ಮಹಾರಾಷ್ಟ್ರದಲ್ಲೊಬ್ಬ ಕನಕ; ಅವರೇ ಚೊಕ್ಕಮೇಳ

Upayuktha
0


ನಮ್ಮ ಕನಕದಾಸರ ಜೀವಿತಕಾಲ (1508-1606). ಹದಿನಾರನೆಯ ಶತಮಾನ. ವಿಜಯನಗರ ಸಾಮ್ರಾಜ್ಯದ ಔನ್ನತ್ಯ ಮತ್ತು ಪತನವನ್ನ ಕಂಡವರು. ಡಣ್ಣಾಯಕನ ಮಗನಾದರೂ, ಸ್ವತ: ಡಣ್ಣಾಯಕರಾದರೂ, ಒಂದು ಹಂತದಲ್ಲಿ ವೈರಾಗ್ಯ ಹೊಂದಿ ದಾಸರಾರಾದರು. ವ್ಯಾಸರಾಜರಿಂದ ಕನಕದಾಸರೆಂದು ಅಂಕಿತ ಪಡೆದು ಅನೇಕ ಕಾವ್ಯಗಳನ್ನು ಕೀರ್ತನೆಗಳು ಮತ್ತು ಮುಂಡಿಗೆಗಳನ್ನು ರಚಿಸಿದವರು. ಅವರು ಕುರುಬರಾದುದರಿಂದ, ಆಗಿನ ಕಾಲದ ಪದ್ಧತಿಯಂತೆ ಜಾತಿನಿಂದನೆಗೆ ಒಳಗಾದವರು. 


ದೇವಸ್ಥಾನದೊಳಗೆ ಅವರಿಗೆ ಪ್ರವೇಶವಿರಲಿಲ್ಲ.ಅದಕ್ಕಾಗಿಯೇ ಹೊರಗೆ ನಿಂತು ಉಡುಪಿಯ ಕೃಷ್ಣನ ಭಕ್ತಿಯಿಂದ ಮೊರೆಹೋಗಲು, ಕೃಷ್ಣ ತಿರುಗಿ, ಗೋಡೆಯೊಡೆದು ಕನಕರಿಗೆ ದರ್ಶನವಿತ್ತ. ಅದಕ್ಕೆ ಸಾಕ್ಷಿಯಾಗಿ ಇಂದಿಗೂ ಉಡುಪಿಯಲ್ಲಿ ಇರುವ ಕನಕನಕಿಂಡಿಯೇ ಸಾಕ್ಷಿ.


ಅವರಿಗೂ ಎರಡು ಶತಮಾನಗಳ ಮೊದಲೇ ಮಹಾರಾಷ್ಟ್ರ ದಲ್ಲಿ ಯೂ ಒಬ್ಬ ದಲಿತ, ಜನಪದ ಕವಿಯಿದ್ದ. ಅವನ ಹೆಸರು ಚೊಕ್ಕಮೇಳ ಎಂದು. ಕಾಲ 14 ನೆಯ ಶತಮಾನದ ಮಹರ್ ಎಂಬ ಕೀಳು ಜಾತಿಗೆ ಸೇರಿದವನೆಂಬುದು ವಿಷಯ.


