ಅಜರಾಮರ ಅಯೋಧ್ಯೆ- ಸನಾತನ ಪರಂಪರೆಯ ಮಹಾಸಾಮ್ರಾಜ್ಯ ಅಯೋಧ್ಯಾಪುರಿ- ಭಾಗ 2

Upayuktha
0

ಅಯೋಧ್ಯೆಯೆಂಬ ಸನಾತನ ಮ್ಯೂಸಿಯಂ 

ಮಂದಿರಗಳ ನಗರ. ಪ್ರಾಚೀನ ಮಂದಿರಗಳ ಪೈಕಿ ಮಹತ್ವವಾದವು ಸೀತಾರಸೋಈ ಹಾಗೂ ಹನುಮಾನ್ ಗಢೀ. 18-19ನೇ ಶತಮಾನದಲ್ಲಿ ಜೀರ್ಣೋದ್ಧಾರಗೊಂಡ ಕನಕ ಭವನ, ನಾಗೇಶ್ವರನಾಥ ಮಂದಿರ ಮತ್ತು ದರ್ಶನಸಿಂಹ ಮಂದಿರಗಳು ದರ್ಶನೀಯವಾಗಿವೆ. ಪಶ್ಚಿಮದಲ್ಲಿರುವ ‘ರಾಮ ಕೋಟ' ಮಂದಿರ ದೇಶವಿದೇಶಗಳ ಜನತೆಯ ಆಕರ್ಷಣೆಯ ಕೇಂದ್ರ. ಪ್ರತಿವರ್ಷದ ರಾಮನವಮಿ ಇಲ್ಲಿ ಅದ್ದೂರಿಯಾಗಿ ಆಚರಿಸಲ್ಪಡುತ್ತದೆ. ವರ್ಷದ ಹನ್ನೆರಡೂ ತಿಂಗಳು ಪ್ರವಾಸಿಗರನ್ನು ಆಕರ್ಷಿಸುತ್ತಿರುವ ಮಂದಿರ ಇದು.

