ಸುರತ್ಕಲ್: ನಮ್ಮ ಬಾಳನ್ನು ರೂಪಿಸುವ ಶಿಕ್ಷಣ ಸಂಸ್ಥೆಗಳ ಅಭಿವೃದ್ಧಿಗೆ ವಿದ್ಯಾರ್ಥಿಗಳು ಸಹಕಾರಿಗಳಾಗಬೇಕು. ಕಲಿಸಿದ ಗುರುಗಳ ಸ್ಮರಣೆ ಮತ್ತು ಇಂದಿನ ವಿದ್ಯಾರ್ಥಿಗಳ ಶೈಕ್ಷಣಿಕ ಚಟುವಟಿಕೆಗಳಿಗೆ ಬೆಂಬಲ ನೀಡುವ ಮೂಲಕ ಹಳೆ ವಿದ್ಯಾರ್ಥಿ ಸಂಘವು ಸಹಭಾಗಿಯಾಗಬೇಕಾಗಿದೆ ಎಂದು ಮಂಗಳೂರು ಮಹಾನಗರ ಪಾಲಿಕೆ ಮೇಯರ್ ಹಾಗೂ ಗೋವಿಂದ ದಾಸ ಕಾಲೇಜಿನ ಹಳೆ ವಿದ್ಯಾರ್ಥಿ ಸುಧೀರ್ ಶೆಟ್ಟಿ ಕಣ್ಣೂರು ನುಡಿದರು.
ಅವರು ಗೋವಿಂದ ದಾಸ ಕಾಲೇಜು ಅಲ್ಯುಮ್ನಿ ಅಸೋಸಿಯೇಶನ್ (ರಿ), ಗೋವಿಂದ ದಾಸ ಕಾಲೇಜಿನ ವತಿಯಿಂದ ಅರ್ಹ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಣಾ ಕಾರ್ಯಕ್ರಮ, ಹಿರಿಯ ಕವಿಗಳಾಗಿದ್ದ ದಿ. ಡಾ. ಸೀತಾರಾಮ ಆಚಾರ್ಯರ ಕವನ ಸಂಗ್ರಹ “ಮನನ”ದ ಬಿಡುಗಡೆ, ಗೋವಿಂದ ದಾಸ ಕಾಲೇಜಿನ ವಿದ್ಯಾರ್ಥಿ ಸಾಧಕರಿಗೆ ಅಭಿನಂದನಾ ಸಮಾರಂಭ ಮತ್ತು ಗುರುವಂದನಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.
ಅಧ್ಯಕ್ಷತೆ ವಹಿಸಿದ್ದ ಗೋವಿಂದ ದಾಸ ಕಾಲೇಜು ಅಲ್ಯುಮ್ನಿ ಅಸೋಸಿಯೇಶನ್‍ನ ಅಧ್ಯಕ್ಷ ರಮೇಶ್ ರಾವ್ ಎಂ. ಮಾತನಾಡಿ ಅಲ್ಯುಮ್ನಿ ಅಸೋಸಿಯೇಶನ್‍ನ ಮೂಲಕ ಕಾಲೇಜಿನ ಅವಶ್ಯಕತೆಗಳಿಗೆ ಸ್ಪಂದಿಸಿ ಸಹಕರಿಸಲಾಗುತ್ತಿದೆ ಎಂದರು.
ಸಂಪನ್ಮೂಲ ವ್ಯಕಿ ಹಿರಿಯ ನಾಯಕತ್ವ ತರಬೇತುದಾರ ಮತ್ತು ಕಾಲೇಜಿನ ಹಳೆ ವಿದ್ಯಾರ್ಥಿ ಪ್ರೊ. (ಮೇಜರ್) ರಾಧಾಕೃಷ್ಣ ಮಾತನಾಡಿ, ಬದುಕಿನ ಕ್ಷಣಕ್ಷಣಗಳನ್ನು ಆನಂದದಾಯಕವಾಗಿಸಿಕೊಂಡು ಜೀವಂತಿಕೆಯಿಂದ ಸ್ಪಂದನಾಶೀಲರಾಗಿ ಬಾಳಬೇಕು. ವಿದ್ಯಾರ್ಥಿಗಳು ಉತ್ಕøಷ್ಟತೆಯ ಕುರಿತು ಮಾನಸಿಕ ಚಿಂತನೆ ರೂಪಿಸಬೇಕು.