ಅವನಿಗೆ ಪಂಡರಿಪುರದ ವಿಠ್ಠಲ ಎಂದರೆ ಅತೀವ ಭಕ್ತಿ.ಯೀವಾಗಲೂ ವಿಠಲನ ನಾಮಸ್ಮರಣೆ. ಹೀಗಿರುವಾಗ, ಅವನಿಗೆ ನಾಮದೇವರ ಭೇಟಿಯಾಗುತ್ತದೆ. ಅವರೂ ಕೂಡ ವಿಠಲನ ಭಕ್ತರು. ಚೊಕ್ಕಮೇಳನ ಭಕ್ತಿಯನ್ನು ಮೆಚ್ಚಿದ ನಾಮದೇವರು, ಅವನಿಗೆ ಪಂಡರಿಪುರಕ್ಕೆ ಬರುವಂತೆ ಹೇಳುತ್ತಾರೆ. ಸರಿ. ಚೊಕ್ಕಮೇಳರು ಸಂಸಾರ ಸಮೇತ ಪಂಡರಾಪುರಕ್ಕೆ ಬರುತ್ತಾರೆ. ದೇವಸ್ಥಾನದಲ್ಲಿ ಅವರು ಮಹರ್ ಜನಾಂಗಕ್ಕೆ ಸೇರಿದವರಾದುದರಿಂದ, ಒಳಗೆ ಪ್ರವೇಶವಿರುವುದಿಲ್ಲ. ಆದರೆ ನಾಮದೇವರ ಮನೆಯಲ್ಲಾಗುವ ಪೂಜೆಯಲ್ಲಿ ಅವರಿಗೆ ಭಾಗಿಯಾಗುವ ಅವಕಾಶ. ಆದರೂ, ಅವರು ಅಲ್ಲಿಯೂ ಹೊರಗೇ ನಿಂತು ವಿಠಲನ ಪೂಜೆಯನ್ನು ಕಣ್ತುಂಬಿ ಕೊಳ್ಳುತ್ತಾರೆ. ದೇವಾಲಯ ಕಾಣುವಂತೆ, ಚಂದ್ರಭಾಗ ನದಿಯ ಮತ್ತೊಂದು ದಡದಲ್ಲಿ ಗುಡಿಸಲು ಹಾಕಿಕೊಂಡು ವಾಸಿಸುತ್ತಾರೆ. ದೂರದಿಂದಲೇ ವಿಠಲನ ಮೂರ್ತಿಯನ್ನು ಕಣ್ತುಂಬಿಕೊಳ್ಳತ್ತಾರೆ.


ಒಂದು ರೀತಿಯಲ್ಲಿ, ಅವರ ಮನಸ್ಸಿನೊಳಗೆ ವಿಠಲನ ಮೂರ್ತಿ ಅಚ್ಚೊತ್ತಿ ಬಿಡುತ್ತದೆ. ದೇವಪೂಜೆಯ ಸಮಯದಲ್ಲಿ ಮರಾಠಿಯ ಜನಭಾಷೆಯಲ್ಲಿ ಹಾಡುಗಳನ್ನು ಹಾಡುತ್ತಾರೆ. ಭಜನೆ ಮಾಡುತ್ತಾರೆ. ಅವುಗಳಿಗೆ ಅಭಂಗಗಳೆಂದು ಹೆಸರು. ಇಂದಿಗೂ ಮಹಾರಾಷ್ಟ್ರದಲ್ಲಿ ಅಭಂಗಗಳನ್ನು ಹಾಡುತ್ತಾರೆ. ಆ ಭಜನೆಗಳನ್ನು ಕೇಳಲು ಸ್ವತ: ವಿಠಲನೇ ಬರುತ್ತಿದ್ದನಂತೆ.


ಆಗೆಲ್ಲ, ಊರಹಿರಿಯರ ಮನೆಗಳಲ್ಲಿ ಹಸುಕರುಗಳು ಕಾಲವಾದರೆ, ಇವರ ಗುಂಪಿನವರೇ ಹೋಗಿ ವಿಲೇವಾರಿ ಮಾಡಬೇಕಿತ್ತು. ಹಾಗಾಗಿ, ಒಬ್ಬರ ಮನೆಯಿಂದ ಕರೆ ಬರುತ್ತದೆ.ಅವರ ಮನೆಯಲ್ಲಿ ಹಸು ಮರಣಿಸಿರುತ್ತದೆ. ಅದನ್ನು ತೆಗೆದುಕೊಂಡು ಹೋಗಲು ಚೊಕ್ಕಮೇಳನಿಗೆ ಕರೆ ಬರುತ್ತದೆ. ಆ ಹಸುವಿನ ಮೈ ನೀರು ತುಂಬಿಕೊಂಡು ಬಹಳ ಭಾರವಾಗಿರುತ್ತದೆ. ಒಬ್ಬರು ಸಾಕಾಗುವುದಿಲ್ಲ. ಆದರೆ ಬಹಳ ಮಳೆ ಬರುತ್ತಿರುವುದರಿಂದ ಮತ್ತಾರು ಜೊತೆಗೆ ಬರುತ್ತಿಲ್ಲ.


