ಹೆಣ್ಣು ಸಮಾಜದ ಕಣ್ಣು. ಆಕೆಯನ್ನು ಗೌರವಿಸಿ, ಪೂಜಿಸುವ ಏಕೈಕ ರಾಷ್ಟ್ರವೇ ಭಾರತ. ಪುರಾತನ ಕಾಲದಿಂದಲೂ ಈ ದೇಶದಲ್ಲಿ ಮಹಿಳೆಯರ ಸ್ಥಾನಮಾನ ಎಂದಿಗೂ ಗೌರವಯುತವಾದದ್ದು. ದೇಶವನ್ನೇ ಮಾತೆಗೆ ಹೋಲಿಸಿರುವ ಈ ಪುಣ್ಯಭೂಮಿಯಲ್ಲಿ ಹೆಣ್ಣೆಂದರೆ ದೇವತೆ. ಹೀಗಿದ್ದರೂ ಕೂಡ ಹಲವಾರು ಕಾರಣಗಳಿಂದ ಹೆಣ್ಣು ಪ್ರತಿಯೊಂದು ಹಂತಗಳಲ್ಲೂ ಸಂಕಷ್ಟಗಳನ್ನು ಅನುಭವಿಸುತ್ತಿದ್ದಾಳೆ. ಅದರಲ್ಲೂ ಮುಖ್ಯವಾದ ಪಾತ್ರವಹಿಸಿರುವುದು ಸಾಮಾಜಿಕ ಮಾಧ್ಯಮಗಳು. ಅತ್ಯಂತ ವೇಗವಾಗಿ ಸಂವಹನ ನಡೆಸಲೆಂದೇ ರೂಪಿತವಾಗಿರುವ ಮಾಧ್ಯಮಗಳು ಹಲವಾರು ಮಹಿಳಾ ದೌರ್ಜನ್ಯಗಳಿಗೆ ಕಾರಣೀಭೂತವಾಗಿವೆ. ಫೇಸ್ ಬುಕ್, ಇನ್ಸ್ಟಾಗ್ರಾಮ್, ಟ್ವಿಟರ್ ಮುಂತಾದ ಸಮೂಹ ಮಾಧ್ಯಮಗಳು ಮಹಿಳೆಯರ ಮೇಲಿನ ಶೋಷಣೆಗಳಿಗೆ ಎಡೆ ಮಾಡಿಕೊಟ್ಟಿವೆ.
ಕೆಲವರಂತೂ ಹೆಣ್ಣಿನ ಭಾವನೆಗಳ ಜೊತೆಗೆ ಆಟವಾಡುವುದನ್ನೇ ತಮ್ಮ ಕಾರ್ಯವಾಗಿ ರೂಪಿಸಿಕೊಂಡಿದ್ದಾರೆ. ಸಮೂಹ ಮಾಧ್ಯಮಗಳಲ್ಲಿ ಬಂಧಗಳನ್ನು ಗೆಳೆತನದ ಹೆಸರಿನಲ್ಲಿ ಆರಂಭಿಸಿ ಅವರ ಬದುಕಿನ ಜೊತೆಗೆ ಚೆಲ್ಲಾಟವಾಡುತ್ತಿದ್ದಾರೆ. ಸಾಮಾಜಿಕ ಮಾಧ್ಯಮಗಳಲ್ಲಿಂದು ಹೆಣ್ಣನ್ನು ಪ್ರೀತಿ ಎಂಬ ಮೋಸದಾಟಕ್ಕೆ ಬೀಳಿಸಿ, ತಮ್ಮ ಸ್ವಾರ್ಥ ಉದ್ದೇಶಗಳನ್ನು ಈಡೇರಿಸಿಕೊಳ್ಳುತ್ತಿದ್ದಾರೆ. ಪ್ರಸ್ತುತ ಕಾಲದಲ್ಲಿ ಇಂತಹ ಅದೆಷ್ಟೋ ಘಟನೆಗಳು ಇನ್ನೂ ನಡೆಯುತ್ತಲೂ ಇವೆ.
