ಬಜೆಟ್ ವಿಶ್ಲೇಷಣೆ: ಹಣಕಾಸಿನ ವಿವೇಕತೆಗೆ ಒತ್ತು ನೀಡಿರುವ ಬಜೆಟ್- ಜನರ ಚಿತ್ತ ಬಜೆಟಿನತ್ತ

Upayuktha
0


ಪ್ರತಿ ಬಾರಿ ಬಜೆಟ್ ಮಂಡನೆಯಾಗುವಾಗ ಪ್ರತಿಯೊಬ್ಬರೂ ಕಾತರತೆಯಿಂದ ತಮಗೆ ಅನುಕೂಲಕರ ಬದಲಾವಣೆಯನ್ನು ತರುತ್ತದೆ ಎಂದೇ ಕಾಯುತ್ತಾರೆ.  ಕೇಂದ್ರದಲ್ಲಿನ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರಕಾರದ ಎರಡನೇ ಅವಧಿಯ ಕೊನೆಯ ಬಜೆಟ್  ಅಂದರೆ ಮಧ್ಯಂತರ ಬಜೆಟ್ ಇಂದು ಮಂಡನೆಯಾಗಿದೆ. ದೇಶದಲ್ಲಿ ಕಳೆದ ಮೂರು ವರ್ಷಗಳಿಂದ ಕಾಯ್ದುಕೊಂಡಿರುವ ಆರ್ಥಿಕ ಪ್ರಗತಿಯನ್ನು ಮುಂದುವರಿಸುವ ನೀತಿಯನ್ನು ಮಂಡಿಸುವುದೇ ಅರ್ಥ ಸಚಿವರ ಮುಂದಿದ್ದ ಸವಾಲು.

ಈ ಬಜೆಟ್ ಚುನಾವಣಾ ದೃಷ್ಟಿಯಿಂದ ಆಡಳಿತ ಪಕ್ಷಕ್ಕೆ ಮಹತ್ವದ್ದಾಗಿದೆ. ಚುನಾವಣಾ ವರ್ಷವಾಗಿರುವ ಹಿನ್ನೆಲೆಯಲ್ಲಿ ಈ ಬಜೆಟ್ ಕೇವಲ ಲೇಖಾನುದಾನಕ್ಕೆ ಒಪ್ಪಿಗೆ ಪಡೆಯುವುದಕ್ಕೆ ಸೀಮಿತ. ಆದರೆ ಈ ಮಧ್ಯಂತರ ಬಜೆಟ್ ದೇಶಕ್ಕೆ ಆರ್ಥಿಕ ಸ್ಥಿರತೆ ಹಾಗೂ ಪ್ರಗತಿಗೆ ಪ್ರೋತ್ಸಾಹ ನೀಡುವ ಬದ್ಧತೆಯನ್ನು ಪ್ರದರ್ಶಿಸಿದೆ.


ಆದ್ಯತಾ ಸಮುದಾಯಗಳು

ಬಡವರು, ಮಹಿಳೆಯರು, ಯುವಕರು ಹಾಗೂ ರೈತರನ್ನು ಆದ್ಯತಾ ಸಮುದಾಯಗಳಾಗಿ ಪರಿಗಣಿಸಿ ಕೇಂದ್ರ ಬಜೆಟ್ ನಲ್ಲಿ ಯೋಜನೆ ರೂಪಿಸಲಾಗಿದೆ. ಮೂಲಸೌಕರ್ಯ, ಸಾಮರ್ಥದ ಸದ್ಭಳಕೆ, ಯುವ ಸಬಲೀಕರಣ, ಆರ್ಥಿಕ ಸುಧಾರಣೆ, ಅಭಿವೃದ್ಧಿ, ಎಲ್ಲರಿಗೂ ಸಮಾನ ಸವಲತ್ತು, ಪರಿಸರ ಸ್ನೇಹಿ ಅಭಿವೃದ್ಧಿಗೆ ಕೇಂದ್ರ ಬಜೆಟಿನಲ್ಲಿ ಆದ್ಯತೆ ನೀಡಲಾಗಿದೆ.