ಹನುಮಾನ ಗಢೀ- ಹನುಮಾನ್ ಮಂದಿರ. ನಗರದ ಕೇಂದ್ರ ಭಾಗದಲ್ಲಿರುವ ಪ್ರಮುಖ ಮಂದಿರ. ನೋಡಲೇಬೇಕಾದ ಪವಿತ್ರ ಸ್ಥಳ ಇದು. ರಾಮ ದರ್ಶನಕ್ಕೆ ಮುಂಚೆ ದಾಸಶ್ರೇಷ್ಠನ ದರ್ಶನ ಮಾಡುವುದು ವಾಡಿಕೆ. ದಿಬ್ಬದ ಮೇಲಿರುವುದರಿಂದ 76 ಮೆಟ್ಟಿಲುಗಳನ್ನು ಹತ್ತಿದ ನಂತರ ಹನುಮನ ದರ್ಶನ. ತಾಯಿ ಅಂಜನಾದೇವಿಯ ಮಡಿಲಲ್ಲಿ ವಿರಾಜಮಾನನಾಗಿರುವ ಆರು ಇಂಚಿನ ಬಾಲ ಹನುಮಾನ್ ಪ್ರತಿಮೆ ಎಲ್ಲರ ಆಕರ್ಷಣೆಯ ಕೇಂದ್ರ. ಪಟ್ಟಾಭಿμÉೀಕದ ನಂತರ ಸ್ವತಃ ರಾಮನೇ ಹನುಮನಿಗೆ ನೀಡಿದ ಜಾಗ ಇದು. ಅಂದಿನಿಂದ ಇಂದಿನವರೆಗೆ ಈ ಭಕ್ತ ಹನುಮಾನ್ ಅಲ್ಲಿಯೇ ವಾಸವಾಗಿದ್ದಾನೆ. ಇನ್ನೂ ಜೀವಂತವಾಗಿದ್ದಾನೆ. ರಾಮಜನ್ಮಭೂಮಿ ಮತ್ತು ರಾಮಕೋಟ ಮಂದಿರವನ್ನು ರಕ್ಷಿಸುತ್ತಿದ್ದಾನೆ ಎಂದು ಜನರಲ್ಲಿ ಬಲವಾದ ನಂಬಿಕೆ ಇದೆ. ಈಗಿನ ಹನುಮಾನ್ ಗಢೀ ಮಂದಿರ ನಿರ್ಮಾಣದ ಹಿಂದೆ ಒಂದು ಸ್ವಾರಸ್ಯಕರ ಕಥೆ ಪ್ರಚಲಿತದಲ್ಲಿದೆ. ಅವಧ ಪ್ರಾಂತದ ನವಾಬ ಸುಲ್ತಾನ್ ಮನ್ಸೂರ್ ಅಲಿ. ಇವನ ಏಕಮಾತ್ರ ಪುತ್ರ ಗಂಭೀರ ಕಾಯಿಲೆಗೆ ತುತ್ತಾದ. ಬದುಕುವ ಆಸೆ ಉಳಿಯಲಿಲ್ಲ. ಯಾವುದೇ ಚಿಕಿತ್ಸೆ ಫಲ ನೀಡಲಿಲ್ಲ. ಎಲ್ಲ ವೈದ್ಯರು ಕೈ ಚೆಲ್ಲಿದರು. ಅನ್ಯ ಮಾರ್ಗವಿಲ್ಲದೆ ನವಾಬ ಸಂಕಟಮೋಚನ ಹನುಮನ ಮುಂದೆ ಶರಣಾದ. ಪರಿಪರಿಯಾಗಿ ಬೇಡಿಕೊಂಡ. ಪರಿಣಾಮ ಮಗ ಗುಣಮುಖನಾದ. ಪ್ರಭಾವಿತನಾದ ನವಾಬ, ಹನುಮಾನ ಮಂದಿರದ ಜೀರ್ಣೋದ್ಧಾರ ಮಾಡಿಸಿದೆ. ‘ಈ ಮಂದಿರದ ಮೇಲೆ ಯಾವುದೇ ರಾಜನ ಅಧಿಕಾರವಿರುವುದಿಲ್ಲ ಮತ್ತು ಈ ಮಂದಿರಕ್ಕೆ ಬರುವ ದೇಣಿಗೆ, ಕಾಣಿಕೆಗಳ ಮೇಲೆ ತೆರಿಗೆ ವಸೂಲಿ ಮಾಡುವಂತಿಲ್ಲ' ಎಂದು ತಾಮ್ರ ಪತ್ರದ ಮೇಲೆ ಬರೆಸಿ, 86 ಎಕರೆಗಳಷ್ಟು ಭೂಮಿಯನ್ನು ಮಂದಿರಕ್ಕೆ ದಾನವಾಗಿ ನೀಡಿದ.


ಹಿಂದೂ ಅಸ್ಮಿತೆಯ ಪುತ್ಥಳಿ ಅಯೋಧ್ಯೆಯ ರಾಮ ಮಂದಿರ 

ಇತಿಹಾಸದಲ್ಲಿ ಅದೆಷ್ಟು ಬಾರಿ ಆಕ್ರಮಣಗಳನ್ನು ಎದುರಿಸಿದೆಯೋ ಗೊತ್ತಿಲ್ಲ. ಪ್ರತಿಬಾರಿ ಧ್ವಂಸಗೊಂಡಾಗಲೂ ಮತ್ತೆ ಮತ್ತೆ ಈ ನಗರವನ್ನು ನಿರ್ಮಾಣ ಮಾಡಲಾಗಿದೆ. ಈ ಎಲ್ಲಾ ಸಂದರ್ಭಗಳಲ್ಲಿ ಈ ಹನುಮಾನ್ ಗಢೀ ಮಾತ್ರ ಸದಾಕಾಲಕ್ಕೂ ತನ್ನ ಮೂಲರೂಪವನ್ನು ಉಳಿಸಿಕೊಂಡು ಬಂದಿರುವುದು ಒಂದು ವಿಶೇಷವೇ ಸರಿ. ಲಂಕೆಯಲ್ಲಿ ಗಳಿಸಿದ ವಿಜಯದ ಪ್ರತೀಕವಾಗಿ ಪ್ರಭು ಶ್ರೀರಾಮಚಂದ್ರ ತಂದ ಒಂದು ಕುರುಹನ್ನು ಈ ಮಂದಿರದಲ್ಲಿ ಸಂರಕ್ಷಿಸಿಡಲಾಗಿದೆ. ವಿಶೇಷ ಸಂದರ್ಭದಲ್ಲಿ ಈ ಕುರುಹನ್ನು ಹೊರತೆಗೆಯಲಾಗುತ್ತದೆ. ಸ್ಥಾನ-ಸ್ಥಾನಗಳಲ್ಲಿ ಪ್ರಸಿದ್ಧ ಇದರ ಪೂಜೆ ಅರ್ಚನೆ ನಡೆಯುತ್ತದೆ. ಈ ಮಂದಿರದಲ್ಲಿ ವಿರಾಜಮಾನನಾಗಿರುವ ಹನುಮಂತನೇ ಈಗಿನ ಅಯೋಧ್ಯೆಯ ರಾಜ. ಈಗಲೂ ಈ ಪರಂಪರೆಯನ್ನು ಮುಂದುವರೆಸಿಕೊಂಡು ಬರಲಾಗುತ್ತಿದೆ. ಈ ಮಂದಿರದ ದರ್ಶನ ಮಾತ್ರದಿಂದಲೇ ಮನೋಕಾಮನೆಗಳು ಈಡೇರುತ್ತವೆ ಎಂಬ ಬಲವಾದ ನಂಬಿಕೆ ಭಕ್ತಸಮೂಹದ್ದು.


