- ಗಣರಾಜ ಕುಂಬ್ಳೆ
ರಾಮಾಯಣವು ನಮ್ಮ ಭಾರತೀಯ ತತ್ತ್ವಶಾಸ್ತ್ರದ ಸಾರ ಸರ್ವಸ್ವ. ಶ್ರೀರಾಮನ ಗುಣಗಣಗಳನ್ನು ಮಹಾತ್ಮನಾದ ಮಹರ್ಷಿ ವಾಲ್ಮೀಕಿಯು, ಅಗಣಿತ ಮಹಿಮನಾದ ಮುನಿ ನಾರದನಿಂದ ಪ್ರಶ್ನಿಸಿ ತಿಳಿದುಕೊಂಡು, ಶ್ರೀರಾಮನ ಗುಣಕಥನವನ್ನು (ಸೃಷ್ಟಿಕರ್ತ ಬ್ರಹ್ಮನ ಆದೇಶದಂತೆ) ರಾಮಾಯಣ ಮಹಾಕಾವ್ಯದ ಮೂಲಕವಾಗಿ ಮಾಡಿದ್ದಾನೆ.
"ವಾಲ್ಮೀಕಿ ಗಿರಿ ಸಂಭೂತಾ ರಾಮಸಾಗರಗಾಮಿನಿ...." ಯಾದ ರಾಮಾಯಣ ಕಾವ್ಯವು ವಾಲ್ಮೀಕಿಯಿಂದ ರಚಿಸಲ್ಪಟ್ಟು, ಭಾರತೀಯರ ಮತ್ತು ಜಾಗತಿಕವಾಗಿ ಎಲ್ಲ ಗುಣವಂತರ ಎದೆಯ ಕಡಲನ್ನು ಸೇರಿದೆ.
ನಮ್ಮ ಕಾವ್ಯಶಾಸ್ತ್ರ ಪರಂಪರೆಯಂತೆ ಯಾವುದೇ ಕಾವ್ಯವನ್ನು ರಚಿಸುವಾಗಲೂ ರಾಮಾಯಣ ಮಹಾಭಾರತ ಭಾಗವತ ಇತ್ಯಾದಿಗಳಿಂದಲೇ ಕಥಾವಸ್ತುವನ್ನು ಆಯ್ದು ಕೊಳ್ಳಬೇಕು ಎಂಬ ನಿಯಮವಿದೆ. ಆದ್ದರಿಂದಲೇ ಬಹುತೇಕ ಎಲ್ಲ ಕವಿಗಳು ಈ ನಿಯಮವನ್ನು ಮೀರದೆ ಕಾವ್ಯಗಳನ್ನು ರಚಿಸುತ್ತಾ ಬಂದಿದ್ದಾರೆ. ರಾಮಾಯಣವು ಜೀವನ ಮೌಲ್ಯಗಳನ್ನು ಸಮೃದ್ಧವಾಗಿ ಒಳಗೊಂಡ ಒಂದು ಸುಂದರ ಕಾವ್ಯ. ರಾಮನ, ಸೀತೆಯ, ಮತ್ತು ರಾಮ ಸಹೋದರರ, ಕಪಿವೀರರ ಗುಣಗಳು ಇಂದಿಗೂ ಆದರ್ಶವೆಂದು ಪರಿಗಣಿಸಲ್ಪಡುತ್ತವೆ. ನಮ್ಮ ನಾಡಿನ ಎಲ್ಲ ಕಲೆಗಳಲ್ಲಿ- ಚಿತ್ರ, ಶಿಲ್ಪ, ಸಂಗೀತ, ನೃತ್ಯ, ಇತ್ಯಾದಿ ಕಲೆಗಳಲ್ಲಿ- ರಾಮಾಯಣವು ಒಂದು ಪ್ರಧಾನವಾದ ಕಥಾವಸ್ತುವಾಗಿ ಬಳಕೆಯಲ್ಲಿ ಇದೆ.
ಯಕ್ಷಗಾನವು ಒಂದು ವಿಶಿಷ್ಟ ಕಾವ್ಯ ಸಂಪ್ರದಾಯ. ಇದು ಭಕ್ತಿ ಕಾವ್ಯ ಸಂಪ್ರದಾಯದಲ್ಲಿ ಸೇರುತ್ತದೆ. ಶತಮಾನಗಳಿಂದ ಕನ್ನಡ, ತೆಲುಗು ಭಾಷೆಗಳಲ್ಲಿ ಯಕ್ಷಗಾನಕಾವ್ಯ ಪದ್ಧತಿಯ ವಿವಿಧ ಮಟ್ಟುಗಳ ಪದ್ಯಗಳನ್ನು ರಚನೆ ಮಾಡಿ, ಕಥಾವಸ್ತುವನ್ನು ವರ್ಣಿಸುತ್ತಿದ್ದರು. ಅದೇ ರೀತಿ ರಾಮಾಯಣದ ಕಥಾವಸ್ತುವನ್ನು ಆಯ್ದು ಯಕ್ಷಗಾನದ ಕಾವ್ಯ ರೂಪದಲ್ಲಿ ವರ್ಣಿಸುತ್ತಾ ಬಂದಿರುವುದು ಹಲವಾರು ಶತಮಾನಗಳ ಇತಿಹಾಸ.
