ಉಜಿರೆ: ಉಜಿರೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನಲ್ಲಿ ಹಿರಿಯ ವಿದ್ಯಾರ್ಥಿ ಸಂಘದ ಮಾಸಿಕ ಸಂವಾದ ಸರಣಿ (ಕಾಲೇಜಿನ ಹಿರಿಯ ವಿದ್ಯಾರ್ಥಿಯೊಂದಿಗೆ ಸಂವಾದ) 'ಎಸ್.ಡಿ.ಎಂ. ನೆನಪಿನಂಗಳ'ದ ಒಂಬತ್ತನೆಯ ಕಂತಿನ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದ ಅಂಗವಾಗಿ, ಪ್ರತಿಭಾನ್ವಿತ ವಿದ್ಯಾರ್ಥಿನಿ- ದ್ವಿತೀಯ ಬಿ.ಎಸ್ಸಿ.ಯ ಜಾಹ್ನವಿ ಹೆಗ್ಡೆ ಅವರಿಗೆ ಮುಖ್ಯ ಅತಿಥಿ, ಕಾಲೇಜಿನ ಹಿರಿಯ ವಿದ್ಯಾರ್ಥಿನಿ, ಜಪಾನ್’ನ ಟೋಕಿಯೋದ ಪ್ರೆಸ್ ಆಲ್ಟರ್ನೇಟಿವ್ ಸಲಹೆಗಾರ್ತಿ ಮನೋರಮಾ ಭಟ್ ಅವರು 5,000 ರೂ. ಸಹಾಯಧನ ಹಸ್ತಾಂತರಿಸಿದರು.
ಬಳಿಕ ಸಮ್ಮಾನ ಸ್ವೀಕರಿಸಿ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದ ಮನೋರಮಾ ಭಟ್, “ಜೀವನದಲ್ಲಿ ವೃತ್ತಿಗಿಂತಲೂ ಮೌಲ್ಯಗಳನ್ನು ಮೈಗೂಡಿಸಿಕೊಳ್ಳುವುದು ಮುಖ್ಯವಾಗುತ್ತದೆ. ಮನಸ್ಸಿಗೆ ಖುಷಿ ಕೊಡುವ, ಆದರೆ ಮೋಸ, ವಂಚನೆ ರಹಿತವಾದ ಯಾವುದೇ ಚಿಕ್ಕ ಕೆಲಸವಾದರೂ ಮಾಡಿ. ಓರ್ವ ವ್ಯಕ್ತಿಯ ಅಂತಸ್ತಿನಿಂದ ಆತನನ್ನು ಅಳೆಯುವುದಲ್ಲ. ಮೌಲ್ಯಗಳಿಂದ ಆತ ಯಶಸ್ಸು ಹೊಂದುತ್ತಾನೆ” ಎಂದರು.
ಗ್ರಾಮೀಣ ಭಾಗದ ವಿದ್ಯಾರ್ಥಿಗಳೆಂದರೆ ದಡ್ಡರೆಂದರ್ಥವಲ್ಲ. ಎಂಜಿನಿಯರಿಂಗ್, ಐಐಟಿಗೆ ಹೋಗುವವರೆಲ್ಲರೂ ಬುದ್ಧಿವಂತರೆಂದಲ್ಲ. ಬುದ್ಧಿವಂತರು ಎನಿಸಿಕೊಂಡವರಲ್ಲಿ ಅನೇಕರು ಕೋಚಿಂಗ್ ಸೆಂಟರ್ ಫ್ಯಾಕ್ಟರಿಗಳಲ್ಲಿ ತಯಾರಾದವರಾಗಿರುತ್ತಾರೆ. ಶಿಕ್ಷಣ ಕ್ಷೇತ್ರದಲ್ಲಿ ತಳಮಟ್ಟದಲ್ಲಿರುವ ವಿಸ್ತಾರವಾದ ವ್ಯಾಪ್ತಿಯಲ್ಲಿ (ಬಾಟಮ್ ಆಫ್ ದ ಪಿರಮಿಡ್) ಬಹುತೇಕರು ಮಧ್ಯಮ ವರ್ಗದ ವಿದ್ಯಾರ್ಥಿಗಳೇ ಇದ್ದು, ಬುದ್ಧಿವಂತರೇ ಆಗಿದ್ದಾರೆ. ಅವರ ಬಗ್ಗೆ ಕಾಲೇಜುಗಳು ಕಾಳಜಿ ವಹಿಸಬೇಕಿದೆ. ವಿದ್ಯಾರ್ಥಿಗಳೂ ಕೂಡ ತಮ್ಮ ಕೊರತೆ, ಕೌಶಲಗಳ ಬಗ್ಗೆ ಅವಲೋಕನ ಮಾಡಿಕೊಂಡು ಆ ಬಗ್ಗೆ ಗಮನ ಹರಿಸಬೇಕು ಎಂದು ಅವರು ಅಭಿಪ್ರಾಯಪಟ್ಟರು.
“ವಿದ್ಯಾರ್ಥಿಗಳು ಕೌಶಲಗಳನ್ನು ಹುರಿಗೊಳಿಸಿಕೊಳ್ಳಬೇಕು. ಪುಸ್ತಕ ಓದುವ ಮೂಲಕ ಏಕಾಗ್ರತೆ ವೃದ್ಧಿಸಿಕೊಳ್ಳಬೇಕು, ವ್ಯಾಯಾಮದಿಂದ ದೈಹಿಕ ಕ್ಷಮತೆ ಕಾಯ್ದುಕೊಳ್ಳಬೇಕು. ವೃತ್ತಿ ಮಾರ್ಗದರ್ಶನದಂಥ ವ್ಯವಸ್ಥೆಗಳನ್ನು ಸದುಪಯೋಗಪಡಿಸಿಕೊಳ್ಳಬೇಕು. ಹಿರಿಯ ವಿದ್ಯಾರ್ಥಿಗಳು ಇಂಥ ಕಾರ್ಯಕ್ರಮಗಳಲ್ಲಿ ಹಂಚಿಕೊಳ್ಳುವ ಅನುಭವಗಳಿಂದ ಮತ್ತೆ ಅವರು ಮಾಡಿದ ತಪ್ಪುಗಳನ್ನೇ ಮಾಡದೆ ಹೊಸ ದಾರಿ ಅನ್ವೇಷಿಸಬೇಕು. ಉದ್ಯೋಗ ಮಾರುಕಟ್ಟೆ ಅಥವಾ ಉನ್ನತ ಶಿಕ್ಷಣಕ್ಕೆ ಹಿರಿಯ ವಿದ್ಯಾರ್ಥಿ ಸಂಘದ ನೆರವು (ಸಂಪರ್ಕ) ಪಡೆದುಕೊಳ್ಳಬೇಕು. ಹೆಣ್ಣು ಮಕ್ಕಳು ಬದುಕು ಕಟ್ಟಿಕೊಳ್ಳುವ ಬಗ್ಗೆ ಗಂಭೀರ ಚಿಂತನೆ ನಡೆಸಬೇಕು” ಎಂದು ಅವರು ಸಲಹೆ ನೀಡಿದರು.
ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಪೀತಾಂಬರ ಹೆರಾಜೆ ಮಾತನಾಡಿ, ವಿದ್ಯಾರ್ಥಿಗಳು ಚಂಚಲ ಮನಸ್ಸನ್ನು ಹತೋಟಿಯಲ್ಲಿಟ್ಟುಕೊಂಡು ಗುರುಗಳ ಮಾರ್ಗದರ್ಶನದೊಂದಿಗೆ ಮುಂದೆ ಸಾಗಬೇಕು ಎಂದರು.
ಕಾಲೇಜಿನ ಪ್ರಾಂಶುಪಾಲ ಡಾ. ಬಿ.ಎ. ಕುಮಾರ ಹೆಗ್ಡೆ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಪ್ರಾಧ್ಯಾಪಕರಾದ ಅಭಿಲಾಷ್, ಶಕುಂತಲಾ ಉಪಸ್ಥಿತರಿದ್ದರು.
ವಿದ್ಯಾರ್ಥಿನಿಯರಾದ ವೈದೇಹಿ ಮತ್ತು ಪೂರ್ವಿ ಪ್ರಾರ್ಥಿಸಿದರು. ಹಿರಿಯ ವಿದ್ಯಾರ್ಥಿ ಸಂಘದ ಕಾರ್ಯಕ್ರಮ ಸಂಯೋಜಕ ಡಾ. ಎಂ.ಪಿ. ಶ್ರೀನಾಥ್ ಸ್ವಾಗತಿಸಿದರು. ಪ್ರಾಧ್ಯಾಪಕ ಡಾ. ದಿವಾಕರ ಕೊಕ್ಕಡ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