ರಾಘವಜೀ ಮಂದಿರ ನಗರದ ಕೇಂದ್ರ ಸ್ಥಾನದಲ್ಲಿರುವ ಬಹು ಪ್ರಾಚೀನ ರಾಮಮಂದಿರ ಇದು. ಕೇವಲ ರಾಮನೊಬ್ಬನ ಪ್ರತಿಮೆ ಇರುವುದೇ ಈ ಮಂದಿರದ ವಿಶೇಷ, ನಾಗೇಶ್ವರನಾಥ ಮಂದಿರ-ರಾಮನ ಪುತ್ರ ಕುಶನಿಂದ ಮತ್ತು ಸ್ಥಾಪಿತವಾಗಿರುವ ಈ ಮಂದಿರ ವಿಕ್ರಮಾದಿತ್ಯನ ಕಾಲಕ್ಕೂ ಮುಂಚೆ ನಿರ್ಮಾಣವಾಗಿರುವ ಏಕಮಾತ್ರ ಮಂದಿರ. ಹನುಮಾನ ಗಢೀ ಸಮೀಪ ಇರುವ ಇನ್ನೊಂದು ಮಂದಿರ ಕನಕ ಭವನ- ಅಯೋಧ್ಯೆಯ ಮಹತ್ವಪೂರ್ಣ ಮಂದಿರಗಳ ಪೈಕಿ ಇದು ಒಂದು. ಬಂಗಾರದ ಕಿರೀಟದಿಂದ ಅಲಂಕೃತಗೊಂಡ ರಾಮ ಮತ್ತು ಸೀತೆಯರ ಪ್ರತಿಮೆ ಇಲ್ಲಿ ಲೋಕಪ್ರಿಯ. ಅದಕ್ಕಾಗಿಯೇ ಇದಕ್ಕೆ ಕನಕ ಭವನ ಎಂದು ಹೆಸರು. ರಾಮ ಸೀತೆಯರ ಈ ವಿಗ್ರಹಗಳು ಭಾರತದಲ್ಲಿಯೇ ಅತ್ಯಂತ ಸುಂದರವಾದ ವಿಗ್ರಹಗಳು ಎಂಬ ಖ್ಯಾತಿಯನ್ನು ಹೊಂದಿವೆ. ಕೈಕೇಯಿ ತನ್ನ ಮುಖವನ್ನು ಉಳಿಸಿಕೊಳ್ಳಲು ಸೀತೆಗೆ ಬಳುವಳಿಯಾಗಿ ಕೊಟ್ಟ ಭವನ ಇದು ಎಂದು ಹೇಳಲಾಗುತ್ತದೆ. ಈ ಎಲ್ಲ ಕಾರಣಗಳಿಂದ ಅಯೋಧ್ಯೆಯ ಒಂದೊಂದು ಇಂಚೂ ಭಾವಾತ್ಮಕ ಮತ್ತು ಭಾವನಾತ್ಮಕ ಶಕ್ತಿಗಳಿಂದ ನಮ್ಮನ್ನು ಪ್ರೇರಿತಗೊಳಿಸುತ್ತದೆ.


