ಕೂಜಂತಂ ರಾಮರಾಮೇತಿ ಮಧುರಂ ಮಧುರಾಕ್ಷರಮ್ |
ಆರುಹ್ಯ ಕವಿತಾಶಾಖಾಂ ವಂದೇ ವಾಲ್ಮೀಕಿ ಕೋಕಿಲಮ್ ||
ಆದಿ ಕಾವ್ಯವೆಂದು ಲೋಕವಿಖ್ಯಾತವಾದ ರಾಮಾಯಣವು ಸರ್ವಾದರಣೀಯವಾದ ರಾಮಚರಿತೆಯನ್ನೊಳಗೊಂಡ ಮೌಲಿಕ ಕಾವ್ಯ. ವೇದಗಳು ವರ್ಣಿಸುವ ಪರಮತತ್ವ ಶ್ರೀಮನ್ನಾ ರಾಯಣ ತತ್ವವೇ ಶ್ರೀಮದ್ ರಾಮಾಯಣದಲ್ಲಿ ಶ್ರೀರಾಮ ರೂಪದಿಂದ ನಿರೂಪಿತವಾಗಿದೆ. ವೇದವೇದಿಯಾದ ಪರಮಪುರುಷೋತ್ತಮನು ದಶರಥನಂದನ ಶ್ರೀರಾಮನ ರೂಪದಲ್ಲಿ ಅವತರಿಸಿದ ಮೇಲೆ ಸಾಕ್ಷಾತ್ ವೇದವೇ ವಾಲ್ಮೀಕಿಯ ಮುಖದಿಂದ ಶ್ರೀ ರಾಮಾಯಣ ರೂಪದಲ್ಲಿ ಪ್ರಕಟವಾಯಿತು ಎಂದು ಎಲ್ಲರೂ ನಂಬುತ್ತಾರೆ. ಆದ್ದರಿಂದ ಶ್ರೀಮದ್ ವಾಲ್ಮೀಕಿಯ ರಾಮಾಯಣದ ಪ್ರತಿಷ್ಠೆ ವೇದ ತುಲ್ಯವಾಗಿದೆ. ಭಾರತೀಯರಾದ ನಮಗೆ ಅದು ಪರಮ ಗೌರವದ ವಸ್ತುವು ಹಾಗೂ ನಿಜ ಅರ್ಥದಲ್ಲಿ ದೇಶದ ಬಹುಮೂಲ್ಯ ರಾಷ್ಟ್ರೀಯ ನಿಧಿಯಾಗಿದೆ. ಇದರ ಒಂದೊಂದು ಅಕ್ಷರವು ಮಹಾ ಪಾತಕವನ್ನು ನಾಶ ಮಾಡುತ್ತದೆ ಎಂದು ಆಸ್ತಿಕರು ನಂಬುತ್ತಾರೆ.
ರಾಮಂ ರಾಮಾನುಜಂ ಸೀತಾಂ ಭರತಂ ಭರತಾನುಜಮ್ |
ಸುಗ್ರೀವಂ ವಾಯುಸೂನುಂ ಚ ಪ್ರಣಮಾಮಿ ಪುನಃ ಪುನಃ ||
’ತ’ ಅಕ್ಷರದಿಂದ ಆರಂಭವಾಗುವ ರಾಮಾಯಣವು ”ತ್” ಕಾರದಲ್ಲಿ ಮುಗಿಯುತ್ತದೆ. ಈ “ತತ್” ಪದಗಳೊಳಗಡೆಯೇ ವಾಲ್ಮೀಕಿ ಮನಿಗಳು ಅಕ್ಷರಗಳಿಗೆ ಸಹಸ್ರ ಸ್ತೋತ್ರದಂತೆ 24,000 ಶ್ಲೋಕಗಳಲ್ಲಿ ಸಂಪೂರ್ಣ ರಾಮಾಯಣವನ್ನು ಹುದುಗಿಸಿದ್ದಾರೆ. ಇದೇ ಗಾಯತ್ರೀ ರಾಮಾಯಣ.
ಇಂತಹ ಆಧ್ಯಾತ್ಮಿಕವೂ ಪವಿತ್ರವೂ ಮೋಕ್ಷಪ್ರದವೂ ಆದ ರಾಮಾಯಣದಲ್ಲಿ ಪ್ರತಿಪಾದಿತವಾದ “ಸಹೋದರರ ಸ್ನೇಹ” ಎಂಬುದೂ ಕೂಡ ಎಲ್ಲರಿಗೂ ಆದರ್ಶಪ್ರಾಯವಾಗಿದೆ. ರಾಮಾಯಣದಲ್ಲಿ ಬರುವ ರಾಮ ಭರತ ಲಕ್ಷ್ಮಣ ಶತ್ರುಘ್ನ ಈ ನಾಲ್ವರು ಸಹೋದರರ ಭಾವವನ್ನ, ಪರಸ್ಪರರ ಸ್ನೇಹಾಚಾರವನ್ನು ಯತ್ಕಿಂಚಿತ್ ತೋರಿಸುವ ಪ್ರಯತ್ನವನ್ನು ಈ ಲೇಖನದಲ್ಲಿ ಮಾಡಿದ್ದೇನೆ.
