಿರುಮಲ ದೇವರ ಭಕ್ತನಾಗಿದ್ದು ತನ್ನ ಕೃತಿಯನ್ನು ಈ ದೇವರಿಗೆ ಅಂಕಿತ ಮಾಡಿದ್ದಾನೆ. ತಿಮ್ಮ ಅಮಾತ್ಯನು ಯಾವ ಪಾಳೆಯಗಾರರಲ್ಲಿ ಮಂತ್ರಿಯಾಗಿದ್ದನು ಎಂಬುದು ತಿಳಿದುಬರುವುದಿಲ್ಲ.


ವೆಂಕಮಾತ್ಯನ ರಾಮಾಯಣ ಮತ್ತು ಹನುಮದ್ವಿಲಾಸ: 

ಹೈದರಾಲಿ ಖಾನ್‍ನಲ್ಲಿ ಮಂತ್ರಿಯಾಗಿದ್ದ ವೆಂಕಮಾತ್ಯನು (ಸು. 1770) ರಾಮಾಯಣ ಮತ್ತು ಹನುಮದ್‍ವಿಲಾಸ ಮತ್ತು  ಇಂದಿರಾಭ್ಯುದಯ ಎಂಬ ಷಟ್ಪದಿ ಕಾವ್ಯಗಳನ್ನು ರಚಿಸಿದಾನೆ. ಇವನ ತಂದೆ ರಾಮಪುರಿ ಹಂಪೆಯಮಾತ್ಯ. ತಾಯಿ ವಾಬಾಂಬೆ ಅಥವಾ ವಾಮಾಂಬೆ. ತಾನು ಆಂಜನೇಯನ ವರಪ್ರಸಾದದಿಂದ ಕವಿತಾರಚನೆಯ ಶಕ್ತಿಯನ್ನು ಮತ್ತು ಗಾಂಧರ್ವ ವಿದ್ಯೆ ಅಂದರೆ ಸಂಗೀತವಿದ್ಯೆಯನ್ನು ಪಡೆದನೆಂದು, ತಾನು ಚತುರ್ವಿಧ ಕವಿತಾವಿಶಾರದನೆಂದು ಹೇಳಿಕೊಂಡಿದ್ದಾನೆ. ವಾಲ್ಮೀಕಿ ರಾಮಾಯಣದ ಕನ್ನಡ ರೂಪಾಂತರವಾದ ರಾಮಾಯಣವು ವಾರ್ಧಕ ಷಟ್ಪದಿಯಲ್ಲಿ ರಚಿತವಾಗಿದ್ದು 195 ಸಂಧಿ ಮತ್ತು 9865 ಪದ್ಯಗಳಿಂದ ಕೂಡಿದ ಸರಳಶೈಲಿಯ ಬೃಹತ್ ಕಾವ್ಯವಾಗಿದೆ. ಹನುಮದ್ ವಿಲಾಸವು ಆಂಜನೇಯನ ಚರಿತ್ರೆಯನ್ನು ಒಳಗೊಂಡ ಷಟ್ಪದಿ ಗ್ರಂಥವಾಗಿದೆ ಎಂದು ತಿಳಿದು ಬರುತ್ತದೆ. ಇಂದಿರಾಭ್ಯುದಯವು ಲಕ್ಷ್ಮಿಯ ಅವತಾರ ವರ್ಣನೆಯನ್ನು ಒಳಗೊಂಡ ಚಂಪೂ ಕೃತಿಯಾಗಿದೆ.


ಮುಮ್ಮಡಿ ಕೃಷ್ಣರಾಜ ಒಡೆಯರ ಚಾಮರಾಜೋಕ್ತಿ ವಿಲಾಸ ರಾಮಾಯಣ:  

