ಶ್ರೀರಾಮ ಕಥಾ ಲೇಖನ ಅಭಿಯಾನ 55: ರಾಮನ ಕುರಿತಾದ ಸ್ತೋತ್ರ ಸಾಹಿತ್ಯ

Upayuktha
0


- ಭಾರತಿ ಪ್ರಸಾದ್


ವೇದ ಸಮ್ಮತವಾದ ನಮ್ಮ ಸನಾತನ ಹಿಂದೂ ಧರ್ಮದಲ್ಲಿ ಭಗವಂತನು ಒಬ್ಬನೇ, ಆ ಭಗವಂತನನ್ನು ಮಾನವರು ತಮ್ಮ ತಮ್ಮ ಜೀವಸಂಸ್ಕಾರಕ್ಕನುಗುಣವಾಗಿ ರಾಮ, ಕೃಷ್ಣ, ದೇವಿ ಸೂರ್ಯ, ಮಾರುತಿ ಹೀಗೆ ಅನೇಕ ರೂಪಗಳಲ್ಲಿ ಉಪಾಸನೆ ಮಾಡುವರು ಸೃಷ್ಠಿ ಸ್ಥಿತಿ ಲಯ ಕರ್ತನಾಗಿ ಭಗವಂತ ಬ್ರಹ್ಮ, ವಿಷ್ಣು, ಮಹೇಶ್ವರ ರೂಪಗಳನ್ನು ಸ್ವೀಕರಿಸಿದ್ದಾನೆ. ಸ್ಥಿತಿ ಕರ್ತ ವಿಷ್ಣುವಿನ ಅವತಾರಗಳು ಅನೇಕವಿದ್ದರೂ ಅದರಲ್ಲಿ ದಶಾವತಾರಗಳನ್ನು ಮುಖ್ಯವಾಗಿ ಪರಿಗಣಿಸುತ್ತೇವೆ. ಈ ದಶಾವತಾರಗಳಲ್ಲಿ 7ನೇಯ ಅವತಾರ “ರಾಮಾವತಾರ” ಇದು ಪರಿಪೂರ್ಣಾವತಾರ.


ಆಸೇತು ಹಿಮಾಚಲವಷ್ಟೇ ಅಲ್ಲ, ಪ್ರಪಂಚದಾದ್ಯಂತ ಅನೇಕಾನೇಕ ಋಷಿಪುಂಗವರು, ಭಾಗವತಕಾರರು, ಆಚಾರ್ಯರೂ, ದಾಸ ಶ್ರೇಷ್ಠರೂ, ದಾರ್ಶನಿಕರು, ವಚನಕಾರರು, ಕವಿಗಳು ಅಷ್ಟೇ ಅಲ್ಲ, ಜಾನಪದರೂ ಸಹಾ ರಾಮನನ್ನು ಕೇವಲ ಸಂಸ್ಕೃತದಲ್ಲಷ್ಟೇ ಅಲ್ಲ ಅನೇಕಾನೇಕ ಭಾಷೆಗಳಲ್ಲಿ ಅವರವರ ಸ್ಥಾಯಿಗನುಸಾರ, ಭಾವಾನುಗುಣವಾಗಿ ಸ್ತುತಿಸಿ ಕೀರ್ತಿಸಿದ್ದಾರೆ, ಹಾಡಿ ಹೊಗಳಿದ್ದಾರೆ ಭಜಸಿ ನರ್ತಿಸಿದ್ದಾರೆ. ತ್ಯಾಗರಾಜರ ರಾಮನ ಕೀರ್ತನೆಗಳನ್ನು ಒಟ್ಟುಗೂಡಿಸಿದರೆ ಅದು ಒಂದು ರಾಮೋಪನಿಷತ್ತಾಗಬಲ್ಲದು.


