ದಾವಣಗೆರೆ: ರಾಜ್ಯ ಮಟ್ಟದ 38ನೇ ಪತ್ರಕರ್ತರ ಸಮ್ಮೇಳನ ದಾವಣಗೆರೆ ನಗರದ ಹದಡಿ ರಸ್ತೆಯಲ್ಲಿರುವ ಪಾರ್ವತಮ್ಮ ಶಾಮನೂರು ಶಿವಶಂಕರಪ್ಪ ಕಲ್ಯಾಣ ಮಂದಿರದಲ್ಲಿ ಫೆ.3 ಮತ್ತು 4 ರಂದು ನಡೆಯಲಿರುವ ಹಿನ್ನೆಲೆಯಲ್ಲಿ ಬೆಣ್ಣೆನಗರಿಯಲ್ಲಿ ಮಧುವಣಗಿತ್ತಿಯಂತೆ ಸಿಂಗಾರಗೊಂಡಿದೆ.
ದಾವಣಗೆರೆ ಜಿಲ್ಲೆಯಾಗಿ 31 ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ನಡೆಯುತ್ತಿರುವ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ 38ನೇ ರಾಜ್ಯ ಮಟ್ಟದ ಸಮ್ಮೇಳನಕ್ಕೆ ಈಗಾಗಕೇ ಎಲ್ಲಾ ಸಿದ್ದತೆ ಪೂರ್ಣಗೊಂಡಿದೆ. ಛಾಯಾಚಿತ್ರ ಪ್ರದರ್ಶನ, ವಸ್ತು ಪ್ರದರ್ಶನ ಹಾಗೂ ವ್ಯಂಗ್ಯಚಿತ್ರ ಪ್ರದರ್ಶನಕ್ಜೆ ವ್ಯವಸ್ಥೆ ಮಾಡಲಾಗಿದ್ದು, ಅದಕ್ಕಾಗಿ 20 ಮಳಿಗೆಗಳನ್ನು ಸ್ಥಾಪಿಸಲಾಗಿದೆ.
ಎಸ್ಪಿ ಉಮಾ ಪ್ರಶಾಂತ್, ಡಿಸಿ ಡಾ.ಎಂ.ವಿ.ವೆಂಕಟೇಶ್ ಭೇಟಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆಗಮಿಸುವ ಹಿನ್ನೆಲೆಯಲ್ಲಿ ಎಸ್ಪಿ ಉಮಾ ಪ್ರಶಾಂತ್, ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್ ಪಾರ್ವತಮ್ಮ ಶಾಮನೂರು ಶಿವಶಂಕರಪ್ಪ ಕಲ್ಯಾಣ ಮಂಟಪಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್, ಮುಖ್ಯಮಂತ್ರಿ ಸಿದ್ದರಾಮಯ್ಯ ಆಗಮಿಸುತ್ತಿರುವುದರಿಂದ ಯಾವುದೇ ಸಮಸ್ಯೆಗಳು ಉಂಟಾಗದಂತೆ ಮುನ್ನೆಚ್ಚರಿಕೆ ವಹಿಸಬೇಕು ಎಂದು ಎಸ್ಪಿ ಉಮಾ ಪ್ರಶಾಂತ್ ಅವರಿಗೆ ಸೂಚಿಸಿದ ಅವರು, ಸಮ್ಮೇಳನ 31 ವರ್ಷಗಳ ಬಳಿಕ ದಾವಣಗೆರೆಯಲ್ಲಿ ರಾಜ್ಯ ಮಟ್ಟದ ಪತ್ರಕರ್ತರ ಸಮ್ಮೇಳನ ನಡೆಯುತ್ತಿದ್ದು, ಎಲ್ಲರೂ ಯಶಸ್ವಿಗೆ ಸಹಕಾರ ನೀಡಬೇಕೆಂದು ಮನವಿ ಮಾಡಿದರು.
ಎಸ್ಪಿ ಉಮಾ ಪ್ರಶಾಂತ್ ಮಾತನಾಡಿ, ರಾಜ್ಯ ಮಟ್ಟದ ಪತ್ರಕರ್ತರ ಸಮ್ಮೇಳನಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆಗಮಿಸುತ್ತಿರುವುದರಿಂದ ದಾವಣಗೆರೆಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ. ಬಂದೋಬಸ್ತ್ ಗೆ ,500 ಜನ ಪೊಲೀಸ್ ಸಿಬ್ಬಂದಿ, 100 ಜನ ಹಿರಿಯ ಪೊಲೀಸ್ ಅಧಿಕಾರಿಗಳನ್ನು ನಿಯೋಜಿಸಲಾಗಿದೆ. ಕಾರ್ಯಕ್ರಮ ನಡೆಯುವ ಪಾರ್ವತಮ್ಮ ಶಾಮನೂರು ಶಿವಶಂಕರಪ್ಪ ಕಲ್ಯಾಣ ಮಂದಿರದ ಹೊರಗಡೆ ಮತ್ತು ಒಳಗಡೆ ಒಂದು ಡಿವೈಎಸ್ಪಿ, 4 ಜನ ಸಿಪಿಐ, 19 ಜನ ಪಿಎಸ್ಐ, 19 ಜನ ಎಎಸ್ಐ,94 ಜನ ಎಚ್.ಸಿ, 31 ಜನ ಮಹಿಳಾ ಎಚ್ ಸಿ ಸೇರಿದಂತೆ ಒಟ್ಟು 168 ಜನ ಪೊಲೀಸ್ ಸಿಬ್ಬಂದಿಗಳನ್ನು ಬಂದೋಬಸ್ತ್ ಗೆ ನಿಯೋಜಿಸಲಾಗಿದೆ ಎಂದು ಮಾಹಿತಿ ನೀಡಿದರು.
ವಾಹನ ನಿಲುಗಡೆಗೆ ವ್ಯವಸ್ಥೆ:
ರಾಜ್ಯದಿಂದ ಆಗಮಿಸುವ ಪ್ರತಿನಿಧಿಗಳ ವಾಹನಗಳನ್ನು ನಿಲುಗಡೆಗೆ ಪಾರ್ವತಮ್ಮ ಶಾಮನೂರು ಶಿವಶಂಕರಪ್ಪ ಕಲ್ಯಾಣ ಮಂದಿರದ ಮುಂಭಾಗದಲ್ಲಿರುವ ಖಾಲಿ ಜಾಗ ಮತ್ತು ಐಟಿಐ ಕಾಲೇಜು ಆವರದಲ್ಲಿ ವ್ಯವಸ್ಥೆ ಕಲ್ಪಿಸಲಾಗಿದೆ. ಹೀಗಾಗಿ ರಾಜ್ಯದಿಂದ ಆಗಮಿಸುವ ಪ್ರತಿನಿಧಿಗಳು ವಾಹಗಳ ನಿಲುಗಡೆಗೆ ವ್ಯವಸ್ಥೆ ಮಾಡಿರುವ ಜಾಗದಲ್ಲಿ ವಾಹನಗಳನ್ನು ನಿಲುಗಡೆ ಮಾಡಬೇಕೆಂದು ಅವರು ಮನವಿ ಮಾಡಿದ್ದಾರೆ.
ಈ ಸಂದರ್ಭದಲ್ಲಿ ಡಿವೈಎಸ್ಪಿಗಳಾದ ಬಸವರಾಜ್, ಮಲ್ಲೇಶ್ ದೊಡ್ಡಮನಿ, ಸಿಪಿಐಗಳಾದ ಸುನೀಲ್ ಕುಮಾರ್, ಸುರೇಶ್ ಸಗರಿ, ನಾಗರಾಜ್ ಹಾಗೂ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಇ.ಎಂ.ಮಂಜುನಾಥ್ ಏಕಬೋಟೆ, ಉಪಾಧ್ಯಕ್ಷ ಎಚ್.ಎನ್.ಪ್ರಕಾಶ್, ಪ್ರಧಾನ ಕಾರ್ಯದರ್ಶಿ ಎ.ಫಕೃದ್ದೀನ್, ಖಜಾಂಚಿ ಎನ್.ವಿ..ಬದರಿನಾಥ್, ರಾಜ್ಯ ಸಮಿತಿ ಸದಸ್ಯ ಕೆ.ಚಂದ್ರಣ್ಣ, ದಾವಣಗೆರೆ ವರದಿಗಾರರ ಕೂದ ಅಧ್ಯಕ್ಷ ಕೆ.ಏಕಾಂತಪ್ಪ, ಪ್ರಧಾನ ಕಾರ್ಯದರ್ಶಿ ಸಿ.ವರದರಾಜ್, ಕಾರ್ಯದರ್ಶಿ ಎ.ಎನ್.ನಿಂಗಪ್ಪ, ಖಜಾಂಚಿ ಮಧುನಾಗರಾಜ್, ಪ್ರಚಾರ ಸಮಿತಿಯ ನಿರ್ವಾಹಕರಾದ ರಂಗನಾಥ್, ಹೆಚ್ ಎಂ ಪಿ ಕುಮಾರ್ ಸೇರಿದಂತೆ ಹಿರಿಯ ಪತ್ರಕರ್ತರು, ಪೊಲೀಸ್ ಸಿಬ್ಬಂದಿಗಳು ಹಾಜರಿದ್ದರು.
