ಬೆಂಗಳೂರು ನಿಟ್ಟೆ ಮೀನಾಕ್ಷಿ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಕ್ವಿಜ್ ಸ್ಪರ್ಧೆಯ ಬಹುಮಾನ ವಿತರಣೆ

Upayuktha
0



ಬೆಂಗಳೂರು: ‘ಕೈಗಾರಿಕೆಗಳು ಮತ್ತು ಶಿಕ್ಷಣ ಸಂಸ್ಥೆಗಳ ನಡುವೆ ಸೌಹಾರ್ದ ಸಂಬಂಧ ಅತ್ಯವಶ್ಯಕ. ಇದರಿಂದ ವಿದ್ಯಾರ್ಥಿಗಳಿಗೆ ಕೈಗಾರಿಕೆಗಳ ಬಗೆಗಿನ ಅರಿವು ವಿಸ್ತರಿಸುತ್ತದೆ ಮತ್ತು ಅಗತ್ಯ ಕೌಶಲ್ಯಗಳನ್ನು ಅರ್ಥಮಾಡಿಕೊಳ್ಳಲು ಅವಕಾಶ ನೀಡುತ್ತದೆ. ಈ ನಿಟ್ಟಿನಲ್ಲಿ ಕೈಗಾರಿಕಾ ತಜ್ಞರ ಸಲುವಾಗಿಯೇ ಏರ್ಪಡಿಸಿರುವ ಕ್ವಿಜ್ ಸ್ಪರ್ಧೆ ನಿಜಕ್ಕೂ ಸ್ವಾಗತಾರ್ಹ. ಇದನ್ನು ನಿಟ್ಟೆ ಮೀನಾಕ್ಷಿ ತಾಂತ್ರಿಕ ಮಹಾವಿದ್ಯಾಲಯದ ಮ್ಯಾನೇಜ್‍ಮೆಂಟ್ ವಿಭಾಗ ಸಮರ್ಥವಾಗಿ ಆಯೋಜಿಸಿದೆ ಮತ್ತು ವಿದ್ಯಾರ್ಥಿಗಳು ಹಾಗೂ ಕೈಗಾರಿಕಾ ತಜ್ಞರ ನೇರ ಮುಖಾಮುಖಿಗೆ ಅನುವು ಮಾಡಿಕೊಟ್ಟಿದೆ’, ಎಂದು ಸುರೇಶ್ ಆಂಡ್ ಅಸೋಸಿಯೇಟ್ಸ್ ಸಂಸ್ಥೆಯ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕ ಎ. ಸುರೇಶ್ ನುಡಿದರು. 



ಅವರು ನಿಟ್ಟೆ ಮೀನಾಕ್ಷಿ ತಾಂತ್ರಿಕ ಮಹಾವಿದ್ಯಾಲಯದ ಮ್ಯಾನೇಜ್‍ಮೆಂಟ್ ವಿಭಾಗ, ವಿವಿಧ ಕೈಗಾರಿಕೆ ಹಾಗೂ ಉದ್ಯಮಗಳ ತಜ್ಞರ ನಡುವೆ ಏರ್ಪಡಿಸಿದ್ದ ಕ್ವಿಜ್ ಸ್ಪರ್ಧೆಯ (ಮಾಸ್ಟರ್ ಮೈಂಡ್ಸ್-3) ಬಹುಮಾನ ವಿತರಣಾ ಸಮಾರಂಭದ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡುತ್ತಿದ್ದರು. ಇದಕ್ಕೂ ಮುನ್ನ ಕ್ವಿಜ್ ಕಾರ್ಯಕ್ರಮವನ್ನು ವಿಧ್ಯುಕ್ತವಾಗಿ ಚಾಲನೆಗೊಳಿಸಿದ ನಿಟ್ಟೆ ಮೀನಾಕ್ಷಿ ತಾಂತ್ರಿಕ ಮಹಾವಿದ್ಯಾಲಯದ ಶೈಕ್ಷಣಿಕ ಮುಖ್ಯಸ್ಥ ಡಾ. ವಿ. ಶ್ರೀಧರ್ ಅವರು ಮಾತನಾಡಿ, ‘ಈ ತೆರೆನ ತುಂಬಿದ ಸಭೆಗಳಲ್ಲಿ ನಡೆಯುವ ರಂಜನೆ ಹಾಗೂ ಜ್ಞಾನಗಳೆರಡೂ ಒಗ್ಗೂಡಿದ ಕ್ವಿಜ್ ಕಾರ್ಯಕ್ರಮಗಳು ಹೆಚ್ಚು ಹೆಚ್ಚು ಜರುಗಬೇಕು. ಇದರಿಂದ ನಾವು, ನಮ್ಮ ಯುವಜನಾಂಗ ಮೊಬೈಲ್ ವ್ಯಸನಕ್ಕೆ ತುತ್ತಾಗಬಹುದನ್ನು ತಪ್ಪಿಸಬಹುದು’, ಎಂದರು. 



ಕರ್ನಾಟಕ ಕೈಗಾರಿಕಾ ಹಾಗೂ ವಾಣಿಜ್ಯ ಮಂಡಳಿಯ ಹಿರಿಯ ಉಪಾಧ್ಯಕ್ಷ ಎಂ.ಜಿ. ಬಾಲಕೃಷ್ಣ ಹಾಗೂ ನ್ಯಾಶನಲ್ ಇನ್ಸ್ಟಿಟ್ಯೂಟ್ ಆಫ್ ಪರ್ಸನಲ್ ಮ್ಯಾನೇಜ್‍ಮೆಂಟ್‍ನ ಕರ್ನಾಟಕ ಶಾಖೆಯ ಅಧ್ಯಕ್ಷ ದಿನೇಶ್ ಎ.ಯು ಹಾಗೂ ಪ್ರಧಾನ ಕಾರ್ಯದರ್ಶಿ ಪಿ.ಆರ್. ಬಸವರಾಜ್ ಗೌರವಾನ್ವಿತ ಅತಿಥಿಗಳಾಗಿ ಭಾಗವಹಿಸಿದ್ದರು. ನಾಡಿನ ಪ್ರಮುಖ ಉದ್ಯಮ ಮತ್ತು ಕೈಗಾರಿಕೆಗಳಿಂದ ಒಟ್ಟು 29 ತಂಡಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದವು. ವಿವಿಧ ಹಂತಗಳಲ್ಲಿ ಸ್ಪರ್ಧೆಗಳು ನಡೆದ ನಂತರ ಕೊನೆಯ ಸುತ್ತಿನಲ್ಲಿ ನಾಲ್ಕು ತಂಡಗಳ ನಡುವೆ ತೀವ್ರ ಸ್ಪರ್ಧೆ ಏರ್ಪಟ್ಟಿತ್ತು.



ಸಾಯಿಮಿತ್ರ ಕನ್‍ಸ್ಟ್ರಕ್ಷನ್ಸ್‍ನ ತಂಡ ಮೊದಲ ಸ್ಥಾನ ಗಳಿಸಿ ಪಾರಿತೋಷಕ ಹಾಗೂ 50,000/- ರೂಗಳ ನಗದು ಬಹುಮಾನ ಪಡೆಯಿತು. ಬಾರ್ಕ್‍ಲೇಸ್ ತಂಡ ಮೊದಲ ರನ್ನರ್ ಸ್ಥಾನಗಳಿಸಿ 25,000/- ರೂಗಳ ನಗದು ಬಹುಮಾನ ಪಡೆಯಿತು. ಎರಡನೇ ರನ್ನರ್ ಸ್ಥಾನ ಹಾಗೂ 15,000/- ರೂಗಳ ನಗದು ಬಹುಮಾನ ಪಡೆದದ್ದು ಇನ್ಫೋಸಿಸ್ ತಂಡ. ಮೂರನೇ ರನ್ನರ್ ಹಾಗೂ 10,000/- ರೂಗಳ ನಗದು ಬಹುಮಾನ ಗಳಿಸಿದ್ದು ಕ್ಯಾಪ್‍ಜೆಮಿನಿ ತಂಡ.



ನಿಟ್ಟೆ ಮೀನಾಕ್ಷಿ ತಾಂತ್ರಿಕ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ. ಎಚ್.ಸಿ. ನಾಗರಾಜ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ತಮ್ಮ ಭಾಷಣದಲ್ಲಿ ಶ್ರೀಯುತರು, ‘ವಿದ್ಯಾರ್ಥಿಗಳು ಕೈಗಾರಿಕೆಗಳ ಬಗೆಗಿನ ಜ್ಞಾನ ಹಾಗೂ ಕೌಶಲ್ಯಗಳನ್ನು ಅರಿಯುವ ರೀತಿಯಲ್ಲಿಯೇ ತಮ್ಮ ಪ್ರಾಚೀನ ಸಂಸ್ಕೃತಿಯ ತಿರುಳನ್ನೂ ಅರ್ಥಮಾಡಿಕೊಳ್ಳಬೇಕು. ಆಗ ಮಾತ್ರ ಅವರು ನಮ್ಮ ದೇಶದ ನವನಿರ್ಮಾಣದಲ್ಲಿ ಸಮರ್ಥವಾಗಿ ಪಾಲ್ಗೊಳ್ಳುತ್ತಾರೆ ಹಾಗೂ ಇಡೀ ವಿಶ್ವಕ್ಕೆ ದಿಗ್ದರ್ಶನ ಮಾಡುವ ಪರಿಣತಿಯನ್ನು ಪಡೆಯುತ್ತಾರೆ’, ಎಂದರು.



ಸಮಾರಂಭದಲ್ಲಿ ಕ್ವಿಜ್ ಮಾಸ್ಟರ್ ಪ್ರೊ. ಶ್ರೀಧರ್ ಎಚ್.ಆರ್; ನಿಟ್ಟೆ ಮೀನಾಕ್ಷಿ ತಾಂತ್ರಿಕ ಮಹಾವಿದ್ಯಾಲಯದ ಮ್ಯಾನೇಜ್‍ಮೆಂಟ್ ವಿಭಾಗದ ಡೀನ್ ಡಾ. ಎಸ್. ನಾಗೇಂದ್ರ ಹಾಗೂ ವಿಭಾಗದ ಮುಖ್ಯಸ್ಥೆ ಡಾ. ಶಿಲ್ಪ ಅಜಯ್ ಉಪಸ್ಥಿತರಿದ್ದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter   


Post a Comment

0 Comments
Post a Comment (0)
To Top