ಮೈಸೂರು ಸಂಸ್ಥಾನದ ಒಡೆಯರಾದ ಮುಮ್ಮಡಿ ಕೃಷ್ಣರಾಜ ಒಡೆಯರು (1794-1868) ಸ್ವತಃ ಕವಿಗಳು ಹಾಗೂ ಕವಿಜನಾಶ್ರಯರು ಆಗಿದ್ದರು. ಅವರು ರಾಮಾಯಣ, ಭಾರತ ಮತ್ತು ಭಾಗವತಗಳನ್ನು ಸಂಸ್ಕøತ ಭಾಷೆಯಿಂದ ಕನ್ನಡಕ್ಕೆ ಭಾಷಾಂತರಿಸಿದ್ದಾರೆ. ರಾಮಾಯಣ ದೀಪಿಕೆ, ರಾಮಾಯಣ ತಾತ್ಪರ್ಯ ದೀಪಿಕಾ ಟೀಕೆ, ಉತ್ತರ ರಾಮ ಚರಿತೆ, ರಾಮಕಥಾಕಲ್ಪವೃಕ್ಷ ಮೊದಲಾದ ರಾಮಾಯಣದ ಮೇಲಿನ ಟೀಕಾ ಗ್ರಂಥಗಳನ್ನು ರಚಿಸಿದ್ದಾರೆ. ವಾಲ್ಮೀಕಿ ರಾಮಾಯಣದ ಗದ್ಯಾನುವಾದವನ್ನು ತಮ್ಮ ತಂದೆಯ ಹೆಸರಿನಲ್ಲಿ “ಚಾಮರಾಜೋಕ್ತಿ ವಿಲಾಸ” ಎಂಬ ಹೆಸರಿನಲ್ಲಿ ರಚಿಸಿದ್ದಾರೆ. ಈ ಗ್ರಂಥವು ಶ್ರೀಮಾನ್ ಡಿ.ವಿ. ಗುಂಡಪ್ಪನವರ ಪ್ರಯತ್ನದಿಂದ 1967ರಲ್ಲಿ ವಿದ್ವಾನ್ ಎನ್. ರಂಗನಾಥಶರ್ಮ ಅವರಿಂದ ಪರಿಷ್ಕೃತವಾಗಿ ಪುನರ್ ಮುದ್ರಣವಾಗಿರುತ್ತದೆ. ಮುಮ್ಮಡಿ ಕೃಷ್ಣರಾಜರು ಬ್ರಹ್ಮಾಂಡ ಪುರಾಣದಲ್ಲಿ ಉಮಾಮಹೇಶ್ವರ ಸಂವಾದ ರೂಪದಲ್ಲಿ ಇರುವ “ಅಧ್ಯಾತ್ಮ ರಾಮಾಯಣ”ಕ್ಕೆ ವ್ಯಾಖ್ಯಾನವನ್ನು ರಚಿಸಿದ್ದಾರೆಂದು ತಿಳಿದುಬರುತ್ತದೆ. 


ಮುದ್ದಣ್ಣ ಅಥವಾ ನಂದಳಿಕೆ ಲಕ್ಷ್ಮೀನಾರಣಪ್ಪನ ರಾಮಾಯಣ ಕೃತಿಗಳು: 1887ರಲ್ಲಿ ಜೀವಿಸಿದ್ದ ಉಡುಪಿಯ ಸಮೀಪದ ನಂದಳಿಕೆ ಗ್ರಾಮದ ಲಕ್ಷ್ಮೀನಾರಣಪ್ಪನೆಂಬ ಕವಿಯು ಮುದ್ದಣ್ಣ ಎಂಬ ಕಾವ್ಯನಾಮದಿಂದ ರಾಮಾಯಣದ ಕಥಾನಕಗಳನ್ನು ಗದ್ಯಪದ್ಯದಲ್ಲಿ ರಚಿಸಿದ್ದಾನೆ.