ರಾಮಾಯಣ ಯಕ್ಷಗಾನ ಕಾವ್ಯವಾಹಿನಿಯಲ್ಲಿ ಕುಂಬಳೆಯ ಕಣಿಪುರದ ಪಾರ್ತಿಸುಬ್ಬನ ರಚನೆಗಳು ಮೊದಲಿಗೆ ಲೆಕ್ಕಿಸಬೇಕಾದವು.. ಈತನು ಪುತ್ರಕಾಮೇಷ್ಟಿಯಿಂದ ತೊಡಗಿ ಕುಂಭಕರ್ಣಾದಿಗಳ ಕಾಳಗದ ವರೆಗಿನ ಮತ್ತು ಕುಶಲವರ ಕಾಳಗದ ಕಥೆಗಳನ್ನು ಯಕ್ಷಗಾನದ ಕಾವ್ಯರೂಪಗಳಲ್ಲಿ ರಚಿಸಿದ್ದಾನೆ. ಪಾರ್ತಿಸುಬ್ಬನು ಸ್ವತ: ಭಾಗವತನೂ ಆಗಿದ್ದ. ಕೇರಳದಲ್ಲಿ ಕಥಕಳಿ (ರಾಮನಾಟ್ಟಂ)ಯ ಸಾಹಿತ್ಯವನ್ನು ಚೆನ್ನಾಗಿ ಅಭ್ಯಾಸ ಮಾಡಿದವನಾದ್ದರಿಂದ, ಸೊಗಸಾಗಿ ರಂಗಕ್ಕೆ ಅಗತ್ಯವಿರುವಂತೆ ಕಥಾ ವಸ್ತುವನ್ನು ಹೆಣೆಯುವ ವಿಧಾನ ಗೊತ್ತಿತ್ತು. ಇದರಿಂದಾಗಿ ಅವನ ಪ್ರಸಂಗಗಳು ಸರ್ವಜನಾದರಣೀಯವಾಗಿ ಇಂದಿಗೂ ಪ್ರಯೋಗದಲ್ಲಿ ಉಳಿದಿವೆ. ಯಕ್ಷಗಾನದ ಆಟ ಕೂಟಗಳಲ್ಲಿ ಇವು ಅತ್ಯಂತ ಮುಖ್ಯವಾಗಿ ಪ್ರಯೋಗವಾಗುತ್ತಿರುವ ಕಥಾನಕಗಳೂ ಆಗಿವೆ.
ತುಂಬ ಸುಂದರವಾದ ಮಟ್ಟುಗಳಲ್ಲಿ ರಚನೆಯಾದ ಅವನ ಪದ್ಯಗಳು ಪ್ರಸಿದ್ಧವಾಗಿವೆ.
ಉದಾಹರಣೆಗೆ .....
ವೀರ ದಶರಥ ನೃಪತಿ ಇನಕುಲ ವಾರಿಧಿಗೆ ಪ್ರತಿ ಚಂದ್ರನೂ ...... (ಪಟ್ಟಾಭಿಷೇಕ)
ಬಂದೆಯಾ ಇನವಂಶ ವಾರಿಧಿ ಚಂದ್ರ ......(ಅದೇ)
ಕಂಬು ಕಂಠಿನಿ ಚಾರುಶೀಲೇ.......(ಅದೇ)
ಹದಿನಾರು ವತ್ಸರದ ಹೆಣ್ಣಾದಳವಳು.....(ಪಂಚವಟಿ)
ರಾಘವ ನರಪತೇ ಶ್ರುಣು ಮಮ ವಚನಂ....(ಪಂಚವಟಿ)
ಶ್ರೀರಾಮ ಕರಕಂಜದಂಗುಲೀಯಕ....(ಚೂಡಾಮಣಿ)
ಇಂತಹ ನೂರಾರು ಸುಂದರ ಪದ್ಯರಚನೆಗಳು ಪಾರ್ತಿಸುಬ್ಬನವು.
ರಂಗದ ಪ್ರದರ್ಶನ, ವಿಶೇಷವಾಗಿ ಸಂವಾದ ಸಂದರ್ಭಗಳಲ್ಲೂ ಸೊಗಸಾಗಿ ಒದಗಿ ಬರುವ ಈ ಪ್ರಸಂಗಗಳು ಯಕ್ಷಗಾನ ತಾಳಮದ್ದಳೆ ಮತ್ತು ಬಯಲಾಟದ ಕ್ಷೇತ್ರದಲ್ಲಿ ತುಂಬಾ ಹೆಸರು ಮಾಡಿವೆ.
ಜತ್ತಿ ಈಶ್ವರ ಭಾಗವತರು 1938ರಲ್ಲಿ "ಸಂಪೂರ್ಣ ರಾಮಾಯಣ" ಪ್ರಸಂಗವನ್ನು ಬರೆದಿರುತ್ತಾರೆ. ರಾಮಾಯಣವು" ಆನಂದ ಪರ್ಯವಸಾಯಿ"ಯಾದ ಕಾವ್ಯವಾದುದರಿಂದ 'ಉತ್ತರ ಕಾಂಡ'ವನ್ನು ಬಿಟ್ಟು ಪಟ್ಟಾಭಿಷೇಕದ ವರೆಗಿನ ಕತೆ ಇಲ್ಲಿದೆ. ಅಧ್ಯಾತ್ಮ ರಾಮಾಯಣದ ಕಥಾನಕವನ್ನು ತಾನು ಇಲ್ಲಿ ಯಕ್ಷಗಾನದ ರೂಪದಲ್ಲಿ ಚಿತ್ರಿಸಿರುವುದಾಗಿ ಕವಿ ಮೊದಲಿಗೆ ಹೇಳಿಕೊಳ್ಳುತ್ತಾರೆ. ಅಧ್ಯಾತ್ಮ ರಾಮಾಯಣವು ಶಿವನು ಪಾರ್ವತಿಗೆ ರಾಮನ ಕಥೆಯನ್ನು ಹೇಳಿದಂತೆ ರಚಿತವಾಗಿದೆ. ಜತ್ತಿಯವರು ತುಂಬಾ ಮನೋಜ್ಞವಾದ ಕಾವ್ಯರಚನಾ ಸಾಮರ್ಥ್ಯವನ್ನು ಇಲ್ಲಿ ಕಂಡರಿಸಿದ್ದಾರೆ.