ಭಗವಂತನಿಗೆ ಪ್ರಿಯವಾದ ಊರು.

ಸಪ್ತ ಮೋಕ್ಷದಾಯಕ ನಗರಗಳಲ್ಲಿ ಮೊದಲನೆಯ ಸ್ಥಾನ ಈ ಕ್ಷೇತ್ರಕ್ಕೇ ಮೀಸಲು. ಒಮ್ಮೆ ತೀರ್ಥರಾಜ ಪ್ರಯಾಗ ಎಲ್ಲ ತೀರ್ಥಕ್ಷೇತ್ರಗಳಿಗೆ ಆಹ್ವಾನವನ್ನು ನೀಡಿದ. ಎಲ್ಲರೂ ಬಂದರು. ಅಯೋಧ್ಯೆ ಮಾತ್ರ ಬರಲಿಲ್ಲ. ಬೇಸರಗೊಂಡ ಪ್ರಯಾಗರಾಜ ರಾಮನಲ್ಲಿ ದೂರನ್ನು ಸಲ್ಲಿಸಿದ. ರಾಮ ಕೊಟ್ಟ ಉತ್ತರವೇನು ಗೊತ್ತೇ? “ನನ್ನ ವಾಸಸ್ಥಾನ ಅಯೋಧ್ಯೆ. ನನ್ನ ಮಾತೃಭೂಮಿ ಆಯೋಧ್ಯೆ. ನನಗೆ ಎಲ್ಲರಿಗಿಂತ ಅತಿ ಹೆಚ್ಚು ಪ್ರೀತಿಪಾತ್ರ ಊರು ಅಯೋಧ್ಯೆ”. ಹೀಗೊಂದು ಕತೆ ಪ್ರಚಲಿತದಲ್ಲಿದೆ. 


ವಚನಪಾಲಕ ರಾಮ

ಎಲ್ಲಿ ಯುದ್ಧವೇ ಇಲ್ಲವೋ ಅದು ಅಯೋಧ್ಯೆ. ಸಂಘರ್ಷರಹಿತ, ಕಲಹ, ವಿರಹಿತ, ಒತ್ತಡದಿಂದ ಮುಕ್ತ-ಇದು ಅಯೋಧ್ಯೆ. ರಾಮ, ತಂದೆಯ ವಚನ ಪಾಲನೆಗಾಗಿ ಕಾಡಿಗೆ ತೆರಳಿದ. ಅಜ್ಜನ ಮನೆಯಿಂದ ಮರಳಿ ಬಂದ ಭರತ ಸ್ಮಶಾನ ಸದೃಶ ಆಯೋಧ್ಯೆಯನ್ನು ನೋಡಿ ಬೆಚ್ಚಿದ. ತಾಯಿಯಿಂದ ಸತ್ಯವನ್ನು ತಿಳಿದು, ತಾಯಿ ಎಂಬುದನ್ನು ಮರೆತು, ಕೈಕೇಯಿಯನ್ನು ಆಕೆ ಮಾಡಿದ ಪಾಪ ಕಾರ್ಯಕ್ಕಾಗಿ ಚೆನ್ನಾಗಿ ಹಳಿದು, ‘ರಾಮನನ್ನು ಕರೆತರುವೆ ಎಂದು ಕಾಡಿಗೆ ಹೊರಟ ಭರತ. ರಾಮ ಬರಲೊಪ್ಪ. ಇವನು ಬಿಡಲೊಲ್ಲ. ‘ನೀನು ಹಿರಿಯ, ನೀನೇ ರಾಜನಾಗಬೇಕು.' ಇದು ಭರತನ ವಾದ. ‘ತಂದೆಯ ಆದೇಶದಂತೆ ನೀನು ರಾಜನಾಗಬೇಕು', ಇದು ರಾಮನ ವಾದ. ನೀನು ರಾಜನಾಗಬೇಕು, ನೀನು ರಾಜನಾಗಬೇಕು ಎಂಬ ಜಗಳ. ಎಂಥ ದೇಶವಿದು? ಅಧಿಕಾರ ಬೇಡ ಎಂಬುದಕ್ಕಾಗಿ ಜಗಳ ನಡೆದದ್ದು ಅಯೋಧ್ಯೆಯಲ್ಲಿ. ಅಯೋಧ್ಯೆಯ ಮಹತ್ವವಿರುವುದು ಇಲ್ಲಿ ಅಧಿಕಾರಕ್ಕಾಗಿ ಕದನ ಇಲ್ಲಿ ನಡೆಯಲಿಲ್ಲ. ನಮ್ಮ ಜೀವನವನ್ನೂ ಆಯೋಧ್ಯೆಯನ್ನಾಗಿ ಮಾಡಬೇಕು. ಆಗ ಮಾತ್ರ ಅದರಲ್ಲಿ ರಾಮನ ಪ್ರತಿಷ್ಠಾಪನೆ ಸಾಧ್ಯ. ಇದೇ ಅಯೋಧ್ಯೆಯ ಮಹತ್ವ, ರಾಮನಿಲ್ಲದ ಬದುಕು ಅದೊಂದು ಬದುಕೇ?