“ಸ್ತೋತ್ರ”ಗಳೆಂದರೆ ಭಗವಂತನ ಶಬ್ದರೂಪಗಳು ಇವು ಸಾಹಿತ್ಯಾಕಾಶದ ವಿನುಗುತಾರೆಗಳಂತೆ, ಸಾಹಿತ್ಯ, ಸಾಗರದ ಅಣಿಮುತ್ತುಗಳಂತೆ, ಸಾರಸ್ವತ ಮಂದಿರದ ರತ್ನಮಂಗಲ ಕಲಶಗಳು ಸರಳವಾದ ರಚನೆಗಳಲ್ಲಿ ಗಹನವಾದ ಅರ್ಥವನ್ನು ಹೊಂದಿದ್ದು ಸರ್ವಶಕ್ತ ಪರಮಾತ್ಮನ ನಾಮ, ರೂಪ, ಗುಣ, ಲೀಲೆ, ತತ್ವಗಳನ್ನು ತಿಳಿಸುತ್ತಾ ಮನೋಹಾರಿಯಾಗಿಯೂ, ಚೇತೋಹಾರಿಯಾಗಿಯೂ ಇರುತ್ತವೆ. ಅಷ್ಟೇ ಅಲ್ಲ ಜ್ಞಾನ ಪ್ರದವಾಗಿರುತ್ತವೆ.


ಒಂದೊಂದು ಸ್ತೊತ್ರವೂ ತನ್ನದೇ ಆದ ವಿಶಿಷ್ಟತೆಯನ್ನು ಹೊಂದಿರುತ್ತದೆ. ಎಲ್ಲವೂ ಮಧುರಾನುಭವವೇ, ಅನುಭವಿಸುವ ರಸಿಕತೆ ಇದ್ದಲ್ಲಿ ಎಲ್ಲವೂ ರಸಭರಿತವೇ.


ಲಾವಣ್ಯೈಕಸಾರನೂ, ಲೋಕಾಭಿರಾಮನೂ, ಮರ್ಯಾದಾ ಪುರುμÉೂೀತ್ತಮನೂ ಆದ ಶ್ರೀರಾಮನ ಸ್ತೊತ್ರ ಸಾಹಿತ್ಯ ಅಪಾರ ಅದು ಒಂದು ಮಹಾ ಸಿಂಧು ಇದರ ಉದ್ದಗಲ ಆಳಗಳನ್ನು ಅರಿಯಲಾಗುವುದಿಲ್ಲ ಅಳೆಯಲಾಗುವುದಿಲ್ಲ. ಆ ಸಿಂಧುವಿನ ಕೆಲವು ಬಿಂದುಗಳನ್ನು ಸವಿಯುವ ಪ್ರಯತ್ನ ಇಲ್ಲಿ ಮಾಡಲಾಗಿದೆ. 

ಪ್ರಥಮವಾಗಿ ಹೇಳಬೇಕೆನಿಸುತ್ತಿರುವ ಸ್ತೋತ್ರ “ಶುದ್ದಬ್ರಹ್ಮ ಪರಾತ್ಪರ ರಾಮ” ಎಂಬ “ನಾಮರಾಮಾಯಣ” ಇದರ ಪ್ರತಿಯೊಂದು ಸಾಲು "ರಾಮ" ಎಂಬ ಶಬ್ದದಿಂದ ಕೊನೆಗೊಳ್ಳುತ್ತಾ ರಾಮಾಯಣದ ಸಪ್ತಕಾಂಡಗಳನ್ನೂ ಅಧ್ಭುತವಾಗಿ ರಚಿಸಿದ್ದಾರೆ. ಈ ಪುರಾತನ ಜನಜ್ಜನಿತ ಸ್ತೋತ್ರವನ್ನು ಸಂಗೀತ ರಾಗ ಜ್ನಾನವಿಲ್ಲದವರೂ ಸಹಾ ಹಾಯಾಗಿ, ಭಾವಪೂರ್ಣವಾಗಿ ಹಾಡಿಕೊಳ್ಳಬಹುದಾಗಿದೆ.


ಬುಧಕೌಶಿಕ ಋಷಿಗಳು ರಚಿಸಿರುವ “ರಾಮರಕ್ಷಾಸ್ತೋತ್ರ” ದಲ್ಲಿ ರಾಮನ ಹಲವಾರು ನಾಮಗಳನ್ನು ಹೇಳುತ್ತಾ ಆ ನಾಮಗಳೆಲ್ಲಾ ನಮ್ಮ ದೇಹದ ವಿವಿಧ ಅಂಗಗಳನ್ನು ರಕ್ಷಿಸಲಿ ಎಂದೂ, ಆ ರಾಮನ ನಾಮಗಳು ನಮ್ಮನ್ನು ಕವಚ ರೂಪದಲ್ಲಿ ಕಾಪಾಡಲಿ ಎಂದೂ ಪ್ರಾರ್ಥಿಸಿ ರಾಮನ ಗುಣಾಗಾನ ಮಾಡಲಾಗಿದೆ. 


“ಅಹಲ್ಯಾ ಕೃತ ರಾಮ ಸ್ತೋತ್ರ” ದಲ್ಲಿ ಅಹಲ್ಯಾ ಮಾತೆ ಶಿಲೆಯಂತಿದ್ದ ತನ್ನ ಸಕಲೇಂದ್ರಿಯಗಳನ್ನೂ ರಾಮನ ಚರಣರಜಗಳು ಸಚೇತನಗೊಳಿಸಿದ್ದನ್ನು ಸ್ತುತಿಸುತ್ತಾ ರಾಮನ ಪದಸರೋಜಗಳನ್ನು ತನ್ನ ಹೃದಯದಲ್ಲಿ ಭಜಿಸುವೆ ಎಂದು ಅನೇಕ ಬಾರಿ ನಮಿಸಿ ರಾಮನ ದಿವ್ಯ ಗುಣಗಳನ್ನು ಬಹು ಸೊಗಸಾಗಿ ಮಾರ್ಮಿಕವಾಗಿ ವಿವರಿಸಿರುವಳು ಸ್ತುತಿಸಿರುವಳು.


“ರಾಮ ಭುಜಂಗ ಪ್ರಯಾತ” ಸ್ತೋತ್ರದಲ್ಲಿ ಶಂಕರಾಚಾರ್ಯರು ರಾಮನನ್ನು ಸಚ್ಚಿದಾನಂದ ರೂಪನೆಂದೂ, ನಿರಾಕಾರನೆಂದೂ, ತಾರಕರಾಮನೆಂದೂ, ಕೋಟಿ ಸೂರ್ಯಪ್ರಕಾಶಮಾನನೆಂದೂ ಹೇಳುತ್ತಾ ತನ್ನ ಮನೋಮಂದಿರದಲ್ಲಿ ರಾಮನು ನೆಲೆಸಬೇಕೆಂದು ಪ್ರಾರ್ಥಿಸಿದ್ದಾರೆ.


ಶೃಂಗೇರಿ ಜಗದ್ಗರು ಶ್ರೀ ಶ್ರೀ ಶ್ರೀ ಭಾರತೀತೀರ್ಥ ಸ್ವಾಮಿ ವಿರಚಿತ ರಾಮಗೀತೆಯಲ್ಲಿ ರಾಮಾಯಣದ ವಿವಿಧ ಘಟ್ಟಗಳನ್ನು ಕನ್ನಡದಲ್ಲೇ ರಚಿಸಿ ತಮ್ಮನ್ನು ಉದ್ಬರಿಸಬೇಕೆಂದು ಶ್ರೀಗಳು ರಾಮನನ್ನು ಪ್ರಾರ್ಥಿಸಿದ್ದಾರೆ.

ವಾಲ್ಮೀಕಿ ವಿರಚಿತ ಶ್ರೀಮದ್ ರಾಮಾಯಣದ 24,000 ಶ್ಲೋಕಗಳಲ್ಲಿ ಸಾವಿರಕ್ಕೊಂದಂತೆ 24 ಶ್ಲೋಕಗಳನ್ನು ಆರಿಸಿ ಆ ಶ್ಲೋಕಗಳ ಮೊದಲಕ್ಷರಗಳನ್ನು ಸೇರಿಸಿದರೆ ಗಾಯಿತ್ರಿ ಮಂತ್ರದ 24 ಅಕ್ಷರಗಳು ಬರುವಂತೆ “ಗಾಯಿತ್ರಿ ರಾಮಾಯಣ” ಚಿತ್ರಿಸಲಾಗಿದೆ.