ಉದಾಹರಣೆಗೆ ....
ಪದ್ಯ-
ವರ ಪುನರ್ವಸು ತಾರೆ ಕರ್ಕಟಕ ಲಗ್ನ ಕವಿ ಗುರುಗಳುಂ ಕೇಂದ್ರ ಸಿತಕರನ ಶುಭ ದೃಷ್ಟಿವ|
ತ್ತಿಗಳು ರವಿ ಪನ್ನೊಂದರೊಳು ರಾಹುಬಲ ಚೈತ್ರ|ಸಿತ ನವಮಿ ಮಧ್ಯಾಹ್ನದಿ||
ಹರಿ ಜನಿಸೆ ಕೌಸಲೆಗೆ ಪುಷ್ಯ ಮಾಶ್ಲೇಷ ಮಖ|
ವೆರಸಿ ಕೈಕೆ ಸುಮಿತ್ರೆಯರು ಪೆತ್ತು ದಶದಿನಂ|
ಸರಿಯೆ ಗುರು ರಾಮ ಭರತ ಲಕ್ಷ್ಮಣಂ ಶತ್ರುಹರರೆಂದು ಕರೆದ ಮುದದೀ||
ಪದ್ಯ- ರಾಮ ರವೀಕುಲೇಂದ್ರ ಸುಗುಣ ಧಾಮ ಚಿತ್ಸುಖ |
ಕ್ಷೇ ಮವಾರ್ತೆ ಲಾಲಿಸಿದರ ತಾಮರಸಮುಖ|| ರಾಮ ರವಿಕುಲೇಂದ್ರ || ಪಲ್ಲವಿ ||
ಈಗಲೊಂದು ಲಗ್ನಪತ್ರ ಸಾಗಿ ಬಂತಲೈ |
ಬೇಗದಿಂದ ಮಿಥಿಳೆಗೀಗ ಪೋಗಬೇಕೆಲೈ||
ರಾಮರವಿಕುಲೇಂದ್ರ ಸುಗುಣಧಾಮ ಚಿತ್ಸುಖ||
ಜತ್ತಿಯವರ ಭಾಷೆ ತುಸು ಕ್ಲಿಷ್ಟವೆನಿಸಿದರೂ ಹಳೆಯ ತಲೆಮಾರಿನ ಕಾವ್ಯಗಳ ಪ್ರಗಲ್ಭ ಗುಣವನ್ನು ಹೊಂದಿರುವುದನ್ನು ಗಮನಿಸಬಹುದು. ಸ್ವತ: ಭಾಗವತರಾಗಿ ಅವರು ಸುಪ್ರಸಿದ್ದರು. ಮುಳಿಯ ತಿಮ್ಮಪ್ಪಯ್ಯನಂತವರ ಪಂಡಿತರಿಂದ ಪ್ರಶಂಸೆಗೆ ಪಾತ್ರರಾದವರು. ಇವರ ಮಕರಾಕ್ಷ ಕಾಳಗವು ಈಗಲೂ ಬೇಡಿಕೆಯ ಪ್ರಸಂಗ.
ಉತ್ತರ ಕನ್ನಡ ಜಿಲ್ಲೆಯ ಹೊಸ್ತೋಟ ಮಂಜುನಾಥ ಭಾಗವತರೆಂಬ ಹಿರಿಯರು "ಶ್ರೀರಾಮ ಮಹಿಮೆ" ಅಥವಾ "ಯಕ್ಷಗಾನ ರಾಮಾಯಣ" ಎಂಬ 19 ಪ್ರಕರಣಗಳ ಪ್ರಸಂಗವನ್ನು ರಚಿಸಿದ್ದಾರೆ, ಇದರಲ್ಲಿ ವಿಶೇಷವೆಂದರೆ, ಶ್ರೀರಾಮಪಟ್ಟಾಭಿಷೇಕದ ಅನಂತರದ ಕತೆಗಳೂ ಇವೆ. ಸೀತಾ ಪರಿತ್ಯಾಗ, ಶ್ರೀರಾಮ ನಿರ್ಯಾಣ ವೆಂಬ ಪ್ರಕರಣಗಳು ಇವೆ.
"ರಾಮಾಯಣವು ಭಾರತೀಯರಷ್ಟೇ ಅಲ್ಲ ಎಲ್ಲಾ ಮಾನವರು ಪುನಃ ಪುನಃ ಆಸ್ವಾದಿಸಬಹುದಾದ ಆದರ್ಶಮಯವಾದ ಅಮೃತ. ಅದನ್ನೊಂದು ಕಾವ್ಯವಾಗಿ, ಕಥೆಯಾಗಿ, ಇತಿಹಾಸವಾಗಿ, ಆದರ್ಶಮಯ ಜೀವನದ ಜ್ವಲಂತ ಸಾಕ್ಷಿಯಾಗಿ ಇಂದಿಗೂ ನೋಡಲಾಗುತ್ತಿದೆ. ಅದರಲ್ಲೂ ಯಕ್ಷಗಾನ ಪ್ರತಿಯೊಬ್ಬ ಸಾಮಾನ್ಯ ಪ್ರೇಕ್ಷಕನನ್ನು ಪೌರಾಣಿಕ ಜಗತ್ತಿಗೆ ಒಯ್ದು, ಅಂದಿನ ಆದರ್ಶದೊಂದಿಗೆ ತಾದಾತ್ಮ್ಯ ಉಂಟುಮಾಡಿ, ಹೃದಯದಲ್ಲೊಂದು ಅವ್ಯಕ್ತ ಆಹ್ಲಾದವನ್ನು ಉಂಟುಮಾಡುತ್ತದೆ" ಎಂದು ಶ್ರೀ ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನದ ಗುರುಗಳು ಮುನ್ನುಡಿಯ ಮಂತ್ರಾಕ್ಷತೆಯನ್ನು ಕರುಣಿಸಿದ್ದಾರೆ.