ಜೀವನ ವೇದವಾಗುವುದು ಜ್ಞಾನ

ಆಧ್ಯಾತ್ಮಿಕವಾಗಿಯೂ ಸರ್ವಶ್ರೇಷ್ಠ ನಗರ.


ಜ್ಞಾನಶಕ್ತಿಶ್ಚ ಕೌಸಲ್ಯಾ ಸುಮಿತ್ರೋಪಾಸನಾತ್ಮಿಕಾ | ಕ್ರಿಯಾಶಕ್ತಿಶ್ಚ ಕೈಕೇಯೀ ವೇದೋ ದಶರಥೋ ನೃಪಃ ||

ದಶರಥ ವೇದವಾದರೆ, ಕೌಸಲ್ಯ ಜ್ಞಾನದ ಸಂಕೇತ. ಸುಮಿತ್ರೆ ಉಪಾಸನೆಯ ಸಂಕೇತ. ಕೈಕೇಯಿ ಕ್ರಿಯಾರೂಪ. ಜ್ಞಾನ, ಉಪಾಸನೆ ಮತ್ತು ಕೃತಿತ್ವ ಇವುಗಳ ಸುಂದರ ಏಕತ್ವವೇ ವೇದ. ಜೀವನ ವೇದವಾಗುವುದು ಜ್ಞಾನ, ಉಪಾಸನೆ ಮತ್ತು ಕೃತಿತ್ವಗಳ ಸಂಗಮವಾದಾಗ. ಜೀವನ ಅಯೋಧ್ಯೆಯಾಗುವುದು ಆಗ. ದಶರಥನಿಗೆ ಧರ್ಮ, ಅರ್ಥ, ಕಾಮ, ಮೋಕ್ಷಗಳ ರೂಪದಲ್ಲಿ ನಾಲ್ಕು ಮಕ್ಕಳನ್ನು ನೀಡಿದ್ದು ಇದೇ ಆಯೋಧ್ಯೆ. ರಾಮ ಮೋಕ್ಷ, ಲಕ್ಷ್ಮಣ ಕಾಮದ ಸಂಕೇತ. ಭರತ ಧರ್ಮವನ್ನು ಪ್ರತಿನಿಧಿಸಿದರೆ, ಶತ್ರುಘ್ನು ಅರ್ಥವನ್ನು ಪ್ರತಿನಿಧಿಸುತ್ತಾನೆ. ಧರ್ಮ, ಅರ್ಥ, ಕಾಮ- ಮೋಕ್ಷಗಳ ಸಮನ್ವಯವೇ ಅಯೋಧ್ಯೆ. ವಾಲ್ಮೀಕಿ ರಾಮಾಯಣದಲ್ಲಿ ವಾಲ್ಮೀಕಿ, ರಾಮಚರಿತಮಾನಸದಲ್ಲಿ ತುಳಸೀದಾಸರು ಅವಧಪುರಿಯನ್ನು ಅತಿ ಪಾವನ ಎಂದು ವರ್ಣಿಸಿದ್ದಾರೆ. ಅಯೋಧ್ಯೆಯ ಉತ್ತರದಲ್ಲಿರುವ ಸರಯೂ ಸಕಲ ಪಾಪಗಳನ್ನು ನಾಶಗೊಳಿಸುವ ವರದ ಹಸ್ತೆಯಾಗಿ ಕಂಗೊಳಿಸುತ್ತಿದ್ದಾಳೆ.