ಇವುಗಳೆಲ್ಲದರ ಕುರಿತು ಒಂದು ನಿಮಿಷ ನಿಂತು ಯೋಚಿಸಿದರೆ ಬದುಕೇ ನಶ್ವರ ಎನ್ನುವಂತಾಗಿದೆ. ಇಂತಹ ಘಟನೆಗಳು ಹೆಣ್ಣನ್ನು ದೈಹಿಕವಾಗಿ , ಮಾನಸಿಕವಾಗಿ ಕುಗ್ಗಿಸುತ್ತಿವೆ. ಇವುಗಳಲ್ಲಿ ನೊಂದ ಮನಸ್ಸುಗಳಿಂದು ಆತ್ಮಹತ್ಯೆಯಂತಹ ಕ್ರೂರ ಘಟನೆಗಳಿಗೆ ಶರಣಾಗುತ್ತಿವೆ. ಇದು ಖಂಡಿತವಾಗಿಯೂ ಆತ್ಮಹತ್ಯೆಯಲ್ಲ. ನಂಬಿಕೆಯ ಕೊಲೆ, ಮನಸ್ಸಿನ ಕೊಲೆ, ಪ್ರೀತಿಯ ಕೊಲೆ, ಭಾವನೆಗಳ ಕೊಲೆ. ಇಂದಿನ ಹೆಣ್ಣು ಮಕ್ಕಳಿಗೆ ಹೇಳುವ ಒಂದು ಕಿವಿ ಮಾತೆಂದರೆ, ಸಾಮಾಜಿಕ ಮಾಧ್ಯಮಗಳಲ್ಲಿ ಭೇಟಿಯಾಗುವ ಯಾವುದೋ ಒಬ್ಬ ಅಪರಿಚಿತನ ಮೇಲಿರುವ ನಂಬಿಕೆ ಪ್ರೀತಿಯನ್ನು ನಿಮ್ಮ ತಂದೆ ತಾಯಿಯರ ಮೇಲಿಡಿ. ಏಕೆಂದರೆ ಜಗತ್ತಲ್ಲಿರುವ ನೈಜ ಪ್ರೀತಿಯ ಅರ್ಥವೇ ತಂದೆ ತಾಯಿ. ಸಾಧ್ಯವಾದರೆ ಅವರ ಪ್ರೀತಿಯನ್ನು ಉಳಿಸಿಕೊಳ್ಳಿ.
ಸಾಮಾಜಿಕ ಮಾಧ್ಯಮಗಳಲ್ಲಿ ನಡೆಯುವ ದೌರ್ಜನ್ಯಗಳಿಗೆ ಮುಖ್ಯವಾದ ಕಾರಣವೆಂದರೆ ತಮ್ಮ ಖಾಸಗಿ ಮಾಹಿತಿಗಳನ್ನು ಹರಿಯಬಿಡುವುದು. ಈ ರೀತಿ ಮಾಡುವುದರಿಂದ ದೌರ್ಜನ್ಯಗಳು ಮಿತಿ ಮೀರುತ್ತವೆ. ಆದ್ದರಿಂದ ಸಾಮಾಜಿಕ ಮಾಧ್ಯಮಗಳನ್ನು ಬಳಸುವಾಗ ಬಹಳ ಜಾಗರೂಕತೆಯಿಂದ ಇರಬೇಕು. ಸಾಮಾಜಿಕ ಮಾಧ್ಯಮಗಳಲ್ಲಿ ನಡೆಯುವ ಇನ್ನೊಂದು ರೀತಿಯ ದೌರ್ಜನ್ಯವೆಂದರೆ ಹೆಣ್ಣಿನ ಅಶ್ಲೀಲ ಭಾವಚಿತ್ರಗಳ ರಚನೆ. ಹೌದು ಇಂತಹ ಅದೆಷ್ಟೋ ಘಟನೆಗಳನ್ನು ನಾವು ಇಂದಿಗೂ ಕೇಳುತ್ತಿದ್ದೇವೆ. ಇತ್ತೀಚೆಗಷ್ಟೇ ಯಾವುದೋ ಅಶ್ಲೀಲ ಭಾವಚಿತ್ರಕ್ಕೆ ಖ್ಯಾತ ನಟಿಯೊಬ್ಬರ ಮುಖವನ್ನು ಸೇರಿಸಿ ಸಾಮಾಜಿಕ ಜಾಲತಾಣದಲ್ಲಿ ಹರಿಯ ಬಿಟ್ಟಿರುವ ಘಟನೆಯನ್ನು ಕೇಳಿದ್ದೇವೆ.ಇಂತಹ ಘಟನೆಗಳು ಮುಂದೆಂದೂ ನಡೆಯದಂತೆ ಸರ್ಕಾರವು ಕಠಿಣ ಕ್ರಮಗಳನ್ನು ಕೈಗೊಳ್ಳಬೇಕು.