ಉದಾಹರಣೆಗೆ ಒಂದು ಪದ್ಯ-
ಮನಮೋಹನಾಂಗ ರಾಮ | ಮುನಿಜನ ಪ್ರೇಮ | ಘನಪುಣ್ಯ ನಾಮ ಧಾಮ||
ಜನಗಣೋನ್ನತ ಧರ್ಮದರ್ಶನ| ಅನವರತ ಶುಭ ಚರಿತ ಸಾಧನ|
ಎಣಿಸಲು ಅಗಣಿತ ವಿಶೇಷವ| ಗುಣಿಸಲೂ ಸಂಖ್ಯಾ ವಿಕಾಸವು|
ಗಣಿಸಲೂ ನಿನ್ನಯ ಮಹಾತ್ಮೆಯು| ಮಣಿಸಲೂ ಮೈತಳೆದ ಸಂಸ್ಕೃತಿ |
ಮನದಲೀ ಸಾಧನದಲೀ ಜೀವನದಲೀ ಮಾರ್ದನಿಸುತಿರುವುದು|
ಕನಸು ನನಸಿಂ ಗುಣಿಸೆನಿಸಿ ಸಿಂ|ಚನದ ಹನಿ ಇನಿದಿನಿತು ತಣಿಸಿದೆ||
ಪದ್ಯ- ಹತ್ತು ತಲೆಯ ತೊನೆದು ಧನುವ| ನೆತ್ತಲೆಂದು ಬಂದು ದನುಜ|
ಸತ್ವದಿಂದಲವುಕಿ ಪಿಡಿದಿಪ್ಪತ್ತು ಹಸ್ತದಿ|| ಮತ್ತೆ ನೆಗಹಿ ಮಣಿಯದಿರಲು |
ತತ್ತರಿಸುತ ಹೆಣಗುತಿರಲು| ನೆತ್ತರಿಳಿಯೆ ಮೂಗಿನಿಂದ ಪೃಥ್ವಿ ಗುರುಳಿದ||
ಹೊಸ್ತೋಟ ಭಾಗವತರು ಸ್ವತ: ಭಾಗವತಿಕೆಯನ್ನು ಅರ್ಥಗಾರಿಕೆಯನ್ನು ವೇಷಗಾರಿಕೆಯನ್ನು ತರಬೇತಿಯನ್ನು ಮಾಡುತ್ತಾ ಬಂದವರು. ಅವರ ಪ್ರಸಂಗ ರಚನೆಯ ಭಾಷೆ, ಅತ್ಯಂತ ಸರಳವಾಗಿಯೂ ಸುಭಗವಾಗಿಯೂ ಇರುವುದನ್ನು ಗಮನಿಸಬಹುದು.
ಡಾ. ಕಬ್ಬಿನಾಲೆ ವಸಂತ ಭಾರದ್ವಾಜರು "ಶ್ರೀ ರಾಮ ಲೀಲಾದರ್ಶನಂ" ಎಂಬ ಯಕ್ಷಗಾನ ಮಹಾಕಾವ್ಯ ವನ್ನು ಇತ್ತೀಚೆಗೆ ಪ್ರಕಟಿಸಿದ್ದಾರೆ. ಕುವೆಂಪು ಅವರ ರಾಮಾಯಣದರ್ಶನದ ಯಕ್ಷಗಾನ ರೂಪವಿದು.
ಕಬ್ಬಿನಾಲೆ ಅವರ ಈ ಕೃತಿಗೆ ನಿಜಗುಣ ಸ್ವಾಮಿಗಳು ಮುನ್ನುಡಿಯನ್ನು ಬರೆದಿದ್ದಾರೆ.
ಡಾ. ಕಬ್ಬಿನಾಲೆ ಅವರ "ಪಾವನ ಪುರುಷೋತ್ತಮ" ಎಂಬ ಇನ್ನೊಂದು ಪ್ರಸಂಗವು ಸಮಗ್ರ ರಾಮಾಯಣದ ವಾಮನ ರೂಪ. ಶ್ರೀಮತಿ ಪರಿಣಯದಿಂದ ತೊಡಗಿ ಶ್ರೀರಾಮ ನಿರ್ಯಾಣದವರೆಗಿನ ಕಥಾನಕ ಇಲ್ಲಿದೆ. ಕನ್ನಡದ ಅಚ್ಚದೇಶಿ ಗುಣದ ಲಲಿತವಹ ನುಡಿಯಲ್ಲಿ ಈ ಒಂದು ಕೃತಿ ಕೃತವಾಗಿದೆ.