ಮಾರನೆಯದಿನ, ಮನೆಯಲ್ಲಿ ಶ್ರಾದ್ಧ ಕರ್ಮವಿರುವುದರಿಂದ, ಮನೆಯವರು ಅವಸರಿಸುತ್ತಿದ್ದಾರೆ.

ಚೊಕ್ಕಮೇಳನಿಗೆ ಎಂದೂ ಒಪ್ಪಿಕೊಂಡ ಕೆಲಸವನ್ನು ಮಾಡಿಯೇ ಮುಗಿಸುವ ಗುರಿ. ಧಾರಾಕಾರ ಮಳೆ. ಕತ್ತಲು. ಆಗಾಗ ಮಿಂಚುವ ಮಿಂಚಿನ ಬೆಳಕಷ್ಟೇ. ಏನೂ. ಮಾಡಲೂ ತೋಚದು. ಸರಿ. ವಿಠಲಾ ನೀನೆ ಗತಿ ನನಗೆ. ನೀನೇ ದಾರಿ ತೋರಬೇಕು ಎಂದು ಪ್ರಾರ್ಥಿಸುತ್ತಾರೆ.


ಆಗ, ಆ ಕತ್ತಲಿನಲ್ಲಿ ಒಂದು ಸ್ವರ ಕೇಳುತ್ತದೆ. ಏನಪ್ಪ ಚೊಕ್ಕಮೇಳ, ನನ್ನ ಕರೆದಿಯಾ?

ಚೊಕ್ಕ: ಹೌದು ನನ್ನಯ್ಯ. ಈ ಹಸುವನ್ನು ಸಾಗಿಸಬೇಕು. ಆದಷ್ಟು ಬೇಗ. ಅಯ್ಯನವರ ಮನೆಯಲ್ಲಿ ನಾಳೆ ಶ್ರಾದ್ಧವಿದೆಯಂತೆ. ಅದಕ್ಕೆ ತೊಂದರೆಯಾಗಬಾರದು. ನನ್ನ ಜೊತೆಯವರ್ಯಾರೂ ಬರುತ್ತಿಲ್ಲ. ಮಳೆ ಸುರಿಯುತ್ತಿದೆ. ಕತ್ತಲು ಬೇರೆ. ಸ್ವಲ್ಪ ಸಹಾಯ ಮಾಡು. ನನಗೊಬ್ಬನಿಗೇ ಆಗುತ್ತಿಲ್ಲ.


ಬಂದವ: ಸರಿ. ಎತ್ತಲು ಸಹಾಯ ಮಾಡುವೆ. ನನಗೆ ನೀನೇನು ಕೊಡುತ್ತೀಯೆ?

ಚೊಕ್ಕ; ನಾನೇನು ಕೊಡಲಿ? ಯಜಮಾನರು ಏನು ಕೊಡುತ್ತಾರೋ, ಅದರಲ್ಲಿ ಅರ್ಧ ನಿನಗೆ ಕೊಡುತ್ತೇನೆ.

ಬಂದವ; ಅದೆಲ್ಲ ಏನೂ ಬೇಡ. ಹಸುವಿನ ಕಾಲುಗಳನ್ನು ಕಟ್ಟು ಮುಂದೆ ನಾನು ಎತ್ತಿಕೊಳ್ಳುತ್ತೇನೆ. ಹಿಂದೆ ನೀನು ಎತ್ತಿಕೊ. ದಾರಿ ಉದ್ದಕ್ಕೂ ನೀನು ವಿಠಲನ ಹಾಡುಗಳನ್ನು ಹಾಡಬೇಕು. ಆಯಿತಾ?


ಚೊಕ್ಕ: ಸರಿ. ಹಾಗೇ ಆಗಲಿ.