ಭೌತಿಕ ಉನ್ನತಿಯಲ್ಲೂ ಅಯೋಧ್ಯಗೆ ಸರಿಸಾಟಿ ಇಲ್ಲ. ಸ್ವರ್ಗಕ್ಕೆ ಸಮಾನವಾದ ನಗರವಾಗಿ ಶೋಭಿಸಿದ್ದು ಅಯೋಧ್ಯೆ. ಧನಧಾನ್ಯ ಸಂಪನ್ನತೆಯಲ್ಲಿ ಸ್ವರ್ಗವನ್ನು ಹೋಲುವ ಸಮೃದ್ಧಿ ಎಂಬುದು ಇದರ ಖ್ಯಾತಿ. ಗಗನಚುಂಬಿ ಕಟ್ಟಡಗಳಿಗೆ ಅಯೋಧ್ಯೆ ಹೆಸರುವಾಸಿಯಾಗಿತ್ತು. ಹಿಂದಿ ಸಾಹಿತ್ಯದ ಖ್ಯಾತ ಕವಿ ಮೈಥಿಲೀಶರಣ ಗುಪ್ತರು ಅಯೋಧ್ಯೆಯ ಕುರಿತು ತಮ್ಮ ‘ಸಾಕೇತ' ಎಂಬ ಮಹಾಕಾವ್ಯದಲ್ಲಿ ಬರೆದಿರುವ ಅಲಂಕಾರಿಕ ವರ್ಣನೆಯನ್ನು ನೋಡಿ:


ದೇಖಲೋ ಸಾಕೇತ ನಗರೀ ಹೈ ಯಹೀ।

ಸ್ವರ್ಗ ಸೇ ಮಿಲನೇ ಗಗನ ಮೇ ಜಾ ರಹೀ।


ವಿಶ್ವದ ಅನೇಕ ಗ್ರಂಥಗಳಲ್ಲಿ ಅಯೋಧ್ಯೆಯ ವರ್ಣನೆ ವಿಭಿನ್ನವಾಗಿ, ವಿಪುಲವಾಗಿ ಕಾಣಸಿಗುತ್ತದೆ. ನಮ್ಮ ಜೀವನವನ್ನು ಆಯೋಧ್ಯೆಯನ್ನಾಗಿ ಮಾಡುವುದು ಒಂದು ಆಧ್ಯಾತ್ಮಿಕ ಸಾಧನೆ. ಭಾರತದ ಜನಜೀವನದ ಆದರ್ಶ ಕೇಂದ್ರವನ್ನಾಗಿ ರೂಪಿಸಲು ಅಯೋಧ್ಯೆಗಿಂತ ಉತ್ತಮವಾದ ಕೇಂದ್ರ ಇನ್ನೊಂದಿಲ್ಲ. ರಾಮನ ಜೀವನ ಮತ್ತು ಅವನ ಜನ್ಮಸ್ಥಾನ ಇವೆರಡೂ ಭಾರತೀಯ ಸಮಾಜಕ್ಕೆ ಲಾಗಾಯ್ತಿನಿಂದ ಆದರ್ಶಪ್ರಾಯವಾಗಿವೆ. ಆದ್ದರಿಂದಲೇ ಹಿಂದೂ ಸಮಾಜ ಅಸಂಖ್ಯ ಬಲಿದಾನಗಳ ನಂತರವೂ ರಾಮನಿಗಾಗಿ ಮಂದಿರದ ನಿರ್ಮಾಣದ ಸಂಕಲ್ಪ ತೊಟ್ಟು ಬಿಡದ ಛಲದಿಂದ ಹೋರಾಟ ಮಾಡುತ್ತಿದೆ. ಅಯೋಧ್ಯೆಯ ವಿಕಾಸ, ಅಯೋಧ್ಯೆಯ ಅಲಂಕಾರ, ಅಯೋಧ್ಯೆಯ ರಕ್ಷಣೆ ಇದು ಹಿಂದು ಸಂಸ್ಕøತಿಯ ಪ್ರಾತಿನಿಧಿಕ ವಿಕಾಸ. ಹಿಂದು ಸಂಸ್ಕøತಿಯ ಆದರ್ಶವನ್ನು ಜಗತ್ತಿನ ಮುಂದೆ ಪ್ರಭಾವಿ ರೂಪದಲ್ಲಿ ಪ್ರಸ್ತುತಪಡಿಸಲು ಅಯೋಧ್ಯೆ ಒಂದು ಮಾದರಿಯಾಗಬಹುದು.