ಉದಾಹರಣೆ ಪದ್ಯ-
ಸಾಂಗತ್ಯ ರೂಪಕ-
ಭಿಕ್ಷೆಯ ಬೇಡುತ್ತಾ ಬಂದ ಸನ್ಯಾಸಿಗೆ,
ವೃಕ್ಷಫಲವ ನೀಡು ತಾಯೆ
ತ್ರ್ಯಕ್ಷ ಪುರುಷ ಸಂರಕ್ಷಿಪ ನಿನ್ನನು
ಕುಕ್ಷಿಯಭೀಷ್ಟವನೀಯೆ
ಒಂದು ಕರದಿ ನೀಡೆ ಹತ್ತು ಕೈಯಲಿ ಕೊಂಬ
ಸುಂದರ ಶಿವಭಕ್ತ ನೀತ
ತಂದ ಪ್ರಸಾದಕೆ ತಳುವದೆ ಶೋಕವ
ಹೊಂದಿಸುವನು ಭಾಗ್ಯದಾತ
ಬೆಳಸಲಿಗೆ ಗಣಪತಿ ಹೆಗಡೆಯವರು ಸಮಗ್ರ ರಾಮಾಯಣವನ್ನು ಯಕ್ಷಗಾನ ಕಾವ್ಯವಾಗಿಸಿದ್ದಾರೆ ಎಂದು ಕೇಳಿದ್ದೇನೆ.
ಯಕ್ಷಗಾನದಲ್ಲಿ ರಾಮಾಯಣದ ವಿವಿಧ ಪಾತ್ರಗಳನ್ನೆ ಕೇಂದ್ರೀಕರಿಸಿ ರಚಿಸಿದ ಪ್ರಸಂಗಗಳಲ್ಲಿ ಕಾಸರಗೋಡು ಸುಬ್ರಾಯರ "ರಾವಣವಧೆ", ಹಟ್ಟಿಯಂಗಡಿ ರಾಮಭಟ್ಟರ "ಅತಿಕಾಯ ಕಾಳಗ " ಆಲೆಟ್ಟಿ ರಾಮಣ್ಣ ಶಗ್ರಿತ್ತಾಯರ ಶ್ರೀರಾಮ ನಿಜ ಪಟ್ಟಾಭಿಷೇಕ,ಪು ತ್ತಿಗೆ ರಾಮಕೃಷ್ಣ ಜೋಯಿಸರ "ಶ್ರೀರಾಮ ಪಟ್ಟಾಭಿಷೇಕ, "ಡಾ. ಅಮೃತ ಸೋಮೇಶ್ವರರವರ "ಚಕ್ರವರ್ತಿ ದಶರಥ "ಶ್ರೀಧರ ಡಿಎಸ್. ಅವರ "ಕಬಂಧ ಮೋಕ್ಷ" ಸೇಡಿಗುಮೆ ವಾಸುದೇವ ಭಟ್ಟರ "ವಿಪ್ರಾರ್ಪಣಂ", "ಮಂಥರಾ" ಡಾ. ಕಬ್ಬಿನಾಲೆಯವರ "ನವನೀತ ಸೀತಾ ಸ್ವಯಂವರ" ಮುಂತಾಗಿ ನೂರಾರು ಜ್ಞಾತಾಜ್ಞಾತ ಕವಿಗಳಿಂದ ರಾಮಾಯಣದ ಪುನಾರಚನೆ ನಡೆದಿದೆ.
ರಾಮಾಯಣದ ಉತ್ತರಕಾಂಡದ ವಿವಿಧ ಪ್ರಕರಣಗಳನ್ನು ಆಯ್ಕೆ ಮಾಡಿಕೊಂಡು ಪ್ರತ್ಯೇಕ ಪ್ರಸಂಗಗಳನ್ನು ರಚಿಸಿದ್ದು ಉಂಟು. ಶ್ರೀರಾಮಾಶ್ವಮೇಧದ ಸಂದರ್ಭದಲ್ಲಿ ಸಂವತ್ಸರ ಕಾಲ ಸ್ವೇಚ್ಛೆಯಾಗಿ ಪರ್ಯಟನ ಮಾಡುವ ಯಾಗಾಶ್ವವನ್ನು ಕಟ್ಟಿ ಕಾದಲು ಬರುವ ವಿವಿಧ ರಾಜರುಗಳ ಕಥೆ, ಅವರೊಂದಿಗೆ ಶತ್ರುಘ್ನ ಮತ್ತು ಹನೂಮಂತನೇ ಮೊದಲಾದ ವೀರಾಗ್ರೇಸರರು ನಡೆಸಿದ ಹೋರಾಟ, ರಾಮನ ಮಹಿಮೆಯನ್ನು ದಕ್ಷಿಣದ ರಾಜರುಗಳೆಲ್ಲ ಅರಿತುಕೊಂಡ ಬಗೆ ಇಲ್ಲಿ ಚಿತ್ರಿತವಾಗಿದೆ. ಹರಿಹರ ಭಕ್ತರ ಭೇದ ಅಳಿದು ಹೋಗಿ, ಸಮನ್ವಯ ಮಾಡಿಕೊಳ್ಳುವ ರೀತಿ ಈ ಪ್ರಸಂಗಗಳಲ್ಲಿ ಕಾಣುತ್ತವೆ.