ಸಾಮಾಜಿಕ ಮಾಧ್ಯಮಗಳಾದ ದೂರದರ್ಶನ, ರೇಡಿಯೋ, ವಾರ್ತಾ ಪತ್ರಿಕೆ, ಮ್ಯಾಗಝೀನ್ ಮುಂತಾದವುಗಳಲ್ಲಿ ಮಹಿಳಾ ದೌರ್ಜನ್ಯಗಳನ್ನು ಕಾಣಬಹುದು. ಸ್ತ್ರೀಯನ್ನು ಕೇವಲ ಲೈಂಗಿಕ ವಸ್ತುವನ್ನಾಗಿ ತೋರಿಸಿ, ಅಗೌರವ ನೀಡುವುದು. ಇಂತಹ ದೌರ್ಜನ್ಯಗಳಿಗೆ ಕಡಿವಾಣ ಹಾಕಬೇಕಾದುದು ನಮ್ಮೆಲ್ಲರ ಕರ್ತವ್ಯ. ಹಿಂದೂ ಧರ್ಮದ ಪ್ರಕಾರ ಹೆಣ್ಣೆಂದರೆ ದೈವೀಕ ಸ್ವರೂಪ. ಲಕ್ಷ್ಮಿ, ಸರಸ್ವತಿ, ಪಾರ್ವತಿ ಹೀಗೆ ಮುಂತಾದ ದೇವತೆಯರು ಮಹಿಳೆಯರೇ. ಇಂತಹ ಪುಣ್ಯಭೂಮಿಯಲ್ಲಿ ಹೆಣ್ತನದ ಗೌರವವನ್ನು ಕಾಪಾಡುವವರಾಗಬೇಕು. ಸಾಮಾಜಿಕ ಮಾಧ್ಯಮಗಳಿಂದ ಹೆಚ್ಚುತ್ತಿರುವ ಮಹಿಳಾ ದೌರ್ಜನ್ಯಗಳನ್ನು ತಡೆಗಟ್ಟುವುದಾದರೂ ಹೇಗೆ? ಎನ್ನುವ ಪ್ರಶ್ನೆಗೆ ಇನ್ನೂ ಉತ್ತರ ದೊರಕಿಲ್ಲ. ಆದರೆ ಕೆಲವೊಂದು ವಿಷಯಗಳಲ್ಲಿ ನಾವು ಜಾಗೃತರಾಗಬಹುದು. ಅದರಲ್ಲಿ ಮುಖ್ಯವಾಗಿ, ಸಾಮಾಜಿಕ ಜಾಲತಾಣಗಳಲ್ಲಿ ನಮ್ಮ ಖಾಸಗಿ ಮಾಹಿತಿಗಳನ್ನು ಗುಪ್ತವಾಗಿಟ್ಟುಕೊಳ್ಳುವುದು, ಖಾಸಗಿ ಭಾವಚಿತ್ರ ವಿಡಿಯೋಗಳನ್ನು ಯಾರಿಗೂ ಹಂಚದಿರುವುದು, ದೂರದರ್ಶನ ಮಾಧ್ಯಮಗಳಲ್ಲಿ ಮಹಿಳೆಯರ ಧಕ್ಕೆಗೆ ಕುಂದು ಬರುವಂತಹ ಮಾಹಿತಿಗಳು ಕಂಡುಬಂದಲ್ಲಿ ಅದರ ವಿರುದ್ಧ ಧ್ವನಿ ಎತ್ತುವುದು. ಸರ್ಕಾರವು ಇದರ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿ ಮಹಿಳೆಯರಿಗೆ ಇವುಗಳ ದುಷ್ಪರಿಣಾಮಗಳು ಕುರಿತು ಮುನ್ನೆಚ್ಚರಿಕೆ ನೀಡುವ ಕಾರ್ಯಕ್ರಮಗಳನ್ನು ಉಚಿತವಾಗಿ ನಡೆಸುವುದು.