ಪಾಶ್ಚಾತ್ಯ ಪ್ರಭಾವ ಹಾಗೂ ಗುಲಾಮಿತನದ ಪರಿಣಾಮದಿಂದ ಇಂದಿನ ಅಯೋಧ್ಯೆ ದಯನೀಯ ಸ್ಥಿತಿಯನ್ನು ತಲುಪಿದೆ. ಇದನ್ನು ಮತ್ತೆ ಮುಂಚಿನ ಸ್ಥಿತಿಗೆ ಕೊಂಡೊಯ್ಯುವುದೇ ನಮ್ಮ ಜೀವಿತದ ಉದ್ದೇಶವಾಗಬೇಕು. ಆಗಿನ ಅಯೋಧ್ಯೆಯ ಸಣ್ಣಪುಟ್ಟ ವಿಷಯಗಳ ಕುರಿತಾಗಿಯೂ ಸಂಶೋಧನೆಗಳು ನಡೆಯಬೇಕು. ಅಲ್ಲಿನ ಜನಜೀವನ, ಆಡಳಿತ, ಶಿಕ್ಷಣ, ಸಂಗೀತ, ಸಾಹಿತ್ಯ, ಕಲೆ, ವಿಜ್ಞಾನ, ಶಸ್ತ್ರಗಳು, ಶಾಸ್ತ್ರಗಳು ಇತ್ಯಾದಿ ಎಲ್ಲದರ ಬಗ್ಗೆ ಸಂಶೋಧನೆಗಳು ನಡೆದು ಅವುಗಳನ್ನು ಜನಮಾನಸಕ್ಕೆ, ಮನೆಮನೆಗೆ ತಲುಪಿಸಬೇಕು. ಭಜನೆ-ಕೀರ್ತನೆಗಳ ಮೂಲಕ, ಗೀತೆ-ಲಾವಣಿಗಳ ಮೂಲಕ, ಭಾಷಣ-ಲೇಖನಗಳ ಮೂಲಕ, ನಾಟಕದ, ಸಂಗೀತ-ನೃತ್ಯದ ಮೂಲಕ, ಅಯೋಧ್ಯೆಯ ತೀರ್ಥಕ್ಷೇತ್ರಗಳ ಮಹಿಮೆಗಳ ವರ್ಣನೆಯ ಮೂಲಕ ಮತ್ತು ಮಹತ್ವಪೂರ್ಣ ಪುರಾತತ್ವ ದಾಖಲೆಗಳ ಸಾಕ್ಷಾಧಾರಗಳ ಮೂಲಕ, ಹೀಗೆ ಜೀವನದ ಪ್ರತಿಯೊಂದು ಮಾಧ್ಯಮದ ಮೂಲಕವೂ ನಿಜವಾದ ಅಯೋಧ್ಯೆಯ ದರ್ಶನವನ್ನು ಮಾಡಿಸಬೇಕು. ಅಯೋಧ್ಯೆಯನ್ನು ಮತ್ತೆ ಮುಂಚಿನ ವೈಭವದ ಸ್ಥಿತಿಗೆ ಕೊಂಡೊಯ್ಯಬೇಕು. ಇದು ನಮ್ಮ ಜೀವಿತದ ಉದ್ದೇಶವಾಗಬೇಕು.


ಈ ಹಿನ್ನೆಲೆಯಲ್ಲಿ ಮಂದಿರ ನಿರ್ಮಾಣದ ಹೋರಾಟವನ್ನು ನೋಡಬೇಕು. ಕೋಟಿ ಕೋಟಿ ಮನಸ್ಸುಗಳ ನೂರಾರು ವರ್ಷಗಳ ಸಂಕಲ್ಪ ‘ಮಂದಿರವಲ್ಲೇ ಕಟ್ಟುವೆವು'. ಆದ್ದರಿಂದ ಇದು ಕೇವಲ ಒಂದು ಮಂದಿರಕ್ಕಾಗಿ ನಡೆದ ಹೋರಾಟವಲ್ಲ, ಒಂದು ಬದುಕಿನ ಉಳಿವಿಗಾಗಿ, ಒಂದು ಸಂಸ್ಕøತಿಯ ರಕ್ಷಣೆಗಾಗಿ ನಡೆಯುತ್ತಿರುವ ಹೋರಾಟ. ಕಟ್ಟಬೇಕಾಗಿರುವುದು ಒಂದು ಮಂದಿರವನ್ನು ಮಾತ್ರ ಅಲ್ಲ. ಒಂದು ಶ್ರೇಷ್ಠ ಬದುಕನ್ನು, ಒಂದು ಶ್ರೇಷ್ಠ ಸಂಸ್ಕೃತಿಯನ್ನು. ಅದಕ್ಕಾಗಿಯೇ ಸಂಪೂರ್ಣ ವಿಜಯ ಸಿಗುವವರೆಗೆ ಈ ಹೋರಾಟ ನಿಲ್ಲುವುದಿಲ್ಲ.

ಅಯೋಧ್ಯೆ, ಅಯೋಧ್ಯೆಯಾಗಲು ಎರಡು ಕಾರಣ, ರಾಮನಿಗಾಗಿ ಅಯೋಧ್ಯೆಯ ಜನ ಸರ್ವಸ್ವವನ್ನು ಬಿಟ್ಟುಕೊಟ್ಟರು. ಅವರಿಗೆ ರಾಮನಿಗಿಂತ ಪ್ರಿಯವಾದ ಮತ್ತೊಂದು ಸಂಗತಿ ಜೀವನದಲ್ಲಿ ಇರಲಿಲ್ಲ. ರಾಮನಿಗೂ ಸಹ ಅಯೋಧ್ಯೆಯ ಜನಗಳಿಗಿಂತ ಪ್ರಿಯವಾದ ಸಂಗತಿ ಮತ್ತೊಂದು ಇರಲಿಲ್ಲ. ರಾಜ ಮತ್ತು ಪ್ರಜೆಗಳ ನಡುವಿನ ಸಂಬಂಧದ ಆದರ್ಶ ಸ್ಥಿತಿ ಇದು. ಅಯೋಧ್ಯೆಯ ಮಹತ್ವವಿರುವುದು ಇಲ್ಲಿ. ಅಯೋಧ್ಯೆಯಲ್ಲಿ ಮಂದಿರ ನಿರ್ಮಾಣ ಮಾಡ ಹೊರಟಿರುವುದು, ಭಾರತವನ್ನು ನಮ್ಮ ಶ್ರೇಷ್ಠ ಸಂಸ್ಕೃತಿಯ ಆದರ್ಶ ಪ್ರತೀಕವಾಗಿದ್ದ ಅಯೋಧ್ಯೆಯನ್ನಾಗಿ ಮಾಡಲು. ಮಂದಿರ ಆ ಶ್ರೇಷ್ಠ ಸಂಸ್ಕೃತಿಯ ಆದರ್ಶ ಪ್ರತೀಕ ಮಾತ್ರ. ಭಾರತ ಮಾತ್ರವಲ್ಲ ಜಗತ್ತೇ ಅಯೋಧ್ಯೆಯಾಗಲಿ, ಅಯೋಧ್ಯೆಯ ಮೂಲಕ ಭಾರತ, ಸಪ್ತ ದ್ವೀಪ ಮತ್ತು ಸಪ್ತ ಸಾಗರಗಳನ್ನು ದಾಟಿ ಇಡೀ ವಿಶ್ವವನ್ನೇ ಏಕಶಾಸನದಡಿ ಹೊಂದಿತ್ತು. ಅದಕ್ಕೆ ರಾಮನೇ ಏಕೈಕ ರಾಜನಾಗಿದ್ದ ಎಂಬ ನಮ್ಮ ಸಾಂಸ್ಕೃತಿಕ ಸಾಮ್ರಾಜ್ಯದ ಸುಂದರ ವರ್ಣನೆಯನ್ನು ಸಂತ ತುಲಸೀದಾಸರು ಹೀಗೆ ಮಾಡಿದ್ದಾರೆ.

ಸಪ್ತ ದ್ವೀಪ ಸಾಗರ ಮೇಖಲಾ। ಏಕ ಭೂ ಪರ ರಘುಪತಿ ಕೋಸಲಾ ||


ಇದೇ ನಮ್ಮೆಲ್ಲರ ಆಶಯವಾಗಲಿ.


-ಪ್ರಣವ 90356 18076



ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter   

Post a Comment

0 Comments
Post a Comment (0)
To Top