ಉದಯೋನ್ಮುಖ ಆರ್ಥಿಕತೆ

ಇಂದು ವೇಗವಾಗಿ ಬೆಳೆಯುತ್ತಿರುವ ಉದಯೋನ್ಮುಖ ಆರ್ಥಿಕತೆಯಾಗಿ ಭಾರತವು ಮೂಡಿ ಬಂದಿದೆ. ವಿಶಾಲ-ಆಧಾರಿತ ಕೈಗಾರಿಕಾ ಬೆಳವಣಿಗೆಯೊಂದಿಗೆ ಕೈಗಾರಿಕಾ ಸಾಮರ್ಥ್ಯದ ಬಳಕೆಯ ಸುಧಾರಣೆ ಮತ್ತು ಹಾನಿಕಾರಕವಲ್ಲದ ಹಣದುಬ್ಬರದ ನಿರೀಕ್ಷೆಗಳು ಭಾರತದ ಮುಂದಿನ ದಶಕಗಳ ಬೆಳವಣಿಗೆಯ ಸಾಮರ್ಥ್ಯದ ಕೈಗನ್ನಡಿಯಾಗಿದೆ. ಪ್ರತಿಕೂಲ ಸನ್ನಿವೇಶಗಳ ಮಧ್ಯೆ ಪ್ರಸಕ್ತ ಸಾಲಿನ ಅಂಕಿ ಅಂಶಗಳು ಹಾಗೂ ದೂರದರ್ಶಿತ್ವದ ಮಧ್ಯಂತರ ಬಜೆಟ್ ಆರ್ಥಿಕ ಬೆಳವಣಿಗೆಯ ಭರವಸೆಯನ್ನು ನೀಡುತ್ತಿರುವುದು ಸ್ವಾಗತಾರ್ಹ.


ವೀಡಿಯೋ ಕೃಪೆ: ಹೊಸದಿಗಂತ ಡಿಜಿಟಲ್


ಉದ್ಯಮಸ್ನೇಹಿ ಪರಿಸರ

ಉದ್ದಿಮೆಗಳಿಗೆ ಭಾರತದ ಪ್ರೋತ್ಸಾಹ ಕ್ರಮಗಳು ಸಾಗರೋತ್ತರ ಹೂಡಿಕೆದಾರರು ಭಾರತದ ಬಗ್ಗೆ ಹೊಂದಿದ್ದ ಸಂದೇಹ ಭಾವನೆಯನ್ನು ದೂರವಾಗಿಸುವಲ್ಲಿ ನೆರವಾಗಿದೆ.  ಕಳೆದ ಒಂದು ದಶಕದಲ್ಲಿ ಬಾರತವು ವಿಶ್ವದಲ್ಲಿ ಉತ್ತಮ ಸ್ಥಾನ ಗಳಿಸಿದೆ ಮತ್ತು ಜಾಗತಿಕ ಬೆಳವಣಿಗೆಯಲ್ಲಿ ಇಂದು ಮುಂಚೂಣಿ ಸ್ಥಾನ ಗಳಿಸಿದೆ

ಭಾರತವು ಹೂಡಿಕೆಗೆ ಮಾತ್ರವಲ್ಲದೆ ವ್ಯಾಪಾರ ಮಾಡಲು ಸಹ ಅತ್ಯಂತ ಆಕರ್ಷಕ ತಾಣಗಳಲ್ಲಿ ಒಂದಾಗಿ ಹೊರಹೊಮ್ಮಿದೆ. ನಮ್ಮ ಪ್ರಯತ್ನಗಳು ಕೇವಲ ಉದ್ಯಮಸ್ನೇಹಿ ವಾತಾವರಣವನ್ನು ನಿರ್ಮಿಸಲು ಅಗತ್ಯವಾದ ಬದ್ಧತೆಯ ಪ್ರದರ್ಶನಕ್ಕೆ ಮಾತ್ರ ಸೀಮಿತವಾಗದೆ ಉದ್ಯಮಗಳ ಬೆಳವಣಿಗೆ ನಮ್ಮ ಆರ್ಥಿಕತೆಯ ಸದೃಡ ಬೆಳವಣಿಗೆಗೆ ಪೂರಕವಾಗುವಂತಹ ಯೋಚನೆ ಹಾಗೂ ಯೋಜನೆಗಳು ಈ ಬಜೆಟಿನಲ್ಲಿದೆ. ನಮ್ಮ ಮನದಲ್ಲೀಗ “ಗೆದ್ದೇ ಗೆಲ್ಲುವೆವು” ಎಂಬ ಆತ್ಮಸ್ಥೈರ್ಯ ಮೊಳಕೆಯೊಡೆದು ಸ್ವಾವಲಂಬನೆಯ ಕಹಳೆ ಮೊಳಗಲು ಆರಂಭಿಸಿರುವದು ಸ್ವಾಗತಾರ್ಹ.


