ಹಚ್ಚ ಹಸಿರ ಪರಿಸರ, ಸಹಸ್ರಾರು ವೈವಿಧ್ಯಮಯ ಜೀವ ಸಂಕುಲ, ಬದುಕುವ ಪ್ರತಿಯೊಂದು ಜೀವಿಗೂ ಉಸಿರಾಡಲು ಗಾಳಿ, ನೀರು ಆಹಾರ ಎಲ್ಲವೂ ಈ ಭೂಮಿಯ ಮಡಿಲಿನಿಂದ ನಾವು ಪಡೆಯುತ್ತಿದ್ದೇವೆ. ಇದೆಲ್ಲವೂ ನಮ್ಮ ಉಳಿವಿಗಾಗಿ ಭೂಮಿತಾಯಿ ನೀಡಿದ ವರವೇ ಅಂತಾನೆ ಹೇಳಬಹುದು. ಇಷ್ಟೊಂದು ಸುಂದರ ತಾಣವಾದ ಎಲ್ಲವನ್ನು ನೀಡುತ್ತಿರುವ ಪ್ರಕೃತಿಗೆ ನಾವು ಏನನ್ನು ಕೊಡುತ್ತಿದ್ದೇವೆ ಮತ್ತು ಅದರ ಅಳಿವು, ಉಳಿವುಗಳ ಬಗ್ಗೆ ನಾವು ಎಷ್ಟು ಯೋಚಿಸುತ್ತಿದ್ದೇವೆ, ಯಾವ ರೀತಿಯ ಕೊಡುಗೆ ನೀಡುತ್ತಿದ್ದೇವೆ ಎಂದು ವಿಮರ್ಶೆ ಮಾಡಿದ್ದೇವೆಯೇ.
ತನ್ನೊಡಲನ್ನೇ ತ್ಯಾಗಮಯಿಯಾಗಿ ನಮಗೆ ಕರುಣಿಸಿ, ಆಹಾರ, ನೀರು, ಗಾಳಿ ನೀಡುತ್ತಿರುವ ಈ ಸುಂದರ ಭೂ ಮಡಿಲಿಗೆ ನಾವು ಇಂದು " ಪ್ರಕೃತಿ ಕಲ್ಮಷ "ವಾಗಿದೆ ಎಂಬ ಪಟ್ಟ ಕಟ್ಟಿದ್ದೇವೆ. ಈ ಪ್ರಕೃತಿ ಇಷ್ಟೊಂದು ಕಲ್ಮಶಗೊಳ್ಳಲು ಕಾರಣವೇನು? ಜೀವಸಂಕುಲದಲ್ಲಿ ಬುದ್ದಿವಂತನಾದ ಮಾನವನನ್ನು ಬಿಟ್ಟರೆ, ಇನ್ಯಾರು ಇಂತಹ ಕೆಲಸ ಮಾಡುತ್ತಾರೆ ಅಲ್ಲವೇ.ಈ ಪ್ರಕೃತಿಯ ಉಳಿವೂ ಅಳಿವು ಮಾನವರಾದ ನಮ್ಮ ಕೈಯಲ್ಲಿ ಇದೆ. -ಪ್ರಕೃತಿಯ ವಿನಾಶಕ್ಕೆ ಮನುಷ್ಯ ಕಾರಣವಾದರೆ ಅವನಿಂದ ಉಂಟಾದ ಸಮಸ್ಯೆ ಯಾವುದು? ಅದು ಪ್ರಕೃತಿ ಮಾತ್ರವಲ್ಲದೇ ಜೀವ ಸಂಕುಲಕ್ಕೂ ಶಾಪವಾಗಿದೆಯೇ? ಇವೆಲ್ಲ ಪ್ರಶ್ನೆಗಳಿಗೂ ಉತ್ತರ, ಪ್ರಕೃತಿಯ ಮಡಿಲಲ್ಲಿ ಹೆಜ್ಜೆ ಹೆಜ್ಜೆಗೂ ಸಮಸ್ಯೆಯಾಗಿ ಕಾಡುತ್ತಿರುವ ಪ್ಲಾಸ್ಟಿಕ್ ಎಂಬ ಭೂತ.