ರಾಮ ಮತ್ತು ಲಕ್ಷ್ಮಣರದ್ದು ಅವಿನಾಭಾವದ ಸಹೋದರತ್ವ. ಬಾಲ್ಯದಿಂದ ಮರಣದವರೆಗೂ ಇಬ್ಬರು ಒಟ್ಟಿಗೆ ಬಾಳಿ ಬದುಕಿದವರು. ಲಕ್ಷ್ಮಣನು ಶ್ರೀರಾಮನಲ್ಲಿ ಬಾಲ್ಯದಿಂದಲೂ ಅತ್ಯಂತ ಅನುರಾಗವನ್ನು ಇಟ್ಟಿದ್ದ. ಶ್ರೀರಾಮನಿಗೂ ಕೂಡ ಇವನ ಹೊರತಾಗಿ ನಿದ್ರೆ ಬರುತ್ತಿರಲಿಲ್ಲವಂತೆ-
ಬಾಲಾತ್ಪ್ರಭೃತಿ ಸುಸ್ನಿಗ್ಧೋ ಲಕ್ಷ್ಮಣೋ ಲಕ್ಷ್ಮಿವರ್ಧನಃ |
ರಾಮಸ್ಯ ಲೋಕರಾಮಸ್ಯ ಭ್ರಾತುರ್ಜ್ಯೇಷ್ಠಸ್ಯ ನಿತ್ಯಶಃ ||
ಸರ್ವಪ್ರಿಯಕರಸ್ತಸ್ಯ ರಾಮಸ್ಯಾಪಿ ಶರೀರತಃ |
ಲಕ್ಷ್ಮಣೋ ಲಕ್ಷ್ಮಿಸಂಪನ್ನೋ ಬಹಿಃ ಪ್ರಾಣ ಇವಾಪರಃ ||
ಲಕ್ಷ್ಮಿವರ್ಧನನಾದ ಲಕ್ಷ್ಮಣನು ಬಾಲ್ಯದಿಂದಲೂ ಹಿರಿಯಣ್ಣನಾದ ಲೋಕಾಭಿರಾಮ ಶ್ರೀರಾಮನಿಗೆ ಹೆಚ್ಚು ಪ್ರಿಯನಾಗಿದ್ದನು ಮತ್ತು ಶರೀರದಿಂದ ರಾಮನ ಸೇವೆಯಲ್ಲೇ ತೊಡಗಿದ್ದನು. ಲಕ್ಷ್ಮಣನು ರಾಮನಿಗೆ ಹೊರಗಿನ ಪ್ರಾಣದಂತೆ ಇದ್ದನು. ರಾಮನ ಬಳಿಗೆ ಒಳ್ಳೆ ಮೃಷ್ಟಾನ್ನ ಬಂದರೆ ಅದನ್ನ ಲಕ್ಷ್ಮಣನಿಗೆ ಕೊಡದೆ ಆತ ತಿನ್ನುತ್ತಿರಲಿಲ್ಲವಂತೆ. ಅದೇ ರೀತಿಯಾಗಿ ಭರತಶತ್ರುಘ್ನರ ಭ್ರಾತೃತ್ವವು ಅಪ್ಯಾಯಮಾನವಾಗಿ ಇತ್ತು, ಲಕ್ಷ್ಮಣನ ತಮ್ಮ ಶತ್ರುಘ್ನನು ಭರತನಿಗೆ ಪ್ರಾಣಕ್ಕಿಂತಲೂ ಪ್ರಿಯನಾಗಿದ್ದನು. ಅವನು ಭರತನನ್ನ ಪ್ರಾಣಕ್ಕಿಂತ ಹೆಚ್ಚು ಪ್ರೀತಿಸುತ್ತಿದ್ದನಂತೆ ಎಂಬುದನ್ನು ಈ ಕೆಳಗಿನ ಶ್ಲೋಕ ನಿರೂಪಿಸುತ್ತದೆ.
ಭರತಸ್ಯಾಪಿ ಶತ್ರುಘ್ನೋ ಲಕ್ಷ್ಮಣಾವರಜೊ ಹಿ ಸಃ |
ಪ್ರಾಣೈಃ ಪ್ರಿಯತರೋ ನಿತ್ಯಂ ತಸ್ಯ ಚಾಸ್ತೀತ್ತಥಾ ಪ್ರಿಯಃ ||
ಪಟ್ಟಾಭಿಷೇಕದ ಘಟನೆ:
ಪುಷ್ಯ ನಕ್ಷತ್ರದ ಶುಭ ಮುಹೂರ್ತದಲ್ಲಿ ಶ್ರೀರಾಮನಿಗೆ ಪಟ್ಟವಾಗುವುದೆಂದು ತಿಳಿದು ತಾಯಿ ಕೌಸಲ್ಯೆ ಹರ್ಷಗೊಂಡಳು. ಶ್ರೀರಾಮನು ತಾಯಿಯನ್ನು ನೋಡಲು ಆಕೆಯ ಅಂತಃಪುರಕ್ಕೆ ಬರುತ್ತಾನೆ. ಅದಾಗಲೇ ಅಲ್ಲಿಯೇ ಇದ್ದ ಲಕ್ಷ್ಮಣನು ಅಣ್ಣನನ್ನು ಕಂಡು ವಿನಯದಿಂದ ರಾಮನಿಗೆ ಕೈ ಮುಗಿಯುತ್ತಾನೆ. ರಾಮನ ಪಟ್ಟಾಭಿಷೇಕದ ಸಮಯದಲ್ಲಿ ಇಂತಹ ಇನ್ನೊಂದು ಪ್ರಸಂಗ ಹೀಗಿದೆ -
ಪರ್ವತಾದಿವ ನಿಷ್ಕ್ರಮ್ಯ ಸಿಂಹೋ ಗಿರಿಗುಹಾಶಯಃ |
ಲಕ್ಷ್ಮಣಂ ದ್ವಾರಿ ಸೋಽಪಶ್ಯತ್ ಪ್ರಹ್ವಾಂಜಲಿಪುಟಂ ಸ್ಥಿತಮ್ ||
ಪರ್ವತದ ಗುಹೆಯಲ್ಲಿ ಮಲಗಿರುವ ಸಿಂಹವು, ಗುಹೆಯಿಂದ ಹೊರಗೆ ಬರುವಂತೆ ಅಂತಃಪುರದಿಂದ ಹೊರಬಂದ ಶ್ರೀರಾಮನು, ಬಾಗಿಲಲ್ಲಿ ಕೈ ಮುಗಿದುಕೊಂಡು ನಿಂತ ಲಕ್ಷ್ಮಣನನ್ನು ನೋಡಿದನು. ಹಿರಿಯಣ್ಣನ ಬಗ್ಗೆ ತಮ್ಮನಿಗಿದ್ದ ಗೌರವವನ್ನು ಈ ವ್ಯವಹಾರ ತೋರಿಸುತ್ತದೆ. “ಜ್ಯೇಷ್ಠೋ ಭ್ರಾತಾ ಪಿತೃಸಮಃ” ಎಂಬ ಮಾತಿನಂತೆ ಹಿರಿಯ ಅಣ್ಣನು ತಂದೆಗೆ ಸಮಾನ. ಅಣ್ಣನನ್ನು ಕಂಡಾಗ ನಮಸ್ಕರಿಸುವುದು ಸಂಪ್ರದಾಯ ಇನ್ನೊಂದು ದೃಷ್ಟಾಂತ ಹೀಗಿದೆ.