ಆತ್ಮನಿರ್ಭರ ಭಾರತ

 “ಆತ್ಮನಿರ್ಭರ” ಅಂದರೆ ಸಶಕ್ತ, ಸ್ವಾವಲಂಬಿ ಭಾರತದ ಪರಿಕಲ್ಪನೆ ಸಂಚಲನವನ್ನುಂಟು ಮಾಡಿದೆ. ಇದರೊಂದಿಗೆ ಸ್ಥಳೀಯ ವಸ್ತುಗಳ ಹುಡುಕಾಟ ಹೆಚ್ಚಿದೆ ಮತ್ತು ಉತ್ಪಾದನೆಗೂ ಉತ್ತೇಜನ ದೊರೆಯುತ್ತಿದೆ. ಹಿಂದೆ ಆಮದು ಕಡಿತದ ಮೂಲಕ ಸ್ವದೇಶಿ ಉತ್ಪನ್ನಗಳಿಗೆ ಉತ್ತೇಜನ ದೊರೆಯುತ್ತಿದ್ದರೆ, ಇದೀಗ ದೇಶದ ನೂತನ ಚಿಂತನೆ ಘೋಷಣೆ ಹಾಗೂ ಉತ್ತೇಜಕಗಳು ಸ್ಥಳೀಯ ಉತ್ಪನ್ನಗಳಿಗೆ ಬೇಡಿಕೆ ಹೆಚ್ಚಿಸಿವೆ. 

ಆತ್ಮನಿರ್ಭರತೆ ಎಂದರೆ ಕೇವಲ ಸ್ವಾವಲಂಬನೆಯ ಆಕಾಂಕ್ಷೆಗಿಂತ ಹೆಚ್ಚಾಗಿ, ನಮ್ಮ ಉತ್ಪಾದಕರು ಜಾಗತಿಕ ಪೂರೈಕೆ ಸರಪಳಿಯ ಭಾಗವಾಗಬೇಕಾಗಿದೆ. ಆದುದರಿಂದ ಭಾರತೀಯ ಉದ್ಯಮಿಗಳು ಹೆಚ್ಚು ಸ್ಪರ್ಧಾತ್ಮಕವಾಗಲು ಅನುವು ಮಾಡಿಕೊಡುವಂತಹ ವಾತಾವರಣವನ್ನು ಸೃಷ್ಟಿಸುವ ಪ್ರಯತ್ನವನ್ನು ಕಾಣಬಹುದು


ಹಣಕಾಸಿನ ವಿವೇಕತೆ

ಅಗತ್ಯ ಕ್ಷೇತ್ರಗಳಗೆ ದೊಡ್ಡ ಉತ್ತೇಜನವನ್ನು ನೀಡುವ ಮದ್ಯಂತರ ಬಜೆಟ್ ಸಹಜವಾಗಿ ಹಣಕಾಸಿನ ವಿವೇಕಕ್ಕೆ ಬದ್ದತೆ ನೀಡಿರುವುದು ಸ್ಪಷ್ಟವಾಗಿದೆ. ಇದರೊಂದಿಗೆ ವೆಚ್ಚದ ಗುಣಮಟ್ಟ ಮತ್ತು ಪಾರದರ್ಶಕತೆಗೆ ಒತ್ತು ನೀಡಿರುವುದು ಗಮನಾರ್ಹವಾಗಿದೆ. ಆರ್ಥಿಕ ಸ್ಥಿರತೆ ಮತ್ತು ಹಣಕಾಸಿನ ಶಿಸ್ತಿನ ಬಗ್ಗೆ ಸರಕಾರದ ನಿಸ್ಸಂದಿಗ್ಧ ಬದ್ಧತೆಯನ್ನು ಬಜೆಟ್ ಒತ್ತಿ ಹೇಳುತ್ತದೆ. ವಿತ್ತೀಯ ಕೊರತೆಯು ಜಿಡಿಪಿಯ  ಶೇ.5.1 ಆಗಿರಲಿದೆ. ಹೂಡಿಕೆ, ಉದ್ಯಮ ಮತ್ತು ಮೂಲ ಸೌಕರ್ಯಗಳಲ್ಲಿ ಬಜೆಟ್ ಹಲವು ಧನಾತ್ಮಕ ದೀರ್ಘಕಾಲೀನ ಬದಲಾವಣೆಗಳನ್ನು ತರಲಿದೆ. ಜನಸಾಮಾನ್ಯರಿಗೆ ತೆರಿಗೆ ಹೊರೆಯಾಗದಂತೆ ಎಚ್ಚರ ವಹಿಸಲಾಗಿದೆ.


ಅಭಿವೃದ್ಧಿಯ ಸಾಮೂಹಿಕ ಆಂದೋಲನ

ನಮ್ಮ ಪ್ರಧಾನಮಂತ್ರಿ ಮೋದೀಜಿಯವರು 2014ರಲ್ಲಿ ಕೆಂಪುಕೋಟೆಯ ಮೇಲೆ ನಿಂತು ನವಭಾರತವನ್ನು ಕಟ್ಟುವ ತಮ್ಮ ದೂರದೃಷ್ಟಿಯನ್ನು ಮಂಡಿಸಿದ್ದರು. ಅಭಿವೃದ್ಧಿಯು ಕೇವಲ ಕಾರ್ಯಸೂಚಿಯಲ್ಲ, ಅದು ಪ್ರತಿಯೊಬ್ಬ ಭಾರತೀಯನ ಗುರಿಯಾಗಿದೆ ಎಂದು ಪ್ರತಿಪಾದಿಸಿದರು. 

ಸ್ವಚ್ಚ ಭಾರತ, ಬೇಟಿ ಬಚಾವೊ-ಬೇಟಿ ಪಢಾವೊ, ಮೇಕ್ ಇನ್ ಇಂಡಿಯಾ, ಲೋಕಲ್ ಫಾರ್ ವೋಕಲ್, ಡಿಜಿಟಲ್ ಇಂಡಿಯಾ ಮೊದಲಾದ ಉಪಕ್ರಮಗಳು ನಮ್ಮ ಭಾರತೀಯತೆಯನ್ನು ಪುನರುಜ್ಜೀವನಗೊಳಿಸಿ, ರಾಷ್ಟ್ರೀಯ ಹೆಮ್ಮೆ ಮತ್ತು ಘನತೆಗಳು ಹೆಚ್ಚಾಗಿವೆ. ಜನರ ಸಹಭಾಗಿತ್ವದ ಮೂಲಕ ಸಂಚಲನವನ್ನೇ ಮೂಡಿಸಿದೆ. ಡಿಜಿಟಲ್ ಪಾವತಿಗಳ ವ್ಯಾಪಕ ಸ್ವೀಕಾರ ಸಾಮಾನ್ಯ ನಾಗರಿಕರ ಸಹಭಾಗಿತ್ವವನ್ನು ಒತ್ತಿಹೇಳುತ್ತದೆ. ಜನರ ಸಹಭಾಗಿತ್ವವೇ ನಮ್ಮ ಅಭಿವೃದ್ಧಿಯ ಪ್ರಬಲ ಅಸ್ತ್ರವಾಗಿ ಮೂಡಿಬಂದಿದೆ.




-ಡಾ.ಎ. ಜಯ ಕುಮಾರ ಶೆಟ್ಟಿ,

ನಿವೃತ್ತ ಪ್ರಾಂಶುಪಾಲರು, ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥರು,

ಎಸ್‌ಡಿಎಂ ಕಾಲೇಜು ಉಜಿರೆ.



ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter   .


إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top