ಪ್ಲಾಸ್ಟಿಕ್ ಎನ್ನುವಂದದ್ದು ಜಗತ್ತಿಗೆ ಬಹುದೊಡ್ಡ ಶಾಪವಾಗಿ ಮನುಕುಲವನ್ನೇ ತನ್ನ ಹಿಡಿತದಿಂದ ನಲುಗಿಸಿ ಬಿಟ್ಟಿದೆ. ಇದು ದಿನೇ ದಿನೇ ವ್ಯಾಪಕವಾಗಿ ಹರಡುತ್ತಿರುವುದು ಮಾತ್ರವಲ್ಲದೆ ಸದಾ ಟನ್ ಗಟ್ಟಲೆ ಪ್ಲಾಸ್ಟಿಕ್ ಗಳು ಹೊಸ ಹೊಸ ರೂಪದಲ್ಲಿ ಭೂಮಿತಾಯಾ ಗರ್ಭವನ್ನು ಸೇರುತ್ತಿದೆ. ಎಲ್ಲೆಲ್ಲೂ ಕಾಣ ಸಿಗುವ ಪ್ಲಾಸ್ಟಿಕ್ ಗಳು ಮಣ್ಣಿನಲ್ಲಿ ಕರಗದೆ ಭೂಮಿಯ ಒಳ ಸೇರಿ ಮಣ್ಣಿನ ಫಲವತ್ತತೆಯನ್ನು ನಾಶ ಪಡಿಸಿ ಸುಂದರ ಪ್ರಕೃತಿಯ ಸೌಂದರ್ಯತೆಯನ್ನು ಮಂಕಾಗಿಸಿದೆ, ನೈಸರ್ಗಿಕ ಜಲಧಾರೆಗಳು ವಿಷವಾಗುತ್ತಿದೆ, ಪ್ರಾಣಿ ಪಕ್ಷಿಗಳ ಜೀವ ಪ್ಲಾಸ್ಟಿಕ್ ನಿಂದ ಬಲಿಯಾಗುತ್ತಿದೆ, ಮಾನವವನು ಸೇವಿಸುವ ಆಹಾರದಲ್ಲಿ ಮೈಕ್ರೋ ಪ್ಲಾಸ್ಟಿಕ್ ಗಳು ಸೇರಿ ರೋಗಗಳಿಗೆ ತುತ್ತಾಗುತ್ತಿದ್ದಾನೆ. ಇಷ್ಟೆಲ್ಲ ಅಡ್ಡ ಪರಿಣಾಮಗಳ ಅರಿವಿದ್ದರೂ ಕೂಡ ಪ್ಲಾಸ್ಟಿಕ್ ಇಲ್ಲದೆ ಬದುಕಲು ಅಸಾಧ್ಯವಾದ ಪರಿಸ್ಥಿತಿಯಲ್ಲಿ ನಾವಿದ್ದೇವೆ. ಪ್ಲಾಸ್ಟಿಕ್ ಎಂಬ ಬಹುದೊಡ್ಡ ಪಿಡುಗು ಇಂದು ಜೀವ ಸಂಕುಲಕ್ಕೆ ರಾಕ್ಷಸನ ರೂಪದಲ್ಲಿ ಕಾಡುತ್ತಿರುವುದು ವಿಪರ್ಯಾಸ.
