ಅರ್ಥಹೀನ "ವೆಲೆಂಟೈನ್ ಡೇ" ನಮಗೆ ಬೇಡ: ಹಿಂದೂ ಜನಜಾಗೃತಿ ಸಮಿತಿ ಕರೆ

Upayuktha
0



ಫೆಬ್ರವರಿ 14 ರಂದು ‘ವ್ಯಾಲೆಂಟೈನ್ ಡೇ’ ಅಂದರೆ ಪ್ರೇಮಿಗಳ ದಿನವನ್ನು ಆಚರಿಸುತ್ತಾರೆ. ಯುವಪೀಳಿಗೆಯೇ, ನಿಜವಾದ ಪ್ರೇಮ ಕೇವಲ ಒಂದು ದಿನ ಇರುತ್ತದೆಯೇ? ಮಹಾವಿದ್ಯಾಲಯಗಳಲ್ಲಿನ ’ಡೇ’ ಸಂಸ್ಕೃತಿಯೆಂದರೆ ಪಾಶ್ಚಾತ್ಯರ ಅನೈತಿಕತೆಯ ಭೋಗವಾದದ ಅನುಕರಣೆಯಾಗಿದೆ! ’ವ್ಯಾಲೆಂಟೈನ್ ಡೇ’ ಅಂದರೆ ಸಭ್ಯತೆ ಮತ್ತು ನೈತಿಕತೆಯನ್ನು ಅಪಮಾನಗೊಳಿಸುವ ಒಂದು ಕಪ್ಪು’ ದಿನವಾಗಿದೆ. ಭಾರತೀಯ ಮಹಾನ್ ಸನಾತನ ಸಂಸ್ಕೃತಿಯ ಮೇಲೆ ಆಘಾತ ಮಾಡುವ ಸಮಸ್ಯೆಯಾಗಿದೆ. ಇದರಿಂದ ಹಿಂದೂಗಳ ಸಾಂಸ್ಕೃತಿಕ ಮತಾಂತರಕ್ಕೆ ಒಂದು ರೀತಿಯಲ್ಲಿ ಪ್ರೋತ್ಸಾಹ ಸಿಗುತ್ತದೆ ಮತ್ತು ದೇಶದ ಯುವ ಪೀಳಿಗೆಯು ತಪ್ಪು ದಾರಿಗೆ ಹೋಗುತ್ತದೆ. ವೃತ್ತಿಯು ಸಾತ್ವಿಕವಾಗಿ ನೀತಿವಂತ, ನೈತಿಕ ಮತ್ತು ಸಂಯಮೀ ಜೀವನ ನೆಡೆಸಲು ಹಬ್ಬ, ಉತ್ಸವ, ವ್ರತಗಳನ್ನು ಮತ್ತು ಧಾರ್ಮಿಕ ಕೃತಿಗಳನ್ನು ಆಚರಿಸಲು ಹೇಳುವ ಸನಾತನ ಧರ್ಮದ ಹಿಂದೂಗಳು ಪಾಶ್ಚಾತ್ಯರಂತೆ ’ವ್ಯಾಲೆಂಟೈನ್ ಡೇ’ಯ ಉದಾತ್ತೀಕರಣ ಮಾಡುವುದು ಸನಾತನ ಧರ್ಮದ ಮೇಲಿನ ಹಾನಿಯೇ ಆಗಿದೆ.


ಯಾರು ಈ ವ್ಯಾಲೆಂಟೈನ್?

ಮೂರನೆಯ ಶತಮಾನದಲ್ಲಿ ರೋಮ್ ರಾಜನಾದ ಕ್ಲೌಡಿಯಸ್‌-2 ಎಂಬಾತನು ಯುವಕರು ವಿವಾಹವಾಗದೇ ಸೇನೆಯಲ್ಲಿ ಸೇರಬೇಕು ಎಂಬ ಆದೇಶ ಹೊರಡಿಸಿದನು. ಈ ಆದೇಶಕ್ಕೆ ಬಗ್ಗದೇ ’ವ್ಯಾಲೆಂಟೈನ್’ ಎಂಬ ಕ್ರೈಸ್ತ ಪಾದ್ರಿಯು ಯುವಕ-ಯುವತಿಯರಿಗೆ ರಹಸ್ಯವಾಗಿ ವಿವಾಹ ಮಾಡಿಸಿದನು. ರಾಜನಿಗೆ ಈ ವಿಷಯ ತಿಳಿದಾಗ ಪಾದ್ರಿಯನ್ನು ಸೆರಮನೆಗೆ ತಳ್ಳಿದನು ಮತ್ತು ಗಲ್ಲು ಶಿಕ್ಷೆಯನ್ನು ವಿಧಿಸಿದನು. ಸೆರಮನೆಯಲ್ಲಿ ಈ ತಥಾಕಥಿತ ಅನೈತಿಕತೆ ಪೋಷಣೆ ಮಾಡುವ ಪಾದ್ರಿಯು ಸೆರಮನೆಯ ಜೈಲಧಿಕಾರಿಯ ಪುತ್ರಿಯನ್ನು ಪ್ರೇಮಿಸತೊಡಗಿದನು. ಗಲ್ಲು ಶಿಕ್ಷೆಯ ಹಿಂದಿನ ದಿನ ಅವನು ಆ ಯುವತಿಗೆ ’ನಿನ್ನ ವ್ಯಾಲೆಂಟೈನ್’ ಎಂದು ಬರೆದ ಪತ್ರವನ್ನು ಕಳುಹಿಸಿದನು. ಅಲ್ಲಿಂದ ವ್ಯಾಲೆಂಟೈನ್ಸ ಡೇ ಪ್ರಾರಂಭವಾಯಿತು. ಇಂತಹ ಅನೈತಿಕತೆಯನ್ನು ಕುಮ್ಮಕ್ಕು ನೀಡುವ ಅನೈತಿಕ ಪಾದ್ರಿಯ ದಿನ ಆಚರಣೆ ಮಾಡುವುದು ಎಷ್ಟು ಸರಿ?


