ಕಲ್ಲಡ್ಕ ಶ್ರೀ ರಾಮ ಮಂದಿರದ ಶತಾಬ್ದಿ ಸಂಭ್ರಮ, ಧಾರ್ಮಿಕ ಸಭೆ

Upayuktha
0

 



ಬಂಟ್ವಾಳ: ನಂಬಿಕೆಯಲ್ಲಿ ಮೂಢನಂಬಿಕೆ ಮತ್ತು ಮೂಲನಂಬಿಕೆಯಿದ್ದು, ಸಮಾಜವನ್ನು ದುರ್ಬಲಗೊಳಿಸುವ ಮೂಢನಂಬಿಕೆಗಳಾದ ಅಸ್ಪ್ರಶ್ಯತೆ, ಜಾತೀಯತೆ, ಮೇಲು, ಕೀಳು ಎಂಬ ಭಾವನೆಯನ್ನು ಕಿತ್ತೊಗೆಯುವ ಸಂಕಲ್ಪ ಎಲ್ಲರೂ‌ ಮಾಡಬೇಕಾಗಿದೆ ಎಂದು‌ ರಾ.ಸ್ವ.ಸೇ.ಸಂಘದ ಹಿರಿಯ ಪ್ರಚಾರಕರಾದ ಸು.ರಾಮಣ್ಣ ಅವರು ಕರೆ ನೀಡಿದ್ದಾರೆ.



ಕಲ್ಲಡ್ಕ ಶ್ರೀ ರಾಮ ಮಂದಿರದ ಶತಾಬ್ದಿ ಸಂಭ್ರಮದ ಪ್ರಯುಕ್ತ ನಡೆದ ಧಾರ್ಮಿಕ ಸಭೆಯಲ್ಲಿ ದಿಕ್ಸೂಚಿ ಭಾಷಣಗೈದ ಅವರು  ಅಯೋಧ್ಯೆಯಲ್ಲಿ ಶ್ರೀ ರಾಮ ಮಂದಿರ ನಿರ್ಮಾಣವಾಗಲು ಕರಸೇವಕರು ಅಸ್ಪೃಶ್ಯತೆ, ಜಾತೀಯತೆ ಎಂಬ ಯಾವುದೇ ಭೇದವಿಲ್ಲದೆ ಕರಸೇವೆಯಲ್ಲಿ ಪಾಲ್ಗೊಂಡಿದ್ದರು.ರಾಮಮಂದಿರವು ರಾಷ್ಟ್ರ ಮಂದಿರವಾಗಿ ನಿರ್ಮಾಣವಾಗಿದೆ ಎಂದರು.



ಕಲ್ಲಡ್ಕ ಎಂಬ ಪುಟ್ಟ ಊರು ಈಗ ದಕ್ಷಿಣದ ಅಯೋಧ್ಯೆಯಾಗಿ ಗುರುತಿಸಲ್ಪಟ್ಟಿದೆ. ಅಯೋಧ್ಯೆಯಲ್ಲಿ ಬಾಲರಾಮನ ಪ್ರತಿಷ್ಟೆಯಾದಂತೆ ಕಲ್ಲಡ್ಕ‌ಶ್ರೀ ರಾಮ ಮಂದಿರದಲ್ಲಿ ವಿಘ್ನ ನಿವಾರಕ ಗಣಪತಿಯ ಪ್ರತಿಷ್ಠೆಯಾಗಿದೆ. ರಾಷ್ಟ್ರ ಜಾಗೃತಿಯ ಕಾರ್ಯ ನಿರಂತರ ನಡೆಯಬೇಕು ಎಂದ ಅವರು ಎದುರಾಗುವ ಯಾವುದೇ ವಿಘ್ನಗಳನ್ನು ಎದುರಿಸುವ ಶಕ್ತಿಯನ್ನು‌ ಬೆಳಸಿಕೊಳ್ಳೊಣ.ಭಾರತ ಮಾತೆ‌ ಮತ್ತೊಮ್ಮೆ ಹಿಂದೂ ರಾಷ್ಟ್ರವಾಗಿ ಉದಯಿಸಬೇಕಾಗಿದೆ ಎಂದು ಸ್ಪೂರ್ತಿಯ ಮಾತುಗಳನ್ನಾಡಿದರು.