ಮನೆಯ ಅಂಗಳದಿಂದ ಹಿಡಿದು ದೊಡ್ಡ ದೊಡ್ಡ ಬೃಹತ್ ಗಾತ್ರದ ರಾಶಿಗಳಲ್ಲಿಯೂ ಪ್ಲಾಸ್ಟಿಕ್ ಕಸಗಳೇ ಹೆಚ್ಚು. ಇತರ ಪೇಪರ್, ಎಲೆಗಳೆಲ್ಲವೂ ಸಾಮಾನ್ಯವಾಗಿ ಮಣ್ಣಿನಲ್ಲಿ ಕರಗುತ್ತವೆ ಆದರೆ ಪ್ಲಾಸ್ಟಿಕ್ ಎಂದು ಕರಗುವುದಿಲ್ಲ. ಇದು ಮುಂದಿನ ಪೀಳಿಗೆಗೂ ಉಳಿದು ಮಾರಕವಾಗುವಂತದ್ದು. ಹಾಗೇ ಬಿಟ್ಟರೆ ಪ್ರಾಣಿ, ಪಕ್ಷಿಗಳಿಗೆ, ಸುಟ್ಟರೆ ಪ್ರಕೃತಿಗೆ ತೊಂದರೆ, ಮಣ್ಣಲ್ಲಿ ಹೂತರೆ ಮಣ್ಣಿನ ಫಲವತ್ತತೆ ಕುಂಠಿತ ಅಬ್ಬಾ ಎಷ್ಟೇಲ್ಲ ತೊಂದರೆಗಳ ನಡುವೆ ನಿರ್ಮೂಲನೆಯಾಗದ ವಸ್ತು ಪ್ಲಾಸ್ಟಿಕ್. ಪ್ಲಾಸ್ಟಿಕ್ ವಸ್ತುವು ಅಂಗಡಿಗಳಿಂದ ಅಥವಾ ಇನ್ಯಾವುದೋ ತರಹದಲ್ಲಿ ಬಳಕೆಯಾಗಿ ನಮ್ಮ ಕೈಯಿಂದಲೇ ರಸ್ತೆ, ಫುಟ್ ಪಾತ್ಗಳಲ್ಲಿ ಅಲ್ಲಲ್ಲಿ ಗಾಳಿಯಲಿ ಯಾತ್ರೆ ಮಾಡಿ ಚೆಲ್ಲಪಿಲ್ಲಿಯಾಗಿ ಅಲ್ಲಲ್ಲಿ ಬೀಳುತ್ತದೆ. ಪ್ಲಾಸ್ಟಿಕ್ಗಳು ರಸ್ತೆಯಲ್ಲಿ ಕಂಡು ಬರುವ ಪ್ಲಾಸ್ಟಿಕ್ಗಳನ್ನು ಆಹಾರವೆಂದು ತಿಳಿದು ತಿಂದು ಅದು ಮರಣ ಹೊಂದುತ್ತವೆ. ನಮ್ಮಿಂದಾಗಿ ಅಮಾಯಕ ಜೀವಗಳು ಬಲಿಯಾಗುತ್ತಿವೆ. ಇಷ್ಟು ಮಾತ್ರವಲ್ಲದೇ ಇನ್ನು ಭೂಮಿ ಗೆ ರಕ್ಷಕವಚವಾಗಿರುವ ಒಜೋನ್ ಪದರ ಭೂಮಿಯಲ್ಲಿ ಅತಿಯಾದ ಪ್ಲಾಸ್ಟಿಕ್ ಬಳಕೆ ಕಾರಣದಿಂದ ದಿನೇ ದಿನೇ ತನ್ನ ಮಟ್ಟವನ್ನು ಕುಗ್ಗಿಸುತ್ತಿರುವುದರಿದ ಇದು ಕೂಡ ಜಗತ್ತಿನ ವಿನಾಶಕ್ಕೆ ಕಾರಣವಾಗಬಹುದು.