ಪಟ್ಟಾಭಿಷೇಕದ ಹೊಸ್ತಿಲಲ್ಲಿದ್ದ ರಾಮನು ಲಕ್ಷ್ಮಣನ ಕುರಿತು ಹೀಗೆ ಹೇಳುತ್ತಾನೆ-
ಲಕ್ಷ್ಮಣೇಮಾಂ ಮಯಾ ಸಾರ್ಧಂ ಪ್ರಶಾಧಿ ತ್ವಂ ವಸುಂಧರಾಮ್ |
ದ್ವಿತೀಯಂ ಮೇಽಂತರಾತ್ಮಾನಂ ತ್ವಾಮಿಯಂ ಶ್ರೀರುಪಸ್ಥಿತಾ ||
ಸೌಮಿತ್ರೇ ಭುಂಕ್ಷ್ವ ಭೋಗಾಂಸ್ವಂ ಇಷ್ಟಾನ್ ರಾಜ್ಯಫಲಾನಿ ಚ |
ಜೀವಿತಂ ಚಾಪಿ ರಾಜ್ಯಂ ಚ ತ್ವದರ್ಥಮಭಿಕಾಮಯೇ ||
ಲಕ್ಷ್ಮಣ! ನೀನು ನನ್ನೊಂದಿಗೆ ಈ ಭೂಮಿಯನ್ನ ಆಳಬೇಕು. ನೀನು ನನಗೆ ದ್ವಿತೀಯ ಅಂತರಾತ್ಮನಾಗಿರುವೆ. ನಿನಗಾಗಿಯೇ ನಾನು ಈ ಜೀವನ ಮತ್ತು ರಾಜ್ಯವನ್ನು ಬಯಸುತ್ತೇನೆ. ಇದು ರಾಮನು ಸಹೋದರನಾದ ಲಕ್ಷ್ಮಣನ ಬಗ್ಗೆ ಹೇಳುವಂತಹ ಮಾತು. ಹೀಗೆ ರಾಮ ಲಕ್ಷ್ಮಣರ ಭಾತೃತ್ವ ಅನ್ಯಾದೃಶವಾದದ್ದು. ಲಕ್ಷ್ಮಣ ರಾಮನ ರಕ್ಷಣೆಯಲ್ಲಿ ರಾಮ ಲಕ್ಷ್ಮಣನ ರಕ್ಷಣೆಯಲ್ಲಿ ಪರಸ್ಪರ ಜಾಗರೂಕರು. ಅಶ್ವಿನಿ ದೇವತೆಗಳಂತೆಯೇ ಪರಸ್ಪರರ ಅನುರಾಗ. ಈ ಕಾರಣದಿಂದಲೇ ಲಕ್ಷ್ಮಣನ ವಿಷಯದಲ್ಲಿ ರಾಮನೆಂದೂ ಪಾಪ ಕಾರ್ಯವನ್ನು ಮಾಡಲಾರ. ಇಂತಹ ಪ್ರಸಂಗ ರಾಮಾಯಣದುದ್ದಕ್ಕೂ ಗಮನಿಸಿದರೆ ತೋರುತ್ತದೆ. ಸಾಮಾನ್ಯವಾಗಿ ಅಧಿಕಾರ ಸಂಪತ್ತು ಬಂದಾಗ ಸಂಬಂಧ ಕೆಟ್ಟುಹೋಗುತ್ತದೆ. ಆದರೆ ರಾಮಾಯಣದಲ್ಲೆಲ್ಲೂ ಇಂತಹ ನಿದರ್ಶನಗಳಿಲ್ಲ.
ಪಟ್ಟಾಭಿಷೇಕದ ಸಿದ್ಧತೆಗಳ ಮಧ್ಯೆ ಮಂಥರೆಯು ಕೈಕೇಯಿಗೆ ಭಯನುಡಿಗಳನ್ನಾಡಿ ಆಕೆಯ ಮನಸ್ಸನ್ನು ಕಲುಷಿತಗೊಳಿಸುತ್ತಾಳೆ. ಆ ಸಮಯದಲ್ಲಿ ಮಂಥರೆಯು-
ಲಕ್ಷ್ಮಣೋ ಹಿ ಮಹಾಬಾಹೂ ರಾಮಂ ಸರ್ವಾತ್ಮನಾ ಗತಃ |
ಶತ್ರುಘ್ನಶ್ಚಾಪಿ ಭರತಂ ಕಾಕುತ್ಸ್ಥಂ ಲಕ್ಷ್ಮಣೋ ಯಥಾ ||
ಮಹಾಭಾಗನಾದ ಲಕ್ಷ್ಮಣನು ಸರ್ವಾತ್ಮನಾ ಶ್ರೀರಾಮಚಂದ್ರನನ್ನು ಅನುಸರಿಸುವವನಾಗಿದ್ದಾನೆ. ಅದೇ ರೀತಿ ಶತ್ರುಘ್ನನು ಭರತನನ್ನು ಅನುಸರಿಸುತ್ತಿದ್ದಾನೆ ಎನ್ನುತ್ತಾಳೆ ಹೀಗೆ ರಾಮ ಮತ್ತು ಲಕ್ಷ್ಮಣರ ಅನ್ಯೋನ್ಯತೆ ಮತ್ತು ಭರತ ಹಾಗೂ ಶತ್ರುಘ್ನರ ಅನ್ಯೋನ್ಯತೆ ಸರ್ವವಿದಿತವಾಗಿತ್ತು. ಹಾಗಿದ್ದರೂ ನಾಲ್ವರಲ್ಲೂ ಸಾಹೋದರ್ಯ ಎಂಬುದು ಕಲ್ಮಷರಹಿತವಾಗಿಯೇ ಇತ್ತು.
ಅಣ್ಣನಾದ ರಾಮನ ಬಗ್ಗೆ ಭರತನಿಗಿರುವ ಭಾವವನ್ನ ಗ್ರಹಿಸಿದ ದಶರಥನು ಶ್ರೀರಾಮನ ಪಟ್ಟಾಭಿಷೇಕದ ಹಿಂದಿನ ದಿನ ಈ ಮಾತನ್ನು ಹೇಳುತ್ತಾನೆ-
ಕಾಮಂ ಖಲು ಸತಾಂ ವೃತ್ತೇ ಭ್ರಾತಾ ತೇ ಭರತಃ ಸ್ಥಿತಃ |
ಜ್ಯೇಷ್ಠಾನುವರ್ತೀ ಧರ್ಮಾತ್ಮಾ ಸಾನುಕ್ರೋಶೋ ಜಿತೇಂದ್ರಿಯಃ ||
ನಿನ್ನ ತಮ್ಮ ಭರತನು ಸತ್ಪುರುಷರ ಆಚಾರ ವ್ಯವಹಾರದಲ್ಲೇ ಇದ್ದಾನೆ. ಅಣ್ಣನನ್ನ ಅನುಸರಿಸುವವನು, ದಯಾಳು, ಜಿತೇಂದ್ರಿಯನು ಆಗಿದ್ದಾನೆ. ಇದು ದಶರಥ ಗುರುತಿಸಿದ ಭರತನ ದೃಢವಾದ ಭ್ರಾತೃವಾತ್ಸಲ್ಯ.
ಕೇಕೆಯ ದೇಶದಿಂದ ಬಂದ ಭರತನು ದಶರಥನ ಮರಣವಾರ್ತೆಯನ್ನು ಕೇಳಿ ದುಃಖಿಸಿ ನಂತರ ರಾಮನೆಲ್ಲಿದ್ದಾನೆಂದು ಕೇಳುವಾಗ- ಮೇ ಭ್ರಾತಾ ಪಿತಾ ಬಂಧುಃ ಯಸ್ಯ ದಾಸೋಽಸ್ಮಿ ಸಮ್ಮತಃ ಎಂದು ಹೇಳುತ್ತಾನೆ. ರಾಮನೇ ಅಣ್ಣ ತಂದೆ ಬಂಧು ಬಳಗ ಎಲ್ಲವೂ ಆಗಿದ್ದಾನೆ. ಅವನಿಗೆ ನಾನು ನಮಿಸಬೇಕಾಗಿದೆ.
