ಬರ ನಿರ್ವಹಣೆ ಕಾರ್ಯವನ್ನು ಸಮರ್ಪಕವಾಗಿ ನಿರ್ವಹಿಸಿ: ಜಿಲ್ಲಾಧಿಕಾರಿ ಡಾ. ಕೆ ವಿದ್ಯಾಕುಮಾರಿ

Upayuktha
2 minute read
0



ಉಡುಪಿ: ತಾಲೂಕು ಮಟ್ಟದ ಟಾಸ್ಕ್‍ಫೋರ್ಸ್ ಸಮಿತಿಗಳು ಕ್ರಿಯಾಶೀಲವಾಗಿ ಕಾರ್ಯನಿರ್ವಹಿಸುವುದರೊಂದಿಗೆ ಬರ ನಿರ್ವಹಣೆ ಕಾರ್ಯವನ್ನು ಸಮರ್ಪಕವಾಗಿ ನಿರ್ವಹಿಸಿ, ಜನಸಾಮಾನ್ಯರಿಗೆ ಕುಡಿಯುವ ನೀರಿನ ಸಮಸ್ಯೆ ಹಾಗೂ ಜಾನುವಾರುಗಳ ಮೇವಿನ ಸಮಸ್ಯೆ ಉಂಟಾಗದಂತೆ ನೋಡಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಡಾ. ಕೆ ವಿದ್ಯಾಕುಮಾರಿ ಅಧಿಕಾರಿಗಳಿಗೆ ಸೂಚನೆ ನೀಡಿದರು.


ಅವರು ಗುರುವಾರ ನಗರದ ಮಣಿಪಾಲ ರಜತಾದ್ರಿಯ ತಮ್ಮ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.


ಸರ್ಕಾರ ಜಿಲ್ಲೆಯ ಕಾರ್ಕಳ, ಹೆಬ್ರಿ ಹಾಗೂ ಬ್ರಹ್ಮಾವರ ತಾಲೂಕುಗಳನ್ನು ಬರಪೀಡಿತ ಪ್ರದೇಶವೆಂದು ಘೋಷಿಸಿದೆ. ಪ್ರಸಕ್ತ ಸಾಲಿಗೆ ವಾಡಿಕೆ ಮಳೆಯು 4,535 ಇದ್ದು, ವಾಸ್ತವಿಕವಾಗಿ 3525 ಮಿ.ಮೀ. ನಷ್ಟು ಮಳೆಯಾಗಿ ಶೇ.22 ರಷ್ಟು ಕಡಿಮೆ ಮಳೆಯಾಗಿ, ಅಂತರ್‍ಜಲ ಮಟ್ಟ ಹಾಗೂ ಜಲಾಶಯಗಳ ನೀರಿನ ಮಟ್ಟ ಕಡಿಮೆಯಾಗಿದ್ದು, ಮುಂಬರುವ ದಿನಗಳಲ್ಲಿ ನೀರಿನ ಸಮಸ್ಯೆ ಉಂಟಾಗುವ ಸಾಧ್ಯತೆಗಳಿವೆ. ಈ ಬಗ್ಗೆ ಈಗಿನಿಂದಲೇ ಎಚ್ಚರ ವಹಿಸಿ, ವ್ಯತ್ಯಯ ಉಂಟಾಗದಂತೆ ಕಾರ್ಯಪ್ರವೃತ್ತರಾಗಬೇಕು ಎಂದರು.


ಜಿಲ್ಲೆಯಾದ್ಯಂತ ಪ್ರಸಕ್ತ ಮಾಹೆಯಲ್ಲಿ 44.1 ಮಿ.ಮೀ. ನಷ್ಟು ಮಳೆಯಾಗಿರುವ ಹಿನ್ನೆಲೆ, ನೀರಿನ ಕೊರತೆ ಆಗುವ ಸಾಧ್ಯತೆಗಳಿಲ್ಲದಿದ್ದರೂ ಸಹ ಅಂತರ್‍ಜಲ ಕುಸಿತಗೊಂಡು ಜಿಲ್ಲೆಯ ಯಾವುದೇ ಗ್ರಾಮ ಹಾಗೂ ವಾರ್ಡ್‍ಗಳಲ್ಲಿ ನೀರಿನ ಸಮಸ್ಯೆ ಉಂಟಾಗಬಹುದು ಎಂಬ ಬಗ್ಗೆ ಗಮನ ಹರಿಸುವುದರೊಂದಿಗೆ ಗುರುತಿಸಿ, ಹತ್ತಿರದಲ್ಲಿ ಲಭ್ಯತೆ ಇರುವ ನೀರಿನ ಮೂಲ ಅಥವಾ ಬೋರ್‍ವೆಲ್‍ಗಳಿಂದ ನೀರೊದಗಿಸಲು ಗುರುತಿಸಿಕೊಂಡು, ಸಮಸ್ಯೆಗಳು ಉಂಟಾದಾಗ ಅವುಗಳ ಬಳಕೆ ಮಾಡಿಕೊಳ್ಳಬೇಕು. ಒಂದೊಮ್ಮೆ ಟ್ಯಾಂಕರ್ ಮೂಲಕ ನೀರು ಒದಗಿಸುವುದು ಅನಿವಾರ್ಯವಾಗುವ ಸಾಧ್ಯತೆಗಳಿರುವ ಹಿನ್ನೆಲೆ, ಟೆಂಡರ್ ಕರೆದು ತಯಾರಿರಬೇಕು ಎಂದರು. 


