ಮೂಡುಬಿದಿರೆ: ‘ಉದ್ಯೋಗ ಪಡೆಯಲು ಬುದ್ಧಿಮತ್ತೆಯ ಪ್ರಮಾಣ (ಐಕ್ಯು) ಮುಖ್ಯವಾದರೆ, ಯಶಸ್ವಿಯಾಗಲು ಭಾವನಾತ್ಮಕ ಪ್ರಮಾಣ ಬಹುಮುಖ್ಯ(ಇಕ್ಯೂ)’ ಎಂದು ಸೇಂಟ್ ಅಲೋಶಿಯಸ್ ಕಾಲೇಜಿನ ಕುಲಸಚಿವ ಡಾ.ಆಲ್ವಿನ್ ವಿ. ಡೇಸಾ ಹೇಳಿದರು.
ಮಿಜಾರಿನ ಆಳ್ವಾಸ್ ಎಂಜಿನಿಯರಿಂಗ್ ಮತ್ತು ತಂತ್ರಜ್ಞಾನ ಕಾಲೇಜಿನಲ್ಲಿ ಬುಧವಾರ 2023-25ನೇ ಸಾಲಿನ ಎಂಬಿಎ ತಂಡದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು. ನಿಮ್ಮ ಕೌಶಲ ವೃದ್ಧಿಸಲು ಬಹುಭಾಷೆಗಳನ್ನು ಕಲಿಯಿರಿ ಎಂದ ಅವರು, ವೃತ್ತಿಯಲ್ಲಿ ಯಶಸ್ಸು ಸಾಧಿಸುವ ಮಾರ್ಗಗಳ ಕುರಿತು ತಿಳಿಸಿದರು.
ಕಾಲೇಜಿನ ಹಳೆ ವಿದ್ಯಾರ್ಥಿನಿ, ಥಾಮ್ಸನ್ ರಾಯಿಟರ್ಸ್ (ಪರೋಕ್ಷ ತೆರಿಗೆ) ಪ್ರಬಂಧಕಿ, ರೂಪಶ್ರೀ ಹೆಗ್ಡೆ ಶೆಟ್ಟಿ ಮಾತನಾಡಿ, ವಿದ್ಯಾರ್ಥಿ ಜೀವನದಲ್ಲಿ ಅವಕಾಶಗಳ ಸದ್ಬಳಕೆ ಮಾಡಿಕೊಳ್ಳಬೇಕು ಎಂದರು. ಕೃತಕ ಬುದ್ಧಿಮತ್ತೆ(ಎಐ) ಎಂದಿಗೂ ಮನುಷ್ಯನ ಉದ್ಯೋಗವನ್ನು ನಿಭಾಯಿಸಲು ಸಾಧ್ಯವಿಲ್ಲ. ಅದು ಮಿತಿಮೀರಿದ ಹಾಗೂ ಪುನರಾವರ್ತಿತ ಕೆಲಸವನ್ನು ಕಡಿಮೆ ಮಾಡಬಹುದಷ್ಟೇ ಎಂದು ಅವರು ಅಭಿಪ್ರಾಯ ಪಟ್ಟರು.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವ್ಯವಸ್ಥಾಪಕ ಟ್ರಸ್ಟಿ ವಿವೇಕ್ ಆಳ್ವ ಮಾತನಾಡಿ, ‘ವಿದ್ಯಾರ್ಥಿಗಳು ಕಾಲೇಜಿನಲ್ಲಿರುವ ಸೌಲಭ್ಯಗಳನ್ನು ಬಳಸಿಕೊಂಡು ಸಂಪೂರ್ಣ ಪರಿಶ್ರಮದ ಮೂಲಕ ಯಶಸ್ಸು ಸಾಧಿಸಬೇಕು. ಔದ್ಯೋಗಿಕ ಯಶಸ್ಸಿನ ಜೊತೆ ತಮ್ಮನ್ನು ಬೆಳೆಸಿದ ಕಾಲೇಜಿಗೆ ಹೆಮ್ಮೆ ತರಬೇಕು’ ಎಂದರು. ಒಂದು ಉದ್ಯೋಗಕ್ಕೆ ಹತ್ತು ಸಾವಿರ ಆಕಾಂಕ್ಷಿಗಳು ಇರುತ್ತಾರೆ. ಇಂತಹ ಕಾಲಘಟ್ಟದಲ್ಲಿ ಜ್ಞಾನ ಮತ್ತು ಕೌಶಲದ ಅಭಿವೃದ್ಧಿ ಅವಶ್ಯ ಎಂದರು.
ಪ್ರಾಂಶುಪಾಲ ಡಾ.ಪೀಟರ್ ಫೆರ್ನಾಂಡಿಸ್ ಮಾತನಾಡಿ, ‘ಕಾರ್ಪೋರೇಟ್ ಜಗತ್ತಿನಲ್ಲಿ ನೀವೆಲ್ಲ ಸೂರ್ಯನಂತೆ ಪ್ರಜ್ವಲಿಸುವ ಗುರಿ ಹೊಂದಬೇಕು’ ಎಂದರು. ಅಕಾಡೆಮಿಕ್ಸ್ ಡೀನ್ ಡಾ ದಿವಕರ ಶೆಟ್ಟಿ, ಯೋಜನಾ ಡೀನ್ ಡಾ ದತ್ತಾತ್ರೇಯ, ಸ್ನಾತಕೋತ್ತರ ವ್ಯವಹಾರ ಆಡಳಿತ ವಿಭಾಗದ ಮುಖ್ಯಸ್ಥೆ ಪ್ರಿಯಾ ಸಿಕ್ವೇರಾ ಅಧ್ಯಕ್ಷತೆ ವಹಿಸಿದ್ದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