ಕಾಲೇಜಿನ ಪ್ರಾಚಾರ್ಯ ಪ್ರೊ. ಕೃಷ್ಣಮೂರ್ತಿ ಪಿ. ಸ್ವಾಗತಿಸಿ, ಅಲ್ಯುಮ್ನಿ ಅಸೋಸಿಯೇಶನ್‍ನ ಮೂಲಕ ಹಿರಿಯ ವಿದ್ಯಾರ್ಥಿಗಳು ಒಗ್ಗೂಡಿ ಪರಸ್ಪರ ಸಂವಹನದಿಂದ ಉತ್ತಮ ಯೋಜನೆ ರೂಪಿಸುತ್ತಿದೆ ಎಂದರು.
ಉಪಾಧ್ಯಕ್ಷೆ ಡಾ. ಸಾಯಿಗೀತ ಡಾ. ಸೀ. ಹೊಸಬೆಟ್ಟು ಅವರ ಮನನ ಕೃತಿಯ ಕುರಿತು ಮಾತನಾಡಿದರು. ಇತ್ತೀಚೆಗೆ ನವದೆಹಲಿಯಲ್ಲಿ ನಡೆಯಲಿರುವ ರಾಷ್ಟ್ರಮಟ್ಟದ ಗಣರಾಜ್ಯೋತ್ಸವ ಪಥ ಸಂಚಲನದಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿದ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ಸ್ವಯಂಸೇವಕಿ ಹಿತ ಉಮೇಶ್ ಹಾಗೂ ಕರ್ನಾಟಕ ಮತ್ತು ಗೋವಾ ನಿರ್ದೇಶನಾಲಯವನ್ನು ಪ್ರತಿನಿಧಿಸಿದ ಎನ್.ಸಿ.ಸಿ. ಕೆಡೆಟ್ JUO. ವಿವೇಕ್ ಎನ್. ಶೆಟ್ಟಿ ಹಾಗೂ ರಾಷ್ಟ್ರ ಮಟ್ಟದ ಯೋಗಾಸನ ಸ್ಪರ್ಧೆಯಲ್ಲಿ ಭಾಗವಹಿಸಿದ ಮೋಕ್ಷಾ ಎನ್. ಅಮೀನ್ ಅವರನ್ನು ಸನ್ಮಾನಿಸಲಾಯಿತು.
ನಿವೃತ್ತರಾಗಿರುವ ಪ್ರಾಧ್ಯಾಪಕರಾದ ಪ್ರೊ. ಗೋಪಾಲ ಎಂ. ಗೋಖಲೆ, ಪ್ರೊ. ಮಾರ್ಸೆಲ್ ಲೂಯೀಸ್ ಮಸ್ಕರೇನ್ಹಸ್, ಆಡಳಿತಾತ್ಮ ಸಿಬ್ಬಂದಿಗಳಾದ ಕೆ. ಬಸವ ಮತ್ತು ಕೆ. ಚಂದ್ರಶೇಖರ್ ಅವರನ್ನು ಗೌರವಿಸಲಾಯಿತು.
ಮೂವತ್ತು ಅರ್ಹ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಿಸಲಾಯಿತು. ಅಲ್ಯುಮ್ನಿ ಅಸೋಸಿಯೇಶನ್‍ನ ಕಾರ್ಯದರ್ಶಿ ಲೀಲಾಧರ ಶೆಟ್ಟಿ ವಂದಿಸಿದರು. ಪಲ್ಲವಿ ಕಾರ್ಯಕ್ರಮ ನಿರೂಪಿಸಿದರು. ಅಲ್ಯುಮ್ನಿ ಅಸೋಸಿಯೇಶನ್‍ನ ಸಲಹೆಗಾರ ಮತ್ತು ಗೋವಿಂದ ದಾಸ ಪದವಿಪೂರ್ವ ಕಾಲೇಜಿನ ಆಡಳಿತಾತ್ಮಕ ನಿರ್ದೇಶಕ ಪ್ರೊ.ವೈ.ವಿ. ರತ್ನಾಕರ ರಾವ್, ಗೋವಿಂದ ದಾಸ ಕಾಲೇಜಿನ ಆಡಳಿತಾತ್ಮಕ ನಿರ್ದೇಶಕ ಪ್ರೊ. ರಮೇಶ್ ಕುಳಾಯಿ, ಸಲಹೆಗಾರ ಡಾ. ಕೆ. ರಾಜಮೋಹನ ರಾವ್, ಕಾರ್ಯಕಾರಿ ಸಮಿತಿಯ ಸದಸ್ಯರಾದ ಯೋಗೀಶ್ ಕುಳಾಯಿ, ರಾಘವೇಂದ್ರ ಪಿ., ಕಾಲೇಜಿನ ಉಪಪ್ರಾಚಾರ್ಯ ಪ್ರೊ. ರಮೇಶ್ ಭಟ್ ಎಸ್.ಜಿ. ಮತ್ತಿರರು ಉಪಸ್ಥಿತರಿದ್ದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ







