ಅಪೂರ್ವ ಸಂಗಮ ತಂಡದಿಂದ ಏರ್ಪಡಿಸಲಾದ 'ಜನಪದ ಸಾಹಿತ್ಯದಲ್ಲಿ ಜೀವನದ ಮೌಲ್ಯಗಳು' ಎಂಬ ವಿಷಯದ ಕುರಿತ ಲೇಖನ ಸ್ಪರ್ಧೆಯಲ್ಲಿ ತೃತೀಯ ಬಹುಮಾನ ಗಳಿಸಿದ ಲೇಖನ
"ಜನಪದ ಅಥವಾ ಜಾನಪದ"
ಜನಪದ ಎನ್ನುವಂತದ್ದು ಇಂದು ನಿನ್ನೆಯ ಪರಿಭಾಷೆಯಲ್ಲ ಇದು ನಮ್ಮ ಹಿರಿ - ತಲೆಮಾರುಗಳಿಂದಲೂ ಜನರ ಬಾಯಿಂದ ಬಾಯಿಗೆ ಹರಡಿಕೊಂಡು ಬಂದಿರುವಂತಹ ಒಂದು ಸಾಹಿತ್ಯದ ಬಗೆಯಾಗಿದೆ. ಜನಪದವು ಜನರ ಜೀವನ ಸಂಸ್ಕೃತಿಗೆ ಪ್ರತ್ಯಕ್ಷವಾಗಿ ಹಿಡಿದಿರುವ ಒಂದು ಕೈಗನ್ನಡಿ ಎಂದರೆ ಬಹುಶಃ ಯಾವ ಕಾರಣಕ್ಕೂ ತಪ್ಪಾಗಲಾರದು. ಜನಪದ ಸಾಹಿತ್ಯವೆಂದರೆ ಜನರ ಸಾಹಿತ್ಯ ಅಥವಾ ಜಾಣರ ಪದ. ಜನರಿಂದಲೇ ಹುಟ್ಟಿ, ಜನರಿಂದಲೇ ಬೆಳೆದು, ಜನರಲ್ಲಿಯೇ ಉಳಿದುಕೊಂಡಿರುವಂತದ್ದು. ಜನಸಾಮಾನ್ಯರ ಪ್ರತಿಯೊಂದು ಭಾವಮಿಡಿತವೇ ಜನಪದವಾಗಿ ರೂಪುಗೊಂಡಿದೆ.
ಅಕ್ಕ-ತಮ್ಮ, ಅಣ್ಣ-ತಂಗಿ, ಅಪ್ಪ-ಅಮ್ಮ, ಅಜ್ಜ-ಅಜ್ಜಿ, ಗಂಡ-ಹೆಂಡತಿ ಹೀಗೆ ಸಂಬಂಧಗಳ ನಡುವಿನ ಪ್ರೀತಿ ಕೋಪ ವಾತ್ಸಲ್ಯದ ಭಾವನೆಗಳು ಪದವಾಗಿ ಬಂದಾಗ ಜನಪದವು ಜೀವಿಸುತ್ತದೆ.ಜನಪದವು ಹೇಗೆ ನಮ್ಮ ಬದುಕಿನಲ್ಲಿ ಹಾಸುಹೊಕ್ಕಿದೆ ಎಂದರೆ ಒಬ್ಬ ಮನುಷ್ಯನ ಹುಟ್ಟಿನಿಂದ ಹಿಡಿದು ಸಾವಿನ ಕ್ಷಣದ ಕೊನೆಯ ಉಸಿರಿನವರೆಗೂ ಕೂಡ ನಾವು ಜನಪದದಲ್ಲಿಯೇ ಜೀವಿಸುತ್ತೇವೆ. ಜನರ ಮನಸ್ಸಿಗೆ ಬೇಜಾರಾದಾಗ ಹಾಡಿದ ಹಾಡುಗಳು, ಸಂತೋಷದ ನೆನಪುಗಳು, ಕಷ್ಟದ ದಿನಗಳು, ಇತರರೊಂದಿಗೆ ಹಂಚಿದ ಭಾವನೆಗಳು ಗೀತೆಗಳಾಗಿ ಕಥೆಗಳಾಗಿ ನಮ್ಮೆದುರಿಗೆ ಒಂದು ಜೀವನ ಮೌಲ್ಯಗಳ ಸಂವಿಧಾನವಾಗಿ ರೂಪುಗೊಂಡಿದೆ.
