ಜನವರಿ 25 ಕ್ಕೆ ರಾಷ್ಟ್ರೀಯ ಮತದಾರರ ದಿನಾಚರಣೆ ಕಾರ್ಯಕ್ರಮ : ಜಿಲ್ಲಾಧಿಕಾರಿ ಡಾ. ಕೆ ವಿದ್ಯಾಕುಮಾರಿ

Upayuktha
0

 


ಉಡುಪಿ: ಜನಸಾಮಾನ್ಯರಲ್ಲಿ ಮತದಾನದ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವ ಕುರಿತು ಜಾಗೃತಿ ಮೂಡಿಸುವ ರಾಷ್ಟ್ರೀಯ ಮತದಾರರ ದಿನಾಚರಣೆಯನ್ನು ಜನವರಿ 25 ರಂದು ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಡಾ. ಕೆ ವಿದ್ಯಾಕುಮಾರಿ ಹೇಳಿದರು.


ಅವರು ಇಂದು ನಗರದ ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಮತದಾರರ ದಿನಾಚರಣೆ-ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.


ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾರರೇ ಪ್ರಭುಗಳಾಗಿದ್ದು, ಮತದಾನದ ಮೂಲಕ ಜನಪ್ರತಿನಿಧಿಗಳಲ್ಲಿ ಆಯ್ಕೆ ಮಾಡುವ ಅವಕಾಶವಿದೆ. ಪ್ರಜಾಪ್ರಭುತ್ವವನ್ನು ಗಟ್ಟಿಗೊಳಿಸಲು ಮತದಾರ, ಮತದಾನ ಪ್ರಕ್ರಿಯೆಯಲ್ಲಿ ಭಾಗವಹಿಸುವುದು ಅವಶ್ಯ. ಈ ಬಗ್ಗೆ ಜಾಗೃತಿ ಮೂಡಿಸಲು ಮತದಾರರ ದಿನಾಚರಣೆಯನ್ನು ಜನವರಿ 25 ರಂದು ಬೆಳಗ್ಗೆ 10 ಗಂಟೆಗೆ ನಗರದ ಅಜ್ಜರಕಾಡು ಪುರಭವನದಲ್ಲಿ ಆಯೋಜಿಸಲಾಗಿದೆ ಎಂದರು.


ದಿನಾಚರಣೆಯ ಅಂಗವಾಗಿ ಮತದಾನದ ಬಗ್ಗೆ ಜಾಗೃತಿ ಮೂಡಿಸುವ ಜಾಥಾವು ಅಂದು ಬೆಳಗ್ಗೆ 8.30 ಕ್ಕೆ ನಗರದ ಕ್ಲಾಕ್ ಟವರ್‌ನಿಂದ ಪುರಭವನದವರೆಗೆ ಮೆರವಣಿಗೆ ಸಾಗಲಿದೆ. ನಂತರ ಸಭಾ ಕಾರ್ಯಕ್ರಮ ನಡೆಯಲಿದೆ ಎಂದರು.


ಕಾರ್ಯಕ್ರಮದಲ್ಲಿ ಸಾಂಕೇತಿಕವಾಗಿ ಹೊಸ ಯುವ ಮತದಾರರಿಗೆ ಮತದಾರರ ಗುರುತಿನ ಚೀಟಿಯನ್ನು ವಿತರಿಸಲಾಗುವುದು. ಸಿದ್ದವಿರುವ 17,000 ಕ್ಕೂ ಹೆಚ್ಚಿನ ಗುರುತಿನ ಚೀಟಿಯನ್ನು ನೋಂದಣಿ ಅಂಚೆಯ ಮೂಲಕ ಮತದಾರರಿಗೆ ತಲುಪಿಸಲಾಗುವುದು ಎಂದರು.


ಸ್ಥಳೀಯ ಸಂಸ್ಥೆಗಳು ಹಾಗೂ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಮತದಾನದ ಮಹತ್ವದ ಕುರಿತು ಬ್ಯಾನರ್, ಪೋಸ್ಟರ್‌ಗಳನ್ನು ಅಳವಡಿಸಬೇಕು, ಈ ಬಾರಿ ಮತದಾರರ ದಿನಚರಣೆ ವಿಶೇಷವಾಗಿರಲಿದೆ. ದಿನಾಚರಣೆ ಅರ್ಥಪೂರ್ಣವಾಗಿರುವುದರೊಂದಿಗೆ ಯುವ ಮತದಾರರಲ್ಲಿ ಮತದಾನದ ಬಗೆಗೆ ಹುಮ್ಮಸು ಮತ್ತು ಜಾಗೃತಿ ಮೂಡಿಸುವಂತಿರಬೇಕು ಎಂದರು.