ಮುದ್ದಣ್ಣ ವಿರಚಿತ “ಶ್ರೀರಾಮ ಪಟ್ಟಾಭಿಷೇಕ”ವು ವಾರ್ಧಕ ಷಟ್ಪದಿಯಲ್ಲಿದ್ದು, 5 ಸಂಧಿ, 247 ಪದ್ಯಗಳಿಂದ ಕೂಡಿದೆ. ಶ್ರೀರಾಮನು ಲಂಕೆಯಲ್ಲಿ ವಿಭೀಷಣನಿಗೆ ಪಟ್ಟಾಭಿಷೇಕವನ್ನು ಮಾಡಿ, ಪುಷ್ಪಕ ವಿಮಾನದಲ್ಲಿ ಪರಿವಾರದೊಡನೆ ನಂದೀಗ್ರಾಮಕ್ಕೆ ಬಂದು ಭರತನಿಗೆ ದರ್ಶನವನ್ನು ನೀಡಿ, ಅಯೋಧ್ಯೆಗೆ ಹೋಗಿ ಪಟ್ಟಾಭಿಷಿಕ್ತನಾದ ಕಥೆಯೇ ಈ ಕಾವ್ಯದ ವಸ್ತು. ಕವಿಯು ಸಿಂಹಾವಲೋಕನ ಕ್ರಮದಿಂದ ಇಡೀ ರಾಮಾಯಣದ ಕಥೆಯನ್ನು ಸಂಕ್ಷಿಪ್ತವಾಗಿ ಹೇಳಿದ್ದಾನೆ. “ರಾಮಾಶ್ವಮೇಧ” ಮುದ್ದಣ್ಣನ ಗದ್ಯ ಕೃತಿ. 16 ಆಶ್ವಾಸಗಳಲ್ಲಿ ರಚಿತವಾಗಿರುವ ಕೃತಿಗೆ  ಶೇಷ ರಾಮಾಯಣವೆಂಬ ಹೆಸರೂ ಇದೆ. ಪದ್ಮಪುರಾಣದಲ್ಲಿ ನಿರೂಪಿತವಾಗಿರುವ ಉತ್ತರಕಾಂಡದ ಕಥೆಯನ್ನು ಈ ಕೃತಿ ಒಳಗೊಂಡಿದೆ. ಶ್ರೀರಾಮನು ಲೋಕಾಪವಾದವನ್ನು ಮನ್ನಿಸಿ ಸೀತೆಯನ್ನು ಪರಿತ್ಯಾಗ ಮಾಡಿ ನಂತರ ಅಶ್ವಮೇಧಯಾಗವನ್ನು ಮಾಡಿ, ಸೀತೆಯನ್ನು ಮಕ್ಕಳಾದ ಲವಕುಶರನ್ನು ಮರಳಿ ಪಡೆದ ಕಥೆಯೇ ಈ ಗದ್ಯಕೃತಿಯ ವಸ್ತು. ಮುದ್ದಣ್ಣ ಮನೋರಮೆಯರ ಸಲ್ಲಾಪದಿಂದ ಈ ಕಾವ್ಯ ಆರಂಭವಾಗುತ್ತದೆ.


“ಅದ್ಭುತರಾಮಾಯಣ”ವು ಮುದ್ದಣ್ಣನ ಇನ್ನೊಂದು ಕೃತಿ. ಇದು ಶಾಕ್ತ ಸಂಪ್ರದಾಯದ ರಾಮಾಯಣ ಕೃತಿ. ರಾಮನಿಗೂ ಕೂಡಾ ಸಂಹರಿಸಲು ಅಸಾಧ್ಯವಾದ ಸಹಸ್ರ ಕಂಠ ರಾಮನನ್ನು ಸೀತೆಯು ಶಕ್ತಿಯ ಅವತಾರವನ್ನು ತಾಳಿ ಸಂಹರಿಸುವ ಕಥಾವಸ್ತು ಇದರ ಕೃತಿ. ಇದು ಮುದ್ದಣ್ಣನ ಮೊದಲ ಕೃತಿ.