ರಾಮಾಯಣದ ಉತ್ತರಕಾಂಡದ ಕಥಾನಕಗಳನ್ನು ಆರಿಸಿ, ಅನೇಕ ಯಕ್ಷಗಾನ ಕವಿಗಳು, ಪ್ರಸಂಗಗಳನ್ನು ರಚಿಸಿದ್ದಾರೆ. ಇವುಗಳಲ್ಲಿ ಪ್ರಸಿದ್ಧವಾದವುಗಳೆಂದರೆ "ಮಾನಿಷಾದ" (ಬೊಟ್ಟಿಕೆರೆ ಪುರುಷೋತ್ತಮ ಪೂಂಜ) "ಕುಶಲವರ ಕಾಳಗ" (ಪಾರ್ತಿಸುಬ್ಬ) "ಸೀತಾ ಭೂ ಪ್ರವೇಶ", "ಶ್ರೀರಾಮ ಪರಂಧಾಮ" (ಶಂಕರನಾರಾಯಣ ಭಟ್ಟ) "ರಾಮಾಂಜನೇಯ ಕಾಳಗ" ಎಂಬ ಪ್ರಕ್ಷಿಪ್ತ ಕಥಾನಕವುಳ್ಳ ಪ್ರಸಂಗವು ರಚಿತವಾಗಿದೆ. ಇದು ಆಟಗಳಲ್ಲಿ ಬಹಳಷ್ಟು ಬಳಕೆಯಾಗುತ್ತಿರುವುದನ್ನು ನಾವು ಕಾಣುತ್ತೇವೆ. ಇಲ್ಲಿ ರಾಮ ಮತ್ತು ಆಂಜನೇಯರ ನಡುವಿನ ಸಂಬಂಧ ನಿಚ್ಚಳವಾಗುತ್ತದೆ. ರಾಮ ಭಕ್ತಿಯನ್ನೇ ನೆಚ್ಚಿಕೊಂಡು ಹನುಮಂತನು ಆಶ್ರಿತನಾದ ಶಕುಂತರಾಜನನ್ನು ಉಳಿಸುವುದಕೋಸ್ಕರ ವಾಗಿ ಪಣತೊಡುವ ಸಂದರ್ಭ ಕಾಣುತ್ತದೆ. ರಾಮನು ವಿಶ್ವಾಮಿತ್ರರ ಯಜ್ಞವನ್ನು ಕೆಡಿಸಿದ ಶಕುಂತರಾಜನನ್ನು ವಧಿಸುವ ಪ್ರತಿಜ್ಞೆ ಮಾಡಿದ್ದನ್ನು ಕಾಣುತ್ತೇವೆ. ಹೀಗೆ ರಾಮ ಮತ್ತು ಹನುಮರ ನಡುವಿನ ಸಂಘರ್ಷದಂತೆ ಇದು ಮೇಲ್ನೋಟಕ್ಕೆ ಕಂಡರೂ ಆತ್ಯಂತಿಕವಾಗಿ ರಾಮ ಭಕ್ತಿಯ ಪರಾಕಾಷ್ಠೆಯ ಮಹಿಮಾ ದರ್ಶನ ಎಂಬುದು ಅರಿವಾಗುತ್ತದೆ.
ಪಾರ್ತಿಸುಬ್ಬನ "ಕುಶಲವರ ಕಾಳಗ" ಅತ್ಯಂತ ಮನೋಜ್ಞವಾದ ಪ್ರಸಂಗವಾಗಿದ್ದು ಇದರಲ್ಲಿ..... ಕುಶಲವರು ವಾಲ್ಮೀಕಿ ಆಶ್ರಮದಲ್ಲಿದ್ದಾಗ ಶತ್ರುಘ್ನ ನೇತೃತ್ವದಲ್ಲಿ ಶ್ರೀ ರಾಮನ ಅಶ್ವಮೇಧದ ಕುದುರೆಯು ಬರುತ್ತದೆ. ಆ ಕುದುರೆಯನ್ನು ಅದರ ಹಣೆಯ ಲಿಖಿತವನ್ನು ನೋಡಿದ ಕೂಡಲೇ ಲವನು ಕಟ್ಟಿಹಾಕಿ ಶತ್ರುಘನೊಂದಿಗೆ ಹೋರಾಟವನ್ನು ಮಾಡಿ ಸೋತು ಶತ್ರಹರನಿಗೆ ಕೈಸೆರೆ ಸಿಕ್ಕುತ್ತಾನೆ. ವಟುಗಳ ಮೂಲಕವಾಗಿ ಸೀತೆಯು ಈ ವಿಚಾರವನ್ನು ತಿಳಿದು ಆರ್ತನಾದ ಮಾಡಿ ಕುಶನನ್ನು ಕೂಗಿ ಕರೆಯಲು ಆತನು ಬಂದು ಶತ್ರುಘ್ನನನ್ನು ಯುದ್ಧದಲ್ಲಿ ಹಿಮ್ಮೆಟ್ಟಿಸಿ ಲವನನ್ನು ಬಂಧನದಿಂದ ಬಿಡುಗಡೆಗೊಳಿಸಿ ಅಶ್ವವನ್ನು ತನ್ನ ವಶದಲ್ಲಿ ಇಟ್ಟುಕೊಳ್ಳುತ್ತಾನೆ. ಅನಂತರದಲ್ಲಿ ಶತ್ರುಘ್ನನು ತನ್ನ ಸೋಲಿನ ವರ್ತಮಾನವನ್ನು ಶ್ರೀರಾಮನಿಗೆ ಮುಟ್ಟಿಸಿ ಭರತ ಲಕ್ಷ್ಮಣರು ಬಂದು ಸೋತು ಕೊನೆಯಲ್ಲಿ ಶ್ರೀರಾಮನೆ ಬಂದು ಕುಶಲವರೊಂದಿಗೆ ಹೋರಾಟವನ್ನು ಮಾಡುತ್ತ ಒಂದು ಹಂತದಲ್ಲಿ ಯುದ್ಧವನ್ನು ನಿಲ್ಲಿಸಿ ವಾಲ್ಮೀಕಿ ಮಹರ್ಷಿಗಳ ಮೂಲಕವಾಗಿ ತನ್ನ ಮಕ್ಕಳು ಎಂಬ ತಿಳುವಳಿಕೆಯನ್ನು ಹೊಂದಿ ಕೊನೆಯಲ್ಲಿ ಮಕ್ಕಳಾದ ಕುಶಲವರನ್ನು ತಾನು ಪರಿಗ್ರಹಿಸುತ್ತಾನೆ.