ಈ ಬಾರಿ ರಾಷ್ಟ್ರೀಯ ಮತದಾರರ ದಿನಾಚರಣೆಯನ್ನು ಮತದಾನಕ್ಕಿಂತ ಇನ್ನೊಂದಿಲ್ಲ, ನಾವು ಖಚಿತವಾಗಿ ಮತದಾನ ಮಾಡುತ್ತೇವೆ ಎಂಬ ಘೋಷ ವಾಕ್ಯದೊಂದಿಗೆ ಆಚರಿಸಲಾಗುತ್ತಿದೆ ಎಂದು ಅವರು ಚುನಾವಣಾ ಐಕಾನ್‌ಗಳನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಲಾಗುವುದು ಎಂದರು.


ತಾಲೂಕು ಮಟ್ಟದಲ್ಲಿಯೂ ಸಹ ಮತದಾರರ ದಿನಾಚರಣೆಯನ್ನು ವ್ಯವಸ್ಥಿತವಾಗಿ ನಡೆಸಬೇಕು ಎಂದ ಅವರು, ಬೂತ್ ಮಟ್ಟದ ಅಧಿಕಾರಿಗಳು ಮತದಾನ ಕೇಂದ್ರಗಳಲ್ಲಿ ಅಂದು ಉಪಸ್ಥಿತರಿದ್ದು, ಅಲ್ಲಿ ಮೂಲಸೌಕರ್ಯಗಳು ಸೇರಿದಂತೆ ಚುನಾವಣೆಗೆ ಸಂಬಂಧಿಸಿದ ಮಾಹಿತಿಗಳನ್ನು ಸಾರ್ವಜನಿಕರಿಗೆ ನೀಡಬೇಕು ಎಂದರು.


ಮತದಾರರಲ್ಲಿ ಜಾಗೃತಿ ಮೂಡಿಸುವ ಪೋಸ್ಟರ್‌ಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರ ಪಡಿಸಬೇಕು. ಸರ್ಕಾರಿ ಕಚೇರಿಗಳಲ್ಲಿನ ದಿನನಿತ್ಯದ ಪತ್ರ ವ್ಯವಹಾರಗಳಲ್ಲಿ ಧ್ಯೇಯವಾಕ್ಯದ ಘೋಷಣೆಯನ್ನು ನಮೂದಿಸಬೇಕು. ಅಲ್ಲದೇ ಕರಪತ್ರಗಳನ್ನು ಹಂಚುವ ಮೂಲಕ ಹೆಚ್ಚಿನ ಪ್ರಚಾರ ಪಡಿಸಬೇಕು ಎಂದರು. 


ಜಾಗೃತಿ ಜಾಥಾ ಕಾರ್ಯಕ್ರಮದಲ್ಲಿ ಯುವಕ ಮಂಡಲಗಳು, ಎನ್.ಎಸ್.ಎಸ್, ಎನ್.ಸಿ.ಸಿ, ನೆಹರು ಯುವ ಕೇಂದ್ರದ ಸ್ವಯಂ ಸೇವಕರು ಹಾಗೂ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದರು.

  

ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರತೀಕ್ ಬಾಯಲ್, ಅಪರ ಜಿಲ್ಲಾಧಿಕಾರಿ ಮಮತಾ ದೇವಿ ಜಿ.ಎಸ್, ಎಎಸ್‌ಪಿ ಡಾ. ಕೆ.ಎಸ್ ಹೆಗ್ಡೆ, ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ರಾಜು ಮೊಗವೀರ, ಕುಂದಾಪುರ ಸಹಾಯಕ ಕಮೀಷನರ್ ರಶ್ಮಿ ಎಸ್, ಜಿಲ್ಲಾ ಮಟ್ಟದ ವಿವಿಧ ಅನುಷ್ಠಾನಾಧಿಕಾರಿಗಳು, ತಾಲೂಕು ತಹಶೀಲ್ದಾರ್‌ಗಳು ಹಾಗೂ ಮತ್ತಿತರರು ಉಪಸ್ಥಿತರಿದ್ದರು. 



 ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter   

Post a Comment

0 Comments
Post a Comment (0)
To Top