ಮನಸಿನಲ್ಲಿ ಯೋಚನೆ ಚೊಕ್ಕನಿಗೆ. ಇದೆಂತಹ ವಿಚಿತ್ರ ಕೋರಿಕೆ. ಸರಿ. ಇಬ್ಬರೂ ಹಸುವನ್ನೆತ್ತಿಕೊಂಡು ಹೊರಟರು. ಬಂದವ ಮುಂದೆ. ಚೊಕ್ಕ ಹಿಂದೆ. ಚೊಕ್ಕನಿಗೆ ಆಶ್ಚರ್ಯ. ಸತ್ತ ಹಸು ಬಹಳ ಭಾರ. ಆದರೆ ಇದೇನಿದು ನನಗೆ ಭಾರವೇ ಕಾಣುತ್ತಿಲ್ಲವಲ್ಲ ಎಂದು.


ಊರ ಹೊರಗಿನ ಮೈದಾನ. ಸಿಕ್ಕಾಗ, ಹಸುವನ್ನಿಳಿಸಿ, ಹಳ್ಳ ತೋಡುವಾಗ, ಮಿಂಚಿನ ಬೆಳಕು ಬಂದವನ ಮೊಗದ ಮೇಲೆ ಕ್ಷಣಕಾಲ ಬೀಳುತ್ತದೆ. ಆಗ ಚೊಕ್ಕ ಅವನ ಮೊಗವನ್ನು ಕಾಣುತ್ತಾನೆ. ದೇವಮಂದಿರದ ವಿಠಲ. ಕಿವಿಗಳಲ್ಲಿ ಹೊಳೆಯುವ ಲೋಲಾಕು. ಸೊಂಟದಲ್ಲಿ ಕಟ್ಟಿದ ಚಿನ್ನದ ಪಟ್ಟಿ. ಮಿಂಚಿನಂತೆ ಹೊಳೆವ ಕಂಗಳು. ಹಳದಿಯ ರೇಷ್ಮೆ ವಸ್ತ್ರ. ಅವ ತಲೆ ತಗ್ಗಿಸಿ, ಹಳ್ಳ ತೆಗೆಯುವುದರಲ್ಲಿ ಮಗ್ನ. ಚೊಕ್ಕ ಹಾಡುನಿಲ್ಲಿಸಿ ನೋಡವಲ್ಲಿ ಮಗ್ನ. ಬಂದವ: ಚೊಕ್ಕ, ಹಾಡು ನಿಲ್ಲಿಸಬೇಡ. ನೀನು ಹಾಡು. ಹಾಡು ಕೇಳುತ್ತಾ ಹಳ್ಳ ತೆಗೆಯುತ್ತೇನೆ. ಆಯಾಸವಾಗುವುದಿಲ್ಲ.


ಹಳ್ಳ ತೆಗೆದಾಯ್ತು. ಹಸುವನ್ನು ಹೂತಾಯ್ತು. ತಲೆಯೆತ್ತಿ ನೋಡಲು, ಬಂದವ ಮಾಯ. ಚೊಕ್ಕಮೇಳನಿಗೆ ಆಗ ತಿಳಿಯಿತು. ಬಂದವ ವಿಠ್ಠಲ ಎಂದು. ಆ ಸಂಗತಿ ಗುರು ನಾಮದೇವರಿಗೂ ತಲುಪಿತು. ದೈವಸಾಕ್ಷಾತ್ಕಾರ ಪಡೆದ ಚೊಕ್ಕಮೇಳ ಸಮಾಜದಲ್ಲಿ ಗುರುತಿಸಲ್ಪಟ್ಟರು. ಆದರೂ ಆವರ ನಡವಳಿಕೆಗಳು, ಕರ್ತವ್ಯಗಳು ಮೊದಲಿನಂತೆಯೇ ಸಾಗಿದಪು.