ಪಾಶ್ಚ್ಯಾತ್ಯರ ದಾಸರಾದ ಭಾರತೀಯರು!

ಆಧುನಿಕತೆ ಹೆಸರಿನಲ್ಲಿ ಇಂದಿನ ಯುವಜನತೆಯು ಪಾಶ್ಚಾತ್ಯರ ‘ವ್ಯಾಲೆಂಟೈನ್ ಡೇ’, ‘ಚಾಕಲೇಟ್ ಡೇ, ‘ರೋಜ್ ಡೇ’, ‘ಫಾದರ‍್ಸ್ ಡೇ’, ‘ಮದರ‍್ಸ್ ಡೇ’ ಅಂತಹ ಅರ್ಥಹೀನ ದಿನಾಚರಣೆಗಳನ್ನು ಆಚರಿಸುತ್ತಿದೆ. ಇಂತಹ ಆಚರಣೆಗಳ ಮೂಲಕ ಯುವಕರು ಮದ್ಯಪಾನ ಮಾಡುವುದು, ಮಾದಕ ವಸ್ತುಗಳ ಸೇವನೆ ಮಾಡುವುದು, ಪಬ್‌ಗೆ ಹೋಗಿ ಲಿಂಗ ಭೇದವಿಲ್ಲದೇ ಕುಣಿಯುವುದು, ಯುವತಿಯರನ್ನು ಪೀಡಿಸುವುದು, ಅತ್ಯಾಚಾರ, ಬಲಾತ್ಕಾರಗಳಂತಹ ಘಟನೆಗಳಾಗುತ್ತಿವೆ. ಯುವಕರನ್ನು ದಾರಿ ತಪ್ಪಿಸಲು ಡ್ರಗ್ಸ್ ಮಾಫಿಯಾ ಕೆಲಸ ಮಾಡುತ್ತಿದೆ. ಯುವಕರು ವ್ಯಸನಿಗಳಾಗುತ್ತಿದ್ದಾರೆ, ಆತ್ಮಹತ್ಯೆ, ಅಪಘಾತಕ್ಕೀಡಾಗುತ್ತಿದ್ದಾರೆ. ಪಾಶ್ಚಾತ್ಯ ಸಂಸ್ಕೃತಿಯ ಅಂಧಾನುಕರಣೆಯಿಂದ ಯುವಜನತೆ ಅನೈತಿಕ ಮಾರ್ಗವನ್ನು ಅನುಸರಿಸುತ್ತಿದ್ದಾರೆ. ಈ ಮೂಲಕ ಸ್ವಾತಂತ್ರ್ಯದ ಹೆಸರಿನಲ್ಲಿ ಸ್ವೇಚ್ಛಾಚಾರಿಗಳಾಗುತ್ತಿದ್ದಾರೆ. ಆದರೆ ಭಾರತದಲ್ಲಿ ಪ್ರೀತಿಯನ್ನು ಕೇವಲ ಒಂದು ದಿನಕ್ಕೆ ಸೀಮಿತ ಇಲ್ಲ. ಪ್ರೀತಿಯು ವ್ಯಾಪಕವಾಗಿದೆ. ಪ್ರೀತಿ ಭಗವಂತನ ಗುಣವಾಗಿದೆ ಎಂದು ಭಾವಿಸುತ್ತೇವೆ. ನದಿ, ಗಿಡ, ಮರ, ತಂದೆ, ತಾಯಿ, ಪಕ್ಷಿ, ಪ್ರಾಣಿ, ನಿರ್ಜವ, ಹೀಗೆ ಎಲ್ಲವನ್ನು ಸಮಾನವಾಗಿ ಪ್ರೀತಿಸುವ ಗುಣ ಭಾರತೀಯರಲ್ಲಿದೆ.