ವೇದಿಕೆ ಹಾಗೂ ದ್ವಾರಬಾಗಿಲ ಮಾಹಿತಿ:
ಮುಖ್ಯದ್ವಾರ: ಎಚ್.ಎನ್.ಷಡಾಕ್ಷರಪ್ಪ ಮತ್ತು ಸಿ.ಕೇಶವಮೂರ್ತಿ, ಎರಡನೇ ದ್ವಾರ: ಕೆ.ಎಂ.ಸಿದ್ದಲಿಂಗಸ್ವಾಮಿ ಮತ್ತು ನಾ.ಬ. ರುದ್ರಮುನಿ, ಮೂರನೇ ದ್ವಾರ: ಜೆ.ಬಿ.ಶಿವಲಿಂಗಪ್ಪ ಮತ್ತು ಸುರೇಶ್ ದೀಕ್ಷಿತ್, ಮುಖ್ಯ ಸಭಾ ವೇದಿಕೆ: ಹರ್ಡೇಕರ್ ಮಂಜಪ್ಪ
ಉದ್ಘಾಟನೆ : ಬೆಳಿಗ್ಗೆ 10.30 ಗಂಟೆಗೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಸಮ್ಮೇಳನವನ್ನು ಉದ್ಘಾಟಿಸಲಿದ್ದಾರೆ. ಹಿರಿಯ ಶಾಸಕರಾದ ಶಾಮನೂರು ಶಿವಶಂಕರಪ್ಪ ಅವರ ಘನ ಉಪಸ್ಥಿತಿ ಮತ್ತು ಕೆಯುಡಬ್ಲ್ಯುಜೆ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಅವರ ಅಧ್ಯಕ್ಷತೆಯಲ್ಲಿ ಛಾಯಾಚಿತ್ರ ಪ್ರದರ್ಶನವನ್ನು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಎಸ್. ಮಲ್ಲಿಕಾರ್ಜುನ್ ಉದ್ಘಾಟಿಸಲಿದ್ದಾರೆ. ಸ್ಮರಣ ಸಂಚಿಕೆಯನ್ನು ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ಬಿಡುಗಡೆ ಮಾಡುವರು. ಸಮಾಜ ಕಲ್ಯಾಣ ಸಚಿವ ಡಾ. ಹೆಚ್.ಸಿ. ಮಹಾದೇವಪ್ಪ ಅವರು ವಸ್ತು ಪ್ರದರ್ಶವನ್ನು, ಕೈಗಾರಿಕ ಸಚಿವ ಎಂ.ಬಿ. ಪಾಟೀಲ್ ಅವರು ವ್ಯಂಗ್ಯ ಚಿತ್ರ ಪ್ರದರ್ಶನದ ಉದ್ಘಾಟನೆಯನ್ನು ನೆರವೇರಿಸಲಿದ್ದಾರೆ. ಜಿಲ್ಲೆಯ ಎಲ್ಲಾ ಶಾಸಕರೂ, ಜನಪ್ರತಿನಿಧಿಗಳು, ಜಿಲ್ಲಾಧಿಕಾರಿಗಳು, ಜಿಲ್ಲೆಯ ಹಿರಿಯ ಅಧಿಕಾರಿಗಳು ಮುಖ್ಯ ಅತಿಥಿಗಳಾಗಿದ್ದಾರೆ.
ಗೋಷ್ಠಿ : ಸಮಾರಂಭದ ಉದ್ಘಾಟನೆಯ ನಂತರ ಮಧ್ಯಾಹ್ನ 2 ಗಂಟೆಗೆ `ಕೃತಕ ಬುದ್ಧಿಮತ್ತೆ ಮತ್ತು ಮಾಧ್ಯಮಗಳ ಭವಿಷ್ಯ’ ಮತ್ತು ಸಂಜೆ 4 ಗಂಟೆಗೆ `ಪತ್ರಿಕೆಗಳು : ಹಿಂದೆ-ಇಂದು-ಮುಂದು’ವಿಷಯಗಳ ಕುರಿತಂತೆ ಗೋಷ್ಠಿಗಳು ಜರುಗಲಿವೆ. ಕೊಪ್ಪಳ ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಬಿ.ಕೆ. ರವಿ, ಹಿರಿಯ ಪತ್ರಕರ್ತ ಈಶ್ವರ ದೈದೋಟ ಸೇರಿದಂತೆ ನಾಡಿನ ಹಿರಿಯ ಪತ್ರಕರ್ತರು ಗೋಷ್ಠಿಗಳನ್ನು ನಡೆಸಿಕೊಡಲಿದ್ದಾರೆ. ಅದೇ ದಿನ ಸಂಜೆ 6 ಗಂಟೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ.