“ಬ್ರಹ್ಮಕೃತ ರಾಮಸ್ತುತಿ” ಯಲ್ಲಿ ಸಾಕ್ಷಾತ್ ಬ್ರಹ್ಮ ದೇವರೇ ಗುಣಾಭಿರಾಮನ ಗುಣಗಳನ್ನು ಹೇಳುತ್ತಾ ಲಯಬದ್ದವಾಗಿ ಕೀರ್ತಿಸಿದ್ದಾರೆ ಇದರ ಶ್ರಾವ್ಯ ಗುಣ ಅತಿ ಮಧುರ. “ರಾಮದಂಡಕ”ವನ್ನು ಬದ್ರಾಚಲರಾಮದಾಸರು ಅತಿ ಸುಂದರವಾಗಿ ರಾಮನು ಶರಣಾಗತ ರಕ್ಷಕನೆಂದು ಪ್ರತಿಪಾದಿಸಿ ರಾಮನ ಪಾದಾರವಿಂದಗಳಿಗೇ ಆ ದಂಡಕವನ್ನು ಅರ್ಪಿಸಿದ್ದಾರೆ.


ಭಕ್ತಾಗ್ರೇಸರ ಹನುಮಂತ ವಿರಚಿತ “ಸೀತಾರಾಮ ಸ್ತೋತ್ರ” ದಲ್ಲಿ ಸೀತಾರಾಮರ ಗುಣಗಾನ ಮಾಡುತ್ತಾ ಆ ಸ್ತೋತ್ರ ಪಠಿಸಿದವರ ಸರ್ವ ಕಾಮನೆಗಳೂ ಪೂರ್ಣಗೊಳ್ಳುವುದೆಂಬ ಅಭಯವಿದೆ. “ಸಪ್ತರ್ಷಿ ರಾಮಾಯಣ ಸ್ತೋತ್ರ” ದಲ್ಲಿ ಕಾಷ್ಯಪ, ಅತ್ರಿ, ಭಾರಧ್ವಾಜ ವಿಶ್ವಾಮಿತ್ರ ಗೌತಮ, ಜಮದಗ್ನಿ, ವಸಿಷ್ಠ ಋಷಿಗಳು ಅವರವರ ದಿವ್ಯ ಜ್ಞಾನದಿಂದ ಶ್ರೀರಾಮನನ್ನು ಅಧ್ಭುತವಾಗಿ ಸ್ತುತಿಸಿದ್ದಾರೆ.


ಆಧ್ಯಾತ್ಮ ರಾಮಾಯಣದ ಪ್ರಾರಂಭದಲ್ಲೇ ಇರುವ ರಾಮ ಹೃದಯದಲ್ಲಿ ಸಾಕ್ಷಾತ್ ಶ್ರೀರಾಮನೇ ತನ್ನ ತತ್ಪೋಪದೇಶವನ್ನು ಮಾರುತಿಗೆ ಮಾಡುವಂತೆ ಸೀತಾ ಮಾತೆಗೆ ತಿಳಿಸಿದಾಗ ಸೀತೆ ಮಾರುತಿಯನ್ನು “ವತ್ಸ” ಎಂದು ಸಂಭೋದಿಸಿ ರಾಮನ ಸಚ್ಚಿದಾನಂದ ಪರಬ್ರಹ್ಮ ತತ್ವವನ್ನು ಸುಮಾರು 20, 22 ಶ್ಲೋಕಗಳಲಿ ಅತ್ಯಧ್ಬುತವಾಗಿ ಉಪದೇಶಿಸಿದ್ದಾರೆ. ಕೇವಲ ಮಾನವರೇ ಅಲ್ಲ ದಿವ್ಯ ಪಕ್ಷಿ ಜಟಾಯು ತುಳಸೀದಾಸರ “ರಾಮಚರಿತ ಮಾನಸ” ದಲ್ಲಿ ಜಯ ಜಯರೂಪ ಅನೂಪ ಎಂದು ಪ್ರಾರಂಭಿಸಿ ರಾಮನನ್ನು ಹಲವು ರೀತಿಯಲ್ಲಿ ನಮಸ್ಕರಿಸುತ್ತಾ ವೇದವೇದ್ಯ ಶ್ರೀರಾಮನ ತತ್ವಗಳನ್ನು ಅನುಪಮಾನವಾಗಿ ವರ್ಣಿಸಿ ಜಟಾಯುವಿನಿಂದ ಕೀರ್ತಿಸಲಾಗಿದೆ.