ಪ್ರತೀ ಹದಿನೈದು ದಿನಗಳಿಗೊಮ್ಮೆ ವಿಧಾನಸಭಾ ಕ್ಷೇತ್ರಮಟ್ಟದಲ್ಲಿ ಸ್ಥಳೀಯ ಶಾಸಕರ ಅಧ್ಯಕ್ಷತೆಯಲ್ಲಿ ಬರಪೀಡಿತ ತಾಲೂಕುಗಳ ತಾಲೂಕು ಮಟ್ಟದ ಟಾಸ್ಕ್ ಫೋರ್ಸ್ ಸಮಿತಿಯ ಸಭೆಯನ್ನು ಕರೆದು, ಕುಡಿಯುವ ನೀರಿನ ಸಮಸ್ಯೆ, ಜಾನುವಾರುಗಳಿಗೆ ಮೇವಿನ ಸಮಸ್ಯೆಗಳ ಬಗ್ಗೆ ಚರ್ಚಿಸಿ, ಸೂಕ್ತ ಕ್ರಮ ಕೈಗೊಳ್ಳಬೇಕು ಎಂದರು.


ಜಿಲ್ಲೆಯಲ್ಲಿ 2,25,000 ಕ್ಕೂ ಹೆಚ್ಚು ಜಾನುವಾರುಗಳಿದ್ದು, 2,41,925 ಟನ್‍ನಷ್ಟು ಮೇವು ಲಭ್ಯವಿದೆ. ರೈತರಿಗೆ ಪಶುಸಂಗೋಪನಾ ಇಲಾಖೆಯಿಂದ 1426 ಕಿಟ್‍ಗಳು ಹಾಗೂ ಕೆ.ಎಂ.ಎಫ್ ವತಿಯಿಂದ 3,000 ಕ್ಕೂ ಹೆಚ್ಚುಮೇವಿನ ಕಿಟ್ ಅನ್ನು ವಿತರಿಸಲಾಗಿದೆ ಎಂದ ಅವರು, ಕೃಷಿ, ತೋಟಗಾರಿಕೆ ಇಲಾಖೆಗೆ ಸೇರಿದ ಫಾರ್ಮ್‍ಗಳಲ್ಲಿ ಮೇವುಗಳನ್ನು ಬೆಳೆಯಲು ಕ್ರಮ ವಹಿಸಬೇಕು. ಹಡಿಲು ಭೂಮಿಗಳಲ್ಲಿ ಮೇವು ಬೆಳೆಯಲು ರೈತರಿಗೆ ಅಥವಾ ಸಂಜೀವಿನಿ ಸಂಘದ ಸದಸ್ಯರುಗಳಿಗೆ ಪ್ರೋತ್ಸಾಹಿಸಬೇಕು ಎಂದರು.


ಮಳೆ-ಗಾಳಿಯಿಂದ ವಿದ್ಯುತ್ ಕಂಬಗಳು ಹಾಗೂ ವಿದ್ಯುತ್ ತಂತಿಗಳು ತುಂಡಾದಲ್ಲಿ ಶೀಘ್ರದಲ್ಲಿಯೇ ಅವುಗಳನ್ನು ಬದಲಾಯಿಸಲು ಕ್ರಮ ಕೈಗೊಂಡು ವಿದ್ಯುತ್ ಸಂಪರ್ಕದಲ್ಲಿ ವ್ಯತ್ಯಯ ಉಂಟಾಗದಂತೆ ಕ್ರಮವಹಿಸಬೇಕು ಎಂದು ಮೆಸ್ಕಾಂ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು.


ಮಳೆಗಾಲದಲ್ಲಿ ಮಳೆ ನೀರು ಸರಾಗವಾಗಿ ಹರಿದುಹೋಗುವಂತೆ ತೋಡು ಹಾಗೂ ಚರಂಡಿಗಳಲ್ಲಿರುವ ಹೂಳು, ತರಗೆಲೆ, ಕಸ-ಕಡ್ಡಿಗಳನ್ನು ತೆರವುಗೊಳಿಸಿ ಮಳೆ ನೀರು ಸರಾಗವಾಗಿ ಹರಿದುಹೋಗುವಂತೆ ನೋಡಿಕೊಳ್ಳಬೇಕು. ಕುಡಿಯುವ ನೀರಿನ ಪೈಪ್‍ಲೈನ್ ದುರಸ್ಥಿ, ಶುದ್ಧ ಕುಡಿಯುವ ನೀರಿನ ಬಾವಿಯ ಸ್ವಚ್ಛತೆ, ಸರಕಾರಿ ಕಟ್ಟಡಗಳ ಮೇಲ್ಛಾವಣಿಯಲ್ಲಿರುವ ಕಸ-ಕಡ್ಡಿಗಳನ್ನು ಸ್ವಚ್ಛವಾಗಿರಿಸಿಕೊಳ್ಳಬೇಕು ಎಂದರು.


ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಸನ್ನ ಹೆಚ್, ಅಪರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಟಿ.ಎಸ್ ಸಿದ್ಧಲಿಂಗಪ್ಪ ಹಾಗೂ ಕೆ.ಎಸ್ ಹೆಗ್ಡೆ, ಕುಂದಾಪುರ ಸಹಾಯಕ ಕಮೀಷನರ್ ರಶ್ಮಿ ಎಸ್, ಜಿಲ್ಲಾ ಮಟ್ಟದ ಅನುಷ್ಠಾನಾಧಿಕಾರಿಗಳು, ತಾಲೂಕಿನ ತಹಶೀಲ್ದಾರ್‍ ಗಳು, ಸ್ಥಳೀಯ ಸಂಸ್ಥೆಗಳ ಮುಖ್ಯ ಅಧಿಕಾರಿಗಳು ಹಾಗೂ ಮತ್ತಿತರರು ಉಪಸ್ಥಿತರಿದ್ದರು. 


 ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter   

Post a Comment

0 Comments
Post a Comment (0)
To Top