ಅಣ್ಣನಾದ ರಾಮನಿಗೆ ಪಟ್ಟಾಭಿಷೇಕದ ಸಂಭ್ರಮದಲ್ಲಿ ವನ್ಯವೃತ್ತಿ ಒದಗಿದ್ದನ್ನು ಕಂಡು ಮರುಗಿ ಕಣ್ಣೀರು ಸುರಿಸುತ್ತಾ ಕೋಪ ಬಂದರೂ ಅದನ್ನು ಅದುಮಿ ಅಣ್ಣನ ಸತ್ಯವ್ರತತ್ವವನ್ನು ನೆನೆದು ಆತನೊಂದಿಗೆ ಲಕ್ಷ್ಮಣನು ಹೆಜ್ಜೆ ಹಾಕುತ್ತಾನೆ. ಅಣ್ಣನ ವನವಾಸ ವಾರ್ತೆಯನ್ನು ಕೇಳಿ ವಿರಹ ಶೋಕವನ್ನು ಸಹಿಸಲಾರದ ಲಕ್ಷಣನು–
ಯದಿ ಗಂತುಂ ಕೃತಾ ಬುದ್ಧಿಃ ವನಂ ಮೃಗಗಜಾಯುತಮ್ |
ಅಹಂ ತ್ವಾನುಗಮಿಷ್ಯಾಮಿ ವನಮಗ್ರೇ ಧನುರ್ಧರಃ ||
ಆರ್ಯ! ನೀವು ಸಾವಿರಾರು ಕಾಡುಪ್ರಾಣಿಗಳಿಂದ, ಆನೆಗಳಿಂದ ತುಂಬಿದ ವನಕ್ಕೆ ಹೋಗುವುದನ್ನು ನಿಶ್ಚಯಿಸಿದರೆ ನಾನು ನಿಮ್ಮನ್ನು ಅನುಸರಿಸುವೆನು ಎಂದು ಅಣ್ಣನ ಚರಣಗಳನ್ನ ಗಟ್ಟಿಯಾಗಿ ಹಿಡಿದುಕೊಂಡು ಹೀಗೆ ಹೇಳುತ್ತಾನೆ. ಆನಂತರ ವರವಾಸದ ಆರಂಭದಲ್ಲಿ ಗಂಗಾತಟದಲ್ಲಿ ನಿಷಾದರಾಜ ಗುಹನ ಆತಿಥ್ಯದಲ್ಲಿ-
ತತಶ್ಚೀರೋತ್ತರಾಸಂಗಃ ಸಂಧ್ಯಾಮನ್ವಾಸ್ಯ ಪಶ್ಚಿಮಾಮ್ |
ಜಲಮೇವಾದದೇ ಭೋಜ್ಯಂ ಲಕ್ಷ್ಮಣೇನಾಹೃತಂ ಸ್ವಯಮ್ ||
ಶ್ರೀ ರಾಮನು ಸಂಧ್ಯಾವಂದನೆಯನ್ನು ಮಾಡಿ ಆಹಾರವಾಗಿ ಸ್ವತಃ ಲಕ್ಷ್ಮಣನು ತಂದಿರುವ ಕೇವಲ ನೀರು ಮಾತ್ರ ಕುಡಿದನಂತೆ. ಇದು ತಮ್ಮನ ಸೇವಾ ತತ್ಪರತೆ ಮತ್ತು ಅಣ್ಣನಿಗೆ ತಮ್ಮಲ್ಲಿರುವ ವಿಶ್ವಾಸವನ್ನು ವ್ಯಕ್ತಪಡಿಸುತ್ತದೆ. ಅಣ್ಣನ ಸುಖ ದುಃಖಗಳಲ್ಲಿ ಭಾಗಿಯಾಗಬೇಕಾದ್ದು ತಮ್ಮಂದಿರ ಜವಾಬ್ದಾರಿ. ಯಾಕೆಂದರೆ ಅಣ್ಣನೆಂದರೆ ಮನೆಯ ಯಜಮಾನನೆ ಆಗಿರುತ್ತಾನೆ. ಅದು ವನವಾಸದಲ್ಲಿ ಭರತನ ಮಾತಿನಿಂದ ವ್ಯಕ್ತವಾಗಿ ತೋರುತ್ತದೆ.
ಧನ್ಯಃ ಖಲು ಮಹಾಭಾಗೋ ಲಕ್ಷ್ಮಣಃ ಶುಭಲಕ್ಷಣಃ |
ಭ್ರಾತರಂ ವಿಷಮೇ ಕಾಲೇ ಯೋ ರಾಮಮನುವರ್ತತೇ ||
ಇಂತಹ ವಿಷಮ ಪರಿಸ್ಥಿತಿಯಲ್ಲಿ ಅಣ್ಣನಾದ ರಾಮನನ್ನು ಅನುಸರಿಸಿ ಕಾಡಿಗೆ ಹೋಗಿರುವ ಮಹಾಭಾಗ್ಯಶಾಲಿಯಾದ ಲಕ್ಷಣನೆ ಧನ್ಯನಲ್ಲವೇ!
ಚಿತ್ರಕೂಟದ ಸೊಬಗಿನಲ್ಲಿ ಸೀತೆಯೊಂದಿಗೆ ರಾಮನು ಪ್ರಕೃತಿ ಸೌಂದರ್ಯವನ್ನು ಅನುಭವಿಸುವಾಗಲೂ ತಮ್ಮನಾದ ಲಕ್ಷ್ಮಣನನ್ನು ನೆನಪಿಸಿಕೊಳ್ಳುತ್ತಾನೆ. ಅಲ್ಲದೆ- ಲಕ್ಷ್ಮಣೇನ ಚ ವತ್ಸ್ಯಾಮಿ ನ ಮಾಂ ಶೋಕಃ ಪ್ರಧರ್ಷತಿ|
ಲಕ್ಷ್ಮಣನೊಂದಿಗೆ ಇಲ್ಲಿ ದಿನ ಕಳೆಯಲು ಯಾವುದೇ ದುಃಖವಾಗುವುದಿಲ್ಲ ಎಂದು ರಾಮನು ಹೇಳುತ್ತಾನೆ. ವನವಾಸದಲ್ಲಿದ್ದ ರಾಮನನ್ನು ಪುನಃ ಅಯೋಧ್ಯೆಗೆ ಕರೆತರುತ್ತೇನೆಂದು ಹೋದ ಭರತನು ನಿಷಾದರಾಜ ಗುಹನಲ್ಲಿ ಹೀಗೆ ಹೇಳುತ್ತಾನೆ- ರಾಘವಃ ಸ ಹಿ ಮೇ ಭ್ರಾತಾ ಜ್ಯೇಷ್ಠಃ ಪಿತೃಸಮೋ ಮತಃ” ಎಂದು..