ಶ್ರೇಷ್ಠ ಪರಂಪರೆಯ ಪಾವಿತ್ರ್ಯ ಕಾಪಾಡಲು, ‘ವ್ಯಾಲೆಂಟೈನ್ ಡೇಯನ್ನು ಬಹಿಷ್ಕರಿಸೋಣ

ನಮ್ಮ ಸಾವಿರಾರು ವರ್ಷಗಳ ಶ್ರೇಷ್ಠ ಪರಂಪರೆಯನ್ನು ಮರೆಯುತ್ತಿದ್ದೇವೆ. ನಮ್ಮ ಆಚರಣೆಗಳ ಶಾಸ್ತ್ರವನ್ನು ಅರಿತುಕೊಂಡು ಅವುಗಳನ್ನು ಆಚರಣೆಗೆ ತಂದಲ್ಲಿ ಅವುಗಳಿಂದ ನಮ್ಮ ರಕ್ಷಣೆಯಾಗುವುದು. ಸನಾತನ ಧರ್ಮವು ಇಡೀ ವಿಶ್ವವೇ ನಮ್ಮ ಮನೆ ಎಂಬ ವಿಶಾಲ ಮನೋಭಾವದಿಂದ ಪೃಕೃತಿ, ಪ್ರಾಣಿ-ಪಕ್ಷಿಗಳಲ್ಲಿ ನಿರಪೇಕ್ಷ ಪ್ರೀತಿ ಮಾಡಲು ಕಲಿಸುತ್ತದೆ. ಭಾರತೀಯ ಸಂಸ್ಕೃತಿಯಲ್ಲಿ ಹೇಳಿದ ಕುಂಕುಮ ಹಚ್ಚಿಕೊಳ್ಳುವುದರಿಂದ ಸ್ತ್ರೀಯ ರಕ್ಷಣೆಯ ಜೊತೆಗೆ, ಪತಿಯ ಆಯುಷ್ಯವು ವೃಧ್ಧಿಸುತ್ತದೆ. ಯುವಕರು ತಿಲಕವನ್ನು ಹಚ್ಚುವುದರಿಂದ ಶಿವನ ತತ್ತ್ವವನ್ನು ಪಡೆಯಬಹುದು. ಈ ರೀತಿ ನಾವು ಧರ್ಮದ ಆಚರಣೆಯನ್ನು ಮಾಡುವುದರಿಂದ ನಮ್ಮ, ಕುಂಟುಂಬ ಮತ್ತು ರಾಷ್ಟ್ರ ಹಾಗೂ ಧರ್ಮದ ರಕ್ಷಣೆಯಾಗುವುದು. ಅದಕ್ಕಾಗಿ ಇಂತಹ ಅರ್ಥಹೀನ ಕೃತಿಗಳನ್ನು ದೂರಮಾಡೋಣ ಮತ್ತು ನಾವು ‘ವ್ಯಾಲೆಂಟೈನ್ ಡೇ ನಿಲ್ಲಿಸಿ ರಾಷ್ಟ್ರಪುರುಷರ ದಿನವನ್ನು ಆಚರಿಸೋಣ.


ಫೆಬ್ರವರಿ 14 ರಂದು ‘ವ್ಯಾಲೆಂಟೈನ್ಸ್ ಡೇ ಆಚರಣೆ ಮಾಡುವುದು, ಪುಲ್ವಾಮಾ ದಾಳಿಯಲ್ಲಿ ಹುತಾತ್ಮರಾದ ವೀರ ಸೈನಿಕರ ಅಪಮಾನವಾಗಿದೆ.

2019 ಫೆಬ್ರವರಿ 14 ರಂದು ಪಾಕ್ ಪ್ರಚೋದಿತ ಭಯೋತ್ಪಾದಕರು ಕಾಶ್ಮೀರದ ಪುಲ್ವಾಮದಲ್ಲಿ ನಮ್ಮ ಭಾರತೀಯ ವೀರ ಸೈನಿಕರ ಮೇಲೆ ಆಕ್ರಮಣ ಮಾಡಿದರು. ಅದರಿಂದ 40 ಸಿಆರ್‌ಪಿಎಫ್ ಸೈನಿಕರು ಹುತಾತ್ಮರಾದರು. ಇದು ಭಾರತೀಯರಿಗೆ ಕಪ್ಪು ದಿನವಾಗಿದೆ. ಇಡೀ ದೇಶವು ಈ ದಿನ ಶೋಕಾಚರಣೆ ಮಾಡುವಾಗ, ನಾವು ಪ್ರೇಮಿಗಳ ದಿನವನ್ನು ಆಚರಣೆ ಮಾಡುವುದು ಹುತಾತ್ಮರಾದ ವೀರ ಸೈನಿಕರಿಗೆ ಮಾಡಿದ ಅಪಮಾನವಾಗಿದೆ. ಅದಕ್ಕಾಗಿ ಪ್ರೇಮಿಗಳ ದಿನವನ್ನು ಬಹಿಷ್ಕಾರ ಮಾಡೋಣ.


- ಮೋಹನ ಗೌಡ, 

ರಾಜ್ಯ ವಕ್ತಾರರು, ಹಿಂದೂ ಜನಜಾಗೃತಿ ಸಮಿತಿ 


Post a Comment

0 Comments
Post a Comment (0)
To Top