ಸ್ನೇಹಿತರೆ ಮಹಿಳೆಯರ ಮೇಲಿನ ದೌರ್ಜನ್ಯಗಳು ಇಂದು ಎಲ್ಲಾ ಕಡೆಗಳಿಂದಲೂ ನಡೆಯುತ್ತಿವೆ. ರಾಕ್ಷಸರ ಕರಿ ನೆರಳು ಇಂದು ಹೆಣ್ಣಿನ ಬದುಕನ್ನೇ ನುಂಗಿದೆ. ಇಂದು ಆಕೆಯ ಭಾವನೆಗಳ ಜೊತೆಗೆ ಆಟವಾಡುವವರೇ ಹೆಚ್ಚು. ಇಂತಹ ಕರಿ ನೆರಳಿನಿಂದ ಅದೆಷ್ಟೋ ಹೆಣ್ಣು ಮಕ್ಕಳ ಬದುಕು ಛಿದ್ರವಾಗಿವೆ.ಇದರ ಬಗ್ಗೆ ಹೆಚ್ಚು ಯೋಚಿಸಿದಷ್ಟು ಜೋರಾಗಿ ಪ್ರತಿಭಟನೆ ಮಾಡಬೇಕನಿಸುತ್ತದೆ. ಇಂತಹ ಕ್ರೂರಿಗಳ ರುಂಡ ಚೆಂಡಾಡಬೇಕು ಎನ್ನುವಷ್ಟು ಕೋಪ ಉಕ್ಕಿಬರುತ್ತದೆ. ಹೆಣ್ಣು ಕರುಣಾಮಯಿ. ಆಕೆಯಲ್ಲಿ ಅದೆಷ್ಟೋ ಕನಸುಗಳಿದ್ದರೂ ತನ್ನವರಿಗಾಗಿ, ತನ್ನನ್ನು ಪ್ರೀತಿಸುವವರಿಗಾಗಿ ಅವುಗಳನ್ನು ಬದಿಗೊತ್ತಿ ಬದುಕುತ್ತಾಳೆ. ಬದುಕಿನಲ್ಲಿ ತಾಯಿಯಾಗಿ, ಅಕ್ಕನಾಗಿ, ಜೀವನ ಸಂಗಾತಿಯಾಗಿ ತನ್ನ ಕರ್ತವ್ಯವನ್ನು ನಿಭಾಯಿಸಿಕೊಂಡು ಹೋಗುವ ಆಕೆಯ ಭಾವನೆಗಳಿಗೆ ಸ್ಪಂದಿಸುವ ಜೀವವೇ ಇಲ್ಲದಂತಾಗಿದೆ. ತನ್ನ ಕನಸಿನ ಗೋಪುರ ನುಚ್ಚು ನೂರಾದರೂ ಮಂದಹಾಸದಿಂದ ದುಃಖವನ್ನು ತೋರಿಸದೆ ಬದುಕುವ ದೇವತೆ. ಆಕೆಯಲ್ಲಿ ಹುದುಗಿದ ಭಾವನೆಗಳಿಗೆ ಸ್ಪಂದನೆಯ ಮಾತುಗಳಿಗಾಗಿ ಬದುಕಿನುದ್ದಕ್ಕೂ ಹಪಹಪಿಸುತ್ತಿರುತ್ತಾಳೆ. ವೇದನೆಯನ್ನು ತನ್ನೊಳಗೆ ಭದ್ರವಾಗಿ ಮುಚ್ಚಿಟ್ಟು ಮುಗುಳುನಗೆಯೊಂದಿಗೆ ಮುನ್ನಡೆಯುತ್ತಾಳೆ. ಹೆಣ್ಣಿಗೆ ನೋವು ಕೊಡುವ ಮುನ್ನ ಒಮ್ಮೆ ಆಕೆಯ ಸ್ಥಾನದಲ್ಲಿ ನಿಂತು ಯೋಚಿಸಿ. ನಿಮ್ಮ ಮನೆಯಲ್ಲಿರುವ ದೇವತೆಯನ್ನು ಹುಡುಕುವ ಸಣ್ಣ ಪ್ರಯತ್ನ ಮಾಡಿ. ಸಾಮಾಜಿಕ ಮಾಧ್ಯಮಗಳಲ್ಲಿ ಆಕೆಯ ಮೇಲೆ ನಡೆಯುತ್ತಿರುವ ದೌರ್ಜನ್ಯಗಳ ವಿರುದ್ಧ ಹೋರಾಡುವ ಮನಸ್ಸು ನಮ್ಮೆಲ್ಲರದಾಗಬೇಕು.
- ಸಂಶೀನ,
ದ್ವಿತೀಯ ಪತ್ರಿಕೋದ್ಯಮ,
ವಿವೇಕಾನಂದ ಕಾಲೇಜು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