ಬೆಳಗಾವಿ ಜಿಲ್ಲೆಯ ನಿಡಸೋಸಿ ಸಿದ್ಧಸಂಸ್ಥಾನ ಮಠದ ಶ್ರೀ ನಿಜಲಿಂಗೇಶ್ವರ ಸ್ವಾಮೀಜಿ ಅವರು ಧ್ವಜಾರೋಹಣಗೈದರು. ಬಳಿಕ  ಆಶೀರ್ವಚನವಿತ್ತ ಶ್ರೀಗಳು ದೇವಸ್ಥಾನಗಳಿಂದ ದೇಶದ ಉದ್ದಾರ ಕಾರ್ಯ ನಡೆಯುತ್ತಿದೆ. ರಾಷ್ಟ್ರ ಚಿಂತನೆಯ ಸಮಾಜ ನಿರ್ಮಾಣದ ಕಾರ್ಯ ಇಲ್ಲಿ ನಡೆಯುತ್ತಿದ್ದು. ಕಲ್ಲಡ್ಕ ವಿಶೇಷವಾದ ಶಕ್ತಿ ಕೆಂದ್ರವಾಗಿದೆ. ಡಾ.ಪ್ರಭಾಕರ ಭಟ್ ಅವರು ರಾಷ್ಟ್ರ ನಿರ್ಮಾಣದಲ್ಲಿ ನಿರಂತರವಾಗಿ ತೊಡಗಿಸಿಕೊಂಡು ಎಲ್ಲರಿಗೂ ಸ್ಪೂರ್ತಿಯಾಗಿದ್ದಾರೆ ಎಂದು ನುಡಿದರು.



ನಮ್ಮ ಭಾವನೆಗೆ ತಕ್ಕಂತೆ ದೇವರು ಅನುಗ್ರಹಿಸುತ್ತಿದ್ದು, ಬಹುದೇವೋಪಾಸನೆ ನಮ್ಮ ವೈಶಿಷ್ಟ್ಯ ವಾಗಿದೆ.  ಭಗವಂತನ ಬಗ್ಗೆ ಜನರಲ್ಲಿ ಭಕ್ತಿ ಭಾವದ ಜೊತೆಗೆ ಧಾರ್ಮಿಕತೆಯು ಹೆಚ್ಚಾಗಿದೆ ಎಂದ ಅವರು ಧರ್ಮ‌ ಬಿಟ್ಟರೆ ದೇಶವಿಲ್ಲ.ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ರಾಷ್ಟ್ರ ನಿರ್ಮಾಣಕ್ಕೆ ಪ್ರೇರಣೆಯಾಗಿದೆ ಎಂದರು.



ಕೊಲ್ಹಾಪುರ ಕನೇರಿ ಮಠದ ಶ್ರೀ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ ಅವರು ಆರ್ಶೀವಚನಗೈದು ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣದಿಂದ ರಾಮರಾಜ್ಯದ ಕಲ್ಪನೆಗೆ ನಾಂದಿ ಹಾಡಿದೆ.ಸರ್ವಮತದ ಪ್ರಜಾಪ್ರಭುತ್ವ ವ್ಯವಸ್ಥೆ ರಾಮ ರಾಜ್ಯದಲ್ಲಿ ಇತ್ತು ಎಂದ ಶ್ರೀಗಳು ಅಂತಹ ರಾಜ್ಯ ಭಾರತದಲ್ಲಿ ಮತ್ತೊಮ್ಮೆ  ಬರಲಿದೆ. ಕಲ್ಲಡ್ಕ ಶ್ರೀರಾಮ ಶಿಕ್ಷಣ ಸಂಸ್ಥೆಯಲ್ಲಿ  ಉತ್ತಮ ಶಿಕ್ಷಣ ಸಿಗುತ್ತಿದ್ದು,ಇಲ್ಲಿ ಶಿಕ್ಷಣ ಪಡೆದ ಮಕ್ಕಳು ದೇಶದ ಸಂಪತ್ತಾಗುತ್ತಾರೆ ಎಂದರು.