ಅದೊಂದು ದಿನ ಭಜನಾ ಮೇಳ. ಊರವರೆಲ್ಲ ಸೇರಿ ಚೊಕ್ಕಮೇಳರನ್ನು ಸನ್ಮಾನಿಸಿದರು. ಚೊಕ್ಕರು ನಿರ್ಲಿಪ್ತ. ಭಜನೆ ಸಾಗುತ್ತಿದ್ದಂತೆ ಆ ಭಜನೆಯ ನಡೆಯುತ್ತಿದ್ದ ಕಟ್ಟಡವೆ ಕುಸಿದು ಅನೇಕರು ಸಾವನ್ನಪ್ಪುತ್ತಾರೆ. ಅವರಲ್ಲಿ ಚೊಕ್ಕಮೇಳರೂ ಸೇರಿರುತ್ತಾರೆ. ಆ ಹೆಣಗಳ ರಾಶಿಯಲ್ಲಿ ಯಾರುಯಾರೆಂದು ಗುರುತಿಸುವುದೇ ಕಷ್ಟ ವಾಗುತ್ತದೆ. ಆಗ ಬಂದ ನಾಮದೇವರು ನಾನು ಗುರುತಿಸುತ್ತೇನೆ ಎಂದು ಹೇಳುತ್ತಾರೆ. ಹೆಣಗಳ ಮೇಲೆ ಹೊಡೆದು ನೋಡಲು ತೊಡಗುತ್ತಾರೆ.


ಒಂದು ಹೆಣದ ಮೇಲೆ ಹೊಡೆದಾಗ, ವಿಠ್ಠಲ ಎಂದು ಶಬ್ದವಾಗುತ್ತದೆ. ಮತ್ತೆ ಮತ್ತೆ ಹೊಡೆದಾಗಲೂ ವಿಠ್ಠಲ ವಿಠ್ಠಲ ನಾಮವೇ ಕೇಳುತ್ತದೆ. ಆಗ ಅದೇ ದೇಹವೆ ಚೊಕ್ಕಮೇಳನದು ಎಂದು ಗುರತಿಸುತ್ತಾರೆ. ಅದು ಸಿಕ್ಕ ಜಾಗದಲ್ಲಿಯೇ ಒಂದು ಸ್ಮಾರಕ ಕಟ್ಟುತ್ತಾರೆ. ಅದು ಚಂದ್ರಭಾಗ ನದಿಯ ತಟದಲ್ಲಿ ಇಂದಿಗೂ ಇದೆ. ವಾರಕರಿ ಬರುವ ನೇಮಿಗರು ಮೊದಲು ಚೊಕ್ಕಮೇಳರನ್ನು ದರ್ಶಿಸಿ, ಆಮೇಲೆ ನಾಮದೇವರ ಸ್ಮಾರಕಕ್ಕೆ ಭೇಟಿ ನೀಡಿ, ಕೊನೆಯಲ್ಲಿ ವಿಠ್ಠಲನನ್ನು ದರ್ಶನ ಮಾಡುವ ಪದ್ಧತಿ ಇಂದಿಗೂ ಪಂಡರಾಪುರದಲ್ಲಿ ಇದೆ.


ಪಾಂಡಿತ್ಯವಲ್ಲ ಸಿರಿವಂತಿಕೆಯೂ ಅಲ್ಲ ಜಾತಿಯೂ ಅಲ್ಲ. ದೈವಸಾಕ್ಷಾತ್ಕಾರಕ್ಕೆ ಭಕ್ತಿಯೊಂದೇ ಮಾರ್ಗ. ನಿಷ್ಕಾಮ ಸೇವೆಯೆ ಕರ್ತವ್ಯ ಪಥವು ಎಂಬ ಗೀತೆಯ ಸಾರವನ್ನು ತನ್ನ ಸರಳ ಸಜ್ಜನಿಕೆಯ ಜೀವನ ನಡೆಸುವುದರ ಮೂಲಕ ತೋರಿದ ಚೊಕ್ಕಮೇಳರು ಮಹಾರಾಷ್ಟ್ರದ ಮಹರ್ ಜನಾಂಗದ ಭಕ್ತ ಜ್ಯೋತಿ.


ಕೊನೆಯ ತನಕ ದೇವಾಲಯದೊಳಕ್ಕೆ ಪ್ರವೇಶ ಸಿಗದ, ಆದರೂ ಭಕ್ತಿಯ ಹಿರಿಮೆ ಸಾರಿದರು. ನಮ್ಮ ಕನಕರೂ ಹಾಗೇ ಅಲ್ಲವೇ.


- ಮೀನಾಕ್ಷಿ ಮನೋಹರ, ಬೆಂಗಳೂರು


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter   

إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top