ದಿನಾಂಕ 4ರ ಭಾನುವಾರ ಬೆಳಿಗ್ಗೆ 9.45ಕ್ಕೆ ಪ್ರತಿನಿಧಿಗಳ ಸಮಾವೇಶ ಜರುಗಲಿದೆ. ನಂತರ ಬೆಳಿಗ್ಗೆ 10.30ಕ್ಕೆ `ಮಾಧ್ಯಮ ಮತ್ತು ಸರ್ಕಾರ’ ಹಾಗೂ ಬೆಳಿಗ್ಗೆ 11.30ಕ್ಕೆ `ಸಾಮಾಜಿಕ ಮಾಧ್ಯಮ - ವೃತ್ತಿ ವಿಶ್ವಾಸಾರ್ಹತೆ’ವಿಷಯಗಳ ಕುರಿತ ಗೋಷ್ಠಿಗಳನ್ನು ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರಾದ ಕೆ.ವಿ. ಪ್ರಭಾಕರ್, ನಾಡಿನ ಹಿರಿಯ ಪತ್ರಕರ್ತ ಎಸ್.ಕೆ. ಶೇಷಚಂದ್ರಿಕಾ ಉದ್ಘಾಟಿಸಲಿದ್ದಾರೆ. ನಾಡಿನ ಹಿರಿಯ ಪತ್ರಕರ್ತರು ಗೋಷ್ಠಿಗಳನ್ನು ನಡೆಸಿಕೊಡುವರು.
ಸಮಾರೋಪ : ಗೋಷ್ಠಿಗಳ ನಂತರ ಮಧ್ಯಾಹ್ನ 2 ಗಂಟೆಗೆ ಜರುಗಲಿರುವ ಸಮಾರೋಪ ಸಮಾರಂಭದಲ್ಲಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಸಮಾರೋಪದ ನುಡಿಗಳನ್ನಾಡುವರು. ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್. ಅಶೋಕ್, ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ಲೋಕಸಭಾ ಸದಸ್ಯ ಜಿ.ಎಂ. ಸಿದ್ದೇಶ್ವರ, ಕಾರ್ಮಿಕ ಸಚಿವ ಸಂತೋಷ್ ಲಾಡ್, ಮಹಿಳಾ-ಮಕ್ಕಳ ಕಲ್ಯಾಣ ಸಚಿವರಾದ ಲಕ್ಷ್ಮೀ ಹೆಬ್ಬಾಳ್ಕರ್, ಅರಣ್ಯ - ಪರಿಸರ ಸಚಿವ ಈಶ್ವರ ಖಂಡ್ರೆ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ಜಿಲ್ಲೆಯ ಶಾಸಕರು ವಿಶೇಷ ಆಹ್ವಾನಿತರಾಗಿದ್ದಾರೆ.
ಗೌರವಾರ್ಪಣೆ : ಪತ್ರಿಕೋದ್ಯಮದಲ್ಲಿ ಸೇವೆ ಸಲ್ಲಿಸಿರುವ-ಸಲ್ಲಿಸುತ್ತಿರುವ ದಾವಣಗೆರೆ ಜಿಲ್ಲೆಯ 60 ವರ್ಷ ಮೇಲ್ಪಟ್ಟ ಎಲ್ಲಾ ಹಿರಿಯ ಪತ್ರಕರ್ತರನ್ನು ಸನ್ಮಾನಿಸಿ, ಗೌರವಿಸಲಾಗುತ್ತದೆ. ಅಲ್ಲದೇ, ರಾಜ್ಯ ಪತ್ರಕರ್ತರ ಸಮ್ಮೇಳನದ ಸಂದರ್ಭದಲ್ಲಿ ಪ್ರತಿ ವರ್ಷ ನಾಡಿನ ಹಿರಿಯ ಪತ್ರಕರ್ತರಿಗೆ ಕೊಡಮಾಡುವ ಕೆಯುಡಬ್ಲ್ಯೂಜೆ ರಾಜ್ಯ ಪ್ರಶಸ್ತಿಯನ್ನು ದಾವಣಗೆರೆ ಜಿಲ್ಲೆಯ 6 ಜನರಿಗೆ ಸನ್ಮಾನ ಮಾಡಲಾಗುವುದು ಎಂದು ಕಾನಿಪ ಜಿಲ್ಲಾಧ್ಯಕ್ಷ ಇ.ಎಂ.ಮಂಜುನಾಥ್ ಏಕಬೋಟೆ, ಪ್ರಧಾನ ಕಾರ್ಯದರ್ಶಿ ಎ.ಫಕೃದ್ದೀನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