ಸಮಕಾಲಿನ ಜೀವನ ಮೌಲ್ಯಗಳು ಕಾಲಕಾಲಕ್ಕೆ ಬದಲಾಗುತ್ತದೆ ಆದರೆ ಸರ್ವಕಾಲಿಕ ಜೀವನ ಮೌಲ್ಯಗಳು ಮನುಕುಲದ ಆದರ್ಶಗಳಾಗುತ್ತವೆ. ದುಡಿಯುವ ವರ್ಗದ ಜನರಿಗೆ ತಮ್ಮ ಬದುಕಿನ ಅನುಭವಗಳು ಅವರಿಗೆ ಆದರ್ಶವಾಗಿರುತ್ತದೆ. ರಾಗಿ ಬೀಸುವ ಹಾಡು, ಬುತ್ತಿ ಕಟ್ಟುವಾಗ ಹೇಳಿದ ಹಾಡು, ಭತ್ತ ಕುಟ್ಟುವಾಗ ಹಾಡಿದ ಹಾಡು, ತೊಟ್ಟಿಲು ತೂಗುವಾಗ ಹೇಳುವ ಲಾಲಿ ಹಾಡು, ಸಮಾರಂಭಗಳಲ್ಲಿ ಹೇಳುವ ಹಾಡುಗಳು, ಗೀಗಿ ಪದ ಎಲ್ಲವೂ ಕೂಡ ಅವರವರ ಅನುಭವದ ಬುತ್ತಿಗಳಾಗಿರುತ್ತವೆ.ನಾವು ಮಾಡುವ ಪ್ರತಿಯೊಂದು ಕೆಲಸದಲ್ಲೂ ಜನಪದದ ಹಿನ್ನೆಲೆ ಇರುತ್ತದೆ.
ಹಿಂದಿನ ತಲೆಮಾರುಗಳಿಂದ ವರವಾಗಿ ಬಂದಿರುವ ಜನಪದ ಗೀತೆ ನಾಣ್ಣುಡಿ ನಾಟಕ ಕಥೆಗಳಲ್ಲಿಯೇ ನಮ್ಮ ಬದುಕಿಗೆ ಬೇಕಾದಂತಹ ಎಲ್ಲಾ ರೀತಿಯ ಮೌಲ್ಯಗಳನ್ನು ಕೂಡ ಕಟ್ಟಿಕೊಡುತ್ತದೆ. ಹಾಗೆ ನಾವು ಹಾಡುವ ಕೇಳುವ ಕೆಲವೊಂದು ಗೀತೆಗಳು ಬದುಕಿನ ಸಂಪೂರ್ಣ ಸಾರವನ್ನು ತಮ್ಮೊಳಗೆ ತುಂಬಿಟ್ಟುಕೊಂಡಿರುತ್ತದೆ. ಜನಪದವು ಬದುಕಿನ ಪ್ರತಿ ಹಂತದ ಬಗ್ಗೆ ಮಾರ್ಗದರ್ಶನವನ್ನು ಮಾಡುತ್ತದೆ. ಗಾದೆ ಮಾತುಗಳು ಎಷ್ಟು ಅರ್ಥಪೂರ್ಣ ವೆಂದರೆ ಅವರೇ ಹೇಳಿರುವಂತೆ 'ವೇದ ಸುಳ್ಳಾದರು ಗಾದೆ ಸುಳ್ಳಾಗದು'. ಇನ್ನು ಗೀಗಿಪದವೂ ಅವರವರ ಬದುಕಿನ ಅನುಭವದ ಬುತ್ತಿಯನ್ನು ಉಣಬಡಿಸುತ್ತವೆ.ಇಂತಹ ಅನೇಕ ಮಾರ್ಗಗಳ ಮೂಲಕ ಜನರ ಜೀವನದ ಮೌಲ್ಯಗಳನ್ನು ಜನಪದ ಪ್ರತಿಬಿಂಬಿಸುತ್ತದೆ.