"ವೀರಮಣಿ ಕಾಳಗ" ಹರಿಹರರ ಭಕ್ತರ ಸಂಘರ್ಷ ಮತ್ತು ಸಮನ್ವಯದ ಕತೆ. ಯೋಗಿನಿಯಿಂದ ದತ್ತವಾದಂತಹ ಶಕ್ತ್ಯಾಯುಧವನ್ನು ಶತ್ರುಘ್ನನು ಪ್ರಯೋಗಿಸಿದಾಗ ಶಿವಭಕ್ತ ವೀರಮಣಿ ಸಾಯುತ್ತಾನೆ. ಪೂರ್ವದಲ್ಲಿ ಅವನ ಮಗಳಾದ ಇಕ್ಷುಮತಿಯ ಭಕ್ತಿಗೆ ಒಲಿದ ಶಿವನು ಆಕೆಯನ್ನು ವರಿಸಿ ವೀರಮಣಿಯ ಜ್ಯೋತಿರ್ಮೇಧ ಪುರದಲ್ಲಿಯೇ ನೆಲೆಸಿದ್ದನು. ಯುದ್ಧದಲ್ಲಿ ವೀರಮಣಿಯು ಹತನಾದಾಗ, ಶಿವನು ಗಣಸಹಿತನಾಗಿ ಯುದ್ಧಕ್ಷೇತ್ರಕ್ಕೆ ಬಂದು ಹನುಮಂತನಿಂದ ಸೋತು, ಹನುಮಂತನಿಗೆ ವರ ರೂಪದಲ್ಲಿ ಮತ್ತೆ ಸೈನ್ಯವೆಲ್ಲವನ್ನು ಕೂಡ ಬದುಕಿಸುವ ಅವಕಾಶವನ್ನು ಕೊಡುತ್ತಾನೆ. ಹನುಮನು ಸಂಜೀವಿನಿಯನ್ನು ತರುತ್ತಾನೆ. ಶಿವನು ವೀರಮಣಿಯ ಸೈನಿಕರನ್ನೂ ಬದುಕಿಸಬೇಕು ಎನ್ನುವಾಗ ಹನುಮಂತನು ನಿರಾಕರಿಸುತ್ತಾನೆ. ಆಗ ಶಿವನು ಶ್ರೀರಾಮನನ್ನೇ ಇಲ್ಲಿಗೆ ಬರಿಸು, ಅವನನ್ನೇ ಕೇಳೋಣ ಎಂದಾಗ, ಹನುಮಂತನ ಸಂಪ್ರಾರ್ಥನೆಗೆ ಒಲಿದು ಶ್ರೀರಾಮನೆ ಅಲ್ಲಿಗೆ ಬರುವಂತಾಗುತ್ತದೆ. ಶ್ರೀರಾಮನ ದರ್ಶನವಾದಾಗ ಶಿವನೂ ರಾಮನೂ ತಾವು ಬೇರೆ ಬೇರೆ ಅಲ್ಲ ಎನ್ನುವುದನ್ನು ಹನುಮಂತನಿಗೆ ಮನದಟ್ಟು ಮಾಡಿ ಕೊನೆಯಲ್ಲಿ ಎಲ್ಲರನ್ನೂ ಬದುಕಿಸಿ ಹರಿಹರರಲ್ಲಿ ಭೇದವಿಲ್ಲ ಎಂಬಲ್ಲಿಗೆ ಈ ಪ್ರಸಂಗವು ಮುಕ್ತಾಯಗೊಳ್ಳುತ್ತದೆ. ವೀರಮಣಿಯ ಮನ:ಪರಿವರ್ತನೆಯಾಗಿ ಅವನಲ್ಲಿದ್ದ ಶಿವ ಭಕ್ತಿಯೊಂದಿಗೆ ರಾಮ ಭಕ್ತಿಯನ್ನು ಸಮನ್ವಯಗೊಳಿಸುವ ಬಗೆ ಈ ಪ್ರಸಂಗದಲ್ಲಿ ಅಡಕವಾಗಿದೆ.
ಬೊಟ್ಟಿಕೆರೆ ಪುರುಷೋತ್ತಮ ಪೂಂಜರ ಮಾನಿಷಾದ ಎಂಬ ಪ್ರಸಂಗದಲ್ಲಿ ಮೊದಲಿಗೆ ವಾಲ್ಮೀಕಿಯ ಪೂರ್ವಕಥೆಯೊಂದಿಗೆ ಅವನ ಮನಃಪರಿವರ್ತನೆಯ ಸಂದರ್ಭವಿದೆ.