ರಾಮಚರಿತ ಮಾನಸದಲ್ಲೇ ಕಿಷ್ಕಿಂಧಾ ಕಾಂಡದ ಪ್ರಾರಂಭದಲ್ಲಿ ತುಳಸಿದಾಸರು ರಾಮಲಕ್ಷ್ಮಣರನ್ನು ಸ್ತುತಿಸೆಂದು ತಮ್ಮ ಮನಸ್ಸನ್ನು ತಾವೇ ಪ್ರೇರೇಪಿಸುತ್ತಾ ಭಗವತ್  ಸ್ತುತಿಯನ್ನು ರಚಿಸಿದ್ದಾರೆ. ಇಲ್ಲೇ ಲಂಕಾಕಾಂಡದಲ್ಲಿ ಇಂದ್ರನು ರಾಮನ ಮಹಿಮೆಗಳನ್ನು ಕೊಂಡಾಡುತ್ತಾ “ಅವಧ” ಭಾಷೆಯಲ್ಲಿ ಸ್ತುತಿಸಿರುವ ಸ್ತೋತ್ರ ಮಹಿಮಾನ್ವಿತ.


ರಾಮ ಚರಿತ ಮಾನಸದ ಉತ್ತರ ಕಾಂಡದಲ್ಲಿ ವೇದಗಳೇ ಮೂರ್ತಿವೆತ್ತು ಬಂದು ರಾಮನಿಗೆ ಜಯಕಾರ ಹೇಳುತ್ತಾ ರಾಮನ ಭಕ್ತವಾತ್ಸಲ್ಯತೆಯನ್ನು ವಿವರಿಸಿ ಪರಬ್ರಹ್ಮ ರಾಮನ ಯಶೋಗಾತೆಯನ್ನು ಗಾನ ಮಾಡುತ್ತಾ ರಾಮನನ್ನು ಅನಾದಿ, ಅವ್ಯಕ್ತ  ಗುಣಾತೀತನೆಂದು ನಮಿಸಿ ಆತನ ಪದಗಳಲ್ಲಿ ಸ್ಥಾನವನ್ನು ಕರುಣಿಸೆಂದು ಭಕ್ತಿಯಿಂದ ನಮಿಸಿವೆ.


ನಂತರ ಸಾಕ್ಷಾತ್ ಪರಮೇಶ್ವರನು ಅಯೋಧ್ಯ ಪತಿಯನ್ನು ಭಜಿಸಿ ಅಜೇಯ ರಘುವೀರನನ್ನು ಭವರೋಗಬೇಷಜ ನೆಂದು ಹೇಳುತ್ತಾ ಸ್ತುತಿಸಿದ್ದಾರೆ. ರಾಮನ ಸಹಸ್ರನಾಮ ಸ್ರೋತ್ರದಲ್ಲಂತೂ 1000 ನಾಮಗಳಿಂದ ರಾಮಭದ್ರನನ್ನು ಹತ್ತು ಹಲವಾರು ಕೋನಗಳಿಂದ ಸ್ತುತಿಸಲಾಗಿದೆ. ರಾಮಾಯಣದ ಜಯ ಮಂತ್ರ ನಾಲ್ಕೇ ಶ್ಲೋಕಗಳಾದರೂ ಸುಂದರಕಾಂಡದ ಸಾರವನ್ನೆಲ್ಲಾ ಹುದುಗಿಸಿ ಪಠಿಸಿದವರ ಸರ್ವ ಕಾಮನೆಗಳನ್ನೂ ಈಡೇರುವಂತೆ ಮಾಡುತ್ತದೆ.


“ಏಕಶ್ಲೋಕಿ ರಾಮಾಯಣ”, “ಪೂರ್ವಂ ರಾಮಂ”, “ರಾಮಾಯ ರಾಮಭದ್ರಾಯ”, “ಆಪದಾಮಪ ಹರ್ತಾರಂ” ನೋಡಲು ಚಿಕ್ಕಚಿಕ್ಕ ಶ್ಲೋಕಗಳಾದರೂ ಅಪಾರ ಮಹಿಮೆಯುಳ್ಳ ಸ್ತೋತ್ರಗಳಾಗಿವೆ. 

“ರಾಮ ಮಂಗಳಾಶಾಸನಮ್” ಪತ್ರಿ ಶ್ಲೋಕವೂ ರಾಮನಿಗೆ ಮಂಗಳವನ್ನು ಹೇಳುತ್ತಾ ಸಮಗ್ರ ರಾಮಾಯಣ ಗಾತೆಯನ್ನು ಹೇಳುತ್ತದೆ. ವಿಷ್ಣುಸಹಸ್ರನಾಮ ಸ್ತೋತ್ರದಲ್ಲಿ ಶ್ರೀ ರಾಮ ರಾಮೇತಿ ಎಂಬ ಶ್ಲೋಕವನ್ನು 3 ಬಾರಿ ಪಠಿಸಿದಾಗ ಸಹಸ್ರನಾಮ ಸ್ತೋತ್ರವನ್ನು ಪಠಿಸಿದ ಫಲ ಪ್ರಾಪ್ತಿಯಾಗುವುದೆಂದು ಈಶ್ವರನಿಂದ ಹೇಳಲ್ಪಟ್ಟಿದೆ. 

“ರಾಮ ಭುಜಂಗ”, “ರಾಮಾಷ್ಟಕ”, “ರಾಮ ಪಂಚರತ್ನ”, “ರಘುವೀರ ಗದ್ಯ”, “ರಾಮ ಚಾಲೀಸ”, “ರಾಮವೇದಪಾದಸ್ತೋತ್ರ”, “ದಾಶರಥೀ ಶತಕ”, “ಆಪದುಧ್ದಾರ ಸ್ತೋತ್ರ” ಹೀಗೆ ಹೆಸರಿಸುತ್ತಾ ಹೋದರೆ ರಾಮಸ್ತೋತ್ರಗಳು ಆಪಾರವಾಗಿದೆ.


ಸ್ವಾಮಿ ವೇದಾಂತ ದೇಶಿಕರ್ ರಚಿತ ರಘುವೀರ ಗದ್ಯ- ರಘುಕುಲ ತಿಲಕ ಶ್ರೀರಾಮಚಂದ್ರನ ಬಹು ಶ್ರೇಷ್ಠ ಸ್ತೋತ್ರ. ಈ ಗದ್ಯವು ಬಹಳ ಕ್ಲಿಷ್ಟವಾದ ಪದಗಳನ್ನು ಹೊಂದಿಲ್ಲವಾದರೂ ವೇಗವಾಗಿ ಲಯಬದ್ಧವಾಗಿ ಪಠಿಸುವುದು ಸುಲಭವೇನಲ್ಲ. ಇದರ ಶ್ರಾವ್ಯ ಗುಣ ಬಹು ಅಂದವಾಗಿದ್ದು, ಇದರ ಪಠಣದಿಂದ ಸಂಸ್ಕøತ ಭಾಷೆಯ ಉಚ್ಛಾರಣೆ ಸ್ಪಷ್ಟವಾಗುವುದು, ಅಷ್ಟೇ ಅಲ್ಲ ಶ್ವಾಸ ನಿಯಂತ್ರಿಸಲ್ಪಡುವುದು. ಅಂದರೆ ಒಂದು ವಿಧವಾದ ಪ್ರಾಣಾಯಾಮವಾದಂತಾಗುವುದು. ಹೆಸರೇ ಸೂಚಿಸುವಂತೆ ಇದು ಒಂದು ವಿಧದ ಗದ್ಯ ರೂಪದಲ್ಲಿದ್ದು ರಾಮಾಯಣದ ಸಪ್ತಕಾಂಡಗಳನ್ನೂ ವಿವರಿಸುತ್ತದೆ. ಕೋದಂಡರಾಮನ ಮೂರ್ತಿ ಕಣ್ಣಿಗೆ ಕಟ್ಟುತ್ತದೆ. ರಾಜರ್ಷಿ ರಾಮನ ಕಲ್ಯಾಣ ಗುಣಗಳನ್ನೂ, ಪಿತೃವಾಕ್ಯ ಪರಿಪಾಲನೆಯನ್ನೂ, ಮರ್ಯಾದಾ ಪುರುಷೋತ್ತಮನು ಆಚರಿಸಿದ ಮಾನವನ ಸಕಲ ಧರ್ಮಗಳನ್ನೂ ಬೋಧಿಸುತ್ತದೆ. ಮನಃಶಾಂತಿ ಮತ್ತು ಸಕಲ ಭಯನಿರ್ಮೂಲನ ಇದರ ಫಲಶೃತಿ.