ಮೌಲ್ಯ ಎನ್ನುವಂತದು ಮಾನವನ ಬದುಕನ್ನು ಹಸನಾಗಿರಿಸುವಂತದ್ದಾಗಿರಬೇಕು ಆದರೆ ಪ್ರಸ್ತುತ ಸಮಾಜದ ಮೌಲ್ಯಗಳು ಹೇಗಿದೆ ಎಂದರೆ ಒಬ್ಬ ವ್ಯಕ್ತಿ ತನ್ನ ಸ್ವಾರ್ಥ ಸಾಧನೆಗಾಗಿ ಯಾವ ರೀತಿಯ ಹೀನ ಕೃತ್ಯವನ್ನು ಬೇಕಾದರೂ ಮಾಡುತ್ತಾನೆ. ಇಂದಿನ ಶಿಕ್ಷಣವು ಕೇವಲ ವೃತ್ತಿಗಾಗಿ ವ್ಯಕ್ತಿಯನ್ನು ಸಿದ್ಧಗೊಳಿಸುತ್ತದೆ ವಿನಹ ಬದುಕಿನ ಮೌಲ್ಯಗಳನ್ನು ಕಲಿಸುವುದಿಲ್ಲ. ಪ್ರಸ್ತುತ ದಿನಗಳಲ್ಲಿ ವ್ಯಕ್ತಿಗೆ ಸಾಧನೆಗಿಂತ ಬದುಕಿನ ಮೌಲ್ಯದ ಶಿಕ್ಷಣದ ಅಗತ್ಯವಿದೆ. ಶಿಕ್ಷಣವು ಉತ್ತಮ ಮೌಲ್ಯಗಳ ಮೂಲಕ ಕೌಶಲ್ಯಾಧಾರಿತ ಜೀವನಕ್ಕೆ ಆದ್ಯತೆಯಾಗಿರಬೇಕು. ಒಬ್ಬ ಸಂಪೂರ್ಣ ವ್ಯಕ್ತಿಯ ಜೀವನಕ್ಕೆ ಬೇಕಾದ ಎಲ್ಲಾ ರೀತಿಯ ಮೌಲ್ಯಗಳು ಕೂಡ ಜನಪದ ಸಾಹಿತ್ಯದಲ್ಲಿ ಅಡಕವಾಗಿರುತ್ತದೆ. ಜನಪದ ಎಂಬುವಂತದ್ದು ಜನರಿಗೆ ಅರಿವು ಜ್ಞಾನ ಮತ್ತು ಮಾಹಿತಿಯನ್ನು ಬಿತ್ತರಿಸುವ ಪ್ರಮುಖ ಮಾಧ್ಯಮವಾಗಿದೆ.ಜನಪದ ಸಾಹಿತ್ಯ ಜೀವನ ಮೌಲ್ಯಗಳ ಒಂದು ಅಕ್ಷಯಪಾತ್ರೆ ಎಂದರೆ ತಪ್ಪಾಗಲಾರದು. ಅತಿಯಾದ ಆಧುನೀಕರಣದ ಹೆಸರಿನಲ್ಲಿ ಜನಪದವನ್ನು ಗಾಳಿಯಲ್ಲಿ ತೂರಿ ಬಿಡುವಂತಹ ಇಂದಿನ ಕಾಲಮಾನದಲ್ಲಿಯೂ ಕೂಡ ಜನಪದಕ್ಕಾಗಿ ಹೋರಾಟ ಮಾಡುವಂತಹ ಜನರಿರೋದು ಹೆಮ್ಮೆಯ ಸಂಗತಿ.
-ದೀಕ್ಷಾ ತಿಮ್ಮಪ್ಪ ಕಮಗಾರು,
ಅಂತಿಮ ವರ್ಷದ ಬಿ.ಕಾಂ ವಿದ್ಯಾರ್ಥಿನಿ,
ಇಂದಿರಾಗಾಂಧಿ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು, ಸಾಗರ
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