ಪ್ರಸಂಗದ ಉತ್ತರ ಭಾಗದಲ್ಲಿ ರಾಮನು ಜನಾಪವಾದಕ್ಕೆ ಅಂಜಿ ಲಕ್ಷ್ಮಣನನ್ನು ಕರೆದು ಸೀತೆಯನ್ನು ಗಂಗಾನದಿಯ ದಕ್ಷಿಣದ ದಂಡೆಯಲ್ಲಿ ವಾಲ್ಮೀಕಿ ಮಹರ್ಷಿಗಳ ಆಶ್ರಮ ಪ್ರಾಂತದಲ್ಲಿ ಬಿಟ್ಟು ಬರಲು ಹೇಳುವುದು, ವಾಲ್ಮೀಕಿ ಸೀತೆಯನ್ನು ತನ್ನ ಕಾವ್ಯ ನಾಯಕಿಯೆಂದು ಗುರುತಿಸಿ, ತನ್ನಾಶ್ರಮಕ್ಕೆ ಕರೆದೊಯ್ಯುವುದು ಇತ್ಯಾದಿ ಮನಕರಗುವಂತಹ ಸನ್ನಿವೇಶಗಳಿವೆ.
ಈ ಪ್ರಸಂಗದ ಸರಳ ಸುಂದರ ಪದ್ಯಗಳು ಆಪಾತತ: ಭಾವವ್ಯಂಜಕವಾಗಿವೆ.
ಕಬ್ಬಿನಾಲೆಯವರು, "ನವನೀತ ಸೀತಾ ಸ್ವಯಂವರ" ಮತ್ತು "ಪಾವನ ಪುರುಷೋತ್ತಮ" ಎಂಬ ರಾಮಾಯಣಾಧಾರಿತ ಪ್ರಸಂಗಗಳನ್ನು ರಚಿಸಿದ್ದಾರೆ.
ಯಕ್ಷಗಾನದಲ್ಲಿ ರಾಮಾಯಣದ ಕೃತಿಗಳು ಅಪಾರ ಸಂಖ್ಯೆಯಲ್ಲಿವೆ. ಸಮಗ್ರ ರಾಮಾಯಣವನ್ನಲ್ಲದೆ ಬಿಡಿ ಕಥೆಗಳ ಯಕ್ಷಗಾನದ ಪ್ರಸಂಗಗಳನ್ನು ಕವಿಗಳು ರಚಿಸಿದ್ದಾರೆ. ಪ್ರತಿನಿತ್ಯ ಎಂಬಂತೆ ರಾಮಾಯಣದ ಕಥಾನಕಗಳು ಯಕ್ಷಗಾನದ ರಂಗಸ್ಥಳಗಳಲ್ಲಿ ಮೆರೆಯುತ್ತಿವೆ. ಭಾರತೀಯ ಸಾಹಿತ್ಯದ ಮೇರು ಕೃತಿ ಎನಿಸಿದ ರಾಮಾಯಣವು ಜಾಗತಿಕ ಗುರುತ್ವದೊಂದಿಗೆ ಇಂದಿಗೂ ಎಂದಿಗೂ- ಆಚಂದ್ರಾರ್ಕವಾಗಿ- ಭಾರತೀಯ ಮೌಲ್ಯಗಳ ಪ್ರತಿಪಾದನೆಯನ್ನು ಮಾಡುತ್ತದೆಂಬ ವಿಶ್ವಾಸ ನಮ್ಮೆಲ್ಲರದು.
ಲೋಕಾಭಿರಾಮಂ ಶ್ರೀರಾಮಂ ಭೂಯೋ ಭೂಯೋ ನಮಾಮ್ಯಹಂ
- ಗಣರಾಜ ಕುಂಬ್ಳೆ,
ಪ್ರಾಂಶುಪಾಲರು,
ಶ್ರೀರಾಮಕುಂಜೇಶ್ವರ ಮಹಾವಿದ್ಯಾಲಯ, ರಾಮಕುಂಜ.
ಮೊ: 77604 21005
ಲೇಖಕರ ಸಂಕ್ಷಿಪ್ತ ಪರಿಚಯ:
ಗಣರಾಜ ಕುಂಬ್ಳೆ ಉಪನ್ಯಾಸಕರಾಗಿ, ಸಾಹಿತಿಯಾಗಿ, ಯಕ್ಷಗನ ಕಲಾವಿದರಾಗಿ, ಸಂಶೋಧಕರಾಗಿ, ಸಂಘಟಕರಾಗಿ ಗುರುತಿಸಿಕೊಂಡವರು. ಸುಮಾರು ನಾಲ್ಕು ದಶಕಗಳ ಸುದೀರ್ಘ ಉಪನ್ಯಾಸಕ ವೃತ್ತಿ ಅವರದ್ದು. ಯಕ್ಷಗಾನ ಅವರಿಗೆ ಸಾಹಿತ್ಯದಷ್ಟೇ ಪ್ರಿಯವಾದ ಕ್ಷೇತ್ರ. ತಾಳಮದ್ದಳೆ ಅರ್ಥಧಾರಿಯಾಗಿ, ಪ್ರಸಂಗಕರ್ತರಾಗಿ, ಕವಿಯಾಗಿ, ಅಂಕಣಕಾರರಾಗಿ, ಸಂಪನ್ಮೂಲ ವ್ಯಕ್ತಿಯಾಗಿ, ಉತ್ತಮ ವಾಗ್ಮಿಯಾಗಿ ಅವರು ಚಿರಪರಿಚಿತರು. ಸೇವಾ ನಿವೃತ್ತಿ ಹೊಂದಿದ ಬಳಿಕ ಅವರು ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ರಾಮಕುಂಜದಲ್ಲಿರುವ ಶ್ರೀ ರಾಮಕುಂಜೇಶ್ವರ ಪದವಿ ಮಹಾವಿದ್ಯಾಲಯದಲ್ಲಿ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