ಈ “ರಾಮನ ಕುರಿತಾದ ಸ್ತೋತ್ರಸಾಹಿತ್ಯ” ವಿಷಯದ ಬಗ್ಗೆ ಲೇಖನ ಬರೆಯುವ ಅವಕಾಶವನ್ನು ಕಲ್ಪಿಸಿದ ಶ್ರೀ ರಾಮಕಥಾ ಲೇಖನ ಅಭಿಯಾನಕ್ಕೆ ಕೃತಜ್ಞತಾಪೂರ್ವಕ ವಂದನೆಗಳು ಮತ್ತು ಡಾ|| ಗುರುರಾಜ ಪೋಶಟ್ಟಿಹಳ್ಳಿ ರವರಿಗೆ ನನ್ನ ನಮನಗಳು.




- ಭಾರತಿ ಪ್ರಸಾದ್

ದೂರವಾಣಿ ಸಂಖ್ಯೆ: 8867737375


ಲೇಖಕರ ಸಂಕ್ಷಿಪ್ತ ಪರಿಚಯ:

ಶ್ರೀ ವೆಂಕಟಾಚಲಶಟ್ಟಿ ಮತ್ತು ಶ್ರೀಮತಿ ನಾಗರತ್ನಮ್ಮ ಪುಣ್ಯ ದಂಪತಿಗಳ ಮಗಳಾದ ಭಾರತಿ ಪ್ರಸಾದ್  ಒಬ್ಬ ಉದಯೋನ್ಮುಖ ಬರಹಗಾರ್ತಿ. ಬಿ ಎಸ್.ಸಿ ಪದವೀಧರೆ. ಮನಸ್ಸಿನ ಭಾವನೆಗಳನ್ನು ಹೊರಹಾಕಿ ರಚಿಸಿರುವ ಭಕ್ತಿಗೀತೆಗಳ ಸಂಗ್ರಹ “ಭಾವ ಪುಷ್ಪಾಂಜಲಿ” ಹೆಸರಿನಿಂದ, ಶ್ರೀ ಮದ್ವಾಲ್ಮೀಕಿ ರಾಮಾಯಾಣಾಂತರ್ಗತ ಸುಂದರಕಾಂಡದ ಕನ್ನಡ ಪದ್ಯಗಳು “ಸುಂದರ ಕಾಂಡ ಕನ್ನಡ ಲಘು ಕಾವ್ಯ” ಹೆಸರಿನಿಂದಲೂ ಪ್ರಕಟಗೊಂಡಿವೆ. “ಗಿರಿಜಾ ಕಲ್ಯಾಣ ಗೀತಮಾಲಿಕೆ” ಜನಮನಗಳಿಗೆ ಪ್ರಿಯವಾಗಿವೆ. ಪ್ರಸ್ತುತ ವ್ಯಾಸ ಮಹಾಮುನಿ ವಿರಚಿತ “ಅಧ್ಯಾತ್ಮ ರಾಮಾಯಣ” ವನ್ನು ಕನ್ನಡ ಪದ್ಯಗಳಲ್ಲಿ ಬರೆಯುವ ಪ್ರಯತ್ನ ಮುಂದುವರೆಯುತ್ತಿದೆ. ಇವೆಲ್ಲಕ್ಕೂ ಪ್ರೇರಕವಾಗಿರುವ ತಮ್ಮ ಗುರುಗಳಾದ ಶ್ರೀನಗರ ವಾಸಿ “ಶ್ರೀಮತಿ ವಿಜಯಲಕ್ಷ್ಮಿ” ಮಾಮಿಯವರಿಗೆ ಮನಃಪೂರ್ವಕ ನಮನಗಳನ್ನು ಸಲ್ಲಿಸಿದ್ದಾರೆ.


V BHARATHA LAKSHMI

#5, 19th C Main, Vinodha Colony,

Muneshwara Block Bangalore-560026

Mob No: 8867737375.

Email : bharathi bharathi39754@gmail.com


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter   .

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top