ರಾ.ಸ್ವ.ಸೇ.ಸಂಘದ ಮಂಗಳೂರು‌ನಗರದ ಸಂಘಚಾಲಕರಾದ ಸುನಿಲ್ ಆಚಾರ್ಯ,  ಉದ್ಯಮಿಗಳಾದ ಸುಧಾಕರ ಶೆಟ್ಟಿ, ಬಾಲಕೃಷ್ಣ ಭಂಡಾರಿ, ಮಾಜಿ ಶಾಸಕರುಗಳಾದ ರುಕ್ಮಯ ಪೂಜಾರಿ, ಪದ್ಮನಾಭ ಕೊಟ್ಟಾರಿ, ಶತಾಬ್ದಿ ಸಂಭ್ರಮ ಸ್ವಾಗತ ಸಮಿತಿ ಅಧ್ಯಕ್ಷ ಸಂತೋಷ್ ಶೆಟ್ಟಿ ದಲಂದಿಲ ಉಪಸ್ಥಿತರಿದ್ದರು.



ಶತಾಬ್ದಿ ಸಂಭ್ರಮ ಸಮಿತಿ ಅಧ್ಯಕ್ಷ,ಆರ್ ಎಸ್ ಎಸ್ ಮುಖಂಡ ಡಾ.ಪ್ರಭಾಕರ ಭಟ್ ಅವರು ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಪ್ರಸ್ತಾವನೆ ಗೈದು ಕಲ್ಲಡ್ಕ ಶ್ರೀರಾಮ ಮಂದಿರವನ್ನು ಕೇಂದ್ರವಾಗಿರಿಸಿಕೊಂಡು ನಡೆದಿರುವ ವಿವಿಧ ಸಾಮಾಜಿಕ ಹೋರಾಟಗಳು, ಬಹುಮುಖ ಪ್ರತಿಭೆಗಳಿಗೆ ಪ್ರೇರಣೆ ಹೀಗೆ ನಡೆದುಬಂದ ಹಾದಿಯ ಕುರಿತಂತೆ ನೂರು ವರ್ಷಗಳ ಇತಿಹಾಸವನ್ನು ಬಿಚ್ಚಿಟ್ಟರು.



ಶತಾಬ್ದಿ ಸಂಭ್ರಮ ಸಮಿತಿಯ ಪ್ರ.ಕಾರ್ಯದರ್ಶಿ ಚೆನ್ನಪ್ಪ ಆರ್. ಕೋಟ್ಯಾನ್ ಸ್ವಾಗತಿಸಿದರು. ಸಮಿತಿಯ ಪ್ರ.ಕಾರ್ಯದರ್ಶಿ ನಾಗೇಶ ಕಲ್ಲಡ್ಕ ವಂದಿಸಿದರು.ನಿವೃತ್ತ ಶಿಕ್ಷಕರಾದ ರಾಧಾಕೃೃಷ್ಣ ಅಡ್ಯಂತಾಯ ಮತ್ತು ರಾಜೇಶ್ ಕಲ್ಲಡ್ಕ ಕಾರ್ಯಕ್ರಮ ನಿರೂಪಿಸಿದರು.ವಿದ್ಯಾಶ್ರೀ ಬೋಳಂತೂರು ಪ್ರೇರಣಾ ಗೀತೆ ಹಾಡಿದರು.



ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top