ಪ್ಲಾಸ್ಟಿಕ್ ಗಳ ಬಳಕೆಯು ಇಂದು ನಮ್ಮ ಜೀವನ ಶೈಲಿಯೊಂದಿಗೆ ಬೆಸೆದುಕೊಂಡಿದೆ. ಅಗ್ಗದ ಬೆಲೆಗೆ ದೊರಕುವ ಜೀವ ಸಂಕುಲಕ್ಕೆ ಅತೀ ಪರಿಣಾಮಕಾರಿಯಾಗಿ ಕಾಡುತ್ತಿರುವ ಈ ಪ್ಲಾಸ್ಟಿಕ್ ನ ಅಂತ್ಯ ಎಂದಾಗುವುದೋ ಪ್ರಶ್ನೆಗೆ ಉತ್ತರವಿದ್ದರೂ ಅದು ಪ್ರಶ್ನೆಯಾಗಿಯೇ ಉಳಿಯುವಂತೆ ಈಗಿನ ಸ್ಥಿತಿ ನಿರ್ಮಾಣವಾಗಿದೆ. ಏಕೆಂದರೆ ಇಲ್ಲಿ ನಿರ್ಮೂಲನೆಯ ಪರಿಹಾರವಿದ್ದರೂ ಅದನ್ನು ಅಲ್ಲಗಳೆದು ಹೆಚ್ಚು ಹೆಚ್ಚು ಪ್ಲಾಸ್ಟಿಕ್ ನ ವಸ್ತುಗಳಿಗೆ ಜನರು ಮೊರೆ ಹೋಗುತ್ತಿದ್ದಾರೆ. ದಿನೇ ದಿನೇ ತನ್ನ ವ್ಯಾಪ್ತಿಯನ್ನು ಹೆಚ್ಚಿಸುತ್ತ ಹೊಸ ಹೊಸ ಬಣ್ಣ ಬಣ್ಣದ ರೂಪ ಪಡೆದು ಜೀವ ಸಂಕುಲದ ಸರ್ವನಾಶಕ್ಕೆ ಕಾರಣವಾಗುತ್ತಿರುವ ಈ ಪ್ಲಾಸ್ಟಿಕ್ ಎಂಬ ರಾಕ್ಷಸನಿಂದ ಮುಕ್ತಿ ಎಂದಾಗುವುದೋ ಎಂಬ ಪ್ರಶ್ನೆ? ಅಲ್ಲವೇ ಆದರೆ ಪ್ಲಾಸ್ಟಿಕ್ಗಳ ಬಳಕೆ ಕಡಿಮೆ ಮಾಡಲು ನಾವೇನು ಮಾಡಬೇಕು ಎಂದು ಅರಿತು ಅದನ್ನು ಕಾರ್ಯಗತಗೊಳಿಸಬೇಕು. ಪರಿಸರ ಸ್ನೇಹಿ ವಸ್ತುಗಳ ಬಳಕೆ ಹೆಚ್ಚಾದಾಗ ಪ್ಲಾಸ್ಟಿಕ್ ಗಳ ಬಳಕೆ ದಿನೇ ದಿನೇ ಅಲ್ಪ ಕಡಿಮೆ ಮಾಡಬಹುದು. ಪ್ಲಾಸ್ಟಿಕ್ ವಸ್ತುಗಳ ಮರುಬಳಕೆಯಿಂದ ಕೂಡ ಪ್ಲಾಸ್ಟಿಕ್ ನ ಅತಿಯಾದ ಬಳಕೆಯನ್ನು ಕಡಿಮೆ ಮಾಡಬಹುದು. ಇನ್ನಾದರೂ ಎಚ್ಚೆತ್ತುಕೊಳ್ಳೋಣ.ಪ್ಲಾಸ್ಟಿಕ್ ನ ಬಳಕೆ ಕಡಿಮೆ ಮಾಡೋಣ ಜೀವ ಸಂಕುಲದ ಉಳಿವಿನ ಕಡೆಗೆ ಗಮನ ಹರಿಸೋಣ.
- ವಿಜಯಲಕ್ಷ್ಮಿ ಬಿ ಕೆಯ್ಯೂರು
ವಿವೇಕಾನಂದ ಕಾಲೇಜು ಪುತ್ತೂರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