ಕಾಡಿನಲ್ಲಿದ್ದ ರಾಮ ಲಕ್ಷ್ಮಣ ಸೀತೆಯರನ್ನ ಕಂಡು ದುಃಖಿತರಾದ ಭರತ ಶತ್ರುಘರನ್ನು ಹಿರಿಯ ಅಣ್ಣ ರಾಮ
ಆಲಂಗಿಸಿಕೊಂಡ ದೃಶ್ಯ ರಾಮಾಯಣದಲ್ಲಿ ಬರುತ್ತದೆ-
ಶತ್ರುಘ್ನಶ್ಚಾಪಿ ರಾಮಸ್ಯ ವವಂದೇ ಚರಣೌ ರುದನ್ |
ತಾವುಭೌ ಸ ಸಮಾಲಿಂಗ್ಯ ರಾಮೇಪ್ಯಶ್ರೂಣ್ಯವರ್ತಯತ್||
ಹೇ ಆರ್ಯ! ಎಂದು ಭರತನು ಗಟ್ಟಿಯಾಗಿ ಹೇಳಿದ ನಂತರ ಶತ್ರುಘ್ನನು ಅಳುತ್ತ ಶ್ರೀ ರಾಮನ ಚರಣಗಳಲ್ಲಿ ವಂದಿಸಿದ. ಇದಕ್ಕೆ ಪ್ರತಿಯಾಗಿ ಶ್ರೀರಾಮನು ಆ ಇಬ್ಬರನ್ನ ಎಬ್ಬಿಸಿ ಎದೆಗೊತ್ತಿಕೊಂಡನು ಮತ್ತು ಅವನು ಕಂಬನಿ ಕರೆದನು ಅಲ್ಲದೇ ರಾಮನು ಅವನನ್ನ ಅಂದರೆ ಭರತನನ್ನು ತನ್ನೆರಡು ತೋಳುಗಳಿಂದ ಹಿಡಿದೆತ್ತಿ ಭರತನ ನೆತ್ತಿಯನ್ನು ಆಘ್ರಾಣಿಸಿಕೊಂಡು, ತೊಡೆಯ ಮೇಲೆ ಕುಳ್ಳಿರಿಸಿಕೊಂಡು ಆದರ ಪೂರ್ವಕವಾಗಿ ಪ್ರಶ್ನಿಸಿದನು ಎಂಬ ವಿವರವೂ ಕೂಡ ಅಲ್ಲಿ ಬಂದಿದೆ.
ಹಲವು ಸಲ ಕ್ಷುಲ್ಲಕ ಕಾರಣಗಳಿಗಾಗಿ ಅಥವಾ ಅಪನಂಬಿಕೆಯಿಂದಾಗಿ ಸಹೋದರರಲ್ಲಿ ಮನಸ್ತಾಪ ಉಂಟಾಗಬಹುದು. ಇಂತಹ ಸಮಯದಲ್ಲಿ ಪರಸ್ಪರ ಮಾತನಾಡಿಕೊಂಡು ಗೊಂದಲವನ್ನು ನಿವಾರಿಸಿಕೊಳ್ಳಬಹುದು. ಸಮಸ್ಯೆಗೆ ತುಪ್ಪ ಸುರಿಯುವ ಬದಲು ಅದರ ಪರಿಹಾರಕ್ಕೆ ಪ್ರಯತ್ನ ಪಡಬೇಕು. ಲಕ್ಷ್ಮಣನು ಸಾಲವೃಕ್ಷವನ್ನೇರಿ ಭರತನ ಸೇನೆಯನ್ನು ಕಾಡಿನಲ್ಲಿ ಮುನ್ನುಗ್ಗಿ ಬರುತ್ತಿರುವುದನ್ನು ಕಾಣುತ್ತಾನೆ ಭರತನ ವಿರುದ್ಧ ಕ್ರೋಧಾವೇಶದ ಮಾತುಗಳನ್ನಾಡಿ ಅವನೊಂದಿಗೆ ಯುದ್ಧಮಾಡುವೆನೆಂದು ರಾಮನಲ್ಲಿ ಹೇಳುತ್ತಾನೆ. ಆಗ ಶ್ರೀರಾಮನು. ತಮ್ಮ ಭರತನ ಸತ್ಪ್ರಭಾವಗಳ ವರ್ಣನೆಯನ್ನು ಮಾಡುತ್ತಾ ಭರತನ ಬಗ್ಗೆ ಲಕ್ಷ್ಮಣನ ತಪ್ಪು ತಿಳುವಳಿಕೆಯನ್ನು ದೂರಮಾಡುತ್ತಾನೆ.
ವನವಾಸದ ಸಮಯದಲ್ಲಿ ಭರತನ ನಿರ್ಗಮನದ ನಂತರ ಸೀತಾ ಲಕ್ಷ್ಮಣರೊಂದಿಗೆ ದಂಡಕಾರಣ್ಯಕ್ಕೆ ಪ್ರವೇಶಿಸುವ ವಿಚಾರವನ್ನು ಶ್ರೀರಾಮನು ಪ್ರಸ್ತುತಪಡಿಸುತ್ತಾ- “ಸೌಮಿತ್ರಿಃ ಮಮ ಪ್ರಧಾನಮಿತ್ರಮ್” ಲಕ್ಷ್ಮಣನು ನನ್ನ ಪ್ರಧಾನ ಮಿತ್ರ ಎಂಬುದಾಗಿ ತಿಳಿಯಲ್ಪಟ್ಟಿದ್ದಾನೆ ಎನ್ನುತ್ತಾನೆ. ಹಾಗೆಯೇ ವನವಾಸದಲ್ಲಿ ಮುಂದುವರೆಯುತ್ತಾ ಹೋದ ಹಾಗೆ ಸೀತಾಪಹಾರವಾದಾಗ ತಮ್ಮನಾದ ಲಕ್ಷ್ಮಣನು ಅಣ್ಣನನ್ನು ಪರಿಪರಿಯಾಗಿ ಸಂತೈಸುತ್ತಾನೆ. ಸಹೋದರನು ದುಃಖದಲ್ಲಿರುವಾಗ ಅವನ ದುಃಖದಲ್ಲಿ ಭಾಗಿಯಾಗಬೇಕಾಗಿರುವುದು ತಮ್ಮನ ಕರ್ತವ್ಯ ಎಂದು ತಿಳಿದು, ರಾಮನು ಎಲ್ಲವನ್ನು ಬಲ್ಲವನಾದರೂ ಅಣ್ಣನನ್ನು ದುಃಖದಿಂದ ಪಾರು ಮಾಡುವ ವಿಚಾರದಲ್ಲಿ ಲಕ್ಷ್ಮಣನು ಸಂತೈಸುತ್ತಾನೆ.
ಯುದ್ಧ ಕಾಂಡದಲ್ಲಿ ರಾಮರಾವಣರ ಯುದ್ಧ ಪಂಕ್ತಿಯಲ್ಲಿ ರಾಮಲಕ್ಷ್ಮಣರನ್ನು ನಾಗಪಾಶದಿಂದ ಬಂಧಿಸಲಾಯಿತು. ಶ್ರೀರಾಮನು ನಾಗಪಾಶದಿಂದ ಬಂಧಿತನಾಗಿದ್ದರೂ, ಧೈರ್ಯದಿಂದಲೂ ಶಕ್ತಿಸಂಪನ್ನತೆಯಿಂದಲೂ ಮೂರ್ಛೆಯಿಂದ ಎದ್ದು ಲಕ್ಷ್ಮಣನನ್ನು ನೋಡುತ್ತಾನೆ. ಗಾಯಗೊಂಡು ರಕ್ತದಿಂದ ತೋಯುತ್ತಿರುವ ಲಕ್ಷಣನ ಪಕ್ಕದಲ್ಲಿ ಕುಳಿತು ರಾಮನು ರೋದಿಸುತ್ತಾನೆ.
ಶಕ್ಯಾ ಸೀತಾಸಮಾ ನಾರೀ ಮರ್ತ್ಯಲೋಕೆ ವಿಚಿನ್ವತಾ |
ನ ಲಕ್ಷ್ಮಣಸಮೋ ಭ್ರಾತಾ ಸಚಿವಃ ಸಾಂಪರಾಯಿಕಃ ||
ಮನುಷ್ಯ ಲೋಕದಲ್ಲಿ ಹುಡುಕಿದರೆ ನನಗೆ ಸೀತೆಯಂತಹ ಬೇರೆ ಹೆಣ್ಣು ಸಿಗಬಹುದು ಆದರೆ ಲಕ್ಷ್ಮಣನಂತಹ ಸಹಾಯಕ, ಯುದ್ಧ ಕುಶಲಿ, ಸಹೋದರ ಎಲ್ಲಿಯೂ ಸಿಗಲಾರನು ಎಂಬುದಾಗಿ ರಾಮ ಅಭಿಪ್ರಾಯಪಡುತ್ತಾನೆ. ಅಲ್ಲದೇ-
ತ್ವಂ ನಿತ್ಯಂ ಸವಿಷಣ್ಣಂ ಮಾಮಾಶ್ವಾಸಯಸಿ ಲಕ್ಷ್ಮಣ |
ಗತಾಸುರ್ನಾದ್ಯ ಶಕ್ತೋಽಸಿ ಮಾಮಾರ್ತಮಭಿಭಾಷಿತುಮ್ ||
ನಾನು ಅತ್ಯಂತ ವಿಷಾದದಲ್ಲಿದ್ದಾಗ ನೀನೇ ನನಗೆ ಸದಾ ಧೈರ್ಯ ತುಂಬುತ್ತಿದ್ದೆ. ಆದರೆ ಇಂದು ನೀನು ಪ್ರಾಣವನ್ನು ತೊರೆದಾಗ ನನ್ನಂಥ ದುಃಖಿತನಲ್ಲಿ ಮಾತನಾಡಲು ಅಸಮರ್ಥನಾಗಿರುವೆ. ಭ್ರಾತೃಪ್ರೇಮದ ಅಭಿವ್ಯಕ್ತಿ ಮಾಯಾ ಸೀತೆಯ ವಧವೃತ್ತಾಂತದಲ್ಲೂ ವ್ಯಕ್ತವಾಗುತ್ತದೆ. ದುಃಖದಿಂದ ರಾಮನು ಮೂರ್ಛಿತನಾಗುತ್ತಾನೆ. ಆಗ ರಾಮನು ಲಕ್ಷ್ಮಣನ ತೊಡೆಯ ಮೇಲೆ ಮಲಗಿದ್ದ-
ರಾಘವಂ ಚ ಮಹಾತ್ಮಾನಂ ಇಕ್ಷ್ವಾಕುಕುಲನಂದನಮ್ |
ದದರ್ಶ ಮೋಹಮಾಪನ್ನಂ ಲಕ್ಷ್ಮಣಸ್ಯಾಂಕಮಾಶ್ರಿತಮ್ ||
ಸೂರ್ಯವಂಶಕುಮಾರ ಮಹಾತ್ಮಾ ರಾಮನು ಲಕ್ಷ್ಮಣನ ತೊಡೆಯ ಮೇಲೆ ಮಲಗಿದ್ದನ್ನು ವಿಭೀಷಣನು ನೋಡಿ ಆತನನ್ನು ಎಚ್ಚರಿಸಿ ಮಾತನಾಡಿಸುತ್ತಾನೆ.
ವನವಾಸವನ್ನು ಮುಗಿಸಿ ಪುಷ್ಪಕ ವಿಮಾನದಿಂದ ರಾಮ ಬರುತ್ತಿರುವುದನ್ನು ಕಂಡ ಭರತನು ಶ್ರೀರಾಮನ ಕಡೆಗೆ ನೆಟ್ಟ ನೋಟದಿಂದ ನೋಡುತ್ತಾ ಕೈಮುಗಿದು ನಿಂತುಕೊಂಡು ಬಿಡುತ್ತಾನೆ. ಭರತನು ವಿನೀತ ಭಾವದಿಂದ ಮೇಲು ಗಿರಿಯಲ್ಲಿ ಉದಯಿಸಿದ ಸೂರ್ಯನಿಗೆ ಬ್ರಾಹ್ಮಣರು ನಮಿಸುವಂತೆ ಸಾಷ್ಟಾಂಗ ಪ್ರಣಾಮವನ್ನು ಮಾಡುತ್ತಾನೆ. ಆಗ ರಾಮನು-
ತಂ ಸಮುತ್ಥಾಯ ಕಾಕುತ್ಸ್ಥಃ ಚಿರಸ್ಯಾಕ್ಷಿಪಥಂ ಗತಮ್ |
ಅಂಕೇ ಭರತಮಾರೋಪ್ಯ ಮುದಿತಃ ಪರಿಷಸ್ವಜೇ ||
ಬಹಳ ಕಾಲದ ಬಳಿಕ ನೋಡಿದ ಭರತನನ್ನ ಎತ್ತಿಕೊಂಡು ಶ್ರೀರಾಮನು ತನ್ನ ತೊಡೆಯಲ್ಲಿ ಕುಳ್ಳಿರಿಸಿಕೊಂಡನು ಹಾಗೂ ಬಹಳ ಹರ್ಷದಿಂದ ಅವನನ್ನು ಬಿಗಿದಪ್ಪಿಕೊಂಡನು. ನಂತರ ಭರತನು ಲಕ್ಷಣನನ್ನು ಕಂಡು ಅವನ ವಂದನೆಯನ್ನು ಸ್ವೀಕರಿಸಿದನು.
ಶ್ರೀಮದ್ ರಾಮಾಯಣದ ಉತ್ತರ ಕಾಂಡದಲ್ಲಿ ಕವಿ ವಾಲ್ಮೀಕಿಗಳು ಸಾಹೋದರ್ಯ ಸ್ನೇಹವನ್ನು ಹೀಗೆ ತಿಳಿಸುತ್ತಾರೆ-
ಉಭೌ ಸೌಮಿತ್ರಿಭರತೌ ರಾಮಪಾದಾವನುವ್ರತೌ |
ಕಾಲಂ ಗತಮಪಿ ಸ್ನೇಹಾನ್ನಜಜ್ಞಾತೇಽತಿಧಾರ್ಮಿಕೌ ||
ಲಕ್ಷ್ಮಣ ಭರತರಿಗೆ ಅಣ್ಣನ ಚರಣಗಳಲ್ಲಿ ಅನನ್ಯ ಅನುರಾಗವಿತ್ತು. ಇಬ್ಬರೂ ಧರ್ಮಾತ್ಮರಾಗಿದ್ದರು. ಸ್ನೇಹಾಧಿಕ್ಯವಿದ್ದುದರಿಂದ ಅವರಿಗೆ ರಾಮ ಸೇವೆಯಲ್ಲಿ ಸಮಯ ಕಳೆದದ್ದೇ ತಿಳಿಯಲಿಲ್ಲವಂತೆ. ಈ ರೀತಿಯಾಗಿ ಉತ್ತಮ ಅಣ್ಣತಮ್ಮಂದಿರ ಭಾವ ಎಂಬುದು ರಾಮಾಯಣದಲ್ಲಿ ಪ್ರಕಟವಾಗಿದೆ.
ಶ್ರೀರಾಮನು ಸರ್ವಥಾ ಅಯೋಧ್ಯೆಗೆ ಹಿಂತಿರುಗಲು ಒಪ್ಪದಿದ್ದಾಗ ಆತನ ಪಾದುಕೆಯನ್ನೇ ಸಿಂಹಾಸನದ ಮೇಲಿಟ್ಟು 14 ವರ್ಷಗಳ ಕಾಲ ರಾಜ್ಯವಾಳಿ ನಂತರ ರಾಮನಿಗೆ ರಾಜ್ಯವನ್ನು ಒಪ್ಪಿಸುತ್ತಾನೆ. ಅಧಿಕಾರವೆಂಬುದು ಸಂಬಂಧ ಸ್ನೇಹವನ್ನೆಲ್ಲ ಮರೆಮಾಚುವುದಾದರೂ ಭರತನಿಗೆ ಅಣ್ಣನಲ್ಲಿ ಅಂತಹ ಮಮತೆ ಗೌರವವಿತ್ತು. ಆದ್ದರಿಂದಲೇ ಕವಿ ಈತನನ್ನು “ಭ್ರಾತೃವತ್ಸಲ” ಎಂದು ಸಂಬೋಧಿಸುತ್ತಾನೆ.
ವನವಾಸಾನಂತರ ರಾಮನಿಗೆ ಪಟ್ಟಾಭಿಷೇಕವಾಗುತ್ತದೆ. ಅಂತಹ ರಾಜಾರಾಮನ ಸಭೆಯಲ್ಲಿ ಮೂವರು ಸಹೋದರರು ಆಸೀನರಾಗಿದ್ದರು ಎಂಬುದನ್ನು ರಾಮಾಯಣ ವರ್ಣಿಸುತ್ತದೆ.
ಭರತೋ ಲಕ್ಷ್ಮಣಶ್ಚಾತ್ರ ಶತ್ರುಘ್ನಶ್ಚ ಮಹಾಯಶಾಃ |
ಉಪಾಸಾಂಚಕ್ರಿರೇ ಹೃಷ್ಟಾ ವೇದಾಸ್ತ್ರಯ ಇವಾಧ್ವರಮ್ ||
ಮಹಾ ಯಶಸ್ವಿಗಳಾದ ಭರತ ಲಕ್ಷ್ಮಣ ಶತ್ರುಘ್ನ ಈ ಮೂರು ಸಹೋದರರು ಬಹಳ ಹರ್ಷದಿಂದ ಮೂರು ವೇದಗಳು ಯಜ್ಞದ ಬಳಿ ಇರುವಂತೆ ಶ್ರೀರಾಮನ ಸೇವೆಯಲ್ಲಿ ಉಪಸ್ಥಿತರಾಗಿದ್ದರು. ಉಪಸಂಹಾರ: ಜನನದಲ್ಲಿ ನಾಲ್ವರು ಸಹೋದರರು ಒಟ್ಟಿಗೆ ಹುಟ್ಟಿದಂತೆ ಶ್ರೀರಾಮನ ನಿರ್ಯಾಣದಲ್ಲೂ ಅವನೊಂದಿಗೇ ಇಹಲೋಕವನ್ನು ತ್ಯಜಿಸಿ ಪರಂಧಾಮವನ್ನು ಹೊಂದುತ್ತಾರೆ. ಹೀಗೆ ಶ್ರೀಮದ್ ವಾಲ್ಮೀಕಿ ರಾಮಾಯಣದ ಕಥಾ ಹಂದರವನ್ನ ನೋಡುತ್ತಾ ಹೋದಾಗ ಅಪೂರ್ವವಾದಂತಹ ಸಹೋದರ ಸ್ನೇಹ ಎಂಬುದು ಇಡೀ ಆದಿಕಾವ್ಯದಲ್ಲಿ ಕಂಡು ಬರುತ್ತದೆ.