ಹಸ್ತಪ್ರತಿಯಲ್ಲಿರುವ ಕನ್ನಡ ರಾಮಾಯಣ ಕೃತಿಗಳು: 18-19ನೆಯ ಶತಮಾನದಲ್ಲಿ ಅನೇಕ ಕವಿಗಳು ರಾಮಾಯಣವನ್ನು ರಚಿಸಿರುವುದು ಕವಿಚರಿತ್ರೆಯಿಂದ ತಿಳಿದುಬರುತ್ತದೆ. ಬಹುಶಃ ಈ ಕೃತಿಗಳು ಹಸ್ತಪ್ರತಿಯ ರೂಪದಲ್ಲಿದ್ದು ಯಾವುವೂ ಮುದ್ರಣವಾಗಿ ದೊರೆಯುವುದಿಲ್ಲ. ಮೈಸೂರು ಅರಸು ಮನೆತನದ ಶಾಲ್ಯದ ಕೃಷ್ಣರಾಜನು (1748) ಅಧ್ಯಾತ್ಮ ರಾಮಾಯಣದ ಉತ್ತರಕಾಂಡಕ್ಕೆ ಕನ್ನಡದಲ್ಲಿ ಟೀಕೆಯನ್ನು ರಚಿಸಿದ್ದಾನೆ.  ಮದ್ರಾಸ್ ಪ್ರೆಸಿಡೆನ್ಸಿ ಕಾಲೇಜಿನಲ್ಲಿ ಪಂಡಿತನಾಗಿದ್ದ ಸಿದ್ಧಾಂತಿ ಸುಬ್ರಹ್ಮಣ್ಯ ಶಾಸ್ತ್ರಿಯವರು ಅಚ್ಚಗನ್ನಡ ರಾಮಾಯಣವನ್ನು ಷಟ್ಪದಿಯಲ್ಲಿ ರಚಿಸಿದ್ದು ಇದು ಅಸಮಗ್ರವಾಗಿದೆ ಎಂದು ತಿಳಿದುಬರುತ್ತದೆ. ನಂಜನಗೂಡು ಸುಬ್ಬಾಶಾಸ್ತ್ರಿ ಎಂಬ ಕವಿಯು ಸೀತಾಚರಿತ್ರೆ, ಉತ್ತರ ಸೀತಾಚರಿತ್ರೆ ಎಂಬ ಷಟ್ಪದಿಯ ಕೃತಿಗಳನ್ನು ರಚಿಸಿದ್ದಾನೆ. ಹೀಗೆ ಕನ್ನಡ ಭಾಷೆಯಲ್ಲಿ ಇನ್ನೂ ಅನೇಕ ರಾಮಾಯಣ ಕೃತಿಗಳು, ನಾಟಕಗಳು ರಚಿತವಾಗಿದ್ದು ಅಪ್ರಕಟಿತವಾಗಿವೆ. 


ಮಹಾಕವಿ ಕುವೆಂಪು ಅವರ ರಾಮಾಯಣ ದರ್ಶನಂ:

ಆಧುನಿಕ ಕನ್ನಡ ಸಾಹಿತ್ಯದ ಮೊಟ್ಟಮೊದಲ ಮಹಾಕಾವ್ಯ ಮಹಾಕವಿ ಕುವೆಂಪು ಅವರ ರಾಮಾಯಣ ದರ್ಶನಂ. ಕುವೆಂಪು ಅವರು ಇದನ್ನು ಸರಳ ರಗಳೆಯ ಪರಿಷ್ಠಕರ ರೂಪದವಾದ ಮಹಾಛಂದಸ್ಸಿನಲ್ಲಿ ರಚಿಸಿದ್ದಾರೆ. ಆಧುನಿಕ ಕನ್ನಡ ಕಾವ್ಯ ಪರಂಪರೆಯಲ್ಲಿ ಈ ಕೃತಿಯು ಮಹಾಕಾವ್ಯಗಳಿಗೆ ನಾಂದಿ ಹಾಡಿದೆ. ವಾಲ್ಮೀಕಿ ಮಹರ್ಷಿಗೆ ಬ್ರಹ್ಮವಾಣಿಯಿಂದ ಸಾಕ್ಷಾತ್ಕಾರವಾದಂತೆ ಮಹಾಕವಿ ಕುವೆಂಪು ಅವರಿಗೂ ನವನವೋನ್ಮೇಷಶಾಲಿನಿಯಾದ ದಿವ್ಯ ಪ್ರತಿಭೆ, ದಿವ್ಯ ದರ್ಶನವು ಗೋಚರಿಸಿದೆ. ಈ ಕೃತಿಯಲ್ಲಿ 22296 ಮಹಾಛಂದಸ್ಸಿನ ಪಂಕ್ತಿಗಳಿವೆ.. ಮಾಸ್ತಿ ವೆಂಕಟೇಶ ಅಯ್ಯಂಗಾರ್ ಅವರ ಸರಳರಗಳೆಯ ರೂಪದ ಶ್ರೀರಾಮಪಟ್ಟಾಭಿಷೇಕ ಕೃತಿಯು 9053 ಪಂಕ್ತಿಗಳನ್ನು ಒಳಗೊಂಡ ಜೀವನದ ಉನ್ನತ ಮೌಲ್ಯಗಳನ್ನು ಸಾಕ್ಷಾತ್ಕರಿಸಿರುವ ಕೃತಿಯಾಗಿದೆ. ವೀರಪ್ಪ ಮೊಯಿಲಿ ಅವರ ಶ್ರೀ ರಾಮಾಯಣ ಮಹಾನ್ವೇಷಣಂ ಕೃತಿಯು 43925 ಪಂಕ್ತಿಗಳನ್ನು ಒಗೊಂಡ ಮಹಾಕಾವ್ಯವಾಗಗಿದ್ದು ನಮ್ಮ ದೇಶದ ಇಂದಿನ ಸಾಮಾಜಿಕ, ಸಾಂಸ್ಕøತಿಕ, ಶೈಕ್ಷಣಿಕ ಸ್ಥಿತಿಗತಿಗಳನ್ನು ಚಿಕಿತ್ಸಕ ದೃಷ್ಟಿಯಿಂದ ನೋಡಿ ಅವುಗಳನ್ನು ರಾಮಾಯಣದೊಡನೆ ಸಮೀಕರಿಸಿ ರಚಿತವಾಗಿರುವ ಮಹಾಕಾವ್ಯವಾಗಿದೆ.




Dr. S. Nanjunda Swamy, M.A., M.Phil, Ph.D., Dip-in-Epigraphy,

Retd. Assistant Editor, Karnataka Legislative Council,

No.46, 5th Main, 7th Cross,  Akshaya Nagara West, 

Beguru Post, Bangalore 560 114.


ಲೇಖಕರ ಸಂಕ್ಷಿಪ್ತ ಪರಿಚಯ:

ಸಂತೇಬಾಚಹಳ್ಳಿ ಡಾ.ಎಸ್.ನಂಜುಂಡಸ್ವಾಮಿ, ಎಂ.ಎ., ಎಂ.ಫಿಲ್., ಪಿಎಚ್.ಡಿ., ಡಿಪ್-ಇನ್-ಎಪಿಗ್ರಫಿ. ನಿವೃತ್ತ ಮುಖ್ಯ ವರದಿಗಾರ ಮತ್ತು ಸಹಾಯಕ ಚರ್ಚಾ ಸಂಪಾದಕ. ಕರ್ನಾಟಕ ವಿಧಾನ ಪರಿಷತ್ತು, ಮಂಡ್ಯ ಜಿಲ್ಲೆಯ ಶಾಸನಗಳು- ಒಂದು ಅಧ್ಯಯನ ಪಿಎಚ್.ಡಿ., ಮಹಾಪ್ರಬಂಧ, ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ, ಮೈಸೂರು 2012.

ಅತ್ಯುತ್ತಮ ಪ್ರಬಂಧವೆಂದು, ಪತ್ರಿಕೆಗಳಿಂದ, ವಿಶ್ವವಿದ್ಯಾನಿಲಯದಿಂದ ವಿದ್ವಾಂಸರಿಂದ ಪರಿಗಣಿತವಾಗಿದೆ. ನಾಡಪ್ರಭು ಕೆಂಪೇಗೌಡ ಪ್ರಶಸ್ತಿ 2023, ಡಾ.ರಾಜ್‍ಕುಮಾರ್ ಹಾಗೂ ಡಾ. ದೊಡ್ಡರಂಗೇಗೌಡ ಪ್ರಶಸ್ತಿ ಧ್ರುವತಾರೆ ಸಿನಿ ಮಾಸಪತ್ರಿಕೆಯ ದಶಮಾನೋತ್ಸವ ನೀಡಿ ಗೌರವಿಸಲಾಗಿದೆ.

ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter   .



1 Comments

  1. ತುಂಬಾ ಚೆನ್ನಾಗಿದೆ 👏👏👏👏

    ReplyDelete

Post a Comment

Post a Comment

Previous Post Next Post