ರಾಮ ಲಕ್ಷ್ಮಣ ಮತ್ತು ಭರತ ಶತ್ರುಘ್ನ ಎಂಬ ಇಬ್ಭಾಗ ತೋರಿ ಬಂದರೂ ಕೂಡ ಎಲ್ಲರಿಗೂ ಹಿರಿಯ ಅಣ್ಣನಾದಂತಹ ರಾಮನಲ್ಲಿ ಸ್ನೇಹ ಹೇಗಿತ್ತೋ ಹಾಗೆಯೇ ರಾಮನಿಗೂ ಕೂಡ ಎಲ್ಲ ತಮ್ಮಂದಿರ ಮೇಲು ಅತ್ಯಂತ ಮಮತೆ ಅತ್ಯಂತ ಪ್ರೀತಿ ಇತ್ತು ಎಂಬುದು ಈ ಕಾವ್ಯ ತೋರಿಸಿ ಕೊಡುತ್ತದೆ. ಆಧುನಿಕ ಕಾಲದಲ್ಲಿ ಸಹೋದರ ಸಂಬಂಧ ಎಂಬುದು ಹಳಸುತ್ತಾ ಬಂದಿರುವುದನ್ನು ಕಾಣುತ್ತೇವೆ. ಆದರೆ ರಾಮಾಯಣದಂತಹ ಕಾವ್ಯವನ್ನು ಅಧ್ಯಯನ ಮಾಡಿದಾಗ ಒಂದು ಕುಟುಂಬದಲ್ಲಿ ಸಹೋದರರು ಹೇಗೆ ಜೀವನವನ್ನು ನಡೆಸಬೇಕು, ಸಹೋದರರ ಮಧ್ಯೆ ಪರಸ್ಪರ ಅರಿವು ಯಾವ ರೀತಿಯಲ್ಲಿ ಇರಬೇಕು ಎಂಬುದನ್ನ ತಿಳಿದುಕೊಂಡಾಗ ನಮ್ಮ ಜೀವನವನ್ನು ಪಾವನ ಮಾಡಿಕೊಳ್ಳಲು ಸಾಧ್ಯವಾಗುತ್ತದೆ.
- ಡಾ. ಶ್ರೀಧರ ಎನ್ ಭಟ್ಟ
ಕಲಾನಿಕಾಯದ ಡೀನ್ ಮತ್ತು ಮುಖ್ಯಸ್ಥರು ಸಂಸ್ಕೃತ ವಿಭಾಗ
ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಮಹಾವಿದ್ಯಾಲಯ (ಸ್ವಾಯತ್ತ) ಉಜಿರೆ.
sbujire@sdmcujire.in
9448335652.
ಲೇಖಕರ ಸಂಕ್ಷಿಪ್ತ ಪರಿಚಯ:
ಡಾ.ಶ್ರೀಧರ ಎನ್ ಭಟ್ಟರು ಜ್ಯೋತಿಷದಲ್ಲಿ ವಿದ್ವಾನ್, ಸಂಸ್ಕೃತ ಎಂಎ, ಇಂಗ್ಲಿಷ್ ಎಂಎ ಹಾಗೂ ಬಿಇಡಿ ಪದವಿಗಳನ್ನು ಪಡೆದು ಉಜಿರಯೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನಲ್ಲಿ ಸಂಸ್ಕೃತ ವಿಭಾಗದ ಮುಖ್ಯಸ್ಥರು ಹಾಗೂ 30 ವರ್ಷಗಳಿಂದ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಬಾಲ್ಯದಲ್ಲಿ ಮನೆ ಮತ್ತು ವಿಭಿನ್ನ ಸಾಂಪ್ರದಾಯಿಕ ಪಾಠಶಾಲೆಗಳಿಂದ ವೇದಗಳನ್ನು ಅಧ್ಯಯನ ಮಾಡಿದರು. ಯುಜಿಸಿ ದೆಹಲಿ ನಡೆಸಿದ ರಾಷ್ಟ್ರೀಯ ಶಿಕ್ಷಣ ಪರೀಕ್ಷೆ (NET) ಪರೀಕ್ಷೆಯನ್ನು ಪೂರ್ಣಗೊಳಿಸಿದರು. ರಾಷ್ಟ್ರೀಯ ಸಂಸ್ಕೃತ ವಿದ್ಯಾಪೀಠ (ಡೀಮ್ಡ್ ಯೂನಿವರ್ಸಿಟಿ) ತಿರುಪತಿಯಿಂದ "ಜ್ಯೋತಿಷ್ಯಶಾಸ್ತ್ರದ ಪ್ರಕಾರ ರೋಗಗಳ ಸಂಯೋಜನೆ-ಒಂದು ವಿಮರ್ಶಾತ್ಮಕ ಅಧ್ಯಯನ" ನಲ್ಲಿ ಪಿಎಚ್‌ಡಿ ಪಡೆದಿದ್ದಾರೆ. ವಿಭಿನ್ನ ಸಂಪ್ರದಾಯ ಆಧಾರಿತ ವಿಷಯಗಳ ಕುರಿತು ಸಂಪನ್ಮೂಲ ವ್ಯಕ್ತಿಯಾಗಿ ವಿವಿಧ ಹಂತದ ಸೆಮಿನಾರ್ಗಳು/ ಸಮ್ಮೇಳನಗಳು/ ಕಾರ್ಯಾಗಾರಗಳಲ್ಲಿ ಭಾಗವಹಿಸಿದ್ದಾರೆ. ವಿವಿಧ ಸಂಶೋಧನಾ ಜರ್ನಲ್‌ಗಳಲ್ಲಿ ಲೇಖನಗಳು ಪ್ರಕಟವಾಗಿವೆ. ವಿವಿಧ ವಿಶ್ವವಿದ್ಯಾನಿಲಯಗಳು ಮತ್ತು ಸ್ವಾಯತ್ತ ಕಾಲೇಜುಗಳ BOS/BOE/ RRC (ಸಂಶೋಧನಾ ಪರಿಶೀಲನಾ ಸಮಿತಿ) ಸದಸ್ಯರಾಗಿದ್ದಾರೆ. ಆನ್ಲೈನ್/ ಯುಟ್ಯೂಬ್ ಚಾನೆಲ್ ಮೂಲಕ ಭಾರತೀಯ ಸಂಪ್ರದಾಯದ ಜಾಗೃತಿ ಕಾರ್ಯಕ್ರಮವನ್ನು ನಡೆಸುತ್ತಿದ್ದಾರೆ. 23 ವರ್ಷಗಳ ಕಾಲ NCC (ನೌಕಾಪಡೆ) ಅಧಿಕಾರಿಯಾಗಿ ಸೇವೆ ಸಲ್ಲಿಸಿದ್ದಾರೆ ಮತ್ತು ಅನುಕರಣೀಯ ಸೇವೆಗಾಗಿ ಪ್ರಶಸ್ತಿಗಳನ್ನು ಪಡೆದಿದ್ದಾರೆ. ಧಾರ್ಮಿಕ ಕಾರ್ಯಕ್ರಮಗಳಲ್ಲಿ ಮಾಡರೇಟರ್/ ಸಮಾರಂಭದ ಮಾಸ್ಟರ್/ ಸ್ಪೀಕರ್ ಆಗಿ ಕೆಲಸ ಮಾಡುತ್ತಾರೆ. ಭಾಗವತಂ/ ಸ್ತೋತ್ರ ಸಾಹಿತ್ಯ/ ಮತ್ತು ಇತರ ಪುರಾತನ ಗ್ರಂಥಗಳಾದ ವಾಚನಂ ಮತ್ತು ವ್ಯಾಖ್ಯಾನಂ ಕುರಿತು ಧಾರ್ಮಿಕ ಪ್ರವಚನಗಳನ್ನು ನೀಡುತ